ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ವಿಚಾರಣೆ’ - ಆತ್ಮೀಯ ಆತಿಥ್ಯದ ವಿಜೃಂಭಣೆ!

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

ಮಹಾಮಂಗಳಾರತಿ (ಕಳೆದವಾರದ ಲೇಖನ) ಆಯ್ತು. ಮಂಗಳಾರತಿಯ ನಂತರ ಏನು? ಇನ್ನೇನು, ಪ್ರಸಾದ ವಿತರಣೆ. ಅದೂ ದೊಡ್ಡಮಟ್ಟಿನಲ್ಲಾದರೆ ಅನ್ನ ಸಂತರ್ಪಣೆ. ತತ್ರಾಪಿ ಭೂರಿಭೋಜನವಾದರೆ, ಅಂದರೆ ಹೊಟ್ಟೆಬಿರಿಯುವಷ್ಟು ಹಾಕಿಸಿಕೊಂಡು ‘ಹೊಡಿ’ಯುವಂಥದಾದರೆ, ಸಂತರ್ಪಣೆ with ವಿಚಾರಣೆ!

‘ವಿಚಾರಣೆ’ - ಹಾಗೆಂದರೇನು?

ಕರ್ನಾಟಕದ ಬೇರೆ ಭಾಗಗಳಲ್ಲಿ ಈ ಪದದ ಬಳಕೆ (ಊಟ ಅಥವಾ ಬಡಿಸುವಿಕೆಗೆ ಸಂಬಂಧಿಸಿದಂತೆ) ಇದೆಯೋ ಇಲ್ಲವೋ ನನಗೆ ಅಷ್ಟೇನೂ ಗೊತ್ತಿಲ್ಲ, ಆದರೆ ಉಡುಪಿ/ದ.ಕ ಮೂಲದವರಿಗೆ ಈ ‘ವಿಚಾರಣೆ’ ಪದ ಖಂಡಿತ ಗೊತ್ತಿರುತ್ತದೆ. ಊಟ, ವಿಶೇಷವಾಗಿ ಹಬ್ಬಹರಿದಿನಗಳ ಸಡಗರದ ಅಥವಾ ಮದುವೆ-ಮುಂಜಿ ಇತ್ಯಾದಿ ಸಮಾರಂಭಗಳ ವಿಶೇಷ ಊಟ ಬಡಿಸುವಾಗ, ‘ಪಾಯ್ಸ ಇನ್ನೊಂದು ಸ್ವಲ್ಪ ಹಾಕಿಸಿಕೊಳ್ಳಿ... ಲಡ್ಡು ಹಾಕಿಸಿಕೊಳ್ಳಿ, ಬೇಡ ಅನ್ಬೇಡಿ... ನೀವು ಸಂಕೋಚಪಟ್ಕೊಳ್ತೀರಿ, ನಿಧಾನಕ್ಕೆ ಊಟಮಾಡಿ... ರಾಮಣ್ಣೋರೇ ಹೊಸ ನೆಂಟರಲ್ಲವೆ ಇನ್ನೊಂದು ಹೋಳಿಗೆ ಹಾಕಿಸಿಕೊಳ್ಳಿ, ಹಿಂದೆ ಕಾಯಿಹಾಲು ಬರ್ತಾ ಇದೆ...’ ಎಂದು ಮನೆಯಜಮಾನ ತೋರುವ ಆತಿಥ್ಯಕ್ಕೆ, ಹಾಗೆಯೇ ‘ಸಾರು... ಇನ್ನು ಬರೋದಿಲ್ಲ, ಕೊನೇ ಸಾರು... ಯಾರಿಗೆ ಸಾರು...’ ಎಂದು ಊಟಬಡಿಸುವವರ ಉದ್ಘೋಷಣೆಗೆ ಸಾಮಾನ್ಯವಾದ ಒಂದು ಪದವಿದೆ, ಅದೇ ‘ವಿಚಾರಣೆ’.

ಇವತ್ತಿನ ವಿಚಿತ್ರಾನ್ನದಲ್ಲಿ ವಿಚಾರಣೆ ಕುರಿತು ಒಂದಿಷ್ಟು ಲೋಕಾಭಿರಾಮದ ಒಗ್ಗರಣೆ(= ಕಾಡುಹರಟೆ, ಕಾಲಕ್ಷೇಪ). ಸಂಕೋಚ ಪಟ್ಕೊಳ್ಬೇಡಿ, ಇನ್ನೊಂದ್‌ ಸ್ವಲ್ಪ ಹಾಕಿಸಿಕೊಳ್ಳಿ!

*

ಹಿಂದೊಮ್ಮೆ (ವಿಚಿತ್ರಾನ್ನ ಸಂಚಿಕೆ 18ರಲ್ಲಿ) ಬಾಳೆಎಲೆಯಲ್ಲಿ ಬಡಿಸಿದ ಉಡುಪಿಭೋಜನದಲ್ಲಿ ಯಾವ್ಯಾವ ಭಕ್ಷಭೋಜ್ಯಗಳಿರುತ್ತವೆ, ಬಾಳೆಎಲೆಯಲ್ಲಿ ಅವಕ್ಕೆಲ್ಲ ಎಲ್ಲೆಲ್ಲಿ ಜಾಗ ಎಂಬಿತ್ಯಾದಿ ವಿವರಗಳನ್ನು ಬಾಯಲ್ಲಿ ನೀರೂರುವಂತೆ ಬಣ್ಣಿಸಲಾಗಿತ್ತು. ಅದರಲ್ಲೇ ಹೇಳಿದ್ದಂತೆ ಉಡುಪಿಊಟದಲ್ಲಿ ಸಾರು ಪ್ರಧಾನ ಭೂಮಿಕೆ ವಹಿಸುತ್ತದೆ. ಊಟ ಶುರುವಾಗೋದೇ ಸಾರಿನಿಂದ! ನಾಲ್ಕು-ಐದು ಸರ್ವಿಂಗ್ಸ್‌ ಸಾರು, ಹಾಗಾಗಿಯೇ ‘ಇನ್ನು ಬರೋದಿಲ್ಲ, ಕೊನೇ ಬಾರಿ ಸಾರು... ಯಾರಿಗೆ...’ ಅಂತ ವಿಚಾರಣೆ. ಮಿಕ್ಕೆಲ್ಲ ಪದಾರ್ಥಗಳೂ (ತೊವ್ವೆ, ಗೊಜ್ಜು, ಪಲ್ಯ, ಹುಳಿ, ಚಟ್ನಿ, ಅವಿಯಲ್‌, ಹಶಿ, ಕೋಸಂಬರಿ... ಇತ್ಯಾದಿತ್ಯಾದಿ ಹತ್ತುಹಲವಾರು ಐಟಂಗಳು) ಬರೀ ನೆಂಚಿಕೊಳ್ಳಲಿಕ್ಕೆ ಮಾತ್ರ. ಅವನ್ನು ಬಡಿಸುವಾಗ ಬೇಕೊ ಸಾಕೊ ಅಂತ ಕೇಳಲಿಕ್ಕಿಲ್ಲ, ಎಲ್ಲರ ಎಲೆಮೇಲೂ ಒಂಚೂರು ಬಡಿಸಿಕೊಂಡು ಹೋಗ್ತಾ ಇರ್ತಾರೆ. ಮತ್ತೆ ವಿಚಾರಣೆಗೊಳ್ಳುತ್ತ ಬಡಿಸಲ್ಪಡುವವೆಂದರೆ ಪಾಯಸ, ಹೋಳಿಗೆ, ಜಿಲೇಬಿ, ಲಾಡು, ಚಿರೋಟಿ ಮೊದಲಾಗಿ ಆ ದಿನದ ಮುಖ್ಯ ಸಿಹಿ ಭಕ್ಷ್ಯ. ಎಷ್ಟು ಪ್ರಮಾಣದಲ್ಲಿ, ಎಷ್ಟು ಒತ್ತಾಯದಿಂದ, ಎಷ್ಟು ಆತ್ಮೀಯತೆಯಿಂದ, ಎಷ್ಟು ಸಲಿಗೆಯಿಂದ ವಿಚಾರಣೆ ನಡೆಯುತ್ತದೊ ಅಷ್ಟು ಹೆಚ್ಚು ವಿಜೃಂಭಣೆ ಆ ಸಮಾರಂಭದ್ದು ಅಂತ ಲೆಕ್ಕ. ಅದಕ್ಕೇ ಹೇಳಿದ್ದು - ವಿಚಾರಣೆ ಅನ್ನೋದು ವಿಜೃಂಭಣೆಯ ಒಂದು ಮಾನದಂಡ (yardstick). ಎರಡು-ಮೂರಾದರೂ ಹೋಳಿಗೆ ಚಪ್ಪರಿಸದಿದ್ದರೆ ಆ ಅತಿಥಿಯದೂ ಮಾನ ‘ದಂಡ’.

ಈಗಿನ ಕಾಲದಲ್ಲಿ ’ಬಫೆ’ ಸಿಸ್ಟಂನಲ್ಲಿ ನಿಂತುಕೊಂಡೇ ಊಟ ಮಾಡುವ ಕ್ರಮದಿಂದಾಗಿ ಬಾಳೆಎಲೆಯಲ್ಲಿ ಪಂಕ್ತಿಊಟದ ಪದ್ಧತಿಗೆ ಹೇಗೆ ಕುತ್ತು ಬಂದಿದೆಯೋ ಹಾಗೆಯೇ ವಿಚಾರಣೆಯಂಥ ಆತ್ಮೀಯತೆ, ಔಪಚಾರಿಕತೆಗಳೆಲ್ಲ ನಶಿಸಿ ಹೋಗುತ್ತಿವೆಯೆನ್ನಿ. ಅಂದಮಾತ್ರಕ್ಕೆ ಬಫೆ ಸಿಸ್ಟಂ ಒಳ್ಳೆಯದಲ್ಲ, ಹಳೇಕಾಲದ ಕ್ರಮವೇ ಒಳ್ಳೇದಿತ್ತು... ಎಂದು ಹಳೇರಾಗದ ಸೊಲ್ಲು ಇದು ಅಂತೇನೂ ಭಾವಿಸಬೇಡಿ. ಏನು ಬೇಕೊ ಎಷ್ಟು ಬೇಕೊ ಅದನ್ನು ಸ್ವಸಹಾಯಪದ್ಧತಿಯಲ್ಲಿ ಬಡಿಸಿಕೊಂಡು ಗಬಗಬನೆ ಮುಕ್ಕುವ ಅನುಕೂಲವಿರುವ ಬಫೆಸಿಸ್ಟಂ ಸಹ ಕೆಲಸಂದರ್ಭಗಳಲ್ಲಿ ಒಳ್ಳೆಯದೇ. ಹಾಗೆ ನೋಡಿದರೆ, ‘ದೇಶದಲ್ಲಿ ತಿನ್ನಲು ಅನ್ನವಿಲ್ಲದಿರಲು... ದಂಡಪಿಂಡಗಳಿಗೆ ಅನ್ನದ ಸಂತೆಯೋ...’ ಎಂದು ಒತ್ತಾಯದ ನೆಪದಲ್ಲಿ ಆಹಾರ ಪೋಲಾಗಿ ಹೋಗುವುದಕ್ಕಿಂತ, ‘ಉಂಡುಂಡು ದಣಿದವಗೆ ಕರೆಕರೆದು ಉಣಿಸುವರು... ಉಣಲಿಲ್ಲದವಗೆ ನಡೆ ಎಂಬರು...’ ಆಗೋದಕ್ಕಿಂತ ಸ್ವಸಹಾಯದ ಬಫೆಯೇ ಒಳ್ಳೆಯದೇನೊ ಸರಿಯೇ. ಆದರೆ ಈ ವಿಚಾರಣೆ ಅನ್ನೋ ಕಾನ್ಸೆಪ್ಟಿಗೆ ಬಫೆಯಲ್ಲಿ ಆಸ್ಪದವೇ ಇಲ್ಲ ನೋಡಿ, ಅದೇ ಬೇಜಾರು.

ಮಠ-ದೇವಸ್ಥಾನಗಳಲ್ಲಿ ಅನ್ನದಾಸೋಹ ನಡೆವ ಛತ್ರಗಳಲ್ಲಿ ಬಹುತೇಕವಾಗಿ, ದೇವರಪ್ರಸಾದ ಎಂದು ಸಂಕ್ಷಿಪ್ತರೂಪದ ಭೋಜನವೇ ಇರುವುದಾದರೂ ಕೆಲವೊಂದುಕಡೆ ಬಿಸಿಬಿಸಿಯಾದ ರುಚಿರುಚಿಯಾದ ಸುಗ್ರಾಸಭೋಜನ ವಿಚಾರಣೆ ಸಹಿತ ಇರುತ್ತದೆ! ನಾನು ಮೊಟ್ಟಮೊದಲಬಾರಿ ಶೃಂಗೇರಿಗೆ ಹೋದದ್ದು, ಹೈಸ್ಕೂಲ್‌ನಲ್ಲಿ ಕಲಿಯುತ್ತಿದ್ದ ದಿನಗಳಲ್ಲಿ. ನಮ್ಮಮ್ಮ, ಅಣ್ಣ-ಅತ್ತಿಗೆ, ಮಕ್ಕಳು ಮತ್ತು ನಾನು - ಇಷ್ಟು ಜನ ಒಮ್ಮೆ ಪ್ರವಾಸ ಹೋಗಿದ್ದೆವು. ಅಲ್ಲಿ ಶಾರದಾಂಬಾ ದೇವಸ್ಥಾನ, ಶಂಕರಮಠ ಇತ್ಯಾದಿಯನ್ನೆಲ್ಲ ನೋಡಿಯಾದ ಮೇಲೆ ಛತ್ರದಲ್ಲಿ ಅವತ್ತು ನಮ್ಮ ಮಧ್ಯಾಹ್ನದೂಟ. ಆ ಪ್ರವಾಸಕ್ಕೆ ಸಂಬಂಧಿಸಿದಂತೆ ಬೇರೇನೂ ಅಷ್ಟು ಸ್ಪಷ್ಟ ನೆನಪಿಲ್ಲದಿದ್ದರೂ ಶಾರದಾಂಬೆಯ ಪ್ರಸಾದವಾಗಿ ಛತ್ರದಲ್ಲಿ ಊಟ, ಅದರಲ್ಲೂ ‘ವಿಚಾರಣೆ’ಯಾಂದಿಗೆ ಬೂದುಗುಂಬಳದ ಹುಳಿ ಬಡಿಸುತ್ತಿದ್ದ ಪರಿ ಮಾತ್ರ ಅಚ್ಚೊತ್ತಿದಂತೆ ನನಗೆ ನೆನಪಿದೆ!

ಹೊಟೆಲ್‌ಗಳಲ್ಲೂ ವಿಚಾರಣೆ...

ನಮ್ಮ ಬೆಂಗಳೂರಿನ ಪ್ರಖ್ಯಾತ ಎಂ.ಟಿ.ಆರ್‌ ಹೊಟೆಲ್‌ನ ಫುಲ್‌ಮೀಲ್ಸ್‌ ರುಚಿ ನಿಮ್ಮಲ್ಲನೇಕರಿಗೆ ಗೊತ್ತಿದೆಯೆಂದುಕೊಂಡಿದ್ದೇನೆ. ಭಲೇ ಸೊಗಸಾದ ಆ ಊಟದಲ್ಲಿ (worth the wait of 20 or 30 minutes to get a table) ಹತ್ತುಹಲವಾರು ಸ್ವಾದಿಷ್ಟವಾದ ಐಟಂಗಳು ಇರುತ್ತವೆ ಮಾತ್ರವಲ್ಲ ಹೆಚ್ಚಿನೆಲ್ಲ ಐಟಂಗಳ ವಿಚಾರಣೆಯೂ ಇರುತ್ತದೆ. ಮುಂಬಯಿಯಲ್ಲಿ, ಮಾಟುಂಗಾ ರೈಲ್ವೆ ಸ್ಟೇಷನ್‌ ಪಕ್ಕದಲ್ಲಿರುವ ಉಡುಪಿ ಶ್ರೀಕೃಷ್ಣ ಬೋರ್ಡಿಂಗ್‌ ಸಹ ಫುಲ್‌ಮೀಲ್ಸ್‌ಗೆ ಜನಜನಿತವಾದ ಹೊಟೆಲ್‌. ರಾಮ ನಾಯಕ್‌ ಎಂಬ ಶ್ರಮಜೀವಿ, ಮುಂಬಯಿಯ ರಾಮಕೃಷ್ಣ ಮಿಷನ್‌ನಲ್ಲಿ ಅಡುಗೆಉಸ್ತುವಾರಿ ನೋಡಿಕೊಳ್ಳುತ್ತಿದ್ದವರು, 1942ರಲ್ಲಿ ಸ್ಥಾಪಿಸಿದ ಈ ಉಡುಪಿರೆಸ್ಟೋರೆಂಟ್‌ ಅಂದಿನಿಂದ ಇವತ್ತಿನವರೆಗೂ ಶುಚಿ-ರುಚಿ-ಸೇವೆಗಳ ಉತ್ಕೃಷ್ಟತೆಯ ಮಟ್ಟವನ್ನು ಏಕಪ್ರಕಾರವಾಗಿ ಉಳಿಸಿಕೊಂಡಿದೆ, ಮುಂಬಯಿ ಮಹಾನಗರದ ಫುಲ್‌ಮೀಲ್ಸ್‌ ಪ್ರಿಯರಿಗೆ ‘1942 ಎ ಲವ್‌ಸ್ಟೋರಿ’ ಯಾಗಿ ಬೆಳೆದುಬಂದಿದೆ. ಆ ಹೊಟೆಲ್‌ನ ವಿಚಾರಣೆ ಊಟದ ಸವಿಯ ಪರಿಚಯವಿಮರ್ಶೆಯು ಇಲ್ಲಿ ಒಂದು ಲೇಖನದಲ್ಲಿ ಲಭ್ಯವಿದೆ, ಹಸಿವು ಮಾಡಿಕೊಂಡು ಓದಿ!

ಹೊಟೆಲ್‌ಗಳಲ್ಲಿ ಫೈವ್‌ಕೋರ್ಸ್‌, ತ್ರೀಕೋರ್ಸ್‌ ಇತ್ಯಾದಿ ವಿಚಾರಣೆ ಸಹಿತ ಫುಲ್‌ಮೀಲ್‌ಗಳನ್ನು ನಾನು ಕ್ರಿಕೆಟ್‌ನ ಟೆಸ್ಟ್‌ ಮ್ಯಾಚ್‌ಗೆ ಹೋಲಿಸುತ್ತೇನೆ. ಜಸ್ಟ್‌ ‘ಪ್ಲೇಟ್‌ ಮೀಲ್‌’ ಎಂದರೆ ವನ್‌ಡೇ ಮ್ಯಾಚ್‌ ಇದ್ದ ಹಾಗೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಲ್ಲಿ ಮಿನಿಮೀಲ್‌ ಎಂಬ ಕಾನ್ಸೆಪ್ಟೂ ಜನಪ್ರಿಯವಾಗಿದೆ (2002ರಲ್ಲಿ ನಾನು ಬೆಂಗಳೂರಿಗೆ ಹೋಗಿದ್ದಾಗ ಮಿನಿಮೀಲ್‌ಗೆ 7 ಅಥವಾ 8 ರೂಪಾಯಿ ಇತ್ತು, ಈಗ ಎಷ್ಟಿದೆಯಾ ಗೊತ್ತಿಲ್ಲ). ಈ ಮಿನಿಮೀಲ್‌ ಎಂಬುದು ವನ್‌ಡೇ ಮ್ಯಾಚ್‌ಗಿಂತಲೂ ಹೃಸ್ವಸ್ವರೂಪದ್ದು - ಇದನ್ನು 20 ಓವರ್‌ಗಳ ಮ್ಯಾಚ್‌ ಅನ್ನಬಹುದೇನೊ!

ಹೊಟೆಲ್‌ಗಳಲ್ಲಿ ವಿಚಾರಣೆಯ ಊಟದ ವಿಷಯ ಪ್ರಸ್ತಾಪಕ್ಕೆ ಬಂದಾಗಲೇ ‘ಮೆಸ್‌’ಗಳ ಬಗ್ಗೆಯೂ ಉಲ್ಲೇಖಿಸಬೇಕಾಗುತ್ತದೆ. ವಿಚಾರಣೆ ಮಾಡಿಯೂ ಮಾಡದಂತೆ ಇರುವ, ಮಾಡದೆಯೇ ಮಾಡಿದಂತೆ ತೋರಿಸಿ ‘ಮೆಸ್‌’ಮರೈಸ್‌ ಮಾಡುವ ಮೆಸ್‌ ಒಡೆಯರ ಚಳಕ ಅದ್ಭುತವಾದುದು. ಅನ್ನಕ್ಕೇ ಸಾಕಷ್ಟು ಸೋಡಾ ಉದುರಿಸಿಡುವ ಈ ಮೆಸ್‌ ‘ವಿಚಾರಕ’ರು ಇಂಜನಿಯರಿಂಗ್‌/ಮೆಡಿಕಲ್‌ ಕಾಲೇಜುಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಅಣಬೆಗಳಂತೆ ಅಲ್ಲೊಂದು ಇಲ್ಲೊಂದು ಮೆಸ್‌ ಸ್ಥಾಪಿಸಿರುತ್ತಾರೆ. ದಾವಣಗೆರೆಯಲ್ಲಿ ನಾವು ಇಂಜನಿಯರಿಂಗ್‌ ವಿದ್ಯಾರ್ಥಿಗಳಾಗಿದ್ದಾಗ ಸಹಪಾಠಿಯಾಬ್ಬ ನಮ್ಮ ಹಾಸ್ಟೆಲ್‌ಗೆ ಸನಿಹದಲ್ಲೇ ಖಾಸಗಿ ರೂಮ್‌ನಲ್ಲಿ ವಾಸ್ತವ್ಯ ಮಾಡಿಕೊಂಡಿದ್ದು ಮೆಸ್ಸಾವಲಂಬಿಯಾಗಿದ್ದ. ಇವತ್ತು ಬ್ರೇಕ್‌ಫಾಸ್ಟ್‌ ಏನಿತ್ತೋ ಅಂತ ಕೇಳಿದರೆ ಅವನ ಖಾಯಂ ಉತ್ತರ - ಫೋರ್‌ ನಂಬರ್‌ ಆಫ್‌ ಇಡ್ಲೀಸ್‌, ಇನ್ಫೈನೈಟ್‌ ನಂಬರ್‌ ಅಫ್‌ ಚಟ್ನೀಸ್‌! ಅಂದರೆ ಇಡ್ಲಿಗೆ ರೇಷನ್‌, ಚಟ್ನಿಗೆ ಮನಸೋದಿಚ್ಛ ವಿಚಾರಣೆ!

ಇಲ್ಲಿ ಅಮೆರಿಕದಲ್ಲಿ ಅಮೆರಿಕನ್‌ ಹೊಟೆಲ್‌ಗಳಲ್ಲಿ ಸರ್ವಿಂಗ್‌ ಸ್ಟೈಲ್‌ನಲ್ಲಿ ಫುಲ್‌ಮೀಲ್ಸ್‌ ಇರುವ ಹೊಟೆಲ್‌ ಇರುತ್ತವೆಯಾ ಎಂದು ನನಗೆ ಕುತೂಹಲ. 2000ದಲ್ಲಿ ಅಮೆರಿಕೆಗೆ ಬಂದ ಹೊಸತರಲ್ಲಿ, ಹ್ಯೂಸ್ಟನ್‌ (ಟೆಕ್ಸಸ್‌)ನಲ್ಲಿ ಒಂದು ಪ್ರಾಜೆಕ್ಟ್‌ ಎಸೈನ್‌ಮೆಂಟ್‌ ಇದ್ದಾಗ ಒಂದು ದಿನ ಸಂಜೆ ನಾವೆಲ್ಲ ಟೀಮ್‌ ಡಿನ್ನರ್‌ಗೆ Fogo De Chao ಎಂಬ ಬ್ರೆಜಿಲಿಯನ್‌ ರೆಸ್ಟೋರೆಂಟ್‌ಗೆ ಹೋಗಿದ್ದೆವು. ಆ ಹೊಟೆಲ್‌ನ ಔತಣದಲ್ಲಿ ನಾನು ಕಂಡ ವಿಚಿತ್ರವಾದ ವಿಶಿಷ್ಟವಾದ ವಿಚಾರಣೆ ಕ್ರಮದ ಬಗ್ಗೆ ಆಗ ಒಂದು ಎಂಟ್ರಿ ಬರೆದಿಟ್ಟಿದ್ದೆ (ಆಸಕ್ತಿಯಿರುವವರು ಈ ವೆಬ್‌ಪುಟದಲ್ಲಿ ಓದಬಹುದು).

ಅಮೆರಿಕದ ದೊಡ್ಡದೊಡ್ಡ ಶಹರಗಳಿಂದ ಹಿಡಿದು ಸಣ್ಣಪುಟ್ಟ ಊರುಗಳಲ್ಲೂ ವ್ಯಾಪಿಸಿರುವ ಇಂಡಿಯನ್‌ ರೆಸ್ಟೊರೆಂಟ್‌ಗಳಲ್ಲಿ ಮಧ್ಯಾಹ್ನದೂಟ ಬಫೆಸಿಸ್ಟಂನಲ್ಲಿ ಅನ್‌ಲಿಮಿಟೆಡ್‌ ಫುಡ್‌ ಎನ್ನುವುದು ಸರ್ವೇಸಾಮಾನ್ಯವಾಗಿದೆ. (ಮತ್ತು ಅಲ್ಲಿಗೆ ಭಾರತೀಯರಿಗಿಂತಲೂ ಹೆಚ್ಚು ಅಮೆರಿಕನ್ನರೂ ಲಗ್ಗೆಯಿಡುತ್ತಾರೆ ಅನ್ನುವುದೂ ಸಾಮಾನ್ಯ ಸಂಗತಿ). ವಾರಾಂತ್ಯದ ಬಫೆ ಹತ್ತಿಪ್ಪತ್ತು ಪಕ್ವಾನ್ನಗಳೊಂದಿಗೆ ದೋಸೆ-ಇಡ್ಲಿ-ವಡೆ-ಪಕೋಡಾ ಇತ್ಯಾದಿ ಬ್ರೇಕ್‌ಫಾಸ್ಟ್‌ ಐಟಂಗಳ ಸಹಿತ ವಿಶೇಷವಾಗಿ ಇರುತ್ತದೆ. ನಮ್ಮ ಮನೆಗೆ ಅತಿಸಮೀಪದಲ್ಲಿರುವ ಮದ್ರಾಸ್‌ ಪ್ಯಾಲೇಸ್‌ ಸಸ್ಯಾಹಾರಿ ರೆಸ್ಟೋರೆಂಟ್‌ನಲ್ಲಿ ಶನಿ-ಭಾನುವಾರದ ಲಂಚ್‌ಬಫೆಗೆ ಹೆಚ್ಚುಕಡಿಮೆ 30 ಅಥವಾ 35 ವಿವಿಧ ಭಕ್ಷ್ಯಭೋಜ್ಯಗಳು ಇರುತ್ತವೆ, ಮೊನ್ನೆ ‘ಮದರ್ಸ್‌ ಡೇ ಸ್ಪೆಷಲ್‌’ ಬಫೆಯಲ್ಲಿದ್ದ ನಂಬರ್‌ ಆಫ್‌ ಐಟಂಸ್‌ ಊಹಿಸಬಲ್ಲಿರಾ? 74!! ಆದರೆ ಅದೇ ಹೇಳಿದ್ನಲ್ಲಾ, ವಿಚಾರಣೆ ಇಲ್ಲದೆ ನಾವೇ ಬಡಿಸಿಕೊಂಡು ತಿನ್ನಬೇಕಾದಾಗ 74 ಇದ್ದರೆಷ್ಟು 47 ಇದ್ದರೆಷ್ಟು? ವಿಚಾರಣೆಯ ಆತ್ಮೀಯತೆಯಾಂದಿಗೆ ಬರೀ ಎರಡು-ಮೂರು ಪದಾರ್ಥಗಳುಳ್ಳ ಸಂತೃಪ್ತಿಯ ಭೋಜನವಿದ್ದರೂ ಸಾಕು, ಅದರ ತೂಕವೇ ಬೇರೆ, ಅದೂ ಅಮ್ಮನ ಕೈಯಿಂದಲೇ ‘ಸರ್ವ್‌’ಇಸಲ್ಪಟ್ಟರಂತೂ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ!

ಸಂಕೋಚ ರಹಿತ ವಿಚಾರಣೆ!

ಊಟ ಬಡಿಸುವವರಿಂದ ವಿಚಾರಣೆಯ ಮಾತಾಯ್ತೇ, ಊಟ ಮಾಡುವವರಿಂದಲೂ ಯಾವೊಂದು ಸಂಕೋಚವಿಲ್ಲದೇ ‘ನನಗೆ ನಿಮ್ಮನೆಯ ಮಾವಿನಕಾಯಿತೊಕ್ಕು ತುಂಬ ಇಷ್ಟ ಆಯ್ತು, ಇನ್ನೊಂದು ಸ್ವಲ್ಪ ಬಡಿಸಿ/ ಬಡಿಸ್ತೀರಾ...’ ಎಂಬಂಥ ಇನ್‌ವರ್ಸ್‌ ವಿಚಾರಣೆ ಸಹ ಖುಶಿಕೊಡುವಂಥ ವಿಚಾರವೇ. ಅಂಥವರು, ಸಮಾರಂಭದ ಊಟದಲ್ಲಿ ರವೆಲಾಡು ಒಂದೊಂದೇ ಬಡಿಸುತ್ತ ಹೋಗುತ್ತಿದ್ದರೂ ‘ಎರಡೇ ಎರಡು ಬಡಿಸಿ...’ ಎಂದು ಹಾಕಿಸಿಕೊಂಡು ರವೆಲಾಡು ಸವಿಯುತ್ತಾರೆ. ಭೂತಯ್ಯನ ಮಗ ಅಯ್ಯುವಿನಲ್ಲಿ ಲೋಕನಾಥ್‌ ಭರಣಿಯಿಂದಲೇ ಉಪ್ಪಿನಕಾಯಿ ಚಪ್ಪರಿಸಿದ ‘ವ್ಹಾ! ಕ್ಯಾ ಸೀನ್‌ ಹೈ...’ ಗೊತ್ತಲ್ಲ? ಒಂದುರೀತಿಯಲ್ಲಿ ಹಾಗೆ ಫ್ರೀಯಾಗಿ ಫ್ರಾಂಕಾಗಿ ಇರೋದೇ ವಾಸಿ, ಸಂಕೋಚಪಟ್ಟುಕೊಂಡಿದ್ದರೆ ಹಸಿವಿನಿಂದಲೇ ಇರಬೇಕಾದೀತು! ಊಟದ ವಿಷಯದಲ್ಲಿ ಸಂಕೋಚವೂ ಸಲ್ಲದು, ಕಿರಿಕಿರಿಯೆನಿಸಬಹುದಾದ ಒತ್ತಾಯವೂ ಸಲ್ಲದು, ನೀವೇನಂತೀರಾ?

‘ಸಂಕೋಚಪಟ್ಕೋಬೇಡಿ, ನಿಮ್ಮದೇ ಮನೆ ಅಂತ ಅಂದ್ಕೊಂಡು ಊಟ ಮಾಡಿ...’ ಎಂದು ಆತಿಥೇಯರು ಮೊದಲೇ ಘೋಷಿಸಿಬಿಡುತ್ತಾರಲ್ಲ, ಅದರ ಫಾಯಿದಾ ಉಠಾಯಿಸಿ ನಿಸ್ಸಂಕೋಚವಾಗಿ ಊಟ ಮಾಡುವುದು ಅತಿಥಿಗೂ ಒಳ್ಳೆಯದು, ಆತಿಥೇಯರಿಗೂ ಒಳ್ಳೆಯದು. ಒಂದೇ ಪ್ರಾಬ್ಲೆಮ್ಮು ಎಂದರೆ ನಮ್ಮ ಆತಿಥೇಯರೇನಾದರೂ ತಮಿಳರಾಗಿದ್ದರೆ ಅವರ ವತ್ತಕೊಳಂಬು, ಮೋರ್‌ಕೊಳಂಬುಗಳೆಲ್ಲ ಇಷ್ಟವಾಗಿ, ತಮಿಳಲ್ಲಿ ಕೇಳಲಿಕ್ಕೆ ಬಾರದೆ ಇಂಗ್ಲಿಷಲ್ಲಿ I want some more… ಎಂದು ನಿರ್ದಾಕ್ಷಿಣ್ಯವಾಗಿ ನಾವು ಕೇಳಿದಾಗ, ಅವರು more ಅನ್ನು ತಮಿಳಿನ ಮೋರ್‌ ಎಂದು ಬಗೆದು ಮಜ್ಜಿಗೆ ತಂದು ಸುರಿದರೆ ಆಗ ಬೇರೆ ಉಪಾಯವಿಲ್ಲದೆ ಮಜ್ಜಿಗೆಯೂಟ ಮಾಡಿ ಊಟಕ್ಕೆ ಜನಗಣಮನ ಹಾಡಬೇಕಾಗುತ್ತದೆ!

ಹಾಗೆಯೇ ನೀವು, we would like to read some more ಎಂದುಕೊಂಡರೂ ಇವತ್ತಿನ ಈ ಹರಟೆಯನ್ನು ನಾನಿಲ್ಲಿಗೇ ನಿಲ್ಲಿಸಬೇಕಾಗುತ್ತದೆ.

ಫುಲ್‌ಮೀಲ್ಸ್‌ ಉಂಡ ತೃಪ್ತಿ ಸಿಕ್ಕರೆ ಪತ್ರಿಸಿ. ಸಿಗದಿದ್ದರೂ ಪತ್ರಿಸಿ. ವಿಳಾಸ - [email protected].


ಮುಖಪುಟ

/ ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X