• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸತ್ಯವಾನನಿಗೆ ಸಾವ್‌ಇತ್ರೀ, ಮತ್ತೆ ಬದುಕಿದ ನೋಡ್ರಿ!

By Staff
|
Srivathsa Joshi *ಶ್ರೀವತ್ಸ ಜೋಶಿ
ಮದ್ರ ದೇಶದ ದೊರೆ ಅಶ್ವಪತಿಗೆ ಹೇರಳವಾದ ಧನಧಾನ್ಯ ಸಂಪತ್ತು, ಸುಭಿಕ್ಷವಾದ ರಾಜ್ಯ, ಸುಖಜೀವಿ ಪ್ರಜಾವರ್ಗ -ಹೀಗೆ ಎಲ್ಲವೂ ಚೆನ್ನಾಗಿಯೇ ಇತ್ತು; ಆದರೂ ಅವನನ್ನು ಕಾಡುತ್ತಿದ್ದ ಒಂದೇಒಂದು ಮತ್ತು ಬಹುದೊಡ್ಡ ಚಿಂತೆಯೆಂದರೆ ಸಂತಾನಹೀನನಾಗಿದ್ದುದು. ಅದಕ್ಕಾಗಿ ಅವನು ಹದಿನೆಂಟು ವರ್ಷಗಳ ಕಾಲ ಕಠೋರ ತಪಸ್ಸನ್ನಾಚರಿಸಿದ ಮೇಲೆ ಸರಸ್ವತಿದೇವಿಯ ಅನುಗ್ರಹವಾಗಿ ಅವನ ರಾಣಿಯು ‘ ಸಾವಿತ್ರಿ’ ಎಂಬ ಮುದ್ದಾದ ಹೆಣ್ಣುಮಗುವಿಗೆ ಜನ್ಮವಿತ್ತಳು. ಅರಮನೆಯ ಅಂದ ಆನಂದಗಳನ್ನು ನೂರುಪಟ್ಟು ಹೆಚ್ಚಿಸಿದ ಬಾಲೆ ಸಾವಿತ್ರಿ, ಆಟವಾಡುತ್ತ ವಿದ್ಯೆಕಲಿಯುತ್ತ ನೋಡುನೋಡುತ್ತಿದ್ದಂತೆ ದೊಡ್ಡವಳಾಗಿಯೇಬಿಟ್ಟಳು, ಅಶ್ವಪತಿಯು ಅವಳ ಸ್ವಯಂವರವನ್ನೂ ಏರ್ಪಡಿಸಿದ. ಪಕ್ಕದರಾಜ್ಯದ ದ್ಯುಮತ್ಸೇನ ಎಂಬ ಅರಸನ ಮಗ ಸ್ಫುರದ್ರೂಪಿ ತರುಣ ಸತ್ಯವಾನನನ್ನು ವರಿಸಿದಳು ಸಾವಿತ್ರಿ.

ವಿವಾಹದ ತಯಾರಿಗಳೆಲ್ಲ ನಡೆದಿರಲು ಅಲ್ಲಿಗೆ ಬಂದ ತ್ರಿಲೋಕಸಂಚಾರಿ ನಾರದಮಹರ್ಷಿಗಳು ಘೋರವಾದ ಮತ್ತು ಆತಂಕಕಾರಿಯಾದ ಸುದ್ದಿಯಾಂದನ್ನು ಸಾವಿತ್ರಿಯ ಬಳಿ ಹೇಳಿದರು - ಅದೇನೆಂದರೆ, ಮದುವೆಯಾಗಿ ಸರಿಯಾಗಿ ಒಂದು ವರ್ಷ ಪೂರ್ತಿಯಾಗುವ ದಿನವೇ ಸತ್ಯವಾನ ಅಸುನೀಗಲಿದ್ದಾನೆ ಎಂಬುದಾಗಿ. ಇದನ್ನು ಕೇಳಿದ ಅಶ್ವಪತಿಗೋ ದಿಗ್ಭ್ರಮೆ, ಕಳವಳ. ಸತ್ಯವಾನನನ್ನು ಬಿಟ್ಟು ಬೇರೆಯಾರನ್ನಾದರೂ ವರಿಸುವಂತೆ ಸಾವಿತ್ರಿಯನ್ನು ವಿಧವಿಧದಲ್ಲಿ ತಿಳಿಯಹೇಳುವ ಪ್ರಯತ್ನವನ್ನವನು ಮಾಡಿದ, ಆದರೆ ಸಾವಿತ್ರಿಯದು ಅಚಲನಿರ್ಧಾರ. ಏನೇ ಆದರೂ ತಾನು ಸತ್ಯವಾನನನ್ನೇ ಮದುವೆಯಾಗುವವಳು ಎಂಬುದೊಂದೇ ಮಾತು. ಕೊನೆಗೂ ಬೇರೆ ಉಪಾಯವಿಲ್ಲದೆ ಮಗಳ ವಿವಾಹಸಮಾರಂಭವನ್ನು ನೆರವೇರಿಸಿದ ಅಶ್ವಪತಿ ಗಂಡನ ಮನೆಗೆ ಅವಳನ್ನು ಬೀಳ್ಕೊಟ್ಟ.

ಸಾವಿತ್ರಿಯ ದುರಾದೃಷ್ಟ ಆವಾಗಲೇ ಆರಂಭವಾಯಿತೇನೊ ಎನ್ನುವಂತೆ ಸತ್ಯವಾನನ ತಂದೆ ದ್ಯುಮತ್ಸೇನನ ರಾಜ್ಯವನ್ನು ಶತ್ರುಗಳು ವಶಪಡಿಸಿಕೊಂಡರು. ಮೊದಲೆಲ್ಲ ಅಶ್ವಪತಿಯಷ್ಟೇ ಬಲಶಾಲಿ ಮತ್ತು ಪರಾಕ್ರಮಿಯಾಗಿದ್ದವನಾದರೂ ಇದೀಗ ಅವನಿಗೆ ಪ್ರಾಯ ಸಂದಿತ್ತು ಮಾತ್ರವಲ್ಲದೆ ಅಂಧತ್ವವೂ ಇತ್ತು. ರಾಜ್ಯಕಳೆದುಕೊಂಡು ಒಂದು ಕಾಡಿನಲ್ಲಿ ಆ ಮುದಿ ತಂದೆ-ತಾಯಿ ಮತ್ತು ಈ ನವವಿವಾಹಿತ ಜೋಡಿ ಸೇರಿ ಬದುಕನ್ನು ಸಾಗಿಸಬೇಕಾಯಿತು. ಅಷ್ಟಾದರೂ ಸಾವಿತ್ರಿ ಮಾತ್ರ ನಗುಮುಖದಿಂದಲೇ ಗಂಡ ಮತ್ತು ಅತ್ತೆ-ಮಾವಂದಿರ ಸೇವೆ ಮಾಡಿಕೊಂಡು, ಒಂದುವರ್ಷದಲ್ಲಿ ಗಂಡ ಸಾಯಲಿದ್ದಾನೆ ಎಂಬ ಕಠೋರಸತ್ಯವನ್ನು ತನ್ನ ಹೊಟ್ಟೆಯಲ್ಲಿ ಹಾಕಿಕೊಂಡು ಸಂತೃಪ್ತಭಾವದಿಂದಲೇ ದಿನ ಕಳೆಯುತ್ತಿದ್ದಳು. ದುಗುಡ, ಪಶ್ಚಾತ್ತಾಪಗಳನ್ನೆಂದೂ ಅವಳು ಯಾರೆದುರೂ ತೋರಿಕೊಳ್ಳುತ್ತಿರಲಿಲ್ಲ.

ದಿನಗಳು ಉರುಳಿ ತಿಂಗಳುಗಳು ಕಳೆದು ಇನ್ನೇನು ನಾರದರು ಹೇಳಿದ್ದ ಗಡುವಿಗೆ ಮೂರೇ ದಿನ ಬಾಕಿ ಉಳಿದಿದ್ದುವು. ಆಗಲೂ ಧೃತಿಗೆಡಲಿಲ್ಲ ಸಾವಿತ್ರಿ. ಮೂರು ದಿನವೂ ಅನ್ನಾಹಾರ ನಿದ್ರೆಯಿಲ್ಲದೆ ಕಟ್ಟೆಚ್ಚರದಿಂದ ಸತ್ಯವಾನನ ಜತೆಯಲ್ಲೇ ಇರುತ್ತೇನೆಂದು ಪಣತೊಟ್ಟಳು. ದೇವರ ಮೇಲೆ ಭಾರಹಾಕಿ ಪ್ರಾರ್ಥನೆ ಸಲ್ಲಿಸಿದಳು. ಕೊನೆಗೂ ಬಂದೇ ಬಿಟ್ಟಿತು ಆ ದಿನ. ಸತ್ಯವಾನ ಎಂದಿನಂತೆ ಅವತ್ತೂ ಕಟ್ಟಿಗೆ ತರಲು ಕೊಡಲಿಯನ್ನು ಹಿಡಿದು ಹೊರಟ. ತಾನೂ ಜತೆಯಲ್ಲಿ ಬರುವೆನೆಂದು ಅವನನ್ನು ಹಿಂಬಾಲಿಸಿದಳು ಸಾವಿತ್ರಿ.

ಒಂದಿಷ್ಟು ಕಟ್ಟಿಗೆ ಒಟ್ಟುಮಾಡಿ ಆಗಿತ್ತಷ್ಟೆ, ಆಗಲೇ ಸತ್ಯವಾನ ತನಗೇಕೋ ಸಂಕಟವಾಗುತ್ತಿದೆ, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಆಮೇಲೆ ಕೆಲಸ ಮುಂದುವರೆಸುತ್ತೇನೆಂದ. ಆ ಸತಿ-ಪತಿಯರು ಆಗ ಒಂದು ದೊಡ್ಡ ಆಲದಮರದ ಕೆಳಗಡೆಗೆ ಬಂದಿದ್ದರು. ಅಲ್ಲೇ ಕುಳಿತ ಸಾವಿತ್ರಿ ತನ್ನ ತೊಡೆಯ ಮೇಲೆ ತಲೆಯನ್ನಿಟ್ಟು ಮಲಗುವಂತೆ ಸತ್ಯವಾನನಿಗೆ ಹೇಳಿದಳು. ಏಕಾಏಕಿ ನಿಸ್ತೇಜನಾದ ಸತ್ಯವಾನ ಒಂದುರೀತಿ ನರಳಲಾರಂಭಿಸಿದ. ನಿಗದಿತ ವೇಳೆಗೆ ಅವನ ಪ್ರಾಣಪಕ್ಷಿ ಹಾರಿಹೋಗುವುದಕ್ಕೂ ಆಗ ಅಲ್ಲೊಂದು ಕರಾಳ ಆಕೃತಿ ಗೋಚರಿಸುವುದಕ್ಕೂ ಸರಿಯಾಯಿತು. ಅದು ಬೇರಾರೂ ಅಲ್ಲ, ಸಾಕ್ಷಾತ್‌ ಯಮಧರ್ಮರಾಯ!

ತನ್ನ ಕೈಯಲ್ಲಿನ ಪಾಶದಿಂದ ಸತ್ಯವಾನನ ಆತ್ಮವನ್ನು ಎಳೆದುಕೊಂಡು ದಕ್ಷಿಣದಿಕ್ಕಿಗೆ ಹೊರಟೇಬಿಟ್ಟ ಯಮ. ಇದೆಲ್ಲ ಕಣ್ಮುಚ್ಚಿತೆರೆಯುವುದರೊಳಗೆ ಘಟಿಸಿದ ಅನುಭವ ಸಾವಿತ್ರಿಗೆ. ಅವಳು ಎದ್ದುನಿಂತು ಆರ್ತನಾದಗೈಯುತ್ತ ಯಮಧರ್ಮರಾಯನನ್ನೇ ಹಿಂಬಾಲಿಸತೊಡಗಿದಳು. ತನ್ನ ಹಿಂದೆಯೇ ಬರುತ್ತಿರುವ ಈ ನಾರಿಯನ್ನು ಕಂಡು ಯಮನಿಗೆ ಆಶ್ಚರ್ಯ! ‘ ನೀನು ಬರುವಂತಿಲ್ಲ, ನಿನ್ನ ಪತಿಯ ಪ್ರಾಣವನ್ನಷ್ಟೆ ತೆಗೆದುಕೊಂಡು ಹೋಗಲು ನಾನು ಬಂದವನು, ನೀನು ಹಿಂದಿರುಗು’ ಎಂದು ಅವನು ಸಾವಿತ್ರಿಯನ್ನು ಎಚ್ಚರಿಸಿದ. ಆಕೆ ಅದಾವುದನ್ನೂ ಕಿವಿಗೆಹಾಕಿಕೊಳ್ಳದೆ ಯಮನಿಗೇ ಸವಾಲೆಸೆದಳು, ಒಂದೋ ತನ್ನ ಪತಿಯ ಪ್ರಾಣವನ್ನು ಹಿಂದಿರುಗಿಸು ಇಲ್ಲ ಪತಿಯಾಟ್ಟಿಗೆ ತನ್ನನ್ನೂ ಕರೆದೊಯ್ಯು ಎಂದು. ಅವಳನ್ನು ಅದೆಷ್ಟು ಸಮಾಧಾನಿಸಿದರೂ ಗದರಿಸಿದರೂ ಉಪಯೋಗವಾಗಲಿಲ್ಲ. ಏನೇನೋ ವರಗಳ ಆಮಿಷ ತೋರಿಸಿದರೂ ಸಾವಿತ್ರಿ ಕೇಳುತ್ತಿದ್ದದ್ದು ಒಂದೇ - ಸತ್ಯವಾನ ಮತ್ತೆ ಬದುಕಬೇಕು, ಇಲ್ಲವಾದಲ್ಲಿ ತಾನೂ ಸತ್ತು ಅವನ ಸಹಭಾಗಿಯಾಗಿ ಸ್ವರ್ಗಸೇರಬೇಕು.

ಸಾವಿತ್ರಿಯ ನಿರ್ಮಲ ನಿಸ್ಪೃಹ ನಿರ್ವ್ಯಾಜ ಪತಿಭಕ್ತಿಯೆದುರು ಯಮ ಕುಬ್ಜನಾದ. ಆಕೆಯ ಅಚಲಪ್ರೇಮವನ್ನು ಕಂಡು ಮಮ್ಮಲಮರುಗಿದ. ಯಾವ ಆಲದ ಮರದ ಬುಡದಿಂದ ಸತ್ಯವಾನನ ಪ್ರಾಣವನ್ನು ಕಸಿದುಕೊಂಡುಹೋಗಿದ್ದನೋ ಅಲ್ಲಿಗೇ ಮರಳಿ ಅವನ ಮೃತಶರೀರದಲ್ಲಿ ಮತ್ತೆ ಪ್ರಾಣವಾಯು ಸಂಚರಿಸುವಂತೆ ಮಾಡಿದ. ಪತಿಯೇ ಪರದೈವವೆಂದು ನಂಬಿದ ಸಾವಿತ್ರಿಯನ್ನು ಮನಸಾರೆ ಹರಸಿದ ಯಮ ನೂರುಕಾಲ ಬಾಳುವಂತೆ ಅವರಿಬ್ಬರನ್ನು ಅನುಗ್ರಹಿಸಿ ಅಲ್ಲಿಂದ ಕಣ್ಮರೆಯಾದ.

ನಿದ್ದೆಯಿಂದ ಎಚ್ಚರಗೊಂಡವನಂತೆ ಎದ್ದು ಕುಳಿತ ಸತ್ಯವಾನ, ಇದೆಲ್ಲ ತನ್ನ ಕನಸಿನಲ್ಲಿ ನಡೆಯಿತೋ ಎಂದು ಸಾವಿತ್ರಿಯನ್ನು ಕೇಳಿದ. ಮುಸ್ಸಂಜೆ ಕಳೆದು ಹುಣ್ಣಿಮೆಯ ಚಂದಿರ ಪೂರ್ವದಂಚಿನಲ್ಲಿ ಇಣುಕಿ ಈ ಅಪೂರ್ವಚಮತ್ಕಾರಕ್ಕೆ ಮಂಗಳ ಹಾಡಲು ಬಂದಿದ್ದ. ಕಟ್ಟಿಗೆ ಒಯ್ಯುವುದು ತಡವಾಯಿತೆಂದು ಲಗುಬಗೆಯಿಂದ ಮನೆಯತ್ತ ಮರಳಿದ ಸತ್ಯವಾನ-ಸಾವಿತ್ರಿ ಅಲ್ಲಿ ನೋಡುವುದೇನು, ತಂದೆ-ತಾಯಿಯರು ಸಂತಸದಲ್ಲಿದ್ದಾರೆ, ರಾಜ್ಯವನ್ನು ಕಸಿದುಕೊಂಡಿದ್ದ ಶತ್ರುಗಳು ಪರಾರಿಯಾಗಿ ಮತ್ತೆ ರಾಜ್ಯಭಾರಕ್ಕೆ ಬರಬೇಕೆಂದು ಅದಾಗಲೇ ದೂತನೊಬ್ಬ ಅವರನ್ನು ಕರೆದಾಗಿತ್ತು! ಸಾವಿನಮನೆಯನ್ನು ಹೊಕ್ಕು ಮರಳಿದ ಮಗ ಸತ್ಯವಾನ, ಸಾವನ್ನೇ ಜಯಿಸಿದ ಸೊಸೆ ಸಾವಿತ್ರಿ; ದ್ಯುಮತ್ಸೇನನ ಆನಂದಕ್ಕೆ ಪಾರವೇ ಇಲ್ಲ. ಮತ್ತೆ ಎಲ್ಲರೂ ರಾಜ್ಯಕ್ಕೆ ಮರಳಿ ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯೇನ ಮಾರ್ಗೇಣ ಮಹಿಂಮಹೀಷಾಂ ಗೋಬ್ರಾಹ್ಮಣೇಭ್ಯಃ ಶುಭಮಸ್ತುನಿತ್ಯಂ ಲೋಕಾಃ ಸಮಸ್ತಾಃ ಸುಖಿನೋ ಭವಂತು... ಎಂದು ಆನಂದವಾಗಿ ರಾಜ್ಯಭಾರ ಮುಂದುವರೆಸಿದರು.

*

ಪತಿಯ ಪ್ರಾಣವನು ಮರಳಿ ಪಡೆಯುವ ತನಕ ಅಂಧಕಾರವನು ಅಳಿಸುವ ತನಕ ಬಿಡೆನು ನಿನ್ನ ಪಾದ ಎಂದು ಯಮನನ್ನು ಸತಾಯಿಸಿ, ಅವನೊಂದಿಗೆ ಪಟ್ಟುಹಿಡಿದು ವಾಗ್ವಾದ ಮಾಡಿ, ಪತಿಭಕ್ತಿಯೆಂಬ ಒಂದೇ ಅಸ್ತ್ರದಿಂದ ಅವನೆಲ್ಲ ಶಕ್ತಿಸಾಮರ್ಥ್ಯಗಳಿಗೆ ಸೆಡ್ಡುಹೊಡೆದು ಗೆದ್ದುಬಂದ ಧೀರೆ ಸಾವಿತ್ರಿಯ ಸ್ಮರಣೆಯ ಆಚರಣೆಯೇ ‘ವಟಸಾವಿತ್ರಿ’ ವ್ರತ. ಸತ್ಯವಾನನ ಅರೆಕ್ಷಣದ ಸಾವು - ಮರುಜನ್ಮ - ದೀರ್ಘಾಯುಷ್ಯದ ವರದಾನಗಳ ಚಮತ್ಕಾರ ನಡೆದದ್ದು ಆಲದ ಮರ (ವಟವೃಕ್ಷ)ದ ಕೆಳಗೆ, ಆದ್ದರಿಂದ ವ್ರತದ ಪಾವಿತ್ರ್ಯಕ್ಕೆ, ದೈವಿಕತೆಗೆ ಆಲದ ಮರದ ಸೇರ್ಪಡೆ. ಆ ಘಟನೆ ನಡೆದದ್ದು ಜ್ಯೇಷ್ಠ ಮಾಸದ ಹುಣ್ಣಿಮೆಯಂದು, ಹಾಗಾಗಿ ‘ ವಟಸಾವಿತ್ರೀಪೂರ್ಣಿಮಾ’. ಸಾಧ್ವಿ ಮಣಿ ಸಾವಿತ್ರಿಯ ಸ್ಮರಣೆ, ಆಯುಷ್ಯಸೂಚಕ ಆಲದ ಸನ್ನಿಧಾನ, ಪರಿಪೂರ್ಣತೆಯ ಪ್ರಮಾಣವಾಗಿ ಪೂರ್ಣಚಂದ್ರ - ಹೀಗೆ ತ್ರಿಗುಣವಾದ ದೈವಿಕತೆ. ಇದಕ್ಕಿಂತ ಹೆಚ್ಚಿನದೇನು ಬೇಕು ಈ ವೃತದ ಪ್ರಾಮುಖ್ಯತೆಗೆ?

ಈ ವರ್ಷ, ಇವತ್ತು ಅಂದರೆ ಜೂನ್‌ 21ರಂದು ಮಂಗಳವಾರ ವಟಸಾವಿತ್ರೀ ಹುಣ್ಣಿಮೆ. ಭಾರತದಾದ್ಯಂತ ಹೆಚ್ಚಿನ ಎಲ್ಲ ಪ್ರದೇಶಗಳಲ್ಲೂ ಇವತ್ತು ಈ ವ್ರತದ ಆಚರಣೆ ನಡೆಯುತ್ತದೆ. ಮದುವೆಯಾದ ಹೆಂಗಸರು ತಲೆಸ್ನಾನಮಾಡಿ, ಮಡಿಯುಟ್ಟು, ವಟವೃಕ್ಷವನ್ನು ಪೂಜಿಸುತ್ತಾರೆ. ಪ್ರಕೃತಿದತ್ತ ಫಲಪುಷ್ಪಗಳೆಲ್ಲ ಈ ಪೂಜೆಯಲ್ಲಿ ಬಳಕೆಯಾಗುತ್ತವೆ. ಆಲದ ಮರಕ್ಕೆ ನೂರಎಂಟು ಪ್ರದಕ್ಷಿಣೆ ಸಲ್ಲಿಸುತ್ತ ಹಾಗೆಯೇ ಬಿಳಿಯ ದಾರವನ್ನು ಮರದ ಕಾಂಡಕ್ಕೆ ನೂರೆಂಟು ಸುತ್ತು ಸುತ್ತಿಕಟ್ಟುವ ಸಾಂಕೇತಿಕ ಕ್ರಮವೂ ಕೆಲವೆಡೆ ಇದೆ. ಆ ನೂಲು ಯಮನ ಪಾಶಕ್ಕಿಂತ ನೂರೆಂಟು ಪಟ್ಟು ಉದ್ದ ಮತ್ತು ಆಲದ ಮರದ ಮೂಲಕ ಪ್ರತಿನಿಧಿಸಲ್ಪಡುವ ‘ಪತಿಯ ದೀರ್ಘಾಯುಷ್ಯ’ ಕ್ಕೆ ಸತಿಶಿರೋಮಣಿಯಿಂದ ರಕ್ಷಣೆ-ಹಾರೈಕೆಗಳ ಭದ್ರವಾದ ಬಂಧ - ಇದು ಪೂಜಾವಿಧಿಯ ಸಾಂಕೇತಿಕ ಆಶಯ. ಉಳಿದಂತೆ, ಭಕ್ಷಭೋಜ್ಯಗಳ ನೈವೇದ್ಯವನ್ನು ಸಮರ್ಪಿಸುವುದು, ಪೂಜಾರಿಗೆ ದಕ್ಷಿಣೆ, ಮುತ್ತೈದೆಯರಿಗೆ ಬಾಗಿನ ಕೊಡುವುದು, ‘ಸಾವಿತ್ರಿಯ ಕಥೆ’ಯನ್ನು ಪಠಿಸುವುದು/ಆಲಿಸುವುದು, ಇಷ್ಟಮಿತ್ರ-ಕುಲಬಾಂಧವರೆಲ್ಲ ಸೇರಿ ಹಬ್ಬದಡಿಗೆಯನ್ನು ಮೆಲ್ಲುವುದು - ಇತ್ಯಾದಿ ವಿವಿಧ ಸಂಪ್ರದಾಯಗಳು ವಿಧಿವಿಧಾನಗಳು ಇದ್ದೇ ಇವೆ. ಪ್ರಾದೇಶಿಕವಾಗಿ ಸಣ್ಣಪುಟ್ಟ ಬದಲಾವಣೆಗಳೂ ಇರುತ್ತವೆಯೆನ್ನಿ, ಆದರೆ ಆಲದಮರಕ್ಕೆ ಪೂಜೆ ಮತ್ತು ಪತಿಯ ದೀರ್ಘಾಯುಷ್ಯದ ಕೋರಿಕೆ ಇವಂತೂ ಸಾಮಾನ್ಯ ಅಂಶಗಳು.

ಆಲದ ಮರ ‘ ದೀರ್ಘಾಯುಷ್ಯ’ಕ್ಕೆ ಒಂದು ಪರ್ಯಾಯಪದ ಎಂದರೆ ಅತಿಶಯೋಕ್ತಿಯಲ್ಲ. ರೆಂಬೆಕೊಂಬೆಗಳನ್ನು ಎಷ್ಟು ವಿಶಾಲವಾಗಿ ವಿಸ್ತರಿಸಿಕೊಂಡು ಅದು ಬೆಳೆಯುತ್ತದೊ ಅದರ ಬೇರುಗಳೂ ಅಷ್ಟೇ ಆಳ ಮತ್ತು ಅಗಲಕ್ಕೆ ಹರಡಿರುತ್ತವೆ. ಆಲಕ್ಕೆ ‘ಬಹುಪಾದ’ ಎನ್ನುವ ಹೆಸರು ಬಂದಿರುವುದು ಈ ಕಾರಣಕ್ಕೇ. ಅದೆಷ್ಟೋ ಪೌರಾಣಿಕ ಕಥೆಗಳಲ್ಲಿ, ನೀತಿಕಥೆಗಳಲ್ಲಿ ಆಲದಮರದ ಪ್ರಸ್ತಾಪ ಬಂದೇಬರುತ್ತದೆ. ಶ್ರೀಕೃಷ್ಣ ಪರಮಾತ್ಮ ಪುಟ್ಟ ಶಿಶುವಾಗಿದ್ದಾಗ ಪವಡಿಸಿದ್ದು ಆಲದ ಎಲೆಯ ಮೇಲೇ ಅಲ್ಲವೇ? (ವಟಸ್ಯ ಪತ್ರಸ್ಯ ಪುಟೆಶಯಾನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ). ಪ್ರಾಣಿಗಳಲ್ಲಿ ಹುಲಿ, ಪಕ್ಷಿ ಗಳಲ್ಲಿ ನವಿಲು, ಹಣ್ಣು ಗಳಲ್ಲಿ ಮಾವು, ಹೂವುಗಳಲ್ಲಿ ಕಮಲ - ಇವುಗಳಿಗೆ ನಮ್ಮಲ್ಲಿ ‘ರಾಷ್ಟ್ರೀಯ’ ಗೌರವವಿರುವಂತೆಯೇ ನಮ್ಮ ಭಾರತದೇಶದ ‘ ರಾಷ್ಟ್ರೀಯ ವೃಕ್ಷ’ ಆಲದ ಮರ! ನಮ್ಮ ಭಾರತೀಯ ಸಂಸ್ಕೃತಿಯ ಆಳ ಅಗಲ ಎತ್ತರಗಳನ್ನು ಪ್ರತಿಬಿಂಬಿಸಲು ಇದಕ್ಕಿಂತ ಹೆಚ್ಚು ಸೂಕ್ತ ಸಂಕೇತ ಯಾವುದಿದ್ದೀತು ಹೇಳಿ! ರವೀಂದ್ರನಾಥ ಟಾಗೋರರು ಪಾಶ್ಚಾತ್ಯರಿಗೆ ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಹೇಳುವಾಗೆಲ್ಲ ಅದನ್ನೊಂದು ಆಲದಮರಕ್ಕೇ ಹೋಲಿಸಿದ್ದಾರೆ; ರವೀಂದ್ರರ ಅನೇಕ ಕವಿತೆಗಳಲ್ಲೂ ವಟವೃಕ್ಷದ ಉಲ್ಲೇಖ ಬರುತ್ತದೆ.

ಆಲದ ಮರದ ದೀರ್ಘಾಯುಷ್ಯ ಮತ್ತು ಉಪಯುಕ್ತತೆಗೆ ಸಂಬಂಧಿಸಿದಂತೆ, ಒಂದು ಚಿಣ್ಣರ ಅಭಿನಯಗೀತವನ್ನೂ ಇಲ್ಲಿ ಪ್ರಸ್ತಾಪಿಸಿ (ಅದಕ್ಕೂ ವಟಸಾವಿತ್ರಿಗೂ ಏನೇನೂ ತಾಳಮೇಳಗಳಿಲ್ಲದಿದ್ದರೂ) ಇವತ್ತಿನ ಲೇಖನವನ್ನು ಮುಗಿಸುತ್ತೇನೆ. ‘ ಚೀಂವ್‌ ಚೀಂವ್‌ ಚಿಕ್ಕ ಗುಬ್ಬಿ...’ ಪದ್ಯದಲ್ಲಿ, ಗೂಡುಕಟ್ಟಲು ಸ್ಥಳ ಮತ್ತು ಅನುಮತಿಯನ್ನು ಗುಬ್ಬಿಯು ಕೇಳಿದಾಗ, ಮಾವು ಗೇರು ಹಲಸಿನ ಮರಗಳೆಲ್ಲ ‘ಕಾಲು ಮುರಿದ ಗುಬ್ಬಿಗೆ ನಾನು ಸ್ಥಳವ ಕೊಡಲಾರೆ..’ ಎಂದು ಆಕ್ಷೇಪಿಸಿ ಜಾರಿಕೊಳ್ಳುತ್ತವೆ. ಆಲದ ಮರ ಮಾತ್ರ ಸಂತೋಷದಿಂದ ಒಪ್ಪಿಕೊಳ್ಳುತ್ತದೆ; ಗುಬ್ಬಿ ಅಲ್ಲಿ ಗೂಡು ಕಟ್ಟುತ್ತದೆ. ಮುಂದೊಂದು ದಿನ ‘ಗಾಳಿ ಬೀಸಿತು ಮೋಡ ಗುಡುಗಿತು ಮಳೆಯು ಸುರಿಯಿತು...’ ಆದಾಗ ‘ಸ್ಥಳವ ಕೊಡದ ಮಾವಿನ ಮರವು ಬಿದ್ದು ಬಿಟ್ಟಿತು...’ ಆಗುತ್ತದೆ, ಹಾಗೆಯೇ ಗೇರುಮರ, ಹಲಸಿನ ಮರ ಸಹ. ಆದರೆ ಕಾಲುಮುರಿದ ಗುಬ್ಬಿಗೆ ಸ್ಥಳವ ಕೊಟ್ಟ ಆಲದ ಮರ ಮಾತ್ರ ‘ ನೆಟ್ಟಗೆ ನಿಂತಿತ್ತು...’, ಗುಬ್ಬಿ ಗೂಡಿನಲ್ಲಿ ಬೆಚ್ಚಗೆ ಕುಳಿತಿತ್ತು!

*

ವಟಸಾವಿತ್ರಿ ವ್ರತಾಚರಣೆಯ ಬಗ್ಗೆ, ಆಲದಮರದ ಅಗ್ಗಳಿಕೆಯ ಬಗ್ಗೆ, ಅಥವಾ ಈ ಅಂಕಣದಲ್ಲಿ ಇವತ್ತು ‘ ಸಾವ್‌ಇತ್ರಿ...’ ಶೀರ್ಷಿಕೆಯಿಂದಾರಂಭಿಸಿ ವಟವಟಗುಟ್ಟಿದ ಬಗ್ಗೆ - ನಿಮ್ಮೆಲ್ಲ ಅನಿಸಿಕೆ ಅಭಿಪ್ರಾಯಗಳನ್ನು ಬರೆದು ತಿಳಿಸಿ. ವಿಳಾಸ - srivathsajoshi@yahoo.com.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more