• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮೋ ವೆಂಕಟೇಶಾ... ನಮೋ ತಿರುಮಲೇಶಾ...

By Staff
|
Srivathsa Joshi *ಶ್ರೀವತ್ಸ ಜೋಶಿ
ಈ ಅಂಕಣದಲ್ಲಿ ಬರೆಯುವ ಲೇಖನಗಳಿಗೆ, ಹರಟೆ-ಪ್ರಬಂಧಗಳಿಗೆ (ಟಾಪಿಕ್‌ ಅದೇನೇ ಇರಲಿ), ಕೊನೆಗೆ ರಸಪ್ರಶ್ನೆ ಸಂಚಿಕೆಗಳಿಗೆ ಸಹಿತ ಬರುವ ಅನೇಕಾನೇಕ ಪ್ರತಿಕ್ರಿಯೆಗಳಲ್ಲಿನ ಒಂದು ಸಾಮಾನ್ಯಾಂಶವೆಂದರೆ, ‘ಇದನ್ನು ಓದುತ್ತಿದ್ದಂತೆ ನನಗೆ ಬಾಲ್ಯದ ನೆನಪಾಯ್ತು, ಹೈಸ್ಕೂಲ್‌ ದಿನಗಳ ನೆನಪಾಯ್ತು, ಕಾಲೇಜು ದಿನಗಳ ನೆನಪಾಯ್ತು, ನಾವೆಲ್ಲ ಒಮ್ಮೆ ಪ್ರವಾಸ ಹೋಗಿದ್ದು ನೆನಪಾಯ್ತು...’ ಅಥವಾ ಅದೇ ತರಹದ ಇನ್ನೇನೋ ನೊಸ್ಟಾಲ್ಜಿಯಾ ರಿಫ್ಲೆಕ್ಷನ್‌. ಎಷ್ಟೋ ಸಲ ಆ ರೀತಿ ನೆನಪುಗಳ ನೌಕಾವಿಹಾರಕ್ಕೆ ಓದುಗನನ್ನು ತಳ್ಳುವ ಉದ್ದೇಶವೇ ಇರದಿದ್ದರೂ ಯಾವುದೋ ಒಂದು ಸಂಗತಿಯ ಪ್ರಸ್ತಾಪ, ಯಾವುದೋ ಒಂದು ವಾಕ್ಯ/ಪದಪುಂಜದ ಬಳಕೆ, ಯಾವುದೋ ಒಂದು ಹಾಡಿನ ಸಾಲುಗಳ ಉಲ್ಲೇಖ ಅಥವಾ ಯಾವುದೋ ಒಂದು ಚಿತ್ರ ಆ ಜಾದೂ ಕೆಲಸವನ್ನು ನಮಗರಿವಿಲ್ಲದಂತೆಯೇ ಮಾಡಿಬಿಟ್ಟಿರುತ್ತದೆ.

ಉದಾಹರಣೆ ಕೊಡುವುದಾದರೆ, 21 ಕುಶಾಲುತೋಪುಗಳ ಬಗ್ಗೆ ಬರೆದಿದ್ದ ಲೇಖನವನ್ನೋದಿ ನನಗೆ ಎನ್‌.ಸಿ.ಸಿ ದಿನಗಳು ನೆನಪಾದುವು ಎಂದವರಿದ್ದಾರೆ; ಶಂಖದ ಬಗೆಗಿನ ಲೇಖನವನ್ನೋದಿ, ಚಿಕ್ಕಂದಿನಲ್ಲಿ ಸಮುದ್ರಕಿನಾರೆಯಲ್ಲಿ ಶಂಖ-ಕಪ್ಪೆಚಿಪ್ಪು ಹೆಕ್ಕಿತರುತ್ತಿದ್ದದ್ದು ನೆನಪಾಯ್ತು ಎಂದವರಿದ್ದಾರೆ; ಕ್ವಿಜ್‌ನಲ್ಲಿ ಸಾಲುಮರದ ತಿಮ್ಮಕ್ಕನ ಫೋಟೊ ನೋಡಿ ನನಗೆ ತವರೂರಿನ ನೆನಪಾಯ್ತು (ಏಕೆಂದರೆ ತಿಮ್ಮಕ್ಕ ಸಾಲುಮರಗಳನ್ನು ನೆಟ್ಟ ಕೂದೂರು-ಹುಲಿಕಲ್‌ ರಸ್ತೆ ನನ್ನ ತವರಿನ ದಾರಿ!) ಎಂದವರಿದ್ದಾರೆ. ಅಷ್ಟೇ ಏಕೆ, ವಿಚಿತ್ರಾನ್ನ ಪುಸ್ತಕ ಬಿಡುಗಡೆಯ ಸಮಾರಂಭ ಬಸವನಗುಡಿಯಲ್ಲಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ಸಭಾಂಗಣದಲ್ಲಿ ನಡೆಯಲಿದೆ ಎಂಬ ಸಮಾಚಾರವನ್ನೋದಿ ಐವತ್ತು-ಅರವತ್ತರ ದಶಕದಲ್ಲಿ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ಸಂಸ್ಥೆಯಾಂದಿಗಿನ ತನ್ನ ಮಧುರ ಸಂಬಂಧವನ್ನು ಮೆಲುಕುಹಾಕಿದ ವಯೋವೃದ್ಧರಿದ್ದಾರೆ!

ಯಾಕಿದನ್ನು ಪ್ರಸ್ತಾಪಿಸಿದೆನೆಂದರೆ ತುಂಬಾ ಸಲ ನನಗೆ ಇದು ಅಚ್ಚರಿಯನ್ನುಂಟುಮಾಡಿದೆ. ಓದುವ ಸಾಮಗ್ರಿ, ಓದಿನ ಪ್ರಕ್ರಿಯೆ ಮತ್ತು ನೆನಪುಗಳ ಸರಮಾಲೆ ಬಿಚ್ಚುವಿಕೆಯ ಪ್ರತಿಕ್ರಿಯೆ - ಇವುಗಳ ಪರಸ್ಪರ ಸಂಬಂಧವೇನಿರಬಹುದು? ಆ ರೀತಿ ‘ಓದಿದಾಗ ನೆನಪಾಯ್ತು...’ ಮನೋಭಾವವನ್ನೊಮ್ಮೆ ನಾನೂ ಹೊಕ್ಕಿನೋಡಬೇಕು ಎಂದು ನನಗೆ ಅನಿಸಿದ್ದಿದೆ.

ಮೊನ್ನೆ ನನಗೂ ಒಮ್ಮೆ ಹಾಗಾಯ್ತು! ಒಂದು ಸಚಿತ್ರ ಲೇಖನವನ್ನೋದುತ್ತಿದ್ದಂತೆ ಹಳೇನೆನಪುಗಳತ್ತ ತಾನೇತಾನಾಗಿ ಜಾರುವ ರಸಾನುಭವ ಪ್ರಾಪ್ತಿಯಾಯಿತು! ಅಷ್ಟಕ್ಕೂ ನಾನು ಏನನ್ನು ಓದಿದೆ, ಯಾವಾಗ ಓದಿದೆ, ನನಗೆ ಏನು ನೆನಪಾಯ್ತು ಅನ್ನೋದನ್ನು ವಿವರವಾಗಿ ತಿಳಿಸುತ್ತೇನೆ (ಟಿಪಿಕಲ್‌ ವಿಚಿತ್ರಾನ್ನ ಒಗ್ಗರಣೆಯಾಂದಿಗೆ), ಓದಿ. ಒಂದು ಮಾತನ್ನು ಈಗಲೇ ಹೇಳಿಬಿಡುತ್ತೇನೆ. ನನ್ನೀ ಓದಿನಪುರಾಣವನ್ನೋದಿ ಮತ್ತೆ ನಿಮಗೆ ನೆನಪುಗಳು ಮರುಕಳಿಸಿದರೆ ಅದಕ್ಕೆ ನಾನು ಜವಾಬ್ದಾರನಲ್ಲ, ಆರೀತಿ ನೋಸ್ಟಾಲ್ಜಿಯಾ ಲೋಕಕ್ಕೆ ಮತ್ತೊಮ್ಮೆ ನಿಮ್ಮನ್ನು ತಳ್ಳಿಬಿಡುವುದು ನನ್ನ ಉದ್ದೇಶವೂ ಅಲ್ಲ!

*

ಲಾಸ್‌ಏಂಜಲೀಸ್‌ನಲ್ಲಿ ಮೊನ್ನೆ ಡಿಸೆಂಬರ್‌ 3ರಂದು ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಅಲ್ಲಿಗೆ ಪ್ರವಾಸಮಾಡಿದ್ದೆ. ವಿಶಾಲವಾದ ಅಮೆರಿಕ ದೇಶದ ಈಶಾನ್ಯಭಾಗದಲ್ಲಿ ನಮ್ಮ ರಾಜಧಾನಿ ನಗರ ವಾಷಿಂಗ್ಟನ್‌ ಆದರೆ ಲಾಸ್‌ಏಂಜಲೀಸ್‌ ಇರುವುದು ಪಶ್ಚಿಮಕರಾವಳಿಯಲ್ಲಿ, ದೇಶದ ನೈಋತ್ಯ ಮೂಲೆಯಲ್ಲಿ. ನಮ್ಮ ವಾಷಿಂಗ್ಟನ್‌ ಸಮೀಪದ ಬಾಲ್ಟಿಮೋರ್‌ನಿಂದ ಲಾಸ್‌ಏಂಜಲೀಸ್‌ಗೆ ಡೈರೆಕ್ಟ್‌ ವಿಮಾನದಲ್ಲಿ ಸುಮಾರು ಐದು-ಐದೂವರೆ ಗಂಟೆಗಳ ಪ್ರಯಾಣ. ಆ ಸಮಯದಲ್ಲಿ ಓದಿಲಿಕ್ಕೆಂದು ನಾನೊಂದು ಪುಸ್ತಕ ಇಟ್ಟುಕೊಂಡಿದ್ದೆ. ಕಥೆ-ಕಾದಂಬರಿಗಳನ್ನೋದುವ ಜಾಯಮಾನದವನಲ್ಲವಾದ ನಾನು ಹೆಚ್ಚಾಗಿ ಪ್ರಿಫರಿಸುವುದು ರೀಡರ್ಸ್‌ ಡೈಜೆಸ್ಟ್‌ನಂತಹ ನಿಯತಕಾಲಿಕಗಳನ್ನು. ಆದರೆ ಮೊನ್ನೆಯ ಪ್ರಯಾಣಕ್ಕೆ ನನ್ನ ಕಿಟ್‌ಬ್ಯಾಗಲ್ಲಿದ್ದದ್ದು ರೀಡರ್ಸ್‌ ಡೈಜೆಸ್ಟಲ್ಲ, ಬದಲಿಗೆ ಈವರ್ಷದ ಉದಯವಾಣಿ ದೀಪಾವಳಿ ವಿಶೇಷಾಂಕ!

ಹೌದು, ವಿಶೇಷಾಂಕಗಳ ಬಗೆಗಿನ ನನ್ನ ವ್ಯಾಮೋಹ ಉಲ್ಲೇಖನೀಯ. ಪ್ರತಿವರ್ಷವೂ ಸುಧಾ ಯುಗಾದಿ ವಿಶೇಷಾಂಕ, ವಿಕ್ರಮ ವಿಜಯದಶಮಿ ವಿಶೇಷಾಂಕ, ಪ್ರಜಾವಾಣಿ, ಉದಯವಾಣಿ ದೀಪಾವಳಿ ವಿಶೇಷಾಂಕಗಳನ್ನು ಕೊಂಡು ಓದುವುದು ನಮ್ಮ ಮನೆಯಲ್ಲಿ (ನಿಮ್ಮಲ್ಲೂ ಹೆಚ್ಚಿನವರ ಮನೆಗಳಲ್ಲಿ) ಹಿಂದಿನಿಂದಲೂ ಬಂದ ರಿವಾಜು. ವಿಶೇಷವಾಗಿ ಉದಯವಾಣಿ ದೀಪಾವಳಿ ವಿಶೇಷಾಂಕವನ್ನಂತೂ ನನ್ನ ನೆನಪು ಚಾಚುವವರೆಗಿನ ವರ್ಷಗಳಿಂದಲೂ ಪ್ರತಿಸಲ ಓದಿದ್ದೇನೆ.

ಈಗ್ಗೆ ಐದು ವರ್ಷಗಳಿಂದ ಅಮೆರಿಕದಲ್ಲಿದ್ದರೂ ಒಂದೋ ಯಾರಾದರೂ ಅಕ್ಟೋಬರ್‌-ನವೆಂಬರ್‌ ವೇಳೆ ಭಾರತದಿಂದ ಇಲ್ಲಿಗೆ ಬರುವವರಿದ್ದರೆ ಅವರ ಮೂಲಕ ತರಿಸಿಯೋ ಇಲ್ಲವೇ ಇಂಟರ್‌ನೆಟ್‌ನಲ್ಲೇ ಆರ್ಡರ್‌ ಮಾಡಿಯೋ ಅಂತೂ ಉದಯವಾಣಿ ದೀಪಾವಳಿ ವಿಶೇಷಾಂಕ ನನ್ನ ಕೈಗೆ ಸೇರಲೇಬೇಕು. ಅದರಲ್ಲಿನ ಪಟಾಕಿ-ಅಳಿಯ-ಬೆಲೆಏರಿಕೆ-ದುಬಾರಿಹಬ್ಬದಾಚರಣೆ, ವಿಶೇಷಾಂಕ ಸಂಚಿಕೆಯನ್ನು ಎರವಲು ಪಡೆದು ಓದುವ ನೆರೆಮನೆಯವರು - ಇವೇ ಮೊದಲಾದ ಮಾಮೂಲಿ ವಿಷಯಗಳ ವ್ಯಂಗ್ಯಚಿತ್ರಗಳೂ ಸೇರಿದಂತೆ ಎಲ್ಲ ಪುಟಗಳನ್ನೂ ತಿರುವಿಹಾಕಿ ರಸಭರಿತವೆನಿಸಿದ್ದೊಂದಿಷ್ಟನ್ನು ಚಪ್ಪರಿಸಬೇಕು. ಆಗಲೇ ದೀಪಾವಳಿ ಬಂದುಹೋಯಿತು ಎಂದು ನನಗೆ ಕನ್ವಿನ್ಸ್‌ ಆಗೋದು. ಅಷ್ಟೂ ಹಚ್ಚಿಕೊಂಡಿದ್ದೇನೆ ನಾನು ಉದಯವಾಣಿ ವಿಶೇಷಾಂಕವನ್ನು!

ಈಬಾರಿಯ ಉದಯವಾಣಿ ದೀಪಾವಳಿ ವಿಶೇಷಾಂಕದ ಪ್ರಧಾನ ಆಕರ್ಷಣೆಯೆಂದರೆ ತಿರುಪತಿ-ತಿರುಮಲೆ ಕ್ಷೇತ್ರದ ಸಮಗ್ರ ಪರಿಚಯ ಕೊಡುವ ಸಚಿತ್ರ ಲೇಖನಗಳು (ಕಳೆದ ವರ್ಷ ಇದೇ ತರಹ ಕಾಶಿ ವಿಶ್ವನಾಥನ ದಿವ್ಯ ಸನ್ನಿಧಾನದ ಪರಿಚಯ ಲೇಖನಗಳಿದ್ದುವು). ತಿರುಪತಿ ಕ್ಷೇತ್ರಮಹಾತ್ಮೆಯನ್ನು ಉದಯವಾಣಿ ವಿಶೇಷಾಂಕಕ್ಕಾಗಿ ಅದ್ಭುತರಮ್ಯವಾಗಿ ವಿವರಿಸಿದವರು ಪ್ರೊ।ಕೆ.ಎಸ್‌.ನಾರಾಯಣಾಚಾರ್ಯ (‘ತರಂಗ’ದಲ್ಲಿ ಮಹಾಭಾರತ ಪಾತ್ರಗಳ ಬಗೆಗಿನ ವಿವರಗಳನ್ನು ಎಳೆಎಳೆಯಾಗಿ ಬಿಡಿಸಿ ಚೇತೋಹಾರಿಯಾಗಿ ಬರೆಯುತ್ತಿದ್ದರಲ್ಲ, ಅವರು). ಹಾಗೆಯೇ ಒ.ಎಲ್‌ ನಾಗಭೂಷಣ ಸ್ವಾಮಿ ಬರೆದ ಸಂಶೋಧನಾತ್ಮಕ ಲೇಖನ, ಇನ್ನೂ ಮೂರ್ನಾಲ್ಕು ಮಾಹಿತಿಪೂರ್ಣ ಲೇಖನಗಳು - ಓದುಗನಿಗೆ ಕುಳಿತಲ್ಲೇ ತಿರುಮಲೆ ಯಾತ್ರೆಯನ್ನು ಮಾಡಿಸುವಲ್ಲಿ ಯಶಸ್ವಿಯಾಗುವಂಥವು - ಇವುಗಳಿಂದ ಈ ಸಲದ ವಿಶೇಷಾಂಕಕ್ಕೆ ಒಂದು ದೈವಿಕ ಕಳೆಯೇರಿದೆ.

ಸರಿ, ಬಾಲ್ಟಿಮೋರ್‌ನಿಂದ ಲಾಸ್‌ಏಂಜಲೀಸ್‌ಗೆ ‘ಅಮೆರಿಕ ದೇಶಕ್ಕೆ ಹಾಕಿದ ಜನಿವಾರ’ ದಂಥ ಡಯಾಗನಲ್‌ ದಾರಿಯಲ್ಲಿ ನಮ್ಮ ವಿಮಾನ ಸಾಗುತ್ತಿದ್ದಂತೆ ನಾನು ಕೈಯಲ್ಲಿದ್ದ ಉದಯವಾಣಿ ವಿಶೇಷಾಂಕವನ್ನೋದುತ್ತಲೇ ಇನ್ನೊಮ್ಮೆ ತಿರುಪತಿಯಾತ್ರೆಗೈದಿದ್ದೆ! ವಿಮಾನದಲ್ಲಿದ್ದುಕೊಂಡೇ ತಿಮ್ಮಪ್ಪನ ದೇವಳದ ವಿಮಾನಗೋಪುರವನ್ನು ಕಣ್ಮುಂದೆ ಪ್ರತ್ಯಕ್ಷೀಕರಿಸಿ ಕೈಮುಗಿದಿದ್ದೆ!

ಯಾಕೆ ಆ ಲೇಖನಗಳು ನನ್ನ ಮನಸ್ಸನ್ನು ಸೂರೆಗೊಂಡವು, ನನಗೊಂದು ರೋಮಾಂಚನ ನೀಡಿದುವು, ನನ್ನನ್ನು ನೋಸ್ಟಾಲ್ಜಿಯಾಕ್ಕೆ ತಳ್ಳಿದುವು ಎಂದರೆ, ಸುಮಾರು ಹತ್ತು-ಹನ್ನೆರಡು ವರ್ಷಗಳ ಹಿಂದೆ, ಹೈದರಾಬಾದ್‌ನಲ್ಲಿದ್ದ ದಿನಗಳಲ್ಲಿ ನನ್ನ ಇಬ್ಬರು ಸಹೋದ್ಯೋಗಿಗಳೊಂದಿಗೆ ನಾನೂ ತಿರುಪತಿಯಾತ್ರೆ ಮಾಡಿ ಬಂದಿದ್ದೇನೆ. ನನ್ನ ಮಿತ್ರರಾದ ವರಪ್ರಸಾದ್‌ ಮತ್ತು ರಾಜಕುಮಾರ್‌ ಇವರಿಬ್ಬರೂ ಪ್ರತಿವರ್ಷವೂ (ಅಥವಾ ಕೆಲವೊಮ್ಮೆ ವರ್ಷಕ್ಕೆ ಎರಡುಮೂರು ಸಲ) ತಿರುಪತಿಗೆ ಹೋಗಿ ಬರುವವರು. ಹಾಗೆ ಅವರಿಬ್ಬರೂ ಸೇರಿ ಒಂದು ತಿರುಪತಿ ಟ್ರಿಪ್‌ ಯೋಜನೆ ಹಾಕಿದ್ದಾಗ ಮೂರನೆಯವನಾಗಿ ನನ್ನನ್ನೂ ಸೇರಿಸಿಕೊಂಡಿದ್ದರು. ಆ ಯಾತ್ರೆಯ ದೃಶ್ಯಾವಳಿಯೆಲ್ಲ ಒಂದೊಂದಾಗಿ ನನ್ನ ಮನಸ್ಸಲ್ಲಿ ಸುಳಿಯತೊಡಗಿತು...

*

ಹೈದರಾಬಾದ್‌ನಿಂದ ಸಂಜೆ ಹೊರಟು ಮಾರನೆ ದಿನ ಬೆಳಿಗ್ಗೆಗೆ ತಿರುಪತಿ ತಲುಪುವ ನಾರಯಣಾದ್ರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಮ್ಮ ಪ್ರಯಾಣ. ನನಗೆ ಅದು ಮೊಟ್ಟಮೊದಲ ತಿರುಪತಿಪ್ರವಾಸವಾದ್ದರಿಂದ ಸಹಜವಾಗಿಯೇ ಹೆಚ್ಚು ಎಕ್ಸೈಟ್‌ಮೆಂಟ್‌. ಅದೂ ಅಲ್ಲದೇ ನಮ್ಮ ಬೃಹತ್‌ಯೋಜನೆ ಏನಿದ್ದದ್ದೆಂದರೆ ತಿರುಪತಿಯಿಂದ ತಿರುಮಲೆಗೆ (ಬೆಟ್ಟದ ತಪ್ಪಲಲ್ಲಿ, ರೈಲುನಿಲ್ದಾಣ ಇತ್ಯಾದಿ ಇರುವ ದೊಡ್ಡ ನಗರ ತಿರುಪತಿ; ಬೆಟ್ಟದ ಮೇಲಿನದು ತಿರುಮಲೆ. ಆದರೂ ರೂಢಿಯಲ್ಲಿ ಎಲ್ಲರೂ ‘ತಿರುಪತಿಗೆ ಹೋಗಿ ಬಂದ್ವಿ...’ ಅಂತಲೇ ಹೆಳುವುದು) ಕಾಲ್ನಡಿಗೆಯಲ್ಲಿ ಪ್ರಯಾಣ! ’ಸ್ವಾಮಿವಾರಿ ಮೆಟ್ಟಲು’ಗಳನ್ನೇರುತ್ತ, ಗೋವಿಂದಾ ಗೋವಿಂದ ಎನ್ನುತ್ತ ಭಕ್ತವರೇಣ್ಯರಾಗಿ ಹೋಗಿ ದೇವರದರ್ಶನ ಮಾಡಿಕೊಂಡು ಹಿಂತಿರುಗುವ ಕಾರ್ಯಕ್ರಮ. ತಿರುಪತಿ ನಿಲ್ದಾಣದಲ್ಲಿ ರೈಲಿನಿಂದಿಳಿದು ಅಲ್ಲಿನ ಪ್ರಖ್ಯಾತ ಭೀಮಾಸ್‌ ರೆಸ್ಟೋರೆಂಟಿಗೆ ಹೋಗಿ ಮುಖಮಾರ್ಜನದ ನಂತರ ರವಾದೋಸೆ ಬ್ರೇಕ್‌ಫಾಸ್ಟಿಸಿ, ಫಾಸ್ಟ್‌ ಆಗಿ ಮೆಟ್ಟಲು ಹತ್ತಲಾರಂಭಿಸಿದ ನಾವು ಅಪರಾಹ್ನ ಎರಡು ಗಂಟೆಯ ಹೊತ್ತಿಗೆಲ್ಲ ಬೆಟ್ಟವನ್ನೇರಿದ್ದೆವು.

ಟಿಟಿಡಿಯ ಹೈದರಾಬಾದ್‌ ಕಾರ್ಯಾಲಯದಿಂದಲೇ ನಾವು ಛತ್ರವೊಂದರಲ್ಲಿ ರೂಮ್‌ ಬುಕ್‌ಮಾಡಿದ್ದೆವಾಗಿ ಅಲ್ಲಿಗೆ ಹೋಗಿ ಸ್ನಾನಾದಿ ಮುಗಿಸಿ ಸ್ವಾಮಿದರ್ಶನಕ್ಕೆ ಹೊರಟೆವು. ನಾವು ಹೋಗಿದ್ದು ಫೆಬ್ರವರಿ ತಿಂಗಳ ಮಧ್ಯಭಾಗವಾದ್ದರಿಂದ ಆಗ ಜನಸಂದಣಿ ಕೊಂಚ ಕಡಿಮೆ. ಹೆಚ್ಚುವರಿ ಶುಲ್ಕವಿಲ್ಲದೆನೇ ಆರಾಮಾಗಿ ಧರ್ಮದರ್ಶನ ಮಾಡಿಕೊಂಡು ಬರಲಿಕ್ಕಾದದ್ದು ನಮ್ಮ ಯಾತ್ರೆಯ ಒಂದು ಹೈಲೈಟ್‌. ನನಗೆ ಪ್ರಪ್ರಥಮ ಬಾರಿಯ ತಿರುಪತಿಯಾತ್ರೆಯದು ಎಂದು ಆಗಲೇ ಅಂದೆನಲ್ಲ? ಹೈದರಾಬಾದ್‌ನಿಂದ ಹೊರಡುವಾಗ, ರೈಲಿನಲ್ಲಿ ಪ್ರಯಾಣಿಸುವಾಗ, ಏಳುಗಂಟೆಗಳ ಕಾಲ ಕಾಲ್ನಡಿಗೆಯಲ್ಲಿ ಬೆಟ್ಟವೇರುವಾಗಲೆಲ್ಲ ‘ಲುಕಿಂಗ್‌ ಫಾರ್ವರ್ಡ್‌ ಟು ಸೀ ಲಾರ್ಡ್‌ ವೆಂಕಟೇಶ್ವರ...’ ನನ್ನಲ್ಲಿ ತುಳುಕುತ್ತಿತ್ತೆಂಬುದನ್ನೂ ಹೇಳಿದೆನಲ್ಲ? ಕೊನೆಗೂ ಆ ದಿವ್ಯಕ್ಷಣ ಬಂದಾಗ, ಅಂದರೆ ತಿಮ್ಮಪ್ಪನ ಗುಡಿಯ ಸ್ವರ್ಣಗೋಪುರ ನನ್ನ ದೃಷ್ಟಿಗೆ ಬಿದ್ದಾಗ ನನ್ನ ಮೊಗದಲ್ಲೊಂದು ವಿಶೇಷವಾದ ಹೊಳಪನ್ನು, ‘ಧನ್ಯೋಸ್ಮಿ’ ಭಾವವನ್ನು ನನ್ನ ಮಿತ್ರದ್ವಯರು ಸ್ಪಷ್ಟವಾಗಿ ಗಮನಿಸಿದರಂತೆ! ಇರಲೂಬಹುದು, ಜಗದ್ವಿಖ್ಯಾತ ಜಗನ್ನಿಯಾಮಕನ ದಿವ್ಯದರ್ಶನ, ಅದೂ ಮೊದಲಸಲ ಎಂದಮೇಲೆ ಪುಳಕವಿರಲೇಬೇಕಲ್ಲ!

ಜನಸಂದಣಿಯಿಲ್ಲದೆ ಧರ್ಮದರ್ಶನ ಎಂದೆನಾದರೂ ತಿರುಪತಿಯಂಥ ತಿರುಪತಿಕ್ಷೇತ್ರದಲ್ಲಿ ದೇವಸ್ಥಾನದೊಳಗೆ ಕಿಕ್ಕಿರಿವ ಜನಸಂದಣಿಯಿಲ್ಲದಿರುವುದನ್ನು ಊಹಿಸಲೂ ಸಾಧ್ಯವಿಲ್ಲ. ಹಾಗಾಗಿ ನಮಗೆ ಸಿಕ್ಕಿದ್ದೂ ಅರ್ಧ ಸೆಕೆಂಡಿನ ಅವಧಿಯ ದರ್ಶನವೇ. ಮತ್ತೆ ಸೆಕ್ಯುರಿಟಿ ಗಾರ್ಡ್‌ಗಳ ‘ಜರಗಂಡಿ... ಜರಗಂಡಿ...’ ದಬಾಯಿಸುವಿಕೆಯೇ. ಆದರೂ ಏನನ್ನೋ ಸಾಧಿಸಿದ, ಏನನ್ನೋ ಪ್ರಾಪ್ತಿಮಾಡಿಕೊಂಡ, ಕನಿಷ್ಠಪಕ್ಷ ತಿಮ್ಮಪ್ಪನ ಸನ್ನಿಧಾನದಲ್ಲೇ ಲಡ್ಡು-ವಡಾ ಪ್ರಸಾದ ಸ್ವೀಕರಿಸಿದ ದಿವ್ಯಾನುಭವವಂತೂ ಅವಶ್ಯವಾಗಿ ಆಯ್ತೆನ್ನಿ. ರಾತ್ರೆ ಛತ್ರದಲ್ಲೇ ಊಟ, ವಸತಿ, ಮಾರನೆದಿನ ಅಲ್ಲಿನ ಇತರ ಸಣ್ಣಪುಟ್ಟ ಗುಡಿಗೋಪುರಗಳ ದರ್ಶನ, ನಯನಮನೋಹರ ಉದ್ಯಾನದಲ್ಲಿ ಸ್ವಲ್ಪ ಹೊತ್ತು ವಾಯುವಿಹಾರ, ಒಂದಿಷ್ಟು ಸ್ಪೆಷಲ್‌ ಫೋಟೊಗಳ ಕ್ಲಿಕ್ಕೀಕರಣ, ‘ಭೀಮಾಸ್‌ ರೆಸ್ಟೋರೆಂಟ್‌’ನಲ್ಲಿ ಮಧ್ಯಾಹ್ನದೂಟ, ತಿರುಚ್ಚಾನೂರಿನ ಪದ್ಮಾವತಿ ಆಲಯಕ್ಕೆ ಭೇಟಿ - ಇವನ್ನೆಲ್ಲ ಪೂರೈಸಿ ಬೆಟ್ಟವಿಳಿಯುವಾಗ ಬಸ್‌ನಲ್ಲಿ ಬಂದು ತಿರುಪತಿ ರೈಲ್ವೇನಿಲ್ದಾಣದಿಂದ ಮತ್ತೆ ನಾರಾಯಣಾದ್ರಿ ಎಕ್ಸ್‌ಪ್ರೆಸ್‌ ಹತ್ತಿ ಹೈದರಾಬಾದ್‌ಗೆ ಮರುಪ್ರಯಾಣ.

ತಿರುಪತಿ ಯಾತ್ರೆಯ ನೆನಪಿಗಾಗಿ ನಾನು ಅಲ್ಲಿ ಒಂದು ತೆಲುಗು ಭಕ್ತಿಗೀತೆಗಳ ಕ್ಯಾಸೆಟ್‌ ಖರೀದಿಸಿದ್ದೆ, ಈಗಲೂ ಅದು ನನ್ನ ಬಳಿ ಇದೆ. ಈ ಕ್ಯಾಸೆಟ್‌ ಬಗ್ಗೆ ಸ್ವಲ್ಪ ಹೆಚ್ಚುವರಿ ಮಾಹಿತಿಯನ್ನಿಲ್ಲಿ ಬರೆಯಬೇಕೆನಿಸುತ್ತದೆ. ನಮ್ಮ ಕರ್ನಾಟಕದಲ್ಲಾದರೆ ಟೂರಿಂಗ್‌ ಟಾಕೀಸ್‌ಗಳಲ್ಲಿ ಅಥವಾ ಗ್ರಾಮೀಣ ಪ್ರದೇಶದ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನದ ಮೊದಲಿಗೆ (ಅಂದರೆ ನ್ಯೂಸ್‌ರೀಲ್‌ ಮತ್ತು ಜಾಹೀರಾತುಗಳಿಗಿಂತಲೂ ಮೊದಲು) ಗಜಮುಖನೆ ಗಣಪತಿಯೆ ನಿನಗೆ ವಂದನೆ... ಹಾಡನ್ನು ಮೈಕ್‌ನಲ್ಲಿ ಊರಿಡೀ ಕೇಳುವಂತೆ ಹಾಕುವ ಪರಿಪಾಠವಿದೆಯಲ್ಲವೆ? ಅದೇ ತರಹ ಅಂಧ್ರಪ್ರದೇಶದ ಚಿತ್ರಮಂದಿರಗಳಲ್ಲಿ (ಹೈದರಾಬಾದ್‌ನ ಅತ್ಯಾಧುನಿಕ ಡಿಟಿಎಸ್‌ ಚಿತ್ರಮಂದಿರಗಳೂ ಸೇರಿದಂತೆ) ಬಹುತೇಕವಾಗಿ ಚಿತ್ರಪ್ರದರ್ಶನಕ್ಕೆ ಮೊದಲು, ಘಂಟಸಾಲ ಹಾಡಿರುವ ಒಂದು ಜನಜನಿತ ಭಕ್ತಿಗೀತೆ ‘ನಮೋ ವೆಂಕಟೇಶಾ ನಮೋ ತಿರುಮಲೇಶಾ... ಮಹಾನಂದಮಾಯೆ ಓ ಮಹಾದೇವದೇವಾ...’ ಹಾಡನ್ನು ತಪ್ಪದೇ ಹಾಕುವುದು ಕ್ರಮ.

ಹೈದರಾಬಾದ್‌ನಲ್ಲಿದ್ದಾಗಿನ ದಿನಗಳಲ್ಲಿ ಸಿನೆಮಾ ನೋಡುವಾಗೆಲ್ಲ ನಾನು ಆ ಹಾಡನ್ನು ಬಹುವಾಗಿ ಮೆಚ್ಚಿ ಆ ಧ್ವನಿಸುರುಳಿಯನ್ನು ಕೊಳ್ಳಬೇಕೆಂದುಕೊಂಡಿದ್ದುಂಟು, ಆದರೆ ಸಾಧ್ಯವಾದರೆ ಅದನ್ನು ತಿರುಪತಿಯಲ್ಲೇ, ‘ಏಡುಕೊಂಡಲವಾಡ’ನ ಪದತಲದಲ್ಲೇ ಕೊಂಡರೆ ಅದಕ್ಕೊಂದು ಹೆಚ್ಚಿನ ಮಹತ್ವ ಎಂದು ಪ್ರತಿಸಲವೂ ಮುಂದೂಡುತ್ತಿದ್ದೆ. ಕೊನೆಗೂ ತಿರುಪತಿಯಾತ್ರೆಯ ವೇಳೆ ಮುದ್ದಾಂ ಆಗಿ, ಬೆಟ್ಟದ ಮೇಲಿನ ಒಂದು ಆಡಿಯೋಕ್ಯಾಸೆಟ್‌ ಅಂಗಡಿಯಿಂದಲೇ ಆ ಕ್ಯಾಸೆಟ್ಟನ್ನು ಖರೀದಿಸಿದೆ!

*

ಉದಯವಾಣಿ ವಿಶೇಷಾಂಕ ಪಠಣದಿಂದಾಗಿ ಈ ಎಲ್ಲ ನೆನಪುಗಳ ಸುರುಳಿ ಒಮ್ಮೆ ರೀ-ಪ್ಲೇ ಆಯಿತು! ಘಂಟಸಾಲ ಕಂಠಸಿರಿಯ ಆ ಎವರ್‌ಗ್ರೀನ್‌ ಭಕ್ತಿಪಾಟ ‘ನಮೋ ವೆಂಕಟೇಶಾ ನಮೋ ತಿರುಮಲೇಶಾ...’ ಸಹ ಕಿವಿಗಳಲ್ಲಿ ಅನುರಣಿಸಿತು. ಲಾಸ್‌ಏಂಜಲೀಸ್‌ ತಲುಪುವ ಹೊತ್ತಿಗೆ ನಾನು ವಿಶೇಷಾಂಕದ ತಿರುಪತಿ ವಿಶೇಷವನ್ನೆಲ್ಲ ಓದಿದ್ದಾಯ್ತು. ವಾಪಾಸ್‌ ಪ್ರಯಾಣದಲ್ಲಿ ಮತ್ತೆ ವಿಶೇಷಾಂಕ ತೆರೆಯುವ ಬದಲು ಏನು ಮಾಡಿದೆನೆಂದರೆ, ಲ್ಯಾಪ್‌ಟಾಪ್‌ ಸ್ವಿಚ್‌ಆನ್‌ ಮಾಡಿ ಬರಹದಲ್ಲಿ ಇದನ್ನೆಲ್ಲ ಟೈಪಿಸಿ, ಮನೆಗೆ ಬಂದ ಮೇಲೆ ದಟ್ಸ್‌ಕನ್ನಡಕ್ಕೆ ವಿ-ಅಂಚಿಸಿದೆ. ಇವತ್ತು ನಿಮಗಿದು ವಿಚಿತ್ರಾನ್ನ ಸಂಚಿಕೆಯಾಗಿ ಓದಲಿಕ್ಕೆ ಸಿಕ್ಕಿತು!

ಎಂದಿನಂತೆಯೇ ನಿಮ್ಮ ಅನಿಸಿಕೆ, ಅಭಿಪ್ರಾಯ, ವಿಮರ್ಶೆ, ವ್ಯಾಖ್ಯಾನಗಳನ್ನು ತಪ್ಪದೇ ಬರೆದು ತಿಳಿಸಿ. ವಿಳಾಸ - srivathsajoshi@yahoo.com

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X