ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಚಿತ್ರಾನ್ನ ಸ್ಪೆಷಲ್ : ಹಜಾಮತ್‌ ಸೆ ಹಜಾಮತ್‌ ತಕ್‌...

By * ಶ್ರೀವತ್ಸ ಜೋಶಿ
|
Google Oneindia Kannada News

ಮಂಗಳವಾರ ಕ್ಷೌರದಂಗಡಿ(ಹೇರ್‌ಕಟಿಂಗ್‌ಸಲೂನ್‌)ಗಳಿಗೆ ವಾರದ ರಜಾ. ಇದು ಕರ್ನಾಟಕದಲ್ಲಿ ಹಿಂದಿನ ಕಾಲದಲ್ಲಿ ಚಾಲ್ತಿಯಿದ್ದ ರೂಢಿ. ಕರ್ನಾಟಕ ಮಾತ್ರವಲ್ಲ ಬೇರೆಡೆಗಳಲ್ಲೂ ಆ ಪದ್ಧತಿ, ಮಂಗಳವಾರ ತಲೆ ಕ್ಷೌರಮಾಡಿಸಬಾರದೆಂಬ ಕಟ್ಟಳೆ ಇತ್ತೆಂದು ನನಗೆ ನೆನಪು. ಈಗಿನ ಕಾಲದ ಮಂಗಳವಾರಗಳಲ್ಲಿ, ಅಂದರೆ ವಿಚಿತ್ರಾನ್ನ ಭಕ್ಷಣೆಯ ಜಮಾನಾದ ಮಂಗಳವಾರಗಳಲ್ಲಿ ಸವಿತಾಸಮಾಜದವರು(ಕ್ಷೌರಿಕವರ್ಗಕ್ಕೆ ಹಿಂದಿನ ಕಾಲದಿಂದಲೂ ಸಮಾಜದಲ್ಲಿ ಉತ್ತಮ ಗೌರವವಿತ್ತು. ಚೌಲ-ಮುಂಜಿ-ಮದುವೆ ಸಮಾರಂಭಗಳ ವಿಧಿವಿಧಾನಗಳಲ್ಲಿ ಕ್ಷೌರಿಕನ ಪಾತ್ರವಿತ್ತು, ಊರ್ಧ್ವದೈಹಿಕ ಕ್ರಿಯಾದಿಗಳಲ್ಲೂ ಇತ್ತು) ಮಂಗಳವಾರ ವೀಕ್ಲಿ-ಆಫ್‌ ಆಚರಿಸುತ್ತಾರೊ ಇಲ್ಲವೊ ಗೊತ್ತಿಲ್ಲ. ಆದರೆ ಮಂಗಳವಾರದ ಈ-ಅಂಕಣದಲ್ಲಿ ಇವತ್ತಿನ ವಿಷಯ 'ಕ್ಷೌರಿಕ - ಕ್ಷೌರಿಕರ ವಾಚಾಳಿತನ". ಇದು ಒಂದು ಹರಟೆ. ಸಾಮಾಜಿಕ ಅವಹೇಳನದ ಲವಲೇಷ ಇಲ್ಲಿಲ್ಲ. ಓದುವುದನ್ನು ಮುಂದುವರೆಸಿ...

ಹೆಂಗಸರೇ ಕ್ಷೌರಿಕರಾಗಿದ್ದಿದ್ದರೆ...?

ಹೆಂಗಸರು ಮಾತಾಡುವುದು ಜಾಸ್ತಿ ಎಂಬುದು ಯುನಿವರ್ಸಲ್‌ ಟ್ರುಥ್‌(ಇದರ ಬಗ್ಗೆ ಜಾಸ್ತಿ ವಿಶ್ಲೇಷಣೆ ಇಲ್ಲಿ ಬೇಡ; ಎಕ್ಸ್‌ಎಕ್ಸ್‌ ಕ್ರೊಮೊಸೋಮುಗಳುಳ್ಳ ರೀಡರ್ಸು ಈ ಅಂಕಣಕ್ಕೆ ತುಂಬ ಮಂದಿ ಇದ್ದಾರೆ, ಅವರ ಹುಬ್ಬೇರಿಸುವಂಥ ವಾಕ್ಯಗಳು ಇಲ್ಲಿ ಅಪ್ರಸ್ತುತ). ಹಾಗೆಯೇ ಕ್ಷೌರಿಕರು ವಾಚಾಳಿಗಳು ಅನ್ನೋದೂ ಅಷ್ಟೇ ಸ್ಪಷ್ಟ ಜಾಗತಿಕ ಸತ್ಯ. ಆತ ಕದಿರೇನಹಳ್ಳಿಯಲ್ಲಿ ಸಲೂನ್‌ ಇಟ್ಟುಕೊಂಡಿರುವ ಕ್ಷೌರಿಕನಿರಲಿ ಅಥವಾ ಕ್ಯಾಲಿಫೋರ್ನಿಯಾದಲ್ಲಿನ ' ಹೇರ್‌ ಏಂಡ್‌ ಸ್ಪಾ" ಕ್ಷೌರಿಕನಿರಲಿ ಗಿರಾಕಿಯ ಕ್ಷೌರವಾಗುವವರೆಗೂ ಬರೀ ಮಾತು ಮಾತು ಮಾತು. ಲೋಕಾಭಿರಾಮ ಹರಟೆ ಎಲ್ಲ ಬರುತ್ತೆ ಅಲ್ಲಿ.

Are barbers perceived as chatterboxes?

ಹಾಗಿರುವಾಗ, ಒಂದುವೇಳೆ ಹೆಂಗಸರೇ ಕ್ಷೌರಿಕರಾಗಿದ್ದರೆ...?
ಇಲ್ಲಿ ಅಮೆರಿಕದಲ್ಲಿ ಹೇರ್‌ಕಟಿಂಗ್‌ ಸಲೂನ್‌ಗಳಲ್ಲಿ ಬಹುತೇಕವಾಗಿ ಹೆಂಗಸರೇ ಕ್ಷೌರಿಕರಾಗಿರುವುದು! (ಅಮೆರಿಕನ್ನಡಿಗ ಓದುಗರನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡರೆ ಈ ವಾಕ್ಯಕ್ಕೆ ನಾನು ಪೂರ್ಣವಿರಾಮ ಚಿಹ್ನೆಕೊಟ್ಟರೆ ಸಾಕು; ಆದರೆ ಭಾರತದಲ್ಲಿನ ವಾಚಕರಿಗೋಸ್ಕರ ಆಶ್ಚರ್ಯಚಿಹ್ನೆಯನ್ನು ಉಪಯೋಗಿಸಬೇಕಾಗುತ್ತದೆ). ಹೆಂಗಸರೇ ಕ್ಷೌರಿಕರು ಎನ್ನುವಾಗ, 'ಕ್ಷೌರಿಕ" ಪುಲ್ಲಿಂಗಶಬ್ದ (ಅಂತ ನಮ್ಮದೊಂದು ಇನ್‌ಟ್ಯೂಷನ್‌, ನಿಜವಾಗಿ ಅದು ವೃತ್ತಿ ಸಂಬಂಧಿ ಪದ, ಅದಕ್ಕೆ ಲಿಂಗಭೇದ ಬೇಡ), ಹಾಗಾದರೆ ಸ್ತ್ರೀಲಿಂಗ ಪದವೇನು ಎಂಬ ಮೂಲಭೂತಪ್ರಶ್ನೆ ಏಳುತ್ತದೆ. ಕಂಗ್ಲಿಷಲ್ಲಾದರೆ 'ಈ ದೇಶದಲ್ಲಿ ಬರೀ ಬಾರ್ಬರಿಗಳೇ ಇರೋದು..." ಎನ್ನಬಹುದು. ಶುದ್ಧಕನ್ನಡದಲ್ಲಿ ಮಾತಾಡುವ ಮನಸ್ಸಾದರೆ? ಕ್ಷೌರಗಿತ್ತಿ (ಜಸ್ಟ್‌ ಲೈಕ್‌ ಹೂವಾಡಗಿತ್ತಿ, ಸೂಲಗಿತ್ತಿ... ಎಟ್ಸೆಟ್ರಾ) ಎನ್ನಬೇಕೆ? ಅಥವಾ ಕ್ಷೌರಗತ್ತಿ ಹಿಡಿದ ಕ್ಷೌರಗಿತ್ತಿ ಎನ್ನಬೇಕೆ? 'ಇ"ಕಾರವಾದರೆ ಸ್ತ್ರೀಲಿಂಗಶಬ್ದವಾದಂತೆಯೇ ಎಂದು 'ಹಜಾಮಿ" ಎನ್ನಬೇಕೆ? ಅಥವಾ ನಾಪಿತ ಶಬ್ದದಲ್ಲಿನ ಪಿತನನ್ನು ರಿಪ್ಲೇಸ್‌ ಮಾಡಿ 'ನಾಮಾತಾ" ಎನ್ನಬೇಕೆ?

ಇವೇ ಮೊದಲಾದ ಯೋಚನೆಗಳು ಇಲ್ಲಿನ ಬಾರ್ಬರಿಗಳಿಗೆ ತಲೆಯನ್ನೊಪ್ಪಿಸುವ ಕನ್ನಡಪುರುಷರ ತಲೆಯಲ್ಲಿ ಹೊಳೆದಿವೆಯಾ ಇಲ್ಲವೊ ಗೊತ್ತಿಲ್ಲ, ನನ್ನ ತಲೆಯಲ್ಲಿ ಹೊಳೆದಿವೆ! ಆದರೆ ಮಾತಾಡಿಲ್ಲ. ಬಾರ್ಬರಿಗಳ ಮಾತುಗಳ ಮುಂದೆ ನನಗೆ ಮಾತಾಡಲು ಅವಕಾಶ ಸಿಕ್ಕರೆ ತಾನೆ?

ಕಾಲರ್‌ ಐಡಿ...

ಈಗಿನ ಆಧುನಿಕ ಟೆಲಿಫೋನ್‌ಗಳಲ್ಲಿ, ಮೊಬೈಲ್‌ಫೋನ್‌ಗಳಲ್ಲಿ 'ಕಾಲರ್‌ ಐಡಿ" ಫೀಚರ್‌ ಸರ್ವಸಾಮಾನ್ಯ. ದೂರವಾಣಿ ಕರೆ ಯಾರಿಂದ ಯಾವ ನಂಬರಿಂದ ಬಂದದ್ದು ಎಂದು ಸ್ಕಿೃೕನ್‌ ಮೇಲೆ ಡಿಸ್ಪ್ಲೆ ಆಗುತ್ತದೆ. ಈ ಸೆಲ್‌ಫೋನ್‌ಗಳ 'ಕಾಲರ್‌ ಐಡಿ" ವಿಷಯ ಅದಾದರೆ ವಾಚಾಳಿ ಕ್ಷೌರಿಕರದೊಂದು ಬೇರೆ ನಮೂನೆಯ 'ಕಾಲರ್‌ ಐಡಿ" ಕಾನ್ಸೆಪ್ಟ್‌ ಇದೆ. ಅದನ್ನೀಗ ನಿಮಗೆ ವಿವರಿಸುತ್ತೇನೆ.

ಈಗೀಗ ರೆಡಿಮೇಡ್‌ ಪ್ಯಾಂಟ್‌-ಶರ್ಟು ಉಪಯೋಗ ಜಾಸ್ತಿಯಾಗಿ ಪಾರ್ಕ್‌ಅವೆನ್ಯೂ, ಪೀಟರ್‌ಇಂಗ್ಲಂಡ್‌, ವಾನ್‌ಹ್ಯುಸನ್‌ ಇತ್ಯಾದಿ ಬ್ರಾಂಡ್‌ಲೇಬಲ್‌ಗಳು ಶರ್ಟುಗಳ ಮೇಲೆ ಇರುತ್ತವಾದರೂ ಹಿಂದೆಲ್ಲ ಪ್ಯಾಂಟ್‌-ಶರ್ಟ್‌ಗಳನ್ನು ಟೈಲರ್‌ ಬಳಿ ಹೊಲಿಸುತ್ತಿದ್ದ ದಿನಗಳಲ್ಲಿ ಶರ್ಟ್‌ ಕಾಲರ್‌ಗೆ ಟೈಲರ್‌ ಅಂಗಡಿ ಹೆಸರು ಮತ್ತು ಊರಿನ ಲೇಬಲ್‌ ಇರೋದಾಗಿತ್ತು. ಕೆಲ ವರ್ಷಗಳ ಹಿಂದಿನವರೆಗೂ ನನ್ನ ಬಳಿ 'ಸ್ಟಾರ್‌ ಟೈಲರ್ಸ್‌, ಕಾರ್ಕಳ" ಎಂಬ ಲೇಬಲ್‌ ಇದ್ದ ಶರ್ಟ್‌ ಇತ್ತು! ಅದ್ಸರಿ, ಟೈಲರನಿಗೂ ಕ್ಷೌರಿಕನಿಗೂ ಏನಪ್ಪಾ ಸಂಬಂಧ (ಇಬ್ಬರ ಕೈಯಲ್ಲೂ ಕತ್ತರಿ ಕುಣಿಯುತ್ತದೆ ಅನ್ನೋದನ್ನು ಬಿಟ್ಟರೆ)? ಇದೆ, ಟೈಲರನ ಆ ಶರ್ಟ್‌ಲೇಬಲ್ಲು ಕ್ಷೌರಿಕನಿಗೆ ಮಾತಿಗೆ ಸಾಮಗ್ರಿ ಒದಗಿಸುವ ಒಂದು ಐಸ್‌ಬ್ರೇಕರ್‌ ಇದ್ದಂತೆ ಎಂದರೆ ನಂಬುತ್ತೀರಾ?

ಈಬಗ್ಗೆ ನನ್ನದೇ ಸ್ವಂತ ಅನುಭವವನ್ನು ಕೇಳಿದ್ರೆ ನೀವೂ ಹೌದಂತೀರಿ. ದಾವಣಗೆರೆಯಲ್ಲಿರುತ್ತ ಒಂದಾನೊಂದು ಹೇರ್‌ಕಟಿಂಗ್‌ನ ದಿನ ಕ್ಷೌರಿಕನಿಗೆ ನನ್ನ ಶರ್ಟ್‌ ಕಾಲರಿನ 'ಏರೆಕ್ಸ್‌ ಟೈಲರ್ಸ್‌, ಕಾರ್ಕಳ" ಎಂಬ 'ಕಾಲರ್‌ ಐಡಿ" ಕಂಡುಬಂದದ್ದೇ ತಡ, ಅವನು - 'ಓಹೊ ನೀವು ಕಾರ್ಕಳದವ್ರಾ? ಅಲ್ಲಿ ಗೋಮಟೇಶ್ವರ ಇದ್ದಾನಲ್ಲಾ, ನಿಮಗೆ ಗೊತ್ತುಂಟಾ? ನಾನು ಒಮ್ಮೆ ಕಾರ್ಕಳ-ಉಡುಪಿ-ಧರ್ಮಸ್ಥಳಕ್ಕೆಲ್ಲ ಹೋಗಿದ್ದೆ... ಧರ್ಮಸ್ಥಳದಲ್ಲೂ ಗೊಮ್ಮಟ ಇದ್ದಾನಲ್ವಾ? ಅವನನ್ನು ನಿಮ್ಮ ಕಾರ್ಕಳದಲ್ಲೇ ಮಾಡಿ ಸಾಗಿಸಿದ್ದಂತೆ?..." ಎಂದು ಗೊಮ್ಮಟಾಖ್ಯಾನವನ್ನು ಶುರು ಮಾಡಿದ್ದ. ಯಾಕೊ 'ನಿಮಗೆ ಗೋಮಟೇಶ್ವರ ಸಂಬಂಧಿಕನಾ?" ಅಂತ ಕೇಳಿಲ್ಲ ಆ ಪುಣ್ಯಾತ್ಮ. ಹೀಗೆಯೇ ಬೇರೆಬೇರೆ ಊರುಗಳ ಟೈಲರ್ಸ್‌ ಹೆಸರಿನ ಕಾಲರ್‌ಐಡಿ ಸಿಕ್ರೆ ಸಾಕಲ್ಲ ಹರಟೆಯ ಎಳೆ ಎಳೆಯಲಿಕ್ಕೆ. ಕೆಲವೊಮ್ಮೆ 'ನನ್ನ ಊರು ಯಾವುದು ಎಂದು ಇವನಿಗೆ ಹೇಗಪ್ಪಾ ಗೊತ್ತಾಯ್ತು" ಎಂದು ನಿಮಗೇ ಆಶ್ಚರ್ಯವಾಗಬಹುದು. ಅದು ಕ್ಷೌರಿಕನ ಕಾಲರ್‌ಐಡಿ ಕರಾಮತ್ತು!

ಕ್ಷೌರಿಕ ಉವಾಚ: 'ವೋ ಮರ್‌ ಗಯೇ..."!

ಹಿಂದಿ ಸಿನೆಮಾದ 'ತಾತ" ಎ.ಕೆ. ಹಂಗಲ್‌ ಅಂದರೆ ಯಾರೆಂದು ಗೊತ್ತಿರಬಹುದು ನಿಮಗೆಲ್ಲ. ಅವ್ರೇ, 'ಶೋಲೆ" ಚಿತ್ರದ ಹತ್ತುಹದಿನೆಂಟು ನಕ್ಷತ್ರಗಳ ಪೈಕಿ ಒಬ್ಬರು! 'ಬಸಂತೀ... ಇತ್‌ನಾ ಸನ್ನಾಟಾ ಕ್ಯೋಂ ಹೈ ಇಧರ್‌..." ಎಂದು, ಶವವಾಗಿರುವ ಮಗನನ್ನೂ ಕಣ್ಣಾರೆಕಾಣಲಾರದ ಅಂಧ ಮುದುಕನ ಪಾತ್ರಧಾರಿ. ಹಂಗಲ್‌ ಸಾಬ್‌ ಒಮ್ಮೆ ಟೀವಿ ಸಂದರ್ಶನವೊಂದರಲ್ಲಿ , ಕ್ಷೌರಿಕನೊಬ್ಬನೊಂದಿಗೆ ತನಗಾದ ಸ್ವಾರಸ್ಯಕರ ಮಾತುಕತೆಯ ಬಗ್ಗೆ ಹೇಳಿದ್ದರು. ಆ ಪ್ರಸಂಗ ನಡೆದದ್ದು ಹೀಗೆ: ಹಂಗಲ್‌ ಅವರೊಮ್ಮೆ ತೀರಾ ಕಾಯಿಲೆಗೊಳಗಾಗಿ ಆಸ್ಪತ್ರೆಸೇರಿದ್ದರು. ಒಂದೆರಡು ತಿಂಗಳವರೆಗೂ ಆಸ್ಪತ್ರೆಯಲ್ಲೇ ಇರಬೇಕಾಯ್ತು. ಅವರ ದಾಡಿ, ತಲೆಗೂದಲು ತುಂಬ ಬೆಳೆದಿದ್ದು ಒಮ್ಮೆ ಟ್ರಿಮ್‌ ಮಾಡಬೇಕು ಎಂದು, ಅವರ ಉಸ್ತುವಾರಿಯವರು ಒಬ್ಬ ಕ್ಷೌರಿಕನನ್ನು ಆಸ್ಪತ್ರೆಗೇ ಕರೆಸಿದರು. ಅವನಾದರೋ ಮುಂಬಯಿಯ ಯಾವುದೋ ಒಂದು ಬೀದಿಯ ಎಕ್ಸ್‌ವೈಜಡ್‌ ಕ್ಷೌರಿಕ. ತಾನು ಸಿನೆಮಾನಟ ಎ.ಕೆ.ಹಂಗಲ್‌ರ ಕ್ಷೌರಮಾಡಲು ಹೋಗುತ್ತಿರುವುದೆಂದು ಅವನಿಗೇನೂ ಗೊತ್ತಿಲ್ಲ. ಸರಿ, ಕ್ಷೌರ ಶುರುವಾಯಿತು. ಹಂಗಲ್‌ರ ತಲೆಯಲ್ಲಿ ಅಂಥಾ ಪರಿ ಕೂದಲಿರಲಿಲ್ಲ. ಗಡ್ಡ ಮಾತ್ರ ಸಿಕ್ಕಾಪಟ್ಟೆ ಬೆಳೆದಿದ್ದು ಟಿಪಿಕಲ್‌ ರೋಗಿಯ ಕಳೆ ಇತ್ತು. ಗಡ್ಡ ಎಲ್ಲ ತೆಗೆದಾದಾಗ ಆ ಕ್ಷೌರಿಕ ಹಂಗಲ್‌ರ ಬಳಿ, 'ನಿಮ್ಮ ಮುಖ ಯಾರೋ ಹಿಂದಿ ಆಕ್ಟರ್‌ನ ಮುಖಕ್ಕೆ ಹೋಲುತ್ತಿದೆಯಲ್ಲಾ? ಎ.ಕೆ ಹಂಗಲ್‌ ಅಂತ ಒಬ್ರು ಇದ್ರು ನೋಡಿ, ಶೋಲೆ-ಅಭಿಮಾನ್‌-ನಮಕ್‌ಹರಾಂ ಇತ್ಯಾದಿ ಫಿಲ್ಮಲ್ಲೆಲ್ಲ ತುಂಬಾ ಚೆನ್ನಾಗಿ ಅಭಿನಯಿಸಿದ್ರು... ಥೇಟ್‌ ಅವರಂತೇ ಕಾಣ್ತೀರಿ ನೀವು..." ಎಂದು ಮಾತಿಗೆ ಹಚ್ಚಿದ! ಪಾಪ, ಅವನಿಗೇನು ಗೊತ್ತು ತನ್ನ ಬಳಿ ಇಷ್ಟುಹೊತ್ತು ಕ್ಷೌರ ಮಾಡಿಸಿಕೊಂಡವರೇ ಎ.ಕೆ.ಹಂಗಲ್‌ ಎಂದು. ಹಂಗಲ್‌ಸಾಬರೂ ನೋಡೋಣ ಮಜಾ ಅಂತ ಬೇಕಂತಲೇ ಅವನಿಗೆ 'ಐಸಾ ಹೈ ಕ್ಯಾ, ತೋ ಆಜ್‌ಕಲ್‌ ಫಿಲ್ಮೊಮೆ ವೊ ಕಾಮ್‌ ನಹೀ ಕರ್‌ತೇ ಕ್ಯಾ?" ಎಂದು ಸವಾಲಿಸಿದರು. ಕ್ಷೌರಿಕ ಕೂಲಾಗಿಯೇ, 'ನಹೀ ಸಾಬ್‌... ಅಚ್ಛೇ ಕಲಾಕಾರ್‌ ಥೆ, ಸುನಾ ಹೈ ಕಿ ವೊ ಅಬ್‌ ಗುಜರ್‌ಗಯೇ..." ಎಂದು ಮೌನವಾದ!

ಆ ಟಿವಿ ಸಂದರ್ಶನದಲ್ಲಿ ಹಂಗಲ್‌ ಮುಂದುವರಿಯುತ್ತ: 'ನನಗೆ ಸರ್ಕಾರದಿಂದ ಅಥವಾ ಇನ್ನಿತರ ಸಂಸ್ಥೆಗಳಿಂದ ಅದೆಂತಹ ಪ್ರಶಸ್ತಿ ಪುರಸ್ಕಾರಗಳು ಸಿಗುತ್ತಿದ್ದರೂ ಇಷ್ಟು ಸಂತೋಷವಾಗುತ್ತಿರಲಿಲ್ಲವೇನೊ. ನಾನು ಸತ್ತ ಮೇಲೂ ನನ್ನ ಪ್ರಶಂಸೆ ಮಾಡುವ ಒಬ್ಬನಾದರೂ ಆಮ್‌ ಆದ್‌ಮೀ ಇದ್ದಾನಂತ ನಾನು ಬದುಕಿರುವಾಗಲೇ ಕಂಡುಕೊಂಡೆನಲ್ಲ, ಅದು ನನಗೆ ಸಿಕ್ಕಿದ ಅತ್ಯುನ್ನತ ಪ್ರಶಸ್ತಿ!" ಎಂದು ಭಾವುಕರಾಗಿ ನುಡಿದಿದ್ದರು. ಕ್ಷೌರಿಕನ ವಾಚಾಳಿತನವೂ ಒಬ್ಬ ಕಲಾವಿದನ ಆತ್ಮತೃಪ್ತಿಗೆ ಕಾರಣವಾದ ಆ ಪ್ರಸಂಗವನ್ನು 'ಕ್ಷೌರಿಕ ಸ್ಪೆಷಲ್‌" ವಿಚಿತ್ರಾನ್ನದಲ್ಲಿ ಖಂಡಿತವಾಗಿಯೂ ಉಲ್ಲೇಖಿಸಬೇಕು ಎಂದು ಅವತ್ತೇ ಅಂದುಕೊಂಡಿದ್ದೆ ನಾನು.

ಎರಡು ವರ್ಷಗಳ ಹಿಂದೆ, ಸದ್ದಾಂ ಹುಸೇನನನ್ನು ಅಮೆರಿಕ ಸೈನ್ಯವು 'ನೆಲದೊಳಗಿನ ಕೋಣೆ"ಯಿಂದ ಹೊರತೆಗೆವಲ್ಲಿ ಯಶಸ್ವಿಯಾದ ಮೇಲೆ ಮಾಡಿದ ಮೊಟ್ಟಮೊದಲ ಕೆಲಸವೆಂದರೆ ಅಮೆರಿಕನ್‌ ಪ್ರಾಯೋಜಕತ್ವದಲ್ಲಿ ಸದ್ದಾಮನ ಕ್ಷೌರ. ಆ ಕ್ಷೌರಿಕ ಅಮೆರಿಕನನೇ(ಳೇ) ಅಥವಾ ಇರಾಕಿಯೇ, ಮತ್ತು ಆತ(ಕೆ) ಕ್ಷೌರ ಮಾಡುವಾಗ ಸದ್ದಾಮನೊಂದಿಗೆ ಹರಟುವ ಧೈರ್ಯ ತೋರಿಸಿದನೆ ಅಥವಾ ಸದ್ದಿಲ್ಲದೆ ತನ್ನ ಕೆಲಸ ಮಾಡಿಮುಗಿಸಿದನೇ ಅನ್ನೋದನ್ನು ಮಾತ್ರ ಸಿಎನ್‌ಎನ್‌ ಆಗಲೀ ಅಲ್‌-ಜ-ಜೀರಾ ಆಗಲೀ ವರದಿಮಾಡಿದಂತಿಲ್ಲ!

ಏಕ್‌ ರಹಾ ಕರ್‌ತಾ ಥಾ ನಾಈ...

ಇವತ್ತಿನ ಲೇಖನದ ಶೀರ್ಷಿಕೆಯಿಂದ ಹಿಡಿದು ವಿವರಣೆಯಲ್ಲೂ ಸಾಕಷ್ಟು ಹಿಂದಿ ಹೇರಿಕೆ ನಡೆದಿದೆಯೆಂಬುದನ್ನು ನೀವು ಈಗಾಗಲೇ ಗಮನಿಸಿರಬಹುದು. ಕೊನೆಯಲ್ಲಿ, ಆಸೆಬುರುಕ ಕ್ಷೌರಿಕನೊಬ್ಬ ಚಿನ್ನದಮೊಟ್ಟೆಯಿಡುವ ತನ್ನ ಕೋಳಿಯನ್ನು ಕುಯ್ದು ಗತಿಕೇಡಾದ ಕಹಾನಿಯ ಹಿಂದಿ ಪದ್ಯವೊಂದರ ಸಾಲುಗಳನ್ನು ಬರೆದು ಮುಗಿಸುತ್ತೇನೆ. ನಮಗೆ ಆರನೇ ಕ್ಲಾಸಿನ ಹಿಂದಿ ಪಠ್ಯಪುಸ್ತಕದಲ್ಲಿದ್ದ ಪದ್ಯ, 'ಏಕ್‌ ರಹಾ ಕರ್‌ತಾ ಥಾ ನಾಈ... ಜಿಸ್‌ ಕೀ ಜ್ಯಾದಾ ಥೀ ನ ಕಮಾಈ... ಪರ್‌ ಕಿಸ್ಮತ್‌ ನೆ ಪಲ್ಟಾ ಖಾಯಾ ... ನಾಈ ಕೆ ಘರ್‌ ಮೇ ಧನ್‌ ಆಯಾ..." ಎಂದು ಶುರುವಾಗುತ್ತದೆ. ಆಮೇಲಿನ ಸಾಲುಗಳು ಈಗ ನೆನಪಾಗುತ್ತಿಲ್ಲ. ನಿಮ್ಮಲ್ಲಿ ಯಾರಬಳಿಯಾದರೂ ಆ ಪದ್ಯದ ಲಿರಿಕ್ಸ್‌ ಇದ್ದರೆ ಕಳಿಸಿ, ನನ್ನ ಸಂಗ್ರಹಕ್ಕೆ ಅದು ಬೇಕು. 'ಅತಿ ಆಸೆ ಗತಿ ಕೇಡು" ಎಂಬ ನೀತಿಪಾಠದ ಮನನಕ್ಕಾದರೂ ಆ ಪದ್ಯ, ಆ ಕಥೆ ನಮಗೆಲ್ಲ ಗೊತ್ತಿರಬೇಕು.

English summary
ThatsKannanda Vichitranna columnist Srivathsa Joshi Writes on Barbers lifestyle and shares funny experience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X