ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನೊ ಶಂಖಃ ಪ್ರಚೋದಯಾತ್‌...

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

Shankha the conch shell ವೆಸ್ಟ್‌ಇಂಡೀಸ್‌ನ ಯಾವುದೇ ಕ್ರೀಡಾಂಗಣದಲ್ಲಿ ನಡೆವ ಕ್ರಿಕೆಟ್‌ಮ್ಯಾಚ್‌ನ ಕಾಮೆಂಟರಿಯನ್ನು ನೀವು ರೇಡಿಯಾದಲ್ಲಿ ಕೇಳುತ್ತಿದ್ದರೆ ಅಥವಾ ಟಿವಿಯಲ್ಲಿ ವೀಕ್ಷಿಸುತ್ತಿದ್ದರೆ ಪ್ರೇಕ್ಷಕರ ಗ್ಯಾಲರಿಯಿಂದ ಕೇಳಿಬರುವ ಮೋಜು-ಕೇಕೆಗಳ ಜತೆಗೆ ಶಂಖ ಊದುವುದೂ ಕೇಳಿಬರುವ ಅನುಭವ ನಿಮಗಾಗಿರಬಹುದು. ಕ್ರಿಕೆಟ್‌ ಕಾಮೆಂಟರಿಯ ಮಾತು ಹಾಗಿರಲಿ, ಟಿವಿಯಲ್ಲಿ ಮಹಾಭಾರತ ಬರುತ್ತಿದ್ದಾಗ ಅದರ ಶೀರ್ಷಿಕೆಗೀತೆಯಲ್ಲಿ ಮಹೇಂದ್ರಕಪೂರ್‌ನ ಕಂಚಿನಕಂಠದಿಂದ ‘ಶಬ್ದ ದಿಗ್ಘೋಷಿತ್‌ ಹುವಾ ಜಬ್‌ ಶಬ್ದ ಸಾರ್ಥಕ್‌ ಸರ್ವದಾ...’ ಎಂಬ ಸಾಲುಗಳಾದ ಕೂಡಲೆ ಮೈನವಿರೇಳಿಸುವ ಶಂಖನಾದ ಕೇಳುತ್ತಿದ್ದ ನೆನಪು ಈಗಲೂ ಇದೆಯಲ್ಲವೇ? ಟಿವಿ ರಾಮಾಯಣದ ಪ್ರತಿ ಸಂಚಿಕೆಯ ಆರಂಭದಲ್ಲೂ ರಮಾನಂದ ಸಾಗರ್‌ನ ಸಂಸ್ಥೆಯ ಲಾಂಛನ ಶಂಖ ಮೂಡಿಬರುತ್ತಿತ್ತು ಕಿರುತೆರೆಯಲ್ಲಿ. ಇನ್ನು ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಪ್ರತ್ಯಕ್ಷ ಶಂಖನಾದವನ್ನು ನಾವೆಲ್ಲರೂ ಕೇಳಿಯೇ ಇದ್ದೇವೆ.

ಇಲ್ಲಿದೆ ನಮಗೆಲ್ಲ ಚಿರಪರಿಚಿತವಾದ ಶಂಖದ ಬಗ್ಗೆ ಪೌರಾಣಿಕ, ಸಾಂಖ್ಯಿಕ, ವೈಜ್ಞಾನಿಕ ಮತ್ತು ಸಾಮಾಜಿಕ ದೃಷ್ಟಿಕೋನಗಳ ಒಂದಿಷ್ಟು ಮಾಹಿತಿಯ ಅವಲೋಕನ. ಈ ವಾರದ ವಿಚಿತ್ರಾನ್ನದಲ್ಲಿ ನಿಮ್ಮ ಓದಿಗಾಗಿ ಇದೊಂದು ಶಂಖೋಪಾಖ್ಯಾನ!

ಪುರಾಣ ಪ್ರಮಾಣಾಧಾರಿತ ಶಂಖಾಯಣ

Shankha the conch shell is considered cosmic wombಶಂಖವನ್ನು ‘ಬ್ರಹ್ಮಾಂಡ ಗರ್ಭಾಶಯ’ (cosmic womb) ಎನ್ನಲಾಗಿದೆ. ಶಂಖವನ್ನೂದಿದಾಗ ಹೊರಬರುವ ಶಬ್ದವೇ ಪ್ರಣವನಾದ (ಓಂ) ಆಗಿದ್ದು ಈ ಜಗತ್ತಿನ ಸಕಲ ಚರಾಚರವೆಲ್ಲದಕ್ಕೂ ಮೂಲ ಅದೇ ಎಂಬ ಪ್ರತಿಪಾದನೆಯಿದೆ. ವಿಷ್ಣು ಮತ್ಸ್ಯಾವತಾರ ಧರಿಸಿದ್ದೇ ವೇದಗಳನ್ನು ಅಪಹರಿಸಿ ಪಾತಾಳದಲ್ಲಡಗಿದ್ದ ‘ಶಂಖಾಸುರ’ನನ್ನು ವಧಿಸಲಿಕ್ಕೆ. ಆ ರಾಕ್ಷಸನನ್ನು ಕೊಂದು, ವೇದಗಳನ್ನುದ್ಧರಿಸಿ ವಿಜಯದುಂದುಭಿಯಾಗಿ ಸಮುದ್ರಜನ್ಯ ಶಂಖವನ್ನು ವಿಷ್ಣು ಊದಿದಾಗ ಉಂಟಾದದ್ದೇ ಓಂಕಾರ. ವಿಷ್ಣು ಊದಿದ ಆ ಶಂಖ ‘ಪಾಂಚಜನ್ಯ’ (ಪಂಚಭೂತಗಳಿಂದಾದ ಎಂದರ್ಥ) ಹೆಸರಿಂದ ಖ್ಯಾತವಾಯಿತು; ವಿಷ್ಣುವಿಗೆ ನಾಲ್ಕು ಕೈಗಳ ಪೈಕಿ ಎಡ ಹಿಂಭಾಗದ ಕೈಗೆ ಒಂದು ಕರಭೂಷಣ ಆಗಿಹೋಯಿತು.

ವಿಷ್ಣು ಮತ್ತು ಶಂಖದ ಅವಿನಾಭಾವ ಸಂಬಂಧ ಅದಾದರೆ, ಶಂಕರ ಎಂಬ ಹೆಸರು ಪರಶಿವನಿಗೆ ಬಂದದ್ದು ಅವನು ಶಂಖವನ್ನೂದಿದ್ದರಿಂದಲೇ ಎಂಬ ಸಿದ್ಧಾಂತಗಳೂ ಇವೆ. ಅಷ್ಟೇ ಅಲ್ಲದೆ ಶಿವಸುತ ಗಣೇಶ ಕೂಡ ಶಂಖದ ಮೇಲೆ ಆಸೀನನಾಗಿರುವ ಪ್ರತಿಮೆಗಳಿರುತ್ತವೆ. ಮಹಿಷಾಸುರನನ್ನು ಕೊಲ್ಲಲು ಸಕಲದೇವತೆಗಳ ಅಂಶವಾಗಿ ಮಹಿಷಮರ್ದಿನಿ ದುರ್ಗಾದೇವಿ ಜನ್ಮತಳೆದಾಗ ವಾಯುದೇವರು ಆಕೆಗೆ ಅನುಗ್ರಹಿಸಿದ್ದು ಒಂದು ಶಂಖವನ್ನು. ನವನಾಗಗಳ ಪೈಕಿ ಆರನೆಯದು ಶಂಖಪಾಲ - ಮೈಮೇಲೆಲ್ಲ ಶಂಖದಾಕೃತಿಯ ಮಚ್ಚೆಗಳಿರುವ ನಾಗರ. ಇನ್ನು ಶಂಖಪುಷ್ಪ - ನೇರಳೆ ಮತ್ತು ಬಿಳಿ ಬಣ್ಣದಲ್ಲರಳುವ ಸುಂದರ ಹೂವು, ಶಂಖದಾಕಾರವಿರುವುದರಿಂದ ಆ ಹೆಸರು. ಬೇರೆಲ್ಲ ಏಕೆ, ನಮ್ಮ ಭಾರತದೇಶದ ನಕ್ಷೆಯೇ ಒಂದು ಶಂಖದಾಕಾರದಂತೆ ಎಂದು ನಿಮಗನ್ನಿಸುವುದಿಲ್ಲವೇ?

ದ್ವಾಪರಯುಗದಲ್ಲಿ ಶ್ರೀಮನ್ನಾರಾಯಣನ ಎಂಟನೆ ಅವತಾರ ಶ್ರೀಕೃಷ್ಣನೂ ಪಾಂಚಜನ್ಯ ಶಂಖವನ್ನೇ ಧರಿಸಿರುತ್ತಿದ್ದ. ಮಹಾಭಾರತ ಯುದ್ಧ ಘೋಷಣೆ (declaration of war) ಶಂಖನಾದದ ಮೂಲಕ ನಡೆದದ್ದು ಭಗವದ್ಗೀತೆಯ ಮೊದಲ ಅಧ್ಯಾಯದಲ್ಲಿ ನಾಲ್ಕೈದು ಶ್ಲೋಕಗಳೆಲ್ಲ ಶಂಖನಾದವನ್ನೇ ವರ್ಣಿಸುತ್ತವೆ. ಅರ್ಜುನನು ತನ್ನ ದೇವದತ್ತ ಶಂಖವನ್ನೂದಿ ಯುದ್ಧ ಘೋಷಣೆ ಮಾಡಿದರೆ ಭೀಮಸೇನನು ಪೌಂಡ್ರ ಎಂಬ ಶಂಖವನ್ನೂ, ಯುಧಿಷ್ಠಿರನು ಅನಂತವಿಜಯ ಶಂಖವನ್ನೂ, ನಕುಲ-ಸಹದೇವರು ಅನುಕ್ರಮವಾಗಿ ಸುಘೋಷ ಮತ್ತು ಮಣಿಪುಷ್ಪಕ ಎಂಬ ಶಂಖಗಳನ್ನೂದಿ ಯುದ್ಧ ಸಾರಿದರು. ‘ನಭಶ್ಚ ಪೃಥಿವೀಂ ಚೈವ ತುಮುಲೊ ವ್ಯನುನಾದಯನ್‌’ - ಪಾಂಡವರ ಕಡೆಯಿಂದ ಮೊಳಗಿದ ಆ ಎಲ್ಲ ಶಂಖಗಳ ಘೋಷ ಅದೆಷ್ಟಿತ್ತೆಂದರೆ ಭೂಮ್ಯಾಕಾಶಗಳಲ್ಲೆಲ್ಲ ಮಾರ್ದನಿಸಿ ವೈರಿಪಡೆಯಲ್ಲಿ ಒಂದು ಭೀಕರ ತುಮುಲವನ್ನೇ ಹುಟ್ಟಿಸಿತು ಎಂಬ ವರ್ಣನೆಯಿದೆ.

ಬಲಮುರಿ (ದಕ್ಷಿಣಾವರ್ತಿ) ಶಂಖ

Difference between normal conch and balamuri conchಶಂಖದ ಸುರುಳಿಯಾಕಾರದ ಒಳರಚನೆಯ ಕೊನೆಯಭಾಗ ಅಂದರೆ ಹೊರ-ಓಪನಿಂಗ್‌ ಸಾಮಾನ್ಯವಾಗಿ ಎಡಭಾಗಕ್ಕೆ ಇರುತ್ತದೆ; ಆದರೆ ಬಹಳ ಅಪರೂಪಕ್ಕೊಮ್ಮೆ ಬಲಭಾಗಕ್ಕೆ ಓಪನಿಂಗ್‌ ಇರುವ ಶಂಖಗಳೂ ಸಿಗುವುದುಂಟು. ಇವನ್ನು ‘ಬಲಮುರಿ’ ಶಂಖ ಎನ್ನುತ್ತಾರೆ. ಇವೆಷ್ಟು ಅಪರೂಪವೆಂದರೆ ಸುಮಾರು 3 ಮಿಲಿಯನ್‌ ಸಾಮಾನ್ಯ ಶಂಖಗಳಿಗೆ ಒಂದು ಬಲಮುರಿ ಶಂಖ ಸಿಕ್ಕರೆ ಹೆಚ್ಚು ! ಅಷ್ಟು ಅಪರೂಪವಾದ್ದರಿಂದ ಸಹಜವಾಗಿಯೇ ಅವು ಅಮೂಲ್ಯ-ಅನರ್ಘ್ಯ ಮತ್ತು ಅತಿ ಮಹತ್ವವುಳ್ಳವೆಂದು ಪರಿಗಣಿಸಲ್ಪಡುತ್ತವೆ. ವಿಷ್ಣುವಿನ ಪಾಂಚಜನ್ಯ ಮತ್ತು ಲಕ್ಷ್ಮಿಯ ಕೈಯಲ್ಲಿನದು ಕೂಡ ಬಲಮುರಿ ಶಂಖ.

ವೈಕುಂಠದಲ್ಲಿ ಶ್ರೀಮನ್ನಾರಾಯಣನ ಪಾಂಚಜನ್ಯ ಶಂಖ ಒಮ್ಮೆ ಕಣ್ಮರೆಯಾಯ್ತಂತೆ. ಮುಂದೊಂದು ದಿನ ಕೈಲಾಸದ ಕಡೆಯಿಂದ ಆ ಶಂಖ ಮೊಳಗಿದ್ದು ಕೇಳಿಬರಲು, ಶಂಖ ಅದು ಹೇಗೋ ಪರಮೇಶ್ವರನ ಅಧೀನವಾಗಿದೆಯೆಂದೂ ತಪಸ್ಸುಗೈದು ಪರಶಿವನನ್ನು ಪ್ರಸನ್ನಗೊಳಿಸದೆ ಶಂಖ ವಾಪಸಾಗುವುದು ಅಸಾಧ್ಯವೆಂದೂ ವಿಷ್ಣುವಿಗೆ ಮನವರಿಕೆಯಾಗುತ್ತದೆ. ವಿಷ್ಣುವಿನ ತಪಸ್ಸಿಗೆ ಮೆಚ್ಚಿ ಈಶ್ವರ ಪ್ರತ್ಯಕ್ಷನಾಗುತ್ತಾನಾದರೂ ಶಂಖ ಬೇಕಿದ್ದರೆ ತನ್ನ ಮಗ ಗಣೇಶನನ್ನು (ಅದೂ ಬಲಮುರಿ ಗಣೇಶ - ಸೊಂಡಿಲು ಬಲಗಡೆಗೆ ವಾಲಿರುವವ) ಪೂಜಿಸಬೇಕೆನ್ನುತ್ತಾನೆ. ಕೊನೆಗೂ ಬಲಮುರಿ ಗಣೇಶ, ಬಲಮುರಿ ಶಂಖ ಪಾಂಚಜನ್ಯವನ್ನು ವಿಷ್ಣುಗೆ ಮರಳಿಸುತ್ತಾನೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಶಂಖನಾದಕ್ಕೂ ಆನೆಯ (ಗಣಪನ ಶಿರೋಭಾಗ) ಘ್ರೀಂಕರಿಸುವಿಕೆಗೂ ಇರುವ ಸಾಮ್ಯ, ಹಾಗೆಯೇ ಜಗತ್ತಿನ ಪ್ರತಿಯಾಂದು ವಿಷಯವನ್ನೂ ಶಿವ ತನ್ನ ಪುತ್ರ ಗಣೇಶನ ಮೂಲಕ ಹೇಗೆ ನಿಯಂತ್ರಣದಲ್ಲಿಟ್ಟಿರುತ್ತಾನೆ ಎಂಬ ಸಿದ್ಧಾಂತ!

ಫಿಬೊನಾಸಿ ಸರಣಿ ಮತ್ತು ಶಂಖದ ಒಳರಚನೆ

ಲಿಯಾನಾರ್ಡೊ ಪಿಸಾನೊ ಫಿಬೊನಾಸಿ (ಕ್ರಿ.ಶ 1170-1250) ಎಂಬ ಯುರೋಪಿಯನ್‌ ಗಣಿತಜ್ಞ ಪ್ರಕೃತಿಯಲ್ಲಿ ಸುರುಳಿಯಾಕಾರಾದ ವಸ್ತುಗಳ ರಚನೆಯಲ್ಲಿ ಕಂಡುಬರುವ ನೈಸರ್ಗಿಕ ಸಂಖ್ಯೆಗಳ ಆವೃತ್ತಿಯನ್ನು ನಿರ್ಧರಿಸಿ ಫಿಬೊನಾಸಿ ಸರಣಿ ಎಂದೇ ಪ್ರಖ್ಯಾತವಾದ ಅಪರಿಮಿತ ಸಂಖ್ಯಾಗಣವೊಂದರ ವ್ಯಾಖ್ಯೆ ಮಾಡಿದ್ದಾನೆ. ಸುರುಳಿಯಾಕಾರದ ರಚನೆಗೆ ಉದಾಹರಣೆಯೆಂದರೆ ಗುಲಾಬಿ ಅಥವಾ ಕಮಲ ಇತ್ಯಾದಿ ಹೂವಿನಲ್ಲಿ ಎಸಳುಗಳ ವಿವಿಧ ಗಾತ್ರ ಮತ್ತು ಅವುಗಳ ಸಾಲುಗಳು. ಹಾಗೆಯೇ ಮೃದ್ವಂಗಿಯ ಚಿಪ್ಪು ಅಂದರೆ ಶಂಖದ ಒಳ ರಚನೆ ಇತ್ಯಾದಿ. ಶಂಖ ಚಿಪ್ಪಿನಲ್ಲಿನ ಮೃದ್ವಂಗಿ ಬೆಳೆಯುತ್ತ ಹೋದಂತೆ ಫಿಬೊನಾಸಿ ಸರಣಿಯ ಸಂಖ್ಯೆಗಳ ಪ್ರಮಾಣದ ತ್ರಿಜ್ಯವುಳ್ಳ ಸುರುಳಿಗಳಾಗುತ್ತ ಹೋಗುತ್ತವೆ.

0, 1, 1, 2, 3, 5, 8, 13, 21, 34, 55, ... ಇದೇ ಫಿಬೊನಾಸಿ ಸರಣಿ. ಇದರಲ್ಲಿ ಮೂರನೆ ಸಂಖ್ಯೆಯಿಂದಾರಂಭಿಸಿ ಪ್ರತಿಯಾಂದು ಸಂಖ್ಯೆಯೂ ಹಿಂದಿನ ಎರಡು ಸಂಖ್ಯೆಗಳ ಮೊತ್ತಕ್ಕೆ ಸಮವಾಗಿರುತ್ತದೆ. ಸರಣಿ ಮುಂದುವರಿಯುತ್ತ ಹೋದಂತೆ ಯಾವುದೇ ಸಂಖ್ಯೆ ಮತ್ತು ಅದರ ಹಿಂದಿನ ಸಂಖ್ಯೆಗಳ ಅನುಪಾತ 1.618 ಕ್ಕೆ ಲಿಮಿಟ್‌ ಆಗಿರುತ್ತದೆ. ಈ 1.618 ಸಂಖ್ಯೆಯನ್ನೇ ‘ಸ್ವರ್ಣ ಸರಾಸರಿ’ (golden mean) ಎನ್ನುವುದು. ಇದಕ್ಕೆ ಡಿವೈನ್‌ ಪ್ರೊಪೋರ್ಷನ್‌ ಎಂಬ ಹೆಸರೂ ಇದ್ದು ಶಂಖದ ಒಳ ರಚನೆ, ಪ್ರಕೃತಿಯ ಈ ನಿಯತ್ತಿನ ವೈಚಿತ್ರ್ಯಕ್ಕೆ, ಸಮತೋಲನದ ಅಂದಕ್ಕೆ ಅತಿ ಸಮಂಜಸ ಉದಾಹರಣೆ!

ಜಗನ್ನಿಯಾಮಕ ಭಗವಂತನ ಒಂದು ಕೈಯಲ್ಲಿ ಶಂಖ, ಇನ್ನೊಂದರಲ್ಲಿ ಕಮಲ; ಫಿಬೊನಾಸಿ ಸರಣಿಯಾಧಾರಿತ ಜ್ಯಾಮಿತಿ ಎರಡರಲ್ಲೂ!

ಶಂಖ ಮತ್ತು ಸಮಾಜ-ವಿಜ್ಞಾನ

ಶಂಖ ಅಥವಾ ಆ ಚಿಪ್ಪಿನಲ್ಲಿ ವಾಸಿಸಿ ಸಾಯುವ ಮೃದ್ವಂಗಿಯ ವೈಜ್ಞಾನಿಕ ಹೆಸರು xancus pyrum. ಹಾಗೆಯೇ ಇಂಗ್ಲಿಷಲ್ಲಿ ಶಂಖವನ್ನು chank shell ಅಥವಾ conch ಎನ್ನುವುದು. ಇವೆಲ್ಲ ಪದಗಳಿಗೂ ನಮ್ಮ ಸಂಸ್ಕೃತ/ಕನ್ನಡದ ಶಂಖಕ್ಕೂ (ತೆಲುಗು, ಮಲಯಾಳಂ, ತಮಿಳಿನಲ್ಲಿ ಶಂಕು; ತಮಿಳುನಾಡಿನ ಶಂಕು ಮಾರ್ಕ್‌ ಲುಂಗಿಗಳ ಜಾಹೀರಾತನ್ನು ನೀವು ನೋಡಿರಬಹುದು) ಇರುವ ಸಾಮ್ಯವನ್ನೂ ಗಮನಿಸಬೇಕು. ಅಲ್ಲೇ ಗೊತ್ತಾಗುತ್ತದೆ ಶಂಖದ ವಿಶ್ವವ್ಯಾಪ್ತಿ. ಧಾರ್ಮಿಕವಾಗಿಯೂ ಶಂಖವು ಭಾರತದಲ್ಲಿ ಅಂದರೆ ಹಿಂದುಧರ್ಮದವರಿಗಷ್ಟೇ ಪ್ರಮುಖವಾಗಿರುವುದಲ್ಲ. ಬೌದ್ಧಧರ್ಮ ಚಾಲ್ತಿಯಲ್ಲಿರುವ ಚೈನಾ-ಟಿಬೆಟ್‌-ಜಪಾನ್‌ಗಳಲ್ಲೂ ಶಂಖಕ್ಕೆ ಧಾರ್ಮಿಕ ಸ್ಥಾನವಿದೆ. ಬೈಬಲ್‌ನಲ್ಲಿ ಕ್ರಿಶ್ಚಿಯನ್‌ ಧರ್ಮದ ವಿವಿಧ ಆಚರಣೆಗಳಲ್ಲಿ ಶಂಖದ, ಶಂಖನಾದದ ಪ್ರಸ್ತಾಪವಿದೆಯಂತೆ.

ಶಂಖನಾದ ನಮ್ಮ ಮನಸ್ಸಿಗೆ ಒಂದು ನಮೂನೆಯ ರೋಮಾಂಚನವನ್ನೂ ಧನ್ಯತಾಭಾವ ಬೆರೆತ ಆನಂದವನ್ನೂ ತರುತ್ತದೆ. ನಮ್ಮ ಚೇತನದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹುಟ್ಟಿಸುತ್ತದೆ. ವಾಸ್ತುಶಾಸ್ತ್ರವೂ ಮನೆಯಾಳಗೆ ಶಂಖನಾದ ದಿನಕ್ಕೊಮ್ಮೆಯಾದರೂ ಮೊಳಗಬೇಕೆನ್ನುತ್ತದೆ. ಭಾರತದ ಎಲ್ಲ ಪ್ರಾಂತಗಳಲ್ಲೂ ಪೂಜಾಕೈಂಕರ್ಯದಲ್ಲಿ ಶಂಖ ಉಪಯೋಗಿಸಲ್ಪಡುತ್ತದೆ. ಬಂಗಾಳದಲ್ಲಂತೂ ಶಂಖ ಊದಿಯೇ ಪ್ರತಿಯಾಂದು ಧಾರ್ಮಿಕ ಸಮಾರಂಭದ ಶುಭಾರಂಭವಾಗಬೇಕು. ಗ್ರಹಣ ಕಳೆದ ಮೇಲೆ, ಭೂಕಂಪ ಸಂಭವಿಸಿದರೆ ಕೂಡ ಶಂಖನಾದದ ಮೂಲಕ ಪರಿಸರದ ಶುದ್ಧಿಯಾಗಬೇಕು. ಶಂಖ ಊದುತ್ತ ಪಡಿ ಯಾಚಿಸಲು ಬರುವ ದಾಸಯ್ಯ ನಮಗೆಲ್ಲ ಗೊತ್ತು. ದಾಸಯ್ಯನ ಶಂಖ-ಜಾಗಟೆಗಳ ನಾದತರಂಗಗಳು ಪರಿಸರವನ್ನು ಚೈತನ್ಯಯುಕ್ತವಾಗಿಸುತ್ತವೆ, ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುತ್ತವೆ. ‘ಶಂಖನಾದ’ಕನ್ನಡ ಸಿನೆಮಾದಲ್ಲಿ ದಾಸಯ್ಯನ ಪಾತ್ರ ನಿಮಗೆ ನೆನಪಿರಬಹುದು.

ಶಂಖಮಧ್ಯೆ ಸ್ಥಿತಂ ತೋಯಂ ಭ್ರಾಮಿತಂ ಕೇಶವೊಪರಿ ।
ಅಂಗಲಗ್ನಂ ಮನುಷ್ಯಾಣಾಂ ಬ್ರಹ್ಮಹತ್ಯಾಧಿಕಂ ದಹೇತ್‌ ।।

ಶಂಖವನ್ನು ಊದುವುದಕ್ಕಷ್ಟೇ ಅಲ್ಲದೆ ಜಲಧಾರಣೆಗೂ ಅಷ್ಟೇ ಪವಿತ್ರಭಾವದಿಂದ ಬಳಸಲಾಗುತ್ತದೆ. ದೇವರಿಗೆ ಅಭಿಷೇಕ ಮಾಡಿದ ನೀರನ್ನು ಶಂಖದಲ್ಲಿ ಸಂಗ್ರಹಿಸಿಟ್ಟು ಅಂಗೈಗೆ ಹಾಕಿಕೊಂಡು ಸೇವಿಸಿದರೆ ಸರ್ವವ್ಯಾಧಿಗಳೂ ನಿವಾರಣೆ ಆಗುತ್ತವೆ ಎಂಬ ಅಂಶವನ್ನು ವೇದಗ್ರಂಥಗಳು ಉಲ್ಲೇಖಿಸುತ್ತವೆ. ‘ಶಂಖದಿಂದ ಬಂದರೇನೇ ತೀರ್ಥ...’ ಎಂಬ ಗಾದೆಯಮಾತಿಗೆ ಅದೇ ಮೂಲ. ಶಂಖ ಮತ್ತಿತರ ಚಿಪ್ಪುಗಳಿಗೆ ನಿಜವಾಗಿಯೂ ನೀರನ್ನು ಶುದ್ಧೀಕರಣಗೊಳಿಸುವ ಗುಣಸಾಮರ್ಥ್ಯವಿರುವುದನ್ನು ಕೆನಡಾದಲ್ಲಿನ ಹೈಸ್ಕೂಲ್‌ ವಿದ್ಯಾರ್ಥಿಗಳ ತಂಡವೊಂದು ಕೆಲ ವರ್ಷಗಳ ಹಿಂದೆ ವೈಜ್ಞಾನಿಕ ಪ್ರಯೋಗಗಳ ಮೂಲಕ ಸಿದ್ಧಪಡಿಸಿತ್ತು. ಇಲ್ಲಿ ಓದಿ ಆ ಬಗ್ಗೆ ವಿವರಗಳನ್ನು http://www.cbc.ca/stories/2002/11/15/water_scallops021115. ಅಂದರೆ ಶಂಖದಲ್ಲಿ ತೀರ್ಥಸಂಗ್ರಹದಂತಹ ಸಂಪ್ರದಾಯವನ್ನು ನಮ್ಮ ಹಿರಿಯರು ರೂಪಿಸಿದ್ದಕ್ಕೆ ವೈಜ್ಞಾನಿಕ ಪುಷ್ಠಿಯಿದೆಯೆಂದಾಯ್ತು!

ಇಷ್ಟೆಲ್ಲ ಶಂಖಪುರಾಣವನ್ನು ಓದಿದ ಮೆಲೆ ಶಂಖನಾದವನ್ನೂ ಈ ಕ್ಷಣದಲ್ಲೇ ಒಮ್ಮೆ ಕೇಳುವ ಮನಸ್ಸಾಗಿದ್ದರೆ, ನಿಮ್ಮದು ಸ್ಪೀಕರ್‌ಗಳಿರುವ ಕಂಪ್ಯೂಟರ್‌ ಆಗಿದ್ದರೆ ಇಲ್ಲಿ ಕ್ಲಿಕ್‌ ಮಾಡಿ. (http://www.geocities.com/srivathsajoshi/temple_shankha.mp3) ಶಂಖ-ಜಾಗಟೆಗಳ ಸಂಯುಕ್ತ ನಿನಾದದ ಈ mp3 audio file ಬೇಕಿದ್ದರೆ ನಿಮ್ಮ ಗಣಕಕ್ಕೂ ಇಳಿಸಿಡಿ. ಸೈಬರ್‌ಲೋಕದಲ್ಲೂ ಶಂಖನಾದ ಮೊಳಗಲಿ!

ಕೊನೆಯಲ್ಲಿ ‘ಶಂಖ ಗಾಯತ್ರಿ ಮಂತ್ರ’ದೊಂದಿಗೆ ಈ ಲೇಖನವನ್ನು ಮುಗಿಸುತ್ತಿದ್ದೇನೆ -

ಪಾಂಚಜನ್ಯಾಯ ವಿದ್ಮಹೆ ಪಾವಮಾನಾಯ ಧೀಮಹಿ । ತನ್ನೊ ಶಂಖಃ ಪ್ರಚೋದಯಾತ್‌ ।।

ಶಂಖದ ಬಗ್ಗೆ ಓದಿದಿರಾ, ಶಂಖವನ್ನು ಊದಿದಿರಾ ಅಂತ ನನಗೆ ತಿಳಿಯುವುದು ನೀವು [email protected] ವಿಳಾಸಕ್ಕೆ ಬರೆದಾಗ ಮಾತ್ರ.


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X