• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೂವತ್ತುಸಾವಿರ ಅಡಿ ಎತ್ತರದಿಂದ...

By Staff
|
Srivathsa Joshi *ಶ್ರೀವತ್ಸ ಜೋಶಿ
‘ಆ ಮನುಷ್ಯ ತುಂಬ ಹೈ-ಫೈ. ಅವನ ಮಾತುಗಳು, ಚಿಂತನೆಗಳು, ವಿಚಾರಲಹರಿಗಳೆಲ್ಲ 30000 ಅಡಿ ಮೇಲಿಂದ ಹಾರುವಂಥವು. ಗ್ರೌಂಡ್‌ ಲೆವೆಲ್‌ನಲ್ಲಿರುವ ನಮ್ಮಂಥವರಿಗೆ ಒಂದೂ ಅರ್ಥವಾಗುವೊಲ್ತು...’ ಎನ್ನುವ ಸಂದರ್ಭಗಳು ನಮಗೆ ಆಗಾಗ ಎದುರಾಗುತ್ತಿರುತ್ತವೆ. 30000 ಅಡಿ ಎತ್ತರದಿಂದ ಮಾತಾಡುವ, ಯೋಚಿಸುವ, ಯೋಜಿಸುವ ವ್ಯಕ್ತಿಗಳ ಭೇಟಿ ನಮಗೆ ಆಗಾಗ ಆಗುವುದುಂಟು. ಇನ್ನು ಕೆಲವರು ವಿಚಾರವಾದಿಗಳು, ಬುದ್ಧಿಜೀವಿಗಳು ಇರುತ್ತಾರೆ, ಅವರೂ ಹಾಗೆಯೇ - ದಂತಗೋಪುರ(Ivory tower)ದಲ್ಲಿದ್ದು ‘ಕೆಳ’ಗಿದ್ದವರಿಗೆ ಹಿತೋಪದೇಶ ಸಾರುತ್ತಿದ್ದೇವೆ ಎಂದು ಭ್ರಮಿಸುವವರು. (ಉದಾಹರಣೆಗಳನ್ನು ಕೊಡುವುದು ಬೇಡ ಅಂದುಕೊಳ್ಳುತ್ತೇನೆ) ಅಂಥವರ ಉಪದೇಶ ಕೇಳಿ ನಗುವುದೋ ಅಳುವುದೋ ನೀವೇ ಹೇಳಿ ಎನ್ನಬೇಕಾದ ಸನ್ನಿವೇಶಗಳು ಬರುವುದೂ ಉಂಟು.

ನಾವು-ನೀವು ಅಂಥವರಲ್ಲ ಬಿಡಿ. ನಮ್ಮದೇನಿದ್ದರೂ ‘ಅವನೀತಳ’ದ(down to earth) ಸಹನೀಯವಾದ ಜೀವನ. ನಮ್ಮ ಸಾಮರ್ಥ್ಯ, ಸಾಧ್ಯಾಸಾಧ್ಯತೆಗಳಿಗೆ ನಿಲುಕುವ ಚಿಂತನೆಗಳು, ಜೀವನಪ್ರೀತಿಯ ರಸಘಳಿಗೆಗಳು, ಸಂತೃಪ್ತಿಯ ಬಾಳ್ವೆ ನಡೆಸುವ ಸರಳ ಆದರ್ಶಗಳು ನಮ್ಮವು. ಒಪ್ಪತಕ್ಕ ವಿಚಾರವೇ. ಈ ಅಂಕಣವನ್ನೇ ತಗೊಳ್ಳಿ, ಇದರಲ್ಲಿ ಮಂಥನವಾಗುವ ವಿಷಯಗಳು, ಅಂಕಣಕಾರ - ಓದುಗರ ನಡುವೆ ಆಪ್ತಚರ್ಚೆಗಳು, ವಿಮರ್ಶೆ ವ್ಯಾಖ್ಯಾನಗಳು ಯಾವತ್ತಾದರೂ ಹೈ-ಫೈ ಮಟ್ಟವನ್ನು ತಲುಪಿದ್ದಿದೆಯೇ? ಪೊಳ್ಳು ಪ್ರತಿಷ್ಠೆಯನ್ನು ಪ್ರತಿಪಾದಿಸಿದ್ದಿದೆಯೇ? ಎಲ್ಲೊ ಅಲ್ಲೊಂದು ಇಲ್ಲೊಂದು ಅಪವಾದವನ್ನು ಬಿಟ್ಟರೆ ‘ಇಲ್ಲ’ ಎಂಬುದೇ ಒಕ್ಕೊರಲಿನ ಉತ್ತರ ಅಂತ ನನ್ನ ಅಂದಾಜು.

ಆದರೆ, ಎಂದೂ ಇಲ್ಲದ ಹೈ-ಫೈ ಇವತ್ತಿನ ಸಂಚಿಕೆಯಲ್ಲಿದೆ! ಇನ್ನೂ ಕರಾರುವಾಕ್ಕಾಗಿ ಹೇಳಬೇಕಿದ್ದರೆ ಹೈ-ಫ್ಲೈ ಅಂತನೂ ಅನ್ನಬಹುದು - ಇವತ್ತು ಅಂಕಣಕಾರ ‘ವಿಚಿತ್ರಾನ್ನ ಅಡಿಗೆಭಟ್ಟ ಶ್ರೀವತ್ಸ ಜೋಶಿ’ ನಿಜಕ್ಕೂ 30000 ಅಡಿ ಎತ್ತರದಲ್ಲಿದ್ದಾನೆ!

ವಿಷಯ ಏನಪ್ಪಾ ಅಂತಂದ್ರೆ, ಈ ಲೇಖನವನ್ನು ನೀವು ಆಗಸ್ಟ್‌ 2ರ ಮಂಗಳವಾರದಂದೇ ಓದುತ್ತಿದ್ದೀರಾದರೆ, ನಾನು ಆ ಕ್ಷಣದಲ್ಲಿ ನಿಜವಾಗಿಯೂ 30000 ಅಡಿ ಎತ್ತರದಲ್ಲಿರುವ ಸಾಧ್ಯತೆಗಳಿವೆ! ಯಾಕಂದ್ರೆ ಅಂದು ನಾನು ಅಮೆರಿಕರಾಜಧಾನಿಯಿಂದ ಕರ್ನಾಟಕರಾಜಧಾನಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುತ್ತೇನೆ! ನಡುವೆ ಫ್ರಾಂಕ್‌ಫರ್ಟ್‌ನಲ್ಲಿ ನಾಲ್ಕೈದು ಗಂಟೆಗಳ ಬಿಡುವು ಬಿಟ್ಟರೆ ದಿನವಿಡೀ ವಿಮಾನದಲ್ಲೇ. ಹಾಗಾಗಿಯೇ, ನೀವಿದನ್ನು ಓದುವ ಹೊತ್ತಿಗೆ ನಾನು ‘ನವಮೇಘ’(cloud nine)ಗಳ ಮೇಲಿರುತ್ತೇನೆ.

ಓಕೆ, ರೂಪಕಾಲಂಕಾರಗಳು, ‘ ಹವಾ ಮೆ ಬಾತೇಂ ಕರ್‌ನಾ’ಗಳನ್ನೆಲ್ಲ ಬದಿಗಿಟ್ಟು ಈಗ ನಮ್ಮ ಮಾಮೂಲಿ ಗ್ರೌಂಡ್‌ ಲೆವೆಲ್‌ಗೆ ಬರೋಣ. ಆಗಸ್ಟ್‌ 2ರಿಂದ 23ರವರೆಗೆ ಮೂರು ವಾರಗಳ ಕಾಲದ ರಜೆಯಲ್ಲಿ ನನ್ನದೊಂದು ‘ಇಂಡಿಯಾ ಟ್ರಿಪ್‌’. ಈ ಭಾರತಯಾತ್ರೆಯ ವೇಳೆಯೇ ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ವಿಶೇಷ. ಅದರ ಬಗ್ಗೆ ನಿಮಗೆಲ್ಲ ಸಹರ್ಷವಾಗಿ ತಿಳಿಸುವುದೇ ಇವತ್ತಿನ ಈ-ಬರಹದ ಸಾರಾಂಶ.

*

Vichitranna in book formನಿಮ್ಮೆಲ್ಲರ ಪ್ರೀತಿ-ವಿಶ್ವಾಸಗಳನ್ನು ಗಳಿಸಿ ಇಷ್ಟು ವಾರಗಳ ಕಾಲ ಅವ್ಯಾಹತವಾಗಿ ಮುಂದುವರಿದು ಬಂದಿರುವ ವಿಚಿತ್ರಾನ್ನ ಅಂಕಣದ ಬರಹಗಳು ಇದೀಗ ಸಂಕಲಿತ ಪುಸ್ತಕ ರೂಪದಲ್ಲಿ ಪ್ರಕಟವಾಗಲಿವೆ! ಮೊದಲ 126 ಸಂಚಿಕೆಗಳ ಕಾಲಾನುಕ್ರಮ ಸಂಗ್ರಹದ ಪುಸ್ತಕ ‘ವಿಚಿತ್ರಾನ್ನ’ ಎಂಬ ಹೆಸರಿನಲ್ಲೇ ಸಿದ್ಧವಾಗಿದೆ. ಅಂತರ್ಜಾಲ ಮಾಧ್ಯಮವನ್ನು ದೃಷ್ಟಿಯಲ್ಲಿಟ್ಟು ಬರೆದ ಬರಹಗಳು ಪುಸ್ತಕರೂಪದಲ್ಲೂ ಸಮಗ್ರವಾಗಿ ಅದೇ ಶೈಲಿಯಲ್ಲಿ ಪ್ರಸ್ತುತವಾಗುತ್ತಿವೆ. ಪುಸ್ತಕ ಬಿಡುಗಡೆಯ ಒಂದು ಪುಟ್ಟ ಸಮಾರಂಭವನ್ನು ಶನಿವಾರ ಆಗಸ್ಟ್‌ 13ರ ಸಂಜೆ ಬೆಂಗಳೂರಿನ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ - ಗಾಂಧಿಬಜಾರ್‌ನಲ್ಲಿ ಆಯೋಜಿಸಲಾಗಿದೆ. ಸಂಜೆ ನಾಲ್ಕೂವರೆಯಿಂದ ಆರೂವರೆ ತನಕ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಆತ್ಮೀಯ ಸ್ವಾಗತವನ್ನು ಕೋರುತ್ತಿದ್ದೇನೆ.

ಮೊದಲು ‘ವಿಚಿತ್ರಾನ್ನ’ ಪುಸ್ತಕ ಯೋಜನೆಯ ಬಗ್ಗೆ ಒಂದಿಷ್ಟು ಬರೆದು ಆಮೇಲೆ ಬಿಡುಗಡೆ ಸಮಾರಂಭದ ಇತರೆ ವಿವರಗಳನ್ನೂ ತಿಳಿಸುತ್ತೇನೆ.

ಈ ಅಂಕಣದ ಲೇಖನಗಳೆಲ್ಲ ಸಂಕಲನರೂಪದಲ್ಲಿ ಬಂದರೆ ಅದೊಂದು ಸಂಗ್ರಹಯೋಗ್ಯ ಪುಸ್ತಕವಾಗುತ್ತದೆ, ಒಂದು ಒಳ್ಳೆಯ ಗಿಫ್ಟ್‌ ಐಟಂ ಆಗುತ್ತದೆ, ಈಬಗ್ಗೆ ಯೋಚಿಸಿ ಕಾರ್ಯಪ್ರವೃತ್ತರಾಗಿ... ಎಂದು ನಿಮ್ಮಲ್ಲನೇಕರು ಬಹುಕಾಲದ ಹಿಂದೆಯೇ ನನಗೆ ಒಂದು ರಚನಾತ್ಮಕ ಸಲಹೆಯನ್ನಿತ್ತಿದ್ದೀರಿ. ಅದರ ಫಲಶ್ರುತಿಯಾಗಿಯೇ ಇಂದು ಈ ಪುಸ್ತಕದ ರಚನೆಯಾಗಿದೆ. ಕನ್ನಡ ಸಾಹಿತ್ಯದ ಗಂಧಗಾಳಿಯಿಲ್ಲದ, witಉ, punಉ, funಉ ಎಂದು ತೋಚಿದ್ದನ್ನು ಗೀಚಿದ ಸಾಮಾನ್ಯನೊಬ್ಬನ ರಚನೆಗಳು ಸಂಕಲನಗೊಂಡು ಒಂದು ಪುಸ್ತಕವಾಗಿದೆ! ನನಗೇ ಅಶ್ಚರ್ಯವಾಗುತ್ತದೆ, ನಮ್ಮ ಮನೆಯಲ್ಲಿ, ನಮ್ಮ ಕುಟುಂಬದಲ್ಲಿ ನಮಗಾರಿಗೂ ಕನ್ನಡಸಾಹಿತ್ಯ ಓದು-ಬರಹಗಳಲ್ಲಿ ಅಂಥಾಪರಿ ಆಸಕ್ತಿ ಗಳೇನೂ ಇಲ್ಲ; ಅಂತಹ ಹಿನ್ನೆಲೆಯಿಂದ ಬಂದ ನನ್ನ ಹೆಸರು ಇದೀಗ ಕನ್ನಡಪುಸ್ತಕವೊಂದರ ರಕ್ಷಾಕವಚದ ಮೇಲೆ ಲೇಖಕನಾಗಿ ಇದೆ! ಇದಕ್ಕೆಲ್ಲ ಕಾರಣ ನೀವೇ ಎಂದು ನಿರ್ದಾಕ್ಷಿಣ್ಯವಾಗಿ ನಿಮ್ಮ ಮೇಲೇ ಆ ‘ ಸಾಧನೆಯ ಗೌರವ’ವನ್ನು ಹೊರಿಸುತ್ತಿದ್ದೇನೆ.

ಇರಲಿ, ‘ವಿಚಿತ್ರಾನ್ನ’ ಪುಸ್ತಕದ ಪ್ರಕಾಶಕರಾಗಿ ಮೈಸೂರಿನ ಗೀತಾ ಬುಕ್‌ ಹೌಸ್‌ನ ಶ್ರೀ ಸತ್ಯನಾರಾಯಣ ರಾವ್‌ ಅವರ ಹಿರಿತನದ, ಅನುಭವಿ ಮಾರ್ಗದರ್ಶನ ನನಗೆ ಸಿಕ್ಕಿದ್ದು ಪುಸ್ತಕಪ್ರಕಟಣೆಯ ಯೋಜನೆಯಲ್ಲಿ ನನ್ನ ಅದೃಷ್ಟವೆಂದೇ ಹೇಳಬೇಕು. ಹಾಗೆಯೇ ಪುಸ್ತಕಕ್ಕೊಂದು ಅಂದವಾದ ರಕ್ಷಾಕವಚವನ್ನು ವಿನ್ಯಾಸಮಾಡಿಕೊಟ್ಟ ನನ್ನ ಆತ್ಮೀಯ ಸ್ನೇಹಿತ (ಯಾರೆಂದು ಸುಲಭದಲ್ಲೇ ಊಹಿಸಬಹುದು - ವೃತ್ತಿಯಲ್ಲಿ ಹೈಟೆಕ್‌ ತಂತ್ರಜ್ಞನಾದ, ಪ್ರವೃತ್ತಿಯಲ್ಲಿ ವ್ಯಂಗ್ಯಚಿತ್ರಕಾರ ಕನ್ನಡಾಭಿಮಾನಿ ಕ್ಯಾಲಿಫೋರ್ನಿಯಾದ ಕನ್ನಡ ತೆನೆಯ ಕೆನೆ) ಜನಾರ್ಧನ ಸ್ವಾಮಿಯ ಕೈಚಳಕವೂ ಪುಸ್ತಕಕ್ಕೆ ಮೆರುಗನ್ನು ತರುವಲ್ಲಿ ಪ್ರಮುಖ ಪಾತ್ರವಹಿಸಿದೆ.

ಪುಸ್ತಕವೆಂದ ಮೇಲೆ ಅದಕ್ಕೆ ಹಿರಿಯರ ಅಶೀರ್ವಚನದ ಮುನ್ನುಡಿ ಬೇಕಲ್ಲ? ‘ವಿಚಿತ್ರಾನ್ನ’ಕ್ಕೆ ಯಾರು ಮುನ್ನುಡಿ ಬರೆದುಕೊಟ್ಟಿದ್ದಾರೆ ಅಂತ ಅರುಹುವ ಮೊದಲು ಇನ್ನೊಂದು ಸ್ಪೆಷಾಲಿಟಿಯನ್ನು ನಿಮಗೆ ತಿಳಿಸುತ್ತೇನೆ. ಹೇಳಿಕೇಳಿ ಇದು ‘ವಿಚಿತ್ರಾನ್ನ’ ವೆಂಬ ಹೆಸರಿನ ಪುಸ್ತಕವಲ್ಲವೆ? ಇದನ್ನೊಂದು ಸುಗ್ರಾಸಭೋಜನದ ಮಾದರಿಯಲ್ಲಿ ಪ್ರಸ್ತುತಪಡಿಸಬೇಕೆಂಬ ದೃಷ್ಟಿಯಿಂದ ಇದರಲ್ಲಿ ಕೆಲವು ಸೂಕ್ತ ಸಾದೃಶ(analogy)ಗಳನ್ನು ಅಳವಡಿಸಲಾಗಿದೆ. ಪರಿವಿಡಿಯನ್ನು ‘ಪರಿಸಿಂಚನ’ ಎನ್ನಲಾಗಿದೆ. ‘ಲೇಖಕನ ಕೃತಜ್ಞತಾಪೂರ್ವಕ ಮಾತು’ಗಳನ್ನು ಭೋ‘ಜನ’ ಸ್ಮರಣೆ ಎಂದು ನಮೂದಿಸಲಾಗಿದೆ. ಅಂದಮೇಲೆ, ಅದಕ್ಕೆ ತಕ್ಕಂತೆ ‘ಮುನ್ನುಡಿ’ಯ ಬದಲು ಏನಿರಬಹುದು ಊಹಿಸಿ ನೋಡೋಣ? ವಿಚಿತ್ರಾನ್ನ ಔತಣದಲ್ಲಿ ಮುನ್ನುಡಿ ‘ ಹಸ್ತೋದಕ’ವಾಗಿದೆ!

ಸರಿ, ಹಸ್ತೋದಕಕ್ಕೆ ನನ್ನ ಪ್ರಪ್ರಥಮ ಮತ್ತು ಏಕೈಕ ಆಯ್ಕೆಯೆಂದರೆ ಎಚ್‌.ಡುಂಡಿರಾಜ್‌! ಪದಗಳನ್ನು ಯದ್ವಾತದ್ವಾ ನಿರ್ದಯವಾಗಿ ಸದೆಬಡಿದು (ಶ್ಲೇಷೆ/ ಶಬ್ದಸರಸ/ ಪನ್‌ ಮಾಡಿ) ಅತ್ಯಂತ ರುಚಿಕರ ಹನಿಗವನಗಳನ್ನು, ಲೇಖನಗಳನ್ನು (ವಿಜಯಕರ್ನಾಟಕ ಪತ್ರಿಕೆಯಲ್ಲಿ ಅವರ ‘ಮಾತು-ಕ(ವಿ)ತೆ’ ಎಂಬ ಅಂಕಣ ಪ್ರಕಟವಾಗುತ್ತಿದೆ) ಬರೆಯುವ ‘ಹನಿಗವನಗಳ ರಾಜಾಧಿರಾಜ ಡುಂಡಿರಾಜ’ ಸಂತೋಷದಿಂದ ಹಸ್ತೋದಕವಿತ್ತಿದ್ದಾರೆ, ಮಾತ್ರವಲ್ಲ ಅಲ್ಲೂ ‘ಪನ್‌’ಡಿತರಾಗಿ ಮೆರೆದಿದ್ದಾರೆ. ‘ನನ್ನದು ಹುಟ್ಟೂರು ದ.ಕ, ಜೋಶಿಯವರೂ ಮೂಲತಃ ದ.ಕ... ಅದಕ್ಕಾಗೇ ಬರೆದುಕೊಟ್ಟಿದ್ದೇನೆ ಹಸ್ತೋ ದ ಕ!’ ಎಂದು ಹನಿಗವನ ರೂಪದಲ್ಲೇ, ವಿಶಿಷ್ಟವಾದ ಮುನ್ನುಡಿ ಬರೆದು ಹರಸಿದ್ದಾರೆ. (ಡುಂಡಿರಾಜರೇ, ನಿಮಗೀಗಾಗಲೇ ಗೊತ್ತೇ ಇರುವಂತೆ ವಿಚಿತ್ರಾನ್ನ ಸಹ originally from ದ.ಕ = ದಟ್ಸ್‌ ಕನ್ನಡ!)

ಪುಸ್ತಕದಲ್ಲಿ ಈಪರಿಯಾಗಿ ವಿಭಿನ್ನತೆ ವೈಶಿಷ್ಟ್ಯಗಳಿರುವಾಗ ಬಿಡುಗಡೆ ಸಮಾರಂಭವೂ ಹಾಗೆಯೇ ಇರಬೇಕು ಎಂದು ನನ್ನದೊಂದು ಪ್ರಾಮಾಣಿಕ ಆಸೆ. ಸಮಾರಂಭದಲ್ಲಿ ಅದ್ದೂರಿ-ಆಡಂಬರಗಳಿಗಿಂತ ಉತ್ಸಾಹ-ಆನಂದಕ್ಕೆ ಹೆಚ್ಚು ಒತ್ತು. ಲವಲವಿಕೆಯ ಲವಣವನ್ನು ಸೇರಿಸಿ ಅದನ್ನು ರುಚಿಕರವಾಗಿಸುವುದಕ್ಕಾಗಿ ಮುಖ್ಯ ಅತಿಥಿಗಳನ್ನಾರಿಸುವುದರಲ್ಲೂ ಸ್ಪೆಷಲ್‌ ಕಸರತ್ತು. ಹಿರಿಯರೂ ಮಿತ್ರರೂ ಆಗಿರುವವರೊಬ್ಬರು ಸಿಗಬೇಕೆಂದರೆ ಅವರು ಪ್ರೊ। ಅ.ರಾ ಮಿತ್ರರೇ ಆಗಿರಬೇಕು! ಅವರು ಬಂದು, ಲಲಿತಪ್ರಬಂಧದ ‘ಲ’ಕಾರವನ್ನು ಕಲಿಸಿಕೊಡಬೇಕು ಅಂತ ನನ್ನ ಆಸೆಯಿದೆ. ಹಾಗೆಯೇ ಉತ್ಸಾಹ ಲವಲವಿಕೆಗಳ ಚಿಲುಮೆಗಳಾಗಿರುವ ಸಿ.ಆರ್‌.ಸಿಂಹ ಮತ್ತು ವಿಶ್ವೇಶ್ವರ ಭಟ್‌ ಇವರಿಬ್ಬರ ಉಪಸ್ಥಿತಿಯಿಂದಲೂ ಸಮಾರಂಭದ ಕಳೆಯನ್ನು ಕೂಡಿಸಬೇಕೆಂದಿದ್ದೇನೆ!

ಇದಿಷ್ಟು ವಿಚಿತ್ರಾನ್ನ ಪುಸ್ತಕದ, ಪುಸ್ತಕ ಬಿಡುಗಡೆಯ ಬಗ್ಗೆ ವಿವರ. ಇದನ್ನೇ ವೈಯಕ್ತಿಕವಾದ ಆಹ್ವಾನವೆಂದು ತಿಳಿದು ನೀವೆಲ್ಲರೂ ಬಂದು ಸಮಾರಂಭವನ್ನು ಚಂದಗಾಣಿಸಿಕೊಡಬೇಕಾಗಿ ಹೃತ್ಪೂರ್ವಕವಾಗಿ ಕೋರುತ್ತಿದ್ದೇನೆ.

ಕಾರ್ಯಬಾಹುಳ್ಯದಿಂದ, ಭೌತಿಕವಾಗಿ ಸಾವಿರಾರು ಮೈಲುಗಳಷ್ಟು ದೂರದಲ್ಲಿ ನೆಲೆಸಿರುವುದರಿಂದ, ಅವತ್ತೇ ಬೇರೆ ಕಾರ್ಯಕ್ರಮ ನಿಗದಿಯಾಗಿರುವುದರಿಂದ - ಹೀಗೆ ಕಾರಣಾಂತರಗಳಿಂದ ಬರಲಾಗುವುದಿಲ್ಲ ಎನ್ನುವವರು ನಿಮ್ಮಲ್ಲಿದ್ದರೆ, ಪುಸ್ತಕದ ಲಭ್ಯತೆಯ ಬಗ್ಗೆ ನಿಮಗೆ ಮಾಹಿತಿ ಕೊಟ್ಟರೆ ಮೆಚ್ಚಿಕೊಳ್ಳುತ್ತೀರಿ ಎಂದು ನಂಬಿದ್ದೇನೆ.

ನಾನೂರಕ್ಕೂ ಹೆಚ್ಚು ಪುಟಗಳ ಈ ಫುಲ್‌ಮೀಲ್ಸ್‌ ದಪ್ಪ ಪುಸ್ತಕವು ಯೋಗ್ಯ ಬೆಲೆಗೆ ಸುಲಭವಾಗಿ ಸಿಗುವಂತೆ ಮಾಡುವ ಬಯಕೆಯಿದೆ. ಬೆಂಗಳೂರಲ್ಲಿ ಬಿಡುಗಡೆಸಮಾರಂಭದಂದು ಒಂದಿಷ್ಟು ರಿಯಾಯತಿದರದಲ್ಲಿ ಪ್ರತಿಗಳು ಹೇಗೂ ದೊರಕುತ್ತವೆಯೆನ್ನಿ. ಹೊರದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಈ ಪುಸ್ತಕವನ್ನು ಖರೀದಿಸಿ ಓದಿ ಆನಂದಿಸುವುದು ಮತ್ತು ಇಷ್ಟಮಿತ್ರರಿಗೆ ಉಡುಗೊರೆಯಾಗಿ ಕೊಡುವುದು ಸಾಧ್ಯವಾಗಿಸಲು ನನ್ನ ಯೋಜನೆಗಳು ಹೀಗಿವೆ:

ಅ) ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ನೆಲೆಸಿರುವವರು ಈಗಿಂದೀಗಲೇ ನನ್ನ srivathsajoshi@yahoo.com. ವಿಳಾಸಕ್ಕೆ ಈಮೈಲಿಸಿದರೆ ನಾನು ಒಟ್ಟು ಎಷ್ಟು ಪ್ರತಿಗಳನ್ನು ಅಮೆರಿಕೆಗೆ ತರಿಸುವ ಏರ್ಪಾಡು ಮಾಡಬೇಕು ಎಂದು ಅಂದಾಜಿಸುವುದು ಸುಲಭವಾಗುತ್ತದೆ. ‘paypal ಮೂಲಕ ಹಣಪಾವತಿ, ಹಸ್ತಾಕ್ಷರ ಸಹಿತ ಪುಸ್ತಕದ ಸ್ವೀಕೃತಿ’ ಏರ್ಪಾಡು ಮಾಡಿದರೆ ಎಲ್ಲರಿಗೂ ಅನುಕೂಲವೆಂದುಕೊಳ್ಳುತ್ತೇನೆ.

ಆ) ಅಮೆರಿಕ ಹೊರತಾದ ಅನಿವಾಸಿ ಕನ್ನಡಿಗರಿಗೆ, ದಟ್ಸ್‌ಕನ್ನಡದ ಮಾತೃಸಂಸ್ಥೆಯಾದ ಇಂಡಿಯಾಇನ್ಫೊ.ಕಾಂ ನ ವಾಣಿಜ್ಯವಾಹಿನಿಯ ಮೂಲಕ ಪುಸ್ತಕ ಖರೀದಿಯ ಅನುಕೂಲ ಮಾಡಿಕೊಡುವ ಉದ್ದೇಶವಿದೆ. ದಟ್ಸ್‌ಕನ್ನಡದಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನೂ ಮಾಡುವ ಇರಾದೆಯಿದೆ.

*

ಈಗ ಗೊತ್ತಾಯಿತಲ್ಲ, ನವಮೇಘ(cloud nine)ಗಳ ಮೇಲಿದ್ದೇನೆ ಅಂತ ಯಾಕೆ ಬರೆದೆನೆಂದು? ಇದುವರೆಗೂ ಮತ್ತು ಇನ್ನು ಮುಂದೆಯೂ ನಿಮ್ಮೆಲ್ಲರ ನಿರಂತರ ಪ್ರೋತ್ಸಾಹ, ಉತ್ತೇಜನಕಾರಿ ಸ್ಪಂದನಕ್ಕಾಗಿ ನಾನು ಚಿರಋಣಿ. ನಿಮ್ಮ ಪತ್ರಗಳ, ಪ್ರತಿಕ್ರಿಯೆಗಳ ಸದಾ ನಿರೀಕ್ಷೆಯಲ್ಲಿ,

ವಿ.ಸೂ : ಭಾರತಪ್ರವಾಸದ ಅವಧಿಯಲ್ಲೂ ನಾನು ವಿ-ಅಂಚೆಗಳನ್ನು ಕಾಲಕಾಲಕ್ಕೆ (ದಿನಕ್ಕೆ ಎರಡು ಮೂರು ಸಲವಾದರೂ) ತಪಾಸಣೆಮಾಡುತ್ತಿರುತ್ತೇನಾದ್ದರಿಂದ ಈಮೈಲ್‌ ವಿಳಾಸವನ್ನೇ ಎಲ್ಲ ಸಂಪರ್ಕಕ್ಕೂ - ಪುಸ್ತಕದ ಪ್ರತಿ ಕಾಯ್ದಿರಿಸುವಿಕೆಯಿಂದ ಹಿಡಿದು, ಬಿಡುಗಡೆಸಮಾರಂಭಕ್ಕೆ ಬರುತ್ತೇನೆ/ಇಲ್ಲ ಎಂದು RSVP ತಿಳಿಸುವವರೆಗೂ- ನೀವು ಬಳಸಿದರೆ ತುಂಬಾ ಸಂತೋಷ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more