ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೇಲಿಲಿಯಾನ ಟೆಲಿಸ್ಕೋಪಿಂದ... ಟೆಲಿಕಿಸ್‌ ಎಂಬ ಗೇಲಿಯವರೆಗೆ

By ಶ್ರೀವತ್ಸ ಜೋಶಿ
|
Google Oneindia Kannada News

 This is Tele-story!
ಇಸವಿ ಕ್ರಿ.ಶ 1609. ಭೌತವಿಜ್ಞಾನಿ ಗೇಲಿಲಿಯಾ ತನ್ನ ಸತತಯತ್ನದ ಸಂಶೋಧನೆಗಳ ನಂತರ, ದೂರದಲ್ಲಿರುವ ವಸ್ತುಗಳನ್ನು ಹತ್ತಿರದಿಂದ ಕಾಣಲು ಅನುಕೂಲವಾಗುವ ಉಪಕರಣವೊಂದರ ರಚನೆಯಲ್ಲಿ ಯಶಸ್ವಿಯಾದ. ಎರಡು ವರ್ಷಗಳ ನಂತರ 1611ರಲ್ಲಿ ಇನ್ನೊಬ್ಬ ವಿಜ್ಞಾನಿ ಕೆಪ್ಲರ್‌ ಆ ಉಪಕರಣವನ್ನು ಸೌರವ್ಯೂಹದ ಇತರೇ ಗ್ರಹಗಳನ್ನು ಗುರುತಿಸಲು ಉಪಯೋಗಿಸಿದ. ಅವರಿಬ್ಬರೂ ಮೊದಮೊದಲು ಆ ಉಪಕರಣಕ್ಕೆ ಕಾನ್ಸ್ಪಿಸಿಲ್ಲಮ್‌, ಪರ್ಸ್ಪಿಸಿಲ್ಲಮ್‌, ಸ್ಪೆಸಿಲ್ಲಮ್‌, ಪೆನಿಸಿಲ್ಲಿಯಮ್‌... ಇತ್ಯಾದಿ ಬೇರೆಬೇರೆ ನಾಮಧೇಯಗಳನ್ನಿಟ್ಟಿದ್ದರು. ಅದ್ಯಾಕೊ ಗೇಲಿಲಿಯಾಗೆ ಇಟಾಲಿಯನ್‌ನ 'ಟೆಲಿಸ್ಕೊಪಿ' ಪದದಿಂದ, ಮತ್ತು ಹೆಚ್ಚುಕಡಿಮೆ ಅದೇವೇಳೆಗೆ ಕೆಪ್ಲರ್‌ಗೆ ಲ್ಯಾಟಿನ್‌ನ 'ಟೆಲಿಸ್ಕೊಪಿಯಂ' ಪದದಿಂದ, ತಮ್ಮ ಹೊಸ ಸಂಶೋಧನೆಗೆ 'ಟೆಲಿಸ್ಕೋಪ್‌' ಎಂಬ ಹೆಸರು ಸರಿಹೋದೀತೆಂದು ಅನಿಸಿತು; ತಥಾಸ್ತು ಎಂದುಕೊಂಡು ಅದನ್ನವರು ಟೆಲಿಸ್ಕೋಪ್‌ ಎಂದೇ ಗುರುತಿಸತೊಡಗಿದರು.

ಜಗತ್ತಿಗೆ ಟೆಲಿಸ್ಕೋಪ್‌ ಎಂಬ ಉಪಕರಣದ ಪರಿಚಯವಾಯಿತು. ಅಷ್ಟೇ ಆಗುತ್ತಿದ್ದರೆ ವಿಜ್ಞಾನ-ತಂತ್ರಜ್ಞಾನದ ಮಿಕ್ಕ ಅದ್ಭುತಸಂಶೋಧನೆಗಳಂತೆಯೇ ಇದೂ ಸಹ - ಎಂದುಮಾತ್ರ ಆಗುತ್ತಿತ್ತು. ಆದರೆ, ಆ 'ಟೆಲಿಸ್ಕೋಪ್‌' ಪದದಿಂದಲೇ ಇಂಗ್ಲಿಷ್‌ ಭಾಷೆಯಲ್ಲಿ 'ಟೆಲಿ' ಪ್ರಿಫಿಕ್ಸ್‌ನ ಹೊಸ ಯುಗವೊಂದು ಆರಂಭವಾಯಿತು! ಈ ನಾನೂರು ವರ್ಷಗಳಲ್ಲಿ ಮನುಷ್ಯನ ಜೀವನದಲ್ಲಿ 'ಟೆಲಿ' ಎಷ್ಟೊಂದು ವ್ಯಾಪಿಸಿದೆಯೆಂದು ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ!

ಟೆಲಿಸ್ಕೋಪ್‌ನ ನಂತರದ 'ಟೆಲಿ' ಆವಿಷ್ಕಾರವೆಂದರೆ ಟೆಲಿಗ್ರಾಫ್‌. ಗ್ರೀಕ್‌ ಪದಗಳೆರಡರ ಸಂಗಮದ ಅರ್ಥ 'ದೂರದಲ್ಲಿ ಬರವಣಿಗೆ'. ಆರಂಭದಲ್ಲಿ ಅದರ ಕಾರ್ಯವಿಧಾನ ಹೇಗಿತ್ತು ಗೊತ್ತೇ? ಒಂದಕ್ಕೊಂದು ಕಾಣುವಷ್ಟು ಅಂತರದಲ್ಲಿ ಸಾಲಾಗಿ ಕಂಬಗಳು, ತುದಿಯಲ್ಲಿ ಮುಚ್ಚಿ-ತೆರೆಯುವ ಫಲಕಗಳು. ಅವುಗಳ ಮುಚ್ಚುವಿಕೆ-ತೆರೆಯುವಿಕೆಯ ಸಂಕೇತಗಳಿಂದ ಸಂದೇಶದ ರವಾನೆ! 1794ರ ಹೊತ್ತಿಗೆ ಫ್ರಾನ್ಸ್‌ ಮತ್ತು ಇಂಗ್ಲೇಂಡ್‌ ದೇಶಗಳಲ್ಲಿ ಮುಖ್ಯವಾಗಿ ಮಿಲಿಟರಿವಲಯಗಳಲ್ಲಿ ಸಂಪರ್ಕಸಾಧನವಾಗಿ ಟೆಲಿಗ್ರಾಫ್‌ ಬಳಕೆಯಾಗುತ್ತಿತ್ತು. ನೆಪೊಲಿಯನ್‌ ತನ್ನ ತುಕಡಿಗಳ ಚಲನವಲನಕ್ಕೆ ಸಂಬಂಧಿಸಿದಂತೆ 'ದೂರದಿಂದ ಲಿಖಿತ' ಆದೇಶಗಳನ್ನು ನೀಡುತ್ತಿದ್ದುದು ಟೆಲಿಗ್ರಾಫ್‌ ಮೂಲಕ.

ಅದಾದ ಮೇಲೆ ಟ್ರಿಣ್‌... ಟ್ರಿಣ್‌... ಹಲೋ... ಹಲೋ... ಅನ್ನುತ್ತ 1873ರಲ್ಲಿ ಬಂದದ್ದು ಅಲೆಕ್ಸಾಂಡರ್‌ ಗ್ರಹಾಂಬೆಲ್‌ನ ಟೆಲಿಫೋನ್‌! ಶತಸಹಸ್ರ ಮೈಲುಗಳಷ್ಟು ದೂರದಲ್ಲಿರುವ ವ್ಯಕ್ತಿಗಳಿಬ್ಬರು ಸಹ ಎದುರುಬದುರಾಗಿ ಕುಳಿತು ಮಾತಾಡುತ್ತಿದ್ದಾರೊ ಎನಿಸುವಂತೆ ಧ್ವನಿಸಂಪರ್ಕದ ಅನುಕೂಲಮಾಡಿಕೊಟ್ಟ ಟೆಲಿಫೋನ್‌ ಪ್ರಾಯಶಃ ಸಂಪರ್ಕಸಾಧನಗಳಲ್ಲೇ ಅಗ್ರಮಾನ್ಯವಾದುದು. ಕ್ರಮೇಣ ಟೆಲಿಫೋನ್‌ ಮೂಲಕ ಟೆಲಿಗ್ರಾಫ್‌ ಸಂದೇಶ ಕಳಿಸುವ ರಿವಾಜೂ ಆರಂಭವಾಯಿತು ಮತ್ತು ಅದಕ್ಕೆ ಟೆಲಿಗ್ರಾಮ್‌ ಎಂಬ ಪದ ಬಂತು.

ಆಮೇಲಿನ ಐವತ್ತು ವರ್ಷಗಳಲ್ಲಿ ಟೆಲಿಮೆಟ್ರಿ(ದೂರದಲ್ಲಿದ್ದೇ ಅಳತೆ ಮಾಡುವ ವಿಧಾನ) ಆರಂಭವಾಯಿತು. ಜತೆಯಲ್ಲೇ ಸಾಲುಸಾಲಾಗಿ ಬಂದವು ಟೆಲಿಟೈಪ್‌, ಟೆಲಿಟೈಪ್‌ರೈಟರ್‌, ಟೆಲೆಕ್ಸ್‌ ಇತ್ಯಾದಿ. ಇವೆಲ್ಲವೂ ಟೆಲಿಫೋನ್‌ ಲೈನ್‌ ಬಳಸಿ ಲಿಖಿತಸಂದೇಶ ರವಾನೆಯ ಉದ್ದೇಶವನ್ನಿಟ್ಟು ಶುರುವಾದವು - ಕೆಲವು ವಿದ್ಯುಚ್ಛಕ್ತಿಯಾಧಾರಿತವಾದರೆ ಇನ್ನು ಕೆಲವು ಮೆಕ್ಯಾನಿಕಲ್‌. ಈ ಎಲ್ಲದಕ್ಕೂ ಸೇರಿ 1932ರಲ್ಲಿ ಚಾಲ್ತಿಗೆ ಬಂದ ಪದವೆಂದರೆ ಟೆಲಿಕಮ್ಯುನಿಕೇಷನ್ಸ್‌.

'ಟೆಲಿ'ಯ ಇಷ್ಟೆಲ್ಲ ಅವತಾರಗಳಾದರೂ ಮೂರ್ಖರ ಪೆಟ್ಟಿಗೆ - ಅದೇ, ಟೆಲಿವಿಷನ್‌ ಇನ್ನೂ ಬಂದಿರಲಿಲ್ಲವೇ ಎಂಬ ನಿಮ್ಮ ಪ್ರಶ್ನೆಗೆ ಉತ್ತರ - ತಥಾಕಥಿತ ಟೆಲಿವಿಷನ್‌ ಸಂಶೋಧಕ ಜಾನ್‌ ಲೋಗಿ ಬಾಯರ್ಡ್‌ ಬರೀ ಟೆಲಿವಿಷನನ್ನು ನಿರ್ಮಿಸಿದ್ದೇ ಅಲ್ಲ, 1928ರಲ್ಲಿ 'ರಾಯಲ್‌ ಟೆಲಿವಿಷನ್‌ ಸೊಸೈಟಿ' ಎಂಬ ಸಂಸ್ಥೆಯನ್ನೂ ಸ್ಥಾಪಿಸಿದ್ದನಂತೆ. ಆದರೆ ಟೆಲಿವಿಷನ್‌ ಸಂಶೋಧನೆಯ ಪೂರ್ಣಖ್ಯಾತಿ ಬಾಯರ್ಡ್‌ ಒಬ್ಬನಿಗೇ ಸಲ್ಲುವುದಲ್ಲ, ಅಸಲಿಗೆ ಟೆಲಿವಿಷನ್‌ನ ಮೂಲಕಲ್ಪನೆ 1922ರಲ್ಲಿ 14ವರ್ಷದ ಫಿಲೊ ಫ್ರಾನ್ಸ್‌ವರ್ತ್‌ ಎಂಬ ಬಾಲಕನೊಬ್ಬ ತನ್ನ ಸೈನ್ಸ್‌ ಮೇಷ್ಟ್ರಿಗೆ ಸಲ್ಲಿಸಿದ್ದ ವಿವರಣೆಯಲ್ಲಿ ಬಂದದ್ದು! ಅದಾದ ಮೇಲೆ ಎಷ್ಟೊ ಮಂದಿ ತಂತಮ್ಮ ಕಲ್ಪನೆಯ ಟೆಲಿವಿಷನ್‌ ರಚಿಸಿದ್ದಾರೆ. ಸ್ವಾರಸ್ಯವೆಂದರೆ ಟೆಲಿವಿಷನ್‌ ಎಂಬ ಪದಪ್ರಯೋಗ ಸುಮಾರು 1908ರಲ್ಲೇ ಆರಂಭವಾಗಿತ್ತಂತೆ. ನಿಜವಾದ ಟೆಲಿವಿಷನ್‌ ಆವಿಷ್ಕಾರ ವಾದಾಗ ಕೆಲ ಬ್ರಿಟಿಷ್‌ ಪತ್ರಿಕೆಗಳು 'ಇದೊಂದು ಚಿಕ್ಕಾಸೂ ಪ್ರಯೋಜನಕ್ಕೆ ಬಾರದ ಸಾಧನ...' ಎಂದು ಮೂಗುಮುರಿದಿದ್ದವಂತೆ. ಅಂದಹಾಗೆ ಬಿಬಿಸಿಯಿಂದ ಪಬ್ಲಿಕ್‌ ಟೆಲಿವಿಷನ್‌ ಸರ್ವಿಸ್‌ ಶುರುವಾದದ್ದು 1936ರಲ್ಲಿ.

ಇವತ್ತು ಟೆಲಿವಿಷನ್‌ ನಮ್ಮ ದೈನಂದಿನ ಜೀವನಕ್ರಮವನ್ನು ಎಷ್ಟು ಆಕ್ರಮಿಸಿದೆ, ನಮ್ಮ ಟೈಂಟೇಬಲನ್ನು ಎಷ್ಟು ಕಬಳಿಸಿದೆ (ಟೆಲಿವಿಷನ್‌ನಿಂದ ಎಷ್ಟು ಒಳಿತಾಗಿದೆ, ಎಷ್ಟು ಕೆಡುಕಾಗಿದೆ ಅನ್ನುವ ಚರ್ಚೆ ಇಲ್ಲಿ ಅಪ್ರಸ್ತುತ) ಎಂದು ನಮಗೆಲ್ಲ ಗೊತ್ತೇ ಇದೆ. ಆದರೆ ಟೆಲಿವಿಷನ್‌ ಎಂಬ ಪದದಿಂದಾಗಿ ಇಂಗ್ಲಿಷ್‌ ಭಾಷೆಗೆ ದಕ್ಕಿದ ಲಾಭವೆಂದರೆ ಟೆಲಿಕಾಸ್ಟ್‌, ಟೆಲಿಮೂವಿ, ಟೆಲಿಪ್ರಾಂಪ್ಟರ್‌, ಟೆಲಿರೆಕಾರ್ಡಿಂಗ್‌, ಟೆಲಿಟೆಕ್ಸ್ಟ್‌, ಟೆಲಿವ್ಯೂವರ್‌... ಇತ್ಯಾದಿ ಇನ್ನಷ್ಟು ಟೆಲಿಗಳು. ಅಷ್ಟೇ ಏಕೆ, ಫೋಟೊಜಿನಿಕ್‌(ಭಾವಚಿತ್ರದಲ್ಲಿ ಅತಿಸುಂದರವಾಗಿ ಕಾಣುವ) ಎಂಬ ವಿಶೇಷಣವಿದ್ದಂತೆ ಟೆಲಿಜಿನಿಕ್‌ ಎಂಬುದೂ ಬಳಕೆಗೆ ಬಂತು.

1960ರ ಸುಮಾರಿಗೆ ಟೆಲಿಕಮ್ಯುನಿಕೇಶನ್‌ ಇನ್ನೂ ಹೆಚ್ಚುಹೆಚ್ಚು ಕ್ಷೇತ್ರಗಳಲ್ಲಿ ಉಪಯೋಗವಾಗತೊಡಗಿ ಟೆಲಿಮಾರ್ಕೆಟಿಂಗ್‌, ಟೆಲಿಸೇಲ್ಸ್‌, ಟೆಲಿಶಾಪಿಂಗ್‌, ಟೆಲಿಬ್ಯಾಂಕಿಂಗ್‌, ಟೆಲಿಬೆಟ್ಟಿಂಗ್‌... ಹೀಗೆ ಅನೇಕಾನೇಕ ಟೆಲಿಬಿಜಿನೆಸ್‌ಗಳು ಹುಟ್ಟಿಕೊಂಡವು. ಕಂಪ್ಯೂಟರ್‌ ಮತ್ತು ಫೋನ್‌ಅನ್ನು ಬಳಸಿ ಮನೆಯಿಂದಲೇ ಕೆಲಸ ಮಾಡುವ ಪದ್ಧತಿಯೂ ಆರಂಭವಾಯಿತು. ಟೆಲಿವರ್ಕರ್ಸ್‌ ಮತ್ತು ಟೆಲಿಕನ್ಸಲ್ಟೆಂಟ್ಸ್‌ ಟೆಲಿಕಮ್ಯೂಟ್‌ ಮಾಡಿ, ಆಫೀಸಿಗೆ ಹೋಗದೆ ಮನೆಯಿಂದಲೇ ಟೆಲಿಕಾನ್ಫರೆನ್ಸ್‌ಗಳಲ್ಲಿ ಟೆಲಿಪ್ರೆಸೆಂಟ್‌ ಆಗತೊಡಗಿದರು! ಟೆಲಿಇಂಟರ್‌ವ್ಯೂ ಅನ್ನೋದು ಸರ್ವೇಸಾಮಾನ್ಯ ಸಂಗತಿಯಾಯ್ತು. ಎಲ್ಲರ ಮನೆಗಳಲ್ಲಿ ಕಂಪ್ಯೂಟರ್‌ ಮತ್ತು ಡಿಎಸ್‌ಎಲ್‌ ಕನೆಕ್ಷನ್‌ ಇಲ್ಲದಿರುವೆಡೆ ಆ ಸೌಕರ್ಯವನ್ನು ಒಂದೆಡೆ ಕಲ್ಪಿಸಲು ಟೆಲಿಸೆಂಟರ್‌ಗಳು ಶುರುವಾದುವು, ಅವುಗಳ ಸಮೂಹದಿಂದ ಟೆಲಿವಿಲೇಜ್‌ ಉಂಟಾಯಿತು.

ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಟ್ಟ 'ಟೆಲಿ' ಅಲ್ಲೂ ಧಾಂದಲೆಯೆಬ್ಬಿಸಿ ಟೆಲಿಕನ್ಸಲ್ಟಿಂಗ್‌, ಟೆಲಿವಿಸಿಟ್ಸ್‌, ಟೆಲಿಮೆಡಿಸಿನ್‌, ಟೆಲಿಸೈಕಿಯಾಟ್ರಿ, ಟೆಲಿನರ್ಸಿಂಗ್‌ ಎಲ್ಲವೂ ಸಾಮಾನ್ಯಸಂಗತಿಗಳಾಗತೊಡಗಿದುವು (ಕಡೇಪಕ್ಷ ಮುಂದುವರೆದ ರಾಷ್ಟ್ರಗಳಲ್ಲಿ). ಪರಾಕಾಷ್ಠೆಯೆಂಬಂತೆ ಟೆಲಿಸರ್ಜರಿ ಸಹ ಅಲ್ಲೊಂದು ಇಲ್ಲೊಂದು ಆಯ್ದ ಕೇಸ್‌ಗಳಲ್ಲಿ ನಡೆಯಿತು! ಶಿಕ್ಷಣರಂಗದಲ್ಲಿ ಟೆಲಿಯುನಿವರ್ಸಿಟಿಗಳು ಟೆಲಿಕೋರ್ಸ್‌ಗಳನ್ನು ಟೆಲಿಟೀಚ್‌ ಮಾಡತೊಡಗಿದರೆ ಟೆಲಿಸ್ಟೂಡೆಂಟ್ಸ್‌ ಅವನ್ನು ಟೆಲಿಲರ್ನತೊಡಗಿದರು. ಸೆಮಿಸ್ಟರ್‌ ಕೊನೆಯಲ್ಲಿ ಟೆಲಿಸೆಮಿನಾರ್‌ ನಿರ್ವಹಿಸಿ ಟೆಲಿಡಿಗ್ರಿ ಪಡೆದು ತಮ್ಮ ಟೆಲಿಎಜುಕೇಶನ್‌ ಮುಗಿಸಿದರು!

ಟೆಲಿ ಟೆಲಿ ತಾಳೆನು ಈ ಟೆಲಿಯ....?

ಇಂಗ್ಲಿಷ್‌ ಭಾಷೆಯಲ್ಲಿ ಟೆಲಿ ಎಂಬ ಉಲಿ ಹೇಗೆ ಸರ್ವವ್ಯಾಪಿಯಾಯ್ತು ಅಂತ ಒಂದು ಸಿಂಹಾವಲೋಕನ ಮಾಡಿದೆವಲ್ಲ? ಈಗ ಕೆಲವು ಲಘು ಟೆಲಿಹರಟೆ.

ಕಳೆದ ವರ್ಷ ಇಲ್ಲಿ ಅಮೆರಿಕದಲ್ಲಿ ಕನ್ನಡಿಗರೊಬ್ಬರ ಮಗುವಿನ ನಾಮಕರಣ ಸಮಾರಂಭದಲ್ಲಿ 'ಹಿರಿಯರು ಮಗುವಿನ ಕಿವಿಯಲ್ಲಿ ಹೆಸರು ಹೇಳುವ ಕ್ರಮ' ದ ವೇಳೆ ಮಗುವಿನ ತಾತ-ಅಜ್ಜಿ ಮೈಸೂರಿಂದ ಟೆಲಿಫೋನ್‌ ಮಾಡಲಾಗಿ ಇಲ್ಲಿ ಮಗುವಿನ ಕಿವಿಗೆ ಫೋನ್‌ ಆನಿಸಿ ನಾಮಕರಣ ನಡೆದಿತ್ತು! ಮೈಸೂರಿಂದ ವಾಷಿಂಗ್ಟನ್‌ಗೆ ಐಎಸ್‌ಡಿ ಕಾಲ್‌ ಮೂಲಕ ಟೆಲಿಬ್ಲೆಸ್ಸಿಂಗ್ಸ್‌!!

ಇನ್ನೊಂದು, telepathy ಎನ್ನುವ ಪದವನ್ನು ಕೇಳಿರಬಹುದು ನೀವು. ಅರ್ಥ the direct perception of thoughts between minds ಅಥವಾ communication from one mind to another by extrasensory means. ಕ್ಲಾಸಿನ ಕೊನೆಯ ಬೆಂಚಲ್ಲಿ ಕುಳಿತ ಹುಡುಗರು ಒಂದೋ ನಿದ್ದೆ ಮಾಡುತ್ತಿದ್ದಾರೆ ಇಲ್ಲವೇ ಕೀಟಲೆ ಮಾಡುತ್ತಿದ್ದಾರೆ ಅನ್ನುವುದು ಪ್ರೊಫೆಸರರ ಟೆಲಿಪತಿ ಕೌಶಲದಿಂದ ಅವರಿಗೆ ಗೊತ್ತಾಗಿರುತ್ತದೆ.

ಆಫೀಸಿಂದ ತಡವಾಗಿ ಬಂದಿದ್ದಕ್ಕೆ ಹೊಸದೊಂದು ಸಬೂಬು ಹೇಳಲಿದ್ದಾನೆ ಎಂದು ಪತಿಯ ಬಗ್ಗೆ ಟೆಲಿಪತಿ ಎಲ್ಲ ಪತ್ನಿಯರಿಗಿರುತ್ತದೆ. (ಆ ಪತಿಯ ಎಲ್ಲ ಪತ್ನಿಯರೂ... ಅಂತ ಬೇಕಾದರೆ ಓದಿಕೊಳ್ಳುವುದು ಬಿಡುವುದು ನಿಮ್ಮಿಷ್ಟ). ಅಥವಾ, ತಾನು ಆಫೀಸಿಂದ ಬಂದಾಗಲೂ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸದೆ ಟೆಲಿಸೀರಿಯಲ್ಸ್‌ ವೀಕ್ಷಣೆಯಲ್ಲೇ ಮುಳುಗಿರುವ ಪತ್ನಿಯ ಯೋಚನಾಲಹರಿಗಳ ಬಗ್ಗೆ ಪತಿಗೂ ಟೆಲಿಪತಿ ಚೆನ್ನಾಗಿ ಇರುತ್ತದೆ!

ಟೆಲಿಪತಿ ಅನ್ನೋದಕ್ಕೆ ಈಗಿನ ಸಂದರ್ಭದಲ್ಲಿ ಇನ್ನೊಂದು ಶ್ಲೇಷೆ(ಪನ್‌) ಅರ್ಥ ಕೊಡಬಹುದು. ಅಮೆರಿಕದಲ್ಲಿ (ಈಗೀಗ ಭಾರತದಲ್ಲೂ) ಸೋಮವಾರದಿಂದ ಶುಕ್ರವಾರದವರೆಗೆ ಗಂಡ ಒಂದೂರಲ್ಲಿ ಹೆಂಡತಿ ಇನ್ನೊಂದೂರಲ್ಲಿ ವಾಸವಾಗಿದ್ದು ವಾರಾಂತ್ಯಕ್ಕಷ್ಟೆ ಅವರಿಬ್ಬರು ಜತೆಯಾಗಿ ಇರುವ ಸೌಭಾಗ್ಯ (ಕೆಲವು ಜೋಡಿಗಳು ನಾಲ್ಕೈದು ವಾರಗಳಿಗೊಮ್ಮೆಯೂ ಇರಬಹುದು) ಹೊಂದಿರುತ್ತಾರೆ. ಅಂದರೆ ವೀಕ್‌ಡೇಯಲ್ಲಿ ಆಕೆಗೆ ಆತ ಟೆಲಿಪತಿ! ಅಷ್ಟಾದರೂ ಸ್ಪ್ರಿಂಟ್‌, ವೆರೈಜೊನ್‌, ಸಿಂಗ್ಯುಲರ್‌ ಇತ್ಯಾದಿ ಎಲ್ಲ ಮೊಬೈಲ್‌ ಸರ್ವಿಸ್‌ ಕಂಪೆನಿಗಳೂ ಕೊಡುವ ಫ್ರೀ ಮಿನಿಟ್ಸ್‌ ಉಪಯೋಗಿಸಿ ಅವರು ವಾರದದಿನಗಳಲ್ಲೂ ಟೆಲಿಕಪಲ್‌ ಆಗಿರುತ್ತಾರೆ. ಟೆಲಿಫೋನ್‌ ಸಂಭಾಷಣೆ ಮೂಲಕವೇ ಆಕೆ ಟೆಲಿಕುಕ್‌ ಮಾಡಿದ್ದು ಆತನಿಗೆ ಟೆಲಿಸರ್ವ್‌ ಆಗುತ್ತದೆ. ಕೃತಜ್ಞತೆ-ಧನ್ಯವಾದಗಳು ಪ್ರೀತಿಯರೂಪದಲ್ಲಿ ಆತನಿಂದ ಟೆಲಿಕಿಸ್‌ ಆಗಿ ಆಕೆಗೆ ಸಿಗುತ್ತವೆ. ಕೊರೆವ ಚಳಿಯಲ್ಲಿ ಜತೆಗಾರ/ಗಾರ್ತಿಯ ಅಪ್ಪುಗೆಯ ಬಿಸಿಯಿಲ್ಲದೆ ಟೆಲಿ ಟೆಲಿ ತಾಳೆನು ಈ ಟೆಲಿಯ... ಎಂದು ಹಪಹಪಿಸುತ್ತಿರುತ್ತಾರೆ! ಒಂದೊಮ್ಮೆ ಅವರಲ್ಲಿ ಹುಸಿಮುನಿಸು ಕಾಣಿಸಿಕೊಂಡರೂ ಅದು 'ಟೆಲಿಹಸ್‌ಬೇಂಡ್‌-ಟೆಲಿವೈಫ್‌ರ ಟೆಲಿಕ್ವಾರೆಲ್‌, ಟೆಲಿಮೀಲಿಸಿ ಟೆಲಿಸ್ಲೀಪುವ ತನಕ...' ಎಂಬ ಗಾದೆಯಾಗುತ್ತದೆ!

(ಸದ್ಯಕ್ಕೆ ಟೆಲಿಕಪಲ್‌ ಆಗಿರುವ ಓದುಗರಿದ್ದರೆ ಅವರು ಇದನ್ನೋದಿ ಸಿಟ್ಟಾಗಿ ನನಗೆ ಟೆಲಿಕರ್ಸ್‌ ಮಾಡೊದಿಲ್ಲ ಎಂದು ಟೆಲಿಪ್ರಿಸ್ಯೂಮ್‌ ಮಾಡಿಕೊಂಡಿದ್ದೇನೆ).

ಅಷ್ಟಕ್ಕೂ, 17ನೇ ಶತಮಾನದಾರಂಭಕ್ಕೆ ಗೇಲಿಲಿಯಾ ಮತ್ತು ಕೆಪ್ಲರ್‌ ಆ ಹೊಸ ಉಪಕರಣಕ್ಕೆ ಟೆಲಿಸ್ಕೋಪ್‌ ಎಂದು ಹೆಸರಿಸದೇ ಇದ್ದಿದ್ದರೆ!!!!?

English summary
This is Tele-story! : A infotainment article on This is Telestory by Srivathsa Joshi, ThatsKannada Vichitranna Columnist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X