ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು, ಆರು, ಒಂಬತ್ತು !

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

ಇದೇನಪ್ಪಾ ಎಲ್ಲಬಿಟ್ಟು ಮೂರಂದ್ಲ ಮೂರು ಮೂರೆರಡ್ಲ ಆರು ಮಗ್ಗಿ ಶುರುವಾಯ್ತೇ ಎಂದು ಆಶ್ಚರ್ಯವಾಗಿದೆ ನಿಮಗೆ, ಅಲ್ಲವೇ? ಈವಾರದ ವಿಚಿತ್ರಾನ್ನದಲ್ಲಿ ನವರಾತ್ರಿ ವಿಶೇಷವಾಗಿ ಕಡಲೆ ಉಸಳಿಯೇನಾದರೂ ಇರಬಹುದೆಂಬ ನಿಮ್ಮ ಊಹೆಗೆ ತಣ್ಣೀರೆರಚಿ ಮಗ್ಗಿಯ ಕಬ್ಬಿಣದಕಡಲೆ ಹಂಚೋಣವೆಂದರೆ ಏನನ್ಯಾಯ!

ಹಾಗೇನಿಲ್ಲ, ಇವತ್ತು ಜಿಗ್‌-ಸಾ ಪಜಲ್‌ ಜೋಡಿಸಿದಂತೆ ಸಂಚಿಕೆಯನ್ನು ಹೆಣೆಯಬೇಕೆಂದುಕೊಂಡಿದ್ದೇನೆ. ಜೊತೆಜೊತೆಗೇ ವಿಚಿತ್ರಾನ್ನ ಅಂಕಣಕ್ಕೆ ವಿಷಯಗಳನ್ನು ಹೇಗೆ ಎತ್ತಿಕೊಳ್ಳಲಾಗುತ್ತದೆ, ಶೀರ್ಷಿಕೆಗಳನ್ನು ಎಲ್ಲಿಂದ, ಹೇಗೆ ಹೊಸೆಯಲಾಗುತ್ತದೆ ಇತ್ಯಾದಿ ಸಂಗತಿಗಳ ಅರಿವೂ ನಿಮಗೊಂದಿಷ್ಟು ಆಗುತ್ತದೆ.

ಈ ವಾರಕ್ಕೆ ವಿಚಿತ್ರಾನ್ನ ಮೂರು ವರ್ಷಗಳನ್ನು ಪೂರೈಸಿದೆ. ಹಾಗಾಗಿ ಆ ಬಗ್ಗೆ ಸ್ವಲ್ಪ ಬ(ಕೊ)ರೆಯಬೇಕು. ಮತ್ತೆ ಈ ವಾರವೇ ನವರಾತ್ರಿ ಹಬ್ಬದ ಪರ್ವಕಾಲ - (ಇವತ್ತು ದುಗಾಷ್ಟಮಿ ಮತ್ತು ಮಹಾನವಮಿ, ನಾಳೆ ವಿಜಯದಶಮಿ) ಬಂದಿದೆ. ಅದರ ಪ್ರಸ್ತಾಪವೂ ಬೇಕು. ಸಾಧ್ಯವಾದರೆ ಒಂದಾದರೂ ಉಲ್ಲೇಖ ಮೈಸೂರಿನದು ಬೇಕು (ಕೊನೇಪಕ್ಷ ‘ಮೈಸೂರು ದಸರಾ... ಎಷ್ಟೊಂದು ಸುಂದರಾ...’ ಎಂಬ ಚಿತ್ರಗೀತೆಯಾದರೂ). ಜತೆಯಲ್ಲೇ ಓದುಗಮಿತ್ರರೊಬ್ಬರು ನವರಾತ್ರಿ ವಿಶೇಷಕ್ಕೆಂದು ‘ಹುಲಿ ವೇಷ’ದ ಬಗ್ಗೆ ಒಂದು ವಿಚಿತ್ರಾನ್ನ ಬೇಯಿಸಿ ಎಂದು ಆದೇಶ ಬೇರೆ ನೀಡಿದ್ದಾರೆ; ಅದನ್ನೂ ಗೌರವಿಸಬೇಕು, ಅವರ ಬೇಡಿಕೆಯನ್ನೂ ಈಡೇರಿಸಬೇಕು.

ಅಂತೂ ಸಾಮಗ್ರಿ ಬೇಕಾದಷ್ಟು ಆಯ್ತು. ಇನ್ನು ಶೀರ್ಷಿಕೆ? ಅಂಕಣಕ್ಕೆ ಮೂರು ವರ್ಷ ತುಂಬಿದ ಸಂಭ್ರಮಕ್ಕಾಗಿ ‘ಮೂರು’, ನವರಾತ್ರಿಯ ಸಡಗರ-ಸಂಭ್ರಮವಿರುವುದರಿಂದ ‘ಒಂಬತ್ತು’; ನಡುವಿನ ಆರಕ್ಕೆ ಏನು ಮಾಡುವುದು? ಹುಲಿವೇಷಕ್ಕೂ ಆರಕ್ಕೂ ಏನಿದೆ ಸಂಬಂಧ - ನನಗ್ಗೊತ್ತಿದ್ದಂತೆ ಏನೂ ಇಲ್ಲ. ಅದೇ ಇಂದಿನ ಜಿಗ್‌-ಸಾ ಪಜಲ್‌! ಮೂರು-ಆರು-ಒಂಬತ್ತು ಎಂಬ ಶೀರ್ಷಿಕೆಯನ್ನಿಟ್ಟುಕೊಂಡೂ ಇವತ್ತಿನ ಎಲ್ಲ ವಿಷಯಗಳನ್ನು ಹೇಗೆ ಪೋಣಿಸುವುದು?

ಹೇಗೆ, ನೋಡೋಣ!

*

ಅಕ್ಟೋಬರ್‌ 15, 2002ರಂದು ಮಂಗಳವಾರ ಆರಂಭವಾದ ವಿಚಿತ್ರಾನ್ನ ಅಂಕಣ ಈ ವಾರದ ಸಂಚಿಕೆಯಾಂದಿಗೆ ಮೂರು ವರ್ಷಗಳ ಕಾಲ ತಡೆರಹಿತವಾಗಿ ಮೂಡಿಬಂದ ದಾಖಲೆ ಸಾಧಿಸಿದೆ. 52 ಇನ್‌ಟು 3 ಮತ್ತು ಅಧಿಕವರ್ಷದ್ದೊಂದು ಹೀಗೆ 157 ವಾರಗಳ ಸಮಾರಾಧನೆ. ಅಷ್ಟೂ ತುತ್ತುಗಳು ಮೃಷ್ಠಾನ್ನವೆಂದೇ ಏನೂ ಇರಲಿಲ್ಲ ಬಿಡಿ. ಕೆಲವು ಪಥ್ಯದ ಆಹಾರದಂತೆ ರುಚಿರಹಿತವೆನಿಸಿದರೆ ಕೆಲವು ಅರೆಬೆಂದದ್ದು, ಆಗೊಮ್ಮೆ ಈಗೊಮ್ಮೆ ಸೀದುಹೋಗಿದ್ದೂ ಇದೆ. ಆದರೆ ಸರಾಸರಿ ತೆಗೆದರೆ ಸ್ವಾದಿಷ್ಟತೆಯ ಮಟ್ಟ ಅಂಥಾಪ್ರಮಾಣದಲ್ಲೇನೂ ಏರುಪೇರಾಗಿಲ್ಲವೆಂಬುದು ವಾರವಾರವೂ ಓದುಗರಿಂದ ಬರುವ ಪತ್ರಮಹಾಪೂರದಿಂದ ಸಾಬೀತಾಗಿದೆ.

ಏತನ್ಮಧ್ಯೆ ವಿಚಿತ್ರಾನ್ನದ ಮೊದಲ 126 ಸಂಚಿಕೆಗಳ ಸಂಕಲನ ಪುಸ್ತಕರೂಪದಲ್ಲೂ ಬಂದಿದೆ. ಪುಸ್ತಕಕ್ಕೆ ಕರ್ನಾಟಕದಲ್ಲೂ ಇಲ್ಲಿ ಅಮೆರಿಕದಲ್ಲೂ ಒಳ್ಳೆಯ ಪ್ರತಿಕ್ರಿಯೆ ಕಂಡುಬರುತ್ತಿದೆ. ಬೆಂಗಳೂರಿನಲ್ಲಿ ‘ಅಂಕಿತ ಪುಸ್ತಕ’, ನವಕರ್ನಾಟಕ ಮೊದಲಾದ ಪುಸ್ತಕದಂಗಡಿಗಳಲ್ಲಿ ವಿಚಿತ್ರಾನ್ನ ಪ್ರತಿಗಳು ಮಾರಾಟವಾಗುತ್ತಿವೆ. ನವಕರ್ನಾಟಕದಲ್ಲಿ ‘ಸ್ಟಾಕ್‌ ಮುಗಿದಿದೆ, ಇನ್ನೊಮ್ಮೆ ತರಿಸುತ್ತೇವೆ’ ಎಂದು ಕೇಳಿಸಿಕೊಂಡು ಖಾಲಿಕೈಯಿಂದ ವಾಪಸಾದವರೊಬ್ಬರು ಈಮೈಲ್‌ ಬರೆದಿದ್ದಾರೆ. ಇಲ್ಲಿ ಅಮೆರಿಕದಲ್ಲಿ ಈವರೆಗೆ 115 ಪ್ರತಿಗಳು ಮಾರಾಟವಾಗಿವೆ (ಇದು, ಅಮೆರಿಕದಲ್ಲಿ ನೂರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದ ಮೊದಲ ಕನ್ನಡಪುಸ್ತಕವೆಂಬ ದಾಖಲೆಯೂ ಇರಬಹುದು!) ಇನ್ನೂ ಆರ್ಡರ್‌-ಈಮೈಲ್ಸ್‌ ಬರುತ್ತಲೇ ಇವೆ.

ಅಂತೂ ಈ ಮೂರು ವರ್ಷಗಳಲ್ಲಿ ವಿಚಿತ್ರಾನ್ನ ಬರೀ ಒಂದು ಪತ್ರಿಕಾ-ಅಂಕಣವಾಗಷ್ಟೇ ಉಳಿಯದೆ ಒಂದು ಸಣ್ಣಮಟ್ಟಿನ ‘ಫಿನೊಮೆನನ್‌’ ಆಗಿ ರೂಪುಗೊಂಡಿದೆ ಎಂದು ಹೇಳಿದರೆ ಕಾಲರ್‌ ಎತ್ತಿಹೇಳಿದ್ದೆಂದು ತಿಳಿಯಬೇಕಾದ್ದಿಲ್ಲ. (ಯಾಕಂದ್ರೆ ಅಡಿಗೆಭಟ್ರಿಗೆ ಎಲ್ಲಿಂದ ಕಾಲರ್‌?) ಆದರೆ ಒಂದು ಮಾತು. ಈ ಮೂರು ವರ್ಷಗಳಲ್ಲಿನ ವಿಚಿತ್ರಾನ್ನ ಅಡುಗೆ ವಿಜೃಂಭಣೆಗೆ ಈ ಅಡಿಗೆಭಟ್ಟ ಎಷ್ಟು ಅಭಿನಂದನೀಯನೋ, ಪ್ರೀತಿಯಿಂದ ಮಾಡಿಬಡಿಸಿದ ಅಡುಗೆಯನ್ನು ಭುಂಜಿಸಿ ಇನ್ನಷ್ಟು ಪ್ರೀತಿಯನ್ನು ವ್ಯಕ್ತಪಡಿಸಿದ ನೀವೆಲ್ಲರೂ ಅಷ್ಟೇ ಅಭಿನಂದನೀಯರು. ಮೂರು ತುಂಬಿದ ಆನಂದ ಆತ್ಮೀಯತೆಗಳು ನೂರುಕಾಲವೂ ಇರಲಿ ಎಂದು ಸವಿನಯವಾಗಿ ಆಶಿಸೋಣ.

*

ಮೈಸೂರಿನಿಂದ ಓದುಗಮಿತ್ರರೊಬ್ಬರು ಮೊನ್ನೆ ಒಂದು ಈಮೈಲ್‌ ಬರೆದು ತಿಳಿಸಿದ್ದಾರೆ - ನನ್ನ ಹೆಸರು ಸನತ್‌. ಕನ್ನಡ ಸಾಹಿತ್ಯಾಭಿಮಾನಿ. ನಿಮ್ಮ ಅಂಕಣವನ್ನು ಪ್ರತಿವಾರ ಓದುತ್ತೇನೆ. ನಾನು ಇಲ್ಲಿನ ಎನ್‌.ಐ.ಇ ಕಾಲೇಜಲ್ಲಿ ಇಂಜನಿಯರಿಂಗ್‌ ಓದುತ್ತಿರುವಾಗ -‘ಮೈಸೂರ್‌ ಇಂಜನಿಯರ್‌’ ವಿದ್ಯಾರ್ಥಿಪತ್ರಿಕೆಯ ಸಂಪಾದಕಮಂಡಲಿಯಲ್ಲಿದ್ದೆ. ಇದೀಗ ನಾನು ಇಂಜನಿಯರಿಂಗ್‌ ಮುಗಿಸಿ ಇನ್ಫೊಸಿಸ್‌ನಲ್ಲಿ ಉದ್ಯೋಗ ಪಡೆದಿದ್ದೇನೆ. ನನ್ನ ಮೊದಲ ಸಂಬಳದಿಂದ ಒಂದಿಷ್ಟು ಕನ್ನಡಪುಸ್ತಕಗಳನ್ನು ಖರೀದಿಸಬೇಕೆಂದು ಮೊದಲೇ ಯೋಜಿಸಿದ್ದೆ, ಅದೇ ಪ್ರಕಾರ ಮೊನ್ನೆ ನನ್ನ ಸಂಪಾದನೆಯ ದುಡ್ಡು ಕೈಗೆ ಬಂದಾಗ ಪುಸ್ತಕದಂಗಡಿಗೆ ಹೋಗಿ ವಿಚಿತ್ರಾನ್ನ ಪುಸ್ತಕವನ್ನು ಕೊಂಡುಕೊಂಡೆ. ಪುಸ್ತಕವನ್ನೋದಿ ಅಮೋಘ ತೃಪ್ತಿಯಾಯ್ತು!

ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತ ಸನತ್‌ ಅವರಿಗೆ ನಾನು ಈಮೈಲಿಸಿದೆ. ಅದಕ್ಕವರು ಮತ್ತೆ ಬರೆದರು: ‘ಜೋಶಿಯವರೆ, ಈಗ ನವರಾತ್ರಿ ಹಬ್ಬ ಶುರುವಾಗಿದೆಯಲ್ಲವೇ, ಮಂಗಳೂರು ಕಡೆ ಈ ಸೀಸನ್‌ನಲ್ಲಿನ ವಿಶೇಷವಾದ ‘ಹುಲಿವೇಷ’ದ ಬಗ್ಗೆ ನೀವು ವಿಚಿತ್ರಾನ್ನದಲ್ಲಿ ಬರೆಯುವಿರಾ, ಪ್ಲೀಸ್‌, ಬರೀರಿ!’

ಆಯ್ತು, ಬರೆಯುತ್ತೇನೆ ಎಂದು ಒಪ್ಪಿಕೊಂಡ ಮೇಲೆ ಬರೆಯಲೇಬೇಕಾಗಿದೆ. ಇಲ್ಲಾಂದರೆ ಸನತ್‌ ಅವರಿಗೆ ಬೇಜಾರಾಗದಿದ್ದರೂ ಅವರ ಕಲ್ಪನೆಯ, ಬಾಲ್ಯದ ನೆನಪುಗಳ ‘ಹುಲಿ’ಗೆ ಬೇಸರವಾಗಬಹುದು. ಕೊಟ್ಟ ಭಾಷೆಗೆ ತಪ್ಪಲಾರೆನು... ಎಂದು ಪುಣ್ಯಕೋಟಿಯೇ ಅರ್ಭುತನ ಬಳಿಗೆ ವಾಪಸ್‌ ಹೋಯ್ತಂತೆ, ನಾವು ‘ ಹುಲಿ’ಗೆ ಕೊಟ್ಟ ಮಾತನ್ನು ತಪ್ಪಲಿಕ್ಕಾಗುತ್ತದೆಯೇ?

ಹುಲಿವೇಷ ನಮ್ಮ ಕರಾವಳಿ ಜಿಲ್ಲೆಗಳಲ್ಲಿ ಒಂದು ಮನರಂಜನೆಯ ನಮೂನೆ. ಸುಮಾರು ಕೃಷ್ಣಜನ್ಮಾಷ್ಟಮಿಯಿಂದ ಹಿಡಿದು ದೀಪಾವಳಿಯ ತನಕ ಹಬ್ಬ-ಉತ್ಸವಗಳ ಸಂದರ್ಭದಲ್ಲಿ ಏಳೆಂಟು ಮಂದಿಯ ಪಂಗಡಗಳು ಹುಲಿವೇಷ ಹಾಕಿ ಕುಣಿಯುತ್ತ ಮನೆಮನೆಗೆ ಹೋಗಿ ಮಕ್ಕಳ ಮನರಂಜಿಸಿ ಅಲ್ಲಿ ದುಡ್ಡು, ದವಸಧಾನ್ಯ, ಬಟ್ಟೆಬರೆ ಏನು ಕೊಡುತ್ತಾರೊ ಅದನ್ನು ಸಂಪಾದಿಸುವುದು (ಕೆಲವೊಮ್ಮೆ ಸ್ವಲ್ಪ ಕಾಡಿ ಬೇಡಿ, ‘ಹುಲಿ’ಯ ಆರ್ಭಟವನ್ನೂ ತೋರಿಸಿ). ತಂಡದಲ್ಲಿ ನಾಲ್ಕೈದು ಮಂದಿ ಕುಸ್ತಿಪಟುಗಳಂತೆ, ಚಡ್ಡಿ ಬಿಟ್ಟರೆ ಬೇರೆ ಬಟ್ಟೆಯೇನೂ ಧರಿಸದೆ ಮೈಗೆಲ್ಲ ಹುಲಿಯಂತೆ ಬಣ್ಣ ಹಚ್ಚಿಕೊಳ್ಳುತ್ತಾರೆ. ಉಳಿದ ಒಂದೆರಡು ಮಂದಿ ತಮಟೆ ಅಥವಾ ಡೋಲು ಬಡಿಯಲಿಕ್ಕೆ. ಕುಣಿತ ಎಂದರೆ ಬರೀ ಮನಬಂದಂತೆ ಕುಣಿಯುವುದಲ್ಲ, ಪಕ್ಕಾ ಹುಲಿಗಳ ಗತ್ತು, ಗಾಂಭೀರ್ಯ, ಠೀವಿಗಳು ಅದರಲ್ಲಿ ಅಭಿವ್ಯಕ್ತವಾಗುತ್ತವೆ. ಕಾಡಲ್ಲಿ ಎರಡು ಹುಲಿಗಳು ಪರಸ್ಪರ ಎದುರಾದರೆ ಅವುಗಳ ಮುಖಾಮುಖಿ ಹೇಗಿರುತ್ತದೆ, ಹಸಿದ ಹುಲಿ, ಯಾವುದಾದರೂ ಮಿಕದ ಬೇಟೆಯ ನಂತರ ತೃಪ್ತವಾದ ಹುಲಿ, ಮರಿಯನ್ನು ಲಾಲಿಸುವ ತಾಯಿಹುಲಿ - ಹೀಗೆ ವೈವಿಧ್ಯವಿರುತ್ತದೆ ಪ್ರದರ್ಶನದಲ್ಲಿ.

ದಕ್ಷಿಣಕನ್ನಡದ ಪ್ರಸಿದ್ಧ ‘ಭೂತಕೋಲ’ದಷ್ಟಲ್ಲದಿದ್ದರೂ ಈ ಹುಲಿವೇಷದ ಬಗ್ಗೆಯೂ ಜನಸಾಮಾನ್ಯರಿಗೆ ಒಂಥರಾ ಭಯಭಕ್ತಿಗಳಿರುತ್ತವೆ. ವೇಷದ ಹುಲಿಗಳಲ್ಲಿ ದೈವಿಕಶಕ್ತಿಯಿದೆಯೆಂಬ ನಂಬಿಕೆಯಿರುತ್ತದೆ (ವೇಷ ಹಾಕುವ ಮಂದಿಯ ಪೈಕಿ ಕೆಲವರು ‘ಸುರಾಪಾನ’ವನ್ನೂ ಮಾಡಿದ್ದರೆ ಅವರಲ್ಲಿ ಸುರಶಕ್ತಿಯಿರುತ್ತದೊ ಅಸುರಶಕ್ತಿಯಿರುತ್ತದೊ ಹೇಳಲಿಕ್ಕಾಗುವುದಿಲ್ಲ, ಆ ಮಾತು ಬೇರೆ). ನಂಬಿಕೆ-ಭಯಭಕ್ತಿಗಳ ವಿಷಯ ಹೇಗೇ ಇದ್ದರೂ ಚಿಕ್ಕಮಕ್ಕಳಿಗೆಲ್ಲ ಹುಲಿವೇಷ ನೋಡುವುದೆಂದರೆ ಅದೊಂದು ಮಜಾ. ಅದೆಷ್ಟು ಪ್ರಭಾವ ಬೀರಿರುತ್ತದೆಯೆಂದರೆ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಗಳೇನಾದರೂ ನಡೆದರೆ ಒಂದಾದರೂ ಎಂಟ್ರಿ ಹುಲಿವೇಷ ಕುಣಿತದ ಚಿತ್ರದ್ದೂ ಇದ್ದೇ ಇರುತ್ತದೆ!

ಹಬ್ಬಗಳ ಸೀಸನ್‌ನಲ್ಲಿ ಮಾತ್ರವಲ್ಲದೆ ಜಾತ್ರೆ, ಉತ್ಸವಗಳಲ್ಲೂ ಮೆರವಣಿಗೆಗಳಲ್ಲೂ ಅಥವಾ ಶಾಲಾಕಾಲೇಜುಗಳಲ್ಲಿ ಛದ್ಮವೇಷ ಸ್ಪರ್ಧೆಗಳಲ್ಲೂ ಹುಲಿವೇಷ ಕಾಣಿಸಿಕೊಳ್ಳುವುದುಂಟು (ಅಭ್ಯಾಸವಿಲ್ಲದೆ ಮೋಜಿಗೆಂದು ಪೈಂಟ್‌ ಹಚ್ಚಿಕೊಂಡು ಉರಿ ತಾಳಲಾರದೆ ಒದ್ದಾಡುವುದೂ ಉಂಟು). ಮೆರವಣಿಗೆಗಳಲ್ಲಿ ಯಕ್ಷಗಾನ, ಭೂತಕೋಲ ಬಿಟ್ಟರೆ ದ.ಕ ಜಿಲ್ಲೆಯ ಪ್ರಾತಿನಿಧ್ಯ ಹೆಚ್ಚಾಗಿ ಹುಲಿವೇಷವೇ ಆಗಿರುತ್ತದೆ. ಈ ಪರಿಯ ಹುಲಿವೇಷ ಎಷ್ಟು ಪ್ರಸಿದ್ಧಿಗಳಿಸಿದೆಯೆಂದರೆ ನ್ಯಾಷನಲ್‌ ಜಿಯಾಗ್ರಫಿ ಮ್ಯಾಗಜಿನ್‌ನಲ್ಲಿ ಕೆಲವರ್ಷಗಳ ಹಿಂದೆ ಒಮ್ಮೆ ಹುಲಿವೇಷದ ಬಗ್ಗೆಯೇ ಮೂರ್ನಾಲ್ಕು ಪುಟಗಳ ಸಚಿತ್ರ ಲೇಖನ ಬಂದಿತ್ತು!

‘ಸಿಕ್ಸ್‌ ಫ್ಲಾಗ್ಸ್‌’ ಎಂದು ಕೇಳಿ/ನೋಡಿ ಗೊತ್ತಿರಬಹುದು ನಿಮಗೆ. ಇಲ್ಲಿ ಅಮೆರಿಕದಲ್ಲಿ ಜನಪ್ರಿಯವಾದ ಅಮ್ಯುಸ್‌ಮೆಂಟ್‌ ಪಾರ್ಕ್‌ಗಳ ಸರಣಿ ಅದು. 1961ರಲ್ಲಿ ಟೆಕ್ಸಸ್‌ನ ಆರ್ಲಿಂಗ್‌ಟನ್‌ನಲ್ಲಿ ಶುರುವಾದ ಮೊಟ್ಟಮೊದಲ ಮನೋರಂಜನಾ ಪಾರ್ಕ್‌ ಈಗ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಒಟ್ಟು 30 ಮತ್ತು ಪಕ್ಕದ ಕೆನಡಾ ಮತ್ತು ಮೆಕ್ಸಿಕೊಗಳಲ್ಲಿ ತಲಾ ಒಂದೊಂದು ‘ಸಿಕ್ಸ್‌ ಫ್ಲಾಗ್ಸ್‌’ ಪಾರ್ಕ್‌ಗಳಿವೆ. ರೋಮಾಂಚಕ ರೈಡ್‌ಗಳ, ರೋಲರ್‌ಕೋಸ್ಟರ್‌ಗಳ ಎತ್ತರ-ಆಳ-ವೈವಿಧ್ಯಗಳ ವಿಷಯದಲ್ಲಿ ಹೆಚ್ಚಿನ ದಾಖಲೆಗಳು ಸಿಕ್ಸ್‌ಫ್ಲಾಗ್ಸ್‌ ಬಗಲಿಗೆ ಇವೆ.

‘ಸಿಕ್ಸ್‌ ಫ್ಲಾಗ್ಸ್‌’ಗೆ ಆ ಹೆಸರು ಯಾಕೆ ಬಂತು? ಯಾವುವು ಆ ಆರು ಬಾವುಟಗಳು? ಇದಕ್ಕೆ ಸ್ವಲ್ಪ ಅಮೆರಿಕ ಚರಿತ್ರೆಯಾಳಕ್ಕೆ ಹೊಕ್ಕು ನೋಡಬೇಕು. ಅಮೆರಿಕದ ಅತಿ ದೊಡ್ಡ ಸಂಸ್ಥಾನವಾದ ಟೆಕ್ಸಸ್‌ ವಿವಿಧ ದೇಶಗಳ ಆಳ್ವಿಕೆಯ ನಂತರವಷ್ಟೇ ಸಂಯುಕ್ತ ಸಂಸ್ಥಾನಗಳ ಪೈಕಿ ಒಂದಾದದ್ದು. ಫ್ರಾನ್ಸ್‌, ಸ್ಪೈನ್‌, ಮೆಕ್ಸಿಕೊ, ರಿಪಬ್ಲಿಕ್‌ ಆಫ್‌ ಟೆಕ್ಸಸ್‌, ಕಾನ್ಫೆಡರೇಟ್‌ ಸ್ಟೇಟ್ಸ್‌ ಆಫ್‌ ಅಮೆರಿಕ ಮತ್ತು ಇದೀಗ ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೆರಿಕ - ಹೀಗೆ ಇತಿಹಾಸದ ಬೇರೆಬೇರೆ ಕಾಲಘಟ್ಟಗಳಲ್ಲಿ ಟೆಕ್ಸಸ್‌ ಮೇಲೆ ಆರು ವಿವಿಧ ಬಾವುಟಗಳು ಹಾರಾಡಿವೆ. ಅದರ ನೆನಪಿಗಾಗಿಯೇ ಪಾರ್ಕ್‌ ಸ್ಥಾಪಕ ಆಂಗಸ್‌ ಜಿ ವೈನ್‌ ತನ್ನ ಹೊಸ ಯೋಜನೆಗೆ ‘ಸಿಕ್ಸ್‌ ಫ್ಲಾಗ್ಸ್‌’ ಹೆಸರನ್ನಿಟ್ಟದ್ದು. ಇನ್ನೂ ಕರಾರುವಾಕ್ಕಾಗಿ ಹೇಳಬೇಕೆಂದರೆ ಆಂಗಸ್‌ ವೈನ್‌ ಮೊದಲಿಗೆ ಇಟ್ಟಿದ್ದ ಹೆಸರು ‘ಟೆಕ್ಸಸ್‌ ಅಂಡರ್‌ ಸಿಕ್ಸ್‌ ಫ್ಲಾಗ್ಸ್‌’ ಎಂದು. ಅವನ ಹೆಂಡತಿಗೆ ಅದು ಸರಿಕಾಣಲಿಲ್ಲವಂತೆ. ಅವಳು, ಟೆಕ್ಸಸ್‌ ಯಾವುದರ ‘ಅಂಡರ್‌’ ನಲ್ಲಿಲ್ಲ ಎಂದು ಟೆಕ್ಸಸ್‌ ಬಗ್ಗೆ ತನ್ನ ಉತ್ಕಟ ಅಭಿಮಾನವನ್ನು ವ್ಯಕ್ತಪಡಿಸಲಾಗಿ ಅಂಗಸ್‌ ವೈನ್‌ ತನ್ನ ಪಾರ್ಕ್‌ಗೆ ‘ಸಿಕ್ಸ್‌ ಫ್ಲಾಗ್ಸ್‌ ಒವರ್‌ ಟೆಕ್ಸಸ್‌’ ಎಂದು ಹೆಸರಿಟ್ಟ. (ಅಳಿಯ ಅಲ್ಲ ಮಗಳ ಗಂಡ ಎಂಬಂತೆ ಆಯ್ತಲ್ಲವೆ ಅದು?)

ನ್ಯೂಜೆರ್ಸಿ ಬಳಿಯ ಜಾಕ್ಸನ್‌ನಲ್ಲಿರುವ ಗ್ರೇಟ್‌ ಎಡ್ವೆಂಚರ್‌ ಪಾರ್ಕ್‌ ಸಿಕ್ಸ್‌ ಫ್ಲಾಗ್ಸ್‌ ಪಾರ್ಕ್‌ಗಳ ಪೈಕಿಯೇ ಅತಿದೊಡ್ಡದು ಮತ್ತು ಪ್ರಪಂಚದಲ್ಲೇ ಅತಿ ವಿಸ್ತಾರವಾದ ರೀಜನಲ್‌ ಥೀಮ್‌ಪಾರ್ಕ್‌ ಎಂಬ ಖ್ಯಾತಿಯದು. ಅದರಲ್ಲಿ ಸುಮಾರು 350 ಎಕರೆ ವಿಸ್ತೀರ್ಣದ ಲಯನ್‌ ಸಫಾರಿ (ಡ್ರೈವ್‌-ಥ್ರೂ) ಇದೆ. ನ್ಯೂಜೆರ್ಸಿ ಸಿಕ್ಸ್‌ಫ್ಲಾಗ್ಸ್‌ನಲ್ಲಿರುವ ‘ಕಿಂಗ್‌ಡಾ ಕಾ’ ಪ್ರಪಂಚದಲ್ಲೇ ಅತ್ಯಂತ ವೇಗದ ಮತ್ತು ಅತಿಹೆಚ್ಚು ಎತ್ತರದ ರೋಲರ್‌ಕೋಸ್ಟರ್‌ ಎಂಬ ಹೆಗ್ಗಳಿಕೆ ಪಡೆದಿದೆ.

ಇಂತಿರ್ಪ ಗ್ರೇಟ್‌ ಎಡ್ವೆಂಚರ್‌ ನ್ಯೂಜೆರ್ಸಿ ಸಿಕ್ಸ್‌ಫ್ಲಾಗ್ಸ್‌ ಪಾರ್ಕಲ್ಲಿ 2005ರ ಸೀಸನ್‌ನಲ್ಲಿ ‘ಟೆಂಪಲ್‌ ಆಫ್‌ ದ ಟೈಗರ್‌’ ಎಂಬ ಹೊಸ ಆಕರ್ಷಣೆಯನ್ನು ಸೇರಿಸಿದ್ದರು. ಸುಮಾರು 33000 ಚದರ ಅಡಿಗಳಷ್ಟು ವಿಸ್ತೀರ್ಣದ ಜಾಗದಲ್ಲಿ, ಹುಲಿಗಳ ವಿವಿಧ ನಮೂನೆಯ ಎಕ್ರೊಬಾಟಿಕ್ಸ್‌, ಅಥ್ಲೆಟಿಕ್‌ ಕಲಾಪ್ರದರ್ಶನ. ಅದ್ದೂರಿ ವೇದಿಕೆಯ ಮೇಲೆ ವಿವಿಧ ನೃತ್ಯಪ್ರದರ್ಶನ ಇತ್ಯಾದಿ. ಅದಕ್ಕಾಗಿಯೇ ಬಂಗಾಲ್‌ ಟೈಗರ್‌ಗಳ ವಿಶೇಷ ಪಡೆ ಮತ್ತು ಆ ಹುಲಿಗಳನ್ನು ಪಳಗಿಸಿದ ನುರಿತ ತರಬೇತುದಾರರನ್ನೂ ಕರೆಸಿದ್ದರು. ಕಾಡು-ಗುಹೆಗಳನ್ನು ಹೋಲುವ ನೈಸರ್ಗಿಕ ಸೆಟ್ಟಿಂಗ್‌. ಅಬ್ಬರದ ಸಂಗೀತವಾದ್ಯಗಳು. ಅಂತೂ ಬ್ರಾಡ್‌ವೇ ಶೈಲಿಯನ್ನೂ ಮೀರುವಂಥ ಅದ್ಭುತ ಪ್ರದರ್ಶನ.

ಟೆಂಪಲ್‌ ಆಫ್‌ದ ಟೈಗರ್‌ ಶೋದಲ್ಲಿ ಒಂದು ವಿಶೇಷ ಆಕರ್ಷಣೆ ‘ ಹುಲಿವೇಷ - ಟೈಗರ್‌ ಡಾನ್ಸರ್ಸ್‌’! ಹೌದು, ಅದೇ ಮಂಗಳೂರಿನ ಹುಲಿವೇಷ ಅಮೆರಿಕದ ಸಿಕ್ಸ್‌ಫ್ಲಾಗ್ಸ್‌ ಎಡ್ವೆಂಚರ್‌ ಪಾರ್ಕ್‌ ಶೋದಲ್ಲಿ! ಸ್ವಾರಸ್ಯವೆಂದರೆ ಸಿಕ್ಸ್‌ಫ್ಲಾಗ್ಸ್‌ನ ಪ್ಯಾಂಪ್ಲೆಟ್‌ಗಳಲ್ಲೂ ಅದನ್ನು ‘ಹುಲಿವೇಷ’ ಎಂದೇ ಗುರುತಿಸಿದ್ದಾರೆ, a unique form of folk dance symbolizing traditional reverence and worship of nature ಎಂದು ವಿವರಿಸಿದ್ದಾರೆ. ನಿಮಗೆ ಇನ್ನೂ ನಂಬಿಕೆ ಬರದಿದ್ದರೆ ಸಿಕ್ಸ್‌ಫ್ಲಾಗ್ಸ್‌ನ ಈ ವೆಬ್‌ಪುಟವನ್ನು ನೋಡಿ.

‘ಆರು’ ಮತ್ತು ‘ಹುಲಿವೇಷ’ವನ್ನು ನಾನು ಕನೆಕ್ಟ್‌ ಮಾಡಿದ್ದು ಈರೀತಿ, ಸಿಕ್ಸ್‌ ಫ್ಲಾಗ್ಸ್‌ ಮೂಲಕ!

*

ಒಂಬತ್ತು ದಿನಗಳ ಆಚರಣೆಯ, ಕರ್ನಾಟಕದ ನಾಡಹಬ್ಬ ನವರಾತ್ರಿಯ ವೈಭವ ವರ್ಣನೆ ಎಷ್ಟು ಮಾಡಿದರೂ ಸಾಲದು. ‘ನವರಾತ್ರಿ’ಯಲ್ಲಿ ನವ ಎಂದರೆ ಒಂಬತ್ತರ ಸಿಗ್ನಿಫಿಕೆನ್ಸ್‌ ಏನು? ಮಹಿಷಾಸುರನನ್ನು ಕೊಲ್ಲಲು ಚಾಮುಂಡಾಂಬೆಗೆ ಒಂಬತ್ತು ದಿನಗಳು ಬೇಕಾದವು, ಅವರಿಬ್ಬರ ಆ ಕಾಳಗ ಅಷ್ಟೊಂದು ಘನಘೋರವಾಗಿತ್ತು ಎಂದು ಯಾವುದೋ ಕಥೆಪುಸ್ತಕದಲ್ಲಿ ಓದಿದ ನೆನಪು. ಒಂಬತ್ತು ಅಹೋರಾತ್ರಿಗಳ ನಂತರದ ಈ ವಿಜಯದ ನೆನಪಾಗಿ ಒಂಬತ್ತು ದಿನಗಳ ಹಬ್ಬ. ಹಾಗೆಯೇ, ನವರಾತ್ರಿಯಲ್ಲಿ ದೇವಿಯ ಮೂರು ರೂಪಗಳ ಆರಾಧನೆ - ಮೊದಲ ಮೂರು ದಿನ ದುರ್ಗೆ ಅಥವಾ ಕಾಳಿ, ನಂತರದ ಮೂರು ದಿನ ಲಕ್ಷ್ಮಿ, ಕೊನೆಯ ಮೂರು ದಿನ ಸರಸ್ವತಿ - ಹೀಗೆ ಒಟ್ಟು ಒಂಬತ್ತು ದಿನಗಳ ಪೂಜೆ, ಪುನಸ್ಕಾರ.

ನವರಾತ್ರಿಯ ‘ನವ’ದ ಹೊರತಾಗಿಯೂ ಒಂಬತ್ತರ ಬಗ್ಗೆ ಬೇಕಷ್ಟು ವೈಶಿಷ್ಟ್ಯಗಳನ್ನು ಪಟ್ಟಿ ಮಾಡಬಹುದು. ನವಗ್ರಹಗಳು, ನವರಸಗಳು, ನವರತ್ನಗಳು ಇತ್ಯಾದಿತ್ಯಾದಿ. ಸಂಖ್ಯಾಶಾಸ್ತ್ರದಲ್ಲಂತೂ 9ಕ್ಕೆ ತುಂಬ ಸ್ಪೆಷಾಲಿಟಿ ಇದೆ, ಹಾಗೆಯೇ ಗಣಿತದಾಟ, ಜಾಣ್ಮೆಲೆಕ್ಕಗಳಲ್ಲೂ. ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಜನಪ್ರಿಯವಾಗುತ್ತಿರುವ ಸಂಖ್ಯಾಬಂಧದ ಜಪಾನಿ ಆಟ ‘ಸುಡೊಕು’ದಲ್ಲಿ ಒಂಬತ್ತು ಇನ್‌ಟು ಒಂಬತ್ತು ಗ್ರಿಡ್‌ನಲ್ಲಿ ಒಂದರಿಂದ ಒಂಬತ್ತರವರೆಗಿನ ಅಂಕೆಗಳನ್ನು ಸಾಲಿನಲ್ಲಿ/ಕಂಬದಲ್ಲಿ ಮತ್ತು ಒಂಬತ್ತು ಕೋಣೆಗಳ ಒಳಚಚ್ಚೌಕಗಳಲ್ಲಿ ಪುನರಾವರ್ತನೆಯಾಗದಂತೆ ತುಂಬಬೇಕು. ಅದ್ಭುತ ಬ್ರೈನ್‌ಟೀಸರ್‌ ಆಟ ಸುಡೊಕು.

ಒಂಬತ್ತರ ಬಗ್ಗೆ ಸವಿವರ ವಿಶ್ಲೇಷಣೆಯನ್ನು ಮುಂದೆ ಎಂದಾದರೂ ಮಾಡೋಣ. ಈಗ ಒಂಬತ್ತರ ಕುರಿತಂತೆ ಒಂದು ಜಾಣ್ಮೆಲೆಕ್ಕವನ್ನು ಪ್ರಸ್ತುತಪಡಿಸಿ ಇವತ್ತಿನ ಮೂರು-ಆರು-ಒಂಬತ್ತು ಸಂಚಿಕೆಯನ್ನು ಮುಗಿಸೋಣ. ‘ಒಂಬತ್ತರಲ್ಲಿ ಒಂದು ತೆಗೆದರೆ ಹತ್ತು, ಹೇಗೆ?’ ಎಂಬ ಜಾಣ್ಮೆಲೆಕ್ಕ ಮತ್ತದರ ಉತ್ತರವೂ ನಿಮಗೆ ಗೊತ್ತಿರಬಹುದು. ರೋಮನ್‌ ಅಂಕೆಗಳಲ್ಲಿ ಒಂಬತ್ತನ್ನು IX ಎಂದು ಬರೆದು ಅದರಲ್ಲಿ I ಅನ್ನು ತೆಗೆದರೆ ಉಳಿಯುವುದು X (= ಹತ್ತು).

ಅಂಥದೇ ಇನ್ನೊಂದು, ಇದಕ್ಕೆ ನಿಮಗೆ ಉತ್ತರ ಗೊತ್ತಿದ್ದರೆ ತಿಳಿಸಿ. ಒಂಬತ್ತು ಕಡ್ಡಿಗಳಿವೆ, ಒಂದನ್ನೂ ಮುರಿಯದೆ, ಹೊಸದಾಗಿ ಬೇರೊಂದನ್ನೂ ಸೇರಿಸಿಕೊಳ್ಳದೆ ಅವುಗಳಿಂದಲೇ ಹತ್ತು ಮಾಡುವುದು ಹೇಗೆ? ಯೋಚಿಸಿ. ವನ್‌, ಟು, ತ್ರೀ... ಟೆನ್‌ ಹೇಳುವುದರೊಳಗಾಗಿ ನಿಮಗೆ ಉತ್ತರ ಗೊತ್ತಾಗುತ್ತದೆ. ಬರೆದು ತಿಳಿಸಿ. ವಿಳಾಸ - [email protected].

ವಿಚಿತ್ರಾನ್ನದ ಮೈಲಿಗಲ್ಲುಗಳು :

ವಿಚಿತ್ರಾನ್ನಕ್ಕೆ 25ನೇ ವಾರ !
ಇದು ವಿಚಿತ್ರಾನ್ನದ ತುತ್ತು ನಂಬರ್‌ ಐವತ್ತು !
ವಕ್ರತುಂಡೋಕ್ತಿಗಳ ವಿನೋದ ಹಾವಳಿ !
ಬರಹ ನೂರು ನೂರು ತರಹ...!
ಬಸ್‌ನಲ್ಲಿ ಹೋಗೋಣ, ಬಸ್‌ ನೆನಪುಗಳ ಸವಿಯೋಣ!
ಬಾರಿಸು ಕನ್ನಡ ‘ಡುಂಡಿ’ಮವ...


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X