• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಧಾಮಾಧವ ವಿರೋಧಾಭಾಸ !

By Staff
|
Srivathsa Joshi *ಶ್ರೀವತ್ಸ ಜೋಶಿ

ಒಂದು ಪ್ರಶ್ನೆ. ಇದಕ್ಕೆ‘ಹೌದು’ ಅಥವಾ ‘ಅಲ್ಲ’ ಎಂಬ ಒಂದೇ ಪದದ ಉತ್ತರವಿರಬೇಕು.

ಪ್ರಶ್ನೆ ಹೀಗಿದೆ : ‘ಈ ಪ್ರಶ್ನೆಗೆ ಅಲ್ಲ ಎಂಬುದು ಉತ್ತರವೇ?’

ಯೋಚಿಸಿ! ನೀವೇನು ಉತ್ತರಿಸುತ್ತೀರೋ ಅದಕ್ಕೆ ತದ್ವಿರುದ್ಧವಾಗಿರುತ್ತದೆ ನಿಮ್ಮ ಉತ್ತರ! ಅಂದರೆ ಏನೇ ಉತ್ತರವಿತ್ತರೂ ಅದು ಸರಿಯಾಗಿರುವುದಿಲ್ಲ. ಹಾಗಾದರೆ ‘ಹೌದು’ ಮತ್ತು ‘ಅಲ್ಲ’ - ಇವು ಪರಸ್ಪರ ವಿರೋಧ ಪದಗಳಲ್ಲವೇ?

‘ಹೌದು’ ಎಂದು ಉತ್ತರಿಸಿದರೂ, ‘ಅಲ್ಲ’ ಎಂದು ಉತ್ತರಿಸಿದರೂ ಮುಜುಗರ ತರಿಸುವ ಇಂಥದೇ ಒಂದು ಕೀಟಲೆ ಪ್ರಶ್ನೆ ಈಹಿಂದೆ ‘ಸುಧಾ’ದಲ್ಲೊಮ್ಮೆ ಹಾಸ್ಯವಿಶೇಷಾಂಕದಲ್ಲಿ ಪ್ರಕಟವಾಗಿತ್ತು. ಆ ಪ್ರಶ್ನೆ ಹೀಗಿತ್ತು: ‘ನೀವೀಗ ದಿನಾ ಅರೆ ನಗ್ನರಾಗಿ ಎಂ.ಜಿ.ರೋಡ್‌ನಲ್ಲಿ ಓಡೋದನ್ನು ನಿಲ್ಲಿಸಿದ್ದೀರಂತೆ ; ಹೌದಾ?’

ಹೌದು-ಅಲ್ಲಗಳ ವಿಪರ್ಯಾಸದ, ವಿರೋಧಾಭಾಸದ ಕೇವಲ ಒಂದೆರಡು ಸ್ಯಾಂಪಲ್‌ ಇವು. ಇದೇ ರೀತಿಯ ಇನ್ನೊಂದನ್ನು ನೋಡಿ. ಇಲ್ಲಿರುವ ಚಿತ್ರ, ಒಂದು ಸೂಚಾನಾಫಲಕದ್ದು. ಅದರಲ್ಲೇನು ಬರೆದಿದೆ? ‘ಈ ಸೂಚನೆಯನ್ನು ನಿರ್ಲಕ್ಷಿಸಿ!’. ಆಯ್ತು, ಫಲಕವನ್ನು ಓದಿ ಸೂಚನೆಯನ್ನು ನಿರ್ಲಕ್ಷಿಸಿದಿರಿ ಎಂದುಕೊಂಡಿರಾ? ಹಾಗೆ ಮಾಡಿಲ್ಲ ನೀವು. ಯಾಕೆಂದರೆ ಫಲಕದ ಸೂಚನೆಯನ್ನು ಓದಿ ಅದನ್ನು ಪರಿಗಣಿಸಿ, ನಿರ್ಲಕ್ಷದ ನಿರ್ಧಾರಕ್ಕೆ ಬಂದದ್ದಲ್ಲವೇ? ಇಲ್ಲ, ಸೂಚನೆಯನ್ನು ನಿರ್ಲಕ್ಷಿಸಿಲ್ಲ ಎಂದಿಟ್ಟುಕೊಳ್ಳಿ. ಆಗಲೂ ನೀವು ಫಲಕವು ಸೂಚಿಸಿದ್ದನ್ನು ಮಾಡಿದಂತಾಗಲಿಲ್ಲ ! ಒಟ್ಟಿನಲ್ಲಿ ಮಹಾ-ಕನ್ಫ್ಯೂಷನ್‌ ಫಲಕವಾಯ್ತಲ್ಲ ಇದು!

*

ಇಂಗ್ಲಿಷ್‌ನ paradox ಎಂಬ ಪದ ಗೊತ್ತಿರಬಹುದು ನಿಮಗೆ. ಅದಕ್ಕೆ ಸರಿಸುಮಾರಾದ ಕನ್ನಡಪದವೇ ‘ವಿರೋಧಾಭಾಸ’. ಅಂದರೆ, ನಿಜವೆಂದೆನಿಸಬಹುದಾದ ಒಂದು ಹೇಳಿಕೆಯಲ್ಲಿ ಅಥವಾ ವಾಕ್ಯದಲ್ಲಿ ಒಳಗಿಂದೊಳಗೇ ವಿರುದ್ಧಭಾವ ಗೋಚರಿಸತೊಡಗುವುದು. ಇಂಥ ‘ವಿರೋಧಾಭಾಸ’ ವಾಕ್ಯಗಳು ಬರೀ ಮನರಂಜನೆಯ ಸರಕು ಅಥವಾ ಬಾಯಿಬಡುಕ ರಾಜಕಾರಣಿಗಳ ಹೇಳಿಕೆಗಳಂತೆ ಪ್ರಾಮುಖ್ಯವಿಲ್ಲದವು, ಅರೆಹುಚ್ಚಿನ ಪರಿಣಾಮದವು... ಎಂದುಕೊಂಡಿದ್ದರೆ ಇವತ್ತು ತರ್ಕಶಾಸ್ತ್ರದಲ್ಲಿ, ಗಣಿತ-ವಿಜ್ಞಾನದಲ್ಲಿ, ಸಂಖ್ಯಾಶಾಸ್ತ್ರದಲ್ಲಿ ಎಷ್ಟೋ ಬೆಳವಣಿಗೆಗಳು ಸಂಭವಿಸುತ್ತಿರಲಿಲ್ಲ. ಮನುಷ್ಯಸಂಸ್ಕೃತಿಯಷ್ಟೇ ಪುರಾತನವಾದ paradox ಹೇಳಿಕೆಗಳ, ಜಾಣ್ಮೆಲೆಕ್ಕಗಳ, ವಾದಸರಣಿಗಳ ಒಂದು ಅಗಾಧ ಸಾಗರವೇ ಇದೆ! ಅದರ ಜಸ್ಟ್‌ ಒಂದೆರಡು ಬಿಂದುಗಳು - ತೀರಾ ಕ್ಲಿಷ್ಟಕರವಾಗದಂತೆ ವ್ಯಾಖ್ಯಾನಿಸಿದುವು - ಈವಾರದ ನಮ್ಮ ಗ್ರಾಸ; ಅದೇ, ‘ವಿರೋಧಾಭಾಸ’ ‘ ’

ಬರ್ಟ್ರಾಂಡ್‌ ರಸೆಲ್‌ನ ‘ಕ್ಷೌರಿಕನ ವಿರೋಧಾಭಾಸ’...

ಬ್ರಿಟಿಷ್‌ ತತ್ವಜ್ಞಾನಿ, ಗಣಿತಜ್ಞ, ಪ್ರಬಂಧಕಾರ ಮತ್ತು ಸಮಾಜಶಾಸ್ತ್ರ ಪಂಡಿತ ಬರ್ಟ್ರಾಂಡ್‌ ರಸೆಲ್‌ ಕೆಲವು ಪ್ಯಾರಡಾಕ್ಸ್‌ಗಳನ್ನು ಮಂಡಿಸಿದ್ದಾನೆ. ಅವುಗಳಲ್ಲೊಂದು ಜನಪ್ರಿಯವಾದುದು ಸಣ್ಣ ಪಟ್ಟಣವೊಂದರ ಕ್ಷೌರಿಕನ ಕಥೆ. ಆ ಪಟ್ಟಣದಲ್ಲಿ ಒಬ್ಬನೇ ಒಬ್ಬ ಕ್ಷೌರಿಕ. ಆ ಕ್ಷೌರಿಕನ ಹೇಳಿಕೆಯೇನೆಂದರೆ, ‘ಈ ಪಟ್ಟಣದ ಗಂಡಸರಲ್ಲಿ ಯಾರು ತಾವೇ ಗಡ್ಡಬೋಳಿಸಿಕೊಳ್ಳುವುದಿಲ್ಲವೋ ಅವರ ಗಡ್ಡವನ್ನು ನಾನು ಬೋಳಿಸುತ್ತೇನೆ. ಆಫ್‌ಕೋರ್ಸ್‌, ತಾವೇ ಬೋಳಿಸಿಕೊಳ್ಳುವವರ ತಂಟೆಗೆ ಹೋಗೋದಿಲ್ಲ...’

ಅದರಲ್ಲೇನು ವಿಶೇಷ ಅಂತ ನಿಮಗನಿಸಬಹುದು. ಆದರೆ ಅದೇ ಕ್ಷೌರಿಕ ತಾನೇ ಶೇವ್‌ ಮಾಡಿಕೊಳ್ಳುವ ಸಂದರ್ಭವನ್ನು ಊಹಿಸಿ! ಆಗ ಅವನ ಒರಿಜಿನಲ್‌ ಹೇಳಿಕೆ ಸಂಪೂರ್ಣ ವಿರೋಧಾಭಾಸವಾಗಲಿಲ್ಲವೇ? ‘ಯಾರು ತನ್ನ ಗಡ್ಡವನ್ನು ತಾನೇ ಬೋಳಿಸಿಕೊಳ್ಳುವುದಿಲ್ಲವೋ ಅವರ ಗಡ್ಡ ನಾನು ತೆಗೆಯುತ್ತೇನೆ; ಯಾರು ತನ್ನ ಗಡ್ಡವನ್ನು ತಾನೇ ತೆಗೆದುಕೊಳ್ಳುತ್ತಾರೊ ಅವರ ಗಡ್ಡವನ್ನು ನಾನು ಬೋಳಿಸುವುದಿಲ್ಲ!’ ಎಂಬುದಾಗಿತ್ತಲ್ಲವೇ ಅವನ ಹೇಳಿಕೆ? ಈಗ ಸ್ವತಃ ಗಡ್ಡ ತೆಗೆಯಲಿಕ್ಕೆ ಕುಳಿತಾಗ ಏನಾಯ್ತು?

ರಸೆಲ್‌ ಮಾತ್ರವಲ್ಲದೆ ಜೀನನ್‌, ಎಪಿಮೆನೈಡ್ಸ್‌, ರಿಚರ್ಡ್‌, ಬೆರ್ರಿ - ಹೀಗೆ ವಿವಿಧ ಪಂಡಿತರ-ತತ್ವಜ್ಞಾನಿಗಳ ಹೆಸರಲ್ಲಿ ಬಹಳಷ್ಟು ಪ್ಯಾರಡಾಕ್ಸ್‌ಗಳು ಜನಜನಿತವಾಗಿವೆ. ಅವುಗಳಲ್ಲಿ ಒಂದೊಂದನ್ನು ಕೈಗೆತ್ತಿಕೊಂಡರೂ ನಮ್ಮ ಯೋಚನಾಲಹರಿಗಳು, ವಾದಸರಣಿಗಳು ಹೊಸಹೊಸ ಆಯಾಮವನ್ನು ಪಡೆಯುತ್ತ ಹೋಗುತ್ತವೆ.

ಎ’ಲಾ’ ಶಿಷ್ಯನೇ...!

ಕಾನೂನು (law) ಟ್ಯೂಷನ್‌ ಹೇಳಿಕೊಡುವ ಒಬ್ಬ ಘನ ವಕೀಲನಿದ್ದ. ಎಂಥೆಂಥ ಕ್ರಿಮಿನಲ್‌ ಕೇಸ್‌ಗಳಲ್ಲೂ ಅತಿಚಾಣಾಕ್ಷತನದಿಂದ ವಾದಿಸಿ ನುರಿತವನು. ಅವನ ಟ್ಯೂಷನ್‌ ಫೀ ಮಾತ್ರ ತುಂಬಾ ದುಬಾರಿ. ಹೀಗಿದ್ದರೂ ವಿದ್ಯಾರ್ಥಿಗಳನ್ನು ಸೆಳೆಯುವುದಕ್ಕಾಗಿ ಆತ ಒಂದು ಜಾಹೀರಾತು ಪ್ರಕಟಿಸಿದ್ದ : ‘ನಮ್ಮಲ್ಲಿ ಲಾ ಕೋರ್ಸ್‌ ಮಾಡಿದ ವಿದ್ಯಾರ್ಥಿಗಳು ತಮ್ಮ ಪ್ರಪ್ರಥಮ ವಿಜಯೀ ಮೊಕದ್ದಮೆ ಆಗುವ ತನಕವೂ ಫೀ ಪಾವತಿಸಬೇಕಿಲ್ಲ. ಮೊದಲ ಕೇಸ್‌ನಲ್ಲೇ ಸೋತರೆ ಕೋರ್ಸ್‌ ಶುಲ್ಕವನ್ನೇ ಕಟ್ಟಬೇಕಿಲ್ಲ !’

ಈ ಜಾಹೀರಾತಲ್ಲೇನೋ ಲೂಪ್‌ಹೋಲ್‌ ಇದೆ ಅಂತ ಒಬ್ಬ ಮೇಧಾವಿಗೆ ಹೊಳೆಯಿತು. ಆತ ಟ್ಯೂಷನ್‌ ಸೇರಿದ, ಕೋರ್ಸ್‌ ಮುಗಿಸಿದ; ಆದರೆ ಬೇಕಂತಲೇ ಯಾವ ಖಟ್ಲೆಯನ್ನೂ ಕೈಗೆತ್ತಿಕೊಳ್ಳಲಿಲ್ಲ. ಕೇಸನ್ನೇ ಹೂಡದಿದ್ದರೆ ಜಯಿಸುವ ಮಾತೆಲ್ಲಿ ಬಂತು? ಹಾಗಾಗಿ ಆತ ಗುರುವಿನ ಶುಲ್ಕವನ್ನು ಪಾವತಿಸಲೇ ಇಲ್ಲ! ಗುರು ಇದರಿಂದ ಕುಪಿತನಾದ. ತನ್ನ ಶಿಷ್ಯನ ವಿರುದ್ಧವೇ ಶುಲ್ಕಪಾವತಿಯ ವಿಷಯದಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ (ಅಮೆರಿಕನ್‌ ಭಾಷೆಯಲ್ಲಾದರೆ, sue ಮಾಡಿದ)! ಆ ಪರಮಶಿಷ್ಯನಿಗೂ ಒಳ್ಳೇ ಕೆಣಕಿದಂತಾಯಿತು, ಕೇಸ್‌ನಲ್ಲಿ ಸ್ವತಃ ವಾದಿಸಲು ಆತ ನಿರ್ಧರಿಸಿದ!

ಈಗ ನೋಡಿ ವಿಪರ್ಯಾಸ - ಶಿಷ್ಯ ಆ ಕೇಸ್‌ನಲ್ಲಿ ಸೋತರೆ, ಮೂಲ ಒಡಂಬಡಿಕೆ(ಟ್ಯೂಷನ್‌ ಜಾಹೀರಾತು) ಪ್ರಕಾರ ಆತ ಶುಲ್ಕ ಪಾವತಿಮಾಡಬೇಕಿಲ್ಲ. ಒಂದೊಮ್ಮೆ ಆತ ಕೇಸಲ್ಲಿ ಗೆದ್ದರೂ ನಯಾಪೈಸೆ ಬಿಚ್ಚಬೇಕಿಲ್ಲ, ಯಾಕೆಂದರೆ ಗುರು ಮೊಕದ್ದಮೆ ಹೂಡಿರುವುದೇ ಶಿಷ್ಯ ಶುಲ್ಕಕಟ್ಟಬೇಕೊ ಬೇಡವೋ ಎಂಬುದನ್ನು ನಿರ್ಧರಿಸಲಿಕ್ಕಲ್ಲವೇ?

ನಯಾಗರಾದಲ್ಲಿ ಒಂದು ಡಾಲರ್‌ಗೆ ಅನ್‌ಲಿಮಿಟೆಡ್‌ ಬೀರ್‌!

ನಯಾಗರಾ ಫಾಲ್ಸ್‌ ನಿಮಗೆ ಗೊತ್ತಿದ್ದಂತೆ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಾದ ಗಡಿರೇಖೆಯಲ್ಲಿದೆ. ಬಹಳ ಬಹಳ ಹಿಂದೆ ಯು.ಎಸ್‌ ಡಾಲರ್‌ ಮತ್ತು ಕೆನಡಿಯನ್‌ ಡಾಲರ್‌ಗೆ ಬೆಲೆಯಲ್ಲೇನೂ ವ್ಯತ್ಯಾಸವಿಲ್ಲದಿದ್ದ ಕಾಲದಲ್ಲಿ ಅಲ್ಲಿ ನಡೆದಿರಬಹುದಾದ ಈ ಒಂದು ಘಟನೆಯನ್ನು ಊಹಿಸೋಣ. ಈ ಘಟನೆಯ ದೃಶ್ಯಾವಳಿಗೆ ರಂಗಸಜ್ಜಿಕೆಯೇನೆಂದರೆ ಗಡಿರೇಖೆಯ ಈಚೆಗೆ ಅಂದರೆ ಅಮೆರಿಕ ಪ್ರದೇಶದಲ್ಲೊಂದು ಬಾರ್‌. ಗಡಿರೇಖೆಯಾಚೆಗೆ ಅಂದರೆ ಕೆನಡಾ ಭಾಗದಲ್ಲೊಂದು ಬಾರ್‌. ಅಮೆರಿಕದ ಬಾರ್‌ ಒಡೆಯ ಅಲೆಕ್ಸ್‌ ಮತ್ತು ಕೆನಡಾದವನ ಹೆಸರು ಕೆವಿನ್‌ ಅಂತಲೋ ಏನೊ ಇರಲಿ. ಆಗಲೇ ಹೇಳಿದಂತೆ ಆ ಕಾಲದಲ್ಲಿ ಗಡಿಯ ಮೂಲಕ ಮುಕ್ತಸಂಚಾರಕ್ಕೆ ಅವಕಾಶವಿತ್ತು, ಎರಡೂ ದೇಶದ ಕರೆನ್ಸಿಗೆ ಏಕಪ್ರಕಾರ ಮಾನ್ಯತೆಯಿತ್ತು - ಇದಿಷ್ಟು ನಮ್ಮ ಮನಸ್ಸಲ್ಲಿ ಪೂರ್ವಸಿದ್ಧತೆ.

ಹೀಗಿರಲು ಒಮ್ಮೆ ಏನಾಯ್ತೆಂದರೆ ಅಮೆರಿಕ ಸರಕಾರಕ್ಕೂ ಕೆನಡಾ ಆಡಳಿತಕ್ಕೂ ವೈಷಮ್ಯ ಉದ್ಭವಿಸಿ ತಾಮೇಲು ನಾಮೇಲು ಪೈಪೋಟಿ ಶುರು ಆಯ್ತು. ಮೊಟ್ಟಮೊದಲಾಗಿ ಅಮೆರಿಕ ಏನುಮಾಡಿತೆಂದರೆ ಕೆನಡಿಯನ್‌ ಡಾಲರನ್ನು ’ಡಿವಾಲ್ಯುವೇಟ್‌’ ಮಾಡಿತು - 10% ದಷ್ಟು. ಅಂದರೆ 1 ಅಮೆರಿಕನ್‌ ಡಾಲರ್‌= 90 ಕೆನಡಿಯನ್‌ ಸೆಂಟ್ಸ್‌ ಎಂದು ಘೋಷಿಸಿತು. ಕೆನಡಾದವರು ಸುಮ್ಮನಿರುತ್ತಾರೆಯೇ? ಅವರೂ ಅದನ್ನೇ ಮಾಡಿದರು! ಅಮೆರಿಕನ್‌ ಡಾಲರ್‌ನ ಮೌಲ್ಯಕ್ಕೆ ತಮ್ಮ ದೇಶದಲ್ಲಿ 10% ಕಡಿತ. 1 ಕೆನಡಿಯನ್‌ ಡಾಲರ್‌= 90 ಅಮೆರಿಕನ್‌ ಸೆಂಟ್ಸ್‌ ಎಂದು ಸಾರಿದರು.

ಆಗೊಬ್ಬ ಮಹಾತೀರ್ಥಂಕರ ಬೀರ್‌ಬಲ್‌ನ ಪ್ರವೇಶವಾಯ್ತು ನಯಾಗರಾ ಪಟ್ಟಣಕ್ಕೆ. ಆತ ಅಲೆಕ್ಸ್‌ನ ಅಮೆರಿಕನ್‌ ಬಾರ್‌ಗೆ ಹೋಗಿ 1 ಡಾಲರ್‌ ಬೆಲೆಯ ಬೀರ್‌ ಹೀರಿ 10 ಯು.ಎಸ್‌ ಡಾಲರ್‌ ನೋಟು ಕೊಟ್ಟ. ಅಲೆಕ್ಸ್‌ ಅವನಿಗೆ 9 ಯು.ಎಸ್‌ ಡಾಲರ್‌ ಮರಳಿಸುವ ಬದಲು ತನ್ನ ಕ್ಯಾಷ್‌ಬಾಕ್ಸ್‌ನಲ್ಲಿದ್ದ 10 ಕೆನಡಿಯನ್‌ ಡಾಲರ್‌ ನೋಟನ್ನು ಕೊಟ್ಟ. ಸರಿ, ಬೀರ್‌ಬಲ್ಲ ಆ ನೋಟನ್ನು ಹಿಡ್ಕೊಂಡು ಗಡಿಯಾಚೆಯ ಕೆವಿನ್‌ ಕೆನಡಿಯನ್‌ ಬಾರ್‌ಗೆ ಕಾಲಿಟ್ಟ. 1 ಡಾಲರ್‌ ಬೆಲೆಯ ಬೀರ್‌ ಕುಡಿದು ತನ್ನಲ್ಲಿದ್ದ 10ರ ನೋಟು ಕೊಟ್ಟ. ಕೆವಿನ್‌ ಸಹ ‘ಚಿಲ್ಲರೆ ಪ್ರಾಬ್ಲೆಂ’ನಿಂದಾಗಿ ಅಲೆಕ್ಸ್‌ ಮಾಡಿದ್ದನ್ನೇ ಮಾಡಿದ! ಬೀರ್‌ಬಲ್‌ನಿಗೆ 10 ಯು.ಎಸ್‌ ಡಾಲರ್‌ ನೋಟು ಕೈಗಿತ್ತ. ಬೀರ್‌ಬಲ್ಲ ಮತ್ತೆ ಗಡಿಯ ಇತ್ತ ಕಡೆ ಬಂದು ಅಲೆಕ್ಸ್‌ನ ಬಾರ್‌ಗೆ ಧಾವಿಸಿ ಇನ್ನೊಂದು ಮಗ್‌... ಹೀಗೆ ಅತ್ತ-ಇತ್ತ ಶಟ್ಲ್‌ಕಾಕ್‌ನಂತೆ ಹಾರಾಡಿ, ಅನ್‌ಲಿಮಿಟೆಡ್‌ ಬೀರ್‌ ಕುಡಿದು ತೂರಾಡಿದ!

ಬೀರ್‌ಬಲ್ಲ ಬಹಳ ಬಲ್ಲಿದನಾಗಿ ಈ ಟ್ರಿಕ್‌ ಮಾಡಿದ. ಆದರೆ ಹೊರಗಿಂದ ತಪ್ಪೇನೂ ಗೋಚರಿಸಿದ ಈ ವಹಿವಾಟಿನಲ್ಲಿ ನಿಜವಾಗಿ ಏನಾಗ್ತಿದೆ? ಯಾರಿಗೆ ಲಾಭ, ಯಾರಿಗೆ ನಷ್ಟ ಆಗ್ತಿದೆ?

ಆ ಕಿಲಾಡಿ ಚತುರ ಬೀರ್‌ಬಲ್ಲನಿಗೆ ಅಷ್ಟೊಂದು ಬೀರ್‌ ಹೀರಿ ನಶೆ ಏರಿರುವುದಂತೂ ಗ್ಯಾರಂಟಿ. ಹಾಗೆಯೇ ಈ ಲೇಖನದಲ್ಲಿನ ಇದುವರೆಗಿನ ‘ವಿರೋಧಾಭಾಸ’ಗಳೂ ನಿಮ್ಮ ತಲೆಗೇರತೊಡಗಿವೆ ಎಂದರೂ ಸರಿಹೋದೀತಲ್ಲವೇ? ಇನ್ನೊಂದೆರಡನ್ನು ನಿಮ್ಮ ಮಿದುಳಿಗೆ ಮೇವಾಗಿ ಬಿಟ್ಟು ಈ ವಾರದ ಸರ್ವಿಂಗ್‌ ಮುಗಿಸುತ್ತೇನೆ.

ಒಂದು ಸಣ್ಣ ಪಟ್ಟಣದಲ್ಲಿ ಇಬ್ಬರು ಕಮ್ಮಾರ(blacksmith)ರಿದ್ದಾರೆ. ಒಬ್ಬ ಅತಿ ಹರಿತವಾದ ಖಡ್ಗಗಳ ತಯಾರಿಗೆ ಪ್ರಸಿದ್ಧನಾದರೆ ಇನ್ನೊಬ್ಬ ಅತಿ ಕಠಿಣವಾದ ಗುರಾಣಿ (shield) ನಿರ್ಮಾಣಕ್ಕೆ ಹೆಸರುವಾಸಿ. ಖಡ್ಗದವನ ಖಡ್ಗಗಳು ಎಷ್ಟು ಹರಿತವೆಂದರೆ ಪ್ರಪಂಚದ ಯಾವುದೇ ವಸ್ತುವನ್ನೂ ಅವು ಛೇದಿಸಬಲ್ಲವು! ಗುರಾಣಿಯವನ ಶೀಲ್ಡ್‌ಗಳು ಎಷ್ಟು ಕಠಿಣವೆಂದರೆ ಪ್ರಪಂಚದ ಎಂಥ ಖಡ್ಗವೂ ಅವನ್ನು ಭೇದಿಸಲಾರದು! ಈಗ ಇವರಿಬ್ಬರ ನಡುವೆ ಜಂಗಿಕುಸ್ತಿ ಶುರುವಾಯ್ತು ಎಂದುಕೊಳ್ಳೋಣ. ಖಡ್ಗ ಹರಿತವೇ... ಅಥವಾ, ಗುರಾಣಿ ಕಠಿಣವೇ?

ಒಂದು ಬಾಹ್ಯಾಕಾಶ ನೌಕೆಯಲ್ಲಿ, ಪರಗ್ರಹ ಜೀವಿಗಳು (aliens) ನಿಮ್ಮನ್ನೆಲ್ಲಿಗೋ ಸಾಗಿಸುತ್ತಿದ್ದಾರೆ. ಒಂದೇ ಒಂದು ಹೇಳಿಕೆ (ಸ್ಟೇಟ್‌ಮೆಂಟ್‌) ಕೊಡಲು ನಿಮ್ಮಲ್ಲಿ ಕೇಳಿಕೊಂಡಿದ್ದಾರೆ. ಆ ಹೇಳಿಕೆ ನಿಜವಾದರೆ ನಿಮ್ಮನ್ನು ಕಣಕಣಗಳಾಗಿ ವಿಚ್ಛಿದ್ರಗೊಳಿಸಲಾಗುವುದು! ಒಂದುವೇಳೆ ಹೇಳಿಕೆ ತಪ್ಪಾದರೆ ನೌಕೆಯಿಂದ ನಿಮ್ಮನ್ನು ಹೊರದೂಡಿಬಿಡಲಾಗುವುದು. ಇಂಥ ಪ್ರಾಣಾಪಾಯದ ಸನ್ನಿವೇಶದಲ್ಲೂ ಅದ್ಭುತ ಲಾಜಿಕ್‌ ಉಪಯೋಗಿಸಿ ಒಂದು ಹೇಳಿಕೆಯಿಂದ ಜೀವವುಳಿಸಿಕೊಳ್ಳಬಹುದು. ಏನದು?

* * *

ಯಾವುದೋ ಸಂದರ್ಭದಲ್ಲಿ paradox ಶಬ್ದದ ಬಗ್ಗೆ ಗೂಗಲಿಸಿದಾಗ ಮುಂದೆ ಬಿದ್ದ ರಾಶಿಯಿಂದ ಸಂಗ್ರಹಿಸಿದ ಧಾನ್ಯಗಳನ್ನು ಕನ್ನಡರಸದಲ್ಲಿ ಬೇಯಿಸಿ ಈ ವಿಚಿತ್ರಾನ್ನ ಸಂಚಿಕೆಯನ್ನು ತಯಾರಿಸಿದ್ದು. ಈಎಲ್ಲ ಪ್ರಕಾಂಡ ಪ್ರಶ್ನೆಗಳ, ಸಮಸ್ಯೆಗಳ, ತರ್ಕಗಳ, ಜಾಣ್ಮೆಲೆಕ್ಕಗಳ ಸೃಷ್ಟಿಕರ್ತ ನಾನಲ್ಲ. ಇಂಟೆರೆಸ್ಟಿಂಗ್‌ ವಿಷಯವಿದು, ನಿಮ್ಮ ಸಂಗ್ರಹಕ್ಕೂ ಸೇರಬೇಕು ಅನ್ನುವ ಯಥಾಪ್ರಕಾರ ಧ್ಯೇಯದಂತೆ ನಿಮ್ಮೊಡನೆ ಹಂಚಿಕೊಂಡದ್ದು. ನಿಮಗೆ ಗೊತ್ತಿರುವ ವಿರೋಧಾಭಾಸಗಳ ಬಗ್ಗೆ, ಅವುಗಳ ಉತ್ತರಗಳ ಬಗ್ಗೆ ಬಿಡುವಿದ್ದಾಗ ಪತ್ರಿಸಿ. ವಿಳಾಸ - srivathsajoshi@yahoo.com

ವಿರೋಧಾಭಾಸಗಳ ಬಗ್ಗೆ ಹೆಚ್ಚುವರಿ ಓದಿಗೆ:

http://en.wikipedia.org/wiki/Paradox

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more