ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣ ವಿಷಯದ ಬಗ್ಗೆ ಸಣ್ಣ ಜಿಜ್ಞಾಸೆ

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

ಈವಾರ ಒಂದು ಪ್ರಶ್ನೆಯಿಂದಲೇ ಆರಂಭಿಸೋಣ. ಪ್ರಶ್ನೆ ಗಹನವಾದ ವಿಚಾರದ್ದೇನೂ ಅಲ್ಲ , ವೆರಿ ಸಿಂಪಲ್‌. ಕನ್ನಡ ಭಾಷೆಯಲ್ಲಿ ತೀರಾ ಸಾಮಾನ್ಯ ನಾಮವಿಶೇಷಣವಾದ (adjective) ‘ಸಣ್ಣ’ ಎಂಬ ಪದದ ಅರ್ಥ ಏನು? ಇಷ್ಟು ಸಣ್ಣ ಪ್ರಶ್ನೆಯಾ ಎಂದು ಆಶ್ಚರ್ಯಪಡಬೇಡಿ. ನಿಮ್ಮ ಕನ್ನಡ ಭಾಷಾಜ್ಞಾನದ ಪ್ರಕಾರ ಸಣ್ಣ ಎಂದರೆ ಇಂಗ್ಲಿಷ್‌ನ small ಎಂದೇ ಅಥವಾ thin ಎಂದರ್ಥವೇ? ಹೋಗಲಿ, ಏನೊ ಕನ್ಫ್ಯೂಷನ್‌ ಅನಿಸುತ್ತಿದೆಯೆಂದಾದರೆ ಬಿಡಿ. ಇದನ್ನಾದರೂ ಹೇಳಿ - In terms of ವಿರುದ್ಧಪದಗಳು, ‘ಸಣ್ಣ’ ಎಂದರೆ ‘ದೊಡ್ಡ’ದರ ವಿರುದ್ಧ ಪದವೇ ಅಥವಾ ‘ದಪ್ಪ’ದ ವಿರುದ್ಧ ಪದವೇ?

ಇದೇ ಒಂದು ದೊಡ್ಡ (ಸಣ್ಣ ?) ಜಿಜ್ಞಾಸೆಯಾಗಿ ಕುಳಿತಿದೆ ಅಮೆರಿಕ ರಾಜಧಾನಿ ವಲಯದ ನಮ್ಮ ‘ಖಾಸಾ ಗೆಳೆಯರ ಬಳಗ’ದಲ್ಲಿ. ವಿಷಯ ಇಷ್ಟೆ. ಮೊನ್ನೆ ವಾರಾಂತ್ಯದ ಒಂದು ದಿನ ನಮ್ಮ ಅನೌಪಚಾರಿಕ ಗೆಟ್‌-ಟುಗೆದರ್‌ ಇತ್ತು, ನಾಗೇಶ್‌-ಶಾಲಿನಿಯವರ ಮನೆಯಲ್ಲಿ. ಹಾಜರಿದ್ದ ಇತರರೆಂದರೆ ಸಂಜಯ್‌-ಮೀನಾ ದಂಪತಿ, ನಾನು-ಸಹನಾ, ಮತ್ತು ಇನ್ನೊಬ್ಬ ಅಲ್ಟ್ರಾ ಲವಲವಿಕೆಯ ಮನುಷ್ಯ - ಮೋಸ್ಟ್‌ ಎಲಿಜಿಬಲ್‌ ಬ್ಯಾಚಲರ್‌ - ಪುರುಶೋತ್ತಮ ರಾವ್‌ ಉಡುಪಿ (ನಮ್ಮ ಸರ್ಕಲ್‌ನಲ್ಲಿ ಎಫೆಕ್ಷನೇಟ್ಲಿ ‘ಪುರು’) ಇಷ್ಟು ಮಂದಿ. ಹೀಗೇ ಲೋಕಾಭಿರಾಮ ಹರಟೆಯಲ್ಲಿ ಯಾವುದೋ ಕಂಟೆಕ್ಸ್ಟಲ್ಲಿ ‘ಸಣ್ಣವನಿದ್ದಾಗ ನಾನು ಆ ಸಿನೆಮಾ ನೋಡಿದ್ದೆ...’ ಅಂತ ಪುರು ಹೇಳಿದ. ‘ಸಣ್ಣವನಿದ್ದಾಗ?? ಅಂದ್ರೆ ಈಗೇನು ದಪ್ಪ ಆಗಿದ್ದೀಯಾ!?’ ಎಂದು ನಾಗೇಶ್‌ ಮತ್ತು ಸಂಜಯ್‌ ಪ್ರಶ್ನೆ. ಅವರೆನ್ನುವುದು ‘ಚಿಕ್ಕವನಿದ್ದಾಗ’ ಅಂತ ಹೇಳಬೇಕು. ಸಣ್ಣ ಎಂದರೆ thin, weak, lean ಅರ್ಥದಲ್ಲಿ ಮಾತ್ರ ಉಪಯೋಗಿಸೋದು.

ಇದು ನನಗೂ ಹೊಸಗನ್ನಡ! ಪುರುನಂತೆಯೇ ಉಡುಪಿ/ದ.ಕ ಮೂಲದ ನನಗೂ ಗೊತ್ತಿರುವುದು ‘ಸಣ್ಣ’ ಎಂದರೆ small ಎಂದೇ ಹೊರತು thin ಎಂದಲ್ಲ. ಆದರೆ ಒಳಹೊಕ್ಕು ನೋಡಿದರೆ ಇಂಟೆರೆಸ್ಟಿಂಗ್‌ ಆಗಿದೆ ಈ ಪ್ರಾದೇಶಿಕ ವ್ಯತ್ಯಾಸ. ಅವತ್ತು ಅಲ್ಲಿ ನಾನು ಮತ್ತು ಪುರು ಬಿಟ್ಟರೆ ಉಳಿದವರೆಲ್ಲ ಮೈಸೂರು-ಬೆಂಗಳೂರು ಮೂಲದವರು (ನನ್ನ ಧರ್ಮಪತ್ನಿ ಮತ್ತು ಅತ್ತೆ ಕೂಡ!). ಕರಾವಳಿ ಕರ್ನಾಟಕದ ‘ಪುಸ್ತಕ ಕನ್ನಡ’ವನ್ನು ಡಿಫೆಂಡ್‌ ಮಾಡಲು ಇದ್ದವರು ನಾನೂ ಪುರು ಇಬ್ಬರೇ.

ಶುರುವಾಯ್ತು ಸಣ್ಣ ವಿಷಯದ ಮೇಲೆ ಸ್ವಾರಸ್ಯಕರ ವಾಗ್ವಾದ!

ಸಣ್ಣ ಎಂದರೆ ಥಿನ್‌. ಹಾಗೆಯೇ ‘ದೊಡ್ಡ’ದರ ವಿರುದ್ಧ ಪದ ‘ಚಿಕ್ಕ’ ಹೊರತು ‘ಸಣ್ಣ’ ಅಲ್ಲ. ಈ ವಾದವನ್ನು ಸಮರ್ಥಿಸಲು ಅವರು ಹೇಳುವುದೇನೆಂದರೆ ಗುರುಶಿಷ್ಯರು ಸಿನೆಮಾದ ಚಿತ್ರಗೀತೆಯಲ್ಲಿ ‘ದೊಡ್ಡವರೆಲ್ಲ ಜಾಣರಲ್ಲ... ಚಿಕ್ಕವರೆಲ್ಲ ಕೋಣರಲ್ಲ....’ ಎಂದಿದೆ, ಸಣ್ಣವರೆಲ್ಲ ಕೋಣರಲ್ಲ ಅಂತ ಇಲ್ಲವಲ್ಲ ! ದೊಡ್ಡದಲ್ಲದ್ದು ಚಿಕ್ಕದು.

ಮತ್ತೆ ‘ಸಣ್ಣ’ ಸಮರ್ಥನೆಗೆ ಅವರ ಹಾಡು ಬೂತಯ್ಯನ ಮಗ ಅಯ್ಯು ಚಿತ್ರದ ‘ಮಲೆನಾಡ ಹೆಣ್ಣ ಮೈಬಣ್ಣ ಬಲುಚೆನ್ನ ಆ ನಡು ಸಣ್ಣ ನಾ ಮನಸೋತೆನೇ ಚಿನ್ನ...’ ಹೌದಲ್ಲಾ , ತುಂಬ ಕನ್ವಿನ್ಸಿಂಗ್‌ ಆಗಿವೆ ಎರಡೂ ಉದಾಹರಣೆಗಳು! (ಆಫ್‌ಕೋರ್ಸ್‌ ‘ಸಣ್ಣನಡು’ ಎಂಬುದರ ಬಗ್ಗೆ ವಿಸ್ತೃತ ವಿಶ್ಲೇಷಣೆ is beyond the scope of ವಿಚಿತ್ರಾನ್ನ :-))

ಓಕೆ, ಚಿತ್ರಗೀತೆಗಳ ಆಧಾರದಲ್ಲಿ ಲೈನ್‌ ಎಂಡ್‌ ಲೆನ್ತ್‌ನಲ್ಲಿ ಕರಾರುವಾಕ್ಕಾಗಿ ಬೌಲಿಂಗ್‌ ಮಾಡಿ ನಮ್ಮಿಬ್ಬರ ವಿಕೆಟ್‌ ಉರುಳಿಸಬಹುದೆಂದು ಈ ಮೈಸೂರು-ಬೆಂಗಳೂರಿಗರು ಅಂದುಕೊಂಡಿದ್ದರೆ ಅವರು ಅಂಡರ್‌-ಎಸ್ಟಿಮೇಟ್‌ ಮಾಡಿದಂತೆಯೇ. (ಅಂದಹಾಗೆ ಈ ಲೇಖನವನ್ನು ಓದುತ್ತಿರುವವರಲ್ಲಿ ಒರಿಜಿನಲಿ ಮೈಸೂರು-ಬೆಂಗಳೂರು ಪ್ರಾಂತದವರು ಅನೇಕಾನೇಕ ಮಂದಿ ಇದ್ದಾರೆ; ಅವರನ್ನು ವೃಥಾ ಕೆಣಕಿದಂತೆ ಆಗಬಾರದು, ಲೇಖನದಲ್ಲಿ ವಿಷಯವನ್ನು ಡೆಲಿಕೇಟಾಗಿ ಹ್ಯಾಂಡಲ್‌ ಮಾಡಬೇಕು ಅನ್ನುವಷ್ಟು ‘ತಿರುಳು’ ನನ್ನ ತಲೆಯಲ್ಲಿದೆಯೆಂದುಕೊಂಡಿದ್ದೇನೆ).

ಸಣ್ಣ ಎಂದರೆ small ಎಂದರ್ಥವೇ ಹೊರತು thin ಅಲ್ಲಾ ಎಂಬ ನಮ್ಮ ವಾದವನ್ನು ಪುಷ್ಟೀಕರಿಸಲು ಎಷ್ಟು ಒಳ್ಳೆಯ ಉದಾಹರಣೆ ಸಿಕ್ತು ಅಂತೀರಾ? ಸಣ್ಣವರಿದ್ದಾಗ (ಚಿಕ್ಕವರಿದ್ದಾಗ?) ಪಠ್ಯಪುಸ್ತಕದಲ್ಲಿ ‘ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು... ಎತ್ತಿಕೊಳಲು ಹೋದರದಕೆ ಕೋಪ ಬರುವುದು...’ ಹಾಡನ್ನು ನಾವೆಲ್ಲ ಓದಿಲ್ಲವೇ? ಮಗು ಥಿನ್ನಾಗಿ ಸಣಕಲಾಗಿ ಬೆನ್ನಿಗೆ ಹೊಟ್ಟೆ ತಾಗಿಕೊಂಡಂತಿದೆ ಎಂಬರ್ಥದಲ್ಲಿ ಅದು ಬರೆದಿರುವುದೇ? ಇಲ್ಲವಲ್ಲ ! ಮುದ್ದಾದ, ಅಂದಚಂದದ, ಕಿಲಕಿಲನಗೆಯ ಸಣ್ಣ ಮಗುವಿನ ತುಂಟತನದ ಬಗ್ಗೆ ಸೊಗಸಾಗಿ ಬರೆದ ಶಿಶುಗೀತವದು (ಇದರ ಕವಿ ಯಾರೆಂಬುದು ಸದ್ಯಕ್ಕೆ ಮರೆತುಹೋಗಿದೆ ನನಗೆ; ನಿಮಗೆ ಗೊತ್ತಿದ್ದರೆ ತಿಳಿಸಿ).

ಊಹೂಂ, ನರ್ಸರಿ ರೈಮಿನ ಈ ಬಾಣ ನಾಟಲಿಲ್ಲ ಅವರಿಗೆ. ಅದು ಪ್ರಾಥಮಿಕ ಪಠ್ಯದಲ್ಲಿ ಪ್ರಾಸ-ಗ್ರೀಸಕ್ಕೆ ಉಪಯೋಗಿಸಿದ್ದಿರಬಹುದು ಎಂದುಬಿಟ್ಟರು ಕರ್ನಾಟಕ ರಾಜಧಾನಿ ಮತ್ತು ಸಾಂಸ್ಕೃತಿಕ ರಾಜಧಾನಿಗಳಲ್ಲಿ ಹುಟ್ಟಿಬೆಳೆದವರು! ಒಟ್ಟಿನಲ್ಲಿ ನಮ್ಮ ಸರ್ಪಾಸ್ತ್ರವನ್ನು ‘ಮಟಾಷ್‌’ ಮಾಡಿಬಿಟ್ಟರು ದಿವ್ಯತಾತ್ಸಾರದ ಗರುಡಾಸ್ತ್ರದಿಂದ :-(

ಹೊರಟಿತು ನಮ್ಮ ಬತ್ತಳಿಕೆಯಿಂದ ಎರಡನೇ ಬಾಣ, ನಮ್ಮೆಲ್ಲರ ನೆಚ್ಚಿನ ಪುರಂದರದಾಸರ ರೆಫರೆನ್ಸ್‌. ‘ಯಾದವ ನೀ ಬಾ ಯದುಕುಲ ನಂದನ....’ ಕೀರ್ತನೆಯ ಒಂದು ಚರಣದಲ್ಲಿ ದಾಸರು ‘ಕಣ ಕಾಲಂದುಗೆ ಘಲು ಘಲುರೆನುತಲಿ... ಝಣ ಝಣ ವೇಣು ನಾದದಲಿ... ಚಿಣಿಕೋಲು ಚೆಂಡು ಬುಗರಿಯನಾಡುವ... ಸಣ್ಣ ಸಣ್ಣ ಗೋವಳರೊಡಿಗೂಡಿ ಬಾರೋ...’ ಎಂದಿದ್ದಾರೆ. ಬಾಲಕೃಷ್ಣನ ಓರಗೆಯ ಇತರ ಗೋವಳ ಬಾಲಕರು - ಸಣ್ಣ ಪ್ರಾಯದವರು; ಚಿಣ್ಣಿಕೋಲು, ಚೆಂಡು, ಬುಗರಿ ಆಡುವವರು - ಅವರೆಲ್ಲ ‘ಕಡ್ಡೀ ಪೈಲ್ವಾನ’ರಾಗಿದ್ದರೆಂದು ಪುರಂದರದಾಸರು ಖಂಡಿತವಾಗಿಯೂ ಧ್ವನಿಸಲಿಲ್ಲ. ಸಣ್ಣ ಎಂದರೆ small. ಪುರಂದರದಾಸರು ಹೇಳಿದ ಮೇಲೆ ಮುಗೀತು.

ಈ ಅಗ್ನ್ಯಾಸ್ತ್ರಕ್ಕೆ ಅವರ ಬಳಿ ಉತ್ತರವಿರಲಿಕ್ಕಿಲ್ಲವೆಂದುಕೊಂಡಿದ್ದೆವು ನಾನು ಮತ್ತು ಪುರು. ಆಗ ಬಂದದ್ದು ವರುಣಾಸ್ತ್ರ. ನಂದಗೋಕುಲದಲ್ಲಿರುತ್ತ ಬಾಲಕೃಷ್ಣ ಎಷ್ಟು ಪೋಕರಿಯಾಗಿದ್ದ, ಗೋಕುಲದ ಮನೆಗಳಿಗೆಲ್ಲ ನುಗ್ಗಿ ಬೆಣ್ಣೆ ಕದ್ದು ಮುಕ್ಕಿ ದಷ್ಟಪುಷ್ಟನಾಗಿದ್ದ , ಉಳಿದ ಗೋವಳರಿಗೆಲ್ಲ ಬೆಣ್ಣೆಯಂತೂ ಇಲ್ಲ , ಕೃಷ್ಣನೊಟ್ಟಿಗೆ ಕದಿಯಲು ಹೋಗುವಾಗ ಸಿಕ್ಕಿಬಿದ್ದು ಗೊಲ್ಲತಿಯರಿಂದ ಬೆನ್ನಿಗೆ ದೊಣ್ಣೆ - ಅಷ್ಟೇ. ಹಾಗಾಗಿ ಅವರೆಲ್ಲ ಸಣಕಲು-ಬಡಕಲಾಗಿದ್ದರೆಂಬುದನ್ನೇ ದಾಸರು ‘ಸಣ್ಣ ಸಣ್ಣ ಗೋವಳರೊಡಗೂಡಿ ಬಾರೊ...’ ಎಂಬ ಲೈನಲ್ಲಿ ಸೂಚಿಸಿರುವುದಂತೆ!

ಇದು ಒಳ್ಳೇ ಕತೆಯಾಯ್ತಲ್ಲಾ! ಇದರ ಬಗ್ಗೆ ಒಂದು ಸಣ್ಣ ಕತೆಯನ್ನೇ ಬರೆಯಬಹುದಾದಷ್ಟಾಯಿತಲ್ಲಾ !

ಓಹ್‌, ಅಲ್ಲಿ ಸಿಕ್ತು ನಮಗೊಂದು ಪಾಯಿಂಟು. ‘ಸಣ್ಣಕತೆ’ ಎಂದರೇನೆಂದು ಹೇಳಿ? ಇಂಗ್ಲಿಷ್‌ನ short story ಎಂಬ ಸಾಹಿತ್ಯಪ್ರಕಾರವೇ ಕನ್ನಡದಲ್ಲಿ ‘ಸಣ್ಣ ಕತೆ’ ಆದದ್ದಲ್ಲವೇ? ಅದಕ್ಕೇನೂ thin story ಅನ್ನುವುದಿಲ್ಲ ತಾನೆ? ಕನ್ನಡದ ಆಸ್ತಿ , ಸಣ್ಣಕತೆಗಳ ಜನಕ ಎಂಬ ಖ್ಯಾತಿಯ ಮಾಸ್ತಿಯವರ ಆ ಸಾಹಿತ್ಯಪ್ರಕಾರವನ್ನು ‘ದುರ್ಬಲ’ ಎನ್ನುವುದೇ? ಒಂದೇ ಒಂದು ಪುಟದ ಸಣ್ಣ ಕತೆಯಲ್ಲೂ ಒಂದು ಪ್ರಬಲ, ಗಂಭೀರ thick plot ಇರಬಹುದಲ್ಲ ! ಹಾಗಾಗಿ ಸಣ್ಣ ಅಂದರೆ ಸ್ಮಾಲ್‌, ಚಿಕ್ಕ ಅಂದರೂ ಅದೇ. ಆದರೆ ಸಣ್ಣ = ಥಿನ್‌ ಎಂಬುದನ್ನು ಮಾತ್ರ ಎಷ್ಟಕ್ಕೂ ಒಪ್ಪೋದಿಲ್ಲ ನಾವು ಕರಾವಳಿಯವ್ರು.

ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನದ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರಬಹುದು. ಯಕ್ಷಗಾನದ ಮಹಾನ್‌ ಕಲಾವಿದರಲ್ಲೊಬ್ಬರಾದ ಶಂಕರನಾರಾಯಣ ಸಾಮಗರನ್ನು ‘ದೊಡ್ಡ ಸಾಮಗ’ ಎಂತಲೂ ಮತ್ತು ಕಿರಿಯ ಸೋದರ, ಇನ್ನೊಬ್ಬ ಶ್ರೇಷ್ಠ ಕಲಾವಿದ ರಾಮದಾಸ ಸಾಮಗರನ್ನು ‘ಸಣ್ಣ ಸಾಮಗ’ ಎಂದೇ ಜನರು ಗುರುತಿಸುವುದು. ‘ಫಿಸಿಕಲ್‌ ಬಿಲ್ಟ್‌’ನಲ್ಲಿ ಇಬ್ಬರೂ ಕಟ್ಟುಮಸ್ತಾಗಿ ಅಚ್ಚುಕಟ್ಟಾಗಿದ್ದವರು. ಯಾರೊಬ್ಬರೂ ತುಲನಾತ್ಮಕವಾಗಿ ದಪ್ಪವೂ ಅಲ್ಲ ಸಪೂರವೂ ಅಲ್ಲ. ಈ ಸಂದರ್ಭದಲ್ಲೂ ಸಣ್ಣ ಎಂದರೆ younger, offspring ಎಂದರ್ಥೈಸಬಹುದೇ ವಿನಃ ‘ಕೃಶಕಾಯ’ವಲ್ಲ.

ದಾಸಸಾಹಿತ್ಯ, ಯಕ್ಷಗಾನದ ಅಬ್ಬರದ ಮಾತುಗಳಿಂದ ಸೋಲಿಸಿಬಿಟ್ಟೆವಾ ಈ ‘ಘಟ್ಟದ ಮೇಲಿನವರ’ನ್ನು? ಹೌದು ಎನ್ನಲಾರೆವು, ಯಾಕೆ ಗೊತ್ತೇ? ಗೂಗಲ್‌.ಕಾಂನಲ್ಲಿ sanna, kannada ಎಂಬ ಎರಡು keywords ಉಪಯೋಗಿಸಿ ಹುಡುಕಿದಾಗ ಪ್ರಮುಖವಾದ ಎರಡು ಪುಟಗಳು ನಮ್ಮ ವಾದಕ್ಕೆ ವಿರುದ್ಧವಾಗಿ ಉದಾಹರಣೆಯಾಗಿ ಕಾಣಿಸಿಕೊಂಡಿವೆ.

ಒಂದು: ನಮ್ಮ ಬರಹಬ್ರಹ್ಮ ಶೇಷಾದ್ರಿವಾಸು ಅವರು ಬರಹ ತಂತ್ರಾಂಶದ ಬಗ್ಗೆ ಬರೆದಿರುವ ಸಹಾಯಪುಟಗಳಲ್ಲಿ ‘ದಪ್ಪ ಅಕ್ಷರಗಳು’ ಮತ್ತು ‘ಸಣ್ಣ ಅಕ್ಷರಗಳು’ ಎಂದು ವರ್ಗೀಕರಿಸಿದ್ದಾರೆ. ವಾಸು ಬೆಂಗಳೂರಲ್ಲಿ ಹುಟ್ಟಿ ಬೆಳೆದವರು. ಅವರ ಪ್ರಕಾರ ‘ದಪ್ಪ’ಕ್ಕೆ ವಿರುದ್ಧ ಪದ ‘ಸಣ್ಣ’. ನೋಡಿ- (http://www.baraha.com/html_help/baraha/quick_start.htm)

ಇನ್ನೊಂದು: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯವರ ವೆಬ್‌ಸೈಟ್‌ನಲ್ಲಿನ ಒಂದು ಪುಟ. ಅದೂ ‘ಕನ್ನಡ ಕಲಿಕೆ’ಯ ಬಗ್ಗೆ ! ಇಲ್ಲಿದೆ ನೋಡಿ ಆ ಪುಟ : http://www.karnatakatourism.org/html/karnataka/speak_kannada1.htm). ಅನ್ಯಭಾಷೆಯ ಪ್ರವಾಸಿಗರಿಗೆ ಕರ್ನಾಟಕದಲ್ಲಿ ಕನ್ನಡ ಮಾತಾಡಬೇಕಾಗಿ ಬರುತ್ತದೆಯೆಂದು ಪ್ರವಾಸೋದ್ಯಮದವರಿಗೆ ಯಾವ ಭೂಪ ಹೇಳಿದ್ದಾನೊ. ಆದರೂ ಕನ್ನಡ ಕಲಿಸುವ ಭರದಲ್ಲಿ ಇಲಾಖೆಯು ಹೇಳುತ್ತದೆ: Big = ದೊಡ್ಡದು; small = ಚಿಕ್ಕದು; narrow = ಸಣ್ಣ !

* * *

ಈಗ ನೀವೇ ಹೇಳಿ. ಸಣ್ಣ ಎಂದರೆ = ‘ಸ್ಮಾಲ್‌’ ಎಂದೇ ಅಥವಾ = ‘ಥಿನ್‌’ ಎಂದೇ? ಸಣ್ಣ ಮಟ್ಟಿಗಾದರೂ ‘ಥಿನ್‌’ಕಿಸಿ ಬರೆಯಿರಿ! ವಿಳಾಸ : [email protected]


ಮುಖಪುಟ

ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X