• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲ್ಲವೂ ಉಪ್ಪು ಆದರೆ ನಿಮಗೆ ಒಪ್ಪುತ್ತದೆಯೇ?

By Staff
|
Srivathsa Joshi *ಶ್ರೀವತ್ಸ ಜೋಶಿ
‘ನೀನು ಅನ್ನ ತಿಂದಷ್ಟು ನಾನು ಉಪ್ಪು ತಿಂದಿದ್ದೇನೆ...’ - ಇದು, ಒಂದು ಯಕ್ಷಗಾನ ಪ್ರಸಂಗದಲ್ಲಿನ ಸಂಭಾಷಣೆಯ ತುಣುಕು. ಲಂಕಾಧಿಪತಿ ರಾವಣ ತನ್ನ ಆಸ್ಥಾನಕ್ಕೆ ಶತ್ರುಸಂದೇಶವಾಹಕನಾಗಿ ಬಂದ ಅಂಗದನಿಗೆ ಹೇಳುವ ಮಾತು. ಸ್ವಲ್ಪ ವಿವರಣೆಯಿಲ್ಲದಿದ್ದರೆ ಅರ್ಥವಾಗಲಿಕ್ಕಿಲ್ಲ. ಅಂಗದನ ಅನನುಭವವನ್ನು, ಜೀವನದಲ್ಲಿನ ಎಳವೆಯನ್ನು ಗೇಲಿಮಾಡುತ್ತ, ತನ್ನ ‘ಅಹಂ’ ಕೊಬ್ಬನ್ನು ಪ್ರದರ್ಶಿಸುವ ರಾವಣ ಹೇಳುತ್ತಿರುವು ದೇನೆಂದರೆ, ‘ಎಲೈ ಅಂಗದನೇ, ನೀನು ಹುಟ್ಟಿದಂದಿನಿಂದ ಇವತ್ತಿನವರೆಗೆ ಊಟದಲ್ಲಿ ಒಟ್ಟು ಎಷ್ಟು ಅನ್ನ ತಿಂದಿದ್ದಿಯೋ, ನಾನು ಹುಟ್ಟಿದಂದಿನಿಂದ ಇವತ್ತಿನವರೆಗಿನ ಊಟದಲ್ಲಿ ಅಷ್ಟು ಪ್ರಮಾಣದಲ್ಲಿ ಉಪ್ಪು ತಿಂದಿದ್ದೇನೆ!’ ಎಂದು. ಒಂದು ಊಟದಲ್ಲಿ ಅನ್ನ-ಉಪ್ಪುಗಳಿಗಿರುವ ಅನುಪಾತವೇ ಶಕ್ತಿ-ಸಾಮರ್ಥ್ಯ-ಜೀವನಾನುಭವಗಳಲ್ಲಿ ರಾವಣ ಮತ್ತು ಅಂಗದರ ಅನುಪಾತಕ್ಕೆ ಸಮ ಎಂದು ಇಂಗಿತ.

ಅದರ ಬದಲಿಗೆ, ರಾವಣ ಊಟದಲ್ಲಿ ಬರೀ ಉಪ್ಪನ್ನೇ ತಿನ್ನುತ್ತಾನೆಯೇ ಎಂಬ ಸಂಶಯ ಸಲ್ಲದು. ಆದರೆ, ಆ ಕಲ್ಪನೆ ಮಾತ್ರ ವಿಚಿತ್ರವಾಗಿದೆ ಯಲ್ಲವೇ? ಊಟವಿಡೀ ಉಪ್ಪು! ಕಲ್ಪನೆಯಷ್ಟೇ ಏಕೆ, ಪ್ರಯೋಗವನ್ನು ಮಾಡಿಯೇ ಬಿಡುವಾ. ಇವತ್ತು ವಿಚಿತ್ರಾನ್ನ ಊಟವಿಡೀ ಉಪ್ಪು. ಉಪ್ಪಿನ ಸುರಿಮಳೆ(ಅಮೆರಿಕದ ಪ್ರಖ್ಯಾತ ಅಡುಗೆಉಪ್ಪು Mortonನ ಜಿಂಗಲ್‌ನಂತೆ When it rains it pours)! ಕೇವಲ ಉಪ್ಪು ಮಾತ್ರ. ಇದು ನಿಮಗೆ ಒಪ್ಪುತ್ತದೆಯೋ ನೋಡಿ.

ಉಪ್ಪಿಗೇಕೆ ಪ್ರಮಾಣವಿಲ್ಲ? :

ಪ್ರಪಂಚದ ಯಾವುದೇ ದೇಶದ, ಪ್ರದೇಶದ, ಭಾಷೆಯ ಅಡುಗೆಪುಸ್ತಕವಿರಲಿ ಅಥವಾ ಟಿವಿ-ಅಡುಗೆ-ಶೋ ಇರಲಿ, ಒಂದು ವಿಷಯವನ್ನು ನೀವು ಗಮನಿಸಿರಬಹುದು. ಅವುಗಳಲ್ಲಿ ಯಾವುದೇ ರೆಸಿಪಿಯನ್ನು ಸೂಚಿಸುವಾಗಲೂ ಮಿಕ್ಕೆಲ್ಲ ಪದಾರ್ಥಗಳನ್ನು ನಿರ್ದಿಷ್ಟ ಅಳತೆ (ತೂಕ ಅಥವಾ ಗಾತ್ರ ಅಥವಾ ಎಣಿಕೆ)ಯಲ್ಲಿ ತಿಳಿಸುತ್ತಾರೆ. ಉಪ್ಪನ್ನು ಮಾತ್ರ ‘ರುಚಿಗೆ ತಕ್ಕಷ್ಟು’ ಎನ್ನುತ್ತಾರೆ! ರಿkುೕಟಿವಿಯ ‘ಖಾನಾ ಖಜಾನಾ’ ಕಾರ್ಯಕ್ರಮದಲ್ಲೂ ಅಷ್ಟೇ, ಬೇರೆ ಎಲ್ಲ ಇನ್‌ಗ್ರೇಡಿಯೆಂಟ್ಸಿಗೂ ಪ್ರಮಾಣ (ಕ್ವಾಂಟಿಟಿ) ಇದ್ದರೂ ’ನಮಕ್‌ - ಸ್ವಾದಾನುಸಾರ್‌’ ಎಂತಲೇ ಹೇಳುತ್ತಾನೆ ನಮ್ಮ ಸಂಜೀವ್‌ಕಪೂರ್‌. ವಿಶ್ವವಿಖ್ಯಾತ ಮಾಧುರ್‌ ಜೆಫ್ರಿಯ ಇಂಡಿಯನ್‌ ಕುಕಿಂಗ್‌ ಬುಕ್‌ನಲ್ಲೂ ಉಪ್ಪಿನ ವಿಷಯ ಬಂದಾಗ Salt – to taste ಅಂತಲೇ ಇರುತ್ತದೆಯೇ ವಿನಹ ಟೀಸ್ಪೂನ್‌, ಟೇಬಲ್‌ಸ್ಪೂನ್‌ ಅಥವಾ ಗ್ರಾಂ/ಮಿಲಿಗ್ರಾಂ ಲೆಕ್ಕವಿರುವುದಿಲ್ಲ.

ಆದರೆ ಯಾಕೆ ಹಾಗೆ? ಅದಕ್ಕೊಂದು ದಂತಕಥೆಯಿದೆ. ಈ ಕಥೆಯನ್ನು ನೀವು ಚಿಟಿಕೆ ಉಪ್ಪಿನೊಂದಿಗೆ (with a pinch of salt) ಓದಿ ಅರಗಿಸಿಕೊಳ್ಳಿ.

ಬಹಳ ಪುರಾತನ ಕಾಲದಲ್ಲಿ, ಉಪ್ಪು ಮಹಾವಾಚಾಳಿ ಸ್ವಭಾವದ್ದಾಗಿತ್ತು. ಅದಕ್ಕಿದ್ದ ಒಂದು ಕೆಟ್ಟಚಾಳಿಯೆಂದರೆ ಮಾತುಮಾತಿಗೂ ‘ಗಾಡ್‌ ಪ್ರಾಮಿಸ್‌’ ಅಥವಾ ದೇವರಾಣೆ ಎಂದು ಪ್ರಮಾಣ ಮಾಡಿಹೇಳುವುದು, ಮತ್ತು ಸಾರಿನಹುಡಿ, ಜೀರಿಗೆ, ಹುಣಸೆಹಣ್ಣು, ಮೆಣಸಿನಪುಡಿ, ಇಂಗು ಇತ್ಯಾದಿ ತನ್ನ ಓರಗೆಯವರಿಂದಲೂ ಪ್ರಮಾಣ ಮಾಡಿಸುವುದು. (ಮನುಷ್ಯರಲ್ಲಿ ಕೆಲವು ಮಂದಿಗೆ ಆ ‘ಗಾಡ್‌ ಪ್ರಾಮಿಸ್‌/ ದೇವರಾಣೆ...’ ಚಾಳಿ ಈಗಲೂ ಇದೆ). ಉಪ್ಪಿನ ಈ ದುರಭ್ಯಾಸದಿಂದ ಬೇಸತ್ತ ಸಹಇನ್‌ಗ್ರೇಡಿಯೆಂಟ್ಸೆಲ್ಲ ದೇವರ ಬಳಿ ದೂರು ಒಯ್ದುವು. ವಿಚಾರಣೆಯ ನಂತರ ದೇವರಿಗೂ ಉಪ್ಪಿನದು ಅತಿಯಾಯ್ತು ಅಂತೆನಿಸಿತು. ಆ ಕ್ಷಣದಲ್ಲೇ ಉಪ್ಪಿಗೆ ಶಾಪತಟ್ಟಿತು - ‘ಇನ್ನು ಮುಂದೆ ನೀನು ಪ್ರಮಾಣದ ಸುದ್ದಿ ತೆಗೆಯಲಿಕ್ಕಿಲ್ಲ, ಮಾತ್ರವಲ್ಲ ತ್ರಿಲೋಕಗಳಲ್ಲೂ ಜನರು ಯಾವುದೇ ಅಡುಗೆಯ ವಿಧಾನವನ್ನು ಇನ್ನೊಬ್ಬರಿಗೆ ತಿಳಿಸುವಾಗಲೂ ಉಪ್ಪಿಗೆ ಮಾತ್ರ ಪ್ರಮಾಣವನ್ನು ಸೂಚಿಸದೆ ಹಾಗೇ ಬಿಡಬೇಕು’! ಶಾಪದ ಬಿಸಿಗೆ ಉಪ್ಪು ಕರಗಿಹೋಯಿತು. ದೇವರಿಗೂ ಸ್ವಲ್ಪ ಕರುಣೆ ತೋರಿಸೋಣವೆನ್ನಿಸಿತು. ಶಾಪದ ಮಿಟಿಗೇಶನ್‌ ಆಗಿ, ‘ಉಪ್ಪೇ, ನಿನಗೆ ಕ್ವಾಂಟಿಟಿ ಇಲ್ಲದಿದ್ರೇನಂತೆ, ನಿನ್ನಿಂದಾಗಿಯೇ ಆಹಾರಕ್ಕೆ ಕ್ವಾಲಿಟಿ (ರುಚಿ) ಬರುವಂತಾಗಲಿ!’ ಎಂದು ದೇವರು ಹರಸಿದರು. ಹಾಗೆ ಹುಟ್ಟಿದ್ದೇ ಕನ್ನಡದ ಜನಜನಿತ ಗಾದೆ - ’ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ’.

ಉಪ್ಪು ಪ್ರಿ-ಫಿಕ್ಸ್‌ :

ಉಪ್ಪಿಗೆ ಕ್ವಾಂಟಿಟಿ ಇಲ್ಲವಾದ ಕಥೆಯ ನಂತರ ಈಗ ಉಪ್ಪು ಪ್ರಿ-ಫಿಕ್ಸ್‌ ಆಗಿರುವ ಕೆಲ ವಿಷಯಗಳನ್ನು ನೋಡೋಣ. ಕನ್ನಡ ಅಡುಗೆಯಲ್ಲಿ ಉಪ್ಪು ಪ್ರಿಫಿಕ್ಸ್‌ ಆಗಿರುವ ಪದಾರ್ಥಗಳ ಹೆಸರಿನ ದೊಡ್ಡ ಪಟ್ಟಿಯೇ ಇದೆ - ಉಪ್ಪಿಟ್ಟು, ಉಪ್ಪೇರಿ, ಉಪ್ಕರಿ, ಉಪ್ಪಿನಕಾಯಿ, ಉಪ್ಪಚ್ಚಿದಮೆಣ್ಸು... ಇತ್ಯಾದಿ. ಬೇರೆ ಯಾವ ಭಾಷೆಯಲ್ಲೂ ಹೀಗಿಲ್ಲ. ಈಗ ಗೊತ್ತಾಯ್ತಲ್ಲ ಉಪ್ಪಿಗೆ (ಶ್‌! ಆ ‘ಉಪ್ಪಿ’ಗೂ!) ಕನ್ನಡಭಾಷೆ ಯಾಕಿಷ್ಟ ಅಂತ? ನಮ್ಮ ತುಳುನಾಡಿನವರಂತೂ (ಸಮುದ್ರಕ್ಕೆ ಹತ್ತಿರವಿರುವವರಾದ್ದರಿಂದ?) ಇನ್ನೂ ಒಂದುಹೆಜ್ಜೆ ಮುಂದೆಹೋಗಿ, ಬೇಸಿಗೆಯಲ್ಲಿ ಹೆಚ್ಚುವರಿಯಾಗುಳಿದ ಹಲಸಿನಕಾಯಿತೊಳೆಗಳನ್ನು, ಮಿಡಿಮಾವಿನಕಾಯಿಗಳನ್ನು ಉಪ್ಪಿನಲ್ಲಿ ಹಾಕಿಟ್ಟು ಮಳೆಗಾಲದಲ್ಲಿ ಉಪಯೋಗಿಸುತ್ತಾರೆ! ಉಪ್ಪಲ್ಲಿ ಹಾಕಿಟ್ಟ ಹಲಸಿನಕಾಯಿತೊಳೆಯನ್ನು ತುಳುವಿನಲ್ಲಿ ‘ಉಪ್ಪಾಡ್‌ಫಚ್ಚೀರ್‌’ ಎನ್ನುವುದು. ಅದರಿಂದ ಪಲ್ಯ, ರೊಟ್ಟಿ, ಅಷ್ಟೇ ಏಕೆ ಸಂಡಿಗೆ-ಕೋಡುಬಳೆ ಇತ್ಯಾದಿಯನ್ನು ಮಾಡುವ ವಿಧಾನಗಳೂ ತುಳುನಾಡಿನವರಿಗೆ ಗೊತ್ತಿರುತ್ತದೆ.

ತುಳುನಾಡಿನ ಉಲ್ಲೇಖ ಬಂದಾಗ ‘ಉಪ್ಪಿನಂಗಡಿ’ಯನ್ನು ಮರೆಯುವುದೆಂತು? ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶಿರಾಡಿಘಾಟಿಯ ತಪ್ಪಲಲ್ಲಿ ಅದೊಂದು ಸಣ್ಣ ಊರು. ಮತ್ತೆ ನಿಮಗೆ ಬೊಂಬೆಯಾಟದ ಖ್ಯಾತಿಯ ಕೊಗ್ಗ ಕಾಮತ್‌ ಕುಟುಂಬ ಗೊತ್ತಲ್ಲ? ಅವರ ಊರು ಕುಂದಾಪುರ ಹತ್ತಿರದ ‘ಉಪ್ಪಿನಕುದ್ರು’ ಅಂತ. ಹಾಗೆಯೇ, ಕರ್ನಾಟಕಕ್ಕೆ ಸೇರಬೇಕಾದ - ಈಗ ಕಾಸರಗೋಡು ತಾಲೂಕಿನಲ್ಲಿದ್ದು ಕೇರಳರಾಜ್ಯದಲ್ಲಿರುವ - ಉಪ್ಪಳ ಎಂಬೊಂದು ಊರೂ ಇದೆ. ಉಪ್ಪುಂದ, ಉಪ್ಪೂರು, ಉಪ್ಪಂಗಳ... ಹೀಗೆ ಪಶ್ಚಿಮಕರಾವಳಿಗುಂಟ ಅನೇಕವಿವೆ. ಹಾಗೆ ನೋಡಿದರೆ ಉಪ್ಪಾರಪೇಟೆ ಬೆಂದಕಾಳೂರಿನಲ್ಲೂ ಇದೆ, Salt lake city ಅಮೆರಿಕದಲ್ಲೂ ಇದೆ; ಅಂತೂ ಉಪ್ಪು ಎಲ್ಲೆಲ್ಲೂ ಇದೆ ಅಂತಾಯ್ತು!

ಪಾಯಸಕ್ಕೆ ಉಪ್ಪು?

ದಾವಣಗೆರೆಯಲ್ಲಿ ಇಂಜನಿಯರಿಂಗ್‌ ಶಿಕ್ಷಣದ ವೇಳೆ ನಾನು ಮೊದಲೆರಡು ವರ್ಷ ಅಲ್ಲಿನ ‘ಕೃಷ್ಣ ಹಾಸ್ಟೆಲ್‌’ನಲ್ಲಿದ್ದೆ. ಅಲ್ಲಿ ಹಬ್ಬಹರಿದಿನಗಳ ಆಚರಣೆ ಮಾತ್ರವಲ್ಲ ದ್ವಾದಶಿಪಾರಣೆ ಇತ್ಯಾದಿಯೂ ಸಾಂಗವಾಗಿ ನೆರವೇರುತ್ತಿತ್ತು. ಅಂಥ ವಿಶೇಷ ದಿನಗಳಲ್ಲಿ ಊಟಕ್ಕೆ ಭಕ್ಷ್ಯಭೋಜ್ಯಗಳೂ, ಪಾಯಸವೂ ಇರುತ್ತಿತ್ತು. ಬಹುತೇಕವಾಗಿ ಹೆಸರುಬೇಳೆಯ ಪಾಯಸ. ಭಟ್ಟರು ತುಂಬ ಚೆನ್ನಾಗಿ ಮಾಡುತ್ತಿದ್ದರು. ನಾನು ಮಾತ್ರ ಪಾಯಸ ತಿನ್ನುವಾಗ ಅದಕ್ಕೆ ಸ್ವಲ್ಪ (ಜಸ್ಟ್‌ ಐದಾರು ಕಣಗಳಷ್ಟು ಮಾತ್ರ) ಉಪ್ಪನ್ನು ಸೇರಿಸಿಕೊಳ್ಳುವ ಕ್ರಮ. ಇದರಿಂದ ಪಾಯಸದ ಮಾಧುರ್ಯ ಹೆಚ್ಚಾಗುತ್ತದೆ ಅಂತ ನನಗೆ ಗೊತ್ತು (ಹೆಸರುಬೇಳೆಯ ಪಾಯಸದಂಥ, ಬೆಲ್ಲ ಹಾಕಿ ಮಾಡಿದ್ದಾದರೆ ಮಾತ್ರ). ಆದರೆ ನನ್ನ ಸಹಪಾಠಿಗಳಿಗೆಲ್ಲ ಇದೊಂದು ತಮಾಷೆಯ ಸಂಗತಿ - ಇವನು ಪಾಯಸಕ್ಕೂ ಉಪ್ಪು ಹಚ್ಚಿಕೊಳ್ಳುತ್ತಾನಲ್ಲ ಎಂದು. ಸುಬ್ರಹ್ಮಣ್ಯ ಉಡುಪನೆಂಬ ಸ್ನೇಹಿತನಂತೂ, ನಾವು ಶಿಕ್ಷಣಮುಗಿಸಿ ದಾವಣಗೆರೆಗೆ ಬೈ ಹೇಳುವ ಸಂದರ್ಭದಲ್ಲಿ ನನ್ನ ಅಟೊಗ್ರಾಫ್‌ ಪುಸ್ತಕದಲ್ಲಿ, ‘ಜೋಶಿ, ಎಲ್ಲೇ ಇರು, ಹೇಗೇ ಇರು, ಪಾಯಸಕ್ಕೆ ಉಪ್ಪು ಹಚ್ಚಿಕೊಳ್ಳುವಾಗಲಾದರೂ ನನ್ನನ್ನು ನೆನಪಿಸುತ್ತಿರು...’ ಎಂದು ಬರೆದಿಟ್ಟಿದ್ದಾನೆ! ನನ್ನ ಇವತ್ತಿನ ಈ ಉಪ್ಪಾಯಣವನ್ನು ಅವನೂ ಓದಿ ನನಗೆ ಪತ್ರಿಸುತ್ತಾನಂತ ಭಾವಿಸಿದ್ದೇನೆ.

ಸರ್ಕಾರ್‌... ಆಪ್‌ ಕಾ ನಮಕ್‌ ಖಾಯಾ ಹೈ...

ಶೋಲೆ ಚಿತ್ರದಲ್ಲಿ, ‘ತೇರಾ ಕ್ಯಾ ಹೋಗಾ ಕಾಲಿಯಾ?’ ಎಂದು ಗಬ್ಬರ್‌ಸಿಂಗ್‌ ಗುಡುಗಿದಾಗ ಕಾಲಿಯಾನ ಫೇಮಸ್‌ ಡೈಲಾಗು ಗೊತ್ತಲ್ಲ? ಈ ‘ಆಪ್‌ಕಾ ನಮಕ್‌ ಖಾಯಾ ಹೈ...’ ಎನ್ನುವ ನಾಣ್ಣುಡಿ, ಹಾಗೆಯೇ ‘ಉಪ್ಪು ತಿಂದ ಮನೆಗೆ ಎರಡು ಬಗೆಯಬೇಡ...’ ಎನ್ನುವ ಕನ್ನಡ ಗಾದೆ ಅಥವಾ ಅದೇ ಧ್ವನ್ಯರ್ಥದ ‘ನಮಕ್‌ ಹರಾಮ್‌’ ಎಂಬ ಬಳಕೆ - ಇವೆಲ್ಲದರ ಹಿಂದೆ ಭಾಷಾಶಾಸ್ತ್ರದ ಒಂದು ಜಾಡು (trace) ಇದೆ. ಆ ಜಾಡನ್ನು ಟ್ರೇಸಿಸಬೇಕಾದರೆ ನಾವು ನಮ್ಮ ಸಂಬಳದಿಂದ ಆರಂಭಿಸಬೇಕು. ಸಂಬಳ ಅಥವಾ ವೇತನಕ್ಕೆ ಇಂಗ್ಲಿಷ್‌ನಲ್ಲಿ salary ಅನ್ನೋದು ತಾನೆ? ಆ ಪದದ ಮೂಲ, ಲ್ಯಾಟಿನ್‌ ಭಾಷೆಯ salarium ಎಂಬುದು. Salarium ಎಂದರೆ ಪ್ರಾಚೀನ ರೋಮ್‌ನಲ್ಲಿ ಸೈನಿಕನೊಬ್ಬನ pay picket. ಬಹುತೇಕವಾಗಿ ಅದು ನಗದುರೂಪವಾಗಿರದೆ ದವಸಧಾನ್ಯ ಮತ್ತು ಮುಖ್ಯವಾಗಿ ಅಡುಗೆಉಪ್ಪಿನ ರೂಪದಲ್ಲಿರುತ್ತಿತ್ತಂತೆ. ಕೂಲಿಯಾಳುಗಳಿಗೆ ದೈನಿಕ/ಮಾಸಿಕ ವೇತನದಲ್ಲಿ ಉಪ್ಪನ್ನು ಕೊಡುವ ಕ್ರಮ ಪ್ರಪಂಚದ ವಿವಿಧ ಸಂಸ್ಕೃತಿಗಳಲ್ಲೂ ಇತ್ತು. worth your salt, ‘ಉಪ್ಪಿನ ಋಣ’, ‘ನಮಕ್‌ ಖಾಯಾ ಹೈ...’ - ಇವೆಲ್ಲವೂ ಒಂದು ಸಾಮಾನ್ಯ ಎಳೆಯನ್ನು ಹೊಂದಿವೆ, ಆ ಪ್ರಾಚೀನ ರೋಮ್‌ನ ಸೈನಿಕನ ಉಪ್ಪುಭತ್ಯೆ salarium ನೊಂದಿಗೆ!

ಉಪ್ಪಿನ ಸತ್ಯಾಗ್ರಹ :

ಸತ್ಯಾಗ್ರಹಕ್ಕೆ ಅಹಿಂಸಾ ಮಾರ್ಗವನ್ನು ಉಪಯೋಗಿಸಿಯೂ ಅದನ್ನೆಷ್ಟು ಪರಿಣಾಮಕಾರಿಯಾಗಿ ನಡೆಸಬಹುದು ಎಂಬುದಕ್ಕೆ ಪರಮೋಚ್ಚ ಉದಾಹರಣೆಯಾಗಿ ಮಹಾತ್ಮಾ ಗಾಂಧೀಜಿಯವರು 1930ರಲ್ಲಿ ಕೈಗೊಂಡ ‘ಉಪ್ಪಿನ ಸತ್ಯಾಗ್ರಹ’ವು ಭಾರತಸ್ವಾತಂತ್ರ್ಯಸಂಗ್ರಾಮದ ಅತಿಮಹತ್ವದ ಘಟ್ಟ. ದಿನಬಳಕೆಯ ಉಪ್ಪಿನ ಮೇಲೆ, ಉಪ್ಪು ಉತ್ಪಾದನೆ-ಮಾರಾಟದ ಮೇಲೆ ಕರ ವಿಧಿಸಿ ಉಪ್ಪು ತಯಾರಿಕೆಯಂಥದರಲ್ಲೂ ಸಾರ್ವಭೌಮತ್ವ ಸ್ಥಾಪಿಸಹೊರಟಿದ್ದರು ಬ್ರಿಟಿಷರು. ಈ ಧೋರಣೆಯನ್ನು ಧಿಕ್ಕರಿಸಿ ಗಾಂಧೀಜಿ ಮತ್ತು ಅವರ ಅನುಯಾಯಿಗಳು ಸಾಬರ್‌ಮತಿಯಿಂದ 240 ಮೈಲು ದೂರ ಕಾಲ್ನಡಿಗೆಯಲ್ಲಿ ಸಾಗಿ ದಂಡಿಯನ್ನು ತಲುಪಿ ಅಲ್ಲಿ ಕಾಯಿದೆಭಂಗ ಮಾಡಿದರು. ಗಾಂಧೀಜಿಯವರ ಆ ಸತ್ಯಾಗ್ರಹ ಭಾರತದ ಮೇಲೆ, ಭಾರತೀಯರ ಮೇಲೆ, ಭಾರತವನ್ನಾಳುತ್ತಿದ್ದ ಬ್ರಿಟಿಷರ ಮೇಲೆ, ಅಷ್ಟೇ ಏಕೆ ಇಡೀ ಜಗತ್ತಿನ ಮೇಲೂ ‘ಅಹಿಂಸಾವಾದ’ದ ಅಪಾರ ಪ್ರಭಾವ ಬೀರಿದೆ. ಎಷ್ಟೆಂದರೆ, 2002ರಲ್ಲಿ ಮಾರ್ಕ್‌ ಕರ್ಲಾನ್ಸ್ಕಿ ಎಂಬ ಲೇಖಕನೊಬ್ಬ ಉಪ್ಪಿನ ಬಗ್ಗೆ ಆಮೂಲಾಗ್ರ ಮಾಹಿತಿ ಸಂಗ್ರಹಿಸಿ ಬರೆದ salt: A World History ಎಂಬ 500 ಪುಟಗಳ ಪುಸ್ತಕಕ್ಕೆ ಹೊರರಕ್ಷಾಕವಚವಾಗಿ ಗಾಂಧೀಜಿಯವರ ದಂಡಿಯಾತ್ರೆಯ ಚಿತ್ರವನ್ನಾರಿಸಿಕೊಂಡಿದ್ದಾನೆ!

ಉ(ಪ್ಪು)ಪಸಂಹಾರ :

ಅಂತೂ ಕಡಲ್ಕೊರೆತದಂತೆ ಕಡಲ ಉತ್ಪನ್ನದ ಬಗೆಗಿನ ಕೊರೆತವಾಯ್ತು. ಈ ಪ್ರಬಂಧದ ಉಪಸಂಹಾರವಾಗಿ ಇನ್ನು ಒಂದೇಒಂದು ಉಲ್ಲೇಖ ಬಾಕಿಯಿದೆ. ಅದೇನೆಂದರೆ, ಪಾರ್ಲೆ ಕಂಪೆನಿಯವರು ಎಪ್ಪತ್ತರ ದಶಕದಲ್ಲಿ ಮೊಟ್ಟಮೊದಲ ಬಾರಿಗೆ, ಸಿಹಿ-ಉಪ್ಪು ಬೆರೆತಿಹ ಕ್ರಾಕ್‌ಜಾಕ್‌ ಬಿಸ್ಕೆಟ್‌ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗ ಅದರ ಕನ್ನಡ ಜಾಹೀರಾತು ಹೀಗಿತ್ತು - ತಾಥೈ ತತಪಾ ಉಪ್ಪುಪ್ಪು... ಧೀಂ ಸಿಹಿ ಧೀಂ ಸಿಹಿ ಧೀಂ ಧೀಂ ಧೀಂ... ಸಿಹಿಉಪ್ಪು ಬೆರೆತಿಹ ನೆಚ್ಚಿನ ಸ್ವಾದಂ... ಜೈ ಜೈ ಪಾರ್ಲೆ ಕ್ರಾಕ್‌ಜಾಕ್‌ ನಾದಂ...!

ಪೂರಕ ಓದಿಗೆ-

ಉಪ್ಪಿನ ಮೂಟೆ

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more