• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮೂರ ಮಂದಾರ ಹೂವೆ......

By Staff
|
Srivathsa Joshi *ಶ್ರೀವತ್ಸ ಜೋಶಿ

nammoora mandaara huvu...ಆ ಹೆಸರಿನ ಕನ್ನಡ ಚಲನಚಿತ್ರವನ್ನು ನಾನು ನೋಡಿದ್ದೇನೆ, ಮೆಚ್ಚಿದ್ದೇನೆ, ಚಿತ್ರದ ಸುಂದರ ದೃಶ್ಯಾವಳಿಯನ್ನು ನೋಡುತ್ತ ಕುಳಿತಲ್ಲಿಂದಲೇ ಉತ್ತರಕನ್ನಡದ ‘ಯಾಣ’ಕ್ಕೆ ಪ್ರಯಾಣ ಬೆಳೆಸಿದ್ದೇನೆ. ಅದು ಚಲನಚಿತ್ರದ ಮಾತಾಯಿತು. ಇನ್ನು, ನಮ್ಮೂರ ಮಂದಾರ ಹೂವೆ... ನನ್ನೊಲುಮೆ ಬಾಂದಳದ ಚೆಲುವೆ... ಎಂದು ಆರಂಭವಾಗುವ ಒಂದು ಅತ್ಯುತ್ತಮ ಚಿತ್ರಗೀತೆಯ (ಚಿತ್ರದ ಹೆಸರು: ‘ಆಲೆಮನೆ’) ಧ್ವನಿಮುದ್ರಿಕೆಯನ್ನೂ ಅದೆಷ್ಟೋ ಬಾರಿ ಕೇಳಿ ಆನಂದಿಸಿದ್ದೇನೆ. ಮೊನ್ನೆಮೊನ್ನೆಯಷ್ಟೇ ವಿಶ್ವಕನ್ನಡ ಸಮ್ಮೇಳನದ ಸಂದರ್ಭದಲ್ಲಿ ರಸಮಂಜರಿ ಕಾರ್ಯಕ್ರಮದಲ್ಲಿ ಗಾಯಕ ಬಾಲು ಆ ಹಾಡನ್ನು ಹಾಡಿದ್ದು, ಉಪಸ್ಥಿತರಿದ್ದ ಕವಿ ದೊಡ್ಡರಂಗೇಗೌಡರೂ ಸೇರಿದಂತೆ ಸಭೆಯಿಡೀ ಆ ಮಧುರಗಾನವನ್ನು ಸವಿದದ್ದು ಎಲ್ಲ ನೆನಪಿದೆ. ಬಹುಶಃ ತುಂಬಾ ಮಂದಿಗೆ ಅದು ಅತಿನೆಚ್ಚಿನ ಹಾಡುಗಳಲ್ಲೊಂದು.

‘ನಮ್ಮೂರ ಮಂದಾರ ಹೂವೆ’ ಎಂದು ಅತ್ಯಂತ ಜನಜನಿತವಾದ ಪದಪುಂಜವನ್ನು ಇವತ್ತಿನ ಲೇಖನಕ್ಕೆ ಶೀರ್ಷಿಕೆಯಾಗಿ ಉಪಯೋಗಿಸುತ್ತಿರುವುದರಿಂದ ಆ ಚಲನಚಿತ್ರ ಮತ್ತು ಚಿತ್ರಗೀತೆಗಳಿಗೆ ಮೊದಲು ಮಣೆ-ಮನ್ನಣೆ ಕೊಟ್ಟ ನಂತರ ಇದೀಗ ಮುಖ್ಯ ವಿಷಯಕ್ಕೆ ಬರೋಣ.

ಏನು ವಿಷಯ? ಮತ್ತಿನ್ನೇನು, ನಮ್ಮೂರ ಮಂದಾರ ಹೂವು. ಹೌದು, ನಮ್ಮ ಊರಿನ ‘ಮಂದಾರ’ ಹೂವು!

* * *

‘ದೇವರ ಪೂಜೆಗೆ ಹೂ ಕೊಯ್ದು ತರುವುದು’ - ಇದು ಬಾಲ್ಯದಲ್ಲಿ ನಮ್ಮಲ್ಲನೇಕರ ದೈನಂದಿನ ಚಟುವಟಿಕೆಗಳಲ್ಲೊಂದು ಆಗಿತ್ತು. ಬುಟ್ಟಿ ಹಿಡಿದು ಮನೆಯ ಸುತ್ತಲ ಕೈತೋಟದಿಂದ ಗುಲಾಬಿ, ತುಂಬೆಹೂ, ಪುನ್ನಾಗ, ಜಾಜಿ, ಕರವೀರ, ದಾಸವಾಳ, ಸುಗಂಧರಾಜ, ನಾಗಸಂಪಿಗೆ ಹೀಗೆ ಹತ್ತಾರು ನಮೂನೆಯ ಹೂಗಳು, ತುಳಸಿ, ಬಿಲ್ವಪತ್ರೆ ಮತ್ತು ಗರಿಕೆಹುಲ್ಲು (21 ಸಂಖ್ಯೆ) - ಇವಿಷ್ಟನ್ನು ಕೊಯ್ದು ಬುಟ್ಟಿ ತುಂಬಿಸಿದರೆ, ಅಷ್ಟೊತ್ತಿಗೆ ತಂದೆಯವರು ಸ್ನಾನಾದಿ ಮುಗಿಸಿ ಪೂಜೆಗೆ ಅಣಿಯಾಗಿರುತ್ತಾರೆ. ನಾವೂ ಸ್ನಾನ ಮಾಡಿ ದೇವರಿಗೆ ನಮಿಸಿ ತೀರ್ಥಪ್ರಸಾದ ಬೆಳಗಿನತಿಂಡಿ ಮುಗಿಸಿ ಶಾಲೆಗೆ ಹೊರಡೋದು. ಇದು ಮುಂಜಾವಿನ ದಿನಚರಿಯ ತುಣುಕು. ನಗರವಾಸಿಗಳಲ್ಲೂ ಕೆಲವರದು ಹೆಚ್ಚುಕಡಿಮೆ ಇದೇ ಪರಿಪಾಠವಿತ್ತಿರಬಹುದು, ಸೀಮಿತ ವಿಸ್ತೀರ್ಣದ ಕೈತೋಟ, ಕೆಲವೇ ಗಿಡಗಳು, ಹಿಡಿಯಷ್ಟೇ ಹೂವುಗಳು, ಅಥವಾ ಆಪತ್ಕಾಲಕ್ಕೆ ಪಕ್ಕದ್ಮನೆಯವರಿಂದ ಎರವಲು - ಎಂಬುವುದನ್ನು ಬಿಟ್ಟರೆ.

nammoora mandaara huvu...ದಾಸವಾಳ, ತುಂಬೆ, ಪುನ್ನಾಗಗಳೆಲ್ಲ ಸರ್ವಋತುಗಳಲ್ಲೂ ಲಭ್ಯ ಹೂವುಗಳಾದರೆ ಮಲ್ಲಿಗೆ, ಲಿಲ್ಲಿಹೂ ಮುಂತಾದುವು ವರ್ಷದಲ್ಲಿ ಕೆಲವು ದಿನ ಅಥವಾ ಹೆಚ್ಚೆಂದರೆ ತಿಂಗಳ ಮಟ್ಟಿಗೆ ಮಾತ್ರ. ಇನ್ನು ಕೆಂಡಸಂಪಿಗೆ ಮತ್ತಿತರ ದೊಡ್ಡದೊಡ್ಡ ಮರಗಳಲ್ಲಾಗುವ ಹೂವು ಅಥವಾ ಸಂಜೆಯ ಹೊತ್ತಿಗಷ್ಟೆ ಅರಳುವ ಪಾರಿಜಾತ, ಸಂಜೆಮಲ್ಲಿಗೆ ಇತ್ಯಾದಿ ನಮ್ಮ ಹೂವಿನಬುಟ್ಟಿ ಸೇರುತ್ತಿರಲಿಲ್ಲ. ಗೆಲ್ಲನ್ನು ಕೊಕ್ಕೆಯಕೋಲಿಂದ ಬಗ್ಗಿಸಿದಾಗ ಹೂವು ಸಿಕ್ಕರೆ ಮಾತ್ರವೇ ಹೊರತು ಹರಸಾಹಸ ಮಾಡಿ ಹೂವಿನ ದೊಡ್ಡ ರಾಶಿ ಹಾಕಬೇಕೆಂಬ ಕಡ್ಡಾಯವೇನೂ ಇರುತ್ತಿರಲಿಲ್ಲ. ಆದರೂ ‘ಮನಸ್ಸು ಬಂದರೆ’ ಅಥವಾ ರಜಾದಿನಗಳಲ್ಲಿ ಶಾಲೆಯ ತರಾತುರಿ ಇಲ್ಲದಿದ್ದಾಗ ಹೂವಿನ ಬೇಟೆಯ ಪರಿಧಿ ವಿಸ್ತೃತವಾಗುವುದಿತ್ತು. ಆಗ ಮನೆಗೆ ದೂರದಲ್ಲಿರುವ ರೆಂಜೆ ಮರದ ಹೂಗಳು, ಕೇದಗೆಯ ಪೊದೆಯಿಂದ ಬಿಡಿಸಿ ತಂದ ಕೇದಗೆ, ಕೈಗೆಟಕುವುದಕ್ಕಿಂತ ಎತ್ತರದಲ್ಲಿ ಬೆಳೆವ ಇತರೇ ಹೂಗಳೂ ಬುಟ್ಟಿ ಸೇರುತ್ತಿದ್ದುವು.

ಅಂಥ ಒಂದು ಹೂವು ಮಂದಾರ. ನಸುಹಳದಿ ಅಥವಾ ಬಿಳಿಯೇ ಅನ್ನಬಹುದಾದ ಬಣ್ಣದ, ಒಂದು ಸಾಲು ಎಸಳುಗಳ ದುಂಡಗಿನ ಹೂವು. ಅತ್ತ ಮರವೂ ಅಲ್ಲ ಇತ್ತ ಪೊದೆಯೂ ಅಲ್ಲ ಎನ್ನುವಂಥ ಗಿಡದಲ್ಲಿ ಬಿಡುವ ಹೂವು. ಬಾಲ್ಯದಲ್ಲಿ ಹೂ ಕೊಯ್ಯುತ್ತಿದ್ದ ದಿನಗಳ ನೆನಪಿನ ಸರ‘ಮಾಲೆ’ಯನ್ನಲಂಕರಿಸುವ ಒಂದು ಸುಂದರ ಹೂವು. ನಮ್ಮನೆಯ ತೋಟದಲ್ಲೂ ಮಂದಾರ ಹೂವಿನ ಮರವಿತ್ತು/ಇದೆ. ಮಂದಾರ ಪುಷ್ಪಕ್ಕೆ ಎಷ್ಟೊಂದು ಮಹತ್ವವಿದೆ ಎಂದೇನೂ ಗೊತ್ತಿರದಿದ್ದರೂ ಮಂದಾರವನ್ನು ಕೊಯ್ದು ಬುಟ್ಟಿಯಲ್ಲಿ ತುಂಬಿಸಿ ದೇವರಪೂಜೆಗೆ ತಂದದ್ದಿದೆ.

ಮೊನ್ನೆ ಒಂದು ದಿನ ಹೀಗೇ ಧ್ವನಿಸುರುಳಿಯಿಂದ ಕೇಳಿಬರುತ್ತಿದ್ದ ಶಿವಪಂಚಾಕ್ಷರಿ ಸ್ತೋತ್ರವನ್ನು (ಸುಬ್ಬುಲಕ್ಷ್ಮಿಯವರ ಕಂಠದಲ್ಲಿ) ಕೂಲಂಕಷವಾಗಿ ಆಲಿಸುತ್ತಿದ್ದಾಗ, ಶಿವನ ಪೂಜೆಗೆ ಹೂವುಗಳಲ್ಲೆಲ್ಲ ಮಂದಾರವೇ ಮುಖ್ಯ ಎಂಬ ಅಂಶ ಗಮನಕ್ಕೆ ಬಂತು. ಅಬ್ಬಾ, ನಮ್ಮನೆಯ ತೋಟದಲ್ಲಿ ಹತ್ತರೊಂದಿಗೆ ಹನ್ನೊಂದು ಆಗಿದ್ದ ಮಂದಾರ ನಿಜಕ್ಕೂ ಸಾಮಾನ್ಯದ್ದಲ್ಲವೆಂಬ ಸಂಗತಿ ಬೆಳಕಿಗೆ ಬಂತು.

ಮಂದಾಕಿನೀ ಸಲಿಲ ಚಂದನ ಚರ್ಚಿತಾಯ

ನಂದೀಶ್ವರ ಪ್ರಮಥ ನಾಥ ಮಹೇಶ್ವರಾಯ

ಮಂದಾರ ಮುಖ್ಯ ಬಹು ಪುಷ್ಪ ಸುಪೂಜಿತಾಯ

ತಸ್ಮೈ ಮ ಕಾರಾಯ ನಮಃ ಶಿವಾಯ ।।

ಶಿವಪಂಚಾಕ್ಷರಿ ಸ್ತೋತ್ರದಲ್ಲಿ ‘ಮ’ ಅಕ್ಷರದ ವಿವರಣೆಯ ಶ್ಲೋಕವದು. ಪರಮೇಶ್ವರನಷ್ಟೇ ಅಲ್ಲ, ಕಪಟನಾಟಕ ಸೂತ್ರಧಾರಿ ಕೃಷ್ಣ ಪರಮಾತ್ಮನಿಗೂ ಸುಗಂಧದ್ರವ್ಯವಾಗಿ ಮಂದಾರವೇ ಬೇಕು. ‘ಮಂದಾರಗಂಧ ಸಂಯುಕ್ತಂ ಚಾರುಹಾಸಂ ಚತುರ್ಭುಜಂ’ - ಕೃಷ್ಣಾಷ್ಟಕದಲ್ಲಿ ಬರುವ ಸಾಲು. ‘ಮಹತೀ ಮೇರುನಿಲಯಾ ಮಂದಾರ ಕುಸುಮಪ್ರಿಯಾ’ ಎಂದು ಬರುತ್ತದೆ ಲಲಿತಾಸಹಸ್ರನಾಮದಲ್ಲಿ. ಇನ್ನಿತರ ಪೂಜೆಗಳಲ್ಲೂ ಮಂದಾರ ಪುಷ್ಪ ಅಥವಾ ಮಂದಾರ ಪತ್ರದ (ಎಲೆ) ಉಲ್ಲೇಖವಿದೆ. ಅಂತೂ ದೇವಾನಾಂಪ್ರಿಯ ಅನ್ನಿಸಿಕೊಳ್ಳಬಹುದಾದದ್ದು ಮಂದಾರ ಹೂವು.

nammoora mandaara huvu...ಹೀಗೆ ದೇವಾನುದೇವತೆಗಳಿಗೆ ಪರಮಾಪ್ತವಾದ ಮಂದಾರಕ್ಕೆ ದೈವತ್ವ ಸಿದ್ಧಿಸಿದೆಯೆಂಬ ಭಾವನೆಯಿಂದಲೇ ಇರಬಹುದು ಮಾನವಜಾತಿಯಲ್ಲೂ ಪೂಜ್ಯ, ಪವಿತ್ರ ವ್ಯಕ್ತಿತ್ವಕ್ಕೆ ಮಂದಾರದ ಹೋಲಿಕೆ. ಅದಕ್ಕೇ ರಂಗನಾಯಕಿ ಕೂಡ ‘ಮಂದಾರ ಪುಷ್ಪವು ನೀನು... ಸಿಂಧೂರ ಪ್ರತಿಮೆಯು ನೀನು... ಗಂಧರ್ವಗಾನವಾಣಿ...’ ಎಂದು ಕರೆಯಲ್ಪಟ್ಟದ್ದು. ದೇವಸದೃಶವಾಗಿ ಪೂಜ್ಯಳಾದ ಗಂಗಾಮಾತೆಯನ್ನೂ ‘ವೃಂದಾರ ವಂದ್ಯೆ ಮಂದಾರ ಗಂಧೆ ನೀನೆ ತಾಯಿ ತಂದೆ...’ ಎಂದು ಬೇಂದ್ರೆಯವರು ಕರೆದದ್ದು ‘ಇಳಿದು ಬಾ ತಾಯಿ ಇಳಿದು ಬಾ...’ ಕವನದಲ್ಲಿ.

ಇಂತಿರ್ಪ ಮಂದಾರದ ಬಗ್ಗೆ ಒಂದು ಸಚಿತ್ರ ಪ್ರಬಂಧವನ್ನು ಬರೆಯಬೇಕು ಎಂದುಕೊಂಡ ನಾನು ಅದರ ಚಿತ್ರದ ಅನ್ವೇಷಣೆಯಲ್ಲಿದ್ದೆ. ಹೂ ಬಿಟ್ಟ ಮಂದಾರ ಮರದ ಚಿತ್ರವನ್ನು ಎಲ್ಲಿಂದಾದರೂ ಸಂಪಾದಿಸಬೇಕೆಂದುಕೊಂಡಿದ್ದೆ. ಆಗ ನೆನಪಾದರು ‘ನಾನೊಬ್ಬ ಗ್ರಾಮೀಣ ಪ್ರದೇಶದ ರೈತ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಹಿರಿಯ ಸ್ನೇಹಿತ ಪೆಜತ್ತಾಯ. ಹಳ್ಳಿಹೈದ ಎಂದುಕೊಂಡು ಮಲೆನಾಡಿನ ಚಿಕ್ಕಮಗಳೂರಲ್ಲೊಂದಿಷ್ಟು ದಿನ, ನವನಾಗರೀಕ ಎಂದುಕೊಂಡು ಬೆಂಗಳೂರಿನ ಪೇಟೆಯಲ್ಲೊಂದಿಷ್ಟು ದಿನ - ಹೀಗೆ ಅವರೊಬ್ಬ ಉಭಯವಾಸಿ. ಪೆಜತ್ತಾಯರು ಶುಭಾಶಯ ಪತ್ರಗಳಲ್ಲಿ ತಮ್ಮದೇ ತೋಟದ ಕಾಫಿಗಿಡದ ಹೂ, ಸೇವಂತಿಗೆ ಹೂ ಇತ್ಯಾದಿಯ ವರ್ಣಚಿತ್ರಗಳನ್ನು ಕಳಿಸುವುದು ಕ್ರಮ. ಹಾಗಾಗಿ ಅವರಲ್ಲಿ ಮಂದಾರ ಹೂವಿನ ಚಿತ್ರ ಸುಲಭವಾಗಿ ದೊರಕಬಹುದೆಂದುಕೊಂದು ಅದನ್ನು ಕಳಿಸುವಂತೆ ಕೇಳಿಕೊಂಡೆ.

ಸೌಗಂಧಿಕಾ ಪುಷ್ಪ ಬೇಕೆಂಬ ದ್ರೌಪದಿಯ ಬಯಕೆಯನ್ನೀಡೇರಿಸಲು ಭೀಮಸೇನ ಹೊರಟಂತೆ ಬೆಂಗಳೂರಿನ ಬೀದಿಗಳಲ್ಲಿ ಮಂದಾರ ಮರವನ್ನರಸುತ್ತ ಹೊರಟರಿರಬಹುದು ಪೆಜತ್ತಾಯರು. ಕೊನೆಗೂ ಅವರಿಗೆ ಸಿಕ್ಕಿದ್ದು ಕೆಂಪು/ನೇರಳೆ ಬಣ್ಣದ ಹೂವು, ಮಂದಾರದ ಹತ್ತಿರದ ಸಂಬಂಧಿ. ಬೆಂಗಳೂರಿನಲ್ಲಿ ಅದನ್ನು ಮಂದಾರ ಎನ್ನುತ್ತಾರೊ ಏನೊ, ಆದರೆ ನಮ್ಮೂರಿನಲ್ಲಿ ಅದಕ್ಕೆ ‘ಕಂಚನ’ ಎಂದು ಹೆಸರು. ಹಾಗೆ ನೋಡಿದರೆ ಕಂಚನ ಮತ್ತು ಮಂದಾರಗಳ ಸಸ್ಯಶಾಸ್ತ್ರೀಯ ಪ್ರವರ್ಗ ಒಂದೇ. ಆದ್ದರಿಂದ ಪೆಜತ್ತಾಯರು ಕಳಿಸಿದ ಚಿತ್ರವನ್ನಾಧರಿಸಿ ಅಂತರ್ಜಾಲದಲ್ಲಿ ಮತ್ತೂ ಒಂದಿಷ್ಟು ಹುಡುಕಾಡಿದಾಗ ನನಗೆ ಅಸಲೀ ಮಂದಾರದ, ನಮ್ಮೂರಿನಲ್ಲಿ ನಾವೇನು ಮಂದಾರ ಎನ್ನುತ್ತೇವೋ ಆ ಹೂವಿನ ಚಿತ್ರ ಸಿಕ್ಕಿತು; ‘ನಮ್ಮೂರ ಮಂದಾರ ಹೂವಿನ’ ನನ್ನ ಪ್ರಬಂಧಕ್ಕೆ ಪರಿಪೂರ್ಣತೆ ಬಂತು, ಮತ್ತು ಆ ಪ್ರಬಂಧ ಇವತ್ತು ನಿಮ್ಮೆದುರಿಗೆ ಪ್ರಸ್ತುತವಾಯಿತು!

ಮಂದಾರ ವೃತ್ತಾಂತದಲ್ಲೇ ಈ ಒಂದು ಸಣ್ಣ ತಲೆಹರಟೆಯನ್ನೂ ಸೇರಿಸೋಣ. ಇಲ್ಲಿ ಅಮೆರಿಕದಲ್ಲಿ ವಿವಿಧ ಸಂಸ್ಥಾನಗಳಲ್ಲಿ ಕನ್ನಡಿಗರು ಕಟ್ಟಿಕೊಂಡಿರುವ ಕನ್ನಡಸಂಘಗಳ ಪೈಕಿ ಕೆಲವಕ್ಕೆ ಹೂಗಳ ಹೆಸರನ್ನಿಟ್ಟುಕೊಂಡಿದ್ದಾರೆ. ಮಲ್ಲಿಗೆ, ಸಂಪಿಗೆ ಇತ್ಯಾದಿ. ‘ಮಂದಾರ’ ಹೆಸರಿನ ಸಂಘವೂ ಒಂದಿದೆ, ಈಶಾನ್ಯ ರಾಜ್ಯಗಳ ಕನ್ನಡಿಗರು ಸೇರಿ ಕಟ್ಟಿಕೊಂಡಿರುವುದು. ಸಂಘಗಳಿಗೆ ಹೂವಿನ ಹೆಸರಿನ ಬಗ್ಗೆಯೇ ನನಗೊಂದು ಮೋಜಿನ ಸಂಗತಿ ಹೊಳೆದಿದೆ. ಅದನ್ನು ನಿಮ್ಮೊಂದಿಗೆ ಹಂಚಲಿಕ್ಕಾಗಿ ಇಲ್ಲಿ ಬರೆಯುತ್ತೇನೆ. ಈ ಸಂಘಗಳೆಲ್ಲ (ಹೂವಿನ ಹೆಸರಿನವೂ, ಬೇರೆಯವು ಕೂಡ) ಸದಸ್ಯರ ವಾರ್ಷಿಕ ದೇಣಿಗೆ ಅಂದರೆ ‘ವಂತಿಗೆ’ಯ ಬಲದಿಂದಲೇ ತಾನೆ ಅಸ್ತಿತ್ವದಲ್ಲಿರುವುದು? ಆದ್ದರಿಂದ ಅವಕ್ಕೆಲ್ಲ ಮಲ್ಲಿಗೆ, ಗುಲಾಬಿ, ಮಂದಾರ, ಕರವೀರ ಎನ್ನುವ ಹೆಸರಿಗಿಂತ ಸೇ‘ವಂತಿಗೆ’ ಅಥವಾ ಇರು‘ವಂತಿಗೆ’ ಎಂಬ ಹೆಸರಿಟ್ಟರೆ ಒಳ್ಳೆಯದಲ್ಲವೇ? ಹೂವಿನ ಹೆಸರಾದಂತೆಯೂ ಆಯ್ತು, ಅನ್ವರ್ಥನಾಮವೂ ಆಯ್ತು. ಏನಂತೀರಿ? ತಾಯಿ ಭುವನೇಶ್ವರಿಯೇನಾದರೂ ಮುನಿಸಿಕೊಳ್ಳುವಳೇ?

* * *

nammoora mandaara huvu...ಈವಾರ ಪ್ರಶ್ನೆ ಇದೆ, ಉತ್ತರಿಸಿದವರಿಗೆ ಬಹುಮಾನವೂ ಇದೆ! ಪ್ರಶ್ನೆ ಬಹಳ ಸುಲಭ. ನಿಮ್ಮ ಮೆಚ್ಚಿನ ಹೂವು ಯಾವುದೆಂದು ಬರೆದು ತಿಳಿಸಿದರಾಯಿತು! ‘ವಿಚಿತ್ರಾನ್ನ ಓದುಗರ ಮೆಚ್ಚಿನ ಹೂವು’ ಪ್ರಶಸ್ತಿಯ ಆಯ್ಕೆ ಸಂಪೂರ್ಣವಾಗಿ ನಿಮ್ಮ ಪತ್ರಗಳ ಆಧಾರದಿಂದ. ದಯವಿಟ್ಟು ಈ ಸಂಚಿಕೆಯನ್ನು ಓದಿದ ಪ್ರತಿಯಾಬ್ಬರೂ ನಿಮ್ಮ ಮೆಚ್ಚಿನ ಹೂವು ಯಾವುದೆಂದು ತಿಳಿಸಿ. ಪ್ರಶಸ್ತಿ ಹೂವಿಗೆ ಮಾತ್ರವೇ? ಖಂಡಿತವಾಗಿಯೂ ಅಲ್ಲ. ಯಾವ ಹೂವು ಪ್ರಥಮಸ್ಥಾನವನ್ನು ಪಡೆಯುತ್ತದೋ ಆ ಹೂವು ಇಷ್ಟವಿದ್ದವರಿಗೆಲ್ಲ ಒಂದು ಆಕರ್ಷಕ ಬಹುಮಾನವಿದೆ. ಎಲ್ಲರೂ ಗುಲಾಬಿ, ಮಲ್ಲಿಗೆ ಇತ್ಯಾದಿಯ ಕಡೆಗೇ ವಾಲಿದರೆ? ಸ್ಪರ್ಧೆಗೆ ಸಮತೋಲನ ಇರಬೇಕಲ್ಲ? ಅದಕ್ಕಾಗಿ ಏನು ಮಾಡಲಾಗಿದೆಯೆಂದರೆ ಬರೀ ಒಂದು ಮತವನ್ನಷ್ಟೇ ಗಳಿಸುವ ಹೂವಿನ ಪ್ರವೇಶಪತ್ರಗಳಿಗೂ ವಿಶೇಷ ಬಹುಮಾನವಿದೆ! ಆದ್ದರಿಂದ ಅತ್ಯಧಿಕ ಮತ ಗಳಿಸುವ ಹೂವಿಗೂ ಬಹುಮಾನ. ಒಂದೇಒಂದು ಮತ ಗಳಿಸುವ ಹೂವಿಗೂ(ಗಳಿಗೂ) ಬಹುಮಾನ. ಸ್ವಾರಸ್ಯಕರವಾಗಿದೆಯಲ್ಲವೇ?

ಯಾವ ಹೂವು ಯಾರ ಮುಡಿಗೋ... ಯಾವ ಬಹುಮಾನ ಯಾರ ಉಡಿಗೋ... ಗುಲಾಬಿ, ಮಲ್ಲಿಗೆ, ಸಂಪಿಗೆ, ಪಾರಿಜಾತ, ಕನಕಾಂಬರ... ಹೀಗೆ ಅಸಂಖ್ಯಾತ ಹೂವುಗಳ ಪೈಕಿ ಯಾವ ಹೂವು ‘ಚೆಲುವೆಲ್ಲ ನಂದೆಂದಿತು...’ ಎಂದು ಬೀಗುತ್ತದೋ, ಯಾವ ಹೂವು ಬಳಿ ಬಂದು ನಿಮ್ಮೆದೆಯನ್ನು ತಾಕುತ್ತದೋ ನೋಡೋಣ.

ಇನ್ನೊಮ್ಮೆ ಗಮನಿಸಿ. ಒಂದು ವಿಳಾಸದಿಂದ ಹೊರಡುವ ಒಂದು ಪತ್ರದಲ್ಲಿ ಒಂದು ಹೂವಿನ ಹೆಸರು ಮಾತ್ರ. ನಿಮ್ಮ ಪತ್ರದಲ್ಲಿ ಹೂವಿನ ಹೆಸರಷ್ಟೇ ಕಡ್ಡಾಯ. ಆ ಹೂವು ನಿಮಗೇಕೆ ಅಷ್ಟು ಇಷ್ಟ, ಆ ಹೂವ ನೆನೆದೊಡೆ ಬರುವ ನೆನಪುಗಳು, ಹೂವಿನ ಮೇಲೆ ಹೂವಿನಂಥ ಕವಿತೆ - ಇವೆಲ್ಲ ಐಚ್ಛಿಕ ವಿಷಯಗಳು. ಪತ್ರದಲ್ಲಿ ಸೇರಿಸಿದರೆ ಸ್ವಾಗತವಿದೆ, ಸೇರಿಸದಿದ್ದರೆ ಯಾಕಿಲ್ಲ ಎಂಬ ಮಾತಿಲ್ಲ. ಈ ಸ್ಪರ್ಧೆ ಇವತ್ತಿನಿಂದ ಎರಡು ವಾರಗಳವರೆಗೆ ಮಾತ್ರ ತೆರೆದಿರುತ್ತದೆ. ಬರೆಯುತ್ತೀರಲ್ಲ? ವಿಳಾಸ - srivathsajoshi@yahoo.com

ಕೊನೆಯಲ್ಲಿ ಇವತ್ತಿನ ಇನ್ನೊಂದು ಸ್ವಾರಸ್ಯವನ್ನೂ ನಿಮಗೆ ತಿಳಿಸಿಯೇ ಬಿಡುತ್ತೇನೆ. ಕಹಿಸತ್ಯದ ವಿಷಯವೆಂದರೆ ನಮ್ಮಲ್ಲಿ ಹೆಚ್ಚಿನವರೆಲ್ಲ ನವೆಂಬರ್‌ ಕನ್ನಡಿಗರು. ಈ ತಿಂಗಳಲ್ಲಿ ಮಾತ್ರ ನಮ್ಮ ಕನ್ನಡಾಭಿಮಾನ ಪರಾಕಾಷ್ಠೆಯನ್ನು ತಲುಪುವುದು. ಇವತ್ತಿಗೆ ಈ ತಿಂಗಳು ಮುಗಿಯುತ್ತದೆ. ನವೆಂಬರ್‌ ಕನ್ನಡಿಗರೆಂದು ಸಾರಿಹೇಳಲು ಇದು ಕೊನೆಯ ಅವಕಾಶ. ಅದಕ್ಕಾಗಿ ನಾನೂ ಇವತ್ತಿನ ಸಂಚಿಕೆಯಲ್ಲಿ ಒಂದೇ ಒಂದು ಆಂಗ್ಲ ಪದಪ್ರಯೋಗ ಮಾಡಿಲ್ಲ. ಪದವಿನೋದದ ನೆಪದಿಂದ ಕನ್ನಡದಲ್ಲಿ ಕಲಬೆರಕೆ ಮಾಡಿಲ್ಲ. ಇದು ನಿಮ್ಮ ಗಮನಕ್ಕೆ ಬಂತೋ ಇಲ್ಲವೋ ಎಂಬುದು ಮಾತ್ರ ನನಗೆ ಗೊತ್ತಿಲ್ಲ!

* * *

ನಿಮಗೆ ಜ್ಞಾಪಿಸುವುದಕ್ಕೋಸ್ಕರ: ಗಣಪನಿಗೂ ಮಂದಾರ ಹೂವು ಇಷ್ಟ. ‘ಏಕದಂತಾಯ ನಮಃ । ಮಂದಾರ ಪುಷ್ಪಂ ಸಮರ್ಪಯಾಮಿ ।।’ - ಇವತ್ತಿನ ‘ಅಂಗಾರಕಿ’ ಉಪವಾಸದಿಂದ ನೀಗಲಿ ನಮ್ಮೆಲ್ಲರ ಸಂಕಷ್ಟ !

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more