• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚುಕ್ಕಿಯ ನಂತರ ‘ಚಿಕ್ಕಿ’ಯ ಸರದಿ!

By Super
|

ಕಳೆದ ವಾರದ ಚುಕ್ಕಿಯ ನಂತರ ಇವತ್ತೂ ಅಂತಹ ‘ಚಿಕ್ಕ' ವಿಷಯವನ್ನೇ ಏನಾದರೂ ಕೈಗೆತ್ತಿಕೊಳ್ಳೋಣವೇ? ಆದರೆ ಚಿಕ್ಕ ವಿಷಯದ ನೆಪದಲ್ಲಿ ಮತ್ತೆ ಚಿಕ್ಕ/ಸಣ್ಣ ಪದಗಳ ಬಳಕೆಯ ಬಗ್ಗೆ ವ್ಯಾಖ್ಯಾನವಂತೂ ಬೇಡಪ್ಪಾ, ಅದನ್ನು ಈಗಾಗಲೇ ಮಾಡಿ ಆಗಿದೆ (ಕೆಲ ಓದುಗಮಿತ್ರರ ಅಸಮಾಧಾನಕ್ಕೆ ಗುರಿಯಾದದ್ದೂ ಆಗಿದೆ!)

ಹೌ ಎಬೌಟ್‌ ‘ಚಿಕ್ಕಿ'? ರುಚಿರುಚಿಯಾದ ಚಿಕ್ಕಿಯನ್ನು ಇವತ್ತು ಕೈಗೆತ್ತಿಕೊಂಡರೆ ಹೇಗೆ? ಕೈಯಾಳಗೇತಕೆ ಬಾಯಾಳಗಿಟ್ಟರೆ ಆಗದೇ ಎಂದಿತು ಇನ್ನೊಂದು... ಎಂಬಂತೆ, ಕೈಯಲ್ಲಿರುವುದಕ್ಕಿಂತ ಚಿಕ್ಕಿ ಬಾಯಿಗೇ ಬರಲಿ ಎಂದು ನಿಮ್ಮ ಬಾಯಲ್ಲಿ ಆಗಲೇ ನೀರೂರಿತೇ? ಸ್ವಲ್ಪ ಸಾವರಿಸಿಕೊಳ್ಳಿ, ಚಿಕ್ಕಿಯ ಬಗ್ಗೆ ಚಿಕ್ಕದೊಂದು ಆಖ್ಯಾನವನ್ನೋದಿ ಆಮೇಲೆ ಚಿಕ್ಕಿಯನ್ನು ಬಾಯಾಳಗಿಕ್ಕುವಿರಂತೆ.

‘ಗುಲಾಮ್‌' ಚಿತ್ರದಲ್ಲಿ ಆಮೀರ್‌ಖಾನ್‌ ರಾಣಿಮುಖರ್ಜಿಯನ್ನು ‘ಆತೀ ಕ್ಯಾ ಖಂಡಾಲಾ...?' ಎಂದು ಕೇಳಿದ್ದು, ‘ಖಂಡಾಲಾ ಆಕೆ ಮೆ ಕ್ಯಾಂ ಕರೂಂ?' ಎಂದು ಆಕೆ ಮರುಕೊಶ್ನಿಸಿದ್ದು, ‘ಘೂಮೇಂಗೆ ಫಿರೇಂಗೆ ನಾಚೇಂಗೆ ಗಾಯೇಂಗೆ ಐಶ್‌ ಕರೇಂಗೆ ಔರ್‌ ಕ್ಯಾ!' ಎಂದು ಆಮೀರ್‌ ಮತ್ತೆ ಆಕೆಯನ್ನು ಟೆಂಪ್ಟಿಸಿದ್ದು - ಇವೆಲ್ಲ ನಮಗ್ಗೊತ್ತು. (ಹಾಡಿನ ಆ ಸಾಲುಗಳನ್ನು ಕನ್ನಡವೂ ಸೇರಿದಂತೆ ಜಗತ್ತಿನ 23 ಬೇರೆಬೇರೆ ಭಾಷೆಗಳಿಗೆ ಹಿಂದಿಯಿಂದ ಅನುವಾದ ಮಾಡಿಟ್ಟಿದ್ದಾರೆ ಯಾರೋ ಮಹಾನುಭಾವರು. ಆ ತರ್ಜುಮೆಯ ಸಂಕಲನವನ್ನು ನನ್ನ ಸೈಬರ್‌ಗುಡಿಸಲಿನ ಪಾರ್ಕಿಂಗ್‌ಲಾಟ್‌ನಲ್ಲಿ ಪಾರ್ಕ್‌ ಮಾಡಿಟ್ಟಿದ್ದೇನೆ. ಆಸಕ್ತಿಯುಳ್ಳವರು ನೋಡಬಹುದು). ಆದರೆ ಆಮೀರ್‌ ತನ್ನ ರಾಣಿಗೆ ಒಡ್ಡಿದ ಆಮಿಷಗಳಲ್ಲಿ ‘ಖಂಡಾಲಾ ಮೆ ಚಿಕ್ಕಿ ಖಾಯೇಂಗೆ' ಎಂಬ ಮಾತನ್ನೂ ಯಾಕೆ ಸೇರಿಸಲಿಲ್ಲ ಎಂದುಮಾತ್ರ ನಮಗ್ಗೊತ್ತಿಲ್ಲ. ಅದನ್ನೂ ಸೇರಿಸಬೇಕಿತ್ತು ಎಂದು ನನ್ನ ಅಂಬೋಣ.

ಯಾಕೆಂದರೆ ಮುಂಬಯಿ-ಪುಣೆ ನಡುವಿನ ಖಂಡಾಲಾ ಮತ್ತು ಅದರ ಅವಳಿ ಪಟ್ಟಣ ಲೋನಾವಳಾ ‘ಚಿಕ್ಕಿ'ಗೆ ವರ್ಲ್ಡ್‌ಫೇಮಸ್‌! ಅಲ್ಲಿಗೆ ಗುಹೆ-ಗಿರಿಧಾಮಗಳ ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸಲು ಬರುವ ಪ್ರವಾಸಿಗರಾರೂ ಚಿಕ್ಕಿ ಕೊಳ್ಳದೆ, ಚಿಕ್ಕಿ ಸವಿಯದೆ ವಾಪಸಾಗುವುದಿಲ್ಲ. ಚಿಕ್ಕಿ ಅಲ್ಲಿಯ ಪ್ರಮುಖ ಆಕರ್ಷಣೆ. ಲೋನಾವಳಾದಲ್ಲಂತೂ ಗಲ್ಲಿಗಲ್ಲಿಗಳಲ್ಲಿ ಚಿಕ್ಕಿ ಉತ್ಪಾದನೆಯ ಚಿಕ್ಕದೊಡ್ಡ ಉದ್ಯಮಗಳಿವೆ. ಅದೆಷ್ಟೋ ಸಂಸಾರಗಳಿಗೆ ಚಿಕ್ಕಿ ತಯಾರಿ-ಮಾರಾಟಗಳೇ ಜೀವನೋಪಾಯವೆನ್ನುವಷ್ಟು ಚಿಕ್ಕಿಮಯವಾದ ಪಟ್ಟಣವೆಂದರೆ ಲೋನಾವಳಾ. ಆದ್ದರಿಂದಲೇ ಹೇಳಿದ್ದು ಖಂಡಾಲಾಕ್ಕೆ ಹೋಗಿ ಐಶ್‌ ಮಾಡೋಣವೆಂದ ಆಮೀರ್‌ ಅಲ್ಲೇ ಪಕ್ಕದ ಲೋನಾವಳಾ ಚಿಕ್ಕಿಯ ಬಗ್ಗೆ ಪ್ರಸ್ತಾಪಿಸದಿದ್ದುದು ಶುದ್ಧ ಅನ್ಯಾಯ ಎಂದು.

ಚಿಕ್ಕಿ - ಎಂಥ ಸಿಂಪಲ್‌ ತಿಂಡಿ ನೋಡಿ. ಹುರಿದ ನೆಲಗಡಲೆಬೀಜಗಳನ್ನು ಹದವಾದ ಬೆಲ್ಲದಪಾಕದಲ್ಲಿ ಹಾಕಿ ತಣಿಸಿ ಬರ್ಫಿಯಂತೆ ಚೌಕಾಕಾರ ಕತ್ತರಿಸಿದರೆ ಚಿಕ್ಕಿ ರೆಡಿ. ಅಂದಹಾಗೆ ಬೈ ಡಿಫಾಲ್ಟ್‌, ಚಿಕ್ಕಿ ನೆಲಗಡಲೆ ಮತ್ತು ಬೆಲ್ಲ ಹಾಕಿ ಮಾಡಿದ್ದೇ ಆದರೂ ಲೋನಾವಳಾದಲ್ಲಿ ನೆಲಗಡಲೆಚಿಕ್ಕಿ ಮಾತ್ರವಲ್ಲದೆ ಬೇರೆ ವಿಧವಿಧವಾದ ಚಿಕ್ಕಿಗಳು - ಬಾದಾಮಿ, ಗೇರುಬೀಜ, ಹುರಿಗಡಲೆ, ಎಳ್ಳು, ಮಂಡಕ್ಕಿ, ಕೊಬ್ಬರಿ ಇತ್ಯಾದಿ ಕಚ್ಚಾಸಾಮಗ್ರಿ ಉಪಯೋಗಿಸಿ ಮಾಡಿದವು - ಸಿಗುತ್ತವೆ. ಲೋನಾವಳಾದಿಂದ ಈ ತರಾವರಿ ಚಿಕ್ಕಿಗಳೆಲ್ಲ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತಾಗುತ್ತವೆ.

ಮೂಲತಃ ಮಹಾರಾಷ್ಟ್ರದ ಈ ರುಚಿಕರ ತಿನಿಸು ಕರ್ನಾಟಕದಲ್ಲೂ ಕಡಿಮೆ ಪ್ರಸಿದ್ಧಿಯೇನಲ್ಲ. ಯಾವುದೇ ಹಳ್ಳಿಯ ಎಂಥದೇ ಗೂಡಂಗಡಿಯಲ್ಲೂ ಬಹುಷಃ ಚಿಕ್ಕಿ ಸಿಕ್ಕೇಸಿಗುತ್ತದೆ. ಲೋನಾವಳಾ ಚಿಕ್ಕಿಯಂತೆ ‘ನ್ಯಾಷನಲ್‌ ಚಿಕ್ಕಿ', ‘ಎ-ವನ್‌ ಚಿಕ್ಕಿ' ಅಂತೆಲ್ಲ ಫೇಮಸ್‌ ಬ್ರಾಂಡ್‌ಗಳಿಲ್ಲದಿದ್ದರೂ ಸ್ಥಳೀಯ ಗೃಹಉದ್ಯಮಗಳ ಉತ್ಪನ್ನವಾಗಿ ಚಿಕ್ಕಿಪ್ರಿಯರ ಚಪಲತೀರಿಸುತ್ತದೆ. ಅಂತೂ ಚಿಕ್ಕಂದಿನಿಂದಲೂ ಚಿಕ್ಕಿಯ ಬಗ್ಗೆ ಗೊತ್ತಿದ್ದು ಆಗೊಮ್ಮೆ ಈಗೊಮ್ಮೆ ಚಿಕ್ಕಿ ಮುಕ್ಕಿಯೇ ದೊಡ್ಡವರಾದವರು ನಾವೆಲ್ಲ ; ‘ಚಿಕ್ಕಿ' ಎಂದಾಕ್ಷಣ ನನಗೆ ಶಾಲಾದಿನಗಳ ನೆನಪಾಯ್ತು... ಎಂದು ಏನೋ ಪ್ರಸಂಗವೊಂದು ಜ್ಞಾಪಕವಾಗುವುದೇ ನಮಗೆಲ್ಲ.

ಉದಾಹರಣೆಗೆ ನನಗೊಂದು ನೆನಪಿದೆ - ‘ಚಿಕ್ಕಿ ಬೀಡಾ ಬ್ಯಾಲೆನ್ಸ್‌ಶೀಟ್‌' ಅಂತ ಒಂದು ಪ್ರಸಂಗ. ಅದನ್ನೀಗ ವಿವರಿಸುತ್ತೇನೆ. ಒಮ್ಮೆ (ಸುಮಾರು ಹತ್ತುಹದಿನೈದು ವರ್ಷಗಳ ಹಿಂದೆ ಇರಬಹುದು) ನಾವು ನಾಲ್ಕೈದು ಕುಟುಂಬಗಳವರು ಸೇರಿ ಒಂದುದಿನದ ಹೊರಸಂಚಾರ ಕಾರ್ಯಕ್ರಮ ಇಟ್ಟುಕೊಂಡಿದ್ದೆವು. ಬಹುಶಃ ನಮ್ಮೂರಿಂದ ಮಂಗಳೂರಿಗೆ ಹೋಗಿ, ಅಲ್ಲಿ ನಡೆಯುತ್ತಿದ್ದ ಸರ್ಕಸ್‌ ಪ್ರದರ್ಶನ ನೋಡಿ ಮಂಗಳೂರು ಸುತ್ತಾಡಿ, ಒಳ್ಳೇ ರೆಸ್ಟೊರೆಂಟಲ್ಲಿ ಊಟ ಮಾಡಿ ವಾಪಸಾಗುವ ಪ್ರೋಗ್ರಾಂ ಅಂತ ನನ್ನ ನೆನಪು. ಟಿಪಿಕಲ್‌ ಪಿಕ್‌ನಿಕ್‌ಗಳಂತೆಯೇ ಯಾರೋ ಒಬ್ಬರು ಎಲ್ಲ ಖರ್ಚುವೆಚ್ಚಗಳ ಲೆಕ್ಕ ಇಟ್ಟು ಆಮೇಲೆ ಎಲ್ಲರೂ ಅದನ್ನು ಸಮಪಾಲಾಗಿ ವಹಿಸುವ ಏರ್ಪಾಡು.

ಸರಿ, ಅವತ್ತಿನ ಟ್ರಿಪ್‌ಗೆ ಕೋಶಾಧಿಕಾರಿಯಾಗಿದ್ದವರು ನಮ್ಮ ಅತ್ತಿಗೆ. ಪ್ರವಾಸದ ನಂತರ ಅದಕ್ಕೆ ಸಂಬಂಧಿಸಿದ ಎಲ್ಲ ಖರ್ಚುವೆಚ್ಚಗಳ ವಿವರಗಳನ್ನವರು ಅಚ್ಚುಕಟ್ಟಾಗಿ ಬರೆದು ಒಂದು ಬ್ಯಾಲೆನ್ಸ್‌ಶೀಟ್‌ ರೆಡಿ ಮಾಡಿದರು. ಖರ್ಚಿನ ಕಾಲಂನಲ್ಲಿ ಒಂದು ಎಂಟ್ರಿ ‘ಚಿಕ್ಕಿಬೀಡಾ = ರೂ 17.00' (ಹದಿನೇಳೋ ಎಷ್ಟೊ ಅದು ಇಂಪಾರ್ಟೆಂಟ್‌ ಅಲ್ಲ) ಎಂದು ಇತ್ತು. ಆ ಎಂಟ್ರಿ ಏನೆಂದರೆ ಪಿಕ್‌ನಿಕ್‌ ವೇಳೆ ಮಧ್ಯಾಹ್ನ ಊಟದ ನಂತರ ಎಲ್ಲರಿಗೂ ಸ್ವೀಟ್‌ ಬೀಡಾ (ಪಾನ್‌) ತಗೊಂಡಿದ್ವಿ ಆದರೆ ಕೆಲ ಚಿಕ್ಕಮಕ್ಕಳಿಗೆ ಬೀಡಾ ತಿನ್ನಲು ಅವರ ಪೋಷಕರ ಅನುಮತಿ ಇರಲಿಲ್ಲ. ಹಾಗೆಯೇ ಸಂಜೆಯ ಹೊತ್ತು ಎರಡು ಪ್ಯಾಕ್‌ ಚಿಕ್ಕಿ ಸಹ ಖರೀದಿಸಲಾಗಿತ್ತು, ಅದನ್ನು ಮಾತ್ರ ಚಿಕ್ಕವರು ದೊಡ್ಡವರೆನ್ನದೆ ಎಲ್ಲರೂ ಚಪ್ಪರಿಸಿದ್ದರು. ಲೆಕ್ಕಪತ್ರದಲ್ಲಿ ಮಾತ್ರ ನಮ್ಮ ಅತ್ತಿಗೆ ಚಿಕ್ಕಿ ಬೀಡಾ ಎರಡನ್ನೂ ಮಿಸಲೇನಿಯಸ್‌ ಐಟಂಸ್‌ ಅಂತ ಒಂದೇ ಎಂಟ್ರಿಯಡಿ ಹಾಕಿದ್ದರಿಂದ, ಪಾಲುದಾರಿಕೆಯಲ್ಲಿ ಸ್ವಲ್ಪ ಇರುಸುಮುರುಸಾಗಿತ್ತೆಂದು ನನಗೆ ನೆನಪು. ಕೋರ್ಟ್‌ವ್ಯಾಜ್ಯದಂಥದ್ದೇನೂ ಆಗಿರಲಿಲ್ಲ ಬಿಡಿ, ಆದರೆ ನಮಗೆಲ್ಲ ‘ಚಿಕ್ಕಿಬೀಡಾ ಬ್ಯಾಲೆನ್ಸ್‌ ಶೀಟ್‌...' ಅಂತ ತಮಾಷೆ ಮಾಡಲಿಕ್ಕೆ ಒಂದು ವಿಷಯ ಸಿಕ್ಕಿದ್ದಂತೂ ಹೌದು!

ಮಾಹಿತಿಕೋಶವಾಗಿ ಚಿಕ್ಕಿ!

ಚಿಕ್ಕಿ ಚಿಕ್ಕಿ ಎಂದು ಚಿಕ್ಕ ಚಿಕ್ಕ ಮಾತುಗಳಿಂದಲೇ ಬಾಯಲ್ಲಿ ನೀರೂರಿಸಿದೆನೆಂದು ನನ್ನ ಮೇಲೆ ಆಪಾದಿಸುವ ಮೊದಲೇ ನಿಮಗೆ ಇನ್ನೊಂದು ‘ಚಿಕ್ಕಿ'ಯ ಬಗ್ಗೆ ತಿಳಿಸುವುದಿದೆ. ಇದು ತಿನ್ನಲಿಕ್ಕಾಗುವ ಚಿಕ್ಕಿ ಅಲ್ಲ, ಬದಲಿಗೆ ‘ಮಾಹಿತಿಕೋಶ'ವಾಗಿ ಕಾರ್ಯವೆಸಗುವ ಚಿಕ್ಕಿ. ಮಾಹಿತಿಕೋಶವೆಂದ ಮೇಲೆ ಅದೇನೊ ಕಂಪ್ಯೂಟರ್‌ಗೆ ಸಂಬಂಧಪಟ್ಟ ವಿಷಯವಿರಬೇಕೆಂಬ ನಿಮ್ಮ ಊಹೆ ಸರಿಯೇ. ಕಂಪ್ಯೂಟರ್‌ನಲ್ಲಿ ಬಳಕೆಯಾಗುವ ಚಿಕ್ಕಿಯ ಕುರಿತು ಚಿಕ್ಕದೊಂದು ಮಾಹಿತಿ ಇಲ್ಲಿದೆ.

ಸಿಂಪಲ್‌ ಆಗಿರುವ ಕಂಪ್ಯೂಟರ್‌ ಅಂದರೆ ಸಿಂಪ್ಯೂಟರ್‌. ಮಾಹಿತಿ ತಂತ್ರಜ್ಞಾನದ ಪ್ರಯೋಜನಗಳು ಬಡಜನತೆಯನ್ನೂ ತಲುಪಬೇಕಿದ್ದರೆ, ಅಭಿವೃದ್ಧಿಶೀಲ ದೇಶಗಳಲ್ಲೂ ಕಂಪ್ಯೂಟರ್‌ ಒಂದು ಸರಳ ಗೃಹೋಪಯೋಗಿ ವಸ್ತುವಾಗಿ ಹೊರಹೊಮ್ಮಬೇಕಿದ್ದರೆ ತೀರಾ ಸರಳವಾಗಿರುವ, ಸುಲಭದ ಬೆಲೆಯಲ್ಲಿ ಸಿಗುವ ಕಂಪ್ಯೂಟರ್‌ನ ಆವಿಷ್ಕಾರದ ಅಗತ್ಯವಿದೆ. ಈ ನಿಟ್ಟಿನಲ್ಲಿ ನಡೆದಿರುವ ಪ್ರಯೋಗ-ಪ್ರಯತ್ನಗಳ ಒಂದು ರೂಪವೇ ಸಿಂಪ್ಯೂಟರ್‌.

ಬೆಂಗಳೂರು ಮೂಲದ ‘ಅಮಿದಾ' ಈಬಗೆಯ ಒಂದು ಸಿಂಪ್ಯೂಟರ್‌. ಅದರಲ್ಲಿ ಉಪಯೋಗಿಸುವ ಮಾಹಿತಿಕೋಶ ಅಥವಾ ಫ್ಲಾಶ್‌ ಮೆಮೊರಿ ಕಾರ್ಡ್‌ಗೆ ‘ಚಿಕ್ಕಿ' ಎಂದೇ ಹೆಸರು! ಬಹುಷಃ ಅದರ ಚಿಕ್ಕ ಸೈಜ್‌ನಿಂದಾಗಿ ಆ ಹೆಸರಿರಬಹುದು. ನಮಗೆಲ್ಲ ಚಿರಪರಿಚಿತ ಚಿಕ್ಕಿಯಷ್ಟೇ ಚಿಕ್ಕದಾದ (ಮತ್ತು ಅಮಿದಾ ಕಂಪೆನಿಯವರು ಹೇಳುವಂತೆ ಚೊಕ್ಕದಾದ ಮತ್ತು ಬಳಸಲು ಅತಿ ಸುಲಭವಾದ) ಚಿಕ್ಕಿಯನ್ನು ಅಮಿದಾ ಸಿಂಪ್ಯೂಟರ್‌ಗೆ ಅಳವಡಿಸಿದರೆ ಅದರಲ್ಲಿ ಸಂಗ್ರಹಿಸಿಟ್ಟ ಚಿತ್ರಗಳನ್ನು ನೋಡಬಹುದು, ಹಾಡುಗಳನ್ನು ಕೇಳಬಹುದು, ಮೂವಿಕ್ಲಿಪ್ಸ್‌ ಸಹ ವೀಕ್ಷಿಸಬಹುದು. ಸಿಂಪ್ಯೂಟರ್‌ ನಿಂದ ಕಂಪ್ಯೂಟರ್‌ಗೆ ಮಾಹಿತಿ ವರ್ಗಾವಣೆ ಮಾಡಬೇಕಿದ್ದಲ್ಲಿ ಸೇತುವೆಯಾಗಿ ಕೂಡ ಚಿಕ್ಕಿಯನ್ನೇ ಬಳಸಬಹುದು!

ಅಂತೂ ಚಿಕ್ಕಿ ಎಂದರೆ - ಅದು ಮಾಹಿತಿಕೋಶದ ಈ-ಚಿಕ್ಕಿಯೇ ಆಗಿರಲಿ, ಮಧುರ ರುಚಿಯ ಆ ಚಿಕ್ಕಿಯೇ ಆಗಿರಲಿ - ಚಿಕ್ಕದಂತೇನೂ ತಿಳಿಯಬೇಡಿ. ಹಾಗೆನ್ನಲು ಬಹುಷಃ ಚಿಕ್ಕಿಯ ಫೇವರಿಟ್‌ ಹಾಡು ಇದಾಗಿರಬಹುದು: ‘ಛೋಟಾ ಬಚ್ಚಾ ಜಾನ್‌ಕೆ ಹಮ್‌ಕೊ ನಾ ಸಮ್‌ಝಾನಾರೇ... ಚಿಕ್ಕಿ ಚಿಕ್ಕಿ ಬೂಮ್‌ ಬೂಮ್‌... '

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chikki is a traditional Indian sweet made of sesame seeds, ground nut seeds or peanuts. It is hard yet brittle. Vichitranna columnist Srivathsa Joshi writes infotainment article about Chikki.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more