ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂರು ಕೇಸರಿ ಜೊತೆಗೊಂದು ಕುರಿಮರಿ!

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

ಕ್ಷುತ್‌ಕ್ಷಾಮೊǚಪಿ ಜರಾಕೃಶೊǚಪಿ ಶಿಥಿಲಪ್ರಾಯಾǚಪಿ ಕಷ್ಟಾಂ
ದಶಾಮಾಪನ್ನೊǚಪಿ ವಿಪನ್ನಧೀಧೃತಿರಪಿ ಪ್ರಾಣೆಷು ನಶ್ಯತ್ಸ್ವಪಿ ।
ಮತ್ತೆಭೇಂದ್ರವಿಭಿನ್ನಕುಂಭಪಿಶಿತಗ್ರಾಸೈಕಬದ್ಧಸ್ಪೃಹಃ
ಕಿಂ ಜೀರ್ಣಂ ತೃಣಮತ್ತಿಮಾನಮಹತಾಂ ಅಗ್ರೇಸರಃ ಕೇಸರೀ ।।

ವನರಾಜ (ಜಂಗಲ್‌ಕಿಂಗ್‌), ಪಂಚಾಸ್ಯ, ಕೇಸರಿ ಇತ್ಯಾದಿ ನಾಮವಿಶೇಷಣಗಳುಳ್ಳ ಸಿಂಹದ ಗತ್ತು- ಗಾಂಭೀರ್ಯ- ಪ್ರತಿಷ್ಠೆ- ಸ್ವಾಭಿಮಾನಗಳನ್ನು ಸಿಂಹಸದೃಶವಾಗಿ ವಿವರಿಸುವ ಸುಭಾಷಿತವಿದು. ಸಂಸ್ಕೃತ ಅಧ್ಯಾಪಕರು ಪ್ರತಿಪದಾರ್ಥವಾಗಿ ಶ್ಲೋಕವನ್ನು ಬಿಡಿಸಿ ಬರೆಸುವಂತೆ ಬರೆದರೆ ಈ ಮೇಲಿನ ಸುಭಾಷಿತದ ಭಾಷಾಂತರ ಹೀಗಿರುತ್ತದೆ:

‘ಹಸಿವಿನಿಂದ ಬಳಲಿದ್ದರೂ ಮುಪ್ಪಿನಿಂದ ದುರ್ಬಲವಾಗಿದ್ದರೂ ಅಂಗಗಳೆಲ್ಲ ಕ್ಷೀಣಿಸಿದ್ದರೂ ಅತಿಕಷ್ಟದ ಸನ್ನಿವೇಶದಲ್ಲಿ ಸಿಲುಕಿದ್ದರೂ ತನ್ನ ಮನೋಸ್ಥೈರ್ಯವನ್ನೇ ಕಳೆದುಕೊಂಡಿದ್ದರೂ ಕಟ್ಟಕಡೆಯಲ್ಲಿ ಜೀವ ಹೋಗುವ ಸ್ಥಿತಿಯೇ ಉಂಟಾಗಿದ್ದರೂ, ಮದಿಸಿದ ಕಾಡಾನೆಗಳ ಸೀಳಿದ ಕುಂಭಸ್ಥಳದಲ್ಲಿರುವ ಮಾಂಸವನ್ನು ಮಾತ್ರ ಭಕ್ಷಿಸುವ ಸ್ವಭಾವವನ್ನು ತನ್ನ ಜೀವನದುದ್ದಕ್ಕೂ ಕಾಪಾಡಿಕೊಂಡು ಬಂದ, ಸ್ವಾಭಿಮಾನಿಗಳಲ್ಲಿ ಅಗ್ರಗಣ್ಯವಾದ ಸಿಂಹವು ಒಣಹುಲ್ಲನ್ನು ತಿಂದು ಬದುಕಿ ಉಳಿಯುತ್ತೇನೆಂದು ಎಂದೂ ಬಯಸುವುದಿಲ್ಲ !’

ಇಂಥ ಗತ್ತು-ದೌಲತ್ತುಗಳನ್ನು ಸಿಂಹಕ್ಕೆ ಯಾರೂ ಕೊಡಮಾಡಿರುವುದಲ್ಲ. ಅದಕ್ಕೆ ‘ವನರಾಜ’ನನ್ನಾಗಿಸುವ ಪಟ್ಟಾಭಿಷೇಕ ಸಮಾರಂಭವೇನೂ ನಡೆದಿರುವುದಿಲ್ಲ. ಚುನಾವಣೆಗಳು ನಡೆದು (ರಿಗ್ಗಿಂಗ್‌, ಬೂತ್‌ಕಾಪ್ಚರಿಂಗ್‌ ಮಾಡಿ?) ಗೆದ್ದು ಗದ್ದುಗೆಯನ್ನೇರುವ ಕ್ರಮವೂ ಇಲ್ಲ. ಹುಟ್ಟಿನಿಂದಲೇ ಬಂದ ನೂರು ಪ್ರತಿಶತ ಸಿಂಹತನವೇ ಸಿಂಹಕ್ಕೆ ರಾಜಮಾನ್ಯತೆಯನ್ನು ತಂದುಕೊಡುತ್ತದೆ. ಈ ಪರಂಪರೆಯನ್ನು ಇನ್ನೊಂದು ಸುಭಾಷಿತ ತಿಳಿಸುತ್ತದೆ:

ನಾǚಭಿಷೇಕೊ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೆ ವನೆ
ವಿಕ್ರಮಾರ್ಜಿತ ಸತ್ವಸ್ಯ ಸ್ವಯಮೇವ ಮೃಗೇಂದ್ರತಾ ।।

ಆದರೆ ಅಂಥ ಬಲಶಾಲಿ ರಾಜಗಾಂಭೀರ್ಯದ ಸಿಂಹ ಕೂಡ ತನ್ನ ಕೆಲಸವನ್ನು ತಾನೇ ಮಾಡಿಕೊಂಡು ತನ್ನ ಆಹಾರವನ್ನು ತಾನೇ ಕಂಡುಕೊಂಡು (ಕೊಂದು) ತಿನ್ನಬೇಕು. ದಿನಕ್ಕೊಂದರಂತೆ ಸರದಿಯಾಗಿ ಒಂದೊಂದು ಪ್ರಾಣಿ ಸಿಂಹಕ್ಕೆ ಆಹಾರವಾಗಿ ಹೋಗುವ ಏರ್ಪಾಡೆಲ್ಲ ಬರೀ ಪಂಚತಂತ್ರ ಕಥೆಯಲ್ಲಾಯ್ತು. ನಿಜಪ್ರಪಂಚದಲ್ಲಿ ‘ಕೆಲಸ ಮಾಡಿದರೇನೇ ಕಾಳು...’ ಎಂಬುದನ್ನು ಸಿಂಹದ ಉದಾಹರಣೆಯಾಂದಿಗೆ ಬಹಳ ಅರ್ಥವತ್ತಾಗಿ ತಿಳಿಸುತ್ತದೆ ಇನ್ನೊಂದು ಸುಭಾಷಿತ.

ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ
ನ ಹಿ ಸಿಂಹಸ್ಯ ಸುಪ್ತಸ್ಯ ಪ್ರವಿಶಂತಿ ಮುಖೆ ಮೃಗಾಃ ।।

ಹಾಗಾಗಿಯೇ, ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ ಮೇಯುತ್ತಿರಬೇಕಿದ್ದರೆ, ಕಬ್ಬಿನ ಗದ್ದೆ ಮಧ್ಯದಲ್ಲಿ ಉಬ್ಬಿದ ಕೊಬ್ಬಿದ ಗಬ್ಬದ ತೋಳ ಈ ಕುರಿಮರಿಗಳ ಮೇಲೆ ಹೊಂಚುಹಾಕಿರಬೇಕಿದ್ದರೆ, ಇವೆಲ್ಲ ಬಡಪಾಯಿಪ್ರಾಣಿಗಳನ್ನು ಕಬಳಿಸುತ್ತೇನೆಂದು ಮೋಡದ್‌ ಮಧ್ಯೆ ಗುಡುಗೊ ಹಾಗೆ, ಭೂಮಿ ಎಲ್ಲ ನಡುಗೊ ಹಾಗೆ ಗರ್ಜಿಸಿ ಅಲ್ಲಿಗೆ ಸಿಂಹವೂ ಬಂದಿರುತ್ತದೆ! ಕೊನೆಗೂ ಕುರಿಮರಿಯ ಅದೃಷ್ಟದಿಂದಾಗಿ ಬೇಡ ಹಾಕಿದ ಬಲೆಗ್‌ ಸಿಂಹ ಸಿಕ್‌ಬೀಳ್ತದೆ; ಕಾಲು ಜಾರಿ ಕೆರೆಗ್‌ ಬಿದ್ದ ತೋಳ ಹೆದರ್‌ಕೊಂಡು, ಬಾಲ ಮುದುರ್‌ಸ್ಕೊಂಡು ತಪ್ಪಿಸ್‌ಕೊಂಡ್‌ ಓಡ್ಹೋಗ್ತದೆ; ಕುರಿಮರಿ ಬದುಕುಳಿಯುತ್ತದೆ, ಅದು ಬೇರೆ ಮಾತು. ಆದರೆ ಬೇಟೆಯಾಡುವ ಜಾಯಮಾನವನ್ನಂತೂ ಸಿಂಹ ಎಂದೆಂದಿಗೂ ಬಿಡಲಾರದು.

ಸಿಂಹದ ಗುಣಸ್ವಭಾವಗಳ ಬಗ್ಗೆ ಇದಿಷ್ಟು ಸಿಂಹಾವಲೋಕನ ಮಾಡಿದ ಮೇಲೆ ಅದನ್ನೀಗ ಹಿನ್ನೆಲೆಯಾಗಿಟ್ಟು, ಇವತ್ತಿನ ವಿಷಯಕ್ಕೆ ಬರೋಣ.

ಇದೊಂದು ಜಾಣ್ಮೆಲೆಕ್ಕ. ಬಿಡಿಸಿ ಉತ್ತರ ಕಂಡುಹಿಡಿಯಲಿಕ್ಕಾಗುತ್ತದೋ ನೋಡಿ.

ಒಂದು ದೊಡ್ಡ ದ್ವೀಪ. ಅಲ್ಲೆಲ್ಲ ಹುಲ್ಲುಗಾವಲು, ಗಿಡಮರಪೊದೆಗಳೇ ತುಂಬಿವೆ. ಇಡೀ ದ್ವೀಪದಲ್ಲೆಲ್ಲೂ ಜನವಸತಿ ಇಲ್ಲ. ಇರುವ ಪ್ರಾಣಿಗಳೆಂದರೆ ನೂರು ಸಿಂಹಗಳು ಮತ್ತು ಒಂದು ಕುರಿಮರಿ! (ಓಹ್‌ ಮೈ ಗುಡ್‌ನೆಸ್‌....ಅದ್ಯಾವ ಧೈರ್ಯದಿಂದ, ಅದೃಷ್ಟದಿಂದ ಬದುಕುಳಿದಿದೆ ಆ ಕುರಿಮರಿ ಎಂದಿರಾ ? ಅಲ್ಲೇ ಇರುವುದು ಸ್ವಾರಸ್ಯ!)

ಆ ನೂರೂ ಸಿಂಹಗಳಿಗೆ ವಿಶೇಷ ಬುದ್ಧಿವಂತಿಕೆಯಿದೆ. ತರ್ಕಿಸುವ ಶಕ್ತಿಯಿದೆ ; ಸುತ್ತಲ ಪರಿಸರದ, ಪರಿಸ್ಥಿತಿಗಳ ಸಂಪೂರ್ಣ ಅರಿವಿದೆ. ನಮ್ಮ ಸಂಸ್ಕೃತ ಸುಭಾಷಿತದ ಸಿಂಹದಂತಲ್ಲದೆ ಸಂದರ್ಭ ಬಂದರೆ ಬರೀ ಹುಲ್ಲು ತಿಂದು ಬದುಕಲಿಕ್ಕೂ ಗೊತ್ತಿದೆ! ಆಫ್‌ಕೋರ್ಸ್‌, ಕುರಿಮರಿ ಎದುರಿಗಿರುವಾಗ ಹುಲ್ಲು ತಿನ್ನುವ ಮನಸ್ಸಾದರೂ ಹೇಗೆ ಬರುತ್ತದೆ ಹೇಳಿ. ಹಾಗಾಗಿ ಒಂದೋ ಹುಲ್ಲನ್ನು , ಇಲ್ಲ ಇದ್ದ ಆ ಒಂದು ಕುರಿಯನ್ನು ತಿನ್ನಬೇಕು.

ಈಗ ಇನ್ನೂ ಸ್ವಲ್ಪ ಮಾಯಾವಿ ಮಾಹಿತಿಯನ್ನೂ ನೋಡೋಣ. ಒಂದು ವೆರಿ ಇಂಪಾರ್ಟೆಂಟ್‌ ವಿಷಯವೆಂದರೆ,

ನೂರು ಸಿಂಹಗಳಲ್ಲಿ ಯಾವುದೇ ಒಂದು ಕೂಡ ಆ ಕುರಿಯನ್ನು ತಿಂದುಹಾಕಿತೋ, ಆ ಸಿಂಹವೇ ಒಂದು ಕುರಿಯಾಗಿ ಮಾರ್ಪಾಡಾಗುತ್ತದೆ! ಕುರಿಯಾಗಿ ಬದಲಾದ ಆ ಸಿಂಹವನ್ನು ಇನ್ನುಳಿದ ಸಿಂಹಗಳು ಕಬಳಿಸಬಹುದು! ಪ್ರತಿ ಸಿಂಹವೂ ಹುಲ್ಲನ್ನಾದರೂ ತಿಂದು ಬದುಕಲಿಕ್ಕೆ ರೆಡಿಯಿದೆ ವಿನಹ ಇನ್ನೊಂದು ಸಿಂಹದಿಂದ ಕೊಲ್ಲಲ್ಪಟ್ಟು (ಕುರಿಯಾಗಿ ಮಾರ್ಪಟ್ಟ ಮೇಲೆ) ಸಾಯುವುದನ್ನು ಎಷ್ಟು ಮಾತ್ರಕ್ಕೂ ಬಯಸದು!

ಪರಿಸ್ಥಿತಿ ಹೀಗಿರಲು ಆ ಕುರಿಮರಿ ಕೊನೆಗೂ ಬದುಕುಳಿಯುತ್ತದೆಯೇ? ಇಲ್ಲವೇ? ಮತ್ತು ಯಾಕೆ?

ಸುಳಿವು: ನೂರು ಸಿಂಹಗಳ ಬದಲು ಒಂದೇ ಸಿಂಹ ಇರುತ್ತಿದ್ದರೆ ಏನಾಗುತ್ತಿತ್ತು ಕಲ್ಪಿಸಿ. ಆಮೇಲೆ ಎರಡು ಸಿಂಹಗಳಿದ್ದರೆ ಏನಾಗುತ್ತಿತ್ತು ಕಲ್ಪಿಸಿ. ಸಿಂಹಗಳು ಸಮಸಂಖ್ಯೆಯಲ್ಲಿದ್ದರೆ ಅಥವಾ ಬೆಸಸಂಖ್ಯೆಯಲ್ಲಿದ್ದರೆ (ಕುರಿಮರಿ ಯಾವಾಗಲೂ ಒಂದೇ ಇರುವುದು) ಏನಾದರೂ ವಿಭಿನ್ನ ಫಲಿತಾಂಶ ಇದೆಯೋ ವಿಶ್ಲೇಷಿಸಿ!

ಉತ್ತರ ಗೊತ್ತಾದರೆ ತಿಳಿಸಲು ಅಥವಾ ಗೊತ್ತಾಗದಿದ್ದರೆ ತಿಳಿಯಲು [email protected] ವಿಳಾಸಕ್ಕೆ ಪತ್ರ ಬರೆಯುತ್ತೀರಲ್ಲಾ !?


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X