ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿಯೆ ಬಿರಿಯಲಿ ಗಗನವೆ ನಡುಗಲಿ

By Super
|
Google Oneindia Kannada News

January! Jana-Worry!
'ಭೂಮಿಯೆ ಬಿರಿಯಲಿ ಗಗನವೆ ನಡುಗಲಿ ಸಾಗರ ಕೆರಳಲಿ ಗಿರಿಗಳು ಉರುಳಲಿ...' ಎಂದು ಮಾತ್ರ ಕೇಳಿಸಿತ್ತು ಬಹುಶಃ ದೇವರಿಗೆ, 'ಬಿಡೆನು ನಿನ್ನ ಪಾದ...' ಸಾಲು ಕೇಳಿಸಲೇ ಇಲ್ಲ ('ಹತಃ ಕುಂಜರಃ...' ಪ್ರಸಂಗದ ಮಾದರಿಯಲ್ಲಿ). ಈ ಜಗತ್ತಿನ ಕರ್ಕಶ ಜೀವನದ ತಾರಕದಲ್ಲಿ ಅದು ಕೇಳಿಸುವುದಾದರೂ ಎಂತು? ಅಂತೂ ಲಕ್ಷಗಟ್ಟಲೆ ಅಮಾಯಕರನ್ನು 'ಬೇನಾಮಿ'ಯಾಗಿಸಿತು ಪ್ರಳಯನರ್ತನಗೈದ 'ಸುನಾಮಿ'. ಮಾರಣಹೋಮ ನಡೆದ ಹತ್ತಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮತ್ತು ಜಗತ್ತಿನ ಎಲ್ಲಕಡೆಯಲ್ಲೂ ಈಗ ವಿಷಾದದ ಗಂಭೀರ ಛಾಯೆ. ಅಂದಿನ ಪ್ರಳಯದಿಂದಾದ ಜೀವಹಾನಿಯ ನಂತರ ಇದೀಗ ರೋಗರುಜಿನಗಳ ದಾಳಿಯ ಭಯ.

ಹೀಗೆ ಜನ Worry ಯಲ್ಲಿರುವಾಗಲೇ ಬಂದಿದೆ ಜನವರಿ. ಹೊಸ ವರ್ಷ ಹೊಸ ಹರ್ಷದ ಹುರುಪು ಸಡಗರ ಸಂಭ್ರಮಗಳಿರಬೇಕಾದಲ್ಲಿನ್ನೂ ಒಸರುತ್ತಿದೆ ನೋವಿನ ಝರಿ. ಸಹಾನುಭೂತಿ ಸಾಂತ್ವನ ಸಹಾಯಗಳ ತುರ್ತಿನ ಈ ಗಳಿಗೆಯಲ್ಲಿ ವಿಚಿತ್ರಾನ್ನ ಸಂಚಿಕೆಯದೂ ಶೋಕಾಚರಣೆಯದೊಂದು ಪರಿ. ಒಂದು ಚಿಂತನೆ, ಒಂದು ಭಜನೆ, ಒಂದು ಆಪ್ತನುಡಿ, ಒಂದು ಸೂಕ್ತ, ಒಂದು ಶ್ಲೋಕ... ಹೀಗೆ Worry ಮರೆಯುವ ಯತ್ನದ ತರಾವರಿ.

ಸಂತ್ರಸ್ತರಿಗಾಗಿ ನಿಧಿಸಂಗ್ರಹಣೆ, ಆಹಾರ-ಬಟ್ಟೆಬರೆ ಪೂರೈಕೆಯ ಸ್ವಯಂಸೇವಾ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುತ್ತಿರುವುದು ನಮಗೆಲ್ಲ ಗೊತ್ತಿದೆಯಷ್ಟೆ. ಈ ನಿಟ್ಟಿನಲ್ಲಿ, ಮೊನ್ನೆ 'ವಿಚಿತ್ರಾನ್ನ ಮೆಚ್ಚಿನ ಹೂವು' ಸ್ಪರ್ಧೆಯಲ್ಲಿ ವಿಜೇತರಾದವರೆಲ್ಲರ ಒಕ್ಕೊರಲಿನ ನಿರ್ಧಾರವೇನು ಗೊತ್ತೇ? ಬಹುಮಾನಕ್ಕೆ ಮೀಸಲಾದ ಅಷ್ಟೂ ಮೊತ್ತವನ್ನು ಸೇರಿಸಿ ರೆಡ್‌ಕ್ರಾಸ್‌ ಪರಿಹಾರ ನಿಧಿಗೆ ಏಕಗಂಟಿನ ದೇಣಿಗೆಯಾಗಿ ಸಲ್ಲಿಸುವುದು! ಆ ಪ್ರಕಾರ ಪುಟ್ಟದಾದ ಆದರೆ ಕರುಣಾಮೃತಸಾರದ ಮೊತ್ತವೊಂದನ್ನು ರೆಡ್‌ಕ್ರಾಸ್‌ ನಿಧಿಗೆ ಸಲ್ಲಿಸಲಾಗಿದೆ. ನೋಡಿ, ಹೂವಿನ ಕುರಿತ ಸ್ಪರ್ಧಾವಿಜೇತರದು ಹೂವಿನಂಥ ಹೃದಯ. ಮನರಂಜನೆಗಾಗಿ ಮಾಡಿದ್ದ ಸ್ಪರ್ಧೆಗೆ ಕೊನೆಗೂ ಒಂದು ಸಾರ್ಥಕತೆಯ, ಮಾನವೀಯತೆಯ, ಕೃತಕೃತ್ಯತೆಯ ಆಯಾಮ! ಸಹೃದಯಿ ಸ್ನೇಹಿತರ ಸಮಯೋಚಿತ ಸಲಹೆಗೆ ಮನಃಪೂರ್ವಕ ಧನ್ಯವಾದಗಳು.

* * *

ನೈಸರ್ಗಿಕ ವಿಕೋಪಗಳ ಆಗುಹೋಗು ನಮ್ಮ ಕೈಯಲ್ಲಿಲ್ಲ, ಆದರೆ ಇಂಥ ವಿಕೋಪಗಳು ಸಂಭವಿಸಿದಾಗ ಸಂಕುಚಿತ ಮನೋಭಾವದಿಂದ ಹೊರಬಂದು ತನು-ಮನ-ಧನ ಸಹಾಯದಿಂದ ಮಾನವೀಯತೆಯನ್ನು ಮೆರೆಯುವುದಕ್ಕೆ ಯಾವ ಅಡ್ಡಿಯೂ ಇಲ್ಲ. ಹಾಗೆಯೇ ಕ್ಲೇಷ-ದ್ವೇಷಗಳಿಂದ ಘಟಿಸುವ ಮಾನವನಿರ್ಮಿತ ಪ್ರಮಾದಗಳು ಅನಾಹುತಗಳು ಅಪಕೃತ್ಯಗಳು ನಡೆಯದಂತೆ ಶಾಂತಿ ಸದ್ಭಾವದ ಬಳ್ಳಿಯನ್ನು ನಾವೆಲ್ಲ ಸೇರಿ ಚಿಗುರಿಸಬಹುದಲ್ಲ?

ನನ್ನ ಸಂಗ್ರಹದಲ್ಲಿ ಸೈಂಟ್‌ ಫ್ರಾನ್ಸಿಸ್‌ನ ಒಂದು ಪ್ರಾರ್ಥನೆಯ ಸಾಲುಗಳು ಸಿಕ್ಕಿದವು, ಇಲ್ಲಿ ಅವನ್ನು ಯಥಾವತ್ತಾಗಿ ಉಪಯೋಗಿಸಿದ್ದೇನೆ (ಬೇಕಂತಲೇ ಕನ್ನಡೀಕರಿಸಿಲ್ಲ).

Lord, make me an instrument of Your peace.
Where there is hatred, let me sow love.
Where there is injury, let me sow pardon.
Where there is doubt, faith.
Where there is despair, hope.
Where there is darkness, light,
and where there is sadness, joy.
O Divine Master,
grant that I may not so much seek to be consoled, as to console;
To be understood, as to understand;
To be loved, as to love;
For it is in giving that we receive.
It is in pardoning that we are pardoned,
and it is in dying that we are born to eternal life.

***

ರಕ್ಷಣೆಗಾಗಿ ದೇವರ ಮೊರೆ ಹೋಗುವ ಸನ್ನಿವೇಶದಲ್ಲಿ ಪುರಂದರದಾಸರ ಒಂದು ರಚನೆಯೂ ಪ್ರಸ್ತುತವೆನಿಸುತ್ತದೆ.

ನೀನೇ ಅನಾಥ ಬಂಧು ಕಾರುಣ್ಯ ಸಿಂಧು ।। ಪ ।।
ಮದಗಜವೆಲ್ಲ ಕೂಡಿದರೇನು ಅದರ ಸಮಯಕೊದಗಲಿಲ್ಲ
ಮದನನಯ್ಯ ಮಧುಸೂದನನೆಂದರೆ ಮುದದಿಂದಲಿ ಬಂದೊದಗಿದೆ ಕೃಷ್ಣ ।। 1 ।।

ಪತಿಗಳೈವರಿದ್ದರೇನು ಸತಿಯ ಭಂಗ ಬಿಡಿಸಲಿಲ್ಲ
ಗತಿ ನೀನೇ ಮುಕುಂದ ಎನ್ನಲು ಅತಿವೇಗದಿ ಅಕ್ಷಯವಿತ್ತ ಕೃಷ್ಣ ।। 2 ।।

ಶಿಲೆಯ ರಕ್ಷಿಸಿ ಕುಲಕೆ ತಂದೆ ಬಲಿಗೆ ಒಲಿದು ಪದವಿಯನಿತ್ತೆ
ಸುಲಭದಿ ಭಕ್ತರ ಸಲಹುವ ನಮ್ಮ ಚೆಲುವ ಪುರಂದರ ವಿಠಲರಾಯ ।। 3 ।।

* * *

ಇನ್ನು, ಲೋಕಕಲ್ಯಾಣಾರ್ಥಕ್ಕಾಗಿ ಒಂದೆರಡು ಶಾಂತಿಸೂಕ್ತಗಳನ್ನು ಉಲ್ಲೇಖಿಸಿ ಈ ಸಂಚಿಕೆಯನ್ನು ಮುಗಿಸೋಣ. ಹೊಸವರ್ಷ ನಮ್ಮೆಲ್ಲರ ದುಃಖ ದುಮ್ಮಾನಗಳನ್ನು ದೂರವಾಗಿಸಿ ಎಲ್ಲರಿಗೂ ಒಳಿತನ್ನೇ ತರಲಿ ಎಂದು ಹಾರೈಸೋಣ.

ಜಲೇ ರಕ್ಷತು ವಾರಾಹಃ ಸ್ಥಲೇ ರಕ್ಷತು ವಾಮನ:
ಅಟವ್ಯಾಂ ನಾರಸಿಂಹಚ್ಛ ಸರ್ವತಃ ಪಾತುಕೇಶವ: ।।
(ಸರ್ವಾಂತರ್ಯಾಮಿ ಭಗವಂತನು ನಮ್ಮೆಲ್ಲರನ್ನೂ ಸದಾ ಕಾಪಾಡಲಿ.)

ದುರ್ಜನಃ ಸಜ್ಜನೋ ಭೂಯಾತ್‌ ಸಜ್ಜನಃ ಶಾಂತಿಮಾಪ್ನುಯಾತ್‌
ಶಾಂತೋ ಮುಚ್ಯೇತ ಬಂಧೇಭ್ಯಃ ಮುಕ್ತಶ್ಚಾನ್ಯಾನ್‌ ವಿಮೋಚಯೇತ್‌ ।।
(ದುರ್ಜನರು ಸಜ್ಜನರಾಗಲಿ, ಸಜ್ಜನರು ಸುಖಶಾಂತಿದೂತರಾಗಲಿ.)

ಸರ್ವಸ್ತರತು ದುರ್ಗಾಣಿ ಸರ್ವೊಭದ್ರಾಣಿ ಪಶ್ಯತು
ಸರ್ವಸ್ಸದ್ಬುದ್ಧಿ ಮಾಪ್ನೊತು ಸರ್ವಸ್ಸರ್ವತ್ರ ಸಂದತು ।।
(ಎಲ್ಲರೂ ಎಲ್ಲೆಡೆಯೂ ಹರ್ಷಿತರಾಗಲಿ.)

ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿದುಃಖ ಭಾಗ್ಭವೇತ್‌ ।।
(ಲೋಕದಲ್ಲಿ ಎಲ್ಲರಿಗೂ ಸುಖ ಶಾಂತಿ ಸಮಾಧಾನಗಳು ಲಭಿಸಲಿ.)

English summary
Tsunami overshadows New Year : ThatsKannanda-Vichitranna columnist Srivathsa Joshi Writes on Words and Deeds of kindness are need of the hour...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X