ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಟಕ್ಕುಂಟು ಲೆಕ್ಕಕ್ಕಿಲ್ಲ ; ಬೇರೆಲ್ಲದಕ್ಕುಂಟು ಗಣಿತಕ್ಕಿಲ್ಲ?

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

Mathematics is the queen of sciences ಅಂತಾರೆ. ಮಹಾನ್‌ ವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೀನ್‌ ತನ್ನ Ideas and Opinions ಎಂಬ ಪುಸ್ತಕದ ಆರಂಭದಲ್ಲೇ ಕಾರ್ಲ್‌ ಫ್ರೆೃಡ್‌ರಿಚ್‌ ಗೌಸ್‌ನ ಈ ಉಕ್ತಿಯನ್ನು ಉಲ್ಲೇಖಿಸಿದ್ದಾನೆ. ವಿಜ್ಞಾನಶಾಸ್ತ್ರಗಳೆಲ್ಲವಕ್ಕೂ ಮಹಾರಾಣಿಯಿದ್ದಂತೆ ಗಣಿತ. ಆದರೆ ಬಹುತೇಕವಾಗಿ ಗಣಿತವನ್ನು ವಿಜ್ಞಾನಶಾಸ್ತ್ರಗಳ ಪ್ರತಿಪಾದನೆಗೆ ಒಂದು ಸಾಧನ (tool) ಆಗಿ ಉಪಯೋಗಿಸುವುದೇ ವಿನಹ ಅದೇ ಒಂದು ವಿಜ್ಞಾನವಲ್ಲ ಎನ್ನುವ ವಾದವೂ ಇದೆ. ಅಂಥವರು Mathematics is the servant of sciences ಎನ್ನಲೂ ಹಿಂಜರಿಯುವುದಿಲ್ಲ!

ಆಲ್ಫ್ರೆಡ್‌ ನೊಬೆಲ್‌ ಸಹ ಗಣಿತವನ್ನು ‘ದಾಸಿ’ ಎಂದು ಪರಿಗಣಿಸಿದನೇ? ಅವನ ದೃಷ್ಟಿಯಲ್ಲಿ ಯಾಕೆ ಗಣಿತವು ಮಿಕ್ಕೆಲ್ಲ ವಿಜ್ಞಾನಶಾಸ್ತ್ರಗಳಷ್ಟೇ ಶ್ರೇಷ್ಠವೆನಿಸಿಕೊಳ್ಳಲಿಲ್ಲ? ಮಹಾರಾಣಿ ಪಟ್ಟ ಅದಕ್ಕೆ ಬೇಡ ಎಂದು ನೊಬೆಲ್‌ ತೀರ್ಮಾನಿಸಿದನೇ? ನೊಬೆಲ್‌ ಪ್ರಶಸ್ತಿ ಗಣಿತಶಾಸ್ತ್ರಕ್ಕೆ ಇಲ್ಲದಿರುವುದು ನೋಡಿದರೆ ಹೀಗೊಂದು ತರ್ಕಬದ್ಧ ಅನುಮಾನ ಬರುತ್ತದೆ. ಹೌದಲ್ಲ!?

ಮ್ಯಾಥಮಾಟಿಕ್ಸ್‌ಗೆ ನೊಬೆಲ್‌ ಪ್ರಶಸ್ತಿ ಇಲ್ಲದಿರುವುದರ ಬಗ್ಗೆ ಒಂದು ‘ಅಂತೆ ಕಂತೆಗಳ ಕಥೆ’ ಇದೆ. ಅದೇನೆಂದರೆ, ಆಲ್ಫ್ರೆಡ್‌ ನೊಬೆಲ್‌ನ ಹೆಂಡತಿಗೆ ಒಬ್ಬ ಮೇಧಾವಿ ಗಣಿತಜ್ಞನೊಂದಿಗೆ, ವಿವಾಹೇತರ ಪ್ರಣಯಸಂಬಂಧವಿತ್ತಂತೆ. ಇದರಿಂದ ಕುಪಿತನಾದ ನೊಬೆಲ್‌ ತಾನು ಸ್ಥಾಪಿಸಿದ ಪ್ರಶಸ್ತಿ ಏನೇ ಆದರೂ ಆ ಗಣಿತಜ್ಞನ ಮಡಿಲಿಗೆ ಬೀಳಬಾರದೆಂದು ನಿರ್ಧರಿಸಿ ಗಣಿತಶಾಸ್ತ್ರವನ್ನೇ ನೊಬೆಲ್‌ ಪರಿವ್ಯಾಪ್ತಿಯಿಂದ ಹೊರಗಿಟ್ಟನಂತೆ!

ಅದು ಕೇವಲ ಕಟ್ಟುಕಥೆ. ಮ್ಯಾಥಮಾಟಿಕ್ಸ್‌ಗೆ ನೊಬೆಲ್‌ ಯಾಕಿಲ್ಲ ಎನ್ನುವ ಥಿಯರಿಯನ್ನು ಮನರಂಜಿಸುವಂತೆ ಹೇಳಲು ಯಾರೋ ಕಪೋಲಕಲ್ಪಿಸಿದ ಕಥೆ. ಆದರೆ ಅದು ಅಧಿಕೃತವೇ ಇರಬಹುದೇನೊ ಎನ್ನುವಷ್ಟು ಪ್ರಚಾರದಲ್ಲೂ ಇದೆ.

ವಾಸ್ತವ ಸಂಗತಿ ಬೇರೆಯೇ ಇದೆ. ಏನದು, ತಿಳಿದುಕೊಳ್ಳೋಣ.

*

ಸ್ವೀಡನ್‌ನ ಒಬ್ಬ ಪ್ರಖ್ಯಾತ ರಸಾಯನಶಾಸ್ತ್ರಜ್ಞ, ಸಂಶೋಧಕ ಮತ್ತು ಕೈಗಾರಿಕಾತಜ್ಞನಾಗಿದ್ದ ಅಲ್ಫ್ರೆಡ್‌ ನೊಬೆಲ್‌ ಕ್ರಿ.ಶ 1895ರಲ್ಲಿ ತನ್ನ ಉಯಿಲಿನಲ್ಲಿ, ತನ್ನ ಆಸ್ತಿಯ ಬಹ್ವಂಶವನ್ನು ವಾರ್ಷಿಕ ಪ್ರಶಸ್ತಿಯಾಂದರ ನಿಧಿಗಾಗಿ ನಿಗದಿಪಡಿಸಿದ್ದ. ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ, ಸಾಹಿತ್ಯ ಮತ್ತು ಶಾಂತಿ - ಈ ಐದು ಕ್ಷೇತ್ರಗಳಲ್ಲಿ ಪ್ರತಿವರ್ಷವೂ those who, during the preceding year, shall have conferred the greatest benefit on mankind ಆಗಿರುವ ಸಾಧಕರಿಗೆ, ಸಂಶೋಧಕರಿಗೆ ಪ್ರಶಸ್ತಿ ಪುರಸ್ಕಾರ ಸಿಗಬೇಕು, ತನ್ಮೂಲಕ ಆ ಕ್ಷೇತ್ರಗಳಲ್ಲಿ ಮನುಕುಲದ ಅಭಿವೃದ್ಧಿಗಾಗಿ ನಡೆಯುತ್ತಿರುವ ಕೆಲಸಗಳನ್ನು ಗುರ್ತಿಸುವಂತಾಗಬೇಕು ಎಂಬುದು ನೊಬೆಲ್‌ನ ಇಚ್ಛೆಯಾಗಿತ್ತು.

10 ಡಿಸೆಂಬರ್‌ 1901ರಂದು, ಅಲ್ಫ್ರೆಡ್‌ ನೊಬೆಲ್‌ನ ಐದನೆ ಪುಣ್ಯತಿಥಿಯಂದು ಮೊಟ್ಟಮೊದಲ ನೊಬೆಲ್‌ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು. ಆಗೆಲ್ಲ ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ, ಸಾಹಿತ್ಯ ಮತ್ತು ಶಾಂತಿ - ಈ ಐದೇ ಪ್ರಶಸ್ತಿಗಳಿದ್ದುವು. 1960ರಿಂದೀಚೆಗಷ್ಟೆ ಸ್ವೀಡನ್‌ ಬ್ಯಾಂಕ್‌ ಆರನೆಯ ಕ್ಷೇತ್ರದಲ್ಲಿ - ಅರ್ಥಶಾಸ್ತ್ರದಲ್ಲಿ - ಸಹ ವಾರ್ಷಿಕ ನೊಬೆಲ್‌ ಪ್ರಶಸ್ತಿಯನ್ನು ಸೇರಿಸಿತು.ನೊಬೆಲ್‌ ಪ್ರಶಸ್ತಿಗಳ ಅಸ್ತಿತ್ವದ ಈ ನೂರಕ್ಕೂ ಹೆಚ್ಚು ವರ್ಷಗಳಲ್ಲಿ, ಗಣಿತಶಾಸ್ತ್ರಕ್ಕೆ ನೊಬೆಲ್‌ ಯಾಕಿಲ್ಲ ಎಂಬ ಬಗ್ಗೆ ಸಾಕಷ್ಟು ತರ್ಕಗಳು, ಊಹೆಗಳು ಚರ್ಚಿತವಾಗಿವೆ. ಸ್ವತಃ ಒಬ್ಬ ವಿಜ್ಞಾನಿಯಾಗಿದ್ದ ಅಲ್ಫ್ರೆಡ್‌ ನೊಬೆಲ್‌ ಗಣಿತವನ್ನು ಅಷ್ಟು ಸುಲಭವಾಗಿ ಮರೆತು ಬಿಟ್ಟಿರಲಾರ ಅಥವಾ ಕಡೆಗಣಿಸಿರಲಾರ. ಅವನ ನಿರ್ಧಾರಕ್ಕೆ ಅದೇನೊ ಪ್ರಮುಖ ಕಾರಣವಿರಬೇಕು. ಆಲ್ಫ್ರೆಡ್‌ ನೊಬೆಲ್‌ ಅಂತಹ ಕಾರಣವನ್ನೇನೂ ಸ್ಪಷ್ಟಪಡಿಸದಿದ್ದುದರಿಂದ ಜನರೇ ವಿಧವಿಧವಾದ ಊಹಾಪೋಹಗಳ ಉಪ್ಕರಿ ಮಾಡತೊಡಗಿದರು. ಕೇಳುವವರೂ ಕಣ್ಣರಳಿಸಿ ಕಿವಿನಿಮಿರಿಸಿ ಕೇಳುವಂತಾಗಲಿ ಎಂದು ಅದಕ್ಕೆ ವಿವಾಹೇತರ ಸಂಬಂಧಗಳ ಬಣ್ಣಗಳನ್ನೂ ಬಳಿದರು.

ಅಷ್ಟಕ್ಕೂ ಅಲ್ಫ್ರೆಡ್‌ ನೊಬೆಲ್‌ ಸಾಯುವವರೆಗೂ ಅವಿವಾಹಿತನಾಗಿಯೇ ಇದ್ದನಂತೆ! ಹೆಂಡತಿಯೇ ಇರಲಿಲ್ಲವೆಂದ ಮೇಲೆ ಆಕೆಯ ಅಫೇರ್‌ ಪ್ರಶ್ನೆ ಎಲ್ಲಿಂದ ಬರುತ್ತದೆ! ಆದರೆ ಅಲ್ಲಿಗೇ ಮುಗಿಯುವುದಿಲ್ಲ ವದಂತಿಗಳು. ಅಲ್ಫ್ರೆಡ್‌ ನೊಬೆಲ್‌ಗೆ ಒಬ್ಬಳು ಪ್ರಿಯತಮೆ ಅಥವಾ ಮಿಸ್ಟ್ರೆಸ್‌ ಇದ್ದಳು, ಅವಳಿಗೆ ಸ್ವೀಡನ್‌ನ ಗಣಿತಜ್ಞ ಗೊಸ್ಟಾ ಮಿಟ್ಟಗ್‌ ಲೆಫರ್‌ನೊಂದಿಗೆ ಸಂಬಂಧವಿತ್ತು ... ಇತ್ಯಾದಿ ಅಂತೆ ಕಂತೆಗಳು. ಆಲ್ಫ್ರೆಡ್‌ಗೊಬ್ಬಳು ಮಿಸ್ಟ್ರೆಸ್‌ ಇದ್ದದ್ದು ಹೌದೆನ್ನುತ್ತದೆ ಇತಿಹಾಸ. ಆದರೆ ಆಕೆಗೂ ಗೊಸ್ಟಾ ಲೆಫರ್‌ಗೂ ನಡುವೆ ಪ್ರಣಯಗೋಷ್ಠಿಗಳೇನೂ ಇದ್ದ ಬಗ್ಗೆ ಕುರುಹಿಲ್ಲ.

ಬೇರಾವುದಾದರೂ ಕಾರಣಕ್ಕಾಗಿ ಆಲ್ಫ್ರೆಡ್‌ ನೊಬೆಲ್‌ಗೆ ಗಣಿತದ ಮೇಲೆ, ಗಣಿತಜ್ಞರ ಮೇಲೆ ವೈಮನಸ್ಸಿದ್ದಿರಬಹುದೇ? ನೊಬೆಲ್‌ 1865ರಲ್ಲಿ ಸ್ವೀಡನ್‌ನಿಂದ ಫ್ರಾನ್ಸ್‌ಗೆ ವಲಸೆ ಬಂದನಂತೆ. ಹಾಗಿದ್ದರೂ ಸ್ವೀಡನ್‌ನ ಸ್ಟಾಕ್‌ಹೋಮ್‌ ವಿಶ್ವವಿದ್ಯಾಲಯಕ್ಕೆ ಒಂದಿಷ್ಟು ಧನಸಹಾಯ ಮಾಡುವುದನ್ನು ಆತ ಮುಂದುವರಿಸಿದ್ದ. ಆ ಸಂದರ್ಭದಲ್ಲಿ ಸ್ಟಾಕ್‌ಹೋಮ್‌ ವಿಶ್ವವಿದ್ಯಾಲಯದಲ್ಲಿ ಕೆಲವು ಆಂತರಿಕ ಭಿನ್ನಾಭಿಪ್ರಾಯಗಳಿದ್ದುವು, ಗಣಿತಜ್ಞ ಗೋಸ್ಟಾ ಲೆಫರ್‌ ಬಂಡುಕೋರರ ಬಣದಲ್ಲಿದ್ದ. ನೊಬೆಲ್‌ಗೆ ಈ ಒಳರಾಜಕೀಯಗಳು ಇಷ್ಟವಾಗಲಿಲ್ಲ ಅಂತಲೂ ತರ್ಕ ಮಾಡುವವರಿದ್ದಾರೆ. ಏನೇ ಹೇಳಿ, ಮನುಕುಲದ ಔನ್ನತ್ಯದ ಸಾಧನೆಗಳನ್ನು ಪುರಸ್ಕರಿಸುವ ಅಂತಾರಾಷ್ಟ್ರೀಯ ಪಾರಿತೋಷಕವನ್ನು ಸ್ಥಾಪಿಸಿದ ಮಹಾತ್ಮ ನೊಬೆಲ್‌ ಅಂಥ ಕ್ಷುಲ್ಲಕ ವಿಚಾರಗಳಿಗೆ ಸೊಪ್ಪು ಹಾಕಿರಬಹುದೇ? ಖಂಡಿತವಾಗಿಯೂ ಹಾಗಿರಲಿಕ್ಕಿಲ್ಲ.

ಆದರೂ ನೊಬೆಲ್‌ ಯಾಕೆ ಲೆಕ್ಕ ಶಾಸ್ತ್ರ ಲೆಕ್ಕಕ್ಕಿಲ್ಲ ಎಂದುಬಿಟ್ಟ? ಕೆಲವು ತರ್ಕಬದ್ಧ ಕಾರಣಗಳು ಹೀಗಿವೆ :

  • ಆಲ್ಫ್ರೆಡ್‌ ನೊಬೆಲ್‌ ತನಗೆ ಅತಿ ಪ್ರಿಯವಾದ ಕ್ಷೇತ್ರಗಳಲ್ಲಷ್ಟೆ ಪ್ರಶಸ್ತಿಪ್ರದಾನವಾಗಬೇಕೆಂದು ನಿರ್ಧರಿಸಿರಬೇಕು. ಭೌತಶಾಸ್ತ್ರ, ರಸಾಯನಶಾಸ್ತ್ರಗಳಲ್ಲಿ ಸ್ವತಃ ನೊಬೆಲ್‌ ಕೆಲವು ಪ್ರಮುಖ ಸಂಶೋಧನೆಗಳನ್ನು ಮಾಡಿದ್ದ, ಸಿದ್ಧಾಂತಗಳನ್ನು ಮಂಡಿಸಿದ್ದ. ಗಣಿತ ಪ್ರಾಯಶಃ ನೊಬೆಲ್‌ಗೂ ಕಬ್ಬಿಣದ ಕಡಲೆಯೇ ಆಗಿದ್ದಿರಬಹುದು. ಸಾಹಿತ್ಯದ ಬಗ್ಗೆಯೂ ನೊಬೆಲ್‌ಗೆ ಗಾಢವಾದ ಪ್ರೀತಿ-ಗೌರವಗಳಿದ್ದುವು. ಜತೆಯಲ್ಲೇ ಆತ ಉದಾತ್ತ ಧ್ಯೇಯಗಳ, ಸಹಬಾಳ್ವೆಯ ಜೀವನಪ್ರೀತಿಯ, ಸಹಿಷ್ಣುತೆಯ ಆದರ್ಶವಾದಿಯಾಗಿದ್ದ. ಪ್ರಸಸ್ತಿ ಪ್ರದಾನಕ್ಕೆ ಅವನು ಮೊದಲಿಗೆ ಆಯ್ದುಕೊಂಡ ಕ್ಷೇತ್ರಗಳು - ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ, ಸಾಹಿತ್ಯ ಮತ್ತು ಶಾಂತಿ - ಸರಿಯಾಗಿಯೇ ಅವನ ವ್ಯಕ್ತಿತ್ವವನ್ನು, ಧೋರಣೆಗಳನ್ನು ಪ್ರತಿಫಲಿಸಿವೆ, ಪ್ರತಿನಿಧಿಸಿವೆ.
  • ಸ್ವೀಡನ್‌ನ ಚಕ್ರವರ್ತಿ ಎರಡನೆ ಆಸ್ಕರ್‌ ಅದಾಗಲೇ ಗೊಸ್ಟಾ ಲೆಫರ್‌ನ ಸಲಹೆಯಂತೆ ಗಣಿತಶಾಸ್ತ್ರದಲ್ಲಿನ ಪರಮೋಚ್ಚ ಸಾಧನೆಗಾಗಿ ಪ್ರಶಸ್ತಿಯಾಂದನ್ನು ಘೋಷಿಸಿದ್ದ. ನೊಬೆಲ್‌ ಬಗ್ಗೆ ಯಾವೊಂದು ಭಿನ್ನಾಭಿಪ್ರಾಯವಿಲ್ಲದ ಗೊಸ್ಟಾ ಲೆಫರ್‌, ತನ್ನ ಮೆಚ್ಚಿನ ಗಣಿತ ಕ್ಷೇತ್ರದಲ್ಲಿ ತುಂಬ ಕೆಲಸ ಮಾಡಿದ್ದ, ಈಗಲೂ ವನ್‌ ಅಫ್‌ ದಿ ಬೆಸ್ಟ್‌ ಎನಿಸಿಕೊಂಡಿರುವ Acta Mathematica ಎಂಬ ಜರ್ನಲ್‌ಅನ್ನು ಆರಂಭಿಸಿದ್ದೂ ಅವನೇ. ಹೀಗಿರಲು ಪ್ರಶಸ್ತಿ ಸ್ಥಾಪನೆಯಲ್ಲೇ ವೃಥಾ ಸ್ಪರ್ಧೆ ಬೇಡ ಎಂದು ನೊಬೆಲ್‌ ಗಣಿತಶಾಸ್ತ್ರವನ್ನು ಕೈಬಿಟ್ಟಿರಬಹುದು.
  • ನೊಬೆಲ್‌ನ ಅಂತರಂಗದ ಆಕಾಂಕ್ಷೆಯಿದ್ದುದು ಯಾವೊಂದು ಕ್ಷೇತ್ರದಲ್ಲೇ ಆಗಲಿ ಅಭಿವೃದ್ಧಿ, ಸಂಶೋಧನೆ, ಹೊಸ ಹೊಸ ಆವಿಷ್ಕಾರಗಳಿಗೆ ಮತ್ತು ಅವುಗಳಿಂದ ಮಾನವಕುಲದ ಅಭಿವೃದ್ಧಿಗೆ ಅನುಕೂಲವಾಗಬೇಕು, ಉತ್ತೇಜನ ಸಿಗಬೇಕು ಎಂಬುದು. ಬಹುಷಃ ನೊಬೆಲ್‌ನ ಅಭಿಪ್ರಾಯದಲ್ಲಿ ಗಣಿತಶಾಸ್ತ್ರವು ಪ್ರತ್ಯಕ್ಷವಾಗಿ ಅಂಥ ಪರಿಣಾಮಗಳನ್ನು, ಪ್ರಯೋಜನಗಳನ್ನು ನೀಡುವಂಥದಲ್ಲ; ಅದೇನಿದ್ದರೂ ಇತರ ಶಾಸ್ತ್ರಗಳಲ್ಲಿ ವಿಶ್ಲೇಷಣೆಗೆ, ವಿಂಗಡಣೆಗೆ ಉಪಯೋಗವಾಗುವ ಒಂದು ಸಾಧನ ಅಷ್ಟೆ ಎಂದಿದ್ದಿರಬಹುದು.
ಅಂತೂ ಇಂತೂ ಲೆಕ್ಕವೇ ಲೆಕ್ಕಕ್ಕಿಲ್ಲ ಅಂತಾಯ್ತು!

*

ಯಾರಿಗೆ ಗೊತ್ತು, ಗಣಿತಶಾಸ್ತ್ರದಲ್ಲೂ ನೊಬೆಲ್‌ ಪ್ರಶಸ್ತಿ ಇರುತ್ತಿದ್ದರೆ, ಜಗತ್ತಿಗೆ ‘ಸೊನ್ನೆ’ ಯನ್ನು ಕೊಟ್ಟ ಭಾರತ, ದಶಮಾಂಶ ಪದ್ಧತಿಯನ್ನು ಕಲಿಸಿಕೊಟ್ಟ ಭಾರತ, ಆರ್ಯಭಟ-ಭಾಸ್ಕರರಂಥ ಅಥವಾ ಇತ್ತೀಚಿನ ಶ್ರೀನಿವಾಸ ರಾಮಾನುಜನ್‌ರಂಥ ಗಣಿತಜ್ಞರ ತಾಯ್ನಾಡಾದ ಭಾರತ ಗಣಿತಶಾಸ್ತ್ರದ ಒಂದಿಷ್ಟು ನೊಬೆಲ್‌ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿತ್ತೊ ಏನೊ. ಇರಲಿಬಿಡಿ, ರೆ... ಪ್ರಪಂಚಕ್ಕೆ ಇತಿಮಿತಿಗಳಿಲ್ಲ.

- [email protected].

ನೊಬೆಲ್‌ ಫೌಂಡೇಶನ್‌ನ ಅಧಿಕೃತ ವೆಬ್‌ಸೈಟ್‌ : http://nobelprize.org/


ಮುಖಪುಟ

ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X