ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಧ, ಗುರು, ಶುಕ್ರ..ರಾಹು ಕೇತುಪ್ಲೇಸ್‌ಮೆಂಟಿಗೆ ಟೆಲಿಫೋನಿಕ್‌ ಇಂಟರ್‌ವ್ಯೂ...!

By Super
|
Google Oneindia Kannada News

ಇವತ್ತಿನ ಶೀರ್ಷಿಕೆಯನ್ನು ಓದಿದರೆ ನೀವು ಇದು ಸಾಫ್ಟ್‌ವೇರ್‌ ಉದ್ಯಮದಲ್ಲಿ ಸರ್ವೇಸಾಮಾನ್ಯವಾದ 'ಬಾಡಿ ಶಾಪಿಂಗ್‌'ನ ಅವಿಭಾಜ್ಯ ಅಂಗವಾದ ಟೆಲಿಫೋನಿಕ್‌ ಇಂಟರ್‌ವ್ಯೂ ವಿಷಯವಿರಬಹುದೆಂದುಕೊಳ್ಳುತ್ತೀರಿ. ಎಂಡ್‌-ಕ್ಲಯೆಂಟ್‌, ಮಿಡ್ಲ್‌ಮ್ಯಾನ್‌, ಮಿಡ್‌-ವೈಫ್‌ (ಸೂಲಗಿತ್ತಿಯಲ್ಲ, ಅಮೆರಿಕದಲ್ಲಿ ಕೆಲವು ಹೌಸ್‌ವೈಫ್‌ಗಳೂ 1998-99ರ ಬೂಂ ಟೈಮಲ್ಲಿ ಕನ್ಸಲ್ಟೆಂಟ್‌ಗಳ ಪ್ಲೇಸ್‌ಮೆಂಟ್‌ನಲ್ಲಿ ಪಾತ್ರವಹಿಸಿದ್ದುಂಟು!), ಪ್ರೋಜೆಕ್ಟ್‌ ಇರುವುದು ವೆಸ್ಟ್‌ಕೋಸ್ಟ್‌ನಲ್ಲಿ..., ರಿಲೋಕೇಟ್‌ ಆಗುವುದು ಸಾಧ್ಯವೇ..., ಬಿಲ್ಲಿಂಗ್‌ ರೇಟ್‌ ಇಂತಿಷ್ಟು..., ಕಮ್ಯೂಟಿಂಗ್‌ ಎಕ್ಸ್‌ಪೆನ್ಸಸ್‌ ಕೊಡಲಾಗುವುದಿಲ್ಲ... ಇತ್ಯಾದಿತ್ಯಾದಿ ಸಂಗತಿಗಳೆಲ್ಲ ನಿಮ್ಮ ಮನದಲ್ಲಿ (ಅದೂ ನೀವು ಅಥವಾ ನಿಮ್ಮವರಾರಾದರೂ ಒಬ್ಬ ಕನ್ಸಲ್ಟೆಂಟ್‌ಆಗಿದ್ದರೆ ಅಥವಾ ಒಂದಾನೊಂದು ಕಾಲದಲ್ಲಿ ಆಗಿದ್ದಿದ್ದರೆ) ಸಾಲುಸಾಲಾಗಿ ಮೆರವಣಿಗೆಯಾಗಬಹುದು.

ಆದರೆ ತಾಳಿ, ವಿಷಯ ಟೋಟಲೀ ಡಿಫರೆಂಟು! ಓದುತ್ತ ಓದುತ್ತ ನಂತರ ನೀವೇ ತಿಳಿದುಕೊಳ್ಳುವಿರಂತೆ. ಬಟ್‌ ಒಂದು ಮಾತು ನೆನಪಿರಲಿ, ಇವತ್ತಿನ ಶೀರ್ಷಿಕೆಗೂ ವಿಷಯಕ್ಕೂ ನೂರು ಪ್ರತಿಶತ ತಾಲ್‌ಮೇಲ್‌ ಇರುವುದಂತೂ ಹೌದು. ಇಷ್ಟು ಸಾಕು ಪೀಠಿಕೆ, ಮುಂದಿನದು ಸತ್ಯಘಟನೆಯಾಂದರ ಸರಸ ಒಕ್ಕಣಿಕೆ.

ಮೊನ್ನೆ ಮಾರ್ಚ್‌ 6ರ ಶನಿವಾರ. ಅವತ್ತು, ಮೈಸೂರಿಂದ ಮೂರುವಾರಗಳ ಅವಧಿಗೆ ಅಮೆರಿಕೆಗೆ ಬಂದಿದ್ದ ಶಿಕಾರಿಪುರ ಹರಿಹರೇಶ್ವರ ಅವರು ನನ್ನ ಜತೆಗಿದ್ದರು. (ಕ್ಯಾಲಿಫೋರ್ನಿಯಾಕ್ಕೆ ಬಂದವರಾದರೂ ಇಲ್ಲಿ ವಾಷಿಂಗ್‌ಟನ್‌ ಡಿಸಿಯ 'ಕಾವೇರಿ' ಕನ್ನಡ ಸಂಘ ಏರ್ಪಡಿಸಿದ್ದ ಕುವೆಂಪು ಸಾಹಿತ್ಯಸಮ್ಮೇಳನದಲ್ಲಿ ಪಾಲ್ಗೊಳ್ಳಲೋಸುಗ ಇಲ್ಲಿಗೂ ಬಂದವರು ನಮ್ಮ ಮನೆಯಲ್ಲೇ ಎರಡುದಿನ ಉಳಿದುಕೊಂಡಿದ್ದರು). ಶನಿವಾರ ' ಬ್ರಂಚ್‌'ಗೆ ಹರಿಯವರನ್ನು ಕರಕೊಂಡು ಬರುವಂತೆ ಇಲ್ಲೇ ಸಮೀಪವಿರುವ ಡಾ।ಮೈ.ಶ್ರೀ.ನಟರಾಜ ಅವರು ತಮ್ಮಮನೆಗೆ ನನ್ನನ್ನು ಆಹ್ವಾನಿಸಿದ್ದರು. ಅವರ ಮನೆಯಲ್ಲಿ ಮಸ್ತಾಗಿ ಬ್ರಂಚಿಸಿ, ಸಾಹಿತ್ಯ ಸಮ್ಮೇಳನ ನಡೆಯುವ ಶಿವವಿಷ್ಣು ದೇವಸ್ಥಾನಕ್ಕೆ ಕಾರಲ್ಲಿ ಹೊರಟಿದ್ದೆವು ನಾನು ಮತ್ತು ಹರಿಹರೇಶ್ವರ.

ಕಾರು ಹೈವೇ ಮೇಲೆ ಹೋಗುತ್ತಿದೆ, ನಾನೂ, ಹರಿ ಅದೂ ಇದೂ ಹರಟುತ್ತಾ ಇದ್ದೇವೆ. ಆಗ ಬಂತು ನನ್ನ ಸೆಲ್‌ಫೋನ್‌ಗೊಂದು ಕರೆ! ಚಿಕಾಗೋ ಏರಿಯಾಕೋಡ್‌ ಫ್ಲಾಷ್‌ ಆಯ್ತು ಡಿಸ್ಪ್ಲೆಯಲ್ಲಿ. ಯಾರಪ್ಪಾ ಚಿಕಾಗೊದಿಂದ ಕಾಲಿಸುತ್ತಿರುವವರು ಎಂದುಕೊಂಡು ಹಲೋ ಎಂದಾಗಲೇ ಆ ಕಡೆಯಿಂದ, 'ಜೋಶಿಗಾರು... ನೇನು ಆದಿನಾರಾಯಣ ಮಾಟ್ಲಾಡ್ತುನ್ನಾನು... ಮೀ ತೊ ಚಿನ್ನ ಪನಿ ಉನ್ನದಿ...' (ಜೋಶಿಯವರೆ, ನಾನು ಆದಿನಾರಾಯಣ ಮಾತಾಡುತ್ತಿರುವುದು. ನಿಮ್ಮ ಬಳಿ ಸ್ವಲ್ಪ ಕೆಲಸವಿದೆ...) ಎಂದು ಏಕ್‌ದಮ್‌ ತೆಲುಗಲ್ಲೇ ಮಾತು.

ಚಿಕಾಗೋದಲ್ಲಿನ ಕಂಪೆನಿಯಲ್ಲಿ ನಾನು ಕೆಲಸ ಮಾಡುತ್ತಿದ್ದಾಗ ನನ್ನ ಸಹೋದ್ಯೋಗಿಯಾಗಿದ್ದವರು. ಆದಿ ಎಂದಷ್ಟೇ ಅವರ ಹೆಸರು ನನಗೆ ಗೊತ್ತಿದ್ದದ್ದು. ಅವರ ಭಾರ್ಯ (= ಹೆಂಡತಿ) ಗಾಯತ್ರಿ ಕೂಡ ನಮ್ಮಾಫೀಸಲ್ಲೇ ಹ್ಯೂಮನ್‌ ರಿಸೋರ್ಸಸ್‌ ಮೇನೇಜರ್‌ ಆಗಿದ್ದರು. ನಾನು ಚಿಕಾಗೋ ಬಿಟ್ಟ ಮೇಲೆ ಆಗೊಮ್ಮೆ ಈಗೊಮ್ಮೆ ಹೊಸವರ್ಷ, ಯುಗಾದಿ, ದೀಪಾವಳಿ ಗ್ರೀಟಿಂಗ್‌ಬಿಟ್ಟರೆ ಅಷ್ಟೇನೂ ಸಂಪರ್ಕವಿರಲಿಲ್ಲ. ವಾಷಿಂಗ್‌ಟನ್ನಿಗೆ ಬಂದ ಹೊಸತರಲ್ಲಿ ಇಲ್ಲಿಯ ನನ್ನ ಕಾಂಟಾಕ್ಟ್‌ ಇನ್ಫಾರ್ಮೇಶನ್‌ ಅವರಿಗೂ ಈಮೈಲ್‌ನಲ್ಲಿ ಕಳಿಸಿದ್ದೆನೆಂದು ನೆನಪು. ಅದನ್ನು ಬಳಸಿಯೇ ನನಗೆ ಕಾಲ್‌ ಮಾಡಿದ್ದಾರೆ.

ಏನು ಅವರಿಗೆ ಆಗಬೇಕಿದ್ದ ಚಿನ್ನ ಪನಿ? ಅದೂ ಟೆಲಿಫೋನ್‌ನಲ್ಲಿ? ಅದೇ ಸ್ವಾರಸ್ಯ! ಮಾರ್ಚ್‌ 6ರಂದು ಹುಣ್ಣಿಮೆ ಇದ್ದದ್ದು (ಹೋಳಿ ಹುಣ್ಣಿಮೆ). ಆ ಪ್ರಯುಕ್ತ ಅವತ್ತು ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದರಂತೆ. ಅದೂ ಹೇಗಂತೀರಾ? ಪೂಜೆ ಮಾಡಿಸಲು ಯಾರೂ ಸಿಗಲಿಲ್ಲವಂತೆ. ಹಾಗಾಗಿ ಗಂಡ-ಹೆಂಡತಿಯೇ ಪೂಜಾರಿ-ಪುರೋಹಿತರ ಪಾತ್ರ ವಹಿಸಿ, ಜತೆಗೆ ಕ್ಯಾಸೆಟ್‌ ಪ್ಲೇಯರ್‌ನಲ್ಲಿ ' ಸತ್ನಾರಾಯಣ (ಸತ್ಯನಾರಾಯಣ) ವೃತಮು' ಕಥೆ ಪ್ಲೇಯಿಸಿ ಪೂಜಿಸುವ ಕಾರ್ಯಕ್ರಮ. ಚಿಕಾಗೋದ ಎರಡೂ ದೇವಸ್ಥಾನಗಳ ಎಲ್ಲ ಪೂಜಾರಿಗಳಿಗೆ ಅವತ್ತು ಸಿಕ್ಕಾಪಟ್ಟೆ ಬುಕ್‌ ಆಗಿದ್ದಿರಬಹುದು, ಅಥವಾ ಆದಿನಾರಾಯಣ-ಗಾಯತ್ರಿ ದಂಪತಿ ' ಅಮೆರಿಕದಲ್ಲಿ ಮಿಕ್ಕೆಲ್ಲವೂ ಸೆಲ್ಫ್‌-ಸರ್ವಿಸ್‌ ಎಂದ ಮೇಲೆ ಪೂಜೆ ಮಾಡಿಸಲಿಕ್ಕೊಬ್ಬ ಯಾಕೆ ಬೇಕು?' ಎಂದು ಕೊಂಡಿರಬಹುದು, ಅಥವಾ ಅವರಿಬ್ಬರ ಕನಸಲ್ಲಿ ಸತ್ಯನಾರಾಯಣ ಸ್ವಾಮಿಯೇ ಕಾಣಿಸಿಕೊಂಡು ' ಭಕ್ತಾಗ್ರೇಸರರೇ, ನೀವು ಮಾಡುವ ಸೆಲ್ಫ್‌-ಸರ್ವಿಸ್‌ ಪೂಜೆಯಿಂದಲೂ ನಾನು ಸಂತುಷ್ಟನಾಗುತ್ತೇನೆ...' ಎಂದಿರಬಹುದು. ಅದೇನೇ ಇರಲಿ.

ಸತ್ಯನಾರಾಯಣ ಪೂಜೆಯ ಅಂಗವಾಗಿ ನವಗ್ರಹ ಪೂಜೆ ಮತ್ತು ತದಂಗವಾಗಿ ನವಧಾನ್ಯಗಳನ್ನೂ ಪೂಜಾಸಾಮಗ್ರಿಯಲ್ಲಿ ಅಣಿಮಾಡಿಟ್ಟಿದ್ದಾರೆ. ಆಗ ಬಂದದ್ದು ಅವರಿಗೊಂದು ಸಂದೇಹ. ನವಗ್ರಹಪೂಜೆಗೆ ಒಂಬತ್ತು ಬಗೆಯ ಧಾನ್ಯಗಳನ್ನು ಕಪ್‌ ಅಥವಾ ಸಣ್ಣ ಬಟ್ಟಲುಗಳಲ್ಲಾಗಲೀ, ಬಾಳೆಎಲೆಯಿಂದ ಮಾಡಿದ ದೊನ್ನೆ ಯಲ್ಲಾಗಲೀ ಹಾಕಿ ಜೋಡಿಸಿಡಬೇಕು. ಆದರೆ ಅದಕ್ಕೊಂದು ನಿರ್ದಿಷ್ಟ ಕ್ರಮ ಇರಬೇಕಲ್ಲ!? ಕ್ಯಾಸೆಟ್‌ನ ಮಂತ್ರಗಳಲ್ಲಿ ಅದು ಹೇಳಿಲ್ಲ. ಹಾಗೆಂದು ಮನಸ್ಸಿಗೆ ಬಂದಂತೆ ಇಟ್ಟರೆ ಅಪಾರ್ಥವಾಗಬಾರದಲ್ಲ! ಅದೂ ಗ್ರಹಗಳ ವಿಷಯದಲ್ಲಿ ಯಾಕೆ ಸುಮ್ಮನೆ ಗ್ರಹಾಚಾರ ತಂದುಕೊಳ್ಳಬೇಕು!?

ಆ ಸಂದೇಹ ನಿವಾರಣೆಗೆ, ಅಂದರೆ ನವಗ್ರಹ ಧಾನ್ಯಗಳ ಪ್ಲೇಸ್‌ಮೆಂಟ್‌ಗೆ ಟೆಲಿಫೋನಿಕ್‌ ಇಟರ್‌ವ್ಯೂ! ಶ್ರೀವತ್ಸ ಜೋಶಿಯನ್ನು ಕೇಳಿದರೆ ತಿಳಿಯಬಹುದು ಎಂದು ಅವರೇಕೆ ಅಂದು ಕೊಂಡರು? ಚಿಕಾಗೋದಲ್ಲಿ ನಾವು ಸಹೋದ್ಯೋಗಿಗಳಾಗಿದ್ದಾಗ ನಾವೆಲ್ಲ ಒಂದೇ ಆಫೀಸಲ್ಲಿ ಒಟ್ಟಿಗೇ ಇದ್ದವರು. ಮಧ್ಯಾಹ್ನದೂಟ ಲಂಚ್‌ರೂಂನಲ್ಲಿ ಎಲ್ಲ ಒಟ್ಟಿಗೇ ಮಾಡುತ್ತಿದ್ದದ್ದು. ನಮ್ಮ ಲಂಚ್‌ಸೆಷನ್‌ನಲ್ಲಿ ಆಕಾಶದಡಿಯ ಎಲ್ಲ ವಿಚಾರಗಳೂ (everything under the sky) ಹರಟೆಯಲ್ಲಿ ಬರುತ್ತಿದ್ದುವು. ನನಗಂತೂ ಬಿಡಿ, ಯಾವುದೇ ವಿಷಯದಲ್ಲಿ ವರ್ಟಿಕಲ್‌ನಾಲೆಡ್ಜ್‌ ಏನೇನೂ ಇರದಿದ್ದರೂ ಸಕಲವಿದ್ಯೆಗಳ ಅಲ್ಪಸ್ವಲ್ಪ ಆಸಕ್ತಿ, ಒಂಚೂರು ಮಾಹಿತಿ ನನಗೆ ಮೋಸ್ಟ್‌ ಫೇವರಿಟ್‌.

ಆ ಒಂದೇಒಂದುವಿಶ್ವಾಸದಿಂದ ಆದಿನಾರಾಯಣ ನನಗೆ ಫೋನ್‌ ಮಾಡಿದ್ದರು. ಆದರೆ ಕಾರ್‌ ಡ್ರೈವ್‌ ಮಾಡುತ್ತಿರುವಾಗ ಸೆಲ್‌ಫೋನಲ್ಲಿ ಕೇಳಿದರೆ ನನಗೆಲ್ಲಿ 'ನವಗ್ರಹ ಪ್ಲೇಸ್‌ಮೆಂಟ್‌' ಬಾಯಿಪಾಠ ಬರಬೇಕು? ಅದೂ ಅಲ್ಲದೆ ಈಗಿನ ಜಮಾನಾದ ನಾವೆಲ್ಲ ಬರೀ ಅಲ್ಪಜ್ಞರು ಅಥವಾ ಹೆಚ್ಚೆಂದರೆ ಮಧ್ಯಮ ಜ್ಞಾನಿಗಳು. ಏಕೆಂದರೆ,

Google ಇಲ್ಲದೆ ಬಲ್ಲವನು ರೂಢಿಯಾಳಗುತ್ತಮನು
ಗೂಗ್ಲಿದರೆ ಮಾತ್ರ ಗೊತ್ತಿರುವವ ಮಧ್ಯಮನು ಅಧಮ ತಾ
ಗೂಗ್ಲಿಯೂ ಗೊತ್ತಿರದವನು ಅಲ್ಪಜ್ಞ ।।

ಮನೆಯಲ್ಲಿದ್ದರೆ ಫಕ್ಕನೆ ಗೂಗಲ್‌.ಕಾಮ್‌ನಲ್ಲಿ ಸರ್ಚಿಸಿ ಅವರಿಗೆ ಇನ್‌ಫಾರ್ಮೇಶನ್‌ ಕೊಡಬಹುದಿತ್ತು. ಕಾರು ಡ್ರೈವಿಸುವಾಗ ಎಲ್ಲಿಯ ಗೂಗಲ್‌, ಎಲ್ಲಿಯ ನವಗ್ರಹಗಳು? ಭಾರತದಲ್ಲಿದ್ದಾಗಾಗಲೀ ಇಲ್ಲಾಗಲೀ ದೇವಸ್ಥಾನಗಳಿಗೆ ಹೋದಾಗ 'ಟೈಮಿದ್ದರೆ' ನವಗ್ರಹಗಳಿಗೆ ಒಂಬತ್ತು ಪ್ರದಕ್ಷಿಣೆ, ಕೆಲವೊಮ್ಮೆ ಎರಡೇ ಪ್ರದಕ್ಷಿಣೆ, ಮತ್ತೆ ಕೆಲವೊಮ್ಮೆ ದೂರದಿಂದಲೇ 'ಹಾಯ್‌, ಬಾಯ್‌' ಅಷ್ಟೇ ಮಾಡುವ ' ಸೋಗಿನ' ಭಕ್ತಾದಿಗಳಲ್ಲೇ ನಾನೂ ಒಬ್ಬನಲ್ಲವೇ? ನವಗ್ರಹ ಮೂರ್ತಿಗಳು ' ವಿಥ್‌ ರೆಸ್ಪೆಕ್ಟ್‌ ಟು ಈಚ್‌ ಅದರ್‌' ಹೇಗೆ ಇರುತ್ತವೆ ಎಂಬುದನ್ನು ನಾನಾವತ್ತೂ ಗಮನಿಸಿಲ್ಲವಲ್ಲ!?

ಅದೃಷ್ಟ ಎನ್ನುವುದು ಇದನ್ನೇ (ಅದು ನನ್ನ ಅದೃಷ್ಟವೂ ಹೌದು, ಇನ್‌ಡೈರೆಕ್ಟ್ಲಿ ಆದಿನಾರಾಯಣ-ಗಾಯತ್ರಿ ದಂಪತಿಯ ಅದೃಷ್ಟವೂ ಹೌದು). ಕಾರಲ್ಲಿ ನನ್ನ ಪಕ್ಕದಲ್ಲಿದ್ದವರಾರು? ಮತ್ತಾರು, ಪ್ರಕಾಂಡ ಪಂಡಿತ - ಸಹಸ್ರಾರು ಗ್ರಂಥಗಳನ್ನು, ಶಾಸ್ತ್ರಗಳನ್ನು, ಶಾಸನಗಳನ್ನು ಅರೆದುಕುಡಿದಿರುವ ಶಿಕಾರಿಪುರ ಹರಿಹರೇಶ್ವರ! ಅವರು ಗೂಗಲಾವಲಂಬಿಗಳಲ್ಲ! ಧರ್ಮ-ತರ್ಕ-ಶಾಸ್ತ್ರ-ಸಾಹಿತ್ಯ ಎಲ್ಲ ಕರತಲಾಮಲಕವಾಗಿರುವ ವ್ಯಕ್ತಿ. ಅಮೆರಿಕದಲ್ಲಿರುತ್ತ ನೂರಾರು ಮದುವೆಗಳನ್ನು, ಸತ್ಯನಾರಾಯಣ ಕಥೆಗಳನ್ನು (ಅದೂ ಕನ್ನಡದಲ್ಲಿ) ಮಾಡಿಸಿದ ಪಂಡಿತ. ಅಂತ ವ್ಯಕ್ತಿ ನನ್ನ ಪಕ್ಕದಲ್ಲೇ ಇರುವಾಗಲೇ ಈ 'ಧರ್ಮಸಂದೇಹ' ಬಂದದ್ದು ಎಂಥ ಆಕಸ್ಮಿಕ! ಸೆಲ್‌ಫೋನ್‌ ಹರಿಯವರಿಗೆ ಕೊಟ್ಟೆ, ವಿಷಯವನ್ನು ವಿವರಿಸಿದೆ. ತಗೊಳ್ಳಿ, ಹರಿಯವರು ಫೋನಲ್ಲೇ ಪ್ರತಿಯಾಂದನ್ನೂ ಒಪ್ಪ ಓರಣವಾಗಿ ವಿವರಿಸಿ ಆ ಚಿಕಾಗೋ ದಂಪತಿಯಿಂದ ನವಗ್ರಹಪೂಜೆ ಮಾಡಿಸಿಯೇ ಬಿಟ್ಟರು!

ನವಗ್ರಹ ಧಾನ್ಯಗಳ ಪ್ಲೇಸ್‌ಮೆಂಟ್‌ ವಿಷಯದಲ್ಲಿ ನಾನು ಅಜ್ಞಾನಿ ಮಧ್ಯವರ್ತಿ. ಕನ್ಸಲ್ಟೆನ್ಸಿ ಇಂಡಸ್ಟ್ರಿಯ ಮಿಡ್ಲ್‌ಮ್ಯಾನ್‌ಗಳಂತೆಯೇ, ಜಸ್ಟ್‌ 'ಟೆಲಿಫೋನ್‌ ಕೊ-ಆರ್ಡಿನೇಟರ್‌'! ಆದರೆ ಮುಂದಿನ ಸಲ ಯಾರಾದರೂ ಈರೀತಿ ನವಗ್ರಹಗಳ ಬಗ್ಗೆ ನನ್ನ ಬಳಿ ಕೇಳಿದರೆ ಆಗ ಹರಿ ಎಲ್ಲಿರುತ್ತಾರೆ ನನ್ನ ಜತೆ? ಅದಕ್ಕಾಗಿ ಮತ್ತೆ ನನ್ನ 'ಮಧ್ಯಮ ಜ್ಞಾನ'ಗಂಗೋತ್ರಿ ಗೂಗಲ್‌ನಲ್ಲಿ ಹುಡುಕಿ ನವಗ್ರಹಪೂಜೆಯ ಬಗ್ಗೆ ಅಚ್ಚುಕಟ್ಟಾದ ವಿವರಗಳನ್ನು ಕೊಡುವ ವೆಬ್‌ಪುಟವೊಂದನ್ನು ಬುಕ್‌ಮಾರ್ಕ್‌ ಮಾಡಿಟ್ಟಿದ್ದೇನೆ. ನಿಮಗೂ ತಿಳಿಸುತ್ತಿದ್ದೇನೆ ಅದರ ಯೂಆರೆಲ್ಲು. ನೀವೂ ನೋಟ್‌ ಮಾಡಿಟ್ಟುಕೊಳ್ಳಿ:

English summary
Telephonic interview for placements. Placements of all kinds including navagrahas to perform satyanarayana pooja
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X