ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂದ ಆಚೆ ಯಿಂದ ಆಚೆ ಬಂದ ಮೇಲೆ!

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

ಕಳೆದ ವಾರದ ಸಂಚಿಕೆಯಲ್ಲಿ, ಭಾರವಾದ ಮನಸ್ಸಿಗೆ ಸಮಾಧಾನದ, ಭರವಸೆಯ ಚಿಂತನೆಯ ನಂತರ ಈ ವಾರವೂ ಶೀರ್ಷಿಕೆಯಲ್ಲಿ ಮತ್ತು ಪ್ರಥಮಾರ್ಧದಲ್ಲಿ ಸುನಾಮಿಯ ಪ್ರಭಾವವೇನೊ ಇದೆ; ಆದರೆ ನೋವಿನ ಛಾಯೆಯಲ್ಲೇ ಎಷ್ಟು ದಿನವೆಂದು ನಿಲ್ಲಬಹುದು? Life goes on… ತಾನೆ? ಚಿಂತನೆಯ ತಂಗುದಾಣದ ನಂತರ ಮತ್ತೆ ರಂಜನೆಯ ಹಳಿ ಹಿಡಿದಿದೆ ವಿಚಿತ್ರಾನ್ನ ಬಂಡಿ. ಅದೂ ಹೇಗಂತೀರಾ, ಪ್ರಕೃತಿ ವಿಕೋಪ ನಡೆದ ಪ್ರದೇಶದ ಹೆಸರಿನ ವ್ಯಾಖ್ಯಾನದೊಂದಿಗೇ ತನ್ನ ಎಂದಿನ ಲೈಟ್‌-ರೀಡಿಂಗ್‌ ಲೈಟ್‌-ರೈಡಿಂಗ್‌ ಪ್ರಯಾಣವನ್ನು ಮುಂದುವರೆಸಿದೆ!

* * *

‘ಬಂದ ಆಚೆ’ (Banda Aceh) - ಇಂಡೊನೇಷ್ಯಾದ ಉತ್ತರಭಾಗದ ಈ ಪ್ರದೇಶ ಅತ್ಯಧಿಕ ಪ್ರಮಾಣದಲ್ಲಿ ಜರ್ಝರಿತವಾದದ್ದು, ಸಾವು-ನೋವುಗಳನ್ನು ಅನುಭವಿಸಿದ್ದು. ಅಂತಾರಾಷ್ಟ್ರೀಯ ಮಾಧ್ಯಮಗಳೆಲ್ಲ ಬಂದ ಆಚೆಗೆ ಬಂದ ವಿಪತ್ತಿನ ಬಗ್ಗೆಯೇ ಹೆಚ್ಚಾಗಿ ಮಮ್ಮಲಮರುಗಿದ್ದು. ಮೊಟ್ಟಮೊದಲಿಗೆ ಡಿ.27ರ ಉದಯವಾಣಿಯಲ್ಲಿ ನಾನು ‘ಬಂದ ಆಚೆ’ ಎಂದು ಕನ್ನಡದಲ್ಲಿ ಓದಿದಾಗಲೇ ಆ ಹೆಸರಲ್ಲೇನೊ ವಿಚಿತ್ರ ಅಡಗಿದೆ, ಮುಂದೊಂದು ದಿನ ವಿಚಿತ್ರಾನ್ನಕ್ಕೆ ಅದನ್ನು ವಸ್ತುವಾಗಿಸುತ್ತೇನೆ ಎಂದುಕೊಂಡಿದ್ದೆ. ಆ ಪ್ರಕಾರ ಇವತ್ತೇ ಬಂದ ಆಚೆಗೆ ಸ್ವಲ್ಪ ಒಗ್ಗರಣೆ ಹಾಕಿ ಸರ್ವಿಸುತ್ತಿದ್ದೇನೆ, ರುಚಿ ನೋಡಿ.

tsunami as written in kanji script of japaneseಉದಯವಾಣಿ ಎಂದಾಗ ನೆನಪಾಯ್ತು, ಕನ್ನಡದ ಮಿಕ್ಕೆಲ್ಲ ಪತ್ರಿಕೆಗಳೂ ತ್ಸುನಾಮಿಯನ್ನು ಸುನಾಮಿ ಎಂದು ಬರೆದರೆ, ನಮ್ಮ ಕರಾವಳಿಯ ಸುಂದರ ಕನ್ನಡದೈನಿಕ ಮಾತ್ರ ಸ್ಪಷ್ಟವಾಗಿ ತ್ಸುನಾಮಿ ಎಂದೇ ದಾಖಲಿಸಿತು. ಇಂಗ್ಲಿಷಲ್ಲಿ Tsunami ಉಚ್ಚರಿಸುವಾಗ T silent ಹಾಗಾಗಿ ಕನ್ನಡದಲ್ಲಿ ಬರೆದಾಗ ಸುನಾಮಿ ಎಂದಾಗುತ್ತದೆ. ಈ ತರ್ಕವನ್ನು ಒಪ್ಪಬಹುದಾದರೂ ನಿಜವಾಗಿ ತ್ಸುನಾಮಿ ಎಂಬುದು ಜಪಾನಿ ಭಾಷೆಯ ತ್ಸು ಮತ್ತು ನಾಮಿ ಎಂಬ ಎರಡು ಪದಗಳ ಜೋಡಣೆ. ತ್ಸು ಅಂದರೆ ಬಂದರು (harbor), ನಾಮಿ ಅಂದರೆ ಅಲೆಗಳು. ಜಪಾನ್‌ನ ಕಂಜಿ ಲಿಪಿಯಲ್ಲಿ ಉದ್ದುದ್ದವಾಗಿ ಬರೆದಾಗ ತ್ಸುನಾಮಿ ಈ ಚಿತ್ರದಲ್ಲಿದ್ದಂತೆ ಇರುತ್ತದೆ ಎಂದು ನನ್ನ ಜಪಾನಿಸ್‌ ಸ್ನೇಹಿತನೊಬ್ಬ ತಿಳಿಸಿದ್ದಾನೆ. ಮತ್ತೆ ಇಂಗ್ಲಿಷಲ್ಲಿ ಬರೆದು ಉಚ್ಚರಿಸುವಾಗ T silent ಯಾಕೆ ಎಂದು ಕೇಳಿದರೆ ಅವನ ಉತ್ತರ ಮಾರ್ಮಿಕವಾಗಿದೆ - T silent as a mark of respect to all victims of tsunami!

‘Tsunami hits Banda Aceh’ ಎನ್ನುವ ಸುದ್ದಿಗೆ ಅಚ್ಚಕನ್ನಡ ತಲೆಬರಹವೆಂದರೆ ‘ಬಂದ ಆಚೆಗೆ ಬಂದ ಬಂದರು ಅಲೆಗಳು’! ಆ ಅಲೆಗಳ ಅಪಾಯದಿಂದ ಅದೃಷ್ಟವಂತನೊಬ್ಬ ಪಾರಾಗಿ ಬಂದರೆ ಆ ಸುದ್ದಿ ‘ಬಂದ ಆಚೆ: ಆಚೆ ಬಂದ’ !!

ಜಪಾನಿ ಭಾಷೆಯ ತ್ಸುನಾಮಿ (ಸುನಾಮಿ) ಶಬ್ದವು ಕಹಿನೆನಪಾಗಿಯಾದರೂ ವಿಶ್ವಕ್ಕೆಲ್ಲ ಪರಿಚಯವಾಯ್ತು ; ನೆನಪಲ್ಲಿಟ್ಟುಕೊಳ್ಳಬೇಕಾದ ಇನ್ನೊಂದು ಸಂಗತಿಯೆಂದರೆ, ಈಬಾರಿ ಸಂತ್ರಸ್ತರಿಗೆ ಗರಿಷ್ಠ ಪ್ರಮಾಣದಲ್ಲಿ ಆರ್ಥಿಕ ನೆರವು ಒದಗಿಸಿದ ದೇಶವೆಂದರೆ ಜಪಾನ್‌! ಎಷ್ಟೆಂದರೂ ನೋವುಂಡು ಗೊತ್ತಿದ್ದವನೇ ಬಲ್ಲ ಇನ್ನೊಬ್ಬರ ದಾರುಣ ಪರಿಸ್ಥಿತಿಯನ್ನು, ಅಲ್ಲವೇ?

* * *

ಸರಿ, ಇನ್ನು ಬಂದ ಆಚೆಯಿಂದ ಆಚೆ ಬರೋಣ. ಬೆಂಗಳೂರ್‌ ಕನ್ನಡದಲ್ಲಿ ಆಚೆ ಅನ್ನುವುದು ‘ಹೊರಗೆ’ ಎಂಬ ಅರ್ಥದಲ್ಲೂ ಉಪಯೋಗವಾಗುವ ಪದ. ಹಾಗಾಗಿ ಆಚೆ ಬರುವುದು ಅಂದರೆ ಹೊರಗೆ ಬರುವುದು. ಬೆಂಗಳೂರಿಗರಲ್ಲದ ಇತರ ಕನ್ನಡಿಗರಿಗೆ ‘ಆಚೆ’ ಎಂದರೆ ‘ಈಚೆ’ ಪದದ ವಿರುದ್ಧಪದವೇ ವಿನಹ ‘ಹೊರಗೆ’ ಎಂಬರ್ಥಕ್ಕೆ ನಾವೆಲ್ಲ ‘ಆಚೆ’ ಎಂದು ಉಪಯೋಗಿಸುವುದಿಲ್ಲ. ಹಾಗಾಗಿ ‘ಆಚೆ ಬಾ’ ಅನ್ನುವುದೂ ನಮಗೆಲ್ಲ ಒಂಥರಾ ಆಭಾಸದ ಬಳಕೆ. ಈಚೆ ಬಾ, ಆಚೆ ಹೋಗು... ಅಂದರೆ ಅದಕ್ಕೆ ಅರ್ಥವಿದೆ. ಆಚೆ ಬಾ ಎಂದರೆ??

ಇದೂ ಹೆಚ್ಚುಕಡಿಮೆ ಅವತ್ತು ವಿಚಿತ್ರಾನ್ನದಲ್ಲಿ ವ್ಯಾಖ್ಯಾನಿಸಿದ್ದ ‘ಸಣ್ಣ-ಚಿಕ್ಕ’ ಪದಗಳ ಬಗೆಗಿನ ಚರ್ಚೆಯಂಥದ್ದೇ. ಅದರಂತೆಂಯೇ ಇಲ್ಲೂ ‘ಆಚೆ’ ಪದದ ಕುರಿತು ಯಾರ ಮನಸ್ಸಿಗೂ ನೋವಾಗದ ರೀತಿಯಲ್ಲಿ ಮಜವಾಗಿಯೇ ಒಂದಿಷ್ಟು ಹರಟೆ ಹೊಡೆಯೋಣ, ಆಗಬಹುದೇ?

ಬೆಂಗಳೂರಿಗರು, ‘ಆಚೆ ಹೋಗಿದ್ದಾರೆ’ ಅನ್ನೋದನ್ನು … has gone out ಎಂಬರ್ಥದಲ್ಲಿ ಉಪಯೋಗಿಸುತ್ತಾರೆ ಅನ್ನೋದಕ್ಕೆ ಬೆಂಗಳೂರಲ್ಲಿ ಹುಟ್ಟಿಬೆಳೆದ ನನ್ನ ಅರ್ಧಾಂಗಿಯೇ ಸಾಕ್ಷಿ. ಅಮೆರಿಕೆಗೆ ಬಂದ ಹೊಸದರಲ್ಲಿ ನಾವು ಚಿಕಾಗೊದಲ್ಲಿದ್ದಾಗ, ದೂರದ ಪೋರ್ಟ್‌ಲ್ಯಾಂಡ್‌ನಿಂದ ನನ್ನ ಹಳೇ ಸ್ನೇಹಿತನೊಬ್ಬ ಒಮ್ಮೆ ಫೋನ್‌ ಮಾಡಿ ‘ಜೋಶಿ ಇದಾರಾ?’ ಅಂತ ಕನ್ನಡದಲ್ಲೇ ಕೇಳಿದ್ದಕ್ಕೆ ‘ಇಲ್ಲಾ, ಆಚೆ ಹೋಗಿದ್ದಾರೆ’ ಎಂದು ಪಕ್ಕಾ ಬೆಂಗಳೂರ್‌ ಕನ್ನಡದಲ್ಲಿ ಉತ್ತರಿಸಿದ್ದಳು ನನ್ನವಳು. ಆಮೇಲೆ ಯಾವಾಗಲೋ ಫೋನಲ್ಲಿ ಸಿಕ್ಕಿದ ನನ್ನ ಸ್ನೇಹಿತ, ‘ನಿನ್ನ ಶ್ರೀಮತಿಯವರು ಬೆಂಗಳೂರಲ್ಲಿ ಹುಟ್ಟಿಬೆಳೆದವರು ಅನ್ನೋದನ್ನು ನಾನು ಆಕೆಯ ಒಂದೇ ಮಾತಿನಲ್ಲಿ ಕಂಡುಹಿಡಿದುಬಿಟ್ಟೆ!’ ಎಂದಿದ್ದ.

ಕ್ರಿಕೆಟ್‌ ಮ್ಯಾಚಿನ ಕಾಮೆಂಟರಿಯನ್ನು ರೇಡಿಯಾದಲ್ಲಿ ಕನ್ನಡದಲ್ಲಿ ಕೇಳಿದ ಅನುಭವವಿದೆಯೇ? ‘ಬಲಗೂಟದ ಆಚೆ (Outside the off stump) ಬಿದ್ದಂಥ ಚೆಂಡನ್ನು ಭರ್ಜರಿ ಹೊಡೆತದಿಂದ ಸೀಮಾರೇಖೆಗೆ ಅಟ್ಟಿ ನಾಲ್ಕು ಓಟಗಳನ್ನು ಗಳಿಸಿದ್ದಾರೆ ರಾಹುಲ್‌ ದ್ರಾವಿಡ್‌....’! ಆ ಸಂದರ್ಭದಲ್ಲೂ ಆಚೆ ಅಂದರೆ ಔಟ್‌ಸೈಡ್‌. ಕಾಮೆಂಟೇಟರು ಬೆಂಗಳೂರಿಗರಾದ್ದರಿಂದ ಹಾಗೆ. ಅಥವಾ ನೀವೋದಿದ ಹೈಸ್ಕೂಲಲ್ಲಿ, ಕಾಲೇಜಲ್ಲಿ ‘ಇನ್ನೊಂದ್ಸಲಿ ಕ್ಲಾಸಿಗೇನಾದ್ರೂ ಲೇಟಾಗಿ ಬಂದ್ರೆ ಆಚೆ ಕಳಿಸ್ತೇನೆ...’ ಎಂದು ಗುಡುಗುವ ಅಧ್ಯಾಪಕರಿದ್ದರೆ ಅವರು ಬೆಂಗಳೂರಿನವರಂತಲೇ ತಿಳೀರಿ. ಅಥವಾ, ಸಾಫ್ಟ್‌ವೇರ್‌ ಗೀಕರಿಬ್ಬರು (technology geeks) ಕಂಪ್ಯೂಟರ್‌ ತಂತ್ರಾಂಶದ ಲಾಜಿಕ್‌ ಬಗ್ಗೆ ಮಾತಾಡಿಕೊಳ್ಳುತ್ತ while…do loop ನಿಂದ ಆಚೆ ಬರೋದು ಹೇಗೆ ಅಂತ ಮಾತಾಡಿಕೊಳ್ತಿದ್ದರೆ (ಆಫೀಸ್‌ನಲ್ಲೂ ಕನ್ನಡದಲ್ಲಿ ಮಾತಾಡುವ ಅಲ್ಪಸಂಖ್ಯಾಕ ಅಚ್ಚಕನ್ನಡಿಗರಿದ್ದರೆ...) ಅವರು ನಿಜವಾಗಿಯೂ ಕೆಂಪೇಗೌಡನ ಪಟ್ಟಶಿಷ್ಯರು ಅಂತ ತಿಳ್ಕೊಳ್ಳಿ!

ಆದರೂ, ಆಚೆ ಎಂದರೆ ಹೊರಗೆ ಎಂದರ್ಥ ಮಾಡಿಕೊಳ್ಳುವುದು ಯಾಕೊ ನಮಗೆ - ನಾನ್‌ಬೆಂಗಳೂರಿಗರಿಗೆ - ಒಪ್ಪುತ್ತಿಲ್ಲ. ಯಾಕಂತೀರಾ?

ಒಂದು ವೇಳೆ ಆಚೆ ಎಂದರೆ ಹೊರಗೆ ಅಥವಾ ಇಂಗ್ಲಿಷ್‌ನ out/outside ಅಂತಾದರೆ, ಉಪ್ಪಿಟ್ಟು ಅವಲಕ್ಕಿ ಪಾಯಸ ತಿಂದು ಏಕಾದಶಿ ಉಪವಾಸ ಮಾಡುವ ಸುಬ್ಬಮ್ಮ ಹೊರ ಮನೆಯಲ್ಲಿ ಅಂದರೆ outhouse ನಲ್ಲಿ ವಾಸವಾಗಿದ್ದದ್ದೇ? ಆಕೆ ಆಚೆಮನೆಯವಳು ಅಂದರೆ ಪಕ್ಕದ್ಮನೆಯವಳಲ್ಲವೇ?

ಕನ್ನಡಭಾರತಿ ಪಠ್ಯಪುಸ್ತಕದಲ್ಲಿದ್ದ ಒಂದು ಪದ್ಯ, ಗುಬ್ಬಿಯ ಬಗ್ಗೆ, ಓದಿದ ಜ್ಞಾಪಕವಿರಬಹುದು.

ಗುಬ್ಬೀ ಗುಬ್ಬೀ
ಚಿಂವ್‌ ಚಿಂವ್‌ ಎಂದು
ಕರೆಯುವೆ ಯಾರನ್ನು?
ಆಚೆ ಈಚೆ
ಹೊರಳಿಸಿ ಕಣ್ಣು
ನೋಡುವೆ ಏನನ್ನು?

ಇಲ್ಲಿ ಆಚೆ-ಈಚೆ ಇಷ್ಟು ಸ್ಪಷ್ಟವಾಗಿ ಅತ್ತ-ಇತ್ತ ಎಂಬ ಅರ್ಥದಲ್ಲಿ ಇರುವಾಗ ಆಚೆ ಅನ್ನುವುದಕ್ಕೆ ಹೊರಗೆ ಎಂಬ ಅರ್ಥ ಅದು ಹೇಗೆ ಬಂತೋ ನನಗರ್ಥವಾಗುವುದಿಲ್ಲ! ಈಗ ಆಚೆಈಚೆ ಕಣ್ಣು ಹೊರಳಿಸುವುದಕ್ಕೆ ಬೆಂಗಳೂರಲ್ಲಿ ಗುಬ್ಬಿಗಳೇ ಇಲ್ಲ ಅನ್ನುವ ವಿಷಯ ಬೇರೆ.

ಇನ್ನೂ ಒಂದು ಭಜನೆಪದ್ಯ ತಗೊಳ್ಳಿ. ‘ಆಚೆ ನೋಡಲು ರಾಮ ಈಚೆ ನೋಡಲು ರಾಮ ಆಚೆಈಚೆ ನೋಡಲು ರಾಮ್‌ ರಾಮ್‌ ರಾಮ್‌...’ ಅಂತ ನಿಮಗೂ ಗೊತ್ತಿರಬಹುದು. ಆ ಪದ್ಯದಲ್ಲಿ ‘ಒಳಗೆ ನೋಡಲು ರಾಮ ಹೊರಗೆ ನೋಡಲು ರಾಮ ಒಳಗೆ ಹೊರಗೆ ನೋಡಲು ರಾಮ್‌ ರಾಮ್‌ ರಾಮ್‌’ ಎಂಬ ಇನ್ನೊಂದು ಸಾಲೂ ಇರುವುದರಿಂದ ಆಚೆ ಮತ್ತು ಹೊರಗೆ ಇವು ಬೇರೆಬೇರೆ ಅರ್ಥವುಳ್ಳ ಪದಗಳು ಅನ್ನುವುದಕ್ಕೆ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಸಮ್ಮತಿಯ ಮುದ್ರೆ ಇದೆ ಎಂದಾಯಿತು!

* * *

ಈಗ, ಬಂದ ಆಚೆಯ ಹೊಡೆತದಿಂದ, ಆಚೆ ಪದದ ಬಗೆಗಿನ ಕೊರೆತದಿಂದ ಈಚೆ ಬಂದವರಾಗಿ. ಸಮಾಧಾನಚಿತ್ತದಲ್ಲಿ ಪರಾಮರ್ಶಿಸಿ, ನಿಮ್ಮ ಅಭಿಪ್ರಾಯದಲ್ಲಿ ‘ಆಚೆ’ ಅನ್ನುವ ಪದಕ್ಕೆ ‘ಹೊರಗೆ’ ಎಂಬ ಅರ್ಥ ಒಪ್ಪುತ್ತದೋ ಇಲ್ಲವೋ ತಿಳಿಸಿ. ನೆನಪಿಡಿ, ಇದು ಸರಸದ ಹರಟೆ, ವಿರಸ-ವಿವಾದಗಳ ಹೇತು ಇಲ್ಲಿ ಭೂತಗನ್ನಡಿ ಹಿಡಿದರೂ ನಿಮಗೆ ಕಾಣಿಸುವುದಿಲ್ಲ, ಕಾಣಿಸಕೂಡದು!

ನಿಮ್ಮ ಪತ್ರಗಳಿಗೆ ಸದಾ ಸ್ವಾಗತ. ವಿಳಾಸ -

- [email protected]


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X