ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣ್ಣಿನ ವಾಸನೆಯ ಹಿತಾನುಭವ ಅನುಭವಿಸಿದ್ದೀರಾ?

By ಶ್ರೀವತ್ಸ ಜೋಶಿ
|
Google Oneindia Kannada News

Petrichor (ಉಚ್ಚರಿಸುವ ರೀತಿ 'ಪೆಟ್ರಿಕರ್‌’) ಎಂಬ ಪದದ ಅರ್ಥ ನಮ್ಮಲ್ಲಿ ಬಹುಮಂದಿಗೆ ಗೊತ್ತಿಲ್ಲದಿರುವ ಸಾಧ್ಯತೆಯೇ ಹೆಚ್ಚು. ಕ್ಷಮಿಸಿ, ನಾನು ನಿಮ್ಮ ಆಂಗ್ಲ ಪದಸಂಪತ್ತಿನ ಮೌಲ್ಯಮಾಪನಕ್ಕೆ ಹೊರಟಿದ್ದಲ್ಲ, ಆದರೆ petrichorನಂತಹ ಪದಗಳೊಂದಿಗೆ ನಮ್ಮ ಮುಖಾಮುಖಿಯಾಗಿರುವ ಸಂಭವನೀಯತೆ ಕಡಿಮೆ ಎನ್ನುವ ಅಂಶವನ್ನು ಹೇಳುತ್ತಿರುವುದಷ್ಟೆ. ಮೇಲಾಗಿ ಸದ್ರಿ ಪದವು ಸುಮಾರು 40 ವರ್ಷಗಳಿಂದೀಚೆಗಷ್ಟೇ ಇಂಗ್ಲಿಷ್‌ ಭಾಷೆಯಲ್ಲಿ ಸೇರಿಕೊಂಡಿರುವುದಾದ್ದರಿಂದ, ನಮಗೆ ಬಿಡಿ, ಇಂಗ್ಲಿಷ್‌ ಮಾತೃಭಾಷೆಯಾಗುಳ್ಳವರಿಗೂ ಈ ಪದದ ಪರಿಚಯವಿದ್ದೇ ಇರುತ್ತದೆ ಎಂದು ಹೇಳಲಿಕ್ಕಾಗದು!

ಏನದು ಅಂತಹ ವಿಶೇಷದ ಪದ? ಈವಾರದ ಅಡುಗೆಯಲ್ಲಿ ಅದರದೇ 'ಪದಾರ್ಥ’ ಮಾಡೋಣವೇ? ನೀವು ಸೈ ಎಂದರೆ ನಾನು ರೆಡಿ! ಆದರೆ ಈಗಲೇ ಹೇಳಿಬಿಡುತ್ತೇನೆ, ಈ ಪದಾರ್ಥವನ್ನು ಸೇವಿಸಿದಾಗ ನಿಮಗೊಂದು ದಿವ್ಯಾನುಭವವಾಗಲಿದೆ ನೋಡಿ! ಕಾರಣವೇನೆಂದರೆ petrichor ಎಂಬ ಪದವನ್ನು ಇದುವರೆಗೂ ನಾವು ನೀವು ಕೇಳಿರಲಿಕ್ಕಿಲ್ಲವಾದರೂ ಅದೇನನ್ನು ಪ್ರತಿನಿಧಿಸುತ್ತದೋ ಆ 'ಹಿತಾನುಭವ’ವನ್ನು ನಾವೆಲ್ಲರೂ ಅನುಭವಿಸಿಯೇ ಇದ್ದೇವೆ; ಪ್ರತಿಬಾರಿ ಅನುಭವಿಸಿದಾಗಲೂ ದಿವ್ಯಾನಂದವನ್ನು ಹೊಂದಿಯೂ ಇದ್ದೇವೆ.

ಅರ್ರೆ! ಯಾವುದಿರಬಹುದು ಆ ಚಿರಪರಿಚಿತ ಹಿತಾನುಭವ... ಅಂತೀರಾ? ಇನ್ನೂಇನ್ನೂ ನಿಮ್ಮ ತಾಳ್ಮೆಯನ್ನು ಪರೀಕ್ಷಿಸದೆ, ಇದೋ ಇಲ್ಲಿದೆ petrichor ಪದಾರ್ಥ.

Whats the secret behind sweet smell of first rain?

Petros ಮತ್ತು ichor ಎಂಬೆರಡು ಗ್ರೀಕ್‌ ಪದಗಳ ಸಂಗಮದಿಂದ ಆಗಿರುವ ಪದವೇ petrichor. ಅದರಲ್ಲಿ ಪೂರ್ವಾರ್ಧದ petros ಪದದ ಅರ್ಥ ಶಿಲೆ ಅಥವಾ ಕಲ್ಲು ಎಂದು. ಇನ್ನು ಉತ್ತರಾರ್ಧದ ಪದ ichor ಇದೆಯಲ್ಲಾ, ಇದು ವೆರಿ ಇಂಟೆರೆಸ್ಟಿಂಗ್‌ ಆಗಿದೆ! ಈ ಪದದ ಅರ್ಥ, ಗ್ರೀಕ್‌ ದೇವತೆಗಳ ಧಮನಿಗಳಲ್ಲಿ ಹರಿಯುತ್ತಿರುತ್ತದೆಯೆಂದು ನಂಬಲಾಗಿರುವ ಮತ್ತು ಅದರಿಂದ ಆ ದೇವತೆಗಳಿಗೊಂದು ದೈವಿಕ ಪರಿಮಳವಿರುತ್ತದೆಯೆಂದು ತಿಳಿದಿರಲಾಗಿರುವ ದ್ರವ. ಅಂದರೆ, ಗ್ರೀಕ್‌ ದೇವತೆಗಳ ನಾಡಿಗಳಲ್ಲಿ ರಕ್ತ ಹರಿಯುವುದಲ್ಲ - ಬದಲಿಗೆ, ichor ದ್ರವ.

ಸರಿ, ಈ ಎರಡು ಗ್ರೀಕ್‌ ಪದಗಳ ಕಸಿ ಮಾಡಿ ಇಂಗ್ಲಿಷ್‌ ಭಾಷೆಗೊಂದು ಪದವನ್ನು ಸೇರಿಸಿದವರು ಆಸ್ಟ್ರೇಲಿಯಾದ ಐ.ಜೆ.ಬೇರ್‌ ಮತ್ತು ಆರ್‌.ಜಿ.ಥೋಮಸ್‌ ಎಂಬ ಸಂಶೋಧಕರು. ಹಾಗಂತ ಹೇಳಿ ಅವರಿಬ್ಬರೇನೂ ಭಾಷಾಶಾಸ್ತ್ರಜ್ಞರಲ್ಲ, ಮಾನವಇತಿಹಾಸಜ್ಞರೂ ಅಲ್ಲ; ಪ್ರಕೃತಿ ವಿಜ್ಞಾನದ ಸಂಶೋಧನೆಯಷ್ಟೇ ಅವರ ವೃತ್ತಿ, ಪ್ರವೃತ್ತಿಗಳು. ಅಂದಮೇಲೆ ಪ್ರಕೃತಿಯಲ್ಲಿ ಗಮನಿಸಿದ ಯಾವುದೋ ಅದ್ಭುತ ಪ್ರಕ್ರಿಯೆಯನ್ನು ಬಣ್ಣಿಸಲಿಕ್ಕೇ ಅವರು ಇಂಥದೊಂದು ಪದವನ್ನು ಹುಟ್ಟುಹಾಕಿರಬೇಕು.

'ಒಣಗಿದ ಭೂಮಿಯ ಮೇಲೆ ಮೊದಲ ಮಳೆಯ ತುಂತುರು ಹನಿಗಳುದುರಿದಾಗ ಆ ಮುತ್ತುಗಳಿಂದ ಮತ್ತೇರತೊಡಗಿದ ಭೂದೇವಿ ಹೊರಸೂಸುವ ಒಂದು ಅನಿರ್ವಚನೀಯ ಪರಿಮಳ’ವನ್ನು ಬಣ್ಣಿಸಲು ಆ ವಿಜ್ಞಾನಿಗಳು petrichor ಎಂಬ ಪದವನ್ನು ಉಪಯೋಗಿಸಿದ್ದು! ಕಲ್ಲುಮಣ್ಣುಗಳಿಂದ ಹೊರಡುವ ಆ ಪರಿಮಳಕ್ಕೆ, ಗ್ರೀಕ್‌ ದೇವತೆಗಳ ಧಮನಿಗಳ ದ್ರವದ ದಿವ್ಯತೆಯನ್ನು ಕೊಟ್ಟ ಥೋಮಸ್‌-ಬೇರ್‌ ಜೋಡಿ, 1964ರಲ್ಲಿ Nature ಪತ್ರಿಕೆಯಲ್ಲಿ ಮಂಡಿಸಿದ ಒಂದು ಪ್ರಬಂಧದಲ್ಲಿ ಮೊದಲ ಬಾರಿಗೆ petrichor ಪದವನ್ನು ಬಳಸಿದರು.

ಮೊದಲಮಳೆಯ ಮಣ್ಣಿನವಾಸನೆಯ ಬಣ್ಣನೆಗೆ ಬಳಕೆಯಾದ petrichor ಕ್ರಮೇಣ ಒಂದು ಉಪಮೆಯಾಗಿ, ಒಂದು ರೂಪಕವಾಗಿ ಇಂಗ್ಲಿಷ್‌ ಸಾಹಿತ್ಯದಲ್ಲಿ ಕಾಣಿಸಿಕೊಳ್ಳತೊಡಗಿತು. ಸಾಹಿತ್ಯವಿಮರ್ಶೆಯ ತುಣುಕೊಂದರಲ್ಲಿ ಈ ಪದದ ಪ್ರಯೋಗವನ್ನು ಗಮನಿಸಿ - But, even in the other pieces, her prose breaks into passages of lyrical beauty that come as a sorely needed revivifying petrichor amid the pitiless glare of callousness and cruelty.

*

ಈಗೊಮ್ಮೆ ನೀವು ನೆನಪಿಸಿಕೊಳ್ಳಿ ಮೊದಲಮಳೆ ತರುವ ಮಣ್ಣಿನ 'ಪರಿಮಳ’ವನ್ನು. ಚಾತಕಪಕ್ಷಿಯಾದಿಯಾಗಿ ಸಕಲಜೀವರಾಶಿಯೆಲ್ಲ ಮಳೆಗಾಗಿ ಕಾಯುತ್ತ ಕಾಯುತ್ತ (ನಿಜವಾಗಿಯೂ 'ಕಾಯುತ್ತ’) ನಿಂತಿದ್ದಾಗ ಇಗೋ ಬಂದೇ ಬಿಟ್ಟೆ ಎಂದು ಸುರಿಯತೊಡಗುವ ಹನಿಗಳು ಎಬ್ಬಿಸುವ ಮಣ್ಣಿನ ವಾಸನೆಯನ್ನು! ಆ ನೆನಪಿನೊಂದಿಗೇ ಬರುವ ಇತರ ದೃಶ್ಯಾವಳಿಯನ್ನು - ಒಣಗಲು ಹಾಕಿರುವ ಬಟ್ಟೆಗಳು, ಟೆರೇಸ್‌ ಮೇಲಿನ ಹಪ್ಪಳ-ಸಂಡಿಗೆಗಳನ್ನೆಲ್ಲ ಒಳತರುವ ಧಾವಂತದಿಂದ ಹಿಡಿದು, ತಟಪಟ ಹನಿಯಪ್ಪ... ಬಾಯಲಿ ಉದುರಪ್ಪ... ಎನ್ನುತ್ತ ಕುಣಿಯುವ ಮಕ್ಕಳ ಕೇಕೆಯವರೆಗೆ, ಅದರ ಮಧ್ಯೆಯೂ ಪ್ರಥಮ ವರ್ಷಾಗಮನದ ಹರ್ಷೋಲ್ಲಾಸವನ್ನು...

ಅನುಭವಿಸಿ ಆನಂದಿಸಿಲ್ಲವೇ ನಾವೆಲ್ಲ ಇದನ್ನು? ಒಂದೇಒಂದು ಅಂದರೆ ಆ ಅದ್ಭುತಪ್ರಕ್ರಿಯೆಯನ್ನು ಬಣ್ಣಿಸಲಿಕ್ಕೆ, ಆ ದಿವ್ಯಾನುಭವವನ್ನು ಅಕ್ಷರಗಳಲ್ಲಿ ಮೂಡಿಸಲಿಕ್ಕೆ ನಮ್ಮ ಭಾಷೆಯಲ್ಲಿ ಸೂಕ್ತವಾದ ಪದವಿಲ್ಲ. ಆದರೆ ಅದೇನೂ ಚಿಂತೆಯ ವಿಷಯವಲ್ಲ ಬಿಡಿ, ಯಾಕೆಂದರೆ ಕೆಲವೊಂದು ಅನುಭವಗಳು 'ಅನಿರ್ವಚನೀಯ’ವೆನಿಸುವುದೇ ಹಾಗೆ ಅಲ್ಲವೆ?

ಹಾಗೆ ನೋಡಿದರೆ ನಮ್ಮ ಕನ್ನಡದ ಸೋದರಭಾಷೆಯಾದ ತೆಲುಗಿನಲ್ಲಿ, ಪ್ರಕೃತಿಯ ಈ ಪ್ರಕ್ರಿಯೆ-ಪ್ರತಿಕ್ರಿಯೆಗೆ ಒಂದು ಸುಂದರವಾದ ಪದವಿದೆ - 'ತೊಲಕರಿ’ ಎಂದು. ತೆಲುಗು ಸಾಹಿತ್ಯಪ್ರಕಾರಗಳಲ್ಲಿ, ಪ್ರೇಮಕಾವ್ಯಗಳಲ್ಲಿ, ಅದೆಷ್ಟೋ ಚಿತ್ರಗೀತೆಗಳಲ್ಲಿ ಸಹ 'ತೊಲಕರಿ’ ಶಬ್ದದ ಬಳಕೆ ಸರ್ವಸಾಮಾನ್ಯವಾಗಿದೆ. ತೊಲಕರಿ ಮೆರುಪುಲು, ತೊಲಕರಿ ಚಿನುಕುಲು, ತೊಲಕರಿ ಜಲ್ಲಲು... ಹೀಗೆ ಮೊದಲಮಳೆಯನ್ನು, ಅದು ಹೊತ್ತುತರುವ ಮಣ್ಣಿನ ವಾಸನೆಯನ್ನು ಮತ್ತದರ ಹಿತಾನುಭವವನ್ನು ತೆಲುಗು ಕವಿಗಳು, ಸಾಹಿತಿಗಳು ಬಹಳ ರಮ್ಯವಾಗಿ ಸೆರೆಹಿಡಿದಿರುವಂತಿದೆ. ಸಾಹಿತ್ಯಿಕ ಅಭಿರುಚಿಯ ತೆಲುಗು ಸ್ನೇಹಿತರಾರಾದರೂ ನಿಮಗಿದ್ದರೆ ಅವರ ಬಳಿ 'ತೊಲಕರಿ’ ಬಗ್ಗೆ ಪ್ರಸ್ತಾಪಿಸಿ ನೋಡಿ, ಪುಳಕಿತರಾಗುತ್ತಾರವರು!

ಅಕ್ಷರಗಳನ್ನು ಜೋಡಿಸಿ ಉಂಟಾದ ಒಂದು ಪದಕ್ಕೆ ನಿಜವಾದ ಸೌಂದರ್ಯ ಬರುವುದು ಅದರ ಅರ್ಥದಿಂದ... ಎನ್ನುವ ವ್ಯಾಖ್ಯೆಯನ್ನು ನೂರು ಪ್ರತಿಶತ ಸಮರ್ಥಿಸುವ ಉದಾಹರಣೆಗಳು petrichor, ತೊಲಕರಿ ಮೊದಲಾದ ಪದಗಳು. ಮಾಮೂಲಿ ಪದಗಳಾಗಿ ಕಂಡರೂ ಅವು ಸ್ಫುರಿಸುವ ಮಧುರಭಾವನೆಗಳು, ಚಿತ್ರಚಿತ್ತಾರಗಳು ಅದ್ಭುತ ರೋಮಾಂಚನ ತರಿಸುವಂಥವು ಎನಿಸುವುದಿಲ್ಲವೇ?

*

ಭಾವನೆಗಳು, ಅದರ ಅಭಿವ್ಯಕ್ತಿ ಮತ್ತು ಅದಕ್ಕೊಂದು ಪದದ ಅವಶ್ಯಕತೆ - ಇವನ್ನೆಲ್ಲ ಒತ್ತಟ್ಟಿಗಿಟ್ಟು, ಮೊದಲಮಳೆಯ ಮಣ್ಣಿನ ವಾಸನೆಯ ಹಿಂದಿನ ವೈಜ್ಞಾನಿಕ ಕಾರಣವೇನು ಎಂಬುದರ ಬಗ್ಗೆ ಈಗ ಒಂಚೂರು ಪರಿಶೀಲಿಸೋಣವೆ?

ನಮ್ಮ ಸುತ್ತಮುತ್ತಲಿನ ಮಣ್ಣಿನಲ್ಲಿ ನಮ್ಮ ಕಣ್ಣಿಗೆ ಕಾಣದಂಥ ಸೂಕ್ಷ್ಮಜೀವಿಗಳು - ಪ್ರಮುಖವಾಗಿ ಬಾಕ್ಟೀರಿಯಾ - ಅನೇಕವಿರುತ್ತವೆ. ಆಕಾರ, ಗಾತ್ರ ಮತ್ತು ಸ್ವಭಾವದ ಆಧಾರದಲ್ಲಿ ವಿಂಗಡಿಸಿದರೆ ಅವುಗಳಲ್ಲೇ ಹಲವಾರು ನಮೂನೆಗಳಿವೆ. ಎಲ್ಲವೂ ಹಾನಿಕಾರಕವಾದವುಗಳೇ ಎಂದೇನೂ ತಿಳಿಯಬೇಕಿಲ್ಲ. ಹಾಗೆಯೇ, ಮುಳ್ಳನ್ನು ಮುಳ್ಳಿಂದಲೇ ತೆಗೆ ಎನ್ನುವಂತೆ ಬಾಕ್ಟೀರಿಯಾದಿಂದ ಉಂಟಾಗುವ ರೋಗಗಳ ನಿವಾರಣೆಗೆ ಇತರ ಬಾಕ್ಟೀರಿಯಾವನ್ನೇ ಬಳಸುವಷ್ಟು ಮನುಷ್ಯನ ಬುದ್ಧಿವಂತಿಕೆ, ಸಂಶೋಧನಾ ಪ್ರವೃತ್ತಿಯೂ ಮುಂದುವರಿದಿದೆಯೆನ್ನಿ.

ಒಂದು ಪ್ರಮುಖವಾದ ಬಾಕ್ಟೀರಿಯಾ ಪ್ರಭೇದದ ಹೆಸರು ಆಕ್ಟಿನೊಮೈಸಿಟಿಸ್‌ ಎಂದು. ಮಣ್ಣಿನಲ್ಲಿ ಆರ್ದ್ರತೆಯಿರುವಾಗ ಯಾವ ತೊಂದರೆಯೂ ಇಲ್ಲದೆ ಆರಾಮಾಗಿ ಬದುಕುವ ಈ ಸೂಕ್ಷ್ಮಜೀವಿಗೆ, ಮಣ್ಣು ಶುಷ್ಕವಾಗತೊಡಗಿದಂತೆ ಜೀವನ ದುರ್ಭರವಾಗುತ್ತದೆ. ಆಗ ಅದೇನು ಮಾಡುತ್ತದೆಯೆಂದರೆ ಒಂದು ವಿಶೇಷ ರಕ್ಷಣಾಕವಚವನ್ನು (ಬಹುಷಃ ಜೀವದ್ರವ ಸರಬರಾಜಿನ ವ್ಯವಸ್ಥೆಯಾಂದಿಗೆ) ಕಟ್ಟಿಕೊಂಡು ಮಣ್ಣಿನಡಿಗೆ ಸೇರಿಕೊಳ್ಳುತ್ತದೆ. ಒಂದು ನಮೂನೆಯಲ್ಲಿ ನಿಶ್ಚೇಷ್ಟತೆ ಅಥವಾ hibernation ಎಂದರೂ ಸರಿಯೇ.

ಆಕ್ಟಿನೊಮೈಸಿಟಿಸ್‌ ಬಾಕ್ಟೀರಿಯಾದ ಈ ರಕ್ಷಣಾಕವಚಗಳಲ್ಲಿನ ತೈಲಾಂಶದ ಮೇಲೆ ನೀರು ಬಿದ್ದಾಗ ಉಂಟಾಗುವ ಜೀವರಾಸಾಯನಿಕ ಕ್ರಿಯೆಯಿಂದ ಹೊರಹೊಮ್ಮುವುದು ನಮಗೆಲ್ಲ ಚಿರಪರಿಚಿತವಾದ ಆ 'ಮಣ್ಣಿನ ವಾಸನೆ’! ತಟಪಟ ಉದುರುವ ಮಳೆಹನಿಗಳು ಈ ಪ್ರಕ್ರಿಯೆಯನ್ನು ಉತ್ಕರ್ಷಗೊಳಿಸಿದರೆ, ಹವಾಮಾನದಲ್ಲಿನ ತೇವಾಂಶವು ಆ ಪರಿಮಳಕ್ಕೆ ಸರಿಯಾದ ವಾಹಕವಾಗಿ ನಮ್ಮ ಮೂಗಿನವರೆಗೂ ಅದು ತಲುಪುವಂತೆ ಮಾಡುತ್ತದೆ. ಪರಿಮಳವನ್ನು ಆಘ್ರಾಣಿಸಿದ ನಮಗೆ ಒಂಥರಾ ಹಿತಾನುಭವವಾಗುತ್ತದೆ!

*

ಮೊದಲಮಳೆಯ ಮಣ್ಣಿನವಾಸನೆಯ ಪ್ರಕ್ರಿಯೆ-ಪ್ರತಿಕ್ರಿಯೆಗಳನ್ನು ಭಾಷೆಯ ದೃಷ್ಟಿಯಿಂದ ಮತ್ತು ವೈಜ್ಞಾನಿಕ ವಿಶ್ಲೇಷಣೆಯ ದೃಷ್ಟಿಯಿಂದ ವಿವರಿಸುವ ಒಂದು ಕಿರುಪ್ರಯತ್ನವನ್ನಷ್ಟೇ ನಾನಿಲ್ಲಿ ಮಾಡಿರುವುದು. ಅದರ ಭಾವನಾತ್ಮಕ ವರ್ಣನೆಗೆ ಅಪರಿಮಿತ ಸ್ಕೋಪ್‌ ಇದೆ; ಆದರೆ ನನಗೆ ಆ ಕೌಶಲ್ಯವಿಲ್ಲವಾದ್ದರಿಂದ ಆ ಮಟ್ಟಿಗೆ ನ್ಯಾಯ ಒದಗಿಸಿಲ್ಲವೆಂದೇ ಹೇಳಬಹುದು. ಭಾವುಕ ಜೀವಿಗಳಿಗೆ, ಕಥೆ-ಕವನಗಳನ್ನು ಹೆಣೆಯುವವರಿಗೆ, ಕಲ್ಪನಾಲೋಕದಲ್ಲಿ ವಿಹರಿಸುವವರಿಗೆ 'ಮೊದಲಮಳೆಯ ಮಣ್ಣಿನವಾಸನೆ’ ಒಂದು ಅತ್ಯುತ್ತಮ, ಆಪ್ಯಾಯಮಾನವಾದ ವಿಷಯ. ನಿಮ್ಮ ಪೈಕಿ ಇದನ್ನು ಭಾವನಾತ್ಮಕವಾಗಿ ವರ್ಣಿಸುವವರಿದ್ದರೆ, ಕವನ/ಕಥೆ/ಚುಟುಕ ಹೆಣೆಯುವವರಿದ್ದರೆ ಬರೆದು ಕಳಿಸಿ. ವಿಳಾಸ - [email protected].

English summary
Petrichor, the name for the smell of rain on dry ground, is from oils given off by vegetation, absorbed onto neighboring surfaces, and released into the air after a first rain. Vichitranna columnist Srivathsa Joshi describes about first rain and Petrichor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X