• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಗಸ್ವರ - ಶ್ರುತಿ ಮಧುರ ಸ್ಮೃತಿ ಅಮರ...

By Staff
|
Srivathsa Joshi *ಶ್ರೀವತ್ಸ ಜೋಶಿ

Nagaswara Mangalavadyaಮದುವೆ ಆಗಿದೆಯೇ?

ನಿಮ್ಮನ್ನೇ ಕೇಳ್ತಿರೋದು! ನಿಮ್ಮ ಉತ್ತರ ‘ಹೌದು’ ಎಂದಾದರೆ ಒಂದು ಕ್ವಿಕ್‌ ಫ್ಲಾಷ್‌ಬ್ಯಾಕ್‌ನಲ್ಲಿ ಈಗೊಮ್ಮೆ ನಿಮ್ಮ ಮದುವೆಯ ದಿನಕ್ಕೆ ವಾಪಸಾಗಿ. ಅಥವಾ, ಮದುವೆಯಾಗದಿದ್ದವರು ಒಂದೋ ನಿಮ್ಮ ಮದುವೆಯ ದಿನವನ್ನು ಊಹಿಸಿಕೊಳ್ಳಿ ಇಲ್ಲವೆ ನೀವು ಹಾಜರಿದ್ದ ಯಾವುದೇ ಮದುವೆ ಸಮಾರಂಭವನ್ನು ಕಲ್ಪಿಸಿಕೊಳ್ಳಿ. ಸಡಗರ ಸಂಭ್ರಮ, ಬಂಧು-ಬಳಗದ ಕಲರವ, ಪಟ್ಟೆ-ಪೀತಾಂಬರ-ಒಡವೆಗಳ ಅಬ್ಬರ, ಮಲ್ಲಿಗೆಯ ಘಮಘಮ, ಪಾಕಶಾಲೆಯಿಂದ ಪರಿಮಳ, ಪುರೋಹಿತರ ಮಂತ್ರಘೋಷ .. ಸ್ಮೃತಿಪಟಲದಲ್ಲಿ ಒಂದೊಂದಾಗಿ ಮೂಡಿ ಬರುತ್ತಿವೆ ತಾನೆ? ಇನ್ನೂ ಯಾವುದೋ ಒಂದು ಮೆನ್ಷನ್‌ ಆಗಿಲ್ಲವಲ್ಲ !? ಹೌದು, ‘ಗಟ್ಟಿಮೇಳ ಗಟ್ಟಿಮೇಳ...’ ಎಂದು ಪುರೋಹಿತರ ಸನ್ನೆಯಾಗುತ್ತಲೇ ತಾರಕಸ್ವರದಲ್ಲಿ ಮೊಳಗುವ ಮಂಗಳವಾದ್ಯ ‘ನಾಗಸ್ವರ’. ಅದೇ, ಮದುವೆಯ ಓಲಗ!

ಮದುವೆಗೂ ಮಂಗಳವಾದ್ಯಕ್ಕೂ ಎಷ್ಟು ಅವಿನಾಭಾವ ಸಂಬಂಧವೆಂದರೆ ಮದುವೆಯ ಕರೆಯೋಲೆಯಲ್ಲೂ ಸಹಿತ ಗಣೇಶನಾಗಲಿ, ಶಿವ-ಪಾರ್ವತಿಯಾಗಲಿ ಅಥವಾ ಇಷ್ಟದೈವದ ಚಿತ್ರದ ಜತೆಯಲ್ಲೇ ಓಲಗದ ಚಿತ್ರವೂ ಇದ್ದರೇನೇ ಅದಕ್ಕೊಂದು ಶೋಭೆ, ಸಾರ್ಥಕತೆ (ಈಗ ಹೊಸಹೊಸ ವಿನ್ಯಾಸದ ಕರೆಯೋಲೆಗಳಲ್ಲಿ ಅದೆಲ್ಲ ಎಲ್ಲಿ ಅಂತ ಕೇಳಬೇಡಿ). ಚಲನಚಿತ್ರಸಂಗೀತದಲ್ಲೂ ಅಷ್ಟೇ, ಮದುವೆಯ ದೃಶ್ಯ-ಸನ್ನಿವೇಶವನ್ನು ಪರಿಣಾಮಕಾರಿಯಾಗಿ ಧ್ವನಿಸುವ ತಾಕತ್ತಿರುವುದು ನಾಗಸ್ವರ ಓಲಗಕ್ಕೆ ಮಾತ್ರ. ನಾಗಸ್ವರ ವಾದ್ಯಸಂಗೀತವನ್ನು ಬಳಸಿರುವ ಕನ್ನಡ ಚಿತ್ರಗೀತೆಗಳ ದೊಡ್ಡ ಪಟ್ಟಿಯನ್ನೇ ಮಾಡಬಹುದು. ಚಿತ್ರಗೀತೆಗಳ ಮಾತೇಕೆ, ಇತ್ತೀಚೆಗೆ ಒಂದು ಕನ್ನಡ ಸಿನೆಮಾ ‘ಗಟ್ಟಿಮೇಳ’ ಎಂಬ ಹೆಸರಿನದೇ ಬಂದಿದೆ.

ಚಿತ್ರಗೀತೆಯೆಂದಾಗ ರೇಡಿಯಾ ನೆನಪಾಯ್ತು. ದಕ್ಷಿಣಭಾರತದ ಆಕಾಶವಾಣಿ ಕೇಂದ್ರಗಳೆಲ್ಲ ಬೆಳಗಿನ ಪ್ರಸಾರವನ್ನು ಆರಂಭಿಸುವುದು ನಾಗಸ್ವರವಾದನದ ಮಂಗಳಧ್ವನಿಯ ಮೂಲಕ (ಧಾರವಾಡ ಮತ್ತು ಅದಕ್ಕಿಂತ ಉತ್ತರದ ಕಡೆಯ ಕೇಂದ್ರಗಳಾದರೆ ನಾಗಸ್ವರದ ಬದಲು ಅದರ ದಾಯಾದಿ ಶಹನಾಯ್‌ ವಾದನ). ದಿನಾ ಬೆಳಿಗ್ಗೆ ಮಂಗಳಧ್ವನಿ ಕೇಳಿರದಿದ್ದರೂ ದೀಪಾವಳಿ ಹಬ್ಬದಲ್ಲಿ ನರಕಚತುರ್ದಶಿಯಂದು ಬೆಳಿಗ್ಗೆ ನಾಲ್ಕೂವರೆ ಗಂಟೆಗೆ ರೇಡಿಯಾದಲ್ಲಿ ನಾಗಸ್ವರ ಕೇಳಿಬರುತ್ತಿದ್ದಾಗಲೇ ಅಮ್ಮನಿಂದ ಮೈಗೆ ಎಣ್ಣೆಹಚ್ಚಿಸಿಕೊಂಡು ಹಂಡೆತುಂಬಾ ಬಿಸಿಬಿಸಿನೀರಿನ ಅಭ್ಯಂಗಮಾಡಿಸಿಕೊಂಡು ದೊಡ್ಡವರಾದದ್ದಲ್ಲವೆ ನಾವೆಲ್ಲ ? ಹಾಗೆಯೇ ದೇವಸ್ಥಾನಗಳಲ್ಲಿ ವಿಶೇಷಪೂಜೆ-ಜಾತ್ರೆ-ಉತ್ಸವಗಳಲ್ಲೂ ನಾಗಸ್ವರವನ್ನು ಕೇಳಿಯೇ ಇರುತ್ತೇವೆ. ಕೆಲವು ದೊಡ್ಡದೊಡ್ಡ ದೇವಾಲಯಗಳ ನಿತ್ಯಪೂಜೆಯಲ್ಲಿ ದಿನವಿಡೀ ಬೇರೆಬೇರೆ ವಿಧಿವಿಧಾನಗಳು ಜರುಗುತ್ತಿದ್ದಾಗ ಬೇರೆಬೇರೆ ರಾಗಗಳಲ್ಲಿ (ಇದಕ್ಕೆ ಮಲ್ಲಾರಿ ಎನ್ನುವುದು) ನಾಗಸ್ವರದಾಲಾಪನೆ ನಡೆಯುತ್ತಿರಬೇಕು. ಒಟ್ಟಿನಲ್ಲಿ ನಾಗಸ್ವರ ಎಂಬುದು ನಮಗೆಲ್ಲ ಗೊತ್ತಿರುವ ಸಂಗತಿಯೇ.

ಹಾಗಾದರೆ ಬನ್ನಿ ಆಲಿಸಿ. ಜೀವನಪ್ರೀತಿಯ ವಸ್ತು-ವಿಷಯ-ವೈವಿಧ್ಯ ವಿಶ್ಲೇಷಣೆಯ ವಿಚಿತ್ರಾನ್ನದಲ್ಲಿ ಈ ವಾರ : ನಾಗಸ್ವರ - ಶ್ರುತಿ ಮಧುರ ಸ್ಮೃತಿ ಅಮರ...

ಸಂಗೀತ ಸಂಸ್ಕೃತಿಯ ಹರಿಕಾರ

ದಕ್ಷಿಣಭಾರತೀಯ ಸಂಗೀತ ಸಂಸ್ಕೃತಿಯ ಹರಿಕಾರ ನಾಗಸ್ವರ. ಧಾರ್ಮಿಕ ಆಚರಣೆಗಳಲ್ಲಿ (ವಿಶೇಷವಾಗಿ ದೇವಸ್ಥಾನಗಳಲ್ಲಿ), ಉತ್ಸವಾದಿ ದೈವಿಕ ಹಬ್ಬಗಳಲ್ಲಿ , ವಿವಾಹವೇ ಮೊದಲಾದ ಶುಭಕಾರ್ಯಗಳಲ್ಲಿ ನಾಗಸ್ವರದ ಅನುಪಸ್ಥಿತಿಯನ್ನು ಊಹಿಸುವುದೂ ಅಸಾಧ್ಯ. ದೈವಾಂಶ ಮತ್ತು ತನ್ಮೂಲಕ ಪೂಜ್ಯತೆ ಇರುವುದರಿಂದಲೇ ಅದು ಮಂಗಳವಾದ್ಯ. ಆದರೆ ಅದೇವೇಳೆಗೆ ಅದು ಜನಸಾಮಾನ್ಯರಿಗೂ ಸಂಗೀತವನ್ನಾಲಿಸುವ ಅವಕಾಶ ಕಲ್ಪಿಸುವುದರಿಂದ ನಿಜ ಅರ್ಥದಲ್ಲಿ ಜನಾನುರಾಗಿ ಸಂಗೀತವಾದ್ಯ. ಇತರೆ ಸಂಗೀತವಾದ್ಯಗಳ ಕಲಾವಿದರಿಗೆ ಮತ್ತು ರಸಿಕ ಶ್ರೋತೃಗಳಿಗಿರಬಹುದಾದ ಒಂದು ಮಿಥ್ಯಪ್ರತಿಷ್ಠೆ ನಾಗಸ್ವರದ ವಿಷಯದಲ್ಲಿ ಕಾಣದು. ಅಂದರೆ ಶಾಸ್ತ್ರೀಯ ಸಂಗೀತದ ಪಂಡಿತರೂ ಪಾಮರರೂ ಆನಂದಿಸುವಂತಿರುವುದು ನಾಗಸ್ವರದ ಹಿರಿಮೆ.

ಇದನ್ನು ನೀವು ಗಮನಿಸಿರಬಹುದು - ಕೊಳಲು, ವೀಣೆ, ಪಿಟೀಲು ಮುಂತಾದ ಸಂಗೀತವಾದ್ಯಗಳ ಪ್ರಸ್ತಾಪವೆತ್ತಿದಾಗ ನಿಮಗೆ ಹೆಚ್ಚೆಂದರೆ ಆಯಾಯ ವಾದ್ಯಗಳ ವಿಖ್ಯಾತ-ನಿಷ್ಣಾತ ಕಲಾವಿದರ ನೆನಪಾದೀತು, ನೀವು ಆಲಿಸಿದ ಒಂದು ಸಂಗೀತಕಛೇರಿ ನೆನಪಾಗಬಹುದು ಅಥವಾ ನಿಮ್ಮ ನೆಚ್ಚಿನ ಒಂದು ಧ್ವನಿಮುದ್ರಿಕೆ ನೆನಪಾಗಬಹುದು. ಆದರೆ ‘ನಾಗಸ್ವರ’ ಎಂದೊಡನೆ ಒಂದು ಸಮಗ್ರ ಉತ್ಸವ ವೈಭವದ ವಾತಾವರಣ (festive mood) ನಿಮ್ಮ ಕಣ್ಣಿಗೆ ಕಟ್ಟುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ನಾಗಸ್ವರ ಒಂದು ಹೊರಾಂಗಣ ಸಂಗೀತವಾದ್ಯ. ಮಿಕ್ಕ ಸಂಗೀತವಾದ್ಯಗಳನ್ನೆಲ್ಲ ನಾವು ರೇಡಿಯಾ-ಟಿವಿಯಲ್ಲಿ , ಧ್ವನಿಮುದ್ರಿಕೆಯಲ್ಲಿ , ಸಭಾಗೃಹಗಳಲ್ಲಿ ನಡೆವ ಕಛೇರಿಗಳಲ್ಲಿ ಆನಂದಿಸಬಹುದು, ನಾಗಸ್ವರ ಹಾಗಲ್ಲ. ದೇವಸ್ಥಾನದ ಪ್ರಾಂಗಣದಲ್ಲಿ , ಮದುವೆ ಚಪ್ಪರದಲ್ಲಿ ಅದನ್ನು ‘ಲೈವ್‌’ ಆಗಿ ಕೇಳುವುದಕ್ಕಿರುವ ಖದರೇ ಬೇರೆ. ಅದಕ್ಕೆ ಸಾಟಿಯಾದುದೇ ಇಲ್ಲ. ನಿಮಗೆ ಗೊತ್ತೇ, ನಾಗಸ್ವರದ ಒಂದು ಹೆಗ್ಗಳಿಕೆಯೆಂದರೆ, ಧ್ವನಿವರ್ಧಕವಿಲ್ಲದೇ ಸುಮಾರು 3-4 ಮೈಲುಗಳ ವಿಸ್ತೀರ್ಣಕ್ಕೆ ಕೇಳಿಸುವಷ್ಟು ಶಬ್ದಸಾಮರ್ಥ್ಯದ ಪ್ರಪಂಚದ ಏಕೈಕ ವಾದ್ಯ ಅದು!

ನಾಗಸ್ವರ ಮತ್ತು ತವಿಲ್‌ (ಡೋಲು) ಶಿವ-ಶಕ್ತಿಯರಿದ್ದಂತೆ. ಒಂದನ್ನು ಬಿಟ್ಟು ಇನ್ನೊಂದಿಲ್ಲ. ನಾಗಸ್ವರ ಮೇಳದಲ್ಲಿ ಸಾಮಾನ್ಯವಾಗಿ ಒಬ್ಬ ಪ್ರಧಾನ ವಾದಕ (ಆತ ನುಡಿಸುವ ವಾದ್ಯಕ್ಕೆ ಏಳು ತೂತುಗಳಿರುತ್ತವೆ), ಇನ್ನೊಬ್ಬ ‘ಓಟ್ಟು’ವಾದಕ (ಆತ ನುಡಿಸುವ ವಾದ್ಯ ನೋಡಲಿಕ್ಕೆ ನಾಗಸ್ವರದಂತೆಯೇ ಅದಕ್ಕಿಂತಲೂ ಸ್ವಲ್ಪ ಉದ್ದವೇ ಇರುತ್ತದೆಯಾದರೂ ಅದಕ್ಕೆ ಒಂದೇ ತೂತು - ಅದು ಕೇವಲ ಶ್ರುತಿ ಸಾಥಿಗೆ), ಒಬ್ಬರು ಅಥವಾ ಇಬ್ಬರು ತವಿಲ್‌ ವಾದಕರು ಮತ್ತೊಬ್ಬ ತಾಳ ಹಾಕುವವನು. ನಾಗಸ್ವರ ವಾದಕ ತನ್ನ ವಾದ್ಯವನ್ನು ನುಡಿಸುವಾಗಲೇ ಆಕಡೆ-ಈಕಡೆಗೆ ಅದನ್ನು ಓಲಾಡಿಸುವುದನ್ನು ನೀವು ಗಮನಿಸಿದ್ದೀರೊ ಇಲ್ಲವೊ. ಅದರ ಹಿಂದೆ ಒಂದು ಭೌತಶಾಸ್ತ್ರ ತತ್ವವಿದೆ. Doppler Effect ಎಂಬುದರ ಬಗ್ಗೆ ಓದಿದ್ದು ನೆನಪಿದ್ದರೆ, ಶಬ್ದದ ಮೂಲವು ಚಲನೆಗೊಳಗಾದಾಗ ಆ ಶಬ್ದಕ್ಕೆ ಉಂಟಾಗುವ ಹೊಸರೂಪವನ್ನದು ವಿವರಿಸುತ್ತದೆ.

ನಾಗಸ್ವರ? ನಾದಸ್ವರ?

Managiripettai Krishnan playing Nagaswaraಮಧುರ ನಾದ ಹೊಮ್ಮಿಸುವ ಈ ಮಂಗಳವಾದ್ಯದ ಹೆಸರು ‘ನಾದಸ್ವರ’ ಸರಿಯೆ ಅಥವಾ ‘ನಾಗಸ್ವರ’ ಸರಿಯೆ? ಎರಡೂ ಬಳಕೆಯಲ್ಲಿವೆಯಾದರೂ ಕಟ್ಟಾಸಂಪ್ರದಾಯವಾದಿಗಳು ‘ನಾಗಸ್ವರ’ವೇ ಸರಿ ಎನ್ನುತ್ತಾರೆ. ವಾದವನ್ನು ಪುಷ್ಟೀಕರಿಸಲು ಅವರು ಹೇಳುವುದು : ಮೂಲತಃ ಹಾವನ್ನಾಡಿಸುವ ಪುಂಗಿಯೇ ಆವಿಷ್ಕಾರಗೊಂಡು ಈ ವಾದ್ಯದ ರಚನೆಯಾದದ್ದು. ನಾಗನಿಗೆ ಹೆಡೆಯಾಡಿಸಲು ಪುಂಗಿಯ ಸ್ವರ - ಹಾಗಾಗಿ ನಾಗಸ್ವರ. ಇನ್ನೊಂದು ಪುರಾವೆಯಾಗಿ, ಮುತ್ತುಸ್ವಾಮಿದೀಕ್ಷಿತರು ತನ್ನ ಆರಾಧ್ಯದೈವ ತ್ಯಾಗರಾಜಸ್ವಾಮಿಯ ವಸಂತೋತ್ಸವ ವೈಭವವನ್ನು ವಿವರಿಸುತ್ತ ‘ತ್ಯಾಗರಾಜ ಮಹಾಧ್ವಜಾರೋಹ...’ ಎಂಬ ಕೀರ್ತನೆಯ ಅನುಪಲ್ಲವಿಯಲ್ಲಿ ‘ಆಗಮ ಸಿದ್ಧಾಂತ ಪ್ರತಿಪಾದ್ಯಮ್‌... ಆನಂದ ಚಂದ್ರಶೇಖರ ವೇದ್ಯಮ್‌... ನಾಗಸ್ವರಮದ್ದಲಾದಿ ವಾದ್ಯಮ್‌...’ ಎಂದಿದ್ದಾರೆ ಎಂದು ಉದಾಹರಿಸುತ್ತಾರೆ ‘ನಾಗಸ್ವರ’ವೇ ಸರಿಯಾದ ಪದ ಎಂದು ಪ್ರತಿಪಾದಿಸುವವರು. ಆದರೆ ನಾದ ಎನ್ನುವುದೂ ಸಂಗೀತಕ್ಕೆ ಸಂಬಂಧಿಸಿದ್ದೇ ಪದವಾದ್ದರಿಂದ ‘ನಾದಸ್ವರ’ ಕೂಡ ಸಮಂಜಸವಾಗಿಯೇ ಇದೆ ಎಂಬ ಅಭಿಪ್ರಾಯ ಹಲವರದು. ಹೋಗಲಿ ಬಿಡಿ, ಗ ಇದ್ದರೂ ದ ಇದ್ದರೂ ಅವೆರಡೂ ಸಪ್ತಸ್ವರಗಳೇ ತಾನೆ, ಹೊರಹೊಮ್ಮುವುದು ಸುಸ್ವರವೇ ತಾನೆ ಎಂದು ತೃಪ್ತಿಪಟ್ಟುಕೊಳ್ಳೋಣ ಪಾಮರರಾದ ನಾವು!

ನಾಗಸ್ವರ ಮತ್ತು ಶಾಸ್ತ್ರೀಯಸಂಗೀತ

ನಾಗಸ್ವರದಲ್ಲಿ ರಾಗಾಲಾಪನೆಯನ್ನು ಬೇರಾವ ಸಂಗೀತವಾದ್ಯಗಳಿಗಿಂತಲೂ ಹೆಚ್ಚಾಗಿ ಸಾಧಿಸಲಿಕ್ಕಾಗುತ್ತದೆಯೆನ್ನುತ್ತಾರೆ. ತೋಡಿ ಇತ್ಯಾದಿ ಕೆಲವು ರಾಗಗಳನ್ನು ನಾಗಸ್ವರದಲ್ಲಿ ಕೆಳುವುದೇ ಒಂದು ಸೊಗಸು ಎನ್ನುವವರಿದ್ದಾರೆ. ನಾಗಸ್ವರವನ್ನಾಲಿಸಿ ಕಲಿತ ಹಾಡುಗಾರಿಕೆಯ ಕಲಾವಿದ ತನ್ನ ಧ್ವನಿಯ ಏರಿಳಿತವನ್ನು (ಮಾಡ್ಯುಲೇಷನ್‌) ಬಹುಮಟ್ಟಿಗೆ ವಿಸ್ತರಿಸಿಕೊಳ್ಳಬಲ್ಲ ಎಂಬ ಮಾತನ್ನು ಹಿರಿಯ ಸಂಗೀತ ವಿದ್ವಾಂಸರೂ ಒಪ್ಪುತ್ತಾರೆ. ಪ್ರಖ್ಯಾತ ವಿದುಷಿ ಗಾನಕೋಗಿಲೆ ಎಂ ಎಸ್‌ ಸುಬ್ಬುಲಕ್ಷ್ಮಿಯವರು ತನ್ನ ಬಾಲ್ಯದ ಬಗ್ಗೆ ಮಾತಾಡುವಾಗ ಒಂದುಕಡೆ ಹೇಳಿಕೊಂಡಿದ್ದಾರೆ: ಮಧುರೈಯಲ್ಲಿ ಮೀನಾಕ್ಷಿ ದೇವಾಲಯದ ಬೀದಿಯಲ್ಲೇ ಅವರ ಮನೆಯಿತ್ತಂತೆ. ತಾಯಿ ಷಣ್ಮುಖವಡಿವು ವೀಣಾವಾದಕಿಯಾಗಿದ್ದರು; ಅಜ್ಜಿ ಅಕ್ಕಮ್ಮಾಳ್‌ ಒಬ್ಬ ಗಾಯಕಿ. ಹೀಗೆ ಮನೆಯಲ್ಲೆಲ್ಲ ಸಂಗೀತದ ವಾತಾವರಣ. ದೇವಸ್ಥಾನದ ಉತ್ಸವ-ಮೆರವಣಿಗೆಗಳೆಲ್ಲ ಮನೆಯ ಮುಂದಿನಿಂದಲೇ ಹಾದುಹೋಗುತ್ತಿದ್ದುವು. ಉತ್ಸವದ ನಾಗಸ್ವರವಾದಕರೂ ಇವರ ಮನೆಯ ಮುಂದೆ ಸ್ವಲ್ಪ ಹೆಚ್ಚುಹೊತ್ತು ನಿಂತು (ಸಂಗೀತವಿದ್ವಾಂಸ ಕುಟುಂಬದವರಿಂದ ಮೆಚ್ಚುಗೆಗಳಿಸಲು) ಮುನ್ನಡೆಯುತ್ತಿದ್ದರಂತೆ. ಪುಟ್ಟಹುಡುಗಿ ಕುಂಜಮ್ಮ (ಸುಬ್ಬುಲಕ್ಷ್ಮಿ) ಮೇಲೆ ನಾಗಸ್ವರವಾದನ ಬಹಳ ಪರಿಣಾಮಬೀರಿತು. ನಾಗಸ್ವರದಲ್ಲಿ ಮಾತ್ರ ಸಾಧ್ಯವಾಗುವ ಕೆಲವು ಗಮಕಗಳು, ಪ್ರಯೋಗಗಳು ಸುಬ್ಬುಲಕ್ಷ್ಮಿಯವರ ಗಾಯನದಲ್ಲಿ ಗಾಢವಾಗಿ ಕಂಡುಬರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ.

ಸಂಗೀತದಲ್ಲಿ ಬರುವ ಅರ್ಧ-ಕಾಲು ಸ್ವರಗಳನ್ನು ಕೊಳಲಿನಲ್ಲಾದರೆ ಬೆರಳುಗಳಿಂದ ತೂತುಗಳನ್ನು ಅರ್ಧ ಮುಚ್ಚಿ ಅರ್ಧ ತೆರೆದು ಮಾಡುವುದರ ಮೂಲಕ ಮೂಡಿಸಬಹುದು. ಆದರೆ ನಾಗಸ್ವರದಲ್ಲಿ ಅದನ್ನೂ ಉಸಿರಿನ ಹಿಡಿತದಲ್ಲಿಯೇ ಮಾಡಬೇಕಾಗುತ್ತದಂತೆ. ಅದಕ್ಕಾಗಿಯೇ ಸುದೃಢ ಶರೀರ ಬೇಕು ನಾಗಸ್ವರವಾದನಕ್ಕೆ. ಈ ಕಾರಣದಿಂದಾಗಿಯೇ ಪ್ರಾಯಶಃ ಬಹುತೇಕ ಕಲಾವಿದರೆಲ್ಲ ಗಂಡಸರೇ (ಬೆರಳೆಣಿಕೆಯ ಕೆಲ ಮಹಿಳಾ ವಾದಕಿಯರೂ ಇದ್ದಾರೆ). ನಾಗಸ್ವರ ‘ಚಕ್ರವರ್ತಿ’ ಟಿ.ಎನ್‌ ರಾಜರತ್ನಂ ಪಿಳ್ಳೈ, ಕಾರೈಕುರುಚಿ ಪಿ ಅರುಣಾಚಲಂ, ನಾಮಗಿರಿಪೇಟ್ಟೈ ಕೃಷ್ಣನ್‌, ಸೇತುರಾಮನ್‌-ಪೊನ್ನುಸ್ವಾಮಿ ಸಹೋದರರು - ಹೀಗೆ ಖ್ಯಾತನಾಮರನೇಕರು ತಮಿಳುನಾಡು ಮೂಲದವರು. ಶೇಕ್‌ ಚಿನ್ನಾ ಮೌಲಾ ಸಾಹೇಬ್‌ ಆಂಧ್ರಪ್ರದೇಶದಲ್ಲಿ ಹುಟ್ಟಿದ ಮುಸ್ಲಿಂ ಆದರೂ ತಮಿಳ್ನಾಡಿನ ಶ್ರೀರಂಗಂನಲ್ಲಿ ರಂಗನಾಥನ ಪರಮಭಕ್ತನಾಗಿ ಬಾಳಿದ ನಾಗಸ್ವರಕಲಾವಿದ. ನಾಗಸ್ವರವಾದನ ಅವರನ್ನು ಎಷ್ಟು ‘ಹಿಂದು’ವನ್ನಾಗಿಸಿತ್ತೆಂದರೆ ಅವರು ರಾಮಾಯಣ-ಮಹಾಭಾರತಗಳನ್ನೆಲ್ಲ ಓದುತ್ತಿದ್ದರಂತೆ! ಬೆಂಗಳೂರಿನ ಪಿ.ಕೋದಂಡರಾಮ್‌ ಕೂಡ ಪ್ರಖ್ಯಾತ ನಾಗಸ್ವರವಾದಕ. ಕಳೆದ ವರ್ಷ ವಾಷಿಂಗ್ಟನ್‌ನಲ್ಲಿ ಅವರ ಕಾರ್ಯಕ್ರಮ ಏರ್ಪಾಡಾಗಿತ್ತು.

ವಿದೇಶದಲ್ಲಿ ನಾಗಸ್ವರ ವಾದನ!

Nagaswara artisits at a concertಉಡುಪಿಹೊಟೆಲ್‌ಗಳು ವಿಶ್ವದೆಲ್ಲೆಡೆಯಲ್ಲೂ ಪಸರಿಸಿವೆ, ಭಾರತೀಯ ದೇವಸ್ಥಾನಗಳು, ಭಾಷಾವಾರು ಸಂಘಟನೆಗಳು, ಚಲನಚಿತ್ರ ಮಂದಿರಗಳು ಅಮೆರಿಕದಂಥ ದೇಶದ ಸಣ್ಣಪುಟ್ಟ ನಗರಗಳಲ್ಲೂ ತಲೆಯೆತ್ತಿವೆ ಎಂದ ಮೇಲೆ ನಮ್ಮ ಸಂಸ್ಕೃತಿಯ ಇತರ ಅಂಶಗಳಾದ ಸಾಹಿತ್ಯ-ಸಂಗೀತ-ನೃತ್ಯಗಳು ಹಿಂದುಳಿದಿರುತ್ತವೆಯೇ? ಭಾರತೀಯ ಸಂಗೀತದ (ಹಿಂದುಸ್ಥಾನಿ ಮತ್ತು ಕರ್ನಾಟಕ ಶಾಸ್ತ್ರೀಯ) ಮಹಾನ್‌ ಕಲಾವಿದರನೇಕರು ಅಮೆರಿಕದ ವಿವಿಧ ನಗರಗಳಲ್ಲಿ ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಅಮೆರಿಕದ ಪಿಟ್ಸ್‌ಬರ್ಗ್‌, ಕ್ಲೀವ್‌ಲ್ಯಾಂಡ್‌, ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್‌ನ ದೇವಸ್ಥಾನಗಳಲ್ಲೆಲ್ಲ ವಿಶೇಷ ಸಂದರ್ಭಗಳಲ್ಲಿ ಭಾರತದಿಂದ ನಾಗಸ್ವರ ವಾದಕರನ್ನು ಕರೆಸಿ ಧಾರ್ಮಿಕ ಕಾರ್ಯಕ್ರಮಗಳ ವೇಳೆ ನಾಗಸ್ವರ ವಾದನ ನಡೆದದ್ದಿದೆ; ಉತ್ಸವಕ್ಕೆ ಪಕ್ಕಾ ಭಾರತೀಯ ಕಳೆ ಬಂದದ್ದಿದೆ. ಹಾಗೆ ಬಂದ ಪ್ರವಾಸಿ ಕಲಾವಿದರು ಸಂಗೀತಕಛೇರಿಗಳನ್ನೂ ನಡೆಸಿದ್ದಿದೆ.

ವಿಶೇಷವಾಗಿ ನಾಗಸ್ವರ ವಾದಕರು ವಿದೇಶಕ್ಕೆ ಬಂದಾಗ ನಮ್ಮ-ನಿಮ್ಮ ಊಹೆಗೆ ನಿಲುಕದ ಕೆಲ ಪರಿಸ್ಥಿತಿಗಳು ಈ ಪ್ರವಾಸಿ ಕಲಾವಿದರಿಗೆ ಎದುರಾಗುತ್ತವೊ ಏನೊ. ವಿದೇಶಕ್ಕೆ ಬಂದಾಗ ಸಂಗೀತಕಚೇರಿಗಳೇನೊ ಒಳ್ಳೆಯ acoustic settings ಇರುವ ಸಭಾಗೃಹಗಳಲ್ಲಿ ನಡೆಯಬಹುದು. ಆದರೆ ಸಾಮಾನ್ಯವಾಗಿ ಇಷ್ಟಮಿತ್ರರ ಮನೆಗಳಲ್ಲಿ ಅಥವಾ ಹೊಟೆಲ್‌ಗಳಲ್ಲಿ ಉಳಕೊಳ್ಳುವ ಈ ಕಲಾವಿದರು ರಿಹರ್ಸಲ್‌ ಮಾಡಬೇಕೆಂದರೆ ಎಷ್ಟು ತೊಂದರೆ ಅಲ್ಲವೆ?

ಅಂತೂ ವಿದೇಶಿ ನೆಲದಲ್ಲಿದ್ದೂ ನಾಗಸ್ವರ ನಿನಾದ ಆಗೊಮ್ಮೆ ಈಗೊಮ್ಮೆ ಕೇಳಿಬರುತ್ತದೆ. ಅದು ದೇವಸ್ಥಾನದ ಕಾರ್ಯಕ್ರಮವಿರಬಹುದು, ‘ಮದ್ರಾಸ್‌ ಪ್ಯಾಲೇಸ್‌’ ರೆಸ್ಟೊರೆಂಟ್‌ನಲ್ಲಿ ಸಿಡಿ-ಪ್ಲೇಯರ್‌ನಿಂದ ಹೊಮ್ಮುತ್ತಿರುವ ಸಂಗೀತವಿರಬಹುದು. ಅಥವಾ ಯಾವುದೋ ಅತಿಥಿಕಲಾವಿದನ ರಿಹರ್ಸಲ್‌ ಇರಬಹುದು. ಆ ಧ್ವನಿ ಎಲ್ಲಿಂದಲೋ ಕೇಳಿ ಬಂದಾಗ ಮತ್ತೊಮ್ಮೆ ‘ನೆನಪುಗಳ ಮೆರವಣಿಗೆ’ಗೆ ಚಾಲನೆ ದೊರಕುತ್ತದೆ. ಈ ಪರಿಯಲ್ಲಿ ನೆನಪುಗಳ ಮೆರವಣಿಗೆಯನ್ನು ಪದೇಪದೇ ಹೊರಡಿಸುತ್ತಿರುತ್ತದೆ ಎಂಬ ಆರೋಪ ಹೊತ್ತಿರುವ(?) ವಿಚಿತ್ರಾನ್ನ ಅಂಕಣಕ್ಕೆ ಇವತ್ತಿನದೊಂದು ಸೇರ್ಪಡೆ. ನಾಗಸ್ವರ ಬಗೆಗಿನ ಈ ಲೇಖನವನ್ನೂ ಓದುತ್ತಿದ್ದಷ್ಟೂ ಹೊತ್ತು ನಿಮಗರಿವಿಲ್ಲದಂತೆಯೇ ನಾಗಸ್ವರ ವಾದನದ ಮಧುರಧ್ವನಿಯನ್ನು ಕೇಳುತ್ತಿದ್ದೆವೇನೊ ಎಂದು ನಿಮ್ಮ ಮನಸ್ಸಿಗೆ ಅನಿಸಿದೆಯಿರಬಹುದು. ಹೌದೇ ಅಲ್ಲವೇ ತಿಳಿಸಿ.

ಹಾಗೆಯೇ, ಲೇಖನವನ್ನು ಆರಂಭಿಸಲು ಬಳಸಿದ ಪ್ರಶ್ನೆಗೆ ಉತ್ತರಿಸುತ್ತೀರಾದರೂ ಪರವಾ ಇಲ್ಲ ! ನಿಮ್ಮ ಉತ್ತರ ‘ಇಲ್ಲ’ ಎಂದಾದರೆ ಶೀಘ್ರದಲ್ಲೇ ವಾಲಗ ಊದಿಸೋಣವಂತೆ...:-)

srivathsajoshi@yahoo.com

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more