• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರುದ್ರಾಕ್ಷ : ಪರಮೇಶ್ವರನ ಕಣ್ಣೀರಿಂದ ಹುಟ್ಟಿದ ಬೀಜ!

By Super
|

ಓಂ ನಮಃ ಶಿವಾಯ। ಇಂದು ಮಹಾಶಿವರಾತ್ರಿ. ಹಬ್ಬದ ಕುರಿತಾಗಿ, ಉಪವಾಸ-ಫಲಾಹಾರ-ಪೂಜೆ-ಜಾಗರಣೆಗಳ ಕುರಿತಾಗಿ ಬರೆಯೋಣವೆಂದು ಒಮ್ಮೆ ಅಂದುಕೊಂಡೆ; ಆದರೆ ಈ ಅಂಕಣದ ಬೀಜಮಂತ್ರವಾದ ‘ಮಾಹಿತಿಯಲ್ಲಿ ಮನರಂಜನೆ'ಗೆ ಒತ್ತುಕೊಟ್ಟು , ಉಪವಾಸದ ದಿನವೂ ನಮ್ಮೆಲ್ಲರ ‘ತಿಳುವಳಿಕೆಯ ಹಸಿವಿಗೆ' ಒಂದೆರಡು ಕಾಳುಗಳನ್ನು ಸೇವಿಸುವ ರೀತಿಯಲ್ಲೇ ಲೇಖನವಿರಲಿ ಎಂದು ಆಮೇಲೆ ನಿರ್ಧರಿಸಿದೆ. ಆ ಪ್ರಕಾರ, ಪರಶಿವನ ಮಹಿಮೆಗೆ ಸಂಬಂಧಿಸಿದ್ದೇ ಆದ, ನಮಗೆಲ್ಲರಿಗೂ ಅತಿಪರಿಚಿತವಾದ ‘ರುದ್ರಾಕ್ಷ'ದ ಬಗ್ಗೆ ವಿವಿಧ ಮೂಲಗಳಿಂದ ಮಾಹಿತಿಯನ್ನು ಕ್ರೋಡೀಕರಿಸಿ ಒಂದು ವಿಚಿತ್ರಾನ್ನ ಪಕ್ವಾನ್ನವನ್ನು ತಯಾರಿಸಿದ್ದೇನೆ.

ತ್ರಿನೇತ್ರನ ನೆನೆದು ತಿಳಿದುಕೊಳ್ಳೋಣ ರುದ್ರಾಕ್ಷ ವಿವರಗಳನ್ನು ಈವಾರ ; ಹರಸಲಿ ನಮ್ಮೆಲ್ಲರನ್ನೂ ದಯಾಮಯನಾದ ಆ ಪರಮೇಶ್ವರ. ರುದ್ರಾಕ್ಷದ ಪರಿಚಯ ಯಾರಿಗಿಲ್ಲ! ಮುಖ್ಯವಾಗಿ ಶೈವ ಪಂಥದವರು, ಸ್ಮಾರ್ತರು ಮತ್ತಿತರ ಧರ್ಮವರ್ಗಗಳವರೂ ರುದ್ರಾಕ್ಷವನ್ನು ಅತಿಪೂಜ್ಯ ಭಕ್ತಿಭಾವದಿಂದ ಗೌರವಿಸುತ್ತಾರೆ; ಅದಕ್ಕೆ ಕಾರಣಿಕ ಮಹತ್ವವನ್ನೂ ಪ್ರಾಮುಖ್ಯವನ್ನೂ ಕೊಡುತ್ತಾರೆ. ಸಾಧುಸಂತರು, ಪವಾಡಪುರುಷರು, ಮಂತ್ರವಾದಿಗಳ ಇಮೇಜನ್ನು ರುದ್ರಾಕ್ಷಮಾಲೆಯಿಲ್ಲದೆ ಕಲ್ಪಿಸಲಿಕ್ಕೂ ಆಗದು ಅಲ್ಲವೆ? ಕಾಶಿ-ಬದರಿ-ಕೇದಾರ-ಹರಿದ್ವಾರ ಕ್ಷೇತ್ರಗಳಲ್ಲಿನ, ಹಿಮಾಲಯದ ಆಶ್ರಮಗಳಲ್ಲಿನ ಸನ್ಯಾಸಿಗಳು ದೊಡ್ಡದೊಡ್ಡ ರುದ್ರಾಕ್ಷಮಾಲೆಗಳನ್ನು ಧರಿಸಿರುತ್ತಾರೆ. ಅಂತಹ ಯೋಗಿಗಳು, ವಿಭೂತಿಪುರುಷರು ಮಾತ್ರವಲ್ಲ, ಜನಾನುರಾಗಿ ‘ಯೋಗಿ'ಗಳಾದ ಬುದ್ಧ, ಗಾಂಧೀಜಿ, ದಲಾಯಿಲಾಮ ಮುಂತಾದವರೂ ರುದ್ರಾಕ್ಷಮಾಲೆಯನ್ನು ಒಂದೋ ಧರಿಸಿದ್ದಾರೆ ಇಲ್ಲವೆ ಜಪತಪಕ್ಕೆ ಉಪಯೋಗಿಸಿದ್ದಾರೆ. ನಮ್ಮಲ್ಲೂ ತುಂಬಾಮಂದಿಯ ಮನೆಗಳಲ್ಲಿ, ಹಿರಿಯರ ಕೊರಳಲ್ಲಿ ರುದ್ರಾಕ್ಷಮಾಲೆ ಇದ್ದೇಇರುತ್ತದೆ, ಅಲ್ಲವೇ?

ರುದ್ರನ ಅಕ್ಷಿಯಿಂದುದುರಿದ ಕಣ್ಣೀರಹನಿ...

ರುದ್ರಾಕ್ಷದ ಮೂಲದ ಬಗ್ಗೆ ಬೇರೆಬೇರೆ ದಂತಕಥೆಗಳಿವೆ. ದೇವಿಭಾಗವತ ಪುರಾಣದಲ್ಲಿ ಬರುವ ಒಂದು ಕಥೆಯ ಪ್ರಕಾರ, ಹಿಂದೊಮ್ಮೆ ತ್ರಿಪುರಾಸುರನೆಂಬ ರಾಕ್ಷಸನು ಮೂರುಲೋಕಗಳಿಗೂ ವಿಪರೀತ ಉಪಟಳ ಕೊಡಲಾರಂಭಿಸಿದ್ದನು. ಅವನನ್ನು ಬಗ್ಗುಬಡಿಯುವಂತೆ ದೇವತೆಗಳೆಲ್ಲ ಸರ್ವಶಕ್ತನಾದ ಶಿವನ ಮೊರೆಹೊಕ್ಕರು. ತ್ರಿಪುರಾಸುರನ ದಾರ್ಷ್ಟ್ಯ ಎಷ್ಟು ಭಯಂಕರವಿತ್ತೆಂದರೆ ಅವನನ್ನು ನಿರ್ನಾಮ ಮಾಡುವುದು ಪರಮೇಶ್ವರನಿಗೂ ಸುಲಭದ ಮಾತಾಗಿರಲಿಲ್ಲ. ತ್ರಿಪುರಾಸುರ ಮತ್ತವನ ದೈತ್ಯಬಲದ ಹುಟ್ಟಡಗಿಸಲು ಈಶ್ವರನೂ weapon of mass destruction ಒಂದನ್ನು ಸೃಷ್ಟಿಸಬೇಕಾಗಿ ಬಂದಿತ್ತು. ಕೊಬ್ಬಿದ ರಾಕ್ಷಸನನ್ನು ಸದೆಬಡಿಯಲು ಬಳಸಲಾದ ಅದು ‘ಅಘೋರ' ಎಂಬ ಹೆಸರಿನ ದಿವ್ಯಾಸ್ತ್ರ. ಆ ಅಸ್ತ್ರಸಿದ್ಧಿಯ ವೇಳೆ ಈಶ್ವರ ಒಮ್ಮೆ ಕಣ್ಮುಚ್ಚಿ ತೆರೆದಾಗ, ದೇವಾಧಿದೇವನಾದ ಅವನ ಕಣ್ಣಾಲಿಗಳಿಂದಲೂ ಒಂದೆರಡು ಹನಿ ಕಣ್ಣೀರು ನೆಲಕ್ಕುದುರಿತ್ತಂತೆ(ಜಗತ್ತಿನ ಜೀವರಾಶಿಯೆಲ್ಲ ಅನುಭವಿಸುತ್ತಿದ್ದ ಕಷ್ಟಕಾರ್ಪಣ್ಯಗಳನ್ನು ನೋಡಿ ಪರಶಿವನಿಗೆ ಕಣ್ಣು ಮಂಜಾದದ್ದಿರಬಹುದು). ಈಶ್ವರನ ಕಣ್ಣೀರು ಬಿದ್ದ ಸ್ಥಳದಲ್ಲಿ ದೈವಶಕ್ತಿಯ ಮರಗಳು ಹುಟ್ಟಿಕೊಂಡು, ಆ ಮರದ ಬೀಜಗಳೇ ರುದ್ರಾಕ್ಷ (ಶಿವನ ಕಣ್ಣೀರು) ಎಂದು ಮಹತ್ವ ಪಡೆದುವು!

ಶಿವಪುರಾಣದಲ್ಲಿನ ಇನ್ನೊಂದು ಉಲ್ಲೇಖದಂತೆ ಪರಶಿವನು 1000ವರ್ಷಗಳ ಕಾಲ ಕಠಿಣ ತಪಸ್ಸನ್ನಾಚರಿಸಿ ಸಿದ್ಧಿಸಾಧನೆಯ ತರುವಾಯ ಕಣ್ತೆರೆದಾಗ ಅವನ ಕಣ್ಣುಗಳಿಂದ ಕಣ್ಣೀರು ಹರಿದಿತ್ತು. ಮತ್ತೂ ಒಂದು ಕಥೆಯ ಪ್ರಕಾರ ಸಮುದ್ರಮಥನದ ವೇಳೆ ವಿಷಸೇವಿಸಿ ನೀಲಕಂಠನಾದ ಶಿವನಿಗೆ ವಿಷದ ತೀಕ್ಷ್ಣ ಘಾಟನ್ನು ಸಹಿಸಲಾರದೆ ಬಂದ ಕಣ್ಣೀರು -ಅದು ಬಿದ್ದ ಕಡೆ ಹುಟ್ಟಿದ ಮರದ ಬೀಜಗಳೇ ರುದ್ರಾಕ್ಷ. ಹೀಗೆ ಪದ್ಮಪುರಾಣ, ಮಂತ್ರಮಹಾರ್ಣವ, ರುದ್ರಜಾಬಾಲೋಪನಿಷದ್‌ ಇತ್ಯಾದಿ ವಿವಿಧ ಆಕರಗಳ ದಂತಕಥೆಗಳದೂ ಒಟ್ಟು ತಾತ್ಪರ್ಯವೆಂದರೆ ಶಿವನ ಕಣ್ಣುಗಳಿಂದ ಹರಿದ ಆ ಕಣ್ಣೀರು ಅಸಾಮಾನ್ಯವಾದುದು, ಮಾನವೀಯತೆಯ ಆರ್ದ್ರ ಸೆಲೆಯಾಗಿ ಪ್ರವಹಿಸಿದ್ದು. ಅಂದಮೇಲೆ ಆ ಕಣ್ಣೀರಹನಿಗಳಿಂದ ಜನಿತ ವೃಕ್ಷದ ಬೀಜಗಳಿಗೂ ಪರಮೋಚ್ಚ ದೈವಿಕತೆ ಪ್ರಾಪ್ತವಾಗಿರುತ್ತದೆ.

ರುದ್ರಾಕ್ಷಗಳಿಗೆ ಪುರಾತನ ಕಾಲದಿಂದಲೂ ಇರುವ ಪೂಜ್ಯಭಾವದ ಹಿನ್ನೆಲೆಯಿದು. ಆಧ್ಯಾತ್ಮಿಕ ಜಪಮಾಲೆಯ ಮಣಿಗಳಾಗಿ, ಶಿವ-ಶಕ್ತಿ ಆರಾಧನೆಯ ಆಭರಣಗಳಲ್ಲೊಂದಾಗಿ ರುದ್ರಾಕ್ಷ ಗಳಿಸಿದ ದೈವಿಕತೆಯ ಸಾರವಿದು.

ವೈದ್ಯಕೀಯವಾಗಿಯೂ, ವೈಜ್ಞಾನಿಕವಾಗಿಯೂ...

ಕಥೆಗಳು, ಉಪಕಥೆಗಳು, ದಂತಕಥೆಗಳು ಏನೇ ಇರಲಿ. ಪುರಾತನ ಕಾಲದಿಂದಲೂ ರುದ್ರಾಕ್ಷ ಇಷ್ಟೊಂದು ಪ್ರಾಧಾನ್ಯವನ್ನು, ಪೂಜ್ಯತೆಯನ್ನು, ಉಪಯುಕ್ತತೆಯನ್ನು ಪಡೆದುಕೊಂಡು ಬಂದಿದೆಯೆಂದರೆ ಅದರಲ್ಲಿನ ದೈವೀಶಕ್ತಿಯ ಜತೆಗೇ ಔಷಧೀಯ ಗುಣಗಳನ್ನೂ, ಅದರ ಹಿಂದಿನ ವೈಜ್ಞಾನಿಕ ತಥ್ಯವನ್ನೂ ನಮ್ಮ ಪೂರ್ವಜರು ಅರಿತಿದ್ದರೆಂದೇ ಹೇಳಬೇಕು. ಭಾರತೀಯರಷ್ಟೇ ಅಲ್ಲ, ಚೀನಾ, ಜಪಾನ್‌, ಕೊರಿಯಾ ದೇಶದ ಜನರೂ ರುದ್ರಾಕ್ಷವನ್ನು ಧಾರ್ಮಿಕವಿಧಿಗಳಿಗೆ ಬಳಸುತ್ತಾರೆ, ಅರೆದು ಔಷಧಿಯಾಗಿ, ಚೂರ್ಣವಾಗಿ ಸೇವಿಸುತ್ತಾರೆ. ರುದ್ರಾಕ್ಷ ಮಾಲೆಯನ್ನು ಧರಿಸುವುದರಿಂದ ನಮ್ಮ ಮನಸ್ಸು ‘ಆಲ್ಫಾ'ಸ್ಥಿತಿಯಲ್ಲಿ -ಅಂದರೆ ಹೃದಯಬಡಿತ, ಶ್ವಾಸೋಚ್ಛ್ವಾಸ, ರಕ್ತಪರಿಚಲನೆ, ನರನಾಡಿಗಳ ಸಂವೇದನೆ -ಇವೆಲ್ಲವೂ ಸಮತೋಲದಲ್ಲಿರುವ ಸ್ಥಿತಿಯಲ್ಲಿ ಇರುವುದು ಸಾಧ್ಯವಾಗುತ್ತದೆನ್ನುತ್ತಾರೆ. ಇದು ಬರೀ ಭ್ರಾಂತಿಯಲ್ಲ, ಮೂಢನಂಬಿಕೆಯಲ್ಲ. ಭೌತವಿಜ್ಞಾನ-ಜೀವವಿಜ್ಞಾನದ ವಿಶ್ಲೇಷಣೆಯ ಅಗ್ನಿಪರೀಕ್ಷೆಗೆ ಒಳಪಡಿಸಿದರೂ ರುದ್ರಾಕ್ಷ ಅದರಲ್ಲಿ ಉತ್ತೀರ್ಣವಾಗುತ್ತದೆ. ಹೇಗೆ ಎಂದಿರಾ?

ಪೀಜೋ ಎಲೆಕ್ಟ್ರಿಸಿಟಿ ಎಂಬ ವಿದ್ಯುತ್‌ಕಾಂತೀಯ ಪರಿಣಾಮ ಉಂಟುಮಾಡುವ ಶಕ್ತಿ ರುದ್ರಾಕ್ಷ ಬೀಜಗಳಿಗಿದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಪೀಜೊ ಎಲೆಕ್ಟ್ರಿಕ್‌ ವಸ್ತುವನ್ನು ಒಂದು ವಿದ್ಯುತ್‌ಕ್ಷೇತ್ರಕ್ಕೆ ಒಳಪಡಿಸಿದಾಗ ಅದರಲ್ಲಿ ಅಷ್ಟೇ ಪ್ರಮಾಣದ ಆದರೆ ವಿರುದ್ಧ ಧ್ರುವದ ವಿದ್ಯುತ್‌ತರಂಗಗಳು ಹುಟ್ಟಿಕೊಳ್ಳುತ್ತವೆ. ನಮಗೆ ಗೊತ್ತಿರುವಂತೆ ನಮ್ಮ ಹೃದಯವು ಸದಾಸರ್ವದಾ ರಕ್ತಪ್ರವಾಹವನ್ನು ದೇಹಕ್ಕೆಲ್ಲ ಪಂಪ್‌ ಮಾಡುತ್ತಿರುವುದರಿಂದ ಸಹಜವಾಗಿಯೇ ಅಲ್ಲೊಂದು ಜೈವವಿದ್ಯುತ್‌ ಕ್ಷೇತ್ರ ಉಂಟಾಗಿರುತ್ತದೆ. ಕೊರಳಲ್ಲಿ ರುದ್ರಾಕ್ಷಮಾಲೆಯನ್ನು ಧರಿಸುವುದರಿಂದ ಹೃದಯದ ಸುತ್ತಲಿನ ಆ ವಿದ್ಯುತ್‌ಕ್ಷೇತ್ರಕ್ಕೆ ಸಮಪ್ರಮಾಣದ ವಿರುದ್ಧಧ್ರುವದ ಕ್ಷೇತ್ರವನ್ನು ರುದ್ರಾಕ್ಷಗಳು ನಿರ್ಮಿಸುವುದರಿಂದ ಅಲ್ಲಿ ಸಮತೋಲನ ಉಂಟಾಗುತ್ತದೆ. ಹೃದಯದ ಒತ್ತಡ ಮತ್ತು ತನ್ಮೂಲಕ ಉಂಟಾಗುವ ಮಾನಸಿಕ ಉದ್ವೇಗವನ್ನು ತಹಬಂದಿಗೆ ತರುವಲ್ಲಿ ರುದ್ರಾಕ್ಷ ವಹಿಸುವ ಮಹತ್ತರ ಪಾತ್ರವಿದು. ಮತ್ತೆ, ರುದ್ರಾಕ್ಷ ಬೀಜಗಳ ಸಸ್ಯಶಾಸ್ತ್ರೀಯ ಹೆಸರು Elaeocarpus Ganitrus ಎಂದಿರುವುದು ಅದರ ವಿದ್ಯುತ್‌ಕ್ಷೇತ್ರ ನಿರ್ಮಾಣ ಸಾಮರ್ಥ್ಯದಿಂದಲೇ!

ಇಂಡೋನೇಷ್ಯಾ ಮೂಲದ ಅರಣ್ಯೋತ್ಪನ್ನ...

ಹಿಂದೂ ದೇಶವಾದ ಭಾರತದಲ್ಲಿ ಅತ್ಯಧಿಕ ಗೌರವಾದರವಿರುವ ರುದ್ರಾಕ್ಷದ ತವರು ಇಂಡೊನೇಷ್ಯಾ ದೇಶ! ಈಗಲೂ ಅತ್ಯಧಿಕ ಪ್ರಮಾಣದಲ್ಲಿ ರುದ್ರಾಕ್ಷ ಮರಗಳಿರುವುದು ಜಾವಾ, ಬಾಲಿ ಮತ್ತಿತರ ಇಂಡೊನೇಷ್ಯಾ ದ್ವೀಪಗಳಲ್ಲಿ. ಹಾಗೆಂದು ಭಾರತದಲ್ಲಿ ರುದ್ರಾಕ್ಷ ಮರಗಳಿಲ್ಲವೆಂದೇನಿಲ್ಲ. ಹಿಮಲಯಭೂಭಾಗದಲ್ಲಿ ಉತ್ತರಪ್ರದೇಶ, ಹರಿದ್ವಾರ ಮುಂತಾದ ಕಡೆ, ಹಾಗೆಯೇ ನೇಪಾಳ, ಚೀನಾ, ಮಲೇಷ್ಯಾ ದೇಶಗಳ ಕಾಡುಗಳಲ್ಲೂ ರುದ್ರಾಕ್ಷ ಮರಗಳಿವೆ. ಸಾಕಷ್ಟು ಸಂಖ್ಯೆಯಲ್ಲಿ ಹಿಂದೂಗಳು, ಹಿಂದೂದೇವಾಲಯಗಳು, ಧರ್ಮಸಂಸ್ಥೆಗಳು ಇರುವ ಅಮೆರಿಕೆಯಲ್ಲೂ ರುದ್ರಾಕ್ಷ ವೃಕ್ಷಗಳಿವೆಯೆಂದರೆ ಆಶ್ಚರ್ಯವಾಗುತ್ತದಲ್ಲವೇ? ಅಮೆರಿಕೆಗೆ ಸೇರಿದ ಹವಾಯಿ ದ್ವೀಪಗಳಲ್ಲಿನ ‘ಕಾವೈ ಹಿಂದೂಪ್ರತಿಷ್ಠಾನ'ವು ತನ್ನ ಸಮುಚ್ಚಯದಲ್ಲಿ ಒಂದು ರುದ್ರಾಕ್ಷವನವನ್ನೇ ಬೆಳೆಸಿದೆ!

ರುದ್ರಾಕ್ಷ ವೃಕ್ಷಗಳೂ ತೇಗ, ಬೀಟೆ ಅಥವಾ ಆಲ ಮತ್ತಿತರ ಕಾಡುಮರಗಳಂತೆ ದಷ್ಟಪುಷ್ಟವಾಗಿ ದೊಡ್ಡದಾಗಿ ಬೆಳೆಯುತ್ತವೆ. ಮರದಲ್ಲಿನ ಹಣ್ಣುಗಳು ನೋಡಲು ಬೆರ್ರಿ (ನೆಲ್ಲಿಕಾಯಿ ಗಾತ್ರ) ಹಣ್ಣುಗಳಂತೆ ಇರುತ್ತವೆ. ರುದ್ರಾಕ್ಷ ಹಣ್ಣುಗಳು ಮಾಗಿದಾಗ ನೀಲಿ ಬಣ್ಣದವಾಗಿರುತ್ತವೆ. ಹಣ್ಣಾಗಿ ಒಣಗಿ ಹೋಗಿ ಮರದಿಂದ ಬೀಳುವ ಹೊತ್ತಿಗೆ ಅದಕ್ಕೆ ಸುಕ್ಕುಗಳು ಬಂದಿರುತ್ತವೆ; ಅವು ಗಟ್ಟಿ ಬೀಜಗಳಾಗಿರುತ್ತವೆ. ಆ ಬೀಜಗಳನ್ನು ಹೆಕ್ಕಿ ಅವನ್ನು ಬಣ್ಣದ ಎಣ್ಣೆಯಲ್ಲಿ ಸಂಸ್ಕರಿಸಿ ಒಣಗಿಸಲಾಗುತ್ತದೆ. ಬೀಜದ ತಳಿ ಮತ್ತು ಸಂಸ್ಕರಣದ ಬಣ್ಣವನ್ನವಲಂಬಿಸಿ ತಿಳಿಕಂದು, ಕಡುಕೆಂಪು, ತಿಳಿಹಳದಿ ಮತ್ತು ಕಪ್ಪು ಬಣ್ಣದ ರುದ್ರಾಕ್ಷಗಳಾಗುತ್ತವೆ.

ಈ ನಾಲ್ಕು ಬಣ್ಣಗಳು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ವರ್ಣಾಶ್ರಮಗಳನ್ನು ಪ್ರತಿನಿಧಿಸುತ್ತವೆ ಮತ್ತು ಆಯಾ ವರ್ಗದವರು ಅನುಕ್ರಮವಾಗಿ ಅ ಬಣ್ಣದ ರುದ್ರಾಕ್ಷಗಳನ್ನೇ ಧರಿಸಬೇಕು ಎಂದೂ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಗಳಿವೆಯಂತೆ.

ಏಕಮುಖಿ... ಬಹುಮುಖಿ...

ರುದ್ರಾಕ್ಷ ಬೀಜವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ನಿರ್ದಿಷ್ಟ ಸಂಖ್ಯೆಯ ಭಾಗಗಳ ಸಂರಚನೆಯಾಗಿರುತ್ತದೆ. ಒಂದು ನಮೂನೆಯಲ್ಲಿ, ಸಿಪ್ಪೆತೆಗೆದ ಕಿತ್ತಳೆಯನ್ನು ನೋಡಿದರೆ ಅದು ಎಷ್ಟೊ ಸಂಖ್ಯೆಯ ‘ತೊಳೆ'ಗಳಿಂದಾಗಿರುವುದು ಕಾಣಿಸುತ್ತದಲ್ಲ, ಹಾಗೆ. ರುದ್ರಾಕ್ಷದ ಇಡೀ ಬೀಜ ಒಂದೇ ಭಾಗದಿಂದ ಆಗಿದ್ದರೆ ಅದನ್ನು ಏಕಮುಖಿ ರುದ್ರಾಕ್ಷವೆನ್ನುತ್ತಾರೆ; ಅದು ಹೆಚ್ಚಾಗಿ ಅರ್ಧಚಂದ್ರಾಕೃತಿಯಲ್ಲಿರುತ್ತದೆ(ಗುಂಡಗಿರುವುದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ). ಅದೇ ರೀತಿ ದ್ವಿಮುಖಿ, ತ್ರಿಮುಖಿ, ಚತುರ್ಮುಖಿ, ಪಂಚಮುಖಿ ಇತ್ಯಾದಿ ಬೇರೆಬೇರೆ ಪ್ರಕಾರದ ರುದ್ರಾಕ್ಷಗಳು ಸಿಗುತ್ತವೆ. ಮುಖಗಳ ಸಂಖ್ಯೆ 6, 7, 8, 9 ... ಹೀಗೆ 21 ಮುಖಗಳುಳ್ಳ ರುದ್ರಾಕ್ಷಗಳೂ ಅಪರೂಪ ಕ್ಕೊಮ್ಮೆ ಸಿಕ್ಕಿದ್ದಿದೆಯಂತೆ. ಇಲ್ಲಿನ ಚಿತ್ರದಲ್ಲಿ ಒಂದರಿಂದ 12 ಮುಖಗಳವರೆಗಿನ ರುದ್ರಾಕ್ಷಗಳಿವೆ. ಅತಿ ಸಾಮಾನ್ಯವಾದುದು ಐದು ಮುಖಗಳ ‘ಪಂಚಮುಖಿ' ರುದ್ರಾಕ್ಷ.

ಒಂದೊಂದು ಮುಖದ ರುದ್ರಾಕ್ಷಕ್ಕೂ ತನ್ನದೇ ಆದ ಮಹತ್ವವಿದೆ, ಅದು ಯಾವ ಅಧಿದೇವತೆಗೆ ಸಂಬಂಧಿಸಿದ್ದು, ಯಾವ ದೋಷಪರಿಹಾರಾರ್ಥ ಅದರ ಮಾಲೆಯನ್ನು ಧರಿಸಬೇಕು ಇತ್ಯಾದಿ ಶಾಸ್ತ್ರೋಕ್ತ ಕೋಷ್ಟಕವಿದೆ. ಏಕಮುಖಿ ರುದ್ರಾಕ್ಷಕ್ಕೆ ಲಕ್ಷ್ಮಿ, ದ್ವಿಮುಖಿಗೆ ಅರ್ಧನಾರೀಶ್ವರ(ಶಿವ-ಶಕ್ತಿ), ತ್ರಿಮುಖಿಗೆ ಅಗ್ನಿ, ಚತುರ್ಮುಖಿಗೆ ಬ್ರಹ್ಮ, ಪಂಚಮುಖಿಗೆ ರುದ್ರ (ಈಶ್ವರ), ಷಣ್ಮುಖಿಗೆ ಕಾರ್ತಿಕೇಯ, ಸಪ್ತಮುಖಿಗೆ ಲಕ್ಷ್ಮೀ, ಅಷ್ಟಮುಖಿಗೆ ಗಣೇಶ, ನವಮುಖಿಗೆ ದುರ್ಗೆ, ದಶಮುಖಿಗೆ ಮಹಾವಿಷ್ಣು, ಹನ್ನೊಂದು ಮುಖದ್ದಕ್ಕೆ ಹನುಮಾನ್‌, ಹನ್ನೆರಡದ್ದಕ್ಕೆ ಸೂರ್ಯ

-ಹೀಗೆ ಅಧಿದೇವತೆಗಳು. ರುದ್ರಾಕ್ಷಬೀಜಗಳು ಕೆಲವೊಮ್ಮೆ ಸಯಾಮಿಸ್‌ ಅವಳಿಗಳಂತೆ ಜತೆಯಾಗೇ ಇದ್ದರೆ ಅದಕ್ಕೆ ‘ಗೌರೀ ಶಂಕರ' ಎಂಬ ಹೆಚ್ಚುಗಾರಿಕೆ. ಎಷ್ಟು ಮುಖಗಳುಳ್ಳ ರುದ್ರಾಕ್ಷಗಳ ಮಾಲೆಯನ್ನು ಧರಿಸಬೇಕು ಎಂಬ ಶಿಫಾರಸಿನ ಲೆಕ್ಕದಲ್ಲಿ ವ್ಯಕ್ತಿಯ ಜನ್ಮನಕ್ಷತ್ರ, ಜನ್ಮರಾಶಿ, ನವಗ್ರಹಗಳ ಪ್ರಭಾವ -ಇವೆಲ್ಲವೂ ತಾಳೆನೋಡಲ್ಪಡುತ್ತವೆ. ತಲಾ ಒಂದು, ಎರಡು, ಮೂರು... ಹೀಗೆ ಇಪ್ಪತ್ತೊಂದರವರೆಗೆ ಮುಖಗಳುಳ್ಳ ಒಂದೊಂದು ರುದ್ರಾಕ್ಷವನ್ನು ಪೋಣಿಸಿ ರಚಿಸಿದ ಜಪಮಾಲೆ ಧರಿಸಿದರೆ ಅದು ಅಮರತ್ವವನ್ನು ಕೊಡುತ್ತದೆ ಎಂಬ ಪ್ರತೀತಿಯಿದೆ!

ಇಷ್ಟೊಂದು ಮೌಲ್ಯವುಳ್ಳ ರುದ್ರಾಕ್ಷ ಸಹಜವಾಗಿಯೇ ಈಗ ಒಂದು ವಾಣಿಜ್ಯ ವ್ಯವಹಾರದ ಸರಕಾಗಿದೆ. ಕಳಪೆಮಟ್ಟದ ಬೀಜಗಳ ಅಥವಾ ಕಲಬೆರಕೆ ನಕಲಿ ಬೀಜಗಳ ಮಾರಾಟವೂ ನಡೆಯುತ್ತದೆ. ಧರ್ಮದ ಹೆಸರಲ್ಲಿ, ದೇವರ ಹೆಸರಲ್ಲಿ ಧಂಧೆ ನಡೆಸುವವರು ದುಡ್ಡು ಗಳಿಸುವ ಭರದಲ್ಲಿ ಭಕ್ತಾದಿಗಳಿಗೆ ಪಂಗನಾಮ ಹಾಕುತ್ತಾರೆ. ಚಿನ್ನ-ಬೆಳ್ಳಿ ಕೊಳ್ಳುವಾಗ ಜಾಗರೂಕತೆ ವಹಿಸಿ ಚೆನ್ನಾಗಿ ಗೊತ್ತಿರುವ ವ್ಯಾಪಾರಿಗಳಿಂದ ಮಾತ್ರ ಖರೀದಿಸುವಂತೆ ರುದ್ರಾಕ್ಷಗಳನ್ನೂ ಕೂಲಂಕಷ ಪರೀಕ್ಷಿಸಿಯೇ ಕೊಂಡುಕೊಳ್ಳುವುದು ಒಳ್ಳೆಯದು. ಇಲ್ಲಾಂದರೆ ದುಡ್ಡು ತೆತ್ತರೂ ಸಿಗೋದು ರುದ್ರಾಕ್ಷವಲ್ಲ, ಮೋಸಗಾರ ವ್ಯಾಪಾರಿ ಎರಚಿದ ಮಂಕುಬೂದಿ!

ಆದರೆ... ಬೂದಿಯೂ ಶಿವನದೇ ದ್ಯೋತಕ, ಹೌದಲ್ಲ? ಓಂ ನಮಃ ಶಿವಾಯ!

English summary
Vichitranna : Qualities and Importance of Rudraksha, an informative article by Srivathasa Joshi, ThatsKannanda Vichitranna columnist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X