• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಷ್ಟ್ರೀಯ ಭಾರ ಎತ್ತುವ ಸ್ಪರ್ಧೆ?

By Staff
|
Srivathsa Joshi *ಶ್ರೀವತ್ಸ ಜೋಶಿ

ದಾವಣಗೆರೆಯಲ್ಲಿ ಒಮ್ಮೆ ನ್ಯಾಷನಲ್‌ ವೈಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ ನಡೆದಿತ್ತು. ಆವಾಗ ನಾವೆಲ್ಲ ಇಂಜನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳಾಗಿದ್ದೆವು. ದಾವಣಗೆರೆಯ ಮಟ್ಟಿಗೆ ಆ ಪಂದ್ಯಾವಳಿ ಒಲಂಪಿಕ್ಸ್‌ ಕ್ರೀಡೆಗಳು ನಡೆದಷ್ಟು ದೊಡ್ಡ ಸಂಗತಿಯೆನ್ನಬಹುದು. ಅಲ್ಲಿನ ನಗರವಾಣಿ, ಜನತಾವಾಣಿ ಪತ್ರಿಕೆಗಳಲ್ಲಿ ಆ ಬಗ್ಗೆ ವಿವರಗಳೇನು, ಸಿನೆಮಾ ಪೋಸ್ಟರ್‌ಗಳ ಮಾದರಿಯಲ್ಲಿ ಎಲ್ಲ ಕಡೆ ಭಿತ್ತಿಪತ್ರಗಳೇನು, ದೇಶದ ವಿವಿಧೆಡೆಗಳಿಂದ ಬಲಾಢ್ಯ ಜಗಜಟ್ಟಿಗಳೂ ಕಡ್ಡೀಪೈಲ್ವಾನರೂ ಬಂದು ಪಾಲ್ಗೊಂಡು ವೈಟ್‌ ಲಿಫ್ಟಿಸಿದ ಪರಿಯೇನು, ಪಂದ್ಯಾವಳಿಯ ಸಡಗರವೇನು... ಎಲ್ಲ ಸರಿಯೇ, ಆದರೆ ‘ನ್ಯಾಷನಲ್‌ ವೈಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌’ ಅನ್ನು ಕನ್ನಡೀಕರಿಸಿ ಬರೆದ ಪೋಸ್ಟರ್‌ಗಳಲ್ಲಿ ‘ರಾಷ್ಟ್ರೀಯ ಭಾರ ಎತ್ತುವ ಸ್ಪರ್ಧೆ’ ಅಂತಿದ್ದದ್ದು!

-ತಪ್ಪೇ? ಇಲ್ಲವಲ್ಲ? ಆದರೆ ಸೂಕ್ಷ್ಮವಾಗಿ ಇನ್ನೊಮ್ಮೆ ನೋಡಿ -ಸ್ಪರ್ಧೆ ರಾಷ್ಟ್ರೀಯವೇ ಅಥವಾ ಭಾರ ರಾಷ್ಟ್ರೀಯವೇ? ಅಂದ ಮಾತ್ರಕ್ಕೆ ‘ಭಾರ ಎತ್ತುವ ರಾಷ್ಟ್ರೀಯ ಸ್ಪರ್ಧೆ’ ಅಂತ ಯಾರಾದರೂ ಹೇಳ್ತಾರೇನು? ಹಾಗಾಗಿ, ರಾಷ್ಟ್ರೀಯ ಭಾರ ಎತ್ತುವ ಸ್ಪರ್ಧೆ ಎಂದು ಬರೆದರೇ ಚೆನ್ನ. ಹಾಗೆ ಬರೆದರೆ, ಸ್ವಾರಸ್ಯದಾಹಿಗಳಾದ ನಮ್ಮಂಥವರಿಗೆ ಇನ್ನೂ ಚೆನ್ನ!

ಭಾಷಾ ಸ್ವಾರಸ್ಯದ ಇಂತಹ ಇನ್ನೂ ನಿದರ್ಶನಗಳೊಂದಿಷ್ಟನ್ನು, ಭಾರವೆನಿಸದಂತೆ ಹಗುರವಾಗಿ ಎತ್ತಿಟ್ಟು ಇವತ್ತಿನ ಒಗ್ಗರಣೆ ತಯಾರಿ ನಡೆದಿದೆ. ನಿಮ್ಮ ತಟ್ಟೆ-ಹೊಟ್ಟೆ ಖಾಲಿಯಿದೆಯಲ್ಲ ರುಚಿನೋಡಿ ಸವಿಯಲು?

ಮೊದಲು, ಭಾರ ಎತ್ತುವ ವಿಷಯದ್ದೇ ಸಣ್ಣದೊಂದು ಚೇಷ್ಟೆಯ ಮಾತಾಡಿ ಆಮೇಲೆ ಮುಂದುವರೆಸೋಣ. ಈಗ ಧರಂಸಿಂಗ್‌ನಂಥ ‘ ಸಣಕಲು’ ಮನುಷ್ಯ ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಟೈಮಲ್ಲಿ ‘ರಾಜ್ಯಮಟ್ಟದ ಭಾರ ಎತ್ತುವ ಸ್ಪರ್ಧೆ’ ಎಂದರೆ ಅದಕ್ಕೊಂದು ಅರ್ಥವಿದೆ ಎಂದು ನಿಮಗನಿಸುವುದಿಲ್ಲವೇ?

ಮತ್ತೆ, ಆ ರಾಷ್ಟ್ರೀಯ ಭಾರದ ಸ್ಪರ್ಧೆ ನಡೆವ ಸ್ಥಳವಾದರೂ ಯಾವುದಂತೀರಿ? ಸರಕಾರಿ ಗಂಡು ಮಕ್ಕಳ ಶಾಲೆಯ ಮೈದಾನ! ಕೊ-ಎಜುಕೇಷನ್‌ ಇಲ್ಲದ ವಿದ್ಯಾಸಂಸ್ಥೆಗಳನ್ನು ಬಾಯ್ಸ್‌ ಸ್ಕೂಲ್‌, ಗರ್ಲ್ಸ್‌ ಸ್ಕೂಲ್‌ ಎನ್ನುತ್ತಾರಲ್ಲ, ಅವು ಗವರ್ನ್‌ಮೆಂಟ್‌ ಆಗಿದ್ದರೆ ಮತ್ತು ಕನ್ನಡೀಕರಿಸಿದರೆ, ಸರಕಾರಿ ಗಂಡು ಮಕ್ಕಳ ಶಾಲೆ! ಒಂದೇ ಒಂದು ಡೌಟ್‌ ಎಂದರೆ ಶಾಲೆ ಸರಕಾರಿಯೋ ಅಥವಾ ಗಂಡು ಮಕ್ಕಳು ಸರಕಾರಿಯೋ ಎಂಬುದು.

ಇದು ಕನ್ನಡ ಭಾಷೆಯ ಲಿಮಿಟೇಶನ್‌ ಅಂತೇನೂ ತಪ್ಪಾಗಿ ಭಾವಿಸಬೇಡಿ. ಹಾಗೆ ನೋಡಿದರೆ ಕನ್ನಡ ಎಷ್ಟೋ ಪಾಲು ವಾಸಿ, ಸಾಕಷ್ಟು structured ಭಾಷೆ ಎಂಬ ಹೆಗ್ಗಳಿಕೆ ಕನ್ನಡಕ್ಕಿದೆ. ಇಂಗ್ಲಿಷ್‌ನಲ್ಲಂತೂ ಇಂಥ ಅಪದ್ಧಗಳು ಅವಾಂತರಗಳು ಬೇಕಷ್ಟು ಸಿಗುತ್ತವೆ. ನೀವು ಒಂದು ಕೆಲ್ಸ ಮಾಡಿ -ಗೂಗಲ್‌ನಲ್ಲೊಮ್ಮೆ Misplaced modifiers ಅಂತ ಟೈಪಿಸಿ ಸರ್ಚ್‌ ಹೊಡಿರಿ. ಹೊಟ್ಟೆಹುಣ್ಣಾಗುವಷ್ಟು ನಗಿಸಬಲ್ಲ ಸಾಮಗ್ರಿ ಸಿಗುತ್ತದೆ ನಿಮಗೆ, ವ್ಯಾಕರಣದಲ್ಲಿ ನಾಮವಿಶೇಷಣಗಳು ಕ್ರಿಯಾವಿಶೇಷಣಗಳು ಸ್ಥಾನಪಲ್ಲಟವಾದಾಗ ಹುಟ್ಟಿಕೊಳ್ಳುವ ಅನರ್ಥ ಅಥವಾ ಅಪಾರ್ಥಗಳಿಂದ. ಆದರೆ ಈ ಲೇಖನದ ಮಟ್ಟಿಗೆ ಇಂಗ್ಲಿಷ್‌ನ ಗೋಜಿಗೆ ಹೋಗದೆ, ನಮ್ಮ ಕಸ್ತೂರಿ ಕನ್ನಡದಲ್ಲಿ ಆಗಬಹುದಾದ ಕೆಲವು ಅವಾಂತರಗಳನ್ನಷ್ಟೆ ನಾವು ನೋಡೋಣ; ಮೇಲ್ನೋಟಕ್ಕೆ ಸರಿಯಾಗಿಯೇ ಇದೆಯೆಂದು ಕಂಡುಬರುವ ವಾಕ್ಯಗಳು ಎರಡನೇ ಓದಿನಲ್ಲಿ ಹೇಗೆ ನಗು ತರಿಸುತ್ತವೆ ಎಂದು ತಿಳಿಯೋಣ.

ಇದೊಂದು ಮಜಾ ನೋಡಿ. ದಿನಪತ್ರಿಕೆಯಲ್ಲಿ ಒಂದು ಉತ್ತಮ ಕವಿತೆ (ಅಪರೂಪಕ್ಕೆ!) ಪ್ರಕಟವಾಯಿತು ಎಂದಿಟ್ಟುಕೊಳ್ಳಿ. ಕಾರಣಾಂತರದಿಂದ ಒಬ್ಬ ಓದುಗ ಆ ಕವಿತೆಯನ್ನು ಮಾರನೆ ದಿನ ಓದಿದ ಅಂತಿಟ್ಕೊಳ್ಳಿ. ಅವನಿಗೆ ತುಂಬ ಇಷ್ಟವಾಯ್ತದು, ಸರಿ, ಕವಯಿತ್ರಿಗೆ ತನ್ನ ಮೆಚ್ಚುಗೆಯನ್ನು ಬರೆದುತಿಳಿಸುವುದಕ್ಕಾಗಿ ಆತ ಒಂದು ಪತ್ರವನ್ನೂ ಬರೆಯುತ್ತಾನೆ ಅಂತೆಣಿಸಿ - ‘ನಿನ್ನೆಯ ನಿಮ್ಮ ಕವನ ಓದಿ ಸಂತೋಷವಾಯಿತು’ ಎಂದು. ಅಂದರೆ, ಕವಯಿತ್ರಿ ಭೂತಕಾಲದವಳಾದಳೇ? ಇನ್ನೊಮ್ಮೆ ಓದಿ, ಹೇಗಿರಬೇಕಿತ್ತು ಆ ವಾಕ್ಯ ಎಂಬುದನ್ನು. ಕವನ ನಿನ್ನೆಯದು ಅಥವಾ ನಿನ್ನೆ ಪ್ರಕಟವಾದದ್ದು ಹೌದು, ಆದರೆ ಕವಯಿತ್ರಿ ಇಂದೂ ಉಸಿರಾಡುತ್ತಿದ್ದಾಳೆ ಎಂಬುದು ಗೊತ್ತಿರಲಿ!

ನಾಮವಿಶೇಷಣ ಅಥವಾ ಕ್ರಿಯಾವಿಶೇಷಣಗಳು ಯಾವ ಪದಕ್ಕೆ ಸಂಬಂಧಿಸಿದಂತಿರುತ್ತವೊ ಆ ಪದಕ್ಕೆ ಎಡ್ಜಸೆಂಟಾಗಿಟ್ಟರೆ ವಾಕ್ಯದಲ್ಲಿ ಅಪಾರ್ಥವಾಗುವ ಸಂಭವ ಕಡಿಮೆ ಎಂಬುದು ಒಂದು ಸರ್ವಸಾಮಾನ್ಯ ನಿಯಮ. ಆದರೆ ಅದೂ ಫುಲ್‌ಪ್ರೂಫ್‌ ಏನೂ ಅಲ್ಲ ಬಿಡಿ. ಇದೊಂದು ಉದಾಹರಣೆ ನೋಡಿ. ಮೂರು ವರ್ಷಗಳ ಹಿಂದೆ ಇಲ್ಲಿ ಅಮೆರಿಕದಲ್ಲಿ ಅಂತ್ರಾಕ್ಸ್‌ ಉಪದ್ರವ ಶುರುವಾಗಿದ್ದಾಗ ಅಮೆರಿಕನ್‌ ಅಂಚೆಇಲಾಖೆಯು ತನ್ನ ನೌಕರರಿಗೆ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ನಡೆಸಿತ್ತು. ಅದನ್ನು ‘ಅಂಚೆ ಇಲಾಖೆಯಿಂದ ಸಂಶಯಾಸ್ಪದ ಅಂಚೆ ನಿರ್ವಹಣೆ ತರಬೇತಿ’ ಎಂದು ವರದಿ ಮಾಡಿದ್ದರೆ ಹೇಗಾಗಬಹುದು? ಆ ತರಬೇತಿಯೂ ಸಂಶಯಾಸ್ಪದವಾಗಿದೆಯೇ ಎಂಬ ಸಂಶಯ ಬರಬಹುದು!

ಇಂಥದೇ ತಮಾಷೆಯಾಂದನ್ನು ನಮ್ಮೆಲ್ಲರ ಫೇವರಿಟ್‌ ಪುರಂದರದಾಸರೂ ಮಾಡಿದ್ದಾರೆ ಎಂದರೆ ನಂಬುತ್ತೀರಾ? ಅವರು ರಚಿಸಿದ, ವಿದ್ಯಾಭೂಷಣರು ಹಾಡಿದ, ‘ಬೆಳಗು ಝಾವದಿ ಬಾರೋ ಹರಿಯೇ... ನಿನ್ನ ಚರಣ ತೊಳೆದು ಜಲವ ಪಾನಮಾಡುವೆ ನಾ...’ ಹಾಡನ್ನು ಕೇಳಿದ್ದೀರಾ? ಗಮ್ಮತ್ತೇನು ಗೊತ್ತೇ? ‘ಶ್ರೀಹರಿಯ ಕಾಲುಗಳನ್ನು ತೊಳೆಯುತ್ತೇನೆ, ಆಮೇಲೆ ನೀರು ಕುಡಿಯುತ್ತೇನೆ’ ಎನ್ನುತ್ತಿದ್ದಾನೆಯೇ ಭಗವದ್ಭಕ್ತನಿಲ್ಲಿ? ‘ಶ್ರೀಹರಿಯ ಕಾಲುಗಳನ್ನು ತೊಳೆದು ಅದೇ ನೀರನ್ನು ಸೇವಿಸುತ್ತೇನೆ’ ಅಂತ ಅರ್ಥ ಬರಬೇಕಿದ್ದರೆ ‘ನಿನ್ನ ಚರಣ ತೊಳೆದ ಜಲವ ಪಾನಮಾಡುವೆ ನಾ...’ ಎಂದಿರಬೇಕಿತ್ತಲ್ಲವೇ?

ಕೆಲವೊಮ್ಮೆ ಉದ್ಧರಣಚಿಹ್ನೆ (quotation marks) ಅಥವಾ ಅಲ್ಪವಿರಾಮ ತಪ್ಪಿಹೋಗಿದ್ದರೆ ವಾಕ್ಯದಲ್ಲಾಗುವ ಗಡ್‌ಬಡ್‌ ರೋಚಕವಾದದ್ದು. ಇದನ್ನು ಪರಿಣಾಮಕಾರಿಯಾಗಿ ವಿವರಿಸಬೇಕಿದ್ದರೆ ಒಂದು ಉಪಕಥೆ ಹೇಳುತ್ತೇನೆ. ಇದಕ್ಕೆ ನಮ್ಮ ವಾಷಿಂಗ್ಟನ್‌ ಡಿಸಿ ಪ್ರದೇಶದಲ್ಲಿರುವ ಇಬ್ಬರು ಪ್ರತಿಭಾನ್ವಿತ ಹಿರಿಯ ಕನ್ನಡಿಗರ ಸಾಹಿತ್ಯಕೃತಿಗಳ ಹೆಸರನ್ನು ಬಳಸಿಕೊಳ್ಳಬೇಕಾಗುತ್ತದೆ. ಡಾ.ಮೈ.ಶ್ರೀ ನಟರಾಜ್‌ ಗೊತ್ತಲ್ಲ ನಿಮಗೆಲ್ಲ? (’ಜಾಲತರಂಗ’ ಅಂಕಣಕಾರರು). ಅವರು ಒಳ್ಳೊಳ್ಳೆಯ ಲೇಖನ-ಕವನಗಳನ್ನಷ್ಟೇ ಅಲ್ಲ, ಕೆಲವು ಕನ್ನಡ ನಾಟಕಗಳನ್ನೂ ಬರೆದಿದ್ದಾರೆ, ಅಭಿನಯಿಸಿದ್ದಾರೆ ಸಹ. ಅವರ ಒಂದು ನಾಟಕದ ಹೆಸರು ‘ನೇಣು’. ಇನ್ನೊಬ್ಬ ಪ್ರತಿಭಾವಂತ ಹಿರಿಯ ಮನೋಹರ್‌ ಕುಲಕರ್ಣಿ. ಅವರೂ ರಂಗಭೂಮಿ ನಿಷ್ಣಾತರು, ಸಾಹಿತ್ಯಪ್ರೇಮಿ, ನಟ, ನಿರ್ದೇಶಕ - ಎಲ್ಲವೂ. ಅವರೂ ಒಂದು ನಾಟಕ ಬರೆದಿದ್ದಾರೆ, ಹೆಸರು ‘ಸಮಾಧಿಯಿಂದೆದ್ದ ಸುಂದರಿ’. ಸರಿ, ಈಗ ಹೈಪೊಥೆಟಿಕಲ್‌ ನಾಟಕೋತ್ಸವವೊಂದನ್ನು ಊಹಿಸೋಣ. ಅದರಲ್ಲಿ ಈ ಎರಡು ನಾಟಕಗಳು ಪ್ರದರ್ಶಿತವಾಗುತ್ತವೆ, ಅತ್ಯಂತ ಯಶಸ್ವಿಯೂ ಆಗುತ್ತವೆ. ನಾಟಕೋತ್ಸವದ ವರದಿಯಲ್ಲಿ ಮಾತ್ರ ಎಡವಟ್ಟು. ಏನದು? ‘ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾದ ನಟರಾಜ್‌ರ ನೇಣು. ಮನೋಹರ್‌ ಕುಲಕರ್ಣಿಯವರ ಸಮಾಧಿಯಿಂದೆದ್ದ ಸುಂದರಿಗೆ ಅಪೂರ್ವ ಕರತಾಡನ’!

ಇದೆಲ್ಲ, ಪ್ರತಿಯಾಂದು ವಿಷಯದಲ್ಲೂ ನಾವು ಹೇಗೆ ಸ್ವಾರಸ್ಯವನ್ನು ಕಂಡುಕೊಳ್ಳಬಹುದು ಅನ್ನುವುದರ ಮೇಲೆ ಅವಲಂಬಿಸಿರುತ್ತದೆಯೇ ಹೊರತು ಇದೇ ಪರ್ಫೆಕ್ಟ್‌ ಅದು ತಪ್ಪು ಎಂಬ ವಾದವಲ್ಲ. ಅಂಗಡಿಮುಂಗಟ್ಟುಗಳ ಫಲಕಗಳನ್ನೇ ತಗೊಳ್ಳಿ, ಕಾಗುಣಿತ ತಪ್ಪುಗಳಿರುವ ಬೋರ್ಡ್‌ ಅಂತೂ ತಮಾಷೆಯಾಗಿಯೇ ಇರುತ್ತದೆ, ಕಾಗುಣಿತವೆಲ್ಲ ಸರಿಯಾಗಿರುವ ಬೋರ್ಡ್‌ನಲ್ಲೂ ಮಜಾ ಕಂಡುಹಿಡಿಯಬಹುದು - ನಮಗೆ ಆ ಸ್ಪೆಷಲ್‌ ದೃಷ್ಟಿ ಇದ್ದರೆ. ಉದಾಹರಣೆಗೆ, ‘ಗಣೇಶ ಹಿಟ್ಟಿನ ಗಿರಣಿ’ ಎನ್ನುವ ಒಂದು ಫಲಕ ನಿಮಗೆ ತೀರ್ಥಹಳ್ಳಿಯಲ್ಲೋ ಚಾಮರಾಜನಗರದಲ್ಲೋ ಯಾವೂರಲ್ಲಾದರೂ ಕಂಡುಬರುತ್ತದೆಯೆಂದುಕೊಳ್ಳಿ. ಅಕ್ಕಿಹಿಟ್ಟಿನ ಗಿರಣಿ, ಜೋಳದಹಿಟ್ಟಿನ ಗಿರಣಿ ಅಂದರೆ ಅರ್ಥೈಸಿಕೊಳ್ಳಬಹುದು, ಅದು ಬಿಟ್ಟು ಗಣೇಶ ಹಿಟ್ಟಿನ ಗಿರಣಿ ಎಂದರೆ?? ಗಣೇಶ ಬರೀ ಹಿಟ್‌ ಅಲ್ಲ, ಸೂಪರ್‌ಹಿಟ್‌ ದೇವರು, ಆ ವಿಷಯ ಬೇರೆ. ಹಿಟ್ಟಾದರೂ ಪರವಾ ಇಲ್ಲ, ‘ಗಣೇಶ ಬೀಡಿಗಳು’, ‘ಗುರುರಾಘವೇಂದ್ರ ವೈನ್‌ಶಾಪ್‌’ (ಅಥವಾ ಉ.ಕರ್ನಾಟಕದಲ್ಲಾದರೆ ವೈನ ಶಾಪ) ಇತ್ಯಾದಿಯೆಲ್ಲ ಕೊಂಚ ಮುಜುಗರ ತರಿಸುವ ಸ್ವಾರಸ್ಯಗಳು. ಏನಂತೀರಾ?

ನಿಮ್ಮ ಮನರಂಜನೆಗಾಗಿ ಇನ್ನೊಂದಿಷ್ಟು (ಆವರಣದಲ್ಲಿ ಆಯಾ ವಾಕ್ಯದ ಬಗೆಗಿನ ತಾರ್ಕಿಕ ಟೀಕೆ ಇದೆ) :

  • ಡಕಾಯಿತನು ಸುಮಾರು ನೂರು ಕೇಜಿ ತೂಕದ ಮೀಸೆಯುಳ್ಳ ದಢೂತಿ ವ್ಯಕ್ತಿಯಾಗಿದ್ದನು ಎಂದು ದರೋಡೆಗೊಳಗಾದ ಮಹಿಳೆ ತಿಳಿಸಿದ್ದಾಳೆ. (ಅಬ್ಬಾ, ವೀರಪ್ಪನ್‌ನ ಮೀಸೆಗೆ ಸಾಟಿಯಾದದ್ದು ಇಲ್ಲವೆಂದುಕೊಂಡಿದ್ದೆ, ನೂರು ಕೇಜಿ ಮೀಸೆಯೆಂದರೆ ಭಾರೀ ಅದ್ಭುತ!)
  • ನಮ್ಮ ಕ್ಲಾಸಿನಲ್ಲಿ ರಾಣಿಯ ಮಂಚದ ಕೆಳಗೆ ಇಲಿಯನ್ನು ಹಿಡಿದ ಬೆಕ್ಕಿನ ಪದ್ಯ ಹೇಳಿಕೊಟ್ಟರು! (ಕ್ಲಾಸಿನಲ್ಲಿ ಬರೀ ಪದ್ಯ ಹೇಳಿಕೊಟ್ಟದ್ದು, ಅಲ್ಲಿ ರಾಣಿಯೂ ಇರಲಿಲ್ಲ, ರಾಣಿಯ ಮಂಚವೂ ಇರಲಿಲ್ಲ, ಇಲಿ ಮೊದಲೇ ಇರಲಿಲ್ಲ, ಬೆಕ್ಕಿನ ಸುದ್ದಿಯಂತೂ ಕೇಳಬೇಡಿ!)
  • ಬಸ್‌ನಲ್ಲಿ ಹೋಗುತ್ತ ತನ್ನ ಮದುವೆಯ ಬಗ್ಗೆ ಗುಂಡಣ್ಣ ಬಣ್ಣಿಸಿದ್ದೇ ಬಣ್ಣಿಸಿದ್ದು! (ಮದುವೆಯಾದದ್ದು ಬಸ್‌ನಲ್ಲಲ್ಲ ಮಾರಾಯ್ರೇ, ಗುಂಡಣ್ಣನ ಕಾಮೆಂಟರಿ ಮಾತ್ರ ಬಸ್‌ಜರ್ನಿಯ ಟೈಂಪಾಸ್‌ಗೆ.)
  • ಕ್ರಿಕೆಟ್‌ ಮ್ಯಾಚ್‌ ನೋಡಿ ನೋಡಿ ಟಿವಿ ಹಾಳಾಯಿತು. (ಟಿವಿಯೂ ಕ್ರಿಕೆಟ್‌ ಮ್ಯಾಚ್‌ ನೋಡೊದನ್ನು ಯಾವಾಗಿಂದ ಶುರು ಮಾಡಿತಪ್ಪಾ?)
  • ಕಳೆದುಹೋಗಿದ್ದ ನಿಮ್ಮ ಬ್ಯಾಟು ರೂಮ್‌ ಕ್ಲೀನ್‌ ಮಾಡುತ್ತಿದ್ದಾಗ ಸಿಕ್ತು, ಅಲ್ವೇ? (ಕಳೆದುಹೋದದ್ದು ಯಾರು? ನೀವಾ ಅಥವಾ ಬ್ಯಾಟಾ? ಅಥವಾ ಬ್ಯಾಟ್‌ ಯಾವಾಗ ರೂಮ್‌ ಕ್ಲೀನ್‌ ಮಾಡಲಿಕ್ಕಾರಂಭಿಸಿದ್ದು?)
  • ಆಫೀಸಿಗೆ ಹೊಸ ಶರ್ಟ್‌ ಹಾಕಿಕೊಂಡು ಹೋಗುತ್ತೇನೆ. (ಪರವಾ ಇಲ್ವೆ, ಆಫೀಸಿನ ಕಟ್ಟಡಕ್ಕೆ ಸರಿಹೊಂದುವಷ್ಟು ದೊಡ್ಡ ಶರ್ಟನ್ನು ಅದಾವ ದರ್ಜಿ ಹೊಲಿದುಕೊಟ್ಟನೊ!)
  • ನ್ಯೂಸ್‌ಪೇಪರ್‌ ಓದುತ್ತಿದ್ದಾಗ ಬೆಕ್ಕು ಮೇಜಿಂದ ಕೆಳಗೆ ಹಾರಿತು. (ಬೆಕ್ಕು ಸಹ ನ್ಯೂಸ್‌ಪೇಪರ್‌ ಓದುತ್ತದಾ? ಅಥವಾ ಅದರಲ್ಲಿನ ಟಾಮ್‌ ಎಂಡ್‌ ಜೆರ್ರಿ ಕಾರ್ಟೂನನ್ನು ಮಾತ್ರವೇ ನೋಡುತ್ತದಾ?)
  • ವಿಚಿತ್ರಾನ್ನ ಓದಿ ಮುಗಿಸಿದ ಮೇಲೆ ಟೆಲಿಫೋನ್‌ ಗಂಟೆ ಬಾರಿಸಿತು. (ಮನುಷ್ಯರು ಮಾತ್ರ ವಿಚಿತ್ರಾನ್ನ ಓದುತ್ತಾರೆ ಅಂದ್ಕೊಂಡಿದ್ದೆ, ಟೆಲಿಫೋನ್‌ ಸಹ ಓದುತ್ತದೆ ಅಂದ್ರೆ ಅದು ತೀರಾ ಆಯ್ತು, ನೋ ನೋ!)

* * *

ಏನೇ ಹೇಳಿ, ಕನ್ನಡ ಭಾಷೆಯಲ್ಲಿ ಕಾಣಸಿಗುವ ಈ ಆಭಾಸಗಳು ಎಷ್ಟೋ bearable. ಯಾಕಂದ್ರೆ ಇಂಗ್ಲಿಷ್‌ನಲ್ಲಾದರೆ, He kicked that ball barely twenty yards ಅನ್ನೋದನ್ನು He barely kicked that ball twenty yards ಎಂದರೆ ಆಗುವ ಎಂಬರಾಸ್‌ಮೆಂಟ್‌ ಎಷ್ಟು ನೋಡಿ!

ಅದ್ಸರಿ, ಮನಸ್ಸನ್ನು ಹಗುರಾಗಿಸುವುದಕ್ಕಾಗಿ ಇರುವ ವಿಚಿತ್ರಾನ್ನ ಇವತ್ತು ಮಾತ್ರ ಈ ಭೀಕರ ಕೊರೆತದಿಂದ ನಿಮ್ಮ ತಲೆ ಭಾರವಾಗಿಸಿಲ್ಲವೆಂದುಕೊಂಡಿದ್ದೇನೆ, ಯಾಕಂದ್ರೆ ಒಂದುವೇಳೆ ಹಾಗೆ ಆದರೆ ಆ ರಾಷ್ಟ್ರೀಯ ಭಾರವನ್ನು ಎತ್ತುವವರಾರು?

- srivathsajoshi@yahoo.com

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more