• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಖ್ಯೆ ಮತ್ತು ಸಂಕೇತವಾಗಿ ‘24’

By Staff
|
Srivathsa Joshi *ಶ್ರೀವತ್ಸ ಜೋಶಿ
‘24’ - ಈ ಸಂಖ್ಯೆಯನ್ನು ನೋಡಿದೊಡನೆ/ಕೇಳಿದೊಡನೆ ಎಲ್ಲರಿಗೂ ಆಟೊಮೆಟಿಕಾಗಿ ಹೊಳೆಯುವ ವಿಚಾರವೆಂದರೆ ದಿನದ 24 ಗಂಟೆಗಳು. ಅದೂ ಈಗಿನ ಆಧುನಿಕ ಯುಗದ ‘24/7 ಗ್ರಾಹಕ ಸೇವೆ’, ‘24 ಗಂಟೆ ಎಟಿಎಂ ಬ್ಯಾಂಕಿಂಗ್‌ ಸೌಲಭ್ಯ’ ಇತ್ಯಾದಿಯೆಲ್ಲ ನಮ್ಮ ಜೀವನದಲ್ಲಿ (ಕೊನೆಪಕ್ಷ ಪಟ್ಟಣಪ್ರದೇಶಗಳಲ್ಲಾದರೂ) ಹಾಸುಹೊಕ್ಕಾಗುತ್ತಿರುವುದರಿಂದ 24 ಎಂಬ ಸಂಖ್ಯೆಗೆ ಅನವರತ, ಹಗಲಿರುಳೂ, ರೌಂಡ್‌ ದ ಕ್ಲಾಕ್‌... ಎಂಬ ಭಾವನೆಮೂಡಿಸುವ ಶಕ್ತಿಯಿರುವುದು ಆಶ್ಚರ್ಯದ ಮಾತಲ್ಲ.

ಆದರೆ 24ರ ವೈಶಿಷ್ಟ್ಯ ಅಷ್ಟೇ ಅಲ್ಲ , ವಿವಿಧ ವಿಷಯಗಳನ್ನು ಅಗೆದುನೋಡಿದರೆ, ವಿವಿಧ ಸಂಪ್ರದಾಯ ನೀತಿನಿಯಮಗಳನ್ನೆಲ್ಲ ಬಗೆದುನೋಡಿದರೆ ಪುರಾತನಕಾಲದಿಂದಲೂ ‘24’ಕ್ಕಿರುವ ಸ್ಪೆಷಾಲಿಟಿ ತಿಳಿಯುತ್ತದೆ. 24ರ ಅಂತಹ ಕೆಲವು ವೈಶಿಷ್ಟ್ಯಗಳ ವ್ಯಾಖ್ಯಾನವೇ ಈ ವಾರದ ಸಾಮಗ್ರಿ- ‘ಸಂಖ್ಯೆ ಮತ್ತು ಸಂಕೇತವಾಗಿ 24’

The importance of 24 !ಮೊದಲೇ ಹೇಳಿದಂತೆ, ಒಂದು ದಿನವನ್ನು 24 ಗಂಟೆಗಳಾಗಿ (ವೈಜ್ಞಾನಿಕವಾಗಿ ಹೇಳುವುದಾದರೆ, ಭೂಮಿಯು ತನ್ನ ಅಕ್ಷದ ಸುತ್ತ ಒಂದು ಸುತ್ತು ತಿರುಗಲು ತಗಲುವ ಅವಧಿ 23 ಗಂಟೆ 56 ನಿಮಿಷ 4 ಸೆಕೆಂಡು) ವಿಭಾಗಿಸಿರುವುದು, ಮತ್ತು ಅದರಿಂದಾಗಿ ನಮ್ಮ ಭೂಗೋಳವನ್ನು ತಲಾ 15 ಡಿಗ್ರಿ ರೇಖಾಂಶಕ್ಕೊಂದರಂತೆ 24 ಟೈಮ್‌ಜೋನ್‌ಗಳಾಗಿ ವಿಂಗಡಿಸಿರುವುದು - ಇದು 24ಕ್ಕೆ ಸಂಬಂಧಿಸಿದಂತೆ ನಮ್ಮ ಪ್ರಾಥಮಿಕ ಭೌಗೋಳಿಕ ಮಾಹಿತಿ.

ಭಾರತದ ರಾಷ್ಟ್ರಧ್ವಜದಲ್ಲಿ ರಾಷ್ಟ್ರಲಾಂಛನದಲ್ಲಿ ಇದೆಯಲ್ಲ ಅಶೋಕಚಕ್ರ? ಕ್ರಿ.ಪೂ 3ನೇ ಶತಮಾನದಲ್ಲಿ ಆಳಿದ ಮೌರ್ಯಸಾಮ್ರಾಜ್ಯದ ‘ದೇವಾನಾಂಪ್ರಿಯ’ ಅಶೋಕ ಚಕ್ರವರ್ತಿಯ ‘ಧರ್ಮಚಕ್ರ’ವನ್ನೇ 24 ಕಡ್ಡಿ (spokes) ಇರುವ ಅಶೋಕಚಕ್ರವೆನ್ನುವುದು. ಕಳಿಂಗಯುದ್ಧದ ನಂತರ ಐಹಿಕಭೋಗಗಳನ್ನೆಲ್ಲ ತೊರೆದು ಬೌದ್ಧ ಧರ್ಮ ಪ್ರಚಾರಕಾರ್ಯದಲ್ಲಿ ತೊಡಗಿದ ಅಶೋಕಚಕ್ರವರ್ತಿಯು ಮಾನವಹಕ್ಕುಗಳ ವಿಷಯದಲ್ಲಿ ಹೊರಡಿಸಿದ ‘24 ಅನುಶಾಸನಗಳು’ ಜೀವನದ ನಿರಂತರತೆಯನ್ನು ಬಿಂಬಿಸುತ್ತವೆ. ಸಾರನಾಥದ ಶಾಂತಿಸ್ತೂಪ ಸ್ಮಾರಕದಿಂದ ಅಳವಡಿಸಿಕೊಂಡಿರುವ ನಮ್ಮ ರಾಷ್ಟ್ರಲಾಂಛನ ಬಹಳ ಅರ್ಥಪೂರ್ಣ.

ಬೌಧ್ಧ ಧರ್ಮದ ವಿಷಯ ಅದಾದರೆ ಜೈನಮತದಲ್ಲೂ 24ಕ್ಕೆ ವಿಶೇಷತೆಯಿದೆ. ಆದಿನಾಥ ವೃಷಭದೇವನಿಂದ ಹಿಡಿದು ವರ್ಧಮಾನ ಮಹಾವೀರ ವರೆಗಿನ 24 ಮಂದಿ ತೀರ್ಥಂಕರರು ಜೈನಮತದವರ ಪರಮಗುರುಗಳು.

ಮತ್ತೆ ಹಿಂದೂ ಧರ್ಮದ ವಿಚಾರದಲ್ಲಂತೂ 24ರ ಮಹತ್ವ ರೋಚಕವಾದುದು. ಹಿಂದೂ ಮಂತ್ರಗಳಲ್ಲೆಲ್ಲ ಅತ್ಯಂತ ಪ್ರಮುಖವಾದ ಗಾಯತ್ರಿ ಮಂತ್ರ 24 ಅಕ್ಷರಗಳಿಂದಾದುದು. ಗಾಯತ್ರಿ ಮಂತ್ರದ ಈ ಬೀಜಾಕ್ಷರಗಳೇ ಆದಿಕಾವ್ಯ ರಾಮಾಯಣಕ್ಕೆ ಮೂಲಾಧಾರ. ಗಾಯತ್ರಿ ಮಂತ್ರದ ಒಂದೊಂದು ಅಕ್ಷರಕ್ಕೆ ತಲಾ ಒಂದುಸಾವಿರದಂತೆ ಒಟ್ಟು 24000 ಶ್ಲೋಕಗಳು ರಾಮಾಯಣದಲ್ಲಿರುವುದು. ಪ್ರಾತಿನಿಧಿಕವಾಗಿ ಅಕ್ಷರಕ್ಕೊಂದು ಶ್ಲೋಕದಂತೆ ಒಟ್ಟು 24 ಶ್ಲೋಕಗಳಲ್ಲಿ ಇಡೀ ರಾಮಾಯಣವನ್ನು ಪ್ರಸ್ತುತಪಡಿಸುವ ‘ಗಾಯತ್ರಿ ರಾಮಾಯಣಂ’ ಎಂಬುದೊಂದಿದೆ (ಕನ್ನಡಲಿಪಿಯಲ್ಲಿ ಗಾಯತ್ರಿ ರಾಮಾಯಣಂ ಪಿಡಿಎಫ್‌ ಕಡತ ಇಲ್ಲಿದೆ ; ಆಸಕ್ತರು ಅವರೋಹಿಸಿಕೊಳ್ಳಬಹುದು).

ಗಾಯತ್ರಿ ಮಂತ್ರದಲ್ಲಿ 24 ಅಕ್ಷರಗಳಾದರೆ ಗಾಯತ್ರಿ ಮಂತ್ರವೇ ಮೂಲತಿರುಳಾಗಿರುವ ‘ಸಂಧ್ಯಾವಂದನೆ’ಯು ಆರಂಭವಾಗುವುದು ವಿಷ್ಣುವಿನ 24 ಹೆಸರುಗಳ ಸ್ಮರಣೆಯಾಂದಿಗೆ. ಇದನ್ನೇ ಆಚಮನವಿಧಿ (ಆಚೆಮನೆ ಅಲ್ಲ !) ಎನ್ನುವುದು. ಕೇಶವಾಯನಮಃ ನಾರಾಯಣಾಯನಮಃ ಎಂದು ಆರಂಭವಾಗಿ ಶ್ರೀಕೃಷ್ಣಾಯನಮಃ ಎಂಬಲ್ಲಿಗೆ ಒಟ್ಟು 24 ಹೆಸರುಗಳು. ಕೆಲವು ಪಂಗಡಗಳಲ್ಲಿ ‘ಕೇಶವ’ದಿಂದ ‘ದಾಮೋದರ’ವರೆಗಿನ 12 ಹೆಸರುಗಳನ್ನು ಮಾತ್ರ ಹೇಳುವ ಕ್ರಮ ಇರುವುದು ಸಂಕ್ಷಿಪ್ತತೆ ಅನುಕೂಲಕ್ಕೋಸ್ಕರ ಇರಬಹುದು (ಎಷ್ಟೆಂದರೂ ಟೆಸ್ಟ್‌ಕ್ರಿಕೆಟ್‌ಗಿಂತ ವನ್‌ಡೇ ಮ್ಯಾಚ್‌ನಂಥ ಶಾರ್ಟ್‌ಫಾರ್ಮ್‌ಗೆ ಮಾತ್ರ ವ್ಯವಧಾನವುಳ್ಳವರಲ್ಲವೆ ನಾವೆಲ್ಲ ?) ವೈಷ್ಣವರಿಗೆ ಪರಮಪವಿತ್ರವಾದ ‘ಸಾಲಿಗ್ರಾಮ’ ಶಿಲೆಯು 24 ವಿವಿಧ ಪ್ರಕಾರಗಳದ್ದಿರುತ್ತದೆಂದೂ ಅವಕ್ಕೂ ಕೇಶವಾದಿ 24 ಹೆಸರುಗಳು ಅನ್ವಯವಾಗುತ್ತದೆಂದು ಪ್ರತೀತಿ.

ಸಂಧ್ಯಾವಂದನೆಯ ಇನ್ನೊಂದು ಅಂಗವಾದ ಗೋಪಿಚಂದನಧಾರಣೆಯಲ್ಲಿ ಶುಕ್ಲಪಕ್ಷದಲ್ಲಾದರೆ ಕೇಶವದಿಂದ ದಾಮೋದರವರೆಗೆ 12 ಹೆಸರುಗಳೂ ಕೃಷ್ಣಪಕ್ಷದಲ್ಲಿ ಸಂಕರ್ಷಣದಿಂದ ಶ್ರೀಕೃಷ್ಣವರೆಗಿನ 12 ಹೆಸರುಗಳನ್ನೂ ಉಚ್ಚರಿಸುವ ಕ್ರಮವೂ ಇದೆ. ಒಟ್ಟಿನಲ್ಲಿ ದೈನಿಕವಿಧಿಯಾದ ಸಂಧ್ಯಾವಂದನೆಯಲ್ಲಿ, ಗಾಯತ್ರಿಮಂತ್ರದಲ್ಲಿ 24ಕ್ಕೆ ಅಟ್‌ಮೋಸ್ಟ್‌ ಇಂಪಾರ್ಟೆನ್ಸ್‌ ಎಂಬುದಂತೂ ನಿರ್ವಿವಾದ.

ಕೇಶವಾದಿ 24 ಹೆಸರುಗಳನ್ನು ಸುಂದರವಾಗಿ ಪೋಣಿಸಿ ದಾಸಶ್ರೇಷ್ಠ ಕನಕದಾಸರು ಒಂದು ಸರಳವಾದ ಕೃತಿಯನ್ನು ರಚಿಸಿದ್ದಾರೆ. ವಿದ್ಯಾಭೂಷಣರ ಮಧುರಕಂಠದಲ್ಲಿ ಕ್ಯಾಸೆಟ್‌ ರೂಪದಲ್ಲಿ ಬಂದಮೇಲಂತೂ ಈ ಕೃತಿ ಬಹಳ ಜನಪ್ರಿಯವೂ ಆಗಿದೆ. 24 ಸಂಖ್ಯೆಯ ಮಹತ್ವದ ಈ ಸಂಚಿಕೆಯಲ್ಲಿ ಕನಕದಾಸ ವಿರಚಿತ ಕೀರ್ತನೆಯ ಪೂರ್ಣಪಾಠವನ್ನು ಕೊಡುವುದು ಅಪ್ರಸ್ತುತವಾಗಲಾರದೆಂದುಕೊಂಡಿದ್ದೇನೆ.

ಈಶ ನಿನ್ನ ಚರಣ ಭಜನೆ । ಆಶೆಯಿಂದ ಮಾಡುವೆನು । ದೋಷರಾಶಿ ನಾಶ ಮಾಡು ಶ್ರೀಶ ಕೇಶವ ।। 1 ।।

ಶರಣು ಹೊಕ್ಕೆನಯ್ಯ ಎನ್ನ । ಮರಣಸಮಯದಲ್ಲಿ ನಿನ್ನ । ಚರಣಸ್ಮರಣೆ ಕರುಣಿಸಯ್ಯ ನಾರಾಯಣಾ ।। 2 ।।

ಶೋಧಿಸೆನ್ನ ಭವದ ಕಲುಷ । ಬೋಧಿಸಯ್ಯ ಜ್ಞಾನವೆನಗೆ । ಬಾಧಿಸುವ ಯಮನ ಬಾಧೆ । ಬಿಡಿಸು ಮಾಧವಾ ।। 3 ।।

ಹಿಂದನೇಕ ಯೋನಿಗಳಲಿ । ಬಂದು ಬಂದು ನೊಂದೆನಯ್ಯ । ಇಂದು ಭವದ ಬಂಧ ಬಿಡಿಸು ತಂದೆ ಗೋವಿಂದಾ ।। 4 ।।

ಭ್ರಷ್ಟನೆನಿಸಬೇಡ ಕೃಷ್ಣ । ಇಷ್ಟು ಮಾತ್ರ ಬೇಡಿಕೊಂಬೆ । ಶಿಷ್ಟರೊಡನೆ ಇಟ್ಟು ಕಷ್ಟ । ಬಿಡಿಸು ವಿಷ್ಣುವೆ ।। 5 ।।

ಮದನನಯ್ಯ ನಿನ್ನ ಮಹಿಮೆ । ವದನದಲ್ಲಿ ನುಡಿಯುವಂತೆ । ಹೃದಯದೊಳಗೆ ಹುದುಗಿಸಯ್ಯ ಮಧುಸೂದನ ।। 6 ।।

ಕವಿದುಕೊಂಡು ಇರುವ ಪಾಪ । ಸವೆದು ಪೋಗುವಂತೆ ಮಾಡಿ । ಜವನ ಬಾಧೆಯನ್ನು ಬಿಡಿಸೋ । ಶ್ರೀ ತ್ರಿವಿಕ್ರಮ ।। 7 ।।

ಕಾಮಜನಕ ನಿನ್ನ ನಾಮ । ಪ್ರೇಮದಿಂದ ಪಾಡುವಂಥ । ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ ।। 8 ।।

ಮೊದಲು ನಿನ್ನ ಪಾದಪೂಜೆ । ಒದಗುವಂತೆ ಮಾಡೊ ಎನ್ನ । ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ ।। 9 ।।

ಹುಸಿಯನಾಡಿ ಹೊಟ್ಟೆ ಹೊರೆವ । ವಿಷಯದಲ್ಲಿ ರಸಿಕನೆಂದು । ಹುಸಿಗೆ ಹಾಕದಿರೊ ಎನ್ನ ಹೃಷಿಕೇಶನೆ ।। 10 ।।

ಬಿದ್ದು ಭವದನೇಕ ಜನುಮ । ಬದ್ಧನಾಗಿ ಕಲುಷದಿಂದ । ಗೆದ್ದು ಪೋಪ ಬುದ್ಧಿ ತೋರೊ ಪದ್ಮನಾಭನೆ ।। 11 ।।

ಕಾಮಕ್ರೋಧ ಬಿಡಿಸಿ ನಿನ್ನ । ನಾಮ ಜಿಹ್ವೆಯಾಳಗೆ ನುಡಿಸೊ । ಶ್ರೀಮಹಾನುಭಾವನಾದ ದಾಮೋದರ ।। 12 ।।

ಪಂಕಜಾಕ್ಷ ನೀನು ಎನ್ನ । ಮಂಕುಬುದ್ಧಿಯನ್ನು ಬಿಡಿಸಿ । ಕಿಂಕರನ್ನ ಮಾಡಿಕೊಳ್ಳೊ ಸಂಕರ್ಷಣ ।। 13 ।।

ಏಸು ಜನ್ಮ ಬಂದರೇನು । ದಾಸನಲ್ಲವೇನು ನಾನು । ಘಾಸಿ ಮಾಡದಿರು ಇನ್ನು ವಾಸುದೇವನೆ ।। 14 ।।

ಬುದ್ಧಿಶೂನ್ಯನಾಗಿ ಎನ್ನ । ಬದ್ಧಕಾಯ ಕುಹಕಮನವ । ತಿದ್ದಿ ಹೃದಯ ಶುದ್ಧಮಾಡೋ ಪ್ರದ್ಯುಮ್ನನೆ ।। 15।।

ಜನನಿ ಜನಕ ನೀನೆ ಎಂದು । ನೆನೆವೆನಯ್ಯ ದೀನಬಂಧು । ಎನಗೆ ಮುಕ್ತಿ ಪಾಲಿಸಿಂದು ಅನಿರುದ್ಧನೆ ।। 16 ।।

ಹರುಷದಿಂದ ನಿನ್ನ ನಾಮ । ಸ್ಮರಿಸುವಂತೆ ಮಾಡು ನೇಮ । ಇರಿಸು ಚರಣದಲಿ ಪ್ರೇಮ ಪುರುಷೋತ್ತಮ ।। 17 ।।

ಸಾಧುಸಂಗ ಕೊಟ್ಟು ನಿನ್ನ । ಪಾದಭಜನೆ ಇತ್ತು ಎನ್ನ । ಭೇದ ಮಾಡಿ ನೋಡದಿರು ಹೇ ಅಧೋಕ್ಷಜ ।। 18 ।।

ಚಾರು ಚರಣ ತೋರಿ ಎನಗೆ । ಪಾರುಗಾಣಿಸಯ್ಯ ಕೊನೆಗೆ । ಭಾರ ಹಾಕಿರುವೆ ನಿನಗೆ ನರಸಿಂಹನೆ ।। 19 ।।

ಸಂಚಿತಾದಿ ಪಾಪಗಳು । ಕಿಂಚಿತಾದಿ ಪೀಡೆಗಳು । ಮುಂಚಿತಾಗೆ ಕಳೆಯಬೇಕೊ ಸ್ವಾಮಿ ಅಚ್ಯುತ ।। 20 ।।

ಜ್ಞಾನ ಭಕುತಿ ಕೊಟ್ಟು ನಿನ್ನ । ಧ್ಯಾನದಲ್ಲಿ ಇಟ್ಟು ಸದಾ । ಹೀನಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ದನ ।। 21 ।।

ಜಪತಪಾನುಷ್ಠಾನವಿಲ್ಲ । ಕುಪಥಗಾಮಿಯಾದ ಎನ್ನ । ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೆ ।। 22 ।।

ಮೊರೆಯ ಇಡುವೆನಯ್ಯ ನಿನಗೆ ಶರಧಿಶಯನ ಶುಭಮತಿಯ । ಇರಿಸೋ ಭಕ್ತರೊಳು ಪರಮ ಪುರುಷ ಶ್ರೀಹರೇ ।। 23 ।।

ಪುಟ್ಟಿಸಲೇ ಬೇಡ ಇನ್ನು । ಪುಟ್ಟಿಸಿದಕೆ ಪಾಲಿಸಿನ್ನು । ಇಷ್ಟು ಮಾತ್ರ ಬೇಡಿಕೊಂಬೆ ಶ್ರೀಕೃಷ್ಣನೇ ।। 24 ।।

ಅಂದಹಾಗೆ ಕೇಶವಾಯನಮಃ ನಾರಾಯಣಾಯನಮಃಕ್ಕೆ ಸಂಬಂಧಿಸಿದಂತೆ ಒಂದು lighter vein ಹೀಗಿದೆ:

ಒಂದೂರಿನ ತಿಪ್ಪಾಭಟ್ಟರೆಂಬ ಪುರೋಹಿತರೊಬ್ಬರು ‘ಕೇಶವಾಯನಮಃ ನಾರಾಯಣಾಯನಮಃ ಮಾಧವಾಯನಮಃ ...’ ಚತುರ್ವಿಂಶತಿನಾಮಾವಳಿಯನ್ನು ಅವಸರದಲ್ಲಿ ಉಸುರುವಾಗ ಅದು, ಅದೇ ಊರಿನ ಇನ್ನುಳಿದ ಪುರೋಹಿತರಾದ ಕೇಶವಭಟ್ಟ , ನಾರಾಯಣಭಟ್ಟ , ಮಾಧವಭಟ್ಟ ಇತ್ಯಾದಿಯವರ ಮೇಲಿನ ವೃತ್ತಿಮಾತ್ಸರ್ಯದಿಂದ ‘ಕೇಶವ ಏನು ಮಹಾ?’, ‘ನಾರಾಯಣ ಏನು ಮಹಾ?’, ‘ಮಾಧವ ಏನು ಮಹಾ?’ ಎಂದು ಹೇಳುತ್ತಿದ್ದಾರೊ, ತಾನೇ ಶ್ರೇಷ್ಠನೆಂದು ಬೀಗುತ್ತಿದಾರೇನೊ ಎಂದು ಕೇಳಿಸುತ್ತದೆಯೆಂಬುದು ಶುದ್ಧಕುಹಕ. ಇರಲಿ, ಆ ವಿಚಾರ ಸದ್ಯಕ್ಕೆ ನಮಗೆ ಬೇಡಾ.

ಗಣಿತಶಾಸ್ತ್ರದಲ್ಲೂ 24 ಸಂಖ್ಯೆಗೆ ವಿಶೇಷತೆಯಿದೆ. ಗಣಿತದ ‘ಸಮೃದ್ಧ ಸಂಖ್ಯೆ’ (abundant number)ಗೆ 24 ಒಂದು ಉದಾಹರಣೆ. ಸಮೃದ್ಧಸಂಖ್ಯೆಯೆಂದರೆ ಒಂದು ಸಂಖ್ಯೆಯ ಎಲ್ಲ ವಿಭಾಜಕ (proper divisior)ಗಳ ಒಟ್ಟು ಮೊತ್ತ ಆ ಸಂಖ್ಯೆಗಿಂತ ಹೆಚ್ಚಾಗಿರುವುದು. 24ರ ವಿಭಾಜಕಗಳಾದ 1,2,3,4,6,8,12 - ಇವೆಲ್ಲದರ ಒಟ್ಟು ಮೊತ್ತ 24ಕ್ಕಿಂತ ಹೆಚ್ಚು. ಹಾಗೆಯೇ 24ರ ಇನ್ನೊಂದು ವಿಶೇಷತೆಯೆಂದರೆ ತಾನೂ ಸೇರಿದಂತೆ ಒಟ್ಟು ಎಂಟು ವಿಭಾಜಕಗಳಿರುವ ಅತ್ಯಂತ ಸಣ್ಣ ಸಂಖ್ಯೆಯೇ 24.

ಹೀಗೆ 24ರ ಮಹಾತ್ಮೆಗೆ ಇನ್ನೂ ಎಷ್ಟೊ ವಿಷಯಗಳ ‘24 ಸ್ಪೆಷಾಲಿಟಿ’ ಪಟ್ಟಿ ಮಾಡುತ್ತ ಹೋಗಬಹುದು. ಶುದ್ಧಚಿನ್ನ (ಅಪರಂಜಿ ಚಿನ್ನ) ಎಂದರೆ ‘24 ಕಾರೆಟ್‌ ಗೋಲ್ಡ್‌’ ಎನ್ನುವುದರಿಂದ ಹಿಡಿದು, ಚೀನಾದ ಮಹಾ ಗೋಡೆಯ ಎತ್ತರ 24 ಅಡಿಗಳು ಇರುವುದು, ಪ್ರೊಫೆಷನಲ್‌ ಬಾಸ್ಕೆಟ್‌ಬಾಲ್‌ ಆಟದ ನಿಯಮವೊಂದು ‘24 ಸೆಕೆಂಡ್ಸ್‌ ರೂಲ್‌’ ಇರುವುದು - ಇತ್ಯಾದಿತ್ಯಾದಿ...

ನಿಮಗೂ 24ರ ಮಹತ್ವದ ಅಂಶವೇನಾದರೂ ಗೊತ್ತಿದ್ದಲ್ಲಿ ಬರೆದು ತಿಳಿಸಿ. ವಿಳಾಸ - - srivathsajoshi@yahoo.com

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more