• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಕೋಟಾ ರಾಜ್ಯದಲ್ಲಿ ಧನುರ್ಮಾಸ ಪೂಜೆ!

By Staff
|
Srivathsa Joshi *ಶ್ರೀವತ್ಸ ಜೋಶಿ

ಸೌತ್‌ ಡಕೋಟಾ. ಅಮೆರಿಕದ ಮಧ್ಯ-ಪಶ್ಚಿಮ ಭಾಗದಲ್ಲಿ ಆಯತಾಕಾರದ ಒಂದು ರಾಜ್ಯ. ಅತಿ ಕಡಿಮೆ ಜನವಸತಿ. ಎಷ್ಟು ಕಡಿಮೆಯೆಂದರೆ ಐವತ್ತು ರಾಜ್ಯಗಳ ಪೈಕಿ ಜನಸಂಖ್ಯೆಯಲ್ಲಿ 46ನೇ ರ್ಯಾಂಕ್‌. ನಾಲ್ಕು ಪ್ರಸಿದ್ಧ ಅಧ್ಯಕ್ಷರ ಮೂತಿಗಳನ್ನು ಬೆಟ್ಟದಲ್ಲೇ ಕೊರೆದ ‘ಮೌಂಟ್‌ ರಷ್‌ಮೊರ್‌’ ಪ್ರವಾಸಿತಾಣ ಬಿಟ್ಟರೆ ಬೇರೆ ಆಕರ್ಷಣೆಯೇನೂ ಅಲ್ಲಿಲ್ಲ. ಇಡೀ ರಾಜ್ಯಕ್ಕೆ ಒಂದೇ ಟೆಲಿಫೋನ್‌ ಏರಿಯಾಕೋಡ್‌ ಇರುವ ಅಲ್ಲಿ ಜನಸಂಖ್ಯೆಯೇ ಕಡಿಮೆಯೆಂದ ಮೇಲೆ ಭಾರತೀಯರ ಸಂಖ್ಯೆಯೂ ಕಡಿಮೆಯೇ. ಕನ್ನಡಿಗ ಕುಟುಂಬಗಳಂತೂ ಬೆರಳೆಣಿಕೆಯಷ್ಟು ಇವೆಯೋ ಏನೊ. ಅದರಲ್ಲೂ ಅದುವೆಕನ್ನಡದ ಇದುವೆಅಂಕಣವನ್ನು ಓದುವವರು? ಓದಿ ಪತ್ರಬರೆಯುವವರು...? ಸಂಭವನೀಯತೆ 0.0000001ರಷ್ಟು ಎನ್ನಲಿಕ್ಕಡ್ಡಿಯಿಲ್ಲ.

ಈ ಪರಿಯ ಸೌತ್‌ಡಕೋಟಾದಿಂದ ಮೊನ್ನೆ ನನಗೊಂದು ಈಮೇಲ್‌ ಬಂದಿತ್ತು! ಸ್ಮಿತಾ ಮೊಟೆರ್‌ ಅನ್ನುವ ಕನ್ನಡತಿ ಬರೆದದ್ದು. ವಿಷಯ ಏನು? ಅವರ ಈಮೈಲ್‌ನಲ್ಲಿದ್ದ ವಾಕ್ಯಗಳನ್ನೇ ರಿಪ್ರೊಡ್ಯೂಸಿಸಬೇಕಿದ್ದರೆ, ‘ಜೋಶಿಯವರೇ, ಈಗ ಧನುರ್ಮಾಸ ನಡೆಯುತ್ತಿದೆಯಲ್ಲ? ತಿಂಗಳಿಡೀ ಪ್ರತಿದಿನ ಬ್ರಾಹ್ಮೀಮುಹೂರ್ತದಲ್ಲಿ ಪೂಜೆನಡೆಸಿ ಪ್ರಸಾದ ಸ್ವೀಕರಿಸಬೇಕಲ್ಲವೇ? ನನ್ನ ಸಂದೇಹವೆಂದರೆ ಬ್ರಾಹ್ಮೀಮುಹೂರ್ತ ಯಾವುದು? ಭಾರತೀಯ ಕಾಲಮಾನದ್ದೇ ಅಥವಾ ಇಲ್ಲಿನದೇ? ನಿಮ್ಮ ಅಭಿಪ್ರಾಯವೇನು?’ - ಇದು ಡಕೋಟಾದಿಂದ ನನಗೆ ಬಂದ ಪತ್ರದ ಸಾರ. ಈ-ಅಡಿಗೆಭಟ್ಟ ಪಂಚಾಂಗ ನೋಡಿ ಮುಹೂರ್ತ ಹೇಳುವ ಜೋಯಿಸ ಕೂಡ ಆಗಿರಬಹುದು ಎಂದು ಸ್ಮಿತಾ ಅವರಿಗೆ ಅದೇಕೆ ಅನಿಸಿತೊ. ಧರ್ಮಸಿಂಧು, ನಿರ್ಣಯಸಿಂಧು ಮೊದಲಾದ ಗ್ರಂಥಗಳ ಹೆಸರನ್ನೇನೊ ಕೇಳಿ ಗೊತ್ತೇ ವಿನಃ ಜ್ಯೋತಿಷ್ಯ, ದೃಗ್ಗಣಿತ ಜ್ಞಾನ ನನಗೆಲ್ಲಿಂದ? ಪರತತ್ವವನು ಬಲ್ಲ ಪಂಡಿತನು ನಾನಲ್ಲ... ವಿಚಿತ್ರಾನ್ನ ಕುಕ್ಕಿಸುವುದು ಬಿಟ್ಟು ನನಗೇನೂ ತಿಳಿದಿಲ್ಲ... :-)ಆದರೂ ಸ್ಮಿತಾ ಅವರಿಗೆ ಸಮಾಧಾನದ ಉತ್ತರವೊಂದನ್ನು ಬರೆದೆ - ‘ನನಗೆ ಗೊತ್ತಿರುವಂತೆ ರಾಹುಕಾಲ, ಗುಳಿಕಕಾಲ, ಬ್ರಾಹ್ಮೀಮುಹೂರ್ತ, ಅಭಿಜಿತ್‌ ಮುಹೂರ್ತ ಇತ್ಯಾದಿ ವಿಶೇಷ ಗಳಿಗೆಗಳೆಲ್ಲ ಸ್ಥಳೀಯ ಕಾಲಮಾನದ ಪ್ರಕಾರ, ಅಂದರೆ ಪ್ರಕೃತ ನಾವಿರುವ ಜಾಗದಲ್ಲಿ ಯಾವಾಗ ಸೂರ್ಯೋದಯ (ಅಥವಾ ಚಂದ್ರೋದಯ)ವಾಗುತ್ತದೊ ಆ ಪ್ರಕಾರ ಲೆಕ್ಕಹಾಕಬೇಕಾದುವು. ಆದ್ದರಿಂದ ನಿಮ್ಮ ಡಕೋಟಾ ರಾಜ್ಯದಲ್ಲಿ ಸೂರ್ಯೋದಯವಾಗುವ ಮೊದಲು 90 ನಿಮಿಷಗಳ ಅವಧಿಯೇ ನಿಮಗೆ ಬ್ರಾಹ್ಮೀ ಮುಹೂರ್ತ. ಆಗಲೇ ಧನುರ್ಮಾಸ ಪೂಜೆ ವಿಧಿವಿಧಾನಗಳನ್ನು ಮಾಡುವುದು ಸಮಂಜಸ’ ಎಂದು.

ನನ್ನ ಉತ್ತರ ಖುಶಿಕೊಟ್ಟಿರಬೇಕು ಅವರಿಗೆ. ಅದಕ್ಕಿಂತ ದೊಡ್ಡ ಖುಶಿ ನನಗೆ, ‘ಡಕೋಟಾ ರಾಜ್ಯದಲ್ಲಿ ಧನುರ್ಮಾಸ ಪೂಜೆ!’ ಎಂಬ ಶೀರ್ಷಿಕೆ ಕ್ಷಣಾರ್ಧದಲ್ಲಿ ಫ್ಲಾಷ್‌ ಆಯ್ತು. ಧನುರ್ಮಾಸ ಪೂಜೆ ನಾನೇನೂ ಕೇಳಿರದ ವಿಷಯವಲ್ಲ, ಮರೆತುಹೋಗಿತ್ತು ಅಷ್ಟೆ. ಸ್ಮಿತಾ ಅವರ ಪತ್ರದಿಂದ ನೆನಪಾಯ್ತು. ಮತ್ತೆ ಅದಕ್ಕೆ ಧನುರ್ಮಾಸ ಪೂಜೆಯ ಪ್ರಸಾದವಾದ ‘ಕಿಚಡಿ’ಯಂತೆ ಒಂದಿಷ್ಟು ಕಿಚಡಿಸಿದರೆ.... ಇಗೋ ತಯಾರ್‌ ಈ ವಾರದ ವಿಚಿತ್ರಾನ್ನ!

* * *

ಮಕರ ಸಂಕ್ರಾಂತಿಗೆ ಮೊದಲು ಒಂದು ತಿಂಗಳ ಅವಧಿ, ಸೂರ್ಯನು ಧನು ರಾಶಿಯಲ್ಲಿರುವ ಅವಧಿಯೇ ಧನುರ್ಮಾಸ. ಸಂಕ್ರಾಂತಿಯಿಂದ ಸಂಕ್ರಾಂತಿಗೆ - ಹಾಗಾಗಿ ಅದು ಸೌರಮಾನ ಮಾಸ ಅಥವಾ ಸೂರ್ಯಮಾಸ. ಧನುಸಂಕ್ರಮಣದಿಂದ ಮಕರಸಂಕ್ರಮಣದವರೆಗೆ ಅಂದರೆ ಸರಿಸುಮಾರು ಡಿಸೆಂಬರ್‌ 15 ಅಥವಾ 16ರಿಂದ ಜನವರಿ 14 ಅಥವಾ 15ರವರೆಗೆ ಧನುರ್ಮಾಸ. ಈವರ್ಷ ಡಿಸೆಂಬರ್‌ 16ಕ್ಕೆ ಆರಂಭವಾಗಿದೆ. ಸೌರಮಾನ ಧನುರ್ಮಾಸದ ವೇಳೆ ಚಾಂದ್ರಮಾನ ರೀತ್ಯಾ ಬಹುತೇಕವಾಗಿ ಮಾರ್ಗಶಿರ ಮಾಸ ಇರುತ್ತದೆ (ಅವೆರಡರ ಕೆಲವು ದಿನಗಳು ಮಾತ್ರ ಓವರ್‌ಲ್ಯಾಪ್‌ ಆಗೋದು).

ಮಾರ್ಗಶಿರ ಮಾಸಕ್ಕೂ ಬಹಳ ಮಹತ್ವ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ಹೇಳಿದ್ದಾನೆ- ‘ಮಾಸಾನಾಮ್‌ ಮಾರ್ಗಶೀರ್ಷೋಹಂ’ (ಗೀತೆಯ 10ನೇ ಅಧ್ಯಾಯ 35ನೇ ಶ್ಲೋಕ). ಅಷ್ಟೇಕೆ ಭಗವದ್ಗೀತೆ ಹುಟ್ಟಿದ್ದೇ (ಗೀತಾಜಯಂತಿ) ಮಾರ್ಗಶಿರ ಮಾಸದ ಶುಕ್ಲಪಕ್ಷದ ಏಕಾದಶಿಯಂದು! ಧನುರ್ಮಾಸ-ಮಾರ್ಗಶಿರ ಕಾಂಬಿನೇಷನ್‌ ಆದರಂತೂ ಅದ್ಭುತವಾದ ದೈವಿಕತೆ. ಉತ್ತರಾಯಣ ಪರ್ವಕಾಲ ಆರಂಭವಾಗುವುದೂ (ಡಿಸೆಂಬರ್‌ 22) ಆವಾಗಲೇ. ದೇವಸ್ಥಾನಗಳಲ್ಲಿ ವರ್ಷಾವಧಿ ಜಾತ್ರೆ-ಉತ್ಸವ-ರಥೋತ್ಸವಗಳೆಲ್ಲ ಬಹುತೇಕವಾಗಿ ಆ ಟೈಮಲ್ಲೇ ನಡೆಯುವುದಲ್ಲವೇ? ಪ್ರಾತಃಕಾಲದಲ್ಲಿ ನಗರಸಂಕೀರ್ತನಗಳು ನಡೆಯುವುದೂ ಈ ಸೀಸನ್‌ನಲ್ಲೇ. ಭಾರತದ ಭೂಪ್ರದೇಶವನ್ನಷ್ಟೇ ಪರಿಗಣಿಸಿನೋಡಿದರೂ ಡಿಸೆಂಬರ್‌-ಜನವರಿ ಅವಧಿಯಲ್ಲಿ ನಳನಳಿಸುವ ಪ್ರಕೃತಿ; ಇನ್ನೂ ತುಂಬಿಹರಿಯುವ ನದಿ-ತೊರೆಗಳು; ಫಸಲಿನ ಕೊಯ್ಲು, ಇನ್ನೇನು ಸಂಕ್ರಾಂತಿಹಬ್ಬದ ಸಡಗರವೂ ಅದಾಗಲೇ ವಾತಾವರಣದಲ್ಲಿ ತುಂಬಿರುತ್ತದೆ.

ಚುಮುಗುಟ್ಟುವ ಚಳಿಗಾಲದ ಒಂದು ತಿಂಗಳಿಡೀ ಬ್ರಾಹ್ಮೀಮುಹೂರ್ತದಲ್ಲೆದ್ದು ಸ್ನಾನಾದಿ ಮುಗಿಸಿ ಪೂಜೆಪುನಸ್ಕಾರ ಮಾಡಿ ಪ್ರಸಾದ ಸ್ವೀಕರಿಸುವ ‘ಧನುರ್ಮಾಸ ವ್ರತಾಚರಣೆ’ಯನ್ನು ಪೂರ್ವಿಕರು ಚಾಲ್ತಿಯಿಟ್ಟದ್ದಕ್ಕೆ ಬಲವಾದ ಕಾರಣಗಳಿರಬೇಕು. ವೈಷ್ಣವ ಪಂಗಡದವರಿಗಂತೂ ಧನುರ್ಮಾಸ ಪೂಜೆ ಪರಮಪವಿತ್ರವಾದುದು. ತಿರುಪತಿಯೂ ಸೇರಿದಂತೆ ಶ್ರೀಹರಿಯ, ಶ್ರೀಲಕ್ಷ್ಮಿಯ ದೇವಸ್ಥಾನಗಳಲ್ಲೆಲ್ಲ ತಿಂಗಳಿಡೀ ಬೆಳ್ಳಂಬೆಳಿಗ್ಗೆ ಪೂಜೆ ನಡೆಯುತ್ತದೆ. ಇಲ್ಲಿ ಇನ್ನೊಂದು ಸ್ವಾರಸ್ಯವನ್ನು ಗಮನಿಸಬೇಕು. ವರ್ಷದ ಹನ್ನೊಂದು ತಿಂಗಳಲ್ಲೂ ಪ್ರತಿಮುಂಜಾನೆಯೂ ‘ಕೌಸಲ್ಯಾ ಸುಪ್ರಜಾರಾಮ...’ ಸುಪ್ರಭಾತದೊಂದಿಗೆ ತಿರುಪತಿ ತಿಮ್ಮಪ್ಪನಿಗೆ ‘ವೇಕ್‌ಅಪ್‌ ಕಾಲ್‌’ ಕೊಡುವುದಾದರೆ ಧನುರ್ಮಾಸದ 30 ದಿನಗಳಲ್ಲಿ ಸುಪ್ರಭಾತ ಸೇವೆಯಿಲ್ಲ. ಬದಲಿಗೆ ಆಗ ‘ತಿರುಪ್ಪಾವೈ’ ಎಂಬ ತಮಿಳು (ಆಂಡಾಳ್‌ ಗೋದಾದೇವಿ ವಿರಚಿತ) ಸ್ತೋತ್ರ ಮಂತ್ರಗಳ ಪಠಣ ನಡೆಯುತ್ತದೆ ವೈದಿಕಗಣದಿಂದ. ಇಲ್ಲಿ ಅಮೆರಿಕದ ದೇವಸ್ಥಾನಗಳಲ್ಲೂ ಧನುರ್ಮಾಸ ನಿಮಿತ್ತ ವಿಶೇಷ ಪೂಜೆಗಳು ನಡೆಯುತ್ತವೆ. ಅ ಬಗ್ಗೆ ಪ್ರಕಟಣೆಗಳು ದೇವಸ್ಥಾನಗಳ ವೆಬ್‌ಸೈಟ್‌ಗಳಲ್ಲಿ ಇರುತ್ತವೆ.

ನಾವು ಶ್ರೀವೈಷ್ಣವರಲ್ಲ, ಆದರೂ ನಮ್ಮೂರಲ್ಲಿ ನಮ್ಮನೆಯಲ್ಲೂ ತಿಂಗಳಿಡೀ ಅಲ್ಲದಿದ್ದರೂ ಮೂರು-ನಾಲ್ಕು ದಿನಗಳಲ್ಲಾದರೂ ‘ಧನುಪೂಜೆ’ ಮಾಡುತ್ತಿದ್ದ ನೆನಪಿದೆ. ಚಕ್ಕರಪೊಂಗಲ್‌ಗೆ ಹೋಲುವ ಕಿಚಡಿ (ಅಕ್ಕಿ+ಹೆಸರುಬೇಳೆ+ಬೆಲ್ಲ+ತೆಂಗಿನಕಾಯಿ) ಧನುಪೂಜೆಯ ನೈವೇದ್ಯಕ್ಕೆ ಪ್ರಧಾನ ಐಟಂ. ಕಿಚಡಿ ಮತ್ತು ಅನ್ನಕ್ಕೆ ಹಾಕಿ ಕಲಸಲು ಹುಣಿಸೆಹಣ್ಣಿನ ಗೊಜ್ಜು ಸಹ ಮಾಡುತ್ತಾರೆ. ಸಂಪ್ರದಾಯವಾದಿ ತಮಿಳ್‌ ಐಯಂಗಾರರಲ್ಲಾದರೆ ‘ಮಾರ್ಗಳಿ’ (ಮಾರ್ಗಶಿರ/ಧನುರ್ಮಾಸಕ್ಕೆ ತಮಿಳು ಹೆಸರು) ಮಾಸದ ಯಾವದಿನಗಳಲ್ಲಿ ಯಾವ ನೈವೇದ್ಯವಿರಬೇಕು ಎಂಬ ಪದ್ಧತಿಯಿದೆ. ಅದರಂತೆ ಪೊಂಗಲ್‌, ಪುಳಿಯಾದರೈ, ಮೆದುವಡಾ, ದಧ್ಯೊದನಂ (ಮೊಸರನ್ನ) ಗಳೆಲ್ಲ ಆವರ್ತವಾಗುತ್ತವೆ. ಅಂತೂ ಧನುರ್ಮಾಸ-ಧನುಪೂಜೆ ಧಾರ್ಮಿಕವಾಗಿ ಸಾಂಪ್ರದಾಯಿಕವಾಗಿ ತುಂಬ ವಿಶಿಷ್ಟವಾದುದು, ಪ್ರಮುಖವಾದುದು.

* * *

ಈಗ ಮತ್ತೆ ಸೌತ್‌ ಡಕೋಟಾ ರಾಜ್ಯದ ಕನ್ನಡತಿಯ ಸಮಾಚಾರಕ್ಕೆ ಬಂದರೆ, ಅವರ ಕಿರುಪರಿಚಯ ಮಾಡಿಕೊಂಡರೆ, ಧನುರ್ಮಾಸ ಪೂಜೆಯಲ್ಲವರ ಆಸಕ್ತಿಯ ಹಿನ್ನೆಲೆ ಕಂಡುಕೊಂಡರೆ ನಿಜಕ್ಕೂ ಸಂತೋಷಾಶ್ಚರ್ಯಗಳು ಒಟ್ಟಿಗೇ ಆಗುತ್ತವೆ. ಮೂಲತಃ ಕರ್ನಾಟಕದ ಹೊಸಪೇಟೆ ಸಮೀಪದ ಊರೊಂದರಲ್ಲಿ ಹುಟ್ಟಿಬೆಳೆದ ಸ್ಮಿತಾ ಇಲ್ಲಿ ಸೌತ್‌ಡಕೋಟಾ ವಿಶ್ವವಿದ್ಯಾಲಯದಲ್ಲಿ ಈಗ ಪಶುವೈದ್ಯ ವಿಜ್ಞಾನದಲ್ಲಿ ಪಿ.ಎಚ್‌.ಡಿ ಅಧ್ಯಯನ ನಡೆಸುತ್ತಿದ್ದಾರೆ. ಅವರ ಗಂಡ ಅಮೆರಿಕನ್‌. ಹೆಸರು ಕೆವಿನ್‌ ಮೊಟೆರ್‌. ಸ್ಮಿತಾ ಅಭ್ಯಸಿಸುವ ವಿಶ್ವವಿದ್ಯಾಲಯದ ಗಣಕಕೇಂದ್ರದ ನಿರ್ವಾಹಕ. ಪಕ್ಕಾ ಅಮೆರಿಕನ್ನಾಗಿಯೂ ಕೆವಿನ್‌ ತನ್ನ ಭಾರತೀಯ ಸತೀಮಣಿಯ ಯಾವುದೇ ಧಾರ್ಮಿಕ ಚಿಂತನೆಗಳಲ್ಲಿ, ಚಟುವಟಿಕೆಗಳಲ್ಲಿ ಅಡ್ಡಬರುವುದಿಲ್ಲವಂತೆ. ಅಷ್ಟೇ ಅಲ್ಲ , ವಿದ್ಯಾಭೂಷಣರು ಹಾಡಿದ, ಡಾ।ರಾಜ್‌ ಹಾಡಿದ ಕನ್ನಡ ಭಕ್ತಿಗೀತೆಗಳನ್ನು ಆಸ್ಥೆಯಿಂದ ಆಲಿಸುತ್ತಾರಂತೆ! ಸ್ಮಿತಾ ಆರಾಧಿಸುವ ‘ಮಂತ್ರಾಲಯದ ರಾಯರು’ ಒಬ್ಬ harmless person, just like Jesus ಎಂಬುದು ಕೆವಿನ್‌ ಉವಾಚವಂತೆ. ಸ್ಮಿತಾ ಮೇಲಿನ ಪ್ರೇಮವೋ, ಹಿಂದು ಧರ್ಮದ ಸೆಳೆತವೋ ಅಂತೂ ಕೆವಿನ್‌ ತನ್ನ ಕಂಪ್ಯೂಟರ್‌ ಮೂಲಕ ರಾಯರ ಬೃಂದಾವನದ ಚಿತ್ರಗಳನ್ನು ಪ್ರಿಂಟಿಸಿ ಫ್ರೇಮ್‌ ಮಾಡಿ ಕೊಡುವಷ್ಟೂ ಒಳ್ಳೆಯ ಮನಸ್ಸಿನವರಂತೆ.

ಕನ್ನಡತಿಯನ್ನು ಮದುವೆಯಾದ ಕೆವಿನ್‌ ಒಂದಿಷ್ಟು ಕನ್ನಡ ಭಾಷೆಯನ್ನೂ ಕಲಿತಿದ್ದಾರೆ. ಅವರನ್ನು ಛೇಡಿಸಲಿಕ್ಕೆಂದೇ ಊಟ ಬಡಿಸುವಾಗ ಸ್ಮಿತಾ ‘ನಾಯಿಮರಿ ನಾಯಿಮರಿ ತಿಂಡಿಬೇಕೆ?’ ಅಂದರೆ ಕೆವಿನ್‌ ‘ಬೆಕ್ಕಿನ ಮರಿ ಬೆಕ್ಕಿನ ಮರಿ ಊಟ ಬಡಿಸು’ ಎನ್ನುವಷ್ಟು ಪಳಗಿದ್ದಾರೆ. ಅಥವಾ, ಪದದಿಂದ ಪದಕ್ಕೆ ಭಾಷಾಂತರಿಸಿ ‘ನಾನು ಪ್ರೀತಿ ನೀನು...’ ಎನ್ನುವಷ್ಟು! ಹಿಂದು ಸತ್ಸಂಪ್ರದಾಯಗಳೆಂದರೆ ಜೀವಾನಿಲವೆಂದು ನಂಬಿರುವ ಸ್ಮಿತಾ ಈಗ ಅಮೆರಿಕನ್‌ ಪತಿ ಕೆವಿನ್‌ಗೆ, ಮಗ ಆದಿತ್ಯನಿಗೆ ಭಾರತೀಯ ಸಂಸ್ಕೃತಿ, ಕನ್ನಡ ನಡೆನುಡಿಗಳನ್ನು ಎರಕಹೊಯ್ಯುವ ಕಾಳಜಿ ತೆಗೆದುಕೊಂಡಿದ್ದಾರೆ. ಜೀವನದಲ್ಲಿ ಶಿಸ್ತನ್ನು ರೂಪಿಸಲು ನಮ್ಮೆಲ್ಲ ಆಚರಣೆಗಳು ವಿಧಿವಿಧಾನಗಳು ಮತ್ತು ಅವುಗಳ ಹಿಂದಿನ ಮೌಲ್ಯಗಳು ಬಹಳ ಸಹಕಾರಿಯಾಗುತ್ತವೆ ಎಂಬ ದೃಢನಂಬಿಕೆ ಅವರದು.

ಬ್ರಾಹ್ಮೀಮುಹೂರ್ತದಲ್ಲೆದ್ದು ಧನುರ್ಮಾಸ ಪೂಜೆ ಮಾಡುವ ಸೌತ್‌ಡಕೋಟದ ಭಾರತೀಯ ನಾರಿಮಣಿ, ಸೌತ್‌ ಡಕೋಟದಲ್ಲಿ ಡಿಸೆಂಬರ್‌ 16ರಿಂದ ಜನವರಿ 15ರವರೆಗಿನ ಪ್ರತಿದಿನದ ಸೂರ್ಯೋದಯ ವೇಳೆ ಮತ್ತು ಅದರಿಂದ 90 ನಿಮಿಷ ಹಿಂದಿನ ವೇಳೆಯ ಚಾರ್ಟ್‌ಅನ್ನು ನೀಟಾಗಿ ಕಂಪ್ಯೂಟರ್‌ ಪ್ರಿಂಟ್‌ಔಟ್‌ ತೆಗೆದುಕೊಡುವ ಆಕೆಯ ಅಮೆರಿಕನ್‌ ಪತಿಮಹಾಶಯ, ‘Mom, why are you worshipping all those silly gods?’ ಎಂದು ಪ್ರಶ್ನಿಸುವ ಹದಿಹರೆಯದ ಪೋರ - ಈ ಸಂಸಾರದ ಚಿತ್ರಣಕ್ಕೂ ಧನುರ್ಮಾಸದ ಕಿಚಡಿಗೂ ಏಕ್‌ದಂ ಹೋಲಿಕೆಯಿದೆಯಲ್ಲವೇ?

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more