ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪವು ನಿನ್ನದೆ ಗಾಳಿಯು ನಿನ್ನದೆ...?

By Super
|
Google Oneindia Kannada News

ದೀಪಾವಳಿಯ ಸಂದರ್ಭ ಬಿಟ್ಟರೆ ಬೇರೆ ಯಾವಾಗಾದರೂ ದೀಪದ ಬಗ್ಗೆ ಪ್ರಬಂಧ ಬರೆಯಬಾರದು ಎಂದೇನಿಲ್ಲವಷ್ಟೆ. ದೀಪ (ಮತ್ತು ಅದರಿಂದ ಬೆಳಕು) ನಮ್ಮ ದೈನಂದಿನ ಅಗತ್ಯಗಳಲ್ಲೊಂದಲ್ಲ? ಉರಿವ ದೀಪವನ್ನು ಜೀವಕ್ಕೆ, ಜೀವನಕ್ಕೆ, ಜ್ಞಾನಕ್ಕೆ, ಜಾಗೃತಿಗೆ ಹೋಲಿಸಲಾಗುತ್ತದೆ. ಅಂದಮೇಲೆ ದೀಪದ ಬಗ್ಗೆ ಸ್ವಲ್ಪ ಬೆಳಕನ್ನು ಜೀವನಪ್ರೀತಿಯ ಈ ಅಂಕಣದಲ್ಲಿ ಚೆಲ್ಲಲೇಬೇಕು. ಹಾಗಾಗಿ ಇವತ್ತು 'ಲೈಟ್‌’ಆಗಿ ದೀಪಾರಾಧನೆ! ಆದರೆ ತಾಳಿ, ಇದು ’ದೀಪ’ ಕುರಿತಂತೆ ಪ್ರಬಂಧವಲ್ಲ ; ಅಲ್ಲಾವುದ್ದೀನನ ಅದ್ಭುತದೀಪದ ಬಗ್ಗೆ ಇಲ್ಲಿ ಪ್ರಸ್ತಾಪವಿಲ್ಲ, ಒಲಂಪಿಕ್ಸ್‌ ಜ್ಯೋತಿಯ ವಿಚಾರವೂ ಇಲ್ಲ. ಬದಲಿಗೆ, ಸ್ವಲ್ಪ ವೈಶಿಷ್ಟ್ಯ ವಿಭಿನ್ನತೆಗಳನ್ನು ತರುವುದಕ್ಕಾಗಿ, ದೀಪ ಉರಿಸುವುದು/ ದೀಪ ಆರಿಸುವುದು - ಈ ಪ್ರಕ್ರಿಯೆಗಳ ಕುರಿತಂತೆ ಒಂದಿಷ್ಟು ಹರಟೆ. ಕೊನೆಯಲ್ಲಿ ಇದೇ ಪ್ರಕ್ರಿಯೆಗೆ ಸಂಬಂಧಿಸಿದ ಒಂದು ರಸಪ್ರಶ್ನೆಯೂ ಇದೆ. ನಿಮ್ಮ ತಲೆಯಲ್ಲಿ ದೀಪ ಉರಿಯುತ್ತದೋ (ಉತ್ತರ ಹೊಳೆಯುತ್ತದೋ) ನೋಡಿ!

ಅಚ್ಚ ಭಾರತೀಯ ಸಂಸ್ಕೃತಿಯಂತೆ ಹಣತೆಯಲ್ಲಿ ದೀಪ ಹಚ್ಚಿ ಇಂದಿನ ಈ ಸಂಚಿಕೆಯ ಶುಭಾರಂಭವನ್ನು ಮಾಡೋಣ.

*ಮೊಟ್ಟಮೊದಲಿಗೆ ಇವತ್ತಿನ ಶೀರ್ಷಿಕೆಯ ವಿಲೇವಾರಿ. ನಿಮಗೀಗಾಗಲೇ ಗೊತ್ತಾಗಿರುವಂತೆ ಅದು ಕವಿ ಕೆ.ಎಸ್‌ ನರಸಿಂಹಸ್ವಾಮಿಯವರ ಕವನವೊಂದರ ಆರಂಭದ ಸಾಲು. ಆ ಸಾಲನ್ನು ಇವತ್ತಿನ ಶೀರ್ಷಿಕೆಗೆ ಸಾಲವಾಗಿ ಬಳಸಿದ್ದಕ್ಕೆ ಕೆ.ಎಸ್‌.ನ ಗೆ ರಾಯಲ್‌ ಟೀ ಕೊಡೋಣವೆಂದರೆ ಅವರೀಗ ನಮ್ಮನಡುವೆ ಇಲ್ಲವಲ್ಲ. ಹ್ಞಾಂ ಇನ್ನೊಂದು ವಿಷಯ ನೆನಪಿಗೆ ಬಂತು! ನಮ್ಮ ವಾಷಿಂಗ್‌ಟನ್‌ ಡಿಸಿಯ ಕನ್ನಡತಿ, ಕವಯಿತ್ರಿ, ಕಥೆಗಾರ್ತಿ ಶಶಿಕಲಾ ಚಂದ್ರಶೇಖರ್‌ ತನ್ನ ಚೊಚ್ಚಲ ಕಥಾಸಂಕಲನಕ್ಕೆ 'ದೀಪವು ನಿನ್ನದೆ ಗಾಳಿಯೂ ನಿನ್ನದೆ’ ಎಂಬ ಹೆಸರಿಟ್ಟು ಪ್ರಕಟಿಸಿದ್ದಾರೆ. ಅದೇ ಶೀರ್ಷಿಕೆಯ ಒಂದು ಕಥೆ ಆ ಸಂಕಲನದಲ್ಲಿದೆ. ಶಶಿಕಲಾ ಅವರಿಗೆ ರಾಯಲ್‌ ಟೀ ಕೊಡುವುದು ಕಷ್ಟವಾಗಲಿಕ್ಕಿಲ್ಲ, ಹಾಗೇ ಮಾಡುತ್ತೇನೆ.

ದೀಪವು ನಿನ್ನದೆ ಗಾಳಿಯು ನಿನ್ನದೆ... ಎಂಬ ಭಾವಾರ್ಥವನ್ನೇ ಸ್ಫುರಿಸುವ ಸಾಲುಗಳು ಕನ್ನಡ ಚಿತ್ರಗೀತೆಯಾಂದರಲ್ಲೂ ಇವೆ. ಅದು 'ನಾರಿ ಮುನಿದರೆ ಮಾರಿ’ ಚಿತ್ರದ ಗೀತೆ, ಗೀತಪ್ರಿಯ ಬರೆದಿರುವುದು. ಪಿ.ಸುಶೀಲಾ ಹಾಡಿದ ಆ 'ಗೋಪಿಲೋಲಾ ಹೇ ಗೋಪಾಲಾ...’ ಹಾಡಿನ ಚರಣದಲ್ಲಿ ಬರುತ್ತದೆ - ' ನೀನೇ ಉರಿಸಿದ ದೀಪಗಳನ್ನು ನೀನೇ ಆರಿಸಿ ನೋಡುವೆಯಾ...’ ಎಷ್ಟೊಂದು ಸುಂದರವಾದ ಸಾಲು! ಈ ಜಗತ್ತಿನ ಜೀವರಾಶಿಯನ್ನು ದೀಪಗಳಿಗೆ ಹೋಲಿಸಿ, ಪ್ರತಿ ಜೀವಿಯ ಹುಟ್ಟು-ಸಾವನ್ನು ದೀಪ ಉರಿಸುವುದು-ಆರಿಸುವುದಕ್ಕೆ ಸಮೀಕರಿಸಿರುವ ಅರ್ಥಗರ್ಭಿತ ಕಲ್ಪನೆ.

ಜೀವಜ್ಯೋತಿಯನ್ನು ದೀಪಕ್ಕೆ ಹೋಲಿಸಿರುವ ಕಲ್ಪನೆ ನಮಗೆ ಜೀವವಿಮಾ ನಿಗಮದ ಲಾಂಛನದಲ್ಲೂ ನೋಡಲಿಕ್ಕೆ ಸಿಗುತ್ತದೆ. ಉರಿಯುತ್ತಿರುವ ದೀಪ ಆರಿ ಹೋಗದಂತೆ ಆಚೀಚೆ ಎರಡು ಕೈಗಳು - ಭಾರತೀಯ ಜೀವವಿಮಾ ನಿಗಮದ ಲಾಂಛನ ಅದ್ಭುತವಾದದ್ದು. ಅಫ್‌ಕೋರ್ಸ್‌, ಉರಿಯುತ್ತಿರುವ ಆ ಹಣತೆಗೆ ತಿಂಗಳುತಿಂಗಳೂ ಪ್ರೀಮಿಯಂನ ಹಣ ತೆಗೆ ಎನ್ನುವ ಸಂದೇಶ ಕೂಡ ಅದರಲ್ಲಿದೆ ಎಂಬುದು ನಮ್ಮ ಗಮನದಲ್ಲಿರಬೇಕು. ಜನನ-ಮರಣ ರಿಜಿಸ್ಟ್ರಾರರ ಲಾಂಛನವೂ ಉರಿಯುತ್ತಿರುವ-ಆರುತ್ತಿರುವ ದೀಪದ ಚಿತ್ರ. ದೀಪ ಉರಿಸುವುದೆಂದರೆ ಹುಟ್ಟು/ಜನನ; ದೀಪ ಆರಿಹೋಗುವುದೆಂದರೆ ಸಾವು/ಮರಣ.

ಜಾಗೃತಿ, ಅಭಿಮಾನಗಳ ಸಂಕೇತವಾಗಿ ದೀಪ ಉರಿಸುವಿಕೆಯ 'ಜ್ವಲಂತ’ ಉದಾಹರಣೆಯೆಂದರೆ ನಮಗೆ ಅನುದಿನವೂ ಆಪ್ಯಾಯಮಾನವಾದ (ಆಗಬೇಕಾದ) 'ಹಚ್ಚೇವು ಕನ್ನಡದ ದೀಪ’. ಅದು ನವೆಂಬರ್‌ ಒಂದರಂದು ಹೊತ್ತಿತೋ ಹೊತ್ತಿತು ಕನ್ನಡದ ದೀಪ ಆಗಿ ದೇದೀಪ್ಯಮಾನವಾಗಿ ಉರಿಯತೊಡಗಿ, ಬೇಕಿದ್ದರೆ ಹರ್ಷ ಉಕ್ಕಿಸುವಂತೆ, ಕಣ್ಣು ಕುಕ್ಕಿಸುವಂತೆ ಶೋಭಾಯಮಾನವಾಗಿ ಉರಿಯುತ್ತದೆ, ಆದರೆ ವಿಪರ್ಯಾಸವೆಂದರೆ ನವಂಬರ್‌ ಕೊನೆಯ ವೇಳೆಗೆ ಆ ದೀಪದ ಎಣ್ಣೆ ಮುಗಿದುಹೋಗಿರುತ್ತದೆ, ಮತ್ತೆ ಅದು ಉರಿಯುವುದೇನಿದ್ದರೂ ಮುಂದಿನ ವರ್ಷದ ನವೆಂಬರ್‌ ಒಂದನೇ ತಾರೀಕಿಗೆ.

*

ಜೀವಜ್ಯೋತಿಯಂತೆ ಜ್ಞಾನಜ್ಯೋತಿಯನ್ನೂ ಉರಿಯುತ್ತಿರುವ ದೀಪದ ಸಂಕೇತದಿಂದ ಪ್ರತಿಬಿಂಬಿಸುವುದಿದೆ. ಶೈಕ್ಷಣಿಕ ಸಂಸ್ಥೆಗಳ, ವಿಶ್ವವಿದ್ಯಾಲಯಗಳ ಲಾಂಛನಗಳಲ್ಲಿ ದೀಪ ಹಚ್ಚುವ ಅಥವಾ ಹಚ್ಚಿರುವ ದೀಪದ ಚಿತ್ರವಿರುತ್ತದೆ. ಗ್ರಾಮೀಣ ಪ್ರದೇಶದಲ್ಲಿ, ವಿದ್ಯುಚ್ಛಕ್ತಿ ಸೌಕರ್ಯ ಇಲ್ಲದಿದ್ದ ಪ್ರದೇಶದಲ್ಲಿ ಬಾಲ್ಯವನ್ನು ಕಳೆದ ನಮಗೆಲ್ಲ ಸಾಯಂಕಾಲ ಶಾಲೆಯಿಂದ ಬಂದು ಸಿಕ್ಕಾಪಟ್ಟೆ ಹೋಮ್‌ವರ್ಕ್‌ ಇದ್ದರೆ ಅದನ್ನು ಮಾಡಿಮುಗಿಸಲು ಚಿಮಣಿದೀಪ ಅಥವಾ ಬುಡ್ಡಿಲ್ಯಾಂಪ್‌ ಉರಿಸಿ ಬೆಳಕು ಪಡೆಯಬೇಕಾಗಿತ್ತು. ಆ ದೃಷ್ಟಿಯಿಂದ ಜ್ಞಾನಜ್ಯೋತಿ ಮತ್ತು ದೀಪಜ್ಯೋತಿಗಳೆರಡೂ ಏಕಕಾಲಕ್ಕೆ ಉರಿಯುವುದು ನಮಗೆ ಚಿಕ್ಕಂದಿನಿಂದಲೂ ಅಭ್ಯಾಸವಾಗಿದೆ ಎನ್ನಲಿಕ್ಕಡ್ಡಿಯಿಲ್ಲ :-)

ಅಷ್ಟೇ ಏಕೆ, ಹೋಮ್‌ವರ್ಕ್‌ ಮುಗಿದಮೇಲೆ ತುಳಸಿದೀಪ ಹಚ್ಚಿ ನಮ್ಮ ದೈನಂದಿನ ಬಾಯಿಪಾಠ/ಸ್ತೋತ್ರಪಠಣವು 'ದೀಪಜ್ಯೋತಿ ಪರಬ್ರಹ್ಮ ದೀಪಜ್ಯೋತಿ ಜನಾರ್ದನ ದೀಪಂ ಹರತು ಮೇ ಪಾಪಂ ಸಂಧ್ಯಾದೀಪಂ ನಮೋಸ್ತುತೆ...’ ಎಂಬ ಸ್ತೋತ್ರದೊಂದಿಗೆ ಆರಂಭವಾಗುತ್ತಿತ್ತು. ರಾತ್ರೆ ಮಲಗುವಾಗ ದೀಪಗಳಿಗೆ ವಿದಾಯ ಹೇಳುವುದೂ ಇತ್ತು, ಹೀಗೆ: 'ದೀಪದೀಪಾಂತರಕ್ಕೆ ಹೋಗಿ... ಬತ್ತಿಪರ್ವತಕ್ಕೆ ಹೋಗಿ... ಎಣ್ಣೆ ಸಮುದ್ರಕ್ಕೆ ಹೋಗಿ... ಇವತ್ತು ಹೋಗಿ ನಾಳೆ ಬನ್ನಿ, ಅಗತ್ಯಬಿದ್ದರೆ ಇವತ್ತೇ ಬನ್ನಿ...’! ಆದಿನದ ಡ್ಯೂಟಿ ಮುಗಿಸಿದ ಮೇಲೆ ದೀಪಗಳೆಲ್ಲ ಕಚ್ಚಾ ಸಾಮಗ್ರಿಯನ್ನು ಭರ್ತಿಗೊಳಿಸಲು ಬತ್ತಿ ಪರ್ವತಕ್ಕೆ, ಇಂಧನಪೂರೈಕೆಗಾಗಿ ಎಣ್ಣೆಯ ಸಮುದ್ರಕ್ಕೆ ಹೋಗಿ ನಾಳೆ ಸಂಜೆ ಮತ್ತೆ ಡ್ಯೂಟಿಗೆ ಹಾಜರಾಗಬೇಕೆಂಬ ಕೋರಿಕೆಯಾಂದಿಗೆ ವಿದಾಯ (ಅಂದಹಾಗೆ ಈ ಕನ್ನಡಸ್ತೋತ್ರವನ್ನು ಕೇಳಿದ ನೆನಪು ನಿಮಗಿರಲಿಕ್ಕಿಲ್ಲ. ನಮ್ಮ ಅಜ್ಜಿಮನೆಯಿಂದ ನಮ್ಮ ಮನೆಗೆ ಇದು ಬಂದಿರಬೇಕು ಅಂತ ಕಾಣುತ್ತೆ).

ವಿದ್ಯುಚ್ಛಕ್ತಿಯಿರುವ ಮನೆಗಳಲ್ಲೂ ಸಾಯಂಕಾಲ ದೇವರಮಂಟಪದಲ್ಲಿ ತುಪ್ಪದದೀಪ ಅಥವಾ ತುಳಸೀಕಟ್ಟೆಯ ಬಳಿ ಹರಳೆಣ್ಣೆದೀಪ ಹಚ್ಚಿಡುವ ಸಂಪ್ರದಾಯ ಹಿಂದೆಯೂ ಇತ್ತು, ಈಗಲೂ ಇದೆ. ಕೆಲವರಂತೂ ಸಾಯಂಕಾಲ ಮೊದಲಬಾರಿಗೆ ಲಿವಿಂಗ್‌ರೂಮ್‌ನ ಟ್ಯೂಬ್‌ಲೈಟ್‌ ಅಥವಾ ಕೊಠಡಿಯ ಬಲ್ಬ್‌ ಸ್ವಿಚ್‌ಆನ್‌ ಮಾಡುವಾಗಲೂ ಸ್ವಿಚ್ಚಿಂದ ತೆಗೆದ ಕೈಯನ್ನು ಎದೆಗೆ ಹಣೆಗೆ ಮುಟ್ಟಿಸಿ (ಬೇಕಿದ್ದರೆ ಎರಡೆರಡು ಸಲ) ಮನದಲ್ಲೇ ನಮನ ಸಲ್ಲಿಸುವ ಪರಿಪಾಠ ಇದ್ದೇ ಇದೆ. ವಿಜ್ಞಾನ (=ಆಧುನಿಕತೆ) ಮತ್ತು ಧಾರ್ಮಿಕ (=ಸನಾತನ) ನಂಬಿಕೆಗಳ ಸಂಗಮಕ್ಕೆ ಅದೊಂದು ಅತ್ಯುತ್ತಮ ಉದಾಹರಣೆ ಎಂದು ನನ್ನ ಅಭಿಪ್ರಾಯ.

ವಿದ್ಯುಚ್ಛಕ್ತಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ದೀಪಗಳು ಆರುವುದು ಉರಿಯುವುದು ಆಗುತ್ತಲೇ ಇರುತ್ತದಲ್ಲ. ಭಾರತದಲ್ಲಿ, ವಿಶೇಷವಾಗಿ ಹಳ್ಳಿಗಳಲ್ಲಿ, ಇದು ಸರ್ವೇಸಾಮಾನ್ಯ. ವಿದ್ಯುತ್‌ ಕಣ್ಣುಮುಚ್ಚಾಲೆ ಕಾಟ ಹಳ್ಳಿಗರ ತಲೆನೋವಾದರೆ ಪಟ್ಟಣಪ್ರದೇಶಗಳಲ್ಲಿ ಹಗಲುಹೊತ್ತಿನಲ್ಲೂ ಬೀದಿದೀಪಗಳು ಉರಿಯುತ್ತಿರುವುದು ಕ.ವಿ.ಮಂ (ಈಗ ಬೆಸ್ಕಾಂ)ನ 'ದೀಪವೂ ನಿನ್ನದೇ ತೆರಿಗೆಯೂ ನಿನ್ನದೇ ಆರದಿರಲಿ ಬೆಳಕು...’ ಎಂಬ ಧೋರಣೆಯಿರಬಹುದೇ?

ವಿದ್ಯುತ್‌ದೀಪಗಳ ಬಗ್ಗೆ ಮಾತಾಡುತ್ತಿರುವಾಗಲೇ ಇಲ್ಲೊಂದು ಅಚ್ಚರಿಯ ಸಂಗತಿಯನ್ನು ಪ್ರಸ್ತಾಪಿಸುವುದು ಸಮಂಜಸವಾದೀತು. ಕ್ಯಾಲಿಫೋರ್ನಿಯಾದ ಲಿವರ್‌ಮೋರ್‌ನ ಅಗ್ನಿಶಾಮಕ ಘಟಕವೊಂದರಲ್ಲಿ ಕಳೆದ ನೂರಾ ಐದು ವರ್ಷಗಳಿಂದ (ಅಂದರೆ ಕ್ರಿ.ಶ 1901 ರ ಲಾಗಾಯ್ತು) ಒಂದು ವಿದ್ಯುತ್‌ ಬಲ್ಬ್‌ ನಿರಂತರವಾಗಿ ಉರಿಯುತ್ತಲೇ ಇದೆಯಂತೆ! ಒಂದೆರಡು ಬಾರಿ ಸ್ಥಳಾಂತರವಾದಾಗ ಮತ್ತು ಕೆಲವೇ ಕೆಲವು ಸಲ ಪವರ್‌ ಔಟೇಜ್‌ ಆದಾಗ ಬಿಟ್ಟರೆ ಆ ಬಲ್ಬನ್ನು ಸ್ವಿಚ್‌ ಆಫ್‌ ಮಾಡಿದ್ದೆಂದೇ ಇಲ್ಲ. ಗಿನ್ನೆಸ್‌ ದಾಖಲೆ ಪುಸ್ತಕದಲ್ಲೂ ಈ ಬಲ್ಬ್‌ ಉಲ್ಲೇಖಿಸಲ್ಪಟ್ಟಿದೆ (ನಂದಾದೀಪವಾದ ಆ ಬಲ್ಬ್‌ ಬಗ್ಗೆ ಹೆಚ್ಚಿನ ವಿವರಗಳನ್ನು ಓದಿ).

*

ದೀಪ ಹಚ್ಚುವುದೆಂದರೆ ಹುಟ್ಟು, ಹೊಸಜೀವನ; ದೀಪ ಆರಿಹೋಗುವುದೆಂದರೆ ಬದುಕಿಗೆ ಚಿರವಿದಾಯ ಎನ್ನುವ ಕಾನ್ಸೆಪ್ಟಿಗೇ ಮತ್ತೆ ಬಂದರೆ, ಬರ್ತ್‌ಡೇ ಆಚರಣೆಗೆ ಕ್ಯಾಂಡಲ್‌ ಆರಿಸಬೇಕಾ ತುಪ್ಪದ ದೀಪ ಉರಿಸಬೇಕಾ ಎನ್ನುವ ಮಿಲಿಯನ್‌ ಡಾಲರ್‌ (= ನಲ್ವತ್ತೈದು ಮಿಲಿಯನ್‌ ರೂಪಾಯಿ?) ಪ್ರಶ್ನೆ ಬರುತ್ತದೆ. ಕ್ಯಾಂಡಲ್‌ ಆರಿಸುವ ಪಾಶ್ಚಾತ್ಯ ಸಂಸ್ಕೃತಿಯ ಪದ್ಧತಿ ಸರಿಯೇ ಅಥವಾ ತುಪ್ಪದ ದೀಪ ಉರಿಸುವ ನಮ್ಮ ಭಾರತೀಯ ಸಂಸ್ಕೃತಿಯ ರಿವಾಜು ಶ್ರೇಷ್ಠವೇ? ಈ ವಿಷಯದಲ್ಲಿ ಚರ್ಚೆ ಆರಂಭಿಸಿದರೆ ಅದು ಬರ್ತ್‌ಡೇ ದಿನ ಬಿಡಿ, ಮುಂದಿನ ಬರ್ತ್‌ಡೇವರೆಗೂ ಮುಂದುವರಿಯಬಹುದೋ ಏನೊ. ಹಾಗಾಗಿ ಆ ಚರ್ಚೆಯನ್ನು ಕೈಗೆತ್ತಿಕೊಳ್ಳದೆ ಈಗ ಬರ್ತ್‌ಡೇ ಕ್ಯಾಂಡಲ್‌ಗಳ ಒಂದು ಜಾಣ್ಮೆಲೆಕ್ಕವನ್ನು ಅವಲೋಕಿಸೋಣ.

ಏಳನೇ ವರ್ಷದ ಹುಟ್ಟುಹಬ್ಬ ಆಚರಿಸುತ್ತಿರುವ ಪುಟಾಣಿಪುಟ್ಟಿ ಹೊಸಬಟ್ಟೆ ಹಾಕಿಕೊಂಡು ಸಂಭ್ರಮದಿಂದಿದ್ದಾಳೆ. ಅವಳ ಚಿಲ್ಟಾರಿ ಫ್ರೆಂಡ್ಸ್‌ ಗ್ರೂಪ್‌ ಎಲ್ಲ ಅಲ್ಲಿ ಜಮಾಯಿಸಿದೆ. ಕೇಕ್‌ ಮೇಲೆ ವರ್ತುಲಾಕಾರದಲ್ಲಿ ನಿಲ್ಲಿಸಿರುವ ಕ್ಯಾಂಡಲ್‌ಗಳನ್ನು ಅವಳೀಗ ಆರಿಸುವ ಕ್ಷಣ ಬಂದಿದೆ. ಅವಳ ಅಪ್ಪ ಅಮ್ಮ (ಅಥವಾ ಡ್ಯಾಡಿ ಮಮ್ಮಿ ಎನ್ನೋಣವೇ?) ಒಂದು ಮಜಾ ಏನು ಮಾಡಿಟ್ಟಿದ್ದಾರೆಂದರೆ ಆರ್ಡಿನರಿ ಕ್ಯಾಂಡಲ್‌ಗಳಿಗೆ ಬದಲಾಗಿ ಸ್ಪೆಷಲ್‌ ಮ್ಯಾಜಿಕ್‌ ಕ್ಯಾಂಡಲ್‌ಗಳನ್ನು ಉರಿಸಿಟ್ಟಿದ್ದಾರೆ. ಪುಟ್ಟಿ ಈಗ ಉಫ್‌ ಉಫ್‌ ಎನ್ನುತ್ತ ಎಲ್ಲ ಏಳು ಕ್ಯಾಂಡಲ್‌ಗಳನ್ನೂ ಆರಿಸಬೇಕು. ಒಂದು ಉಫ್‌ನಿಂದ ಒಂದು ಕ್ಯಾಂಡಲ್‌ ಆರಿ ಹೋಗುತ್ತದೆಯಲ್ಲ ಹಾಗೆ ಎಲ್ಲ ಏಳು ಕ್ಯಾಂಡಲ್‌ಗಳೂ ಆರಿ ಹೋಗಬೇಕು - ಆಗಲೇ ಅವಳಿಗೆ ಬರ್ತ್‌ಡೇ ಗಿಫ್ಟ್‌ ಸಿಗುವುದು.

ಆದರೆ ಈ ಕ್ಯಾಂಡಲ್‌ಗಳದೊಂದು ಮಾಯಾಶಕ್ತಿ ಏನೆಂದರೆ, ವರ್ತುಲಾಕಾರದಲ್ಲಿ ನಿಲ್ಲಿಸಲ್ಪಟ್ಟಿರುವಾಗ ಯಾವೊಂದು ಕ್ಯಾಂಡಲನ್ನು ಊದಿದರೂ ಅದೊಂದೇ ಆರಿಹೋಗುವುದಲ್ಲ, ಅದರ ಆಚೀಚೆಯ ಎರಡೂ ಆರಿ ಹೋಗುತ್ತವೆ. ಹಾಗೆಯೇ, ಈಗಾಗಲೇ ಆರಿರುವ ಕ್ಯಾಂಡಲ್‌ನ ಪಕ್ಕದ ಕ್ಯಾಂಡಲನ್ನು ಆರಿಸಿದರೆ, ಮೊದಲಿನದು (ಅಂದರೆ ಆರಿರುವುದು) ಉರಿದುಕೊಳ್ಳುತ್ತದೆ! ಇನ್ನೂ ವಿಸ್ಮಯಕರವಾದ ಒಂದು ಸಂಗತಿಯೆಂದರೆ ಆರಿರುವ ಕ್ಯಾಂಡಲ್‌ಅನ್ನು ಉಫ್‌ ಎಂದರೆ ಅದು ಉರಿದುಕೊಳ್ಳುತ್ತದೆ, ಮತ್ತು ಅದರ ಅಕ್ಕ-ಪಕ್ಕದವೂ ಒಂದೋ ಆರಿಹೋಗುತ್ತವೆ ಇಲ್ಲವೆ ಉರಿಯತೊಡಗುತ್ತವೆ (ಅವು ಮೊದಲು ಯಾವ ಸ್ಥಿತಿಯಲ್ಲಿದ್ದುವು ಎಂಬುದನ್ನು ಅವಲಂಬಿಸಿ)!

ಪರಿಸ್ಥಿತಿ ಇಂತಿರಲು, ಪುಟಾಣಿಪುಟ್ಟಿ ಎಷ್ಟು ಉಫ್‌ಗಳಿಂದ ಎಲ್ಲ ಏಳೂ ಕ್ಯಾಂಡಲ್‌ಗಳನ್ನು ಆರಿಸಿ ತನ್ನ ಉಡುಗೊರೆಯನ್ನು ಪಡೆದುಕೊಳ್ಳಬಲ್ಲಳು?

ತಲೆಯಲ್ಲಿ ಉತ್ತರ ಝಗ್‌ ಎಂದು ಹೊಳೆದರೆ ನೀವದನ್ನು ಕಳಿಸಬೇಕಾದ ವಿಳಾಸ - [email protected].

ಸರಿಯುತ್ತರ ಬರೆದವರಿಗೆ ಬಹುಮಾನ? ಪುಟ್ಟಿಯನ್ನು ಕೇಳಿ ನೋಡಬೇಕು, ಆಕೆಯೇನಾದರೂ ತನ್ನ ಬರ್ತ್‌ಡೇ ಗಿಫ್ಟನ್ನು ಶೇರಿಸಲು ಸಿದ್ಧಳಿದ್ದಾಳೆಯೇ ಎಂದು. ಅಥವಾ ಚೂಟಿಯಾದ ಅವಳು, 'ಕ್ಯಾಂಡಲೂ ನಿನ್ನದೇ ಉಫೂ ನಿನ್ನದೇ ಗಿಫ್ಟ್‌ ಮಾತ್ರ ನನ್ನದು... ’ ಎಂದು ಹೇಳಿಬಿಡಬಹುದು. ಹೋಗಲಿ, ಒಂಚೂರು ಕೇಕ್‌ ಆದರೂ ಸಿಗಬಹುದು ನೋಡಿ!

'ವಿಚಿತ್ರಾನ್ನದ ಸಮಸ್ತ ಓದುಗರಿಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು’
English summary
ThatsKannanda Vichitranna columnist Srivathsa Joshi writes about infotainment article Lights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X