ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದುವೆಕನ್ನಡಬಿಂದುಕಾಮಿನಲ್ಲಿ ಅರಳಿದ ಒಂದು ಪ್ರೇಮ !

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

ನಮ್ಮೆಲ್ಲರ ನೆಚ್ಚಿನ ಕನ್ನಡವಾಹಿನಿ www.thatskannada.comಗೆ ಅಚ್ಚಕನ್ನಡದಲ್ಲಿ ‘ಅದುವೆಕನ್ನಡ ಬಿಂದುಕಾಮ’ ಎಂದು ನಾಮಕರಣ ಮಾಡಿದವರು ಡಾ।ಮೈ.ಶ್ರೀ.ನಟರಾಜ. ಅವರ ಮಧುಚಂದ್ರ-ಸಿರಿಕೇಂದ್ರ ಕವನಸಂಕಲನದ ಟೈಟಲ್‌-ಸಾಂಗ್‌ ‘ಅಯ್ಯೋ ಮುಗಿಯಿತೇ ಮಧುಚಂದ್ರ...’ದಲ್ಲಿ ಅಮೆರಿಕದಲ್ಲಿ ಡಾಟ್‌ ಕಾಮ್‌ ಬಗ್ಗೆ ಪ್ರಸ್ತಾಪಿಸುವಾಗ ‘ಬಿಂದುಕಾಮ’ ಎಂಬ ಹೊಸ ಪದಪ್ರಯೋಗವನ್ನವರು ಮಾಡಿದ್ದರು; ಈಗ ದಟ್ಸ್‌ಕನ್ನಡ.ಕಾಮ್‌ಗೂ ಅದನ್ನೇ ವಿಸ್ತರಿಸಿ, ‘ಅದುವೆಕನ್ನಡಬಿಂದುಕಾಮಿನಲಿ ಬರೆವೆನಂಕಣವ...’ ಎನ್ನುತ್ತಾರೆ ಕನ್ನಡ ಮತ್ತು ದಟ್ಸ್‌ಕನ್ನಡದ ಮೇಲಿನ ತನ್ನ ಪ್ರೀತಿ-ಅಭಿಮಾನಗಳಿಂದ.

ಇಂತಿರ್ಪ ಅದುವೆಕನ್ನಡ...ದ ಸುಂದರ ಸ್ವಚ್ಛಂದ ಅಂಗಳದಲ್ಲಿ ಅರಳಿದ ಸ್ನಿಗ್ಧಪ್ರೇಮದ ಒಂದು ಪ್ರಸಂಗವನ್ನು ಸೊಗಸಾಗಿ ವರ್ಣಿಸುವ ಉದ್ದೇಶವನ್ನಿಟ್ಟುಕೊಂಡು ಇವತ್ತಿನ ವಿಚಿತ್ರಾನ್ನದ ತಯಾರಿ. ಕತೆಯನ್ನು ಮೊದಲಿಂದ ಶುರುಮಾಡುತ್ತೇನೆ, ಹೇಗಿದೆ ನೋಡಿ.

* * *

An online Love storyನಿಮಗೆಲ್ಲ ಗೊತ್ತಿರುವಂತೆ ಈ ವಿಚಿತ್ರಾನ್ನ ಅಂಕಣವನ್ನು ಮೆಚ್ಚಿಕೊಂಡವರಲ್ಲಿ ನೀವೂ ಸೇರಿದಂತೆ ತುಂಬಾ ತುಂಬಾ ಮಂದಿ ಇದ್ದಾರೆ. ಅವರಲ್ಲಿ ಒಬ್ಬಾನೊಬ್ಬ, ಕಳೆದ ವರ್ಷ ಅಂದರೆ ಮೇ 9, 2003ರಂದು ಶುಕ್ರವಾರದ ಶುಭಗಳಿಗೆಯಲ್ಲಿ ನನಗೊಂದು ಈಮೈಲ್‌ ಬರೆದಿದ್ದ - ‘ಜೋಶಿ ಸಾರ್‌, ನಿಮ್ಮ ಲೇಖನಗಳು ನನಗೆ ತುಂಬ ಇಷ್ಟ. ನಾನೂ ಕೆಲವು ಹನಿಗವನಗಳನ್ನು ಬರೆದಿದ್ದೇನೆ. ದಟ್ಸ್‌ಕನ್ನಡದಲ್ಲಿ ಪ್ರಕಟಿಸಬಹುದೇ, ಯಾರಿಗೆ-ಹೇಗೆ ಕಳಿಸಬೇಕು?’ ಇತ್ಯಾದಿ ಮಾಹಿತಿಯನ್ನು ಸವಿನಯವಾಗಿ ಕೇಳಿಕೊಂಡಿದ್ದ ತನ್ನ ಈಮೈಲ್‌ನಲ್ಲಿ. ಅವನಿಗೆ ನಾನು ಸಂಪಾದಕರ ಈಮೈಲ್‌ ವಿಳಾಸವನ್ನು ತಿಳಿಸಿ ‘ಬರಹ’ದಲ್ಲಿ ಟೈಪಿಸಿದ ಕವನಗಳನ್ನು ರವಾನಿಸುವಂತೆ ಸಲಹಿಸಿದ್ದೆ. ಜತೆಯಲ್ಲೇ ಕುಶಲೋಪರಿ-ಸ್ನೇಹ ಮುಂದುವರೆಸುವ ಉದ್ದೇಶದಿಂದ ನನ್ನ ಮಾಮೂಲಿ ಅಭ್ಯಾಸದಂತೆ ‘ಅಯ್ಯಾ, ನಿನ್ನ ಊರು (ಈಗ) ಯಾವುದು, ಕರ್ನಾಟಕದಲ್ಲಿ ಎಲ್ಲಿ ಹುಟ್ಟಿ ಬೆಳೆದದ್ದು...?’ ಇತ್ಯಾದಿಯನ್ನೂ ಕೇಳಿ ಆತ್ಮೀಯತೆಯ ವಾತಾವರಣ ಮೂಡಿಸಿದ್ದೆ.

ಆ ಹುಡುಗನಿಗೆ ನನ್ನ ಈಮೈಲ್‌ ಹಿಡಿಸಿತು. ಮರು ಉತ್ತರ ಬರೆದ, ತಾನು ದಾವಣಗೆರೆಯಲ್ಲಿ ಹುಟ್ಟಿ ಬೆಳೆದು ಅಲ್ಲಿನ ಬಿಡಿಟಿ ಇಂಜನಿಯರಿಂಗ್‌ ಕಾಲೇಜಲ್ಲೇ ಬಿ.ಇ ಪದವಿ ಗಳಿಸಿ ಈಗ ಅಮೆರಿಕದಲ್ಲಿ ಸಾಫ್ಟ್‌ವೇರ್‌ ಇಂಜನಿಯರಾಗಿ ಉದ್ಯೋಗದಲ್ಲಿದ್ದೇನೆ... ಇತ್ಯಾದಿ ತನ್ನ ಪ್ರವರವನ್ನು ಅಚ್ಚುಕಟ್ಟಾಗಿ ತಿಳಿಸಿದ. ನಾನೂ ಬಿಡಿಟಿ ಇಂಜನಿಯರಿಂಗ್‌ ಕಾಲೇಜಿನ ಹಳೆವಿದ್ಯಾರ್ಥಿ ಎಂದು ತಿಳಿದ ಮೇಲಂತೂ ನಮ್ಮಿಬ್ಬರ ಸ್ನೇಹಕ್ಕೆ ಇನ್ನೂ ಮೆರುಗು ಬಂತು. ಸರಿ, ಈಮಧ್ಯೆ ಹುಡುಗ ತನ್ನ ಕವನಗಳನ್ನು ನನಗೇ ಕಳಿಸಿದ - ನೀವೇ ಪರಾಮರ್ಶಿಸಿ ಸಂಪಾದಕರಿಗೆ ಕಳಿಸಿ... ಎಂಬ ಕೋರಿಕೆಯಾಂದಿಗೆ. (ಪಾಪ, ನೇರವಾಗಿ ಅವರಿಗೇ ಕಳಿಸುವುದಕ್ಕೆ ಸ್ವಲ್ಪ ಅಳುಕಿತ್ತೋ ಏನೊ). ಹನಿಗವನಗಳು ಕಚಗುಳಿಯಿಡುವಂತೆ ಚೆನ್ನಾಗಿದ್ದುವು, ಪ್ರಕಟಣಯೋಗ್ಯ ಎಂದು ನನಗನ್ನಿಸಿತು. ಒಂದು ಭಾವಚಿತ್ರವನ್ನೂ ಕಳಿಸುವಂತೆ ಅವನಿಗೆ ಬರೆದೆ, ಅದನ್ನೂ ಕಳಿಸಿದ ಪ್ರಾಮಾಣಿಕವಾಗಿ. ಹುಡುಗನ ಮುಖದಲ್ಲಿ ಕಳೆ ಇದ್ದೇಇತ್ತು, ಜತೆಯಲ್ಲೇ ಪ್ರತಿಭೆ-ಲವಲವಿಕೆಗಳೂ ಗೋಚರಿಸಿದವು ನನಗೆ. ಮದುವೆ ಆಗಿರಲಿಕ್ಕಿಲ್ಲ ಎಂಬ ನಂಬಿಕೆಯಿಂದ, ‘ತುಂಬ ಸ್ಮಾರ್ಟ್‌ ಆಗಿ ಕಾಣಿಸುತ್ತಿದ್ದೀಯಪ್ಪಾ ಈ ಫೊಟೋದಲ್ಲಿ... ಯಾರಾದರೂ ಹುಡುಗಿ ಮೆಚ್ಚಿ ಮನಸೋಲಬಹುದು...’ ಎಂದು ಬರೆದಿದ್ದೆ. ನಕ್ಕು ಸುಮ್ಮನಾಗಿದ್ದ ಆ ಹುಡುಗ.

An online Love storyಹನಿಗವನಗಳು ದಟ್ಸ್‌ಕನ್ನಡದಲ್ಲಿ ಪ್ರಕಟವಾದುವು. ಓದುಗರ ಓಲೆಯಲ್ಲಿ ಒಂದೆರಡು ಮೆಚ್ಚುಗೆಯ ಪತ್ರಗಳೂ ಬಂದುವು. ಇನ್ನೂ ಮೂರ್ನಾಲ್ಕು ಕಂತುಗಳನ್ನು ಮೊದಮೊದಲು ನನ್ನ ಮುಖಾಂತರ, ಆಮೇಲೆ ನೇರವಾಗಿ ಸಂಪಾದಕರಿಗೇ ಕಳಿಸಿದ; ಅವೂ ಪ್ರಕಟವಾದುವು. ಕವನಗಳು ಪ್ರಕಟವಾಗಿ ಸ್ಫೂರ್ತಿ, ಆತ್ಮವಿಶ್ವಾಸಗಳನ್ನು ಹೆಚ್ಚಿಸಿಕೊಂಡ ಹುಡುಗ ಒಂದು ಹಾಸ್ಯಪ್ರಬಂಧವನ್ನೂ ಬರೆದು ಕಳಿಸಿದ. ಅದೂ ಪ್ರಕಟವಾಗಿ ಅಪಾರ ಜನಮೆಚ್ಚುಗೆ ಗಳಿಸಿತು! ಆ ಪ್ರಬಂಧದಲ್ಲಿ ತಾನು ಬ್ರಹ್ಮಚಾರಿ, ಈಗಿನ್ನು ಭಾರತಕ್ಕೆ ಹೋಗಿ ಹೆಣ್ಣು ನೋಡಿ ಮದುವೆಯಾಗುವವನಿದ್ದೇನೆ... ಇತ್ಯಾದಿ ಅಂಶಗಳನ್ನೂ ಸರಸವಾಗಿ ಸುಲಲಿತವಾಗಿ ವ್ಯಾಖ್ಯಾನಿಸಿದ್ದ ಆ ಹುಡುಗ.

ಪುರಾಣಗಳಲ್ಲಿ ಗಂಡಿನ ಶೌರ್ಯ-ಸಾಹಸ-ಬಲಪ್ರದರ್ಶನಗಳನ್ನು ನೋಡಿ ‘ಸ್ವಯಂವರ’ ಪದ್ಧತಿಯಲ್ಲಿ ಹೆಣ್ಣು ತನ್ನ ಕೈಹಿಡಿಯುವವನನ್ನು ಆಯ್ದುಕೊಳ್ಳುವ ಕ್ರಮವಿದ್ದದ್ದು ಗೊತ್ತಷ್ಟೆ ನಿಮಗೆ? ಇವತ್ತಿನ ದಿನ ಹೇಗೂ ಖಡ್ಗಕ್ಕಿಂತ ಲೇಖನಿ ಹರಿತ ಎಂಬ ನಾಣ್ನುಡಿ ಇದೆ ತಾನೆ? ಹಾಗೆಯೇ ಆಯಿತು! ಸುಂದರವಾಗಿ, ಮನಸ್ಸಿಗೆ ಆಹ್ಲಾದಕರವಾಗಿ ಬರೆಯುವ ಲೇಖನಿಯುಳ್ಳ ಈ ಹುಡುಗನ ಪ್ರತಿಭೆಗೆ ಮನಸೋತಳು ಒಬ್ಬ (ರಾಜ)ಕುಮಾರಿ ಕನ್ನಡತಿ! ದಟ್ಸ್‌ಕನ್ನಡದಲ್ಲಿ ಪ್ರಕಟವಾದ ಹಾಸ್ಯಪ್ರಬಂಧವನ್ನು ಓದಿ ಮೆಚ್ಚಿದ ಆಕೆ, ಲೇಖಕ-ಬ್ರಹ್ಮಚಾರಿಗೆ ಈಮೈಲ್‌ ಕಳಿಸಿಯೇ ಬಿಟ್ಟಳು. ಇಬ್ಬರಲ್ಲಿ ಸ್ನೇಹ ಮೊಳಕೆಯಾಡೆಯಿತು. ಈಕೆಯೂ ಅಮೆರಿಕದಲ್ಲೇ ಸಾಫ್ಟ್‌ವೇರ್‌ ಉದ್ಯೋಗಿಯಾಗಿರುವುದೂ, ಕರ್ನಾಟಕದಲ್ಲಿ ಮಡಿಕೇರಿಯಲ್ಲಿ ಹುಟ್ಟಿ ಬೆಂಗಳೂರಲ್ಲಿ ಬೆಳೆದವಳು... ಕನ್ನಡ ಓದುವ ಹವ್ಯಾಸ-ಹುಚ್ಚು ಬಹಳ... ಇತ್ಯಾದಿ ಪರಿಚಯವೂ ಆಯಿತು. ನಾಲ್ಕಾರು ಈಮೈಲ್‌ ವಿನಿಮಯದಲ್ಲೇ ಸ್ನೇಹ, ಪ್ರೀತಿಗೆ ತಿರುಗಿತು.

‘ಮನಸ್ಸು ಒಂದಾಯಿತು... ಒಲವೂ ಅರಳಿತು... ಚಿನ್ನಾ ರನ್ನಾ ನೀನೇ ನನ್ನ ಪ್ರಾಣಾ....’ (ಅವು ‘ಬೆಂಕಿಯಲ್ಲಿ ಅರಳಿದ ಹೂವು’ ಚಿತ್ರದ ‘ತಾಳಿ ಕಟ್ಟುವ ಶುಭವೇಳೆ... ಕೈಯಲ್ಲಿ ಹೂವಿನ ಮಾಲೆ...’ ಪದ್ಯದ ಸಾಲುಗಳು) ಎಂದಾಯಿತು. ಹುಡುಗ ಸ್ವಪ್ರತಿಭೆಯಿಂದ ತನ್ನ ಮನದನ್ನೆಯ ಬಗ್ಗೆಯೇ ಕವನಗಳನ್ನು ಬರೆದು ಅವಳಿಗೆ ಕಳಿಸಿ ರಂಜಿಸಿದ. ಅವನು ಬರೆದದ್ದು ಕವನಗಳಾದರೂ ‘ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ... ಬಂದು ನಿಂತೆ ಹೇಗೊ ಏನೊ ನನ್ನ ಮನದ ಗುಡಿಯಲಿ...’ ಎಂದು ಪುಳಕಿತಳಾದಳು ಅವಳು.

An online Love storyಇನ್ನು ಹೆತ್ತವರಿಗೆ ವಿಷಯ ತಿಳಿಸಬೇಕಲ್ಲವೆ? ಎಷ್ಟೆಂದರೂ ಇಬ್ಬರೂ ಸಂಸ್ಕಾರ-ಸಜ್ಜನಿಕೆಯ ಗಾಢ ಹಿನ್ನೆಲೆಯುಳ್ಳವರು. ಹುಚ್ಚುಚ್ಚಾಗಿ ವರ್ತಿಸಿ ದುಡುಕಿನ ನಿರ್ಧಾರ ತೆಗೆದುಕೊಳ್ಳುವಂತಹ ಬಾಲಿಶರಲ್ಲ. ಎರಡೂ ಕಡೆಯ ಹೆತ್ತವರಿಗೆ ಪ್ರಸ್ತಾಪ ಹೋಯಿತು. ಈ ಸಂದರ್ಭದಲ್ಲೇ ಇನ್ನೊಂದು ಚಮತ್ಕಾರ ನಡೆದುಹೋಯಿತು. ದಟ್ಸ್‌ಕನ್ನಡ.ಕಾಮ್‌ನೊಂದಿಗೆ ವಿಷಯ ವಿನಿಮಯ ಮೈತ್ರಿ ಇಟ್ಟುಕೊಂಡಿರುವ ಕನ್ನಡ ದಿನಪತ್ರಿಕೆ ‘ವಿಜಯಕರ್ನಾಟಕ’ದ ಎನ್‌.ಆರ್‌.ಐ ಕಾಲಂನಲ್ಲಿ ಇದೇ ಹಾಸ್ಯಪ್ರಬಂಧವು ಲೇಖಕನ ಭಾವಚಿತ್ರದೊಂದಿಗೆ ಪ್ರಕಟವಾಯಿತು. ತಗೊಳ್ಳಿ, ಇನ್ನೇನು ಬೇಕು ಹುಡುಗನ ಪ್ರತಿಭೆಯ ಸಾಕ್ಷ್ಯಕ್ಕೆ? ಆದರೆ ಲೇಖಕ ಇನ್ನೂ ಬ್ರಹ್ಮಚಾರಿ, ಹುಡುಗಿ ನೋಡಲು ಭಾರತಕ್ಕೆ ಬಂದುಹೋಗುವವನಿದ್ದಾನೆ... ಇತ್ಯಾದಿಯೆಲ್ಲ ಪ್ರಬಂಧದಲ್ಲಿದ್ದುದರಿಂದ ಧಾರವಾಡ, ಮೈಸೂರು, ವಿಜಾಪುರ, ಬೆಂಗಳೂರು ಇತ್ಯಾದಿ ಕರ್ನಾಟಕದ ವಿವಿಧೆಡೆಗಳಿಂದ ಕನ್ಯಾಮಣಿಗಳೂ, ಕನ್ಯಾಪಿತೃಗಳೂ ಹುಡುಗನನ್ನು ಸಂಪರ್ಕಿಸಲು ಯತ್ನಿಸಿದರು. ಅವರೆಲ್ಲರ ಪ್ರಸ್ತಾಪಗಳನ್ನು ನಯವಾಗಿ ತಳ್ಳಿಹಾಕಿದ ನಮ್ಮ ಹುಡುಗ :-) ಈಮಧ್ಯೆ ಈತ ಭಾರತಕ್ಕೆ ಹೋಗಿ ಬಂದದ್ದು ಹೌದು, ಆದರೆ ಅಲ್ಲಿ ಮೂಲ ಉದ್ದೇಶವಾಗಿದ್ದ ‘ಹೆಣ್ಣು ನೋಡುವ’ ಕಾರ್ಯಕ್ರಮವನ್ನಂತೂ ಹಾಕಿಕೊಳ್ಳಲೇ ಇಲ್ಲ!

ಸರಿ, ಇಷ್ಟೆಲ್ಲ ವಿಚಾರ, ಸಮಾಚಾರ, ಬೆಳವಣಿಗೆಗಳು ನನಗೆ ಗೊತ್ತಿರಲಿಲ್ಲ. ಮೊನ್ನೆ ಅಕಾಸ್ಮಾತ್ತಾಗಿ ಯಾಹೂ ಹರಟೆ ಕಿಟಿಕಿಯಲ್ಲಿ ಸಿಕ್ಕಿದ ಹುಡುಗ. ‘ಜೋಶಿಯವರೇ, ನಿಮಗೊಂದು ಸಿಹಿಸುದ್ದಿ ತಿಳಿಸುವುದಿದೆ!’ ಎಂದ. ‘ಇಂಡಿಯಾಕ್ಕೆ ಹೋಗಿ ಬಂದೆಯೇನಪ್ಪಾ, ಹೆಣ್ಣು ನೋಡಿದ್ಯಾ, ಮದುವೆ ಫಿಕ್ಸ್‌ ಆಯ್ತಾ...?’ ಪ್ರಶ್ನೆಗಳ ಬಾಣಗಳನ್ನೆಸೆದೆ ನಾನು. ‘ಇಲ್ಲ, ಯಾವ ಹುಡುಗಿನೂ ಇಷ್ಟ ಆಗಲಿಲ್ಲ, ಆದರೆ ದಟ್ಸ್‌ಕನ್ನಡದಿಂದಾಗಿ ನನಗೊಬ್ಬ ಜೀವನಸಂಗಾತಿ ಸಿಕ್ಕಿದಳು...!’ ಎಂದು ಎಲ್ಲ ವಿವರಗಳನ್ನೂ ಹೇಳಿದ; ಜತೆಯಲ್ಲೇ ನನಗೂ, ದಟ್ಸ್‌ಕನ್ನಡ ಸಂಪಾದಕರಿಗೂ ಕೃತಜ್ಞತೆಗಳನ್ನೂ ಸಲ್ಲಿಸಿದ! ಎಲಾ ಇವನ, ಪರವಾ ಇಲ್ಲವೇ!!? ಬಿಡಿಟಿಯ ಸಾಂಸ್ಕೃತಿಕ ಸ್ಲೋಗನನ್ನೇ ಬಳಸಿ ಹೇಳುವುದಾದರೆ - ‘ಹೊಡೀ ಚಣ್‌ಚಣಾ ತಾಳ ಥೈಯ ತಕ ಧೂಂ...!!!!’

ಖುಷಿ ಆಗುತ್ತದಲ್ಲವೇ ಇಂತಹ ಸಿಹಿಯಾದ ಸುದ್ದಿ-ಸಂಗತಿಗಳನ್ನು ಕೇಳಿ? ಹುಡುಗನಿಗೆ ಅಭಿನಂದನೆಗಳನ್ನು ತಿಳಿಸುತ್ತ ಕೂಡಲೆ ನಾನೊಂದು ಈಮೈಲ್‌ ಬರೆದೆ. ಅದನ್ನು ತನ್ನ ಪ್ರಿಯತಮೆಗೂ ಫಾರ್ವರ್ಡ್‌ ಮಾಡಿ ಆಕೆಯಿಂದಲೂ ಉತ್ತರ ಬರೆಸಿ ಕೃತಾರ್ಥನಾಗಿದ್ದಾನೆ ಆತ! ಅಂತೂ ಇಬ್ಬರೂ ಆನಂದತುಂದಿಲರಾಗಿರುವುದು ಹೌದು.

ಇಲ್ಲಿಯವರೆಗೂ ಈಮೈಲ್‌, ಫೋನ್‌ ಸಂಭಾಷಣೆ ಮಾತ್ರ ವಿನಿಮಯಿಸುತ್ತಿದ್ದ ಈ ಪ್ರೇಮಿಗಳು ಮೊನ್ನೆ ಫೆಬ್ರವರಿ 14ರಂದು ಶನಿವಾರ (ಎಷ್ಟು ಪ್ರಶಸ್ತ ದಿನ!) ಮೊದಲ ಮುಖಾಮುಖಿ ಭೇಟಿ ನಡೆಸಿದ್ದಾರೆ. ಮದುವೆಯಾಗುವ ನಿರ್ಧಾರ ಅಚಲ ಎಂದು ದ್ವಿಪಕ್ಷೀಯ ಮಾತುಕತೆ ನಡೆದಿದೆ. ಮುಂದೆ ಮೇ ಅಥವಾ ಜೂನ್‌ನಲ್ಲಿ ಭಾರತಕ್ಕೆ ಹೋಗಿ ಗುರುಹಿರಿಯರ ಸಮ್ಮುಖದಲ್ಲಿ, ಸಮ್ಮತಿಯಲ್ಲಿ ವಿವಾಹ ಮಹೋತ್ಸವ ಮುಗಿಸಿಕೊಂಡು ಬರುವವರಿದ್ದಾರೆ.

ಸುಮಧುರ ದಾಂಪತ್ಯ ಜೀವನ ಅವರಿಬ್ಬರದಾಗಲಿ ಎಂದು ನಾವೆಲ್ಲರೂ ಮನದಲ್ಲೇ ಹಾರೈಸೋಣ.

* * *

ಖಾಸಗಿತನದ (ಪ್ರೈವೆಸಿ) ಕಾರಣಕ್ಕೆ ಮತ್ತು ವಸ್ತುನಿಷ್ಠತೆಯ ಕಾರಣಕ್ಕೆ ನಾನು ಈ ಯುವಪ್ರೇಮಿಗಳ ಹೆಸರು, ಫೊಟೊ ಅಥವಾ ಈಮೈಲ್‌ಗಳನ್ನು ಲೇಖನದಲ್ಲೆಲ್ಲೂ ಉಪಯೋಗಿಸಿಲ್ಲ. ಮಾತ್ರವಲ್ಲದೆ ಲೇಖನದ ಪ್ರಕಟಣಾಪೂರ್ವ ವೀಕ್ಷಣೆಯನ್ನು ಅವರಿಬ್ಬರಿಗೂ ಕಲ್ಪಿಸಿದ್ದು, ಓಕೆ ಗ್ರೀನ್‌ಸಿಗ್ನಲ್‌ ಪಡೆದ ನಂತರವೇ ನಿಮ್ಮೆಲ್ಲರ ಓದಿಗೆ ಒದಗಿಸಿದ್ದಾಗಿದೆ. ನಿಮ್ಮ ಅಭಿಪ್ರಾಯಗಳನ್ನು ಎಂದಿನಂತೆ [email protected] ವಿಳಾಸಕ್ಕೆ ಬರೆದು ತಿಳಿಸುವಿರಾಗಿ ನಂಬಿದ್ದೇನೆ.


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X