• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರಿಬೇವಿನ ಹಣ್ಣೆಲೆ ಚಿಗುರಿದಾಗ...

By Staff
|
Srivathsa Joshi *ಶ್ರೀವತ್ಸ ಜೋಶಿ

ವಿಚಿತ್ರಾನ್ನ ಅಡುಗೆಮನೆಯಲ್ಲಿ ಒಗ್ಗರಣೆ ಸಾಮಗ್ರಿಯ ದಾಸ್ತಾನಿಗೆ ಹೊಸದಾಗಿ ಕರಿಬೇವಿನ ಎಲೆಗಳು ಬಂದಿವೆ. ಚಿಗುರಿದ ಎಲೆಗಳು ಏನು ನಳನಳಿಸುತ್ತಿವೆ ಅಂತೀರಾ! ವಸಂತಮಾಸದಲ್ಲಿ ಗಿಡಮರ ಹೂಬಳ್ಳಿವನವೆಲ್ಲ ಚಿಗುರಿದ ಸಂದರ್ಭದಲ್ಲಿ ಕರಿಬೇವಿನ ಚಿಗುರಿನ, ಕಹಿಬೇವಿನ ಒಗರಿನ ರೀತಿಯಾಂದು ಇಲ್ಲಿ ಪ್ರಸ್ತುತವಾಗುತ್ತಿದೆ. ಇದನ್ನು ಕ‘ವನ’ ಚಿಗುರು ಎಂದರೂ ಸರಿ, ಕೋಗಿಲೆಯಂತೆ ಹಾಡುವ ಕಾಗೆಯ ಪ್ರಯತ್ನ ಎಂದರೂ ಸರಿ. ಯಾಕಂದ್ರೆ ವಸಂತಕಾಲದಲ್ಲೇ ತಾನೆ ಕಾಕಃ ಕಾಕಃ ಪಿಕಃ ಪಿಕಃ ಎಂಬುದು ನಿರ್ಧಾರವಾಗುವುದು? (ಕಾಗೆಯೂ ಕಪ್ಪು, ಕೋಗಿಲೆಯೂ ಕಪ್ಪು, ಎರಡರಲ್ಲೂ ವ್ಯತ್ಯಾಸವಿಲ್ಲ. ವಸಂತಋತು ಬಂದಾಗಷ್ಟೆ ಬಣ್ಣಬಯಲಾಗಿ ಕಾಗೆ ಕಾಗೆಯೇ ಕೋಗಿಲೆ ಕೋಗಿಲೆಯೇ... ಅನ್ನುವ ಅರ್ಥದ ಸಂಸ್ಕೃತ ಸುಭಾಷಿತವೊಂದಿದೆ).

ವಿಷಯ ಏನಪ್ಪಾ ಅಂತಂದ್ರೆ ಈವಾರದ ವಿಚಿತ್ರಾನ್ನದಲ್ಲಿ, ಕವಿ-ಕಾವ್ಯಪ್ರಿಯರಿಗಾಗಿ, ವಸಂತಋತು ಸ್ಪೆಷಲ್ಲಾಗಿ ಕೆಲವು ಕವನ ಸಾಲುಗಳು! ಆದರೆ, ಮಧುರವಾದ (ನಮಗಲ್ಲ, ಕೋಗಿಲೆಗಳಿಗೆ) ಮಾವಿನ ಎಲೆಗಳ ತೋರಣದಂಥ ಕವನಗಳು ಅಂತೇನೂ ನಿರೀಕ್ಷೆಯಿಟ್ಟುಕೊಳ್ಳಬೇಡಿ, ಇಲ್ಲಿಯವು ಏನಿದ್ದರೂ ಕರಿಬೇವಿನ ಸೊಪ್ಪಿನ ಕಹಿ ಕಹಿ ಕವನಗಳು! ಓದುವವರಿಗೆ ಇಡೀ ಕವನ ಬಿಡಿ, ಅದರ ತಲೆಬುಡ ಸಹ ಅರ್ಥವಾಗದೇ ಇರುವ ಅಪಾಯವೂ ಇದೆ! ಅದನ್ನು ತಪ್ಪಿಸುವುದಕ್ಕಾಗಿ ಪ್ರತಿಯಾಂದು ಕವನದ ಮೊದಲು ಸ್ವಲ್ಪ ಕಾಮೆಂಟರಿ ಇದೆ, ಅದನ್ನು ಓದಿಕೊಳ್ಳುವುದು ಆರೋಗ್ಯದೃಷ್ಟಿಯಿಂದ ಒಳ್ಳೆಯದು)

‘ಕರಿಬೇವಿನ ಕವನಮಾಲೆ’ ಕಾರ್ಯಕ್ರಮ, ಇನ್ನು ಕೆಲವೇ ಮೈಕ್ರೊಸೆಕೆಂಡ್‌ಗಳಲ್ಲಿ, ನಿಮಗಾಗಿ...

*

ಯುನೈಟೆಡ್‌ ಏರ್‌ಲೈನ್ಸ್‌ ಅಮೆರಿಕದಲ್ಲಿ ನಂ.2 ನೇ ಸ್ಥಾನದಲ್ಲಿರುವ ಖಾಸಗಿ ವಿಮಾನಸೇವೆ (ನಂ.1 ಯಾವುದು ಎಂಬ ಕುತೂಹಲಿಗಳಿಗೆ -ಅಮೆರಿಕನ್‌ ಏರ್‌ಲೈನ್ಸ್‌). ನಮ್ಮ ಭಾರತದಲ್ಲೂ ಇತ್ತೀಚೆಗೆ ಖಾಸಗಿ ವಿಮಾನಯಾನ ಸಂಸ್ಥೆಗಳು ಹೊಸದಾಗಿ ಆರಂಭವಾಗುತ್ತಿವೆ. ಇದುವರೆಗೂ ಯುನೈಟೆಡ್‌ ಬ್ರುವರಿಸ್‌ ‘ಮದಿರೆ’ ಉತ್ಪಾದನಾ ವಹಿವಾಟು ನಡೆಸುತ್ತಿದ್ದ ವಿಜಯ್‌ ಮಲ್ಯ ಇದೀಗ ಖಾಸಗಿ ವಿಮಾನಯಾನ ಸೇವೆಯನ್ನೂ ಆರಂಭಿಸಲಿದ್ದಾರಂತೆ. ಅದಕ್ಕವರು ಸಹಜವಾಗಿ ಕಿಂಗ್‌ಫಿಷರ್‌ ಅಂತಲೇ ನಾಮಕರಣ ಮಾಡುತ್ತಾರಾದರೂ ಸದ್ಯದ ಮಟ್ಟಿಗೆ ‘ಯುನೈಟೆಡ್‌ ಬೀರ್‌ಲೈನ್ಸ್‌’ (ಅಮೆರಿಕದಲ್ಲಿ ಯುನೈಟೆಡ್‌ ‘ಏ’ರ್‌ಲೈನ್ಸ್‌ ಇರುವಂತೆ ಭಾರತದಲ್ಲಿ ಯುನೈಟೆಡ್‌ ‘ಬೀ’ರ್‌ಲೈನ್ಸ್‌) ಎಂಬ ಹೆಸರಿಡುತ್ತಾರೆ ಎಂದಿಟ್ಟುಕೊಳ್ಳೋಣ:-)

ಇದೇ ಸುದ್ದಿಯ ಸಹಸುದ್ದಿಯಾಂದೇನೆಂದರೆ, ಮಲ್ಯರ ವಿಮಾನಗಳಲ್ಲಿ ಗಗನಸಖಿಗಳಾಗಿ ಪ್ರಖ್ಯಾತ ‘ಮಾಡೆಲ್‌’ (ರೂಪದರ್ಶಿ)ಗಳನ್ನೇ ನೇಮಿಸಲಿದ್ದಾರಂತೆ. ಮದಿರೆ ಮಾರುವ ಮಹಾಶಯನ ಮಹಾಯಾನದಲ್ಲಿ ಮನಸೆಳೆವ ಮಾನಿನಿಯರ ಮೈಮಾಟದ ಮಜಾ!

ಈ ಬ್ಯಾಕ್‌ಗ್ರೌಂಡ್‌ನಲ್ಲೊಂದು ಕಹಿಬೇವಿನ ಕವನ:

ಬೀರ್‌ಲೈನ್ಸ್‌ ವಿಮಾನದಲ್ಲೀಗ

ರೂಪದರ್ಶಿಯೇ ಗಗನಸಖಿ

ಸೌಂದರ್ಯರಾಶಿಯ ಸವಿಯುತ್ತ

ಪ್ರಯಾಣಿಕನಾದನು ಗಗನಸುಖಿ

ಗಂಡನಿಗೆ ಬಿಜಿನೆಸ್‌ಟೂರ್‌ ಬಂತಂದ್ರೆ

ಹೆಂಡತಿಯಾದಳು ಜ್ವಾಲಾಮುಖಿ!

ಮಲ್ಯರದು ಇದು ವ್ಯಾಪಾರತಂತ್ರ

ಅವರೋ ಸದಾ ಲಾಭಮುಖಿ

ಇದೆಲ್ಲ ಆರಂಭಶೂರತ್ವ ಕೊನೆಗೆ

ವಿಮಾನದಿ ಸೇವೆಗೆ ಮತ್ತೆ ಶೂರ್ಪನಖಿ

ಗಂಡ ಮರಳಿ ಇಂಡಿಯನ್‌ಏರ್‌ಲೈನ್ಸ್‌ಗೆ,

ಹೆಂಡತಿ ನಿಟ್ಟುಸಿರಿಟ್ಟ ಹಸನ್ಮುಖಿ!

*

ಟೈಮ್ಸ್‌ ಆಫ್‌ ಇಂಡಿಯಾ ಆಂಗ್ಲ ದೈನಿಕವು ಕ್ರಿ.ಶ 1838ರಲ್ಲಿ ಮುಂಬಯಿಯಲ್ಲಿ ಆರಂಭವಾಗಿ, ದೇಶದ ಇತರ ನಗರಗಳಿಗೂ ಹಬ್ಬಿ ದಾಂಧಲೆಯೆಬ್ಬಿಸಿದ (ಅಂದರೆ, ದೆಹಲಿಯಲ್ಲಿ ಹಿಂದುಸ್ಥಾನ್‌ ಟೈಮ್ಸ್‌ಅನ್ನು ನಂ.1 ಸ್ಥಾನದಿಂದ ಉರುಳಿಸಿದ, ಬೆಂಗಳೂರಿನಲ್ಲಿ ಡೆಕ್ಕನ್‌ಹೆರಾಲ್ಡ್‌ ನಂದಿಯನ್ನು ಕೆರಳಿಸಿದ) ನ್ಯೂಸ್‌ಪೇಪರ್‌. ಭಾರತದ ಪತ್ರಿಕಾರಂಗದಲ್ಲಿ ಟೈಮ್ಸ್‌ ಆಫ್‌ ಇಂಡಿಯಾಕ್ಕೆ ‘ಓಲ್ಡ್‌ ಲೇಡಿ ಆಫ್‌ ಬೋರಿಬಂದರ್‌’ ಎಂದೇ ನಿಕ್‌ನೇಮು. ಹೊಸಸಹಸ್ರಮಾನದ ಯಪ್ಪೀ ಕಲ್ಚರ್ಡ್‌ ಓದುಗರ ಆಶೋತ್ತರಗಳನ್ನು ಪೂರೈಸುವ... ಎಂಬ ಹೆಗ್ಗಳಿಕೆ(?)ಯ ಈ ಪತ್ರಿಕೆ ಅಪ್ಪಟ ಭಾರತೀಯ ಸಂಸ್ಕೃತಿಗೆ ಬೆಲೆಕೊಟ್ಟದ್ದು ಕಡಿಮೆಯೇ. ಬೆಲೆ ಕಡಿಮೆ ಕೊಟ್ಟಿದ್ದು ಮಾತ್ರವಾಗಿದ್ದರೆ ಆ ಮಾತುಬೇರೆ, ಕೆಲವೊಮ್ಮೆ ಆ ಪತ್ರಿಕೆ ಸ್ವಲ್ಪ ಸಂಸ್ಕೃತಿಘಾತಕವೇ ಆಗಿ ಕಂಡುಬಂದದ್ದಿದೆ. ಆರ್‌.ಕೆ.ಲಕ್ಷ್ಮಣ್‌ ಅವರ ಕಾರ್ಟೂನ್‌ ಬಿಟ್ಟರೆ ಅದರಲ್ಲಿ ಬೋಧಪ್ರದವಾದುದು ಏನೂ ಇಲ್ಲ ಎಂದು ವಾಕರಿಕೆ ಬರುವಷ್ಟು!

ಟೈಮ್ಸ್‌ನ ಬೆಂಗಳೂರು ಆವೃತ್ತಿಯೂ ಅಷ್ಟೇ. ಕರ್ನಾಟಕ-ಕನ್ನಡ-ಕನ್ನಡಿಗರಿಗೆ ಆಪ್ಯಾಯಮಾನವಾದ, ಆತ್ಮೀಯವಾದ ಸುದ್ದಿಸಮಾಚಾರಗಳನ್ನು ಅದು ಯಾವತ್ತೂ ವೈಭವಿಸಿದ್ದೇ ಇಲ್ಲ. ಇತ್ತೀಚಿನ ಉದಾಹರಣೆಯೆಂದರೆ ಸಿ.ಅಶ್ವಥ್‌ ಕಾರ್ಯಕ್ರಮ ‘ಕನ್ನಡವೇ ಸತ್ಯ’ಕ್ಕೆ ಅರಮನೆ ಮೈದಾನದಲ್ಲಿ ಲಕ್ಷ ಜನಸ್ತೋಮ ಸೇರಿದ ಸಡಗರ ಟೈಮ್ಸ್‌ ಕಣ್ಣಿಗೆ ಬೀಳಲಿಲ್ಲ. ಬದಲಿಗೆ ಶಾರುಖ್‌ಖಾನ್‌ನ ಶೋ ಸುದ್ದಿಗೆ ಆ ಪತ್ರಿಕೆ ಮುಖಪುಟದಲ್ಲಿ ಮನ್ನಣೆ ಕೊಟ್ಟಿತು.

ಕನ್ನಡಾಭಿಮಾನಿಗಳಿಗೆ ಇದು ಕಹಿಯೆನಿಸುವುದಿಲ್ಲವೇ? ಆ ಕಹಿಯನ್ನೊಂದಿಷ್ಟು ಕಹಿಬೇವಿನ ಕವನ ರೂಪದಲ್ಲಿ ಡೈರೆಕ್ಟಾಗಿ ಟೈಮ್ಸ್‌ ಆಫ್‌ ಇಂಡಿಯಾಕ್ಕೇ ಎಡ್ರೆಸಿಸಿದರೆ ಹೇಗೆ?

ಬೋರಿಬಂದರಿನ ‘ವರ್ಜಿನ್‌’ಅಲ್‌ ಚಿರಯೌವ್ವನಿಕೆ ನಾರಿ

ಬೆಂಗಳೂರಲ್ಲೂ ಇದ್ದಾಳವಳು ಭದ್ರವಾಗಿ ಬೇರೂರಿ

ಕೊಬ್ಬಿನ ಕೋಡು ಮೂಡಿವೆ ನಂ.1ನೇ ಸ್ಥಾನಕ್ಕೆ ಏರಿ

ಹಿಪ್ಪು-ಹೈಪೆಂದು ಹೂಪ್ಲಾಯಿಸಿ ಮಾಡ್ತಾಳೆ ಯುವಜನಾಂಗದ ಸವಾರಿ

ನಿಂತನೆಲದ ಭಾಷೆಸಂಸ್ಕೃತಿಯನ್ನೇ ಕಡೆಗಣಿಸುವ ಹೆಮ್ಮಾರಿ

ಈಕೆಯ ಅತಿರೇಕ ನಿಲ್ಲದಿದ್ರೆ ಕನ್ನಡಿಗರು ತೋರಿಸಲಿದ್ದಾರೆ ದಾರಿ!

*

ಕೈಗೊಂಡ ಒಂದೂ ಕೆಲಸವನ್ನು ಸರಿಯಾಗಿ ಮಾಡದೆ ಇದ್ದದ್ರಲ್ಲೆಲ್ಲ ಕೈಹಾಕೋ, ಕೈಹಾಕಿ ಕೆಡಿಸೋ ಚಟ ಹಲವರಿಗೆ (ಉದಾಹರಣೆಗೆ, ಇವತ್ತು ಈ ಕವನ ಗೀಚುವ ಹುಚ್ಚುಸಾಹಸಕ್ಕೆ ಕೈಹಾಕಿರುವ ವಿಚಿತ್ರಾನ್ನ ಕುಕ್‌). ಇನ್ನು ಕೆಲವರಿರುತ್ತಾರೆ ‘ಆಡು ಮುಟ್ಟದ ಸೊಪ್ಪಿಲ್ಲ...’ ಎಂದು ಶಿವರಾಮಕಾರಂತರಂಥ ಶ್ರೇಷ್ಠತೆಯನ್ನು ಪಡೆಯುತ್ತೇನೆ ಎಂದು ಹಪಹಪಿಸುವವರು. ಅದಕ್ಕಿಂತ, ಮಾಡುವ ಒಂದೇ ಕೆಲಸವಿರಲಿ ಅದನ್ನು ಅಚ್ಚುಕಟ್ಟಾಗಿ, ಮುತುವರ್ಜಿಯಿಂದ, ನೂರುಪ್ರತಿಶತ ‘ತೊಡಗಿಸಿಕೊಂಡು’ ಮಾಡಿ ಮುಗಿಸಿದರೆ ಅದಕ್ಕೊಂದು ಸಾರ್ಥಕತೆ ಇರುತ್ತದೆ. ‘ನನಗೆ ಒಂದು ಮರವನ್ನು ಕಡಿಯುವ ಕೆಲಸಕ್ಕೆ ಎಂಟು ಗಂಟೆಯ ಅವಧಿ ಕೊಟ್ಟರೆ, ಮೊದಲ ಆರು ಗಂಟೆಗಳನ್ನು ನಾನು ಕೊಡಲಿಯನ್ನು ಹರಿತಗೊಳಿಸಲು ಉಪಯೋಗಿಸುತ್ತೇನೆ. ಹಾಗೆ ಮಾಡಿದರೆ ಉಳಿದ ಎರಡೇ ಗಂಟೆಗಳಲ್ಲಿ ಸುಲಭದಲ್ಲಿ ಆ ಮರವನ್ನು ಕಡಿ ಕಡಿದು ಹಾಕುವುದು ನನಗೆ ಸಾಧ್ಯವಾಗುತ್ತದೆ...’ - ಇದೊಂದು ಸೂಕ್ತಿ.

ಇದೇ ಭಾವಾರ್ಥ ಬರುವ ಕಹಿಬೇವಿನ ಕವನ, ಇವತ್ತಿನ ಕೊನೆಯ ಪ್ರಸ್ತುತಿ.

ಕೊರೆವುದಕೆ ಭೈರಿಗೆ ಕಡಿಯೋಕೆ ಚೂರಿಚಾಕು

ಹರಿತವಿಲ್ಲದಿದ್ದರೆ ಸಾಣೆಕಲ್ಲಿಗೆ ಉಜ್ಜಬೇಕು

ನೂರೆಂಟು ಬಗೆಗಳಲಿ ಕೈಯಾಡಿಸಿದ್ದು ಸಾಕು

ಸರಿಯಾದ ಗುರಿಯಿರುವ ಬದುಕೊಂದು ಬೇಕು

ಅನಿಸಿಕೊಳ್ಳೋದಕ್ಕಿಂತ ಎಲ್ಲಾ tradesಅಲ್ಲೂ jackಉ

ಒಂದ್ರಲ್ಲಾದ್ರೂ master ಆಗೋ ಆಲೋಚನೆ ಬೇಕು!

*

ಇಲ್ಲಿಗೆ ನಮ್ಮ ಕಾವ್ಯ(ಕಹಿ)ರಸಾಯನದ ಪ್ರಯೋಗ ಮುಗಿಯಿತು. ನಿಮ್ಮ ಪ್ರತಿಕ್ರಿಯೆಗಳನ್ನು (ಕಹಿ ಅಥವಾ ಸಿಹಿ) ಕವನರೂಪದಲ್ಲಿಯಾಗಲೀ, ಕಥನರೂಪದಲ್ಲಾಗಲೀ ಕಳಿಸಿದರೆ ಬಹಳ ಸಂತೋಷದಿಂದ ಅವನ್ನು ಬರಮಾಡಿಕೊಳ್ಳಲಾಗುವುದು. ಪತ್ರಿಸಲು ವಿಳಾಸ - srivathsajoshi@yahoo.com

‘ಕಾವ್ಯ ಮಯ’ವಾಗಿದ್ದ ಈ ಹಿಂದಿನ ವಿಚಿತ್ರಾನ್ನ ಸಂಚಿಕೆಗಳು :

ಪ್ರೈಮ್‌ ಮಿನಿಸ್ಟರ್ಸ್‌ಗೆ ಪ್ರೈಮ್‌ ಟೈಮ್‌...

ಚಂದಕಿಂತ ಚಂದ ಛಂದಸ್ಸಿನ ಚಂದ...

ಬರೀ ಬರೀ... ಬರಿಯುತ್ತ ಬರಿ!

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more