• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕವೆ ಹೇಳಿದ ಮಾತಿದು... ಆದರೆ ಮೂಲತಃ ಏನಿದು?

By Staff
|
Srivathsa Joshi *ಶ್ರೀವತ್ಸ ಜೋಶಿ
ಮಾತಿನ ಮಂಟಪವನ್ನು ಸಿಂಗರಿಸುವಾಗ ನಾವು ಎಷ್ಟೋ ಸಲ ಲೋಕೋಕ್ತಿಗಳನ್ನು, ನಾಣ್ಣುಡಿಗಳನ್ನು, ಪದಪುಂಜಗಳನ್ನು ಬಳಸುತ್ತೇವೆ. ನಮ್ಮ ಬರವಣಿಗೆಯ ತೂಕವನ್ನು ಹೆಚ್ಚಿಸಲೂ ಇವುಗಳನ್ನು ಉಪಯೋಗಿಸುತ್ತೇವೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅದರ ಮೂಲ(ಒರಿಜಿನ್‌) ನಮಗೆ ಗೊತ್ತಿರುವುದಿಲ್ಲ. ಋಷಿಮೂಲ, ನದಿಮೂಲಗಳನ್ನೆಲ್ಲ ಕೇಳಬಾರದೆಂದಿದ್ದರೂ ಲೋಕೋಕ್ತಿಗಳ ಮೂಲವನ್ನು ಹುಡುಕುತ್ತ ಹೊರಟರೆ ತಪ್ಪಿಲ್ಲ, ಮಾತ್ರವಲ್ಲ ಇನ್ನೂ ಹೊಸಹೊಸ ವಿಚಾರಗಳು, ವಿಷಯಗಳು ಇದರಿಂದ ನಮ್ಮೆದುರು ತೆರೆದುಕೊಳ್ಳುತ್ತವೆ ಮತ್ತು ಜ್ಞಾನವರ್ಧನೆಗೆ ಸಹಾಯಕವಾಗುತ್ತವೆ.

ಈವಾರ, ಅಂತಹ ಕೆಲವು ಲೋಕೋಕ್ತಿಗಳ ಬಗ್ಗೆ ವ್ಯಾಖ್ಯಾನ, ವಿಶ್ಲೇಷಣೆ. ಆಕರ ಗ್ರಂಥಗಳಿಂದ, ಇಂಗ್ಲಿಷ್‌ ವೆಬ್‌ಪುಟಗಳಿಂದ ಸಂಗ್ರಹಿಸಿದ ಒಂದಿಷ್ಟು ಮಾಹಿತಿ. ಇದನ್ನೋದಿದಾಗ ನಿಮಗೆ ಪಾ.ವೆಂ ಅವರ ‘ಪದಾರ್ಥ ಚಿಂತಾಮಣಿ’ ಅಥವಾ ಪ್ರೊ।ಜಿ.ವೆಂಕಟಸುಬ್ಬಯ್ಯನವರ ‘ಇಗೋ ಕನ್ನಡ’ ನೆನಪಾದರೆ ಬಹಳ ಒಳ್ಳೆಯದೇ. ಯಾಕೆಂದರೆ ಅಂಥ ಮಹಾಸಾಗರದಿಂದ ಇಲ್ಲಿ ನಾಲ್ಕೈದು ‘ಹನಿಗಳು’ ಪ್ರಸ್ತುತಗೊಂಡಿರುವುದು, ಅಷ್ಟೇ!

ಬಿಳಿಯಾನೆ (White Elephant) :

White elephant is a symbol of burdenಕೊಳ್ಳಲಿಕ್ಕೆ ಬಲುದುಬಾರಿಯಾದ, ನಿರ್ವಹಣೆಗೆ ಬಲುದುಸ್ತರವಾದ ಮತ್ತು ಪ್ರತಿಫಲವಾಗಿ ಏನೂ ದೊರಕದ ವಸ್ತುವಿಗೆ/ವಿಷಯಕ್ಕೆ ‘ಬಿಳಿಯಾನೆ’ ಎನ್ನುವುದು. ಕೇಂದ್ರ/ರಾಜ್ಯ ಸರಕಾರದ ಸ್ವಾಮ್ಯದಲ್ಲಿನ ಪಬ್ಲಿಕ್‌ಸೆಕ್ಟರ್‌ ಕಂಪೆನಿಗಳು ‘ಬಿಳಿಯಾನೆ’ಗಳಿದ್ದಂತೆ ಎಂಬ ಟೀಕೆ ಸರ್ವಸಾಮಾನ್ಯವಾದುದು. ಅಷ್ಟಕ್ಕೂ ಬಿಳಿಯ ಬಣ್ಣದ ಆನೆ ನಿಜವಾಗಿಯೂ ಇತ್ತೇ, ಇದೆಯೇ? ಹೌದು, ಬರ್ಮಾದೇಶದಲ್ಲಿ ‘ಅಲ್ಬಿನೊ’ ಎಂಬ ಪ್ರಭೇದದ ಬಿಳಿ ಆನೆಗಳು ಇದ್ದುವಂತೆ. ಅವುಗಳು ತುಂಬ ಪವಿತ್ರ, ದೈವಾಂಶಸಂಭೂತ ಎಂಬ ನಂಬಿಕೆ ಜನರಲ್ಲಿತ್ತು. ಕೆಲಸಕ್ಕೆ ಅವನ್ನು ಬಳಸಿಕೊಳ್ಳುವಂತಿಲ್ಲ, ಆದರೆ ಅತಿಜಾಗ್ರತೆಯಿಂದ ‘ ಹೂವಿನಂತೆ’ ಅವುಗಳ ಪಾಲನೆ ಪೋಷಣೆ ಮಾಡಬೇಕು. ಶತ್ರುಗಳೆನಿಸಿದವರಿಗೆ ಬಿಳಿ ಆನೆಯನ್ನು ಉಡುಗೊರೆಯಾಗಿ ಕೊಡುವ ಕ್ರಮವೂ ಇತ್ತು, ಆನೆ ಸಾಕುವುದರಿಂದ ಅವರ ಸಂಪತ್ತೆಲ್ಲ ಕರಗಿಹೋಗಲಿ ಎಂಬ ದೂ(ದು)ರಾಲೋಚನೆಯಿಂದ. ಆದರೆ ವಿಷಯ ಗೊತ್ತಿದ್ದೂ ಆ ಶತ್ರುಪಾರ್ಟಿ ‘ಆನೆ ಗಿಫ್ಟ್‌’ಅನ್ನು ಸ್ವೀಕರಿಸಿದರೆ ತಾನೆ?

19ನೇ ಶತಮಾನದಲ್ಲಿ ಅಮೆರಿಕದ ಪಿ.ಟಿ.ಬರ್ನಮ್‌ ಎನ್ನುವವನೊಬ್ಬನಿಗೆ ತನ್ನ ಸರ್ಕಸ್‌ಕಂಪೆನಿಗೊಂದು ಬಿಳಿ ಆನೆಯನ್ನು ಸೇರಿಸಿಕೊಂಡರೆ ಸರ್ಕಸ್‌ನ ಆಕರ್ಷಣೆ ಹೆಚ್ಚಬಹುದೆಂಬ ಐಡಿಯಾ ಬಂತು. ಭಾರತಕ್ಕೆ ಏಜೆಂಟರನ್ನು ಕಳಿಸಿ ಒಂದು ಬಿಳಿಯಾನೆ ತರಿಸುವ ವ್ಯವಸ್ಥೆಯನ್ನೂ ಆತ ಮಾಡಿದ. ತಿಂಗಳುಗಟ್ಟಲೆ ಹಡಗುಪ್ರಯಾಣ ಮಾಡಿ ಕೊನೆಗೂ ಕನೆಕ್ಟಿಕಟ್‌ನ ಬ್ರಿಡ್ಜ್‌ಪೋರ್ಟ್‌ಗೆ ಆನೆ ತಲುಪಿತು. ಗೂಡಿನಿಂದ ಹೊರಬಂದ ಆನೆಯನ್ನು ನೋಡುತ್ತಾನೆ ಬರ್ನಮ್‌ - ಅಚ್ಚ ಬಿಳಿಯಾಗಿರದೇ ಅಲ್ಲಲ್ಲಿ ಕಂದುಬಣ್ಣದ ಮಚ್ಚೆಗಳುಳ್ಳ ಚರ್ಮದ್ದಾಗಿತ್ತದು. ಬಿಳಿ ಆನೆ ಬಗ್ಗೆ ಸಾಕಷ್ಟು ಜಾಹೀರಾತು ಹೊರಡಿಸಿದ್ದ ಆತ. ಆದರೆ ಸರ್ಕಸ್‌ ವೀಕ್ಷಕರು ಈ ಬಿಳಿಯಲ್ಲದ ಬಿಳಿಯಾನೆಯನ್ನು ಸಾರಾಸಗಟಾಗಿ ತಿರಸ್ಕರಿಸಿದರು. ಬರ್ನಮ್‌ಗೆ ಆನೆಯನ್ನು ಏನು ಮಾಡಬೇಕೆಂದೇ ತೋಚದಾಯಿತು, ಸಿಕ್ಕಾಪಟ್ಟೆ ದುಡ್ಡು ಬೇರೆ ಖರ್ಚುಮಾಡಿದ್ದ ಅದರ ಮೇಲೆ. ಜನರಿಗೆ ಕಾಣಿಸದಂತೆ ಆ ಆನೆಯನ್ನು ಒಂದು ಲಾಯದಲ್ಲಿ ಕಟ್ಟಿ ಮರೆಯಲ್ಲಿರಿಸಬೇಕಾಯಿತು. ಕೊನೆಗೊಂದು ದಿನ ಆ ಲಾಯವು ಅಕಸ್ಮಾತ್‌ ಬೆಂಕಿಗಾಹುತಿಯಾದಾಗ ತಥಾಕಥಿತ ಬಿಳಿಯಾನೆ ಸತ್ತೇಹೋಯಿತು. White Elephant ಎಂಬ ಲೋಕೋಕ್ತಿ ಮಾತ್ರ ಇಂಗ್ಲಿಷಲ್ಲಿ ಮತ್ತು ಅನುವಾದಗೊಂಡು ಇತರ ಭಾಷೆಗಳಲ್ಲೂ ಉಳಿದುಕೊಂಡಿತು.

ನನ್ನ ಎರಡು ಪೈಸೆ (My Two Cents) :

My two cents in this matter...ಇಂಗ್ಲಿಷಲ್ಲಿ Put my two cents in ಎಂಬ ಬಳಕೆಯಿದ್ದರೂ ಅದರ ಮೂಲ Put my two bits in ಎಂಬುದು ಮತ್ತು ಅದು ಪೋಕರ್‌ ಆಟದ(ಇಸ್ಪೀಟ್‌ನ ಒಂದು ವಿಧ) ಟರ್ಮಿನಾಲಜಿ. ಪೋಕರ್‌ ಆಡುವಾಗ ಪ್ರತಿ ಸುತ್ತಿನ ಆರಂಭದಲ್ಲಿ ಪ್ರತಿಯಾಬ್ಬ ಅಟಗಾರ ಒಂದು ಸಣ್ಣ ಮೊತ್ತವನ್ನು ಬಾಜಿಕಟ್ಟಬೇಕು. ಹಿಂದಿನಕಾಲದಲ್ಲಿ ಅದು ಹೆಚ್ಚಾಗಿ ಎರಡು ‘ಬಿಟ್‌’ಗಳ ಮೌಲ್ಯದ್ದಾಗಿರುತ್ತಿತ್ತು. ಈ ಬಾಜಿಯನ್ನು ಕಟ್ಟಿದರೆ ಆಟಕ್ಕೆ ಪ್ರವೇಶ ದೊರೆತಂತೆ. ಹಾಗೆಯೇ ಬೇರೆ ತುಂಬಮಂದಿ ಭಾಗವಹಿಸಿದ ಸಂವಾದ/ಚರ್ಚೆಯಲ್ಲಿ ಪ್ರವೇಶಪಡೆಯುವಾಗ ಅಭಿಪ್ರಾಯವನ್ನು ಮಂಡಿಸಿ ‘ಇದು ನನ್ನೆರಡು ಬಿಟ್ಸ್‌’ ಎನ್ನುವ ರಿವಾಜು ಹುಟ್ಟಿಕೊಂಡಿತು.

‘ಬಿಟ್ಸ್‌’ ಎಂದರೆ ಹಳೇಕಾಲದಲ್ಲಿ ಅಮೆರಿಕದ ಚಿಲ್ಲರೆ ಕರೆನ್ಸಿಯ ರೂಪಗಳಲ್ಲೊಂದು. ಅಮೆರಿಕದಲ್ಲಿ ಡಾಲರ್‌, ಕ್ವಾರ್ಟರ್‌, ಡೈಮ್‌, ನಿಕೆಲ್‌ ನಾಣ್ಯಗಳು ಬರುವ ಮೊದಲು ಬಂಗಾರದ ಅಥವಾ ಬೆಳ್ಳಿಯ ನಾಣ್ಯಗಳ ಚಲಾವಣೆಯಿತ್ತಂತೆ. ನಾಣ್ಯದಲ್ಲಿ ಎಷ್ಟು ಮೌಲ್ಯದ ಬಂಗಾರವಿದೆಯಾ ಅಷ್ಟು ಅದರ ಬೆಲೆ. ಒಂದು ಸುವರ್ಣನಾಣ್ಯಕ್ಕಿಂತ ಕಡಿಮೆ ಬೆಲೆಯ ಕರೆನ್ಸಿಗಾಗಿ ಆ ನಾಣ್ಯವನ್ನು ಅರ್ಧ, ಕಾಲು ಅಥವಾ ಎಂಟನೆ ಒಂದು ಭಾಗವನ್ನಾಗಿ ಮಾಡುವ ಕ್ರಮವಿತ್ತು. ಹೀಗೆ ಎಂಟನೆ ಒಂದು ಭಾಗದ ಚೂರು ಎಂದರೆ ಒಂದು ‘ಬಿಟ್‌’. ಎರಡು ಬಿಟ್‌ಗಳೆಂದರೆ ಒಂದು ಕ್ವಾರ್ಟರ್‌. ಈಗ ಬಿಟ್‌ನ ಬದಲು ಅಮೆರಿಕದಲ್ಲಾದರೆ ಸೆಂಟ್ಸ್‌, ಇತರ ದೇಶಗಳಲ್ಲಾದರೆ ಅಯಾ ದೇಶದ ಕರೆನ್ಸಿಯ ಅತಿಚಿಕ್ಕ ಅಳತೆಯ ಹೆಸರು ಹೇಳುವುದರಿಂದ ‘ಇದು ನನ್ನೆರಡು ಪೈಸೆ’ ಎಂಬ ಬಳಕೆ ಚಾಲ್ತಿಗೆ ಬಂದಿದೆ.

ಮೊಸಳೆ ಕಣ್ಣೀರು (Crocodile tears) :

Crocodile tears are not emotional!ಮೊಸಳೆಗಳು ಆಹಾರಭಕ್ಷಣೆಯ ವೇಳೆ ಅಶ್ರುಗ್ರಂಥಿಗಳಿಂದ ಬೇಕಂತಲೇ ನೀರುಸುರಿಸಿ ಅದು ಬಾಯಿಯವರೆಗೂ ಇಳಿದು, ಒಣತುತ್ತನ್ನು ತುಸು ನಯವಾಗಿಸುವುದಕ್ಕೆ ಅನುಕೂಲಮಾಡಿಕೊಳ್ಳುತ್ತವೆ. ಭಾವೋದ್ವೇಗದಿಂದ ಅವು ಕಣ್ಣೀರುಸುರಿಸುತ್ತಿವೆಯೇನೊ ಅನಿಸಿದರೂ ಅಸಲಿಗೆ ಬೇಟೆಯನ್ನು ಸುಲಭದಲ್ಲಿ ನುಂಗಲಿಕ್ಕಾಗುವಂತೆ ಮೊಸಳೆಗಳಿಗೆ ಇದೊಂದು ಪ್ರಕೃತಿದತ್ತ ಅನುಕೂಲ. ಊಟದ ವೇಳೆಯಲ್ಲಲ್ಲದೆ ಇತರ ಸಮಯದಲ್ಲೂ (ಬಿಸಿಲಲ್ಲಿ ಮೈಕಾಯಿಸುವುದು ಇತ್ಯಾದಿ) ಮೊಸಳೆಗಳು ದವಡೆಯನ್ನಗಲಿಸಿಯೇ ಹೆಚ್ಚುಹೊತ್ತನ್ನು ಕಳೆಯುವುದರಿಂದ ಅವುಗಳ ಆ ಪೋಸು ಕಣ್ಣೀರಗ್ರಂಥಿಗಳ ಮೇಲೆ ಒಂದು ವಿಧದ ಒತ್ತಡವನ್ನು ತರುತ್ತದೆ. ತನ್ನಿಂತಾನೆ ಕಣ್ಣೀರು ಹರಿಯಲಾರಂಭಿಸುತ್ತದೆ. ಇಲ್ಲೂ ಅಷ್ಟೆ, ಭಾವನಾತ್ಮಕ ಕಂಬನಿಯಲ್ಲ ಅದು, ಭೌತಿಕ ಪ್ರತಿಕ್ರಿಯೆ ಅಷ್ಟೆ. ಒಟ್ಟಿನಲ್ಲಿ, ಭಾವನೆಗಳಿಲ್ಲದೆ (ಅಥವಾ ದುರುದ್ದೇಶಭಾವದಿಂದ) ಢೋಂಗಿ ಕಣ್ಣೀರುಗರೆಯುವುದಕ್ಕೆ ಮೊಸಳೆಕಣ್ಣೀರು ಎಂಬ ಉಕ್ತಿ ರೂಢಿಯಾಗಿದೆ.

ಅಡಿ ಗೆರೆ (The bottom line) :

ಲೆಕ್ಕಪತ್ರ ವ್ಯವಹಾರಕ್ಷೇತ್ರದಿಂದ ಬಂದ ಬಳಕೆಯಿದು. ಆಯವ್ಯಯ ಪತ್ರ, ಖರ್ಚಿನಪಟ್ಟಿ, ಕೈಯಲ್ಲಿನ ನಗದು ಮೌಲ್ಯದ ಹೇಳಿಕೆ -ಇವುಗಳೆಲ್ಲ ಇಷ್ಟುದ್ದದ್ದ, ನೂರಾರು ಲೈನ್‌-ಐಟಂಗಳ ವರದಿಗಳಾಗಿರುವುದು ಸಾಮಾನ್ಯವಷ್ಟೇ? ಅವುಗಳಲ್ಲಿ ಕೆಲವು ಧನಾತ್ಮಕ ಸಂಖ್ಯೆಗಳು ಇನ್ನು ಕೆಲವು ಋಣಾತ್ಮಕ ಸಂಖ್ಯೆಗಳೆಲ್ಲ ಇದ್ದರೂ ಪ್ರತಿಯಾಂದು ವರದಿಯ ಕೊನೆಯಲ್ಲಿ ಕೆಳಗಿನ ಷರಾ ಲೈನ್‌ ನಿವ್ವಳ ಸಂಖ್ಯೆಯನ್ನು ಸೂಚಿಸುತ್ತದೆ. ಆ ದೃಷ್ಟಿಯಿಂದ ಷರಾ ಲೈನು, ಸದ್ರಿ ಸಂಸ್ಥೆಯ ಆರ್ಥಿಕ ಪರಿಸ್ಥಿಯ ಸೂಚಕವಾಗಿರುತ್ತದೆ ಎನ್ನಲಿಕ್ಕಡ್ಡಿಯಿಲ್ಲ. ಅವಸರದಲ್ಲಿ, ಕ್ಷಿಪ್ರಸಾರಾಂಶ ಬೇಕಾದವರು ಷರಾ ಲೈನ್‌ ಮೇಲಷ್ಟೇ ಕಣ್ಣಾಡಿಸಿ ವಿಷಯವನ್ನು ತಿಳಿದುಕೊಳ್ಳುತ್ತಾರೆ. ಈಗ ಹಣಕಾಸಿನ ವಿಷಯ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲೂ, ನಿವ್ವಳ/ ಸಾರಾಂಶ/ ಮುಖ್ಯಾಂಶ ಅನ್ನೋದಕ್ಕೆ ಬಾಟಂ ಲೈನ್‌ ಎಂಬ ಬಳಕೆ ಚಾಲ್ತಿಯಲ್ಲಿದೆ.

ಕೋಳಿ ಗೂಳಿ ಕಥೆ (Cock and bull story) :

ತಲೆಬುಡಗಳಿಲ್ಲದ ಕಟ್ಟುಕತೆಗಳಿಗೆ ಇಂಗ್ಲಿಷಲ್ಲಿ Cock and bull story ಅನ್ನೋದು. ಕನ್ನಡೀಕರಿಸಿದರೆ ಅದನ್ನು ಕೋಳಿ ಗೂಳಿ ಕಥೆ ಎನ್ನಬಹುದು. ‘ಯಾಕೆ ತಡವಾಗಿ ಬಂದೆ?’ ಎಂಬ ಪ್ರಶ್ನೆಯನ್ನು - ಅದು ಯಾರಿಂದಲೇ ಇರಲಿ - ಎದುರಿಸಿದವರು ಸಾಮಾನ್ಯವಾಗಿ ಕಟ್ಟಿಹೇಳುವ ‘ವರ್ಣ’ರಂಜಿತ ’ಬಿಳಿ’ಸುಳ್ಳುಗಳು ಹೆಚ್ಚಾಗಿ ಕೋಳಿ ಗೂಳಿ ಕಥೆಗಳೇ ಆಗಿರುತ್ತವೆ. ಇಷ್ಟಕ್ಕೂ ಇಂಗ್ಲಿಷಲ್ಲಿ ಅದು concocted and bully story ಎಂಬುದರ ಅಪಭ್ರಂಶ. ಡ್ಯಾನಿಷ್‌ ಭಾಷೆಯಲ್ಲಿ ಬುಲ್ಲಿ ಎಂದರೆ ಉತ್ಪ್ರೇಕ್ಷಿತ ಎಂದರ್ಥ. ಉತ್ಪ್ರೇಕ್ಷೆಗಳ ಒಳ್ಳೇ ರಸಪಾಕವೇ ಕೋಳಿ ಗೂಳಿ ಕಥೆ!

ಬೆಕ್ಕು ನಾಯಿಗಳ ಸುರಿಮಳೆ (Raining cats and dogs) :

Its raining cats and dogs!ಈ ಲೋಕೋಕ್ತಿಗೆ ಎರಡುಮೂರು ಐತಿಹ್ಯಗಳಿವೆ. ತುಂಬಾ ಹಿಂದೆ ಲಂಡನ್‌ನಲ್ಲೊಮ್ಮೆ ಬ್ಯುಬೊನಿಕ್‌ ಪ್ಲೇಗ್‌ ಬಂದಿದ್ದಾಗ ಸಹಸ್ರಾರು ಜನ ಸತ್ತಿದ್ದರು. ಮಾತ್ರವಲ್ಲ ಆ ಪ್ಲೇಗ್‌ ಮಹಾಮಾರಿಯು ಅದೆಷ್ಟೋ ನಾಯಿ-ಬೆಕ್ಕುಗಳನ್ನೂ ಬಲಿತೆಗೆದುಕೊಂಡಿತ್ತು. ಅದೊಂದು ದಿನ ಧೋ ಎಂದು ಮಳೆ ಬೇರೆ ಸುರಿದು ಚರಂಡಿಗಳಲ್ಲೆಲ್ಲ ಸತ್ತ ನಾಯಿ-ಬೆಕ್ಕುಗಳ ದೇಹಗಳೇ ರಾಶಿರಾಶಿಯಾಗಿ ಹರಿದಿದ್ದುವು -ಆಗಸದಿಂದಲೇ ಅವುಗಳ ಕರಾಳವೃಷ್ಟಿಯಾಯ್ತೇನೊ ಎನ್ನುವಷ್ಟು. ಇನ್ನೊಂದು ನಂಬಿಕೆಯ ಪ್ರಕಾರ ಬಹಳ ಹಿಂದಿನ ಕಾಲದಲ್ಲಿ, ಅಂದರೆ ಕತ್ತಲಿನಯುಗದಲ್ಲಿ, ಬೆಕ್ಕು-ನಾಯಿಗಳನ್ನು ವರ್ಷ-ಮಾರುತಗಳ ರೂಪಗಳೆಂದು ತಿಳಿಯಲಾಗಿತ್ತು. ಕರಿಬೆಕ್ಕುಗಳು ಅತಿವೃಷ್ಟಿಯ ಸಂಕೇತವಾದರೆ ನಾಯಿ-ತೋಳಗಳು ಆ ಮಳೆಯ ಜತೆಗಿನ ಬಿರುಗಾಳಿಯ ಸಂಕೇತ. ಅದಕ್ಕೇ ಈಗಲೂ ಅತಿಪ್ರಮಾಣದಲ್ಲಿ ಒಮ್ಮಿಂದೊಮ್ಮೆಗೇ ಗಾಳಿಸಮೇತ ಮಳೆ ಬಂದರೆ Raining cats and dogs ಎನ್ನುವುದು.

ಮತ್ತೆ, ಮಳೆಯ ಬಗ್ಗೆ ನಮ್ಮ ಸಂಸ್ಕೃತ/ಸಂಸ್ಕೃತಿಯಿಂದಲೇ ಬಂದಿರುವ ಇನ್ನೊಂದು ಪದಪುಂಜವೆಂದರೆ,

ಕುಂಭ ದ್ರೋಣ ಮಳೆ...

ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ‘ಕುಂಭ’ ಮತ್ತು ‘ದ್ರೋಣ’ ಪದಗಳು ದ್ರವ್ಯದ ಅಳತೆಯ ಮಾನ (ಅಳತೆಯ ಪಾತ್ರೆ)ಗಳಾಗಿ ನಿರೂಪಿಸಲ್ಪಟ್ಟಿರುವ ಬಗ್ಗೆ ಮಾಹಿತಿ ಇದೆ. ಅದರಲ್ಲಿರುವಂತೆ 20 ದ್ರೋಣಗಳು ಅಂದರೆ ಒಂದು ಕುಂಭ. ಈಗ ನಾವು ‘ದ್ರೋಣ’ವನ್ನು ದೊನ್ನೆ ಎಂದೂ (ಬಾಳೆಎಲೆಯ ತುಂಡನ್ನು ಬೆಂಕಿಯತಾಪದಲ್ಲಿ ಬಾಡಿಸಿ, ಅದನ್ನು ಕತ್ತರಿಸಿ ಮಡಚಿ ಅದರ ಕಿವಿಗಳೆರಡಕ್ಕೆ ಕಡ್ಡಿ ತೂರಿ ಅದು ಸ್ಟಿಫ್‌ ಆಗಿ ನಿಲ್ಲುವ ಒಂದು ಪಾತ್ರೆಯನ್ನಾಗಿ ಮಾಡಿ ಅದಕ್ಕೆ ದೊನ್ನೆ ಎಂದು ಹೇಳುವರು, ನವಗ್ರಹಪೂಜೆಯ ವೇಳೆ ಹೆಚ್ಚಾಗಿ ದೊನ್ನೆಗಳಲ್ಲೇ ಆಯಾ ಗ್ರಹಗಳ ರೇಷನ್‌ ಸಾಮಗ್ರಿ ಬಟವಾಡೆ ಮಾಡಿಡುವರು), ಕುಂಭವನ್ನು ಹದಾಮಟ್ಟಿನ ಒಂದು ಗಡಿಗೆಯೆಂದೂ ಅರ್ಥೈಸಿದರೆ 20 ದೊನ್ನೆಗಳಲ್ಲಿ ತುಂಬುವಷ್ಟು ದ್ರವ್ಯ/ಧಾನ್ಯ ಒಂದು ಗಡಿಗೆಯಲ್ಲಿ ತುಂಬಬಹುದು ಎಂದು ಊಹಿಸುವುದು ಕಷ್ಟವಲ್ಲ. ಆ ರೀತಿಯ ಕುಂಭ ಮತ್ತು ದ್ರೋಣ ಪಾತ್ರೆಗಳಿಂದ ನೀರು ಸುರಿದರೆ ಅದು ಎಷ್ಟು ದಪ್ಪ ಜಲಧಾರೆಯಾಗಿ ಬೀಳಬಹುದೋ ಅಷ್ಟು ದಪ್ಪ ಧಾರೆಯ ಮಳೆ ಸುರಿಯುತ್ತಿದೆ ಅನ್ನೋದೇ ಕುಂಭದ್ರೋಣ ಮಳೆ ಆಯ್ತು. ಮುಸಲಧಾರೆಯ ವಿಷಯವೂ ಹೆಚ್ಚು ಕಮ್ಮಿ ಅದೇ. ಮುಸಲ ಅಂದರೆ ಒನಕೆ. ಒನಕೆಯಷ್ಟು ದಪ್ಪದ ಮಳೆಹನಿ - ಅಂತಹ ಅಮೋಘ ಮಳೆ.

* * *

ಇದರೊಂದಿಗೆ, ಲೋಕೋಕ್ತಿ ವಿಶ್ಲೇಷಣೆಯ ಮುಸಲಧಾರೆಯನ್ನು ಇಲ್ಲಿಗೆ ನಿಲ್ಲಿಸುವಾ. ಇನ್ನೂ ಒಂದಿಷ್ಟನ್ನು ಮುಂದೆ ಯಾವಾಗಾದರೂ ಕೈಗೆತ್ತಿಕೊಳ್ಳಬಹುದು. ನಿಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ-ಸೂಚನೆಗಳನ್ನು srivathsajoshi@yahoo.com ವಿಳಾಸಕ್ಕೆ ಪತ್ರ ಬರೆದು ತಿಳಿಸಿ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more