• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಗನಚುಕ್ಕಿ. ಭರಚುಕ್ಕಿ.

By Staff
|
Srivathsa Joshi *ಶ್ರೀವತ್ಸ ಜೋಶಿ

ಚಿತ್ರಾನ್ನದಲ್ಲಿ ಅನ್ನಕ್ಕಿಂತಲೂ ಕರಿಬೇವಿನಸೊಪ್ಪು ಕೊತ್ತುಂಬರಿ ಹಸಿಮೆಣಸು ಒಗ್ಗರಣೆ ಸಾಮಗ್ರಿಗಳೇ ಹೆಚ್ಚಾದರೆ ಚೆನ್ನಾಗಿರುವುದಿಲ್ಲ. ಹಾಗೆಯೇ ವಿಚಿತ್ರಾನ್ನ ಲೇಖನದಲ್ಲಿ ಅಕ್ಷರಗಳಿಗಿಂತ ಅಲ್ಪವಿರಾಮ ಉದ್ಧರಣ ಚಿಹ್ನೆ ಪ್ರಶ್ನಾರ್ಥಕ ಚಿಹ್ನೆಗಳದೇ ಅಬ್ಬರ ಹೆಚ್ಚಾದರೂ ಅದು ಒಳ್ಳೆಯದಲ್ಲ. ಇವತ್ತಿನ ಈ ಒಂದು ಪ್ರಯೋಗವನ್ನು ನೋಡಿ. ಇಲ್ಲಿ ಪೂರ್ಣವಿರಾಮದ ಹೊರತಾಗಿ ಬೇರಾವ ಚಿಹ್ನೆಗಳನ್ನೂ ಉಪಯೋಗಿಸದೆ ಒಂದು ಲೇಖನವನ್ನು ಬರೆಯುವ ಪ್ರಯತ್ನ ಮಾಡಲಾಗಿದೆ. ಡಾಟ್‌ ಕಾಮ್‌ ಪತ್ರಿಕೆಯ ಕಾಲಮ್ಮಿನಲ್ಲಿ ಡಾಟ್‌ ಮಾತ್ರ ಉಪಯೋಗಿಸಿದ ಆರ್ಟಿಕಲ್ಲು. ಚುಕ್ಕಿ ಮಾತ್ರ ಬಳಸಿದ ಈ ಚಿಕ್ಕ ಲೇಖನದ ವಿಷಯವೂ ಚುಕ್ಕಿಯೇ. ಗಗನಗಾಮಿ ಪತ್ರಿಕೆಯ ಅಂಕಣಕ್ಕೆ ಭರದಿಂದ ಬರೆದದ್ದಾದ್ದರಿಂದ ಆ ಶೀರ್ಷಿಕೆ. ಓದೆಬಲ್‌ ಆಗಿದೆಯೇ ಅಥವಾ ಪ್ರಯೋಗದ ಹೆಸರಲ್ಲಿ ತೀರಾ ಹದಗೆಟ್ಟಿದೆಯೇ ಎಂದು ನೀವೇ ಓದಿ ತಿಳಿಸಿ.

ಸಾಮಾನ್ಯವಾಗಿ ಬರವಣಿಗೆಯಲ್ಲಿ ಸ್ವಲ್ಪ ಜಾಸ್ತಿಯೇ ಎನ್ನುವಷ್ಟು ಚಿಹ್ನೆಗಳ ಬಳಕೆ ನನ್ನ ಅಭ್ಯಾಸ. ಈ ಅಂಕಣದಲ್ಲಿನ ಬರಹಗಳೂ ಇದಕ್ಕೆ ಹೊರತೇನಲ್ಲ. ಅದೂ ಅಲ್ಲದೆ ಉಲ್ಲೇಖಗಳನ್ನು ಎಲ್ಲೆಲ್ಲಿಂದಲೋ ಎತ್ತಿ ತಂದು ಪೋಣಿಸಿ ಪ್ರಸ್ತುತಪಡಿಸುವಾಗ ಸೂಕ್ತವಾದ ಚಿಹ್ನೆಗಳನ್ನು ಉಪಯೋಗಿಸದೆ ನಿರ್ವಾಹವಿಲ್ಲವಾಗುತ್ತದೆ. ಅಚ್ಚರಿಯ ಸಂಗತಿಗಳನ್ನು ಬರೆವಾಗಂತೂ ಅಲ್ಲಿ ಆಶ್ಚರ್ಯಚಿಹ್ನೆ ಬರಲೇಬೇಕು. ಬರೆಯುವ ವಿಷಯವು ಪ್ರಶ್ನಾತೀತವೇನೂ ಅಲ್ಲವಾದ್ದರಿಂದ ಪ್ರಶ್ನಾರ್ಥಕ ಚಿಹ್ನೆಯೂ ಇನೆವಿಟಬಲ್‌. ಅಲ್ಲೊಂದು ಇಲ್ಲೊಂದು ಕಂಸದೊಳಗೆ ಕಾಮೆಂಟ್‌ ಸಹ ಇರಬೇಕು. ಇನ್ನು ಅಲ್ಪವಿರಾಮ ಅಡ್ಡಗೆರೆ ಉದ್ಧರಣಚಿಹ್ನೆಗಳೂ ಬೇಕೇಬೇಕು. ಒಟ್ಟುಸೇರಿ ಎಲ್ಲ ಚಿಹ್ನೆಗಳದೇ ದರ್ಬಾರು ಆಗುವುದು ಹಾಗೆ.

ಅಂದಮಾತ್ರಕ್ಕೆ ತಾವಿಲ್ಲದಿದ್ದರೆ ಲೇಖನಕ್ಕೆ ಅಂದವೇ ಇಲ್ಲ ಎಂದು ಈ ಚಿಹ್ನೆಗಳೆಲ್ಲ ಜಂಭಪಡುತ್ತಿದ್ದದ್ದೇ ಆದರೆ ಇವತ್ತು ಅವಕ್ಕೆಲ್ಲ ತಕ್ಕ ಶಾಸ್ತಿ. ನೀನ್ಯಾಕೊ ನಿನ್ನ ಹಂಗ್ಯಾಕೊ ಎಂದು ಅವಕ್ಕೆಲ್ಲ ಒಂದುದಿನದ ವಿರಾಮ ಘೋಷಿಸಿ ಪೂರ್ಣವಿರಾಮವೊಂದಿದ್ದರೆ ಸಾಕೋ ಎಂದು ಪೂರ್ಣವಿರಾಮವನ್ನಷ್ಟೇ ಸಾಕಿಕೊಂಡು ಇವತ್ತಿನ ಲೇಖನ.

*

ಹಾಗೆ ನೋಡಿದರೆ ಬರವಣಿಗೆಯಲ್ಲಿ ವಿಧವಿಧವಾದ ಚಿಹ್ನೆಗಳ ಬಳಕೆ ಇತ್ತೀಚಿನ ಬೆಳವಣಿಗೆ. ಪ್ರಾಚೀನಕಾಲದ ಸಂಸ್ಕೃತ ಭಾಷೆಯನ್ನು ದೇವನಾಗರಿ ಲಿಪಿಯಲ್ಲಿ ಬರೆಯುವಾಗ ಉಪಯೋಗಿಸಲ್ಪಡುವ ಏಕೈಕ ಪಂಕ್ಚುವೇಶನ್‌ ಮಾರ್ಕ್‌ ಅಂದರೆ ಪೂರ್ಣವಿರಾಮ. ನಮಗೆಲ್ಲ ಗೊತ್ತೇ ಇರುವಂತೆ ದೇವನಾಗರಿಯಲ್ಲಿ ಚುಕ್ಕಿಯ ಬದಲಿಗೆ ಉದ್ದುದ್ದ ಒಂದು ಗೆರೆ ಇದ್ದರೆ ಅದು ವಾಕ್ಯದ ಪೂರ್ಣವಿರಾಮ ಚಿಹ್ನೆಯಾಗುತ್ತದೆ. ಶ್ಲೋಕದ ಕೊನೆಯ ಸಾಲನ್ನು ಮಾತ್ರ ಎರಡು ರೇಖೆಗಳಿಂದ ಕೊನೆಗೊಳಿಸುವ ರಿವಾಜು. ಉದ್ದುದ್ದದ ಆ ಗೆರೆಗಳನ್ನು ಬಿಟ್ಟರೆ ಸಂಸ್ಕೃತ ಕಾವ್ಯಗಳಲ್ಲಾಗಲೀ ಕಾದಂಬರಿ ನಾಟಕಗಳಲ್ಲಾಗಲೀ ಬೇರಾವ ಚಿಹ್ನೆಗಳ ಬಳಕೆಯೂ ಕಂಡುಬರುವುದಿಲ್ಲ. ಹಾಗಿದ್ದರೂ ಸಂಸ್ಕೃತ ಸಂಜಾತ ಇನ್ನಿತರ ಭಾರತೀಯ ಭಾಷೆಗಳ ಬರಹದಲ್ಲಿ ಚಿಹ್ನೆಗಳ ಬಳಕೆ ವಿಪುಲವಾಗಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ. ಪ್ರಾಯಶಃ ಈ ವಿಷಯದಲ್ಲಿ ಆಂಗ್ಲಭಾಷೆ ಮತ್ತದಕ್ಕೆ ಬಳಸುವ ರೋಮನ್‌ ಲಿಪಿ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಆ ಭಾಷೆಯಲ್ಲಿನ ಬರವಣಿಗೆಯ ಶಿಷ್ಟಾಚಾರಗಳು ಭಾರತೀಯ ಭಾಷೆಗಳ ಮೇಲೆ ಪ್ರಭಾವ ಬೀರಿವೆಯೆಂದು ತೋರುತ್ತದೆ.

ಅಷ್ಟಕ್ಕೂ ಬರವಣಿಗೆಯಲ್ಲಿ ಚಿಹ್ನೆಗಳ ಉಪಯುಕ್ತತೆ ಮತ್ತು ಮಹತ್ವ ನಮಗೆಲ್ಲ ಗೊತ್ತೇ ಇದೆ. ನ್ಯಾಯಾಧೀಶರು ಕೊಟ್ಟ ಮರಣದಂಡನೆಯ ತೀರ್ಪಿನ Hang him not leave him ಎಂಬ ವಾಕ್ಯದಲ್ಲಿ ಅಲ್ಪವಿರಾಮ ಚಿಹ್ನೆ ಸ್ಥಾನಪಲ್ಲಟವಾಗಿದ್ದರಿಂದ ಅಪರಾಧಿಗೆ ಜೀವದಾನ ಸಿಕ್ಕಿದ ಘಟನೆಯನ್ನು ಇಂಗ್ಲಿಷ್‌ ಗ್ರಾಮರ್‌ ಕ್ಲಾಸಲ್ಲಿ ಉದಾಹರಿಸುತ್ತಾರೆ. ಇನ್ನೊಂದು ಅಂಥದ್ದೇ ಉದಾಹರಣೆಯಿದೆ. ಪಾಂಡಾ ಪ್ರಾಣಿಯ ಬಗ್ಗೆ ಸಚಿತ್ರ ಶಬ್ದಕೋಶವೊಂದರಲ್ಲಿ Eats shoots and leaves ಎಂಬ ವ್ಯಾಖ್ಯೆಯಿತ್ತು. ಒಂದು ಪಾಂಡಾ ಒಮ್ಮೆ ರೆಸ್ಟೋರೆಂಟಿಗೆ ಬಂದು ಬೇಕಾದಷ್ಟು ತಿಂದು ಕೈಯಲ್ಲಿದ್ದ ಪಿಸ್ತೂಲಿಂದ ಢಂ ಢಂ ಎಂದು ನಾಲ್ಕಾರು ಗುಂಡುಗಳನ್ನೂ ಹಾರಿಸಿ ಮತ್ತೆ ದುಡ್ಡೂ ಕೊಡದೆ ರೆಸ್ಟೋರೆಂಟಿಂದ ಕಾಲ್ಕಿತ್ತಿತಂತೆ. ಯಾಕೆ ಏನಾಯಿತು ಎಂದು ತಬ್ಬಿಬ್ಬಾಗಿ ನೋಡುತ್ತಿದ್ದ ಜನರಿಗೆ ಪಾಂಡಾ ಹೇಳಿದ್ದೇನೆಂದರೆ ಪುಸ್ತಕದಲ್ಲಿರುವ ವ್ಯಾಖ್ಯೆಯಂತೆಯೇ ತಾನು ಮಾಡಿದ್ದೇನೆ ಎಂದು. ಜತೆಯಲ್ಲೇ ಒಂದು ಮಿಸ್ಚೀವಿಯಸ್‌ ಸ್ಮೈಲ್‌ ಬೇರೆ. ಅಸಲಿಗೆ ಪಾಂಡಾ ಏನು ಮಾಡಿತ್ತೆಂದರೆ ವ್ಯಾಖ್ಯೆಯ ಮೊದಲ ಪದದ ನಂತರ ಒಂದು ಅಲ್ಪವಿರಾಮವನ್ನು ಸೇರಿಸಿ ಅದಕ್ಕೊಂದು ಹೊಸ ಅರ್ಥವನ್ನು ಕಲ್ಪಿಸಿ ಆ ದಾಂಧಲೆಯನ್ನು ಎಬ್ಬಿಸಿತ್ತು.

ಪಂಕ್ಚುವೇಶನ್‌ ಮಾರ್ಕ್‌ಗಳ ಬಗ್ಗೆ ಚರ್ಚಿಸುವಾಗಲೇ 18ನೇ ಶತಮಾನದಲ್ಲಿ ಬದುಕಿದ್ದ ಟಿಮೊತಿ ಡೆಕ್ಸ್‌ಟರ್‌ ಎಂಬ ಆಂಗ್ಲ ಲೇಖಕನ ವಿಚಾರ ಪ್ರಸ್ತುತವೆನಿಸುತ್ತದೆ. ಆತ A Pickle for the Knowing Ones ಎಂಬ ಒಂದು ಪುಸ್ತಕವನ್ನು ಬರೆದಿದ್ದ. ಸೋಜಿಗದ ಸಂಗತಿಯೆಂದರೆ ಆ ಇಡೀ ಪುಸ್ತಕದಲ್ಲಿ ಒಂದೇ ಒಂದು ಪಂಕ್ಚುವೇಶನ್‌ ಮಾರ್ಕ್‌ ಉಪಯೋಗಿಸಿರಲಿಲ್ಲ. ಹಾಗಿದ್ದರೂ ಆ ಪುಸ್ತಕ ಅಪಾರ ಜನಪ್ರಿಯತೆಯನ್ನು ಗಳಿಸಿತು. ಮೊದಲ ಮುದ್ರಣದ ಪ್ರತಿಗಳೆಲ್ಲ ಖರ್ಚಾದುವು. ಎರಡನೆಯ ಮುದ್ರಣದಲ್ಲಿ ಡೆಕ್ಸ್‌ಟರ್‌ ಇನ್ನೊಂದು ಗಿಮಿಕ್‌ ಮಾಡಿದ. ಈಸಲ ಪಂಕ್ಚುವೇಶನ್‌ಗಳನ್ನೆಲ್ಲ ಬಳಸಿದ. ಆದರೆ ಯಥಾಯಥಾ ಸ್ಥಾನದಲ್ಲಲ್ಲ. ಎಲ್ಲ ಪಂಕ್ಚುವೇಶನ್‌ ಮಾರ್ಕ್‌ಗಳನ್ನು ಒಟ್ಟಿಗೆ ಒಂದು ಪುಟದಲ್ಲಿ ಮುದ್ರಿಸಿ ಅದನ್ನು ಪುಸ್ತಕದ ಅನುಬಂಧವಾಗಿ ಕೊಟ್ಟು ಜತೆಯಲ್ಲೇ ಓದುಗರಿಗೆ ಪುಟ್ಟ ಸಂದೇಶವನ್ನೂ ಮುದ್ರಿಸಿದ. ಆಹಾರದ ಮೇಲೆ ಸಾಲ್ಟ್‌ ಪೆಪ್ಪರ್‌ ಸಿಂಪಡಿಸಿಕೊಂಡಂತೆ ಬೇಕಾದಲ್ಲಿ ಸಿಂಪಡಿಸಿಕೊಳ್ಳಿ ಎಂದುಬಿಟ್ಟ. ಬಹುಶಃ ಅವನೊಬ್ಬ ಕ್ರೇಜಿ ಫೆಲೊ ಇರಬಹುದು. ಆದರೂ ಡೆಕ್ಸ್‌ಟರ್‌ನ ಕ್ರೇಜಿ ಪ್ರಯೋಗವನ್ನು ಜನ ಮೆಚ್ಚಿಕೊಂಡರು. ಪಂಕ್ಚುವೇಶನ್‌ ಎಂದರೇನೆಂದೇ ಗೊತ್ತಿರದಿದ್ದ ಹಿರೊಗ್ಲಫಿಕ್‌ ಬರವಣಿಗೆಯನ್ನು ಅದು ನೆನಪಿಸಿದ್ದು ಬಹುಶಃ ಜನರಿಗೆ ಖುಶಿ ತಂದಿರಬೇಕು.

ಟಿಮೊತಿ ಡೆಕ್ಸ್‌ಟರ್‌ನ ಕ್ರೇಜಿ ಐಡಿಯಾ ಹಾಗಾದರೆ ಚೀನಾ ದೇಶದ ಹು ವೆನ್ಲಿಯಾಂಗ್‌ ಎಂಬ ಕಾದಂಬರಿಕಾರನ ವಿಷಯವನ್ನೂ ನಾವು ತಿಳಿದುಕೊಳ್ಳಬೇಕು. ಹು ಒಂದು ಕಾದಂಬರಿಯನ್ನು ಬರೆದಿದ್ದಾನಂತೆ. ಆ ಕಾದಂಬರಿಯಲ್ಲಿ ಒಂದೇ ಒಂದು ಅಕ್ಷರವಿಲ್ಲ. ಒಟ್ಟು ಹದಿನಾಲ್ಕು ಪಂಕ್ಚುವೇಶನ್‌ ಮಾರ್ಕ್ಸ್‌ ಬಿಟ್ಟರೆ ಬೇರೇನೂ ಅದರಲಿಲ್ಲ. ಅಷ್ಟಾದರೂ ಅದೊಂದು ಹೃದಯಸ್ಪರ್ಶಿ ಪ್ರೇಮಕಥೆ ಮತ್ತು ಅದರಲ್ಲಿ ದೊಡ್ಡದೊಡ್ಡ ಕಾದಂಬರಿಗಳಲ್ಲಿರುವಂತೆ ಕಥೆಯ ಥಿಕ್‌ ಪ್ಲಾಟ್‌ ಸಹ ಇದೆ ಎಂದು ಹು ಉವಾಚ. 14 ಚಿಹ್ನೆಗಳಿಂದಾಗಿರುವ ಈ ಕಾದಂಬರಿಯನ್ನು ಸರಿಯಾಗಿ ಡಿಕೋಡ್‌ ಮಾಡಿದವರಿಗೆ ಚಿಹ್ನೆಯಾಂದಕ್ಕೆ ಹತ್ತುಸಾವಿರದಂತೆ ಒಟ್ಟು 140000 ಯುವನ್‌ಗಳ ಆಕರ್ಷಕ ಬಹುಮಾನವನ್ನೂ ಹು ಘೋಷಿಸಿದ್ದಾನಂತೆ. ಹು ವಿಲ್‌ ವಿನ್‌ ದ ಪ್ರೈಜ್‌ ಅಂತ ಮಾತ್ರ ಯಾರಿಗೂ ಗೊತ್ತಿಲ್ಲ.

*

ಚುಕ್ಕಿ ಮಾತ್ರ ಬಳಸಿ ಈ ಲೇಖನವನ್ನು ಬರೆಯುತ್ತಿದ್ದೇನೆ ಎಂದಾಗ ನನಗೆ ಚುಕ್ಕಿಗೆ ಸಂಬಂಧಿಸಿದ ಒಂದು ಘಟನೆ ನೆನಪಾಗುತ್ತಿದೆ.

ಕೈಗಡಿಯಾರದ ಬೆಲ್ಟ್‌ಗೆ ಸ್ವಂತ ಹೆಸರಿನ ಸ್ಟಿಕ್ಕರ್‌ ಹಚ್ಚುವ ಕ್ರೇಜ್‌ ಒಂದು ಕಾಲದಲ್ಲಿತ್ತು. ರಸ್ತೆಬದಿಯಲ್ಲಿ ಅಥವಾ ಊರ ಸಂತೆಗಳಲ್ಲಿ ಅಥವಾ ವಸ್ತುಪ್ರದರ್ಶನ ಮಾರಾಟ ಮೇಳಗಳಲ್ಲಿ ಆ ರೀತಿ ಸ್ಟಿಕ್ಕರ್‌ ಮಾಡಿಕೊಡುವ ವ್ಯಾಪಾರಿಗಳೂ ಇರುತ್ತಿದ್ದರು. ಬಿ. ವಿ. ಎಸ್‌. ಚಂದ್ರಶೇಖರ್‌ ಎಂಬ ನಾಮಧೇಯದ ಸ್ನೇಹಿತ ಒಮ್ಮೆ ಅಂಥ ವ್ಯಾಪಾರಿಯಾಬ್ಬನ ಬಳಿ ಸ್ಟಿಕ್ಕರ್‌ ಮಾಡಿಕೊಡುವುದಕ್ಕೆ ಎಷ್ಟು ಚಾರ್ಜ್‌ ಆಗುತ್ತದೆ ಎಂದು ಪ್ರಶ್ನಿಸಿದ. ಅಕ್ಷರವೊಂದಕ್ಕೆ ಒಂದು ರೂಪಾಯಿ ಚಾರ್ಜು ಹಾಗಾಗಿ ಹೆಸರಲ್ಲಿ ಎಷ್ಟು ಅಕ್ಷರಗಳಿರುತ್ತವೊ ಅನ್ನುವುದರ ಮೇಲೆ ಒಟ್ಟು ಮೊತ್ತವೆಷ್ಟು ಅಂತ ಹೇಳಬಲ್ಲೆ ಎಂದನಂತೆ ಆತ. ಹೆಸರಲ್ಲಿ ಇನಿಷಿಯಲ್ಸ್‌ ಜತೆ ಚುಕ್ಕಿಗಳನ್ನು ಬಳಸಿದರೆ ಆ ಚುಕ್ಕಿಗಳಿಗೂ ಚಾರ್ಜ್‌ ಇದೆಯೇ ಎಂದು ಇನಿಶಿಯಲ್‌ ತ್ರಯದ ಚಂದ್ರುನ ಪ್ರಶ್ನೆ. ಚುಕ್ಕಿಗಳು ಉಚಿತ ಎಂದು ವ್ಯಾಪಾರಿಯ ಘೋಷಣೆ. ಹಾಗಿದ್ದರೆ ಚುಕ್ಕಿಗಳಿಂದಲೇ ಅಕ್ಷರಗಳ ವಿನ್ಯಾಸ ಮಾಡಿ ಸ್ಟಿಕ್ಕರ್‌ ಮಾಡಿಕೊಡುತ್ತೀಯಾ ಎಂದು ಕೇಳೋಣವೆನ್ನಿಸಿದರೂ ಹಾಗೆ ಮಾಡದೆ ಸರಿಯಾದ ಮೊತ್ತವನ್ನು ಕೊಟ್ಟು ಆ ವ್ಯಾಪಾರಿಯಿಂದ ಸ್ಟಿಕ್ಕರ್‌ ಮಾಡಿಸಿಬಂದೆ ಎಂದು ತನ್ನ ಚುಕ್ಕಿಪುರಾಣವನ್ನು ತೋಡಿಕೊಳ್ಳುತ್ತಾನೆ ನಮ್ಮ ಚುಕ್ಕಿಚಂದ್ರಮ.

Dot com ಕಂಟೆಕ್ಸ್ಟಲ್ಲಿ ಚುಕ್ಕಿಯ ವಿಷಯದ ಒಂದು ಭಲೇ ಸ್ವಾರಸ್ಯವನ್ನು ನಮಗೆಲ್ಲ ಕೊಟ್ಟಿರುವವರು ಡಾ.ಮೈಸೂರು ನಟರಾಜ. ಡಾಟ್‌ಕಾಮ್‌ ಎನ್ನುವುದನ್ನು ಶಬ್ದಕ್ಕೆಶಬ್ದ ಭಾಷಾಂತರಿಸಿ ಚುಕ್ಕಿವಾಣಿ ಎಂದಿರುವ ಅವರು ಚುಕ್ಕಿವಾಣಿಯ ಏಳುಬೀಳುಗಳ ಬಗ್ಗೆಯೇ ಒಂದು ಕವಿತೆ ಬರೆದಿದ್ದಾರೆ.

ಅವನು ಒಬ್ಬ ಬಿಂದುಕಾಮ

ಅವನ ಹೆಸರು ರಂಗಧಾಮ

ಅವಳೊಬ್ಬಳು ಚುಕ್ಕಿವಾಣಿ

ಅವಳ ಹೆಸರು ನಾಗವೇಣಿ

ವಧೂವರರ ಅನ್ವೇಷಣೆಗೆ

ಜಾಹೀರಾತು ಪ್ರಜಾವಾಣಿ

ಹೀಗೆ ಸಾಗುವ ಕವನದಲ್ಲಿ ಡಾಟ್‌ಕಾಮ್‌ ಗುಳ್ಳೆಯು ನೀರಿನ ಮೇಲಿನ ಗುಳ್ಳೆಯ ತೆರದಿ ಮೂರು ದಿನದ ಬಾಳಿದು ಜಗದಿ ಎನ್ನುವಂತೆ ಬರ್ಸ್ಟಿಸಿದ ಸಮಾಚಾರವನ್ನು ಚುಕ್ಕಿಚಿತ್ರದಂತೆ ಕಣ್ಣಿಗೆ ಕಟ್ಟುವಂತೆ ಮನೋಜ್ಞವಾಗಿ ಬಣ್ಣಿಸಿದ್ದಾರೆ ನಟರಾಜ್‌.

Dot comನ ಒಂದು ಬೈಪ್ರೊಡಕ್ಟಾಗಿ ಈಗ ಎಲ್ಲದಕ್ಕೂ E ಪ್ರಿಫಿಕ್ಸ್‌ ಬಂದಿದೆ. ಆಶ್ಚರ್ಯವಾದರೂ ಸತ್ಯದ ಸಂಗತಿಯೆಂದರೆ Dot com ಗಿಂತ ಎಷ್ಟೋ ಹಿಂದಿನಿಂದಲೇ ಬಳಕೆಯಲ್ಲಿರುವ Morse Code ಸಂಪರ್ಕ ವ್ಯವಸ್ಥೆಯಲ್ಲೂ E ಅಕ್ಷರದ ಸಂಕೇತ ಒಂದು Dot ಆಗಿರುವುದು. E ಮತ್ತು Dotಗಳ ಸಂಬಂಧ ಇವತ್ತು ನಿನ್ನೆಯದೇನೂ ಅಲ್ಲ ಎಂಬುದು ಇದರಿಂದಲೇ ಸಾಬೀತಾಗುತ್ತದೆ.

*

ಈ ಪರಿಯ ಚುಕ್ಕಿಪುರಾಣಕ್ಕೆ ಚುಕ್ಕಿಯನ್ನಿಡುವ ಮೊದಲು ಅಂದರೆ ಫುಲ್‌ಸ್ಟಾಪ್‌ ಹಾಕುವ ಮೊದಲು ಒಂದು ರಸಪ್ರಶ್ನೆಯನ್ನೂ ಸೇರಿಸಿಬಿಡೋಣ. ಪ್ರಶ್ನಾರ್ಥಕ ಚಿಹ್ನೆಯನ್ನು ಬಳಸದೆಯೇ ಪ್ರಶ್ನೆಯನ್ನು ನಿಮ್ಮ ಮುಂದೆ ಇಡಬೇಕು. ಅದು ಹೀಗಿದೆ.

ಬರವಣಿಗೆಯಲ್ಲಿ ವಾಕ್ಯದ ಕೊನೆಗೆ ಚುಕ್ಕಿ ಇಡುವುದು ಕ್ರಮ. ರೋಮನ್‌ ಲಿಪಿ ಬಳಸಿ ಇಂಗ್ಲಿಷ್‌ ಬರೆಯುವಾಗ ಇನಿಶಿಯಲ್ಸ್‌ ಅಥವಾ ಪದಗಳ ಹ್ರಸ್ವರೂಪದ ಕೊನೆಗೂ ಚುಕ್ಕಿ ಬರುತ್ತದೆ. ಒಟ್ಟಿನಲ್ಲಿ ಚುಕ್ಕಿ ಎಂದರೆ ಫುಲ್‌ ಸ್ಟಾಪ್‌. ಚುಕ್ಕಿ ಅಂದರೆ an end. ಚುಕ್ಕಿ ಎಂದರೆ ಪೂರ್ಣ ವಿರಾಮ. ಎಷ್ಟೆಂದರೆ ಫುಲ್‌ಸ್ಟಾಪ್‌ ಅಥವಾ ಪೀರಿಯಡ್‌ ಎಂದುಬಿಟ್ಟರೆ ಅದರಾಚೆ ಹೇಳುವಂಥದ್ದೇನೂ ಇಲ್ಲ ಎಂದು ಸ್ಪಷ್ಟೀಕರಿಸಿದಂತೆಯೇ. Kashmir belongs to India. Period. ಈ ಹೇಳಿಕೆಯಲ್ಲಿ ಪೀರಿಯಡ್‌ ಅಂದರೆ ಫುಲ್‌ಸ್ಟಾಪ್‌. ಹೇಳಿಕೆಯ ಕೊನೆ.

ಹಾಗಾದರೆ ಚುಕ್ಕಿ ಎಂದರೆ ವಾಕ್ಯದ ಕೊನೆಯ ಪೂರ್ಣವಿರಾಮ. ಆದರೆ ಚುಕ್ಕಿಯಿಂದ ಆರಂಭಿಸುವುದು ಒಂದಿದೆ. ಅದನ್ನು ಬರೆವಾಗೆಲ್ಲ ಅಥವಾ ಬಿಡಿಸುವಾಗೆಲ್ಲ ಚುಕ್ಕಿ ಇಟ್ಟೇ ಶುರು ಮಾಡುವುದು. ಅದೇನು ಎಂಬುದು ನಿಮಗೆ ಗೊತ್ತೂ ಇದೆ. ಆ ಉತ್ತರವನ್ನು ನೀವೀಗ ಬರೆದು ತಿಳಿಸಬೇಕಾಗಿದೆ. ಸುಳಿವು ಬೇಕೇಬೇಕು ಅಂತಿದ್ದರೆ ತೊಂಬತ್ತರ ದಶಕದಲ್ಲಿ ದೂರದರ್ಶನದಲ್ಲಿ ಭಾನುವಾರ ಬೆಳಗಿನ ಅತಿಜನಪ್ರಿಯ ಕಾರ್ಯಕ್ರಮದ ಹೆಸರನ್ನು ನೀವು ಜ್ಞಾಪಿಸಿಕೊಳ್ಳಬಹುದು.

ಉತ್ತರವನ್ನು ಕಳಿಸಬೇಕಾದ ವಿಳಾಸ srivathsajoshi@yahoo.com.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more