ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಡಿಯಲ್ಲಿ ಜಲ್ಲಿಕಲ್ಲು, ಮರಳು ಮತ್ತು ನೀರು...

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

ಒಂದು ದೊಡ್ಡ ಗಾತ್ರದ ಗಾಜಿನ ಅಥವಾ ಪಿಂಗಾಣಿಯ ಜಾಡಿ. ಉದಾಹರಣೆಗೆ ಹಿಂದಿನಕಾಲದಲ್ಲಿ ನಮ್ಮ ಅಮ್ಮ-ಅಜ್ಜಿಯಂದಿರು ಉಪ್ಪಿನಕಾಯಿ ಹಾಕಿಟ್ಟು ಮೂತಿಯನ್ನು ಬಟ್ಟೆಯಿಂದ ಭದ್ರವಾಗಿ ಮುಚ್ಚಿಟ್ಟಿರುತ್ತಿದ್ದರಲ್ಲಾ ಅಂಥದೊಂದು ಭರಣಿ. ಅಥವಾ, ಆ ರೀತಿಯ ಭರಣಿಯನ್ನು ನೀವು ನೋಡಿಲ್ಲ - ಅದು ನಿಮ್ಮ ಕಲ್ಪನೆಗೆ ಬರೋದಿಲ್ಲ ಅಂತಾದರೆ, ಸ್ವೀಟ್‌ಸ್ಟಾಲ್‌ಗಳಲ್ಲಿ ಬೂಂದಿಲಾಡು ಇತ್ಯಾದಿ ಸ್ವೀಟ್ಸ್‌ ತುಂಬಿಸಿ ಇಡುತ್ತಾರಲ್ಲಾ , ಅಂತಹ ಟ್ರಾನ್ಸ್‌ಪರೆಂಟ್‌ ಗಾಜಿನ ಜಾಡಿ (ನಾವೀಗ ಮನಸ್ಸಲ್ಲೇ ಮಾಡಹೊರಟಿರುವ ಪ್ರಯೋಗಕ್ಕೆ ಪಾರದರ್ಶಕ ಜಾಡಿಯೇ ಇನ್ನೂ ಒಳ್ಳೆಯದು).

ಸದ್ಯಕ್ಕೆ ಈ ಜಾಡಿಯಾಳಗೆ ಬೂಂದಿಲಡ್ಡೂ ಇಲ್ಲ, ಉಪ್ಪಿನಕಾಯಿಯೂ ಇಲ್ಲ. ಖಾಲಿಜಾಡಿಯನ್ನು ನಿಮಗೆ ಕೊಡಲಾಗಿದೆ. ಅದರಲ್ಲೀಗ ನೀವು ಎಷ್ಟು ಸಾಧ್ಯವೋ ಅಷ್ಟು ದೊಡ್ದದೊಡ್ಡ ಜಲ್ಲಿಕಲ್ಲುಗಳನ್ನು ತುಂಬಿಸಬೇಕು. ‘ಏನ್ರೀ, ಜಾಡಿಯಲ್ಲಿ ತಿಂಡಿ-ಉಂಡಿ ತುಂಬಿಸೋದು ಬಿಟ್ಟು ಜಲ್ಲಿಕಲ್ಲು ತುಂಬಿಸಲು ಹೇಳ್ತಿದ್ದೀರಲ್ಲಾ ನಾವೇನು ಮಣ್ಣಲ್ಲಿ ಆಟ ಆಡುವ ಮಕ್ಕಳಾ...?’ ಅಂತ ಗೊಣಗಬೇಡಿ ಮತ್ತೆ. ಸರಿ, ಜಾಡಿಯ ಕಂಠಮಟ್ಟ ಜಲ್ಲಿಕಲ್ಲು ತುಂಬಿಸಿದ್ದೀರಿ. ಹೀಗಿರುವ ಜಾಡಿಯಲ್ಲೇ ಇನ್ನೂ ಒಂದಿಷ್ಟು ಸಣ್ಣಸಣ್ಣ ಕಲ್ಲುಗಳನ್ನು (ನಾವೆಲ್ಲ ಚಿಕ್ಕವರಿದ್ದಾಗ ಕಲ್ಲಾಟ ಆಡಲು ಉಪಯೋಗಿಸುತ್ತಿದ್ದೆವು ನೋಡಿ ಅಷ್ಟು ಸಣ್ಣ pebbles) ತುಂಬಿಸಬೇಕು. ಪ್ರಯತ್ನಿಸಿದರೆ ನಿಮಗೆ ಅದೂ ಸಾಧ್ಯವಾಗುತ್ತದೆ. ಜಲ್ಲಿಕಲ್ಲುಗಳ ಸಂದುಗೊಂದುಗಳಲ್ಲಿ ಈ ಸಣ್ಣಕಲ್ಲುಗಳು ಹೇಗೂ ಒತ್ತಟ್ಟಿಗೆ ಕೂಡ್ರುತ್ತವಲ್ಲ. ಅದಾದ ಮೇಲೆ ಒಂದೆರಡು ಬೊಗಸೆ ಮರಳು (sand) ಕೂಡ ನಿಮ್ಮ ಜಾಡಿಯಲ್ಲಿ ಹಿಡಿಸಬಹುದು! ಅಷ್ಟೇ ಏಕೆ ಕೊನೆಯಲ್ಲಿ ಒಂದು ಮೂರ್ನಾಲ್ಕು ಲೀಟರ್‌ ನೀರು ಕೂಡ ಅದರಲ್ಲಿ ತುಂಬಲಿಕ್ಕಡ್ಡಿಯಿಲ್ಲ!

ನೆನಪಿಡಿ - ಜಲ್ಲಿಕಲ್ಲು, ಸಣ್ಣಕಲ್ಲು, ಮರಳು, ನೀರು - ಎಲ್ಲವನ್ನೂ ಅಚ್ಚುಕಟ್ಟಾಗಿ ತುಂಬಿಸಿದಿರಿ. ಎಲ್ಲದಕ್ಕೂ ಜಾಗ ಸಿಕ್ಕಿತು ನಿಮ್ಮ ಜಾಡಿಯಲ್ಲಿ.

ಅದೇ ಒಂದು ವೇಳೆ ಮೊದಲಿಗೆ ಜಾಡಿತುಂಬ ಜಲ್ಲಿಕಲ್ಲಿನ ಬದಲು ನೀರು ತುಂಬುತ್ತೀರೆಂದುಕೊಳ್ಳೋಣ. ಆಗ ಅದರಲ್ಲಿನ ನೀರು ಒಂದುಹನಿಯೂ ಚೆಲ್ಲದೇನೇ ಒಂದೇಒಂದು ಜಲ್ಲಿಕಲ್ಲನ್ನಾಗಲೀ ಸಣ್ಣಕಲ್ಲನ್ನಾಗಲೀ ಹಾಕಬಲ್ಲೆವೇ? ಊಹೂಂ! ಅದೇರೀತಿ ಮೊದಲು ಬರೀ ಮರಳನ್ನೇ ತುಂಬ ತುಂಬಿಸಿದ್ದೇ ಆದರೂ ಆಮೇಲೆ ಜಲ್ಲಿಕಲ್ಲನ್ನು ಜಾಡಿಯಾಳಗೆ ತುರುಕಲಾಗದು ಅಲ್ಲವೇ? ಅಂದರೆ ಜಾಡಿಯನ್ನು ಜಲ್ಲಿಕಲ್ಲು , ಸಣ್ಣಕಲ್ಲು , ಮರಳು, ನೀರುಗಳಿಂದ ತುಂಬಿಸುವ ನಮ್ಮ ಕ್ರಮ ರಿವರ್ಸ್‌ ಆರ್ಡರ್‌ನಲ್ಲಿ ಸರಿಯಾಗಿ ನಡೆಯೋದಿಲ್ಲ ಅಂತಾಯ್ತು.

ನಮಗೆಲ್ಲರಿಗೂ ಅತಿ ಅಗತ್ಯದ ಪಾಠವೊಂದು ಈ ಮೇಲಿನ ಪ್ರಯೋಗದಿಂದ ಕಲಿಯುವಂಥದ್ದಿದೆ ಎಂದರೆ ನಂಬುತ್ತೀರಾ? ನಮ್ಮಲ್ಲಿ ಬಹುತೇಕ ಮಂದಿ ಅನುಷ್ಠಾನಗೊಳಿಸಲು ಹೆಣಗಾಡುವ, ಒಂದೆರಡು ಸಲ ಪ್ರಯತ್ನಿಸಿ ಮತ್ತೆ ಕೈಬಿಡುವ ‘ಸಮಯ ನಿರ್ವಹಣೆ’ ಯೇ (Time Management) ಆ ‘ಪಾಠ’ ಎಂದರೆ ಆಶ್ಚರ್ಯವಾಗುತ್ತದಲ್ಲವೇ?

ಪ್ರತಿಯಾಬ್ಬರಿಗೂ ಒಂದು ದಿನದ ಅವಧಿಯಲ್ಲಿ ಅಥವಾ ವಾರ, ತಿಂಗಳು, ವರ್ಷ, ಇಡೀ ಬದುಕು - ಹೀಗೆ ನಿಗದಿತ ಅವಧಿಯಲ್ಲಿ ಕೆಲವಾದರೂ ಅಗ್ರಪ್ರಾಶಸ್ತ್ಯ (priority) ಉಳ್ಳ, ಮಾಡಿಮುಗಿಸಲೇಬೇಕಾದ ಕೆಲಸಗಳಿರುತ್ತವೆ. ಅವನ್ನು ಜಲ್ಲಿಕಲ್ಲುಗಳೆಂದುಕೊಳ್ಳೋಣ. ಇನ್ನು ಕೆಲವು ಕೆಲಸಗಳು, ಸಂಗತಿಗಳು, ವಿಷಯಗಳು ನಮಗೆ ಸಂತೋಷಕೊಡಬಲ್ಲವು ಇರುತ್ತವೆ; ಅವೇ ಸಣ್ಣಸಣ್ಣ ಕಲ್ಲುಗಳು (tiny pebbles). ಇನ್ನು ಕೆಲವು ಸಣ್ಣಪುಟ್ಟ ಕೆಲಸಗಳೂ ಇರುತ್ತವೆ - ಮರಳಿನ ಕಣಗಳಂತೆ. ಕೊನೆಯಲ್ಲಿ , ನಮ್ಮ ಬದುಕನ್ನಿಡೀ ಎರ್ರಾಬಿರ್ರಿಯಾಗಿ ವ್ಯಾಪಿಸಿರುವ ಮಾಮೂಲಿ ಕೆಲಸಗಳಂತೂ ಇದ್ದೇ ಇರುತ್ತವೆ - ನೀರಿನಂತೆ.

ಇವುಗಳಲ್ಲಾವುವೂ ಕೆಟ್ಟದಲ್ಲ , ತಪ್ಪಿಸಿಕೊಳ್ಳಬೇಕಾದ್ದಲ್ಲ. ನಮ್ಮ ಅತಿಮಹತ್ವದ ಯೋಜನೆಗಳೂ ಕೈಗೂಡಬೇಕು, ಜೀವನೋಪಾಯದ ಕೆಲಸಗಳೂ ಸಾಗಬೇಕು, ಮನರಂಜನೆಯಾದಗಿಸುವ ಕೆಲಸಕಾರ್ಯಗಳೂ ಬೇಕು, ಜಸ್ಟ್‌ ರಿಲಾಕ್ಸಿಂಗ್‌ ಎಂದು ಏನೇನೂ ಮಾಡದೇ ಆರಾಮಾಗಿರುವ ಕ್ಷಣಗಳೂ ಒಂದಿಷ್ಟಾದರೂ ಬೇಕು! ಮನೆ ಕಟ್ಟಿಸುವ ಕೆಲಸವೂ ಆಗಬೇಕು, ಮನೆಮನೆಕಥೆ ಟಿವಿ ಧಾರಾವಾಹಿ ನೋಡುವ ಕೆಲಸವೂ ಆಗಬೇಕು. ಅಂದರೆ ‘ಜಿಗ್‌ಸಾ ಪಜಲ್‌’ನ ತುಂಡುಗಳಂತೆ ಎಲ್ಲ ಜೋಡಣೆಯಾಗಬೇಕು, ಒಂದಕ್ಕೊಂದು ಹೊಂದಾಣಿಕೆಯಾಗಿ ಬ್ಯಾಲೆನ್ಸ್‌ ಸಿಗಬೇಕು. ಜಲ್ಲಿಕಲ್ಲು, ಸಣ್ಣಕಲ್ಲುಗಳು, ಮರಳು, ನೀರಿನಿಂದ ಗಾಜಿನಜಾಡಿ ಪರ್ಫೆಕ್ಟಾಗಿ ತುಂಬಿದಂತೆ, ಕಷ್ಟದ-ಇಷ್ಟದ, ದೊಡ್ಡ-ಚಿಕ್ಕ, ಭಾರ-ಹಗುರ ಎಲ್ಲ ನಮೂನೆಯ ಕರ್ತವ್ಯಗಳಿಂದ ಬದುಕು ತುಂಬಬೇಕು; ಅದನ್ನು ಸರಿಯಾಗಿ ತುಂಬಬಲ್ಲವರೇ ಸಮರ್ಥ ‘ಸಮಯ ನಿರ್ವಾಹಕರು’!

ಸಮಯ ನಿರ್ವಹಣೆ ಸರಿಯಾಗಿ ಮಾಡಲಾಗದವರು ಎಲ್ಲಿ ತಪ್ಪಿಬೀಳುತ್ತಾರೆ? ಜಾಡಿಯಲ್ಲಿ ಮೊದಲಿಗೆ ದೊಡ್ಡದೊಡ್ಡ ಜಲ್ಲಿಕಲ್ಲುಗಳ ಬದಲಿಗೆ ಮರಳು, ನೀರು ತುಂಬುವಂತೆ ದಿನದ ಹೆಚ್ಚಿನ ಅವಧಿಯಲ್ಲಿ ಹೇಳಿಕೊಳ್ಳಲಾಗದಂಥ routine ಕೆಲಸಗಳಲ್ಲೇ ಕಾಲಕ್ಷೇಪ ಮಾಡುತ್ತಾರೆ. ಉದಾಹರಣೆಗೆ ಚಾಟಿಂಗ್‌, ಬ್ರೌಸಿಂಗ್‌, ಈಮೈಲ್‌, ಫೋನ್‌ಗಳಲ್ಲೇ ಅಗತ್ಯಕ್ಕಿಂತ ಹೆಚ್ಚು ಸಮಯ ವ್ಯಯಿಸುತ್ತಾರೆ. ಹೆಚ್ಚು ಪ್ರಾಶಸ್ತ್ಯದ ಕೆಲಸಗಳನ್ನೆಲ್ಲ ಮುಂದೂಡುತ್ತ ಹೋಗಿ ಕೊನೆಗೆ 11ನೇ ಗಂಟೆ 58ನೇ ನಿಮಿಷದಲ್ಲಿ ಭೂಮ್ಯಾಕಾಶಗಳು ಒಂದಾದವೋ ಎಂಬಂತೆ ಗಾಬರಿಗೊಂಡು ಸರಿಯಾಗಿ ಏನನ್ನೂ ಮಾಡಲಾಗದವರಾಗುತ್ತಾರೆ. ಮರಳು, ನೀರಿಂದಲೇ ಜಾಡಿಯನ್ನು ತುಂಬಿಸಿದರೆ ಜಲ್ಲಿಕಲ್ಲುಗಳಿಗೆಲ್ಲಿ ಜಾಗ?

ಮಾಡಬೇಕಾದ ಕೆಲಸವು ತಗಲುವ ಅವಧಿಯಿಂದ ದೊಡ್ಡದೆನಿಸಬಹುದು, ಕಡಿಮೆವೇಳೆಯದಾದರೂ ಶ್ರಮ ಮತ್ತು ಇತರ ಸಂಪನ್ಮೂಲಗಳ ಅವಶ್ಯಕತೆಯ ದೃಷ್ಟಿಯಿಂದ ದೊಡ್ಡದೆನಿಸಬಹುದು, ಅನಿವಾರ್ಯತೆಯಿಂದಾಗಿ, ತುರ್ತಿನಿಂದಾಗಿ ಪ್ರಾಶಸ್ಯ ಪಡೆಯಬಹುದು. ಅದೇನೇ ಇದ್ದರೂ ಸಾಧ್ಯವಾದಷ್ಟು ಮಟ್ಟಿಗೆ ನಮ್ಮ ಧೈರ್ಯ-ಸ್ಥೈರ್ಯ-ಶಕ್ತಿ-ಯುಕ್ತಿಗಳ ಅಣೆಕಟ್ಟು ತುಂಬಿದ್ದಾಗ ಇಂಥ ‘ಭಾರದ’ ಕೆಲಸಗಳನ್ನು ಮಾಡಿಮುಗಿಸುವುದರಲ್ಲಿ (ಜಾಡಿಯಲ್ಲಿ ಮೊದಲಿಗೆ ಜಲ್ಲಿಕಲ್ಲುಗಳನ್ನು ತುಂಬಿಸಿದಂತೆ) ಚಾಣಾಕ್ಷತನವಿದೆ. ಮುಂಜಾವಿನ, ದಿನದ ಪೂರ್ವಾರ್ಧದ ಅವಧಿ ಅತ್ಯಂತ ಸಹಕಾರಿ; ವಾರದ ಮೊದಲ ದಿನಗಳೇ ಹೆಚ್ಚು productive ಎನ್ನುವವರಿದ್ದಾರೆ. ಸಮಯ ನಿರ್ವಹಣೆಯಲ್ಲಿ ದಕ್ಷತೆಯನ್ನು ಅವರು ಸಾಕಷ್ಟು ರೂಢಿಸಿಕೊಂಡಿದ್ದಾರೆಂದೇ ತಿಳಿಯಬಹುದು.

ಹಾಗೆ ನೋಡಿದರೆ ದೊಡ್ಡದೊಡ್ಡದನ್ನು ಮೊದಲು ಮಾಡಿಮುಗಿಸಿ ಹೆಗಲಭಾರವನ್ನಿಳಿಸಿಕೊಳ್ಳಬಹುದಾದ ಇತರ ಸನ್ನಿವೇಶಗಳೂ ನಮಗೆ ಯಥೇಷ್ಟ ಸಿಗುತ್ತವೆ. ಪದಬಂಧ (crossword) ಬಿಡಿಸುವ ಹುಚ್ಚಿದ್ದವರಿಗೆ ಗೊತ್ತಿರುತ್ತದೆ - ಎಸ್ಪೆಷಲಿ ಇಂಗ್ಲಿಷ್‌ ಪತ್ರಿಕೆಗಳ ಪದಬಂಧಗಳಲ್ಲಿ ಕೆಲವು ಕ್ಲೂಗಳು ಹೆಚ್ಚು ಅಕ್ಷರಗಳುಳ್ಳ ಒಂದೇ ಪದದ ಉತ್ತರವನ್ನು ಅಥವಾ ಎರಡು-ಮೂರು ಪದಗಳಿಂದಾದ ಉತ್ತರವನ್ನು ಹೊಂದಿರುವುದುಂಟು, ಅವನ್ನು ಮೊದಲು ಬಿಡಿಸಿದರೆ ಆಮೇಲೆ ಇತರ ಎಷ್ಟೋ ಉತ್ತರಗಳಿಗೆ ಅಕ್ಷರಗಳು ಸಿಕ್ಕಂತಾಗುವುದಿಲ್ಲವೇ? ಇನ್ನೊಂದು ಉದಾಹರಣೆಯೆಂದರೆ ‘ಪ್ಯಾಕರ್ಸ್‌ ಏಂಡ್‌ ಮೂವರ್ಸ್‌’ನವರು ಪ್ಯಾಕ್‌ ಮಾಡುವ ವೈಖರಿಯನ್ನೆಂದಾದರೂ ನೀವು ಗಮನಿಸಿದ್ದರೆ ತಿಳಿಯುತ್ತದೆ. There should be place for everything, and everything should be in its place ಎಂದು ಎಲ್ಲವನ್ನೂ ಅಚ್ಚುಕಟ್ಟಾಗಿ ಹೇಗೆ ಪ್ಯಾಕ್‌ ಮಾಡುತ್ತಾರೆ ನೋಡಿ. ಮತ್ತೆ ನಮ್ಮ ಜಾಡಿಯ ಹೋಲಿಕೆಗೆ ಬಂದರೆ ಮೊದಲು ಜಲ್ಲಿಕಲ್ಲುಗಳನ್ನು ತುಂಬಿಸಿದಂತೆಯೇ ಇದು ಕೂಡ!

ಪರೀಕ್ಷೆಯಲ್ಲಿ ಮೂರುಗಂಟೆಯಲ್ಲಿ ಪ್ರಶ್ನೆಪತ್ರಿಕೆಯನ್ನೆಲ್ಲ ಉತ್ತರಿಸಿ ಮುಗಿಸುವುದರಲ್ಲಿ ಸಮಯ ನಿರ್ವಹಣೆ ಪ್ರಧಾನ ಪಾತ್ರ ವಹಿಸುದಿಲ್ಲವೆ ? ಮೊದಲ ಹತ್ತು ನಿಮಿಷಗಳಲ್ಲಿ ಒಮ್ಮೆ ಇಡೀ ಪ್ರಶ್ನೆಪತ್ರಿಕೆಯನ್ನು ಓದಿಕೊಳ್ಳಿ, ಯಾವ್ಯಾವ ಪ್ರಶ್ನೆಗಳಿಗೆ ಎಷ್ಟು ಸಮಯ/ಶ್ರಮ ಬೇಕಾಗಬಹುದೆಂದು ಒಂದು ಅಂದಾಜನ್ನು ಮಾಡಿಕೊಳ್ಳಿ ಎಂದು ನಮಗೆಲ್ಲ ಅಧ್ಯಾಪಕರು ಪದೇಪದೇ ಹೇಳುತ್ತಿರಲಿಲ್ಲವೆ? ಅಲ್ಲೂ ಹಾಗೇ - ಪ್ರಶ್ನೆಪತ್ರಿಕೆಯಲ್ಲಿರುವ ‘ಜಲ್ಲಿಕಲ್ಲು’ಗಳ ಬಗ್ಗೆ ಮೊದಲೇ ಮನಸ್ಸಲ್ಲೇ ನಿಗಾಇಟ್ಟುಕೊಂಡರೆ ಆಮೇಲೆ ಸಲೀಸಾಗುತ್ತದೆ.

ತಾತ್ಪರ್ಯವಿಷ್ಟೆ. ಸಮಯ ನಿರ್ವಹಣೆ ಕಷ್ಟಕರವಾಗುತ್ತಿದೆ ಎಂದೆನಿಸಿದಾಗಲೆಲ್ಲ ಗಾಜಿನಜಾಡಿ-ಜಲ್ಲಿಕಲ್ಲು-ಮರಳು-ನೀರು ದೃಷ್ಟಾಂತವನ್ನು ನೆನೆಸಿಕೊಳ್ಳಬಹುದು. ಅತಿಭಾರದ್ದಕ್ಕೆ ಆದ್ಯತೆ. ಅದಾದಮೇಲಷ್ಟೆ ಅಳಿದುಳಿದುದಕ್ಕೆಲ್ಲ ಅವಕಾಶ.

ಟೈಮ್‌ ಮೆನೇಜ್‌ಮೆಂಟ್‌ನಂಥದಕ್ಕೆಲ್ಲ ಸಾರ್ವತ್ರಿಕವಾಗಿ ಎಲ್ಲರಿಗೂ ಒಂದೇ ನಮೂನೆಯ ಸೂತ್ರಗಳು/ವಿಧಾನಗಳು ಅನ್ವಯವಾಗುವುದಿಲ್ಲ. ಓದಿ ಆನಂದಿಸುವುದು ಸುಲಭ, ಕಾರ್ಯಾಚರಣೆ ಕಷ್ಟ. ಹಾಗಾಗಿ ಅದರ ಬಗ್ಗೆ ಉದ್ದುದ್ದ ಭಾಷಣಗಳಿಗಿಂತ, ಅಪ್ರಸ್ತುತ ಉಪದೇಶಗಳಿಗಿಂತ, ‘ಅದುಮಾಡಿ-ಇದುಮಾಡಬೇಡಿ’ಗಳ ಪಟ್ಟಿಗಿಂತ ಈ ಸರಳ ಪ್ರಯೋಗದ ಸುಂದರ ರೂಪಕ ನಿಮಗೆ ಸರಿಕಂಡುಬಂದರೆ, ಇಷ್ಟವಾದರೆ ಅದೇ ಸಂತೋಷ. ನಿಮ್ಮ ಪತ್ರಗಳಿಗೆ ಸದಾ ಸ್ವಾಗತ, ವಿಳಾಸ - [email protected]


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X