• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೈಬೀಸಿ ಕರೆಯುತಿದೆ ಒರ್ಲಾಂಡೊ...

By Staff
|
Srivathsa Joshi *ಶ್ರೀವತ್ಸ ಜೋಶಿ

Welcome to Orlando!ಸರಿಯಾಗಿ ಆರು ವರ್ಷಗಳ ಹಿಂದಿನ ಮಾತು.

1998ರ ಆಗಸ್ಟ್‌ 31ರಂದು ನಾನು ಒರ್ಲಾಂಡೊ(ಫ್ಲೊರಿಡಾ)ದಲ್ಲಿದ್ದೆ. ಅದು ನನ್ನ ಪ್ರಪ್ರಥಮ ಅಮೆರಿಕ ಭೇಟಿ. ಆವಾಗ ನಾನು ಬೆಂಗಳೂರಿನಲ್ಲಿ ಮೊಟೊರೊಲ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದೆ. ಮೊಟೊರೊಲ ಸಂಸ್ಥೆಯ 6-ಸಿಗ್ಮಾ ಕ್ವಾಲಿಟಿ ಕಂಟ್ರೋಲ್‌ ಯೋಜನೆಯಡಿಯಲ್ಲಿ ಪ್ರತಿವರ್ಷ ವಿಶ್ವಾದ್ಯಂತ ವಿವಿಧ ದೇಶಗಳಿಂದ ಮೊಟೊರೊಲ ತಂಡಗಳು ತಾವು ರೂಪಿಸಿದ ಯೋಜನೆಗಳ ಪ್ರದರ್ಶನಕ್ಕೋಸ್ಕರ ವಿಶ್ವಮಟ್ಟದ ಸಮ್ಮೇಳನವೊಂದರಲ್ಲಿ ಸೇರುತ್ತಿದ್ದುವು. ಬಹುತೇಕವಾಗಿ ಈ ಸಮ್ಮೇಳನಗಳಿಗೆ ಮೊಟೊರೊಲ ಕಂಪೆನಿಯು ಅಮೆರಿಕದ ಫ್ಲೊರಿಡಾ ಸಂಸ್ಥಾನದಲ್ಲಿರುವ ಆಕರ್ಷಣೀಯ ಪ್ರವಾಸಿತಾಣವಾದ ಒರ್ಲಾಂಡೊ ನಗರವನ್ನೇ ಆಯ್ದುಕೊಳ್ಳುತ್ತಿತ್ತು. 1998ರಲ್ಲಿ ಭಾರತವನ್ನು ಪ್ರತಿನಿಧಿಸಿದ ಬೆಂಗಳೂರಿನ ಮೊಟೊರೊಲ ತಂಡ(ಹತ್ತುಜನರ ಪಂಗಡ)ದಲ್ಲಿ ನಾನೂ ಒಬ್ಬ ಸದಸ್ಯನಾಗಿದ್ದೆ.

ನಾನೂ ಸೇರಿದಂತೆ ಹೆಚ್ಚಿನವರಿಗೆ ಅದು ಮೊದಲಬಾರಿಯ ವಿದೇಶಪ್ರಯಾಣ. ಬೆಂಗಳೂರಿನಿಂದ ದೆಹಲಿ, ಅಲ್ಲಿಂದ ಆಮ್‌ಸ್ಟರ್‌ಡಾಮ್‌ ಮೂಲಕ ನಾವು ಒರ್ಲಾಂಡೊಗೆ ಪಯಣಿಸುವುದಿತ್ತು. ಕೆ.ಎಲ್‌.ಎಮ್‌ ಏರ್‌ಲೈನ್ಸ್‌ನಲ್ಲಿ ನಮ್ಮ ಇಡೀ ಪ್ರಯಾಣದ ವ್ಯವಸ್ಥೆಯೂ ಆಗಿತ್ತು ; ಆದರೆ ಅದೇ ಸಂದರ್ಭದಲ್ಲಿ ಕೆ.ಎಲ್‌.ಎಮ್‌ನ ಅಮೆರಿಕ ಸಹಭಾಗಿಯಾದ ನಾರ್ತ್‌ವೆಸ್ಟ್‌ ಏರ್‌ಲೈನ್ಸ್‌ನ ಪೈಲಟ್‌ಗಳ ಮುಷ್ಕರದಿಂದಾಗಿ ನಮ್ಮ ಪ್ರಯಾಣಮಾರ್ಗದಲ್ಲಿ ಸ್ವಲ್ಪ ಬದಲಾವಣೆಯಾಗಬೇಕಾಗುತ್ತದೆಂದು ದೆಹಲಿಯಲ್ಲೇ ನಮಗೆ ತಿಳಿಸಿದ್ದರು. ಆಮ್‌ಸ್ಟರ್‌ಡಾಮ್‌ನಿಂದ ನಮ್ಮ ತಂಡದವರನ್ನೆಲ್ಲ ಐಸ್‌ಲ್ಯಾಂಡ್‌ ದೇಶಕ್ಕೆ ರವಾನಿಸಿ ಅಲ್ಲಿಂದ ಬಾಲ್ಟಿಮೋರ್‌ಗೆ ತಂದು ಬಾಲ್ಟಿಮೋರ್‌ನಿಂದ ಎತ್ತಿ ಒರ್ಲಾಂಡೊದಲ್ಲಿ ಇಳಿಸಿದ್ದರು! ಆಗಸ್ಟ್‌ 30ರ ಮಧ್ಯರಾತ್ರೆಯಾಳಗೆ ಹೇಗಾದರೂ ಮಾಡಿ ನಾವು ಒರ್ಲಾಂಡೊ ಸೇರಬೇಕಿತ್ತಾದ್ದರಿಂದ ಅಷ್ಟು ಸರ್ಕಸ್‌ ಮಾಡಲೇಬೇಕಾಯ್ತು. ಐಸ್‌ಲ್ಯಾಂಡ್‌? ಹೌದು, ಅಲ್ಲಿಂದೇನು ಕತ್ತು ಚಾಚಿದರೆ ಹಿಮಕರಡಿಗಳು ಕಾಣಸಿಗಬಹುದಾದಷ್ಟು ಉತ್ತರಧ್ರುವಕ್ಕೆ ಹತ್ತಿರದ ದೇಶವದು. ‘ಹೇಗೂ ಬೇಸಿಗೆಯ ಸೀಸನ್‌ನಲ್ಲಿ ಅಮೆರಿಕೆಗೆ ಹೋಗುತ್ತಿದ್ದೇವಲ್ಲಾ...’ ಎಂದು ಬರ್ಮುಡಾ/ಹಾಫ್‌ಪ್ಯಾಂಟ್ಸ್‌ ಹಾಕಿ ಹೊರಟಿದ್ದ ನಮ್ಮ ಕೆಲ ಸ್ನೇಹಿತರಿಗೆ ಐಸ್‌ಲ್ಯಾಂಡ್‌ ದೇಶದ ಚಳಿ ‘ಬಿಸಿ’ಮುಟ್ಟಿಸಿದ್ದು ಹೌದು!

Srivathsa Joshi in Orlando, Sept 1998ಅಂತೂ ಒರ್ಲಾಂಡೊ ತಲುಪಿದೆವು. ಬೋರ್ಡ್‌ವಾಕ್‌ ಲಕ್ಸುರಿ ಹೊಟೆಲ್‌ನಲ್ಲಿ ಮೂರು ದಿನಗಳ ನಮ್ಮ ಸಮ್ಮೇಳನ ಅತ್ಯಂತ ಯಶಸ್ವಿಯಾಯ್ತು. ಸಮ್ಮೇಳನ ಮುಗಿದ ಮೇಲೆ ಮೊಟೊರೊಲದ ಪ್ರಾಯೋಜಕತ್ವದಲ್ಲೇ ಡಿಸ್ನಿವರ್ಲ್ಡ್‌ ಆಕರ್ಷಣೆಗಳನ್ನೆಲ್ಲ ನೋಡಿದ್ದೂ ಆಯ್ತು. ಹೇಗೂ ಬಂದಿದ್ದೇವೆ ನೆಂಟರಿಷ್ಟರನ್ನೂ ಭೇಟಿಯಾಗಿ ಹೋಗೋಣ ಎಂದು ನಿಗದಿತ ಕಾರ್ಯಕ್ರಮಗಳೆಲ್ಲ ಮುಗಿದ ಮೇಲೆ ತಂತಮ್ಮ ಶಕ್ತ್ಯಾನುಸಾರ ವಾರ-ಹತ್ತುದಿನ ಅಮೆರಿಕದಲ್ಲೇ ಉಳಿದು ತಿರುಗಾಡಿ ಎಲ್ಲರೂ ಬೆಂಗಳೂರಿಗೆ ಮರಳಿದ್ದೆವು. ಟ್ರಿಪ್‌ ತುಂಬಾ ಮಜಾ ಆಗಿತ್ತು. ಪ್ರವಾಸಿಗಳ ಕಾಶಿಯಾದ ಒರ್ಲಾಂಡೊವನ್ನೇ ಮೊಟ್ಟಮೊದಲ ಅಮೆರಿಕ ಪ್ರಯಾಣದಲ್ಲೇ ನೋಡಿದಿರಿ, ನಾವು ಐದಾರು ವರ್ಷ ಅಮೆರಿಕದಲ್ಲೇ ಇದ್ದವರೂ ಇನ್ನೂ ಒರ್ಲಾಂಡೊ ನೋಡಿಲ್ಲ... ಎಂದು ಅಮೆರಿಕದಲ್ಲಿನ ಕೆಲ ಸ್ನೇಹಿತರು ಉದ್ಗರಿಸಿದ್ದರು ಆಗ. ಅಂತೂ ಸದಾಕಾಲ ನೆನಪಲ್ಲುಳಿಯುವಂಥ ಪ್ರವಾಸವದು.

* * *

A Balloonman and Srivathsa Joshi in Orlando, Sept 1998ಈ ಆರು ವರ್ಷಗಳಲ್ಲಿ ಏನೇನೆಲ್ಲ ಆಗಿದೆ, ಆಗಿಲ್ಲ... (... ಇಂಥ ನದಿಯಲ್ಲಿ ಬಹಳಷ್ಟು ನೀರು ಹರಿದಿದೆ ಈ ನಡುವೆ.... ಅಂತ ಹೇಳುತ್ತೇವಲ್ಲ , ಹಾಗೆ)! ಆವಾಗ ಬಿಸಿನೆಸ್‌ ವೀಸಾದಲ್ಲಿ ಬರೀ ಎರಡು ವಾರಗಳಷ್ಟೇ ಅವಧಿಗೆ ಅಮೆರಿಕೆಗೆ ಬಂದುಹೋಗಿದ್ದ ನಾನು ಆಮೇಲೆ 2000 ಇಸವಿಯಲ್ಲಿ ಮೊಟೊರೊಲ ಬಿಟ್ಟು ಬೇರೆ ಉದ್ಯೋಗನಿಮಿತ್ತ ಇಲ್ಲಿಗೆ ಬಂದದ್ದಾಯ್ತು. ಅದೃಷ್ಟ ಚೆನ್ನಾಗಿತ್ತು ಅಂತ ಕಾಣ್ತದೆ, 2003ರಲ್ಲೇ ನನಗೆ ಈ ದೇಶದ ‘ಪಚ್ಚೆಪರವಾನಗಿ’ಯೂ (green card) ಸಿಕ್ಕಿದ್ದಾಯ್ತು. ಈ ಅವಧಿಯಲ್ಲಿ ಧನಾರ್ಜನೆ ಮಾಡಿದೆನೋ ಇಲ್ಲವೊ ಗೊತ್ತಿಲ್ಲ , ದೇಶದ ಬಗ್ಗೆ ಒಂದಿಷ್ಟು ಸಾಮಾನ್ಯ ಜ್ಞಾನಾರ್ಜನೆಯನ್ನಂತೂ ಮಾಡಿದ್ದೇನೆ. ಏತನ್ಮಧ್ಯೆ 2001ರ ದುರ್ಘಟನೆಯಿಂದಾಗಿ ಅಮೆರಿಕದ ಒಟ್ಟಾರೆ ಸ್ಥಿತಿ-ಗತಿಗಳೇ ಸಾಕಷ್ಟು ಜರ್ಝರಿತವಾಗಿವೆ. ಲವಲವಿಕೆ ಕಳೆಗುಂದಿರುವುದು ಎಲ್ಲ ಕಡೆಯೂ ಗೊತ್ತಾಗುತ್ತದೆ (ಈ ಹಿಂದಿನ ಅಧ್ಯಕ್ಷ ಕ್ಲಿಂಟನ್‌ ಮುಖಕ್ಕಿರುವ ಚರಿಷ್ಮಾಕ್ಕೂ ಈಗಿನ ಅಧ್ಯಕ್ಷ ಬುಷ್‌ ಮುಖಕ್ಕಿರುವ ನಿರಿಗೆ-ಸುಕ್ಕುಗಳಿಗೂ ಇರುವ ವ್ಯತ್ಯಾಸ ಕಾಕತಾಳೀಯ?). ಮಾನವಯೋಜಿತ ದುಷ್ಕೃತ್ಯಗಳ ಜತೆಜತೆಗೇ ಪ್ರಾಕೃತಿಕವಾಗಿಯೂ ಸಾಕಷ್ಟು ಬಿರುಗಾಳಿ-ಜಡಿಮಳೆ-ಹಿಮಪಾತ-ಭೂಕಂಪ-ಕಾಡಿಗೆಬೆಂಕಿಗಳು ಅಮೆರಿಕವನ್ನು ತಲ್ಲಣಗೊಳಿಸಿವೆ - ಮೊನ್ನೆಮೊನ್ನೆಯಷ್ಟೆ ಫ್ಲೊರಿಡಾ ಸಂಸ್ಥಾನದ ಕೆಲ ಪ್ರದೇಶಗಳನ್ನು ಹಿಂಡಿಹಿಪ್ಪೆ ಮಾಡಿದ ಚಾರ್ಲಿ* ಚಂಡಮಾರುತವೂ ಸೇರಿದಂತೆ.

ಹೀಗಿರಲು, ಇದೀಗ ಮತ್ತೆ ಅದೇ ಫ್ಲೊರಿಡಾದ ಅದೇ ಒರ್ಲಾಂಡೊಗೆ ಹೋಗಿ ಬರುವ ಅವಕಾಶ ಬಂದಿದೆ!

ಇದೇ ಸಪ್ಟೆಂಬರ್‌ 3 ರಿಂದ 5ನೇ ದಿನಾಂಕದವರೆಗೆ ಒರ್ಲಾಂಡೊದಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆಯುತ್ತಿದೆ. ಸುಮಾರು 3000ಕ್ಕಿಂತಲೂ ಹೆಚ್ಚುಜನ ಕನ್ನಡಿಗರು ಅಲ್ಲಿ ಸೇರಬಹುದೆಂದು ಅಂದಾಜಿಸಲಾಗಿದೆ. ಕರ್ನಾಟಕದಿಂದ ಎಷ್ಟೋ ಮಂದಿ ಪ್ರಖ್ಯಾತ ಕಲಾವಿದರು, ಸಾಹಿತಿಗಳು, ಸಂಗೀತಗಾರರು ಬಂದು ಇಲ್ಲಿನ ಕನ್ನಡಿಗರ ಮನತಣಿಸಲು ರಸಧಾರೆಯೆರೆಯಲಿದ್ದಾರೆ (ರಾಜಕಾರಣಿಗಳೂ ಬಂದು ಅದೇ ಹಳೇಸರಕಿನ ಮಾತುಗಳಿಂದ ಕಿವಿಕೊರೆಯಲಿದ್ದಾರೆ?) ಜತೆಯಲ್ಲೇ ‘ಮಿಸ್‌ ಅಮೆರಿಕನ್ನಡಿಗ’ ಸೌಂದರ್ಯ ಸ್ಪರ್ಧೆಯೂ ಸೇರಿದಂತೆ ಅಮೆರಿಕದ ಕನ್ನಡಿಗ/ ಕನ್ನಡದ ಪ್ರತಿಭೆಗಳ ವೈವಿಧ್ಯಮಯ ಪ್ರಸ್ತುತಿಗಳಿವೆ. ಮತ್ತೆ ನಮ್ಮ ವಾಷಿಂಗ್ಟನ್‌ ಡಿಸಿ ಯ ನನ್ನ ಪರಿಚಿತಸ್ನೇಹಿತರ ಬಳಗವು ‘ಬೆರಳ್‌ಗೆ ಕೊರಳ್‌’ ಹಳಗನ್ನಡ ನಾಟಕವನ್ನೂ ಪ್ರದರ್ಶಿಸಲಿದೆ.

Gaylord Palms Resort, Orlando Venue of WKC 2004ಅಂತೂ ಅದ್ದೂರಿಯ ಸಮ್ಮೇಳನ ಸಕಲರೀತಿಯಲ್ಲೂ ಯಶಸ್ವಿಯಾಗುವಂತೆ ಆಯೋಜಕರು, ಕಾರ್ಯಕರ್ತರು, ಸ್ವಯಂಸೇವಕರು ಟೊಂಕಕಟ್ಟಿ ನಿಂತಿದ್ದಾರಂತೆ. ಹಾಗಂತ ಎಲ್ಲವೂ ಸುಸೂತ್ರವಾಗೇ ನಡೆಯುತ್ತಿದ್ದಂತಿಲ್ಲ. ಏನಾದರೂ ಮಾಡಿ ಇಂಥ ಸಮಾರಂಭಗಳ ಹೊಳಪಿಗೆ ಮಸಿಬಳಿಯೋಣವೆಂದು ಶತಗತಾಯ ಯತ್ನಿಸುವ ಕುಬ್ಜಮನಸ್ಸಿನವರಿಗೇನು ಕೊರತೆಯೇ? ಮೊದಲೇ ಫ್ಲೊರಿಡಾಕ್ಕೆ land of alligators ಎಂಬ ಖ್ಯಾತಿಯಿದೆ. ‘ಅಮೆರಿಕನ್ನಡ’ ಅಂಬಾರಿಯನ್ನು ಹೊತ್ತು ಸಾಗುವ ಗಜರಾಜನ ಕಾಲೆಳೆಯಲು ಕೆಲ ಮೊಸಳೆಗಳೂ ಅಲ್ಲಿ ಸೇರಿರದಿದ್ದರೆ ಸಾಕು. ತಿಕ್ಕಾಟದಲ್ಲಿ ಗಜರಾಜನಿಗೆ ಗಾಯಗಳಾಗದಿರಲಿ ಅನ್ನುವುದಕ್ಕಿಂತಲೂ ಕನ್ನಡದಂಬಾರಿ ಕೆಳಗೆ ಬೀಳದಿದ್ದರೆ ಸಾಕು, ಅಲ್ಲವೇ? (ತಾಯಿ ಭುವನೇಶ್ವರಿ, ಸ್ವಲ್ಪ ಜಾಗರೂಕತೆಯಿಂದಿರಮ್ಮ...) ನಾವೆಲ್ಲ ನತಮಸ್ತಕರಾಗಬೇಕಾದ ಅಂಥ ವಿದ್ಯಮಾನಗಳೇನೂ ಸಂಭವಿಸದೆ The Sunshine State ಎಂಬ ಹೆಸರಿಗೆ ತಕ್ಕಂತೆ ಫ್ಲೊರಿಡಾದಲ್ಲಿ ಕನ್ನಡದ ರವಿ ಮೂಡಿ ಬಂದ... ಮುನ್ನಡೆವ ಬೆಳಕನ್ನು ತಂದ... ಅಗುತ್ತದೆಯೆಂದುಕೊಳ್ಳೋಣ.

ಎರಡು ವರ್ಷಗಳ ಹಿಂದೆ ಡೆಟ್ರಾಯಿಟ್‌ನಲ್ಲಿ ನಡೆದಿದ್ದ ವಿಶ್ವಕನ್ನಡಸಮ್ಮೇಳನದಲ್ಲೂ ನಾನು ಭಾಗವಹಿಸಿದ್ದೆ. ಇಂಥ ಸಮ್ಮೇಳನಗಳಿಂದ ಅಮೆರಿಕನ್ನಡಿಗರ, ಅಮೆರಿಕದಲ್ಲಿ ಕನ್ನಡದ ಉದ್ಧಾರ ಎಷ್ಟು ಹೇಗೆ ಯಾವಾಗ ಎಲ್ಲಿ ಮತ್ತು ಯಾಕೆ ಆಗಿದೆ/ಆಗುತ್ತದೆ/ಆಗಲಿದೆ ಎಂಬ ಗಹನವಿಚಾರಗಳೆಲ್ಲ ನನಗೆ ಸರಿಯಾಗಿ ಗೊತ್ತಿಲ್ಲ. ಜನ ಮರುಳೊ ಜಾತ್ರೆ ಮರುಳೊ ಅಂತ ಅಷ್ಟೇ ಈ ಸಮ್ಮೇಳನಗಳು ನಡೆಯುವುದು ಎನ್ನುವವರಿದ್ದಾರೆ. ನೋಡೋಣವಂತೆ ಈ ಸಲದ ಜಾತ್ರೆಯನ್ನೂ.... ಎನ್ನುವುದಷ್ಟೆ ನನ್ನದೂ ನಿಲುವು. ಕಂಡು-ಕೇಳರಿಯದ (ಅಂದರೆ ಇದುವರೆಗೆ ಮುಖತಾ ಭೇಟಿಯಾಗದಿರುವ, ಫೋನಲ್ಲೂ ಮಾತನಾಡದಿರುವ, ಬರೀ ಇಮೈಲ್‌ನಲ್ಲಷ್ಟೇ ಪರಿಚಯವಿರುವ) ಕೆಲ ಸ್ನೇಹಿತರನ್ನಾದರೂ ಭೇಟಿಯಾಗಬಹುದಲ್ಲಾ - ಇದು ನನ್ನ ಏಕೈಕ ಅಜೆಂಡಾ, ಒರ್ಲಾಂಡೊ ಸಮ್ಮೇಳನದಲ್ಲಿ.

See you in Orlando!ದೀರ್ಘವಾರಾಂತ್ಯ ಬಿಟ್ಟರೆ ನನಗೆ ಸದ್ಯಕ್ಕೆ ರಜೆಯಿಲ್ಲ. ಹಾಗಾಗಿ ಈಸಲ ಸಮ್ಮೇಳನಕ್ಕೋಸ್ಕರವಷ್ಟೇ ನಾನು ಒರ್ಲಾಂಡೊಗೆ ಹೋಗಿಬರುವೆನೆಂದು ನಿರ್ಧರಿಸಿದ್ದೇನೆ. ಮೂರಕ್ಕೆ ಹೋಗಿ ಆರಕ್ಕೆ ವಾಪಾಸ್‌. ಆದರೆ ಮೊದಲೇ ಹೇಳಿದಂತೆ ಒರ್ಲಾಂಡೊ ಅಮೆರಿಕದಲ್ಲಿ ಪ್ರವಾಸಿಗಳ ಕಾಶಿ; ಅತ್ಯಧಿಕ ಸಂಖ್ಯೆಯ ಪ್ರವಾಸಿಗಳು ಭೇಟಿಕೊಡುವ ತಾಣವದು. ಡಿಸ್ನಿಲ್ಯಾಂಡ್‌ ಅಷ್ಟೇ ಅಲ್ಲದೆ ಇನ್ನೂ ಅನೇಕ ಆಕರ್ಷಣೆಗಳು ಅಲ್ಲಿವೆ. ಈ ಲೇಖನವನ್ನು ಓದುತ್ತಿರುವವರಲ್ಲಿ ಹಲವರು ಅಥವಾ ನಿಮ್ಮ ಪರಿಚಿತ ಸ್ನೇಹಿತರು ತುಂಬಾ ಮಂದಿ ಸಮ್ಮೇಳನದಲ್ಲಿ ಭಾಗವಹಿಸಲು ಒರ್ಲಾಂಡೊಮುಖಿಗಳಾಗಿರಬಹುದು. ಒರ್ಲಾಂಡೊದಲ್ಲಿ ಏನು ಹೇಗೆ (ಸಮ್ಮೇಳನದ ಹೊರತಾಗಿ) ಅನ್ನುವ ಮಾಹಿತಿ ನಿಮಗೆ ಸಿಗಬಹುದಾದ ಒಂದು ವೆಬ್‌ಸೈಟ್‌ ವಿಳಾಸವನ್ನು ತಿಳಿಸೋಣವೆಂದು ಇಲ್ಲಿ ಇದನ್ನು ಬರೆಯುತ್ತಿದ್ದೇನೆ. ಉಪಯುಕ್ತಕರವಾಗಿದೆ, ಕ್ಲಿಕ್ಕಿಸಿ.

ಹಾಗಿದ್ದರೆ ಒರ್ಲಾಂಡೊದಲ್ಲಿ ಭೇಟಿಯಾಗೋಣ (ನೀವು ಸಮ್ಮೇಳನಾಭಿಮುಖಿಗಳ ಪೈಕಿಯಾದರೆ). ಇಲ್ಲಾಂದರೆ ಮುಂದಿನ ಮಂಗಳವಾರ, ವಿಚಿತ್ರಾನ್ನದ 100ನೇ ಸಂಚಿಕೆಯಾಂದಿಗೆ! ಅಲ್ಲಿಯವರೆಗೆ, ನಮಸ್ಕಾರ. ಪತ್ರಿಸುತ್ತೀರಾದರೆ ವಿಳಾಸ srivathsajoshi@yahoo.com

* * *

* ಚಂಡಮಾರುತಗಳಿಗೇಕೆ ಚಾರ್ಲಿ, ಡಾನಿ, ಇಸಾಬೆಲ್‌... ಅಂತೆಲ್ಲ ಮುದ್ದಿನ ಹೆಸರುಗಳನ್ನಿಡುತ್ತಾರೆ ಎಂಬ ಕುತೂಹಲ ನಿಮಗೂ ಇರಬಹುದು. ಅವು ಮನಸ್ಸಿಗೆ ಬಂದ ಹೆಸರುಗಳಲ್ಲ , ಅದಕ್ಕೊಂದು ನಿರ್ದಿಷ್ಟ ಕ್ರಮವಿದೆ. ಪ್ರತಿ ಕ್ಯಾಲೆಂಡರ್‌ ವರ್ಷದಲ್ಲಿ ಉದ್ಭವಿಸಬಹುದಾದ ಚಂಡಮಾರುತಗಳಿಗೆಲ್ಲ ಜಾಗತಿಕ ಹವಾಮಾನ ಮಾಪನ ಸಂಸ್ಥೆ ಈಗಾಗಲೇ ಹೆಸರುಗಳನ್ನು (ಅದೂ ಅಟ್ಲಾಂಟಿಕ್‌ ಮಹಾಸಾಗರದ್ದಕ್ಕೆ ಪ್ರತ್ಯೇಕ, ಪೆಸಿಫಿಕ್‌ ಮಹಾಸಾಗರದ್ದಕ್ಕೆ ಪ್ರತ್ಯೇಕ - ಹೀಗೆ) ನಿಗದಿಪಡಿಸಿದೆ. ಇಂಗ್ಲಿಷ್‌ ವರ್ಣಮಾಲೆಯ ಎ, ಬಿ, ಸಿ, ... ಅಕ್ಷರಗಳಿಂದ ಆರಂಭವಾಗುವ ಹೆಸರುಗಳ ನಿಗದಿತ ಪಟ್ಟಿಯೇ ಇದೆ ಪ್ರತಿ ವರ್ಷಕ್ಕೂ. ಆ ಪಟ್ಟಿಯಿಂದಲೇ ಅನುಕ್ರಮವಾಗಿ ಹೆಸರುಗಳು ಕೊಡಲ್ಪಡುತ್ತವೆ. ಪ್ರಳಯಭೀಕರ ಅಟಾಟೋಪ ತೋರಿಸಿದ ಚಂಡಮಾರುತದ ಹೆಸರು ಮಾತ್ರ ಪಟ್ಟಿಯಿಂದ ನಿವೃತ್ತವಾಗುತ್ತದೆ. ವಿವರಗಳನ್ನು ಇಲ್ಲಿ ನೋಡಿ ಮತ್ತು ಯಾಕೆ ಕಳೆದ ವರ್ಷ ಇಸಾಬೆಲ್‌ ಬಂತು, ಈ ವರ್ಷ ಚಾರ್ಲಿ ಬಂತು ಇತ್ಯಾದಿಯನ್ನೆಲ್ಲ ನೋಡಿತಿಳಿದುಕೊಳ್ಳಿ. ಇದು ನಿಮ್ಮ ಸಾಮಾನ್ಯಜ್ಞಾನಭಂಡಾರಕ್ಕೊಂದು ಕಿರುಕಾಣಿಕೆ ಅಷ್ಟೆ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more