ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಚಿತ್ರಾನ್ನ ದಾತಾ, ವಿಶೇಷ ಸುಖೀ ಭವ!

By Super
|
Google Oneindia Kannada News

What Kumbhasi Srinivas Bhat thinks about Vichitranna?
ಸಹೃದಯಿ ಮಿತ್ರ ಶ್ರೀವತ್ಸ ಜೋಷಿ ಅವರ ಅಂಕಣ, 'ವಿಚಿತ್ರಾನ್ನ' ವನ್ನು ಪ್ರತೀ ವಾರ ಸವಿದ ನಾನು , ಅವರ ಇದೇ ಹೆಸರಿನ ಕೃತಿ ಬೆಂಗಳೂರಿನಲ್ಲಿ ಬಿಡುಗಡೆ ಆದ ಸುದ್ದಿಯನ್ನು, 'ದಟ್ಸ್‌ ಕನ್ನಡ'ದಲ್ಲಿ ಓದಿ ತುಂಬಾ ಹರುಷ ಪಟ್ಟಿದ್ದೆ. ಅವರೇ ವಿಶ್ವಾಸದಿಂದ ಕಳಿಸಿದ ಪ್ರತಿಯನ್ನು ಓದಿ, ಮೆಲುಕು ಹಾಕುವ ಸುಯೋಗ ನನಗೆ ಲಭಿಸಿತು. ಬಿಡುವಿಲ್ಲದ ದಿನಚರಿಯ ಮಧ್ಯೆ 'ದಟ್ಸ್‌ ಕನ್ನಡ'ದಂತಹ ಒಂದು ಪತ್ರಿಕೆಗೆ ನಿಯತ್ತಾಗಿ, ನಿಯತಕಾಲಿಕ ಅಂಕಣವನ್ನು ಬರೆಯುವುದು ಸುಲಭವಲ್ಲ.

ಸಮಕಾಲೀನ ಹೊಸ ವಿಚಾರಗಳನ್ನು ಆರಿಸಿ, ಅದರ ಬಗ್ಗೆ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿ, ಓದುಗರ ಮನಸ್ಸಿಗೆ ಹಿಡಿಸುವಂತೆ, ಲಘುವಾಗಿ, ಹಾಸ್ಯಪೂರಿತವಾಗಿ, ರೇಖಾಚಿತ್ರಗಳೊಂದಿಗೆ, ಅಂತರ್ಜಾಲದ ಕೊಂಡಿಗಳೊಂದಿಗೆ, ಕನ್ನಡ, ಇಂಗ್ಲಿಷ್‌, ಅಥವ ಸಂಸ್ಕೃತ ಸಾಹಿತ್ಯಗಳ ಹಲವಾರು ಪೂರಕ ಉದಾಹರಣೆಗಳೊಂದಿಗೆ ರಸಪೂರಿತವಾಗಿ ಓದುಗರಿಗೆ ಬಡಿಸುವುದರಲ್ಲಿ ಶ್ರೀವತ್ಸ ಜೋಷಿ ಅವರದು ಎತ್ತಿದ ಕೈ.

ಊಟಕ್ಕೆ ಬಡಿಸುವಾಗ ಎರಡನೇ ಬಾರಿ ವಿಚಾರಿಸುವುದು ನಮ್ಮಲ್ಲಿ ಶಿಷ್ಟಾಚಾರ. ಹೀಗೆ ಮಾಡುವಾಗ, ಈಗಿನ ಡಯಟ್‌ ಯುಗದಲ್ಲಿ ಎಲ್ಲರೂ ಬೇಡವೆಂತ ಕೈಸನ್ನೆ ಮಾಡುವುದೂ ಸರ್ವೇ ಸಾಮಾನ್ಯ. ಆದರೆ ದಟ್ಸ್‌ ಕನ್ನಡದಲ್ಲಿ ವಿಚಿತ್ರಾನ್ನ ಬಂದಾಗಲೆಲ್ಲ ನಾನು ನಿರ್ದಾಕ್ಷಿಣ್ಯವಾಗಿ ಎರಡನೇ ಬಾರಿ, ಒಮ್ಮೊಮ್ಮೆ ಮೂರನೇ ಬಾರಿ ಕೂಡ ಓದಿ ಸಂತಸ ಪಟ್ಟಿದ್ದೇನೆ.

ವಿಚಿತ್ರಾನ್ನದ ಸಂಕಲನವನ್ನು ನಾನೇ ಮಾಡಿಕೊಂದು ಆಗಾಗ ಓದಿ ಮೆಲುಕು ಹಾಕುತ್ತಿದ್ದ ನನಗೆ, ಈ ಪುಸ್ತಕ ಒಂದು 'ರೆಡಿ ರೆಫರೆನ್ಸ್‌' ಆಗಿ ಸಿಕ್ಕಿತು. ಕಳೆದ ವಾರಾಂತ್ಯದಲ್ಲಿ ನನ್ನ ಕಸಿನ್‌ ಬಿ. ಕೆ. ಗುರುರಾಜರಾವ್‌ ಮತ್ತು ಅವರ ಪತ್ನಿ ಉಷಾ ('ಪಟ್ಟದಾಂಬೆ ಶಾಂತಳಾ' ಗ್ರಂಥ ಕರ್ತೃ ಸಿ. ಕೆ. ನಾಗರಾಜರಾಯರ ಮಗಳು) ಅವರು ಕೆನಡಾದ ಒಟ್ಟಾವಾದಿಂದ ನಮ್ಮಲ್ಲಿಗೆ ಬಂದಿದ್ದರು. ಅವರೂ ಅವರ ಅನೇಕ ಸ್ನೇಹಿತರೂ ಕೆನಡಾದಲ್ಲಿ ನನ್ನಂತೆಯೇ ವಿಚಿತ್ರಾನ್ನದ ಸವಿಯನ್ನು ಸವಿಯುತ್ತಿದ್ದಾರೆಂದು ಅವರಿಂದ ತಿಳಿದು ನನಗೆ ತುಂಬಾ ಸಂತೋಷವಾಯಿತು. ಬಾಲ್ಯದಲ್ಲಿ 'ಪ್ರಪಂಚ','ಕಸ್ತೂರಿ','ಪಂಚಾಮೃತ', 'ಕರ್ಮವೀರ', 'ತುಷಾರ', 'ಸುಧಾ', ಇತ್ಯಾದಿ ವಾರ ಪತ್ರಿಕೆಗಳಲ್ಲಿ ಮತ್ತು 'ಉದಯವಾಣಿ', 'ಪ್ರಜಾವಾಣಿ', ಇತ್ಯಾದಿ ದಿನಪತ್ರಿಕೆಗಳಲ್ಲಿ ಅಂಕಣ ಬರಹಗಳನ್ನು ಓದುತ್ತಿದ್ದ ನೆನಪು ನನಗೆ ಇನ್ನೂ ಉಳಿದಿದೆ. ಇಲ್ಲಿಯೂ, 'ಡೆಟ್ರಾಯಿಟ್‌ ನ್ಯೂಸ್‌'ನಲ್ಲಿ ಮಿಚ್‌ ಅಲ್ಬಂ ಅವರ ಅಂಕಣ ಬರಹ ನನಗೆ ಪ್ರಿಯವಾದುದು.

ಈ ವಿಷಯದಲ್ಲಿ ನಮ್ಮಂತಹ ಅನಿವಾಸಿ ಕನ್ನಡಿಗರಿಗೆ ವಿಶ್ವೇಶ್ವರ ಭಟ್ಟರು, ರವಿ ಬೆಳಗೆರೆಯಂತಹವರ ಬರಹಗಳನ್ನು ಓದುವ ಅವಕಾಶ ಒದಗಿಸಿ ಕೊಟ್ಟ 'ದಟ್ಸ್‌ ಕನ್ನಡ' ಪತ್ರಿಕೆಯ ಶ್ಯಾಂಸುಂದರ್‌ ಅವರು ಜೋಷಿಯವರಂತಹ ಉದಯೋನ್ಮುಖ ಬರಹಗಾರರಿಂದ 'ವಿಚಿತ್ರಾನ್ನ' ದಂತಹ ಸವಿಯೂಟವನ್ನು ನಮಗೆ ಒದಗಿಸಿ ನಮ್ಮ ಹಳೆಯ ಸವಿನೆನಪುಗಳನ್ನು ಉಳಿಸಿಕೊಳ್ಳುವುದಕ್ಕೆ ನೆರವಾಗಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು.

ಶಿಸ್ತಿನಿಂದ, ಪ್ರತೀವಾರವೂ 'ವಿಚಿತ್ರಾನ್ನ'ದಂತಹ ಅಂಕಣವನ್ನು ಬರೆಯುವುದು ಸಣ್ಣ ಸಾಧನೆಯೇನಲ್ಲ. ಅದರಲ್ಲೂ ಶ್ರೀವತ್ಸ ಅವರಿಗೆ ಅಂತರ್ಜಾಲ, ಕಂಪ್ಯೂಟರ್‌ ಜ್ನಾನಗಳ ಜತೆಗೆ, ಸಂಸ್ಕೃತ, ಕನ್ನಡ, ಇಂಗ್ಲಿಷ್‌ ಭಾಷೆಗಳ ವಿವಿಧ ಆಯಾಮಗಾಳಲ್ಲೂ ಹಿಡಿತವಿರುವುದರಿಂದ, ಅನ್ನವನ್ನು ಚಿತ್ರಾನ್ನವಾಗಿಸುವುದರಲ್ಲಿ, ಚಿತ್ರಾನ್ನವನ್ನು ವಿಚಿತ್ರಾನ್ನವಾಗಿಸುವುದರಲ್ಲಿ ತಮ್ಮದೇ ಆದ ಚಾಕಚಕ್ಯತೆ ತೋರಿಸಿದ್ದಾರೆ. ಓದುಗರ ಆಸಕ್ತಿಯನ್ನು ಕೆರಳಿಸಿ, ಅವರ ಸುಪ್ತಜ್ನಾನಕ್ಕೆ ಚಾವಟಿಯೇಟು ಕೊಟ್ಟು ಹೊಡೆದೆಬ್ಬಿಸುವ ಪ್ರಶ್ನೆಗಳು, ಕ್ವಿಜ್‌ ಗಳು, ಇತ್ಯಾದಿಗಳನ್ನು ಸೇರಿಸಿ ಅಪರೂಪದ ಹವ್ಯಾಸೀ ಓದುಗನನ್ನು ಖಾಯಂ ಓದುಗರನ್ನಾಗಿ ಪರಿವರ್ತಿಸುವುದರಲ್ಲಿ ಜೋಷಿ ಅವರು ಜಯಶೀಲರಾಗಿದ್ದಾರೆ.

'ವಿಚಿತ್ರಾನ್ನ'ದ ಬಗ್ಗೆ ಬರೇ ಒಳ್ಳೆಯ ಮಾತನ್ನಾಡಿದರೆ ನಾನು ಹೊಗಳುಭಟ್ಟನೆಂಬ ಪ್ರಶಸ್ತಿಗೆ ಪಾತ್ರನಾಗಬೇಕಾದೀತು. ಹಾಗಾಗಿ ಈ ಪುಸ್ತಕದ ಒಂದೆರಡು ಲೋಪದೋಷಗಳನ್ನೂ ತಿಳಿಸುತ್ತಿದ್ದೇನೆ. ಮೊದಲನೆಯದಾಗಿ 'ಬರಹದ' ಬ್ರಹ್ಮ ಶ್ರೀಯುತ ಶೇಷಾದ್ರಿ ವಾಸು ಅವರು ಬೇಕಾದಷ್ಟು ಸುಂದರವಾದ ಅಕ್ಷರ ವಿನ್ಯಾಸಗಳನ್ನು ಒದಗಿಸಿರುವಾಗ, ಓದುಗರಿಗೆ ಓದಲು ಅನುಕೂಲವಾಗಲು ಬೇರೆ ತರಹದ ಫಾಂಟ್‌ ಆರಿಸಿಕೊಂಡಿದ್ದರೆ, ಹಾಗೂ ಸಾಲುಗಳ ಮಧ್ಯದ ಸ್ಪೇಸಿಂಗ್‌ ಸ್ವಲ್ಪ ಜಾಸ್ತಿ ಇಟ್ಟಿದ್ದರೆ ಸುಲಭವಾಗಿ ಓದಲು ಸಾಧ್ಯವಾಗುತ್ತಿತ್ತೇನೋ. ಚಿತ್ರಗಳ, ಕ್ಲಿಪ್‌ ಆರ್ಟ್‌ ಗಳ, ಫೋಟೋಗಳ ಗುಣಮಟ್ಟ ಇನ್ನೂ ಸ್ವಲ್ಪ ಉತ್ತಮವಾಗಿ ಮಾಡಬಹುದಾಗಿತ್ತೇನೊ ಎನ್ನಿಸಿತು. ಈ ಒಂದೆರಡು ಕುಂದು ಕೊರತೆಗಳನ್ನು ಬಿಟ್ಟರೆ, 'ವಿಚಿತ್ರಾನ್ನ', ವಿರಾಮದಲ್ಲಿ ಪ್ರವಾಸ ಮಾಡುವಾಗ, ಬ್ಯಾಕ್‌ ಯಾರ್ಡ್‌ ಡೆಕ್‌ ನಲ್ಲಿ ವಿರಮಿಸುವಾಗ, ಮನಸ್ಸಿಗೆ ಬೇಸರವಾದಾಗ, ಪದೇ ಪದೇ ಓದಿ, ಮೆಲುಕುಹಾಕಿ, ಮನೋರಂಜನೆಯ ಜತೆಗೆ ವೈಚಾರಿಕ ಪ್ರಜ್ನೆಯನ್ನು ಹೊಡೆದೆಬ್ಬಿಸುವುದರಲ್ಲಿ ಅತ್ಯಂತ ಸಫಲವಾಗುತ್ತದೆ ಎಂದು ನನಗನ್ನಿಸಿತು.

ಇಂತಹ ಸದಭಿರುಚಿಯ ಲೇಖನಗಳನ್ನು ಅನಿವಾಸಿ ಓದುಗರಿಗೆ ಓದಲು ಅವಕಾಶ ಮಾಡಿಕೊಟ್ಟ 'ದಟ್ಸ್‌ ಕನ್ನಡ'ದ ಸಂಪಾದಕ, ಶ್ಯಾಮ ಸುಂದರ ಅವರಿಗೆ ನಮ್ಮೆಲ್ಲರ ಕ್ರತಜ್ನತೆ ಸಲ್ಲಲೇ ಬೇಕು. ವಿಚಿತ್ರಾನ್ನ ಎಲ್ಲರೂ ಕೊಂಡು ಓದಲೇಬೇಕಾದಂತಹ ಪುಸ್ತಕ ಎಂಬುದರಲ್ಲಿ ಸಂಶಯವೇ ಇಲ್ಲ.

English summary
Kumbhasi Srinivas Bhat, an Amerikanndiga writes about Srivathsa Joshi’s Vichitranna. Now the book is available in America too. Contact Joshi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X