• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಂಗ ನಾಮವೂ ಪುಂಡ್ರ ನಾಮವೂ...!!!

By Staff
|
Srivathsa Joshi *ಶ್ರೀವತ್ಸ ಜೋಶಿ

mUru naama athavaa pamganaama‘ಅವನು ನನಗೆ ಕೈಕೊಟ್ಟ... ಟೋಪಿ ಹಾಕಿದ... ತಿರುಪತಿ ನಾಮ ಎಳೆದ... ಕ್ಷೌರ ಮಾಡಿಸಿದ...’ ಇತ್ಯಾದಿಯನ್ನು ನಾವು ತಥಾಕಥಿತ ಫಲಾನುಭವಿಗಳಿಂದ ಆಗಾಗ ಕೇಳುತ್ತಿರುತ್ತೇವೆ; ಅಥವಾ ಕೆಲವೊಮ್ಮೆ ನಾವೇ ಆ ಫಲಾನುಭವಿಗಳಾಗಿರುವುದೂ ಇದೆ. ‘ತಿರುಪತಿ ನಾಮ ಹಾಕಿದ...’ ಅಂತ ಹಣೆಯ ಮೇಲೆ ಕೈಯ ಮೂರು ಬೆರಳುಗಳನ್ನು ಸಾಂಕೇತಿಕವಾಗಿ ಹಿಡಿದು, ತನಗಾದ ಮೋಸ-ವಂಚನೆಯನ್ನು ತೋಡಿಕೊಳ್ಳುವವರು, ಅಳಲನ್ನು ಹಂಚಿಕೊಳ್ಳುವವರು ಬೇಕಷ್ಟು ಜನ ಸಿಗುತ್ತಾರೆ.

ತಿರುಪತಿ ನಾಮ ಹಾಕಿಸಿಕೊಳ್ಳುವುದಕ್ಕೆ ಇನ್ನೊಂದು ಹೆಸರು ‘ಪಂಗನಾಮ’. ಇದು ಇಂಗ್ಲಿಷ್‌ನ he/she ditched me... ಯಲ್ಲಿನ ditchingಗೆ ಸರಿಸುಮಾರಾದುದು. ಸಣ್ಣಪುಟ್ಟ ಮೋಸ(ಸಮೋಸ?)ದಿಂದ ಹಿಡಿದು ಕೋಟ್ಯಂತರ ರುಪಾಯಿಗಳ ಗುಳುಂ ಹಗರಣಗಳವರೆಗೆ ಪಂಗನಾಮ ಹಾಕುವವರ, ಹಾಕಿಸಿಕೊಳ್ಳುವವರ ವ್ಯಾಪ್ತಿ ಜಗದಗಲವಾದದ್ದು. ಈ ಪರಿಯ ಪಂಗನಾಮದ ವ್ಯಾಖ್ಯಾನವೇ ಈ ವಾರದ ಸಾಮಗ್ರಿ. ಮೂರು ನಾಮದ ಕುರಿತು ನಾಲ್ಕಾರು ಮಾತು. ಎಷ್ಟೆಂದರೂ ಸಂಚಿಕೆ ನಂಬರ್‌ 111ರಲ್ಲಿ ವಿಮರ್ಶೆಗೆ ಇಷ್ಟು ಸೂಕ್ತ ವಿಷಯವಲ್ಲದೆ ಇನ್ಯಾವುದು ಇದ್ದೀತು? ಆದರೆ ಪಂಗನಾಮ ಪಾಯಸಕ್ಕೆ, ಸ್ವಲ್ಪ ಗಾಂಭೀರ್ಯವೂ ಇರಲೆಂದು ಜತೆಯಲ್ಲೇ ನಿಜವಾದ ತಿರುಪತಿ ನಾಮ ಅಥವಾ ಪುಂಡ್ರ ನಾಮದ ಬಗ್ಗೆಯೂ ಒಂದಿಷ್ಟು ವಿವರಣೆ ಇದೆ.

ನಾಮದ ಬಲವೊಂದಿದ್ದರೆ ಸಾಕೊ... ಎನ್ನುತ್ತ ಓದುವಂಥವರಾಗಿ.

* * *

Clever fox ditching a crow...ಪಂಚತಂತ್ರ ಮತ್ತಿತರ ನೀತಿಕಥೆಗಳಲ್ಲಿ ಪಂಗನಾಮ ಹಾಕುವ, ಹಾಕಿಸಿಕೊಳ್ಳುವ ಪ್ರಸಂಗಗಳು ಬೇಕಾದಷ್ಟು ಸಿಗುತ್ತವೆ. ನರಿ, ಕೋತಿ ಇತ್ಯಾದಿ ಪ್ರಾಣಿಗಳು ಅದರಲ್ಲಿ ನಂಬರ್‌ ಒಂದು. ‘ಕಾಕರಾಜ ನೀನು ಈಗ ಹಾಡನೊಂದ ಹಾಡು ಬೇಗ...’ ಎಂದು ಕಾಗೆಯನ್ನು ಹೊಗಳಿ ಅದರ ಬಾಯಿಂದ ರೊಟ್ಟಿಯನ್ನು ಕೆಳಗೆ ಬೀಳಿಸಿದ ನರಿ ಮಾಡಿದ್ದೇನು? ಹಾಗೆಯೇ ಬೆಕ್ಕುಗಳೆರಡರ ರೊಟ್ಟಿಜಗಳವನ್ನು ರೊಟ್ಟಿಯ ಸಮಪಾಲು ಮಾಡಿ ಪರಿಹರಿಸುತ್ತೇನೆ ಎಂದ ಮಂಗ ತಾನೇ ರೊಟ್ಟಿ ತಿಂದು ಮುಗಿಸಿದ್ದು- ಇವೆಲ್ಲ ಪಂಗನಾಮದ ಕ್ಲಾಸಿಕ್‌ ಉದಾಹರಣೆಗಳು. ಚಾಲಾಕಿನ ಪ್ರಾಣಿಯು ಪಾಪದ ಪ್ರಾಣಿಗೆ ಪಂಗನಾಮ ಹಾಕಿಯೇ ಬದುಕೋದು. ಪ್ರಾಣಿಕೋಕದ ಆ ರೀತಿರಿವಾಜು ಮನುಷ್ಯನೆಂಬ ಪ್ರಾಣಿಯ ವಿಷಯದಲ್ಲೂ ಯಥಾವತ್ತಾಗಿಯೇ ಇದೆ - ಪಾಪದ ಮನುಷ್ಯ ಆಗಾಗ ಪಂಗನಾಮ ಹಾಕಿಸಿಕೊಳ್ಳುತ್ತಾನೆ.

ಬೀರ್‌ಬಲ್ಲ ಮತ್ತು ನಮ್ಮ ತೆನಾಲಿರಾಮ ಕೂಡ ಪಂಗನಾಮ ಎಕ್ಸ್‌ಪರ್ಟ್ಸ್‌. ತೆನಾಲಿರಾಮ ಮತ್ತು ಅವನ ಹೆಂಡತಿ ಕಲ್ಲು-ಕಸ ತುಂಬಿದ ಪೆಟ್ಟಿಗೆಯನ್ನು ಬಾವಿಗೆ ದೂಡಲು, ಅವಿತು ಕುಳಿತ ಕಳ್ಳರು ಆ ಬಾವಿನೀರನ್ನೆಲ್ಲ ಖಾಲಿಮಾಡಿ ಕೊನೆಗೂ ಪೆಟ್ಟಿಗೆಯಲ್ಲಿ ಆಭರಣಗಳು ಸಿಗದೇ ಪಂಗನಾಮ ಹಾಕಿಸಿಕೊಂಡ ಕಥೆಯನ್ನೋದಿದ ನೆನಪಿರಬಹುದು ನಿಮಗೆ. ಬೀರ್‌ಬಲ್ಲನಂತೂ ಕೆಲವೊಮ್ಮೆ ಅಕ್ಬರ ಬಾದಶಹನಿಗೇ ಲೈಟಾಗಿ ಪಂಗನಾಮ ಹಾಕುವಷ್ಟು ಚತುರನಾಗಿದ್ದನಂತೆ! ನೀತಿಕಥೆಗಳ ಈ ಪಂಗನಾಮಗಳೆಲ್ಲ ಅಪಾಯದಿಂದ ರಕ್ಷಣೆಯ ಅಥವಾ ಉಪಾಯದಿಂದ ಕಾರ್ಯಸಾಧನೆಯ ಸರಳ ಕ್ರಮಗಳು. ಅವು ಅಷ್ಟೇನೂ ಅಪಾಯಕಾರಿ, ಅಸಹ್ಯವೆಂದೆನಿಸುವುದಿಲ್ಲ.

ಆದರೆ ಈಗ? ಪ್ರಸ್ತುತ ನಮ್ಮ ಸಾಮಾಜಿಕ ರಾಜಕೀಯ ಆರ್ಥಿಕ ಸ್ಥಿತಿಗತಿಗಳಲ್ಲಿ ಪಂಗನಾಮದ ಪಿಡುಗು ಅಷ್ಟಿಷ್ಟಲ್ಲ. ಒಂದೊಂದು ಹಗರಣಗಳ ಹಿಂದೆಯೂ ನಾಮ ಬಳಿವವರ ಮತ್ತು ನಾಮಧಾರಿಗಳಾದವರ ಸಂಖ್ಯೆ ಬಹಳವಿರುತ್ತದೆ. ಹರ್ಷದ್‌ ಮೆಹ್ತಾ (ನಾಮ ಹಾಕಿಸಿಕೊಂಡವರಿಗೆ ಆತ ದುಃಖದ್‌ ಮೆಹ್ತಾ ?), ತೆಹಲ್ಕಾ, ತೆಲ್ಗಿ, ಮೇವು, ಕಾವು, ಕಾವೇರಿ, ಅಲಮಟ್ಟಿ, ರೋಲೆಕ್ಸ್‌, ರಾಬರಿ... ಒಂದೇ ಎರಡೇ? ಇತಿಹಾಸದುದ್ದಕ್ಕೂ ಪಂಗನಾಮಗಳೇ. ಅದೆಲ್ಲ ಏಕೆ, ಈಗ ಮೊನ್ನೆ ಮೊನ್ನೆಯ ಹೊಸ ಸುದ್ದಿ - ಭಸ್ಮನಾಮಧಾರಿ ಸ್ಮಾರ್ತಗುರು ಕಂಚಿ ಶ್ರೀಗಳೇ ಪಂಗನಾಮ ಹಾಕಿಸಿಕೊಂಡರಲ್ಲ !?

ಪಂಗನಾಮ ಎನ್ನುವ ಪದ ಹೇಗೆ ಬಂತು ಅನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ನಾಮ ಹಾಕಿಸಿಕೊಂಡವರನ್ನು ‘ಪೆಂಗ’ರನ್ನಾಗಿಸುವುದರಿಂದ ಆ ಪದ ಬಂದಿರಬಹುದೇನೊ. ಅಥವಾ ಹಿಂದಿಯಲ್ಲಿ ‘ಪಂಗಾ ಕರ್‌ನಾ’ ಅಂತ ಇದೆ, ಹಿಂದಿಯ ‘ಪಂಗಾ’ ಸಹ ಪಂಗನಾಮದ ಮೂಲವಿರಬಹುದು. ಅದೇನೇ ಇರಲಿ, ಪಂಗನಾಮದ ಅಸಹ್ಯ ವಿಚಾರಗಳ ಬಗ್ಗೆ ಕಾಲಕ್ಷೇಪ ಮಾಡುವುದಕ್ಕಿಂತ ಅದರ ನಿಜರೂಪವಾದ ತಿರುಪತಿ ನಾಮ, ಅಂದರೆ ಸಾಕ್ಷಾತ್‌ ತಿರುಪತಿ ತಿಮ್ಮಪ್ಪ ಮತ್ತು ಅವನ ಭಕ್ತರೆಲ್ಲ ಧರಿಸುವ ನಾಮದ ಕಡೆಗೆ ನಮ್ಮ ಫೋಕಸನ್ನು ಶಿಫ್ಟಿಸೋಣ; ಸ್ವಲ್ಪ ಪುಣ್ಯವಾದರೂ ಸಿಗುತ್ತದೆ!

ಊರ್ಧ್ವ ಪುಂಡ್ರ

Vaishnava Devotee with pundra naama‘ತಪಃ ಪುಂಡ್ರಮ್‌ ತಥಾ ನಾಮ ಮಂತ್ರೊ ಯಾಗಶ್ಚ ಪಂಚಮಃ’ - ಎನ್ನುತ್ತವೆ ಪಂಚಸಂಸ್ಕಾರಗಳ ಬಗ್ಗೆ ಸ್ಮೃತಿಶಾಸ್ತ್ರಗಳು. ಗುರುವಿನ ದೀಕ್ಷೆಯಲ್ಲಿ ಶಿಷ್ಯನಿಗೆ ಸಿಗುವ ಐದು ಬಗೆಯ ಸಂಸ್ಕಾರಗಳವು. ಅವುಗಳಲ್ಲೊಂದಾದ ‘ಪುಂಡ್ರ’ ತಿಲಕವು ವಿಷ್ಣು ಮತ್ತು ವೈಷ್ಣವರ ಪವಿತ್ರ ಸಂಕೇತ.

ವೈಷ್ಣವರು ಹಣೆಯಮೇಲೆ ಧರಿಸುವ ನಾಮಕ್ಕೆ ಸಂಸ್ಕೃತದಲ್ಲಿ ‘ಊರ್ಧ್ವ ಪುಂಡ್ರ’ ಎನ್ನುವುದು. ನಾಮವು ಒಟ್ಟು ಮೂರು ರೇಖೆಗಳ ರಚನೆಯಾಗಿದ್ದು ಅಕ್ಕಪಕ್ಕದ ಬಿಳಿ ರೇಖೆಗಳು ವಿಶಿಷ್ಟವಾದ ಮಣ್ಣಿನಿಂದ (ಗೋಪಿಚಂದನ) ಮೂಡಿದರೆ ಮಧ್ಯದ ರೇಖೆಯು ಅರಸಿನದಿಂದ ಅಥವಾ ಕುಂಕುಮದಿಂದ ಬರೆಯಲ್ಪಡುವಂಥದು. ತಮಿಳಿನಲ್ಲಿ (ಮುಖ್ಯವಾಗಿ ತಮಿಳ್‌ ಐಯಂಗಾರರು ತ್ರಿನಾಮಧಾರಿಗಳಾಗಿರುವುದಷ್ಟೆ) ನಾಮದ ಬಿಳಿರೇಖೆಗಳಿಗೆ ‘ತಿರು ಮನ್‌’ (ಪವಿತ್ರ ಮಣ್ಣು) ಎಂದೂ ಮಧ್ಯದ ರೇಖೆಗೆ ‘ಶ್ರೀ ಚೂರ್ಣಂ’ ಎಂದೂ ಹೆಸರು. ಒಟ್ಟಾಗಿ ಅದನ್ನು ತಿರುಮನ್‌ ಅಥವಾ ನಾಮ ಎನ್ನುವುದು. ಹಣೆಯ ಮೇಲೆ ಮಾತ್ರವಲ್ಲದೆ ದೇಹದ ಇತರ ಹನ್ನೊಂದು ಕಡೆಯೂ ಇದೇ ರೀತಿ ಮುದ್ರೆ ಮೂಡಿಸಬೇಕು - ವಿಷ್ಣುವಿನ ಒಂದೊಂದು ಹೆಸರಿಗೆ ಒಂದೊಂದರಂತೆ. ಹಾಗಾಗಿಯೇ ಅದಕ್ಕೆ ‘ನಾಮ’ (ವಿಷ್ಣುವಿನ ಹೆಸರಿನ ಮುದ್ರೆ) ಎನ್ನುವುದು. ಚಿತ್ರದಲ್ಲಿ ನಾಮಧಾರಿ ಸಂಪ್ರದಾಯಸ್ಥ ತಮಿಳು ಐಯಂಗಾರರೊಬ್ಬರನ್ನು ಗಮನಿಸಿ.

Tirupati Balaaji with urdhwa pundra naamaತಿರು ಮನ್‌ ಅಥವಾ ಪವಿತ್ರ ಮಣ್ಣು ಕರ್ನಾಟಕದ ಮೇಲುಕೊಟೆಯಲ್ಲಿ ವಿಪುಲವಾಗಿದೆಯಂತೆ. ಮೇಲುಕೋಟೆ ರಂಗನಾಥ ಸ್ವಾಮಿಯೂ ಸ್ವಾಮಿಯ ಭಕ್ತರೂ ನಾಮಧಾರಿಗಳಾಗಿರುವುದರ ಹಿನ್ನೆಲೆ ಅದು. ನಾಮದ ಎರಡು ಬಿಳಿ ರೇಖೆಗಳೆಂದರೆ ಶ್ರೀಮನ್ನಾರಾಯಣನ ಪಾದಕಮಲಗಳು (ಪುಂಡ್ರ ಎಂಬ ಪದದ ಅರ್ಥ ಕಮಲದ ಹೂವು). ನಡುವಿನ ಕೆಂಪುರೇಖೆ ಶ್ರೀಲಕ್ಷ್ಮಿಯ ಪ್ರತೀಕ. ಹರಿಯ ಚರಣಗಳನ್ನು ಭಕ್ತ ತನ್ನ ಹಣೆಯ ಮೇಲೆ ಇರಿಸಿಕೊಳ್ಳುತ್ತಾನೆ ಎಂಬ ದೈನ್ಯಭಾವದ ಸಂಕೇತ. ಮೊದಲೆಲ್ಲ ವೈಷ್ಣವರು ಕೆಂಪುತಿಲಕವನ್ನು ಮಾತ್ರ ಧರಿಸುತ್ತಿದ್ದರು, ಶ್ರೀ ರಾಮಾನುಜಾಚಾರ್ಯರು ತಿರುಮನ್‌ ರೇಖೆಗಳ ಸಂಪ್ರದಾಯವನ್ನು ಆರಂಭಿಸಿದರು ಎಂದೂ ಪ್ರತೀತಿಯಿದೆ.

ಯಜ್ಞೋ ದಾನಂ ತಪೌ ಹೋಮಃ ಭೋಜನಂ ಪಿತೃ ತರ್ಪಣಮ್‌

ಸರ್ವೇ ಭವಂತಿ ವಿಫಲಾ: ಊರ್ಧ್ವ ಪುಂಡ್ರಂ ವಿನಾಕೃತಾಃ ।।

ಅಂದರೆ, ಊರ್ಧ್ವಪುಂಡ್ರ ಧರಿಸದೆ ಮಾಡಿದ ಯಜ್ಞ, ದಾನ, ತಪಸ್ಸು, ಹೋಮ, ಭೋಜನ, ಪಿತೃ ತರ್ಪಣ ಎಲ್ಲವೂ ವ್ಯರ್ಥ. ನಾಮಧಾರಿಯಾಗಿದ್ದರೆ ಮಾತ್ರ ಮಾಡಿದ ಕೆಲಸಕ್ಕೊಂದು ಸಾರ್ಥಕತೆ, ಧನ್ಯತೆ. ಪುಂಡ್ರನಾಮಕ್ಕೆ ಯೋಗಿಕ ವಿವರಣೆಯೂ ಇದೆ. ಬದಿಯ ಎರಡು ರೇಖೆಗಳು ಇಡಾ ಮತ್ತು ಪಿಂಗಳ ಎಂಬ ಜೀವಪ್ರವಹನ ಕಾಲುವೆಗಳಾದರೆ ನಡುವಿನ ರೇಖೆಯು ಸುಶುಮ್ನ (ಜಾಗೃತಾವಸ್ಥೆಯಲ್ಲಿ ಕುಂಡಲಿನೀ ಶಕ್ತಿ) ನಾಡಿಯ ಪ್ರವಾಹವನ್ನು ಸಂಕೇತಿಸುತ್ತದೆ. ಮೂರೂ ರೇಖೆಗಳು ಒಟ್ಟು ಸೇರಿ ಪ್ರಚಂಡ ಯೋಗಶಕ್ತಿಯನ್ನೂ ಆಧ್ಯಾತ್ಮಿಕತೆಯನ್ನೂ ಮೈಗೂಡಿಸುತ್ತವೆ ಎನ್ನುತ್ತದೆ ಆ ವಿವರಣೆ. ಮೂರು ರೇಖೆಗಳು ತ್ರಿಸ್ಥಿತಿಗಳ ದ್ಯೋತಕವಾಗಿವೆಯೆನ್ನುವವರೂ ಇದ್ದಾರೆ.

ಪುಂಡ್ರನಾಮಕ್ಕಿರುವ ಪಾವಿತ್ರ್ಯತೆ, ಪೂಜ್ಯಭಾವ ಪರಮೋಚ್ಚವಾದುದು; ಪ್ರಶ್ನಾತೀತವಾದುದು!

* * *

Coming back to punಗನಾಮ, ಇದರ ಬಗ್ಗೆ ನಿಮ್ಮ ಅನಿಸಿಕೆ-ಅನುಭವಗಳೇನಾದರೂ ಇದ್ದರೆ, ನೀವು ಯಾರಿಗಾದರೂ ಪಂಗನಾಮ ಹಾಕಿದ್ದು (ಹೈಸ್ಕೂಲಲ್ಲಿ , ಕಾಲೇಜಲ್ಲಿ... ಜಸ್ಟ್‌ ಫಾರ್‌ ಫನ್‌...), ಅಥವಾ ಬೇರೆ ಯಾರಾದರೂ ನಿಮಗೆ ಪಂಗನಾಮ ಹಾಕಿದ್ದು, ಅಥವಾ ಪಂಗನಾಮಾಯಣಕ್ಕೆ ನೀವೊಬ್ಬ ಸಾಕ್ಷಿಯಾದದ್ದು - ಹೀಗೆ ಸ್ವಾರಸ್ಯಕರ ಸಂಗತಿಗಳಿದ್ದರೆ ಬರೆದು ತಿಳಿಸಿ.

‘ಆಯ್ತು ಜೋಶಿಯವರೆ, ಬರೀತೇನೆ...’ ಅಂತ ಹೇಳಿ ಆಮೇಲೆ ಬರಿಯದೆ ನನಗೆ ಪಂಗನಾಮ ಮಾತ್ರ ಹಾಕಬೇಡಿ!

ವಿಳಾಸ - srivathsajoshi@yahoo.com

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more