• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಓದಿಸಿಕೊಂಡು ಹೋಗುವ’ ಲೇಖನ ಬರೆಯೋದು ಹೇಗೆ?

By Staff
|
Srivathsa Joshi *ಶ್ರೀವತ್ಸ ಜೋಶಿ

Game of Domino Effectಇಸ್ಪೀಟ್‌ ಎಲೆ ಅಥವಾ ಸಿಗರೇಟ್‌ ಖಾಲಿಪೆಟ್ಟಿಗೆ ಅಥವಾ ಪೋಸ್ಟ್‌ಕಾರ್ಡ್‌ಗಳನ್ನು ಉದ್ದುದ್ದವಾಗಿ ಒಂದರ ಹಿಂದೆ ಒಂದು ನಿಲ್ಲಿಸಿ, ‘ಡೊಮಿನೊ ಎಫೆಕ್ಟ್‌’ ಆಟ ಆಡುತ್ತಿದ್ದ ದಿನಗಳು ನೆನಪಿವೆಯೇ? ಸಾಲಿನಲ್ಲಿ ಕೊನೆಯ ಒಂದನ್ನು ಮಿದುವಾಗಿ ಪುಷ್‌ ಮಾಡಿದಾಗ ಅದರಿಂದ ಮೊದಲ್ಗೊಂಡು ಮುಂದಿನ ಎಲ್ಲವೂ ಒಂದೊಂದಾಗಿ ಪಟಪಟನೆ ಬೀಳುವ ಮೋಜನ್ನು ನೋಡಿ ಖುಶಿ ಪಟ್ಟದ್ದು?

ಆರಂಭದಿಂದ ಅಂತ್ಯದವರೆಗೂ ಸರಾಗವಾಗಿ ಓದಿಸಿಕೊಂಡು ಹೋಗುವ ಬರಹವನ್ನು ನಾನು ಈ ಮೇಲಿನ ‘ಡೊಮಿನೊ ಎಫೆಕ್ಟ್‌’ ಆಟಕ್ಕೆ ಹೋಲಿಸುತ್ತೇನೆ. ಮೊದಲ ಪಾರಾಗ್ರಾಫ್‌ನಿಂದ ಓದಲು ತೊಡಗಿದರೆ ಕೊನೆಯ ಪಾರಾಗ್ರಾಫ್‌ವರೆಗೂ ಒಂದೇ ಏಟಿಗೆ ಓದುವಂತಿರಬೇಕು ಅದು. ಆ ಓದುವಿಕೆ ಒಂದು ‘ಸ್ಮೂತ್‌ ರೈಡ್‌’ ಆಗಿರಬೇಕೇ ಹೊರತು ಗುಡ್ಡಬೆಟ್ಟದ ಮಣ್ಣಿನರಸ್ತೆಯಲ್ಲಿ ಆಟೊರಿಕ್ಷಾದಲ್ಲಿ ಪ್ರಯಾಣಿಸಿದಂತೆ ಇದ್ದರೆ ಕಿರಿಕಿರಿ ಎನಿಸುತ್ತದೆ; ಸತ್ವವುಳ್ಳ ಬರಹವೊಂದನ್ನು ಓದುಗ ಅರ್ಧಕ್ಕೇ ಬಿಟ್ಟುಬಿಡುವ ಸಾಧ್ಯತೆಯಿರುತ್ತದೆ. ಡೊಮಿನೊ ಆಟದಲ್ಲೂ ಅಷ್ಟೇ, ಸರಣಿಯಲ್ಲಿನ ಒಂದೋ ಎರಡೋ ಕಾರ್ಡುಗಳು ಸರಿಯಾದ ಅಂತರದಲ್ಲಿಟ್ಟಿರದಿದ್ದರೆ ಬೀಳುತ್ತಿರುವ ಸಾಲು ಅರ್ಧಕ್ಕೇ ನಿಂತು ಅದು ರಂಜಿಸುವುದಿಲ್ಲ.

ಹಾಗಾದರೆ, ಬರಹದ ಓಘ(ನಡೆ) ತಡೆರಹಿತವಾಗಿ ಸಾಗಬೇಕಾದರೆ ಆದಿಯಿಂದ ಅಂತ್ಯದವರೆಗೂ ಅದರಲ್ಲೊಂದು ಅಗೋಚರ ಸೂತ್ರ ಹರಿದಾಡಿರಬೇಕು ಅಂತಾಯಿತು. ಹೇಗಿರಬೇಕು ಅಂಥ ಬರವಣಿಗೆಯ ಹರಿವು? ಲೇಖಕನ ಯೋಚನಾಸರಣಿ ಅಕ್ಷರರೂಪಕ್ಕಿಳಿದಾಗಿನ ಅದರ ನಡೆ? ಒಂದೇ ಲೇಖನದಲ್ಲಿ ಹತ್ತು ಹಲವು ವಿಚಾರಗಳು, ಸಂಗತಿಗಳು ಮಂಥನಗೊಂಡಿದ್ದರೂ ಅವನ್ನೆಲ್ಲ ಒಂದಕ್ಕೊಂದು ಬೆಸೆಯುವ ಕೊಂಡಿ, ತನ್ಮೂಲಕ ನಾನ್‌ಸ್ಟಾಪ್‌ ಓಡುವ ಅಕ್ಷರಬಂಡಿ?

ಈ ಕುರಿತು ಒಂದಿಷ್ಟು ವ್ಯಾಖ್ಯಾನ, ನಾಲ್ಕಾರು ಮಾರ್ಗದರ್ಶಿ ಸೂತ್ರಗಳು ಈ ವಾರದ ವಿಷಯ. ಅಕ್ಷರಮಾಲೆ ಕಟ್ಟುವ ಕಲೆ ನಿಮಗೂ ಕರಗತವಾಗಲಿ ಎಂಬ ಒಳ್ಳೆಯದೊಂದು ಆಶಯ.

* * *

A well structured writeup looks like this!ಸಲೀಸಾಗಿ ಓದಿಸಿಕೊಳ್ಳದ ಬರಹ ಪ್ರಥಮತಃ ಸಂಪಾದಕರ ‘ಅಗ್ನಿಪರೀಕ್ಷೆ’ಯಲ್ಲಿ ಅನುತ್ತೀರ್ಣವಾಗಿ ಪ್ರಕಟಗೊಳ್ಳದಿರುವ ಸಂಭವವೇ ಹೆಚ್ಚು. ಆಗ ಓದುಗ ಮಹಾಶಯ ಬಚಾವ್‌. ಸಂಪಾದಕರೇನಾದರೂ ಸರಿಯಾಗಿ ಸೋಸುವಿಕೆ ಮಾಡದಿದ್ದರೆ ಆಗ ಬರೋದು ಓದೆಬಿಲಿಟಿ ಇಲ್ಲದ ಬರಹಗಳ ಉಪಟಳ. ಸಂಪಾದಕ ಮಂಡಳಿಯ ಲಿಟ್ಮಸ್‌ಟೆಸ್ಟ್‌ ಪಾಸ್‌ ಮಾಡಬೇಕಾದರೆ ಲೇಖನದಲ್ಲಿ ಒಳಗೊಂಡ ವಿಚಾರಗಳು ಅವೆಷ್ಟೇ ವೈವಿಧ್ಯದವು, ವಿಭಿನ್ನತೆಯವು ಆದರೂ ಪ್ರಸ್ತುತಪಡಿಸಿದ ರೀತಿಯಲ್ಲಿ ಒಂದಕ್ಕೊಂದು ಲಿಂಕ್‌ ಇರಲೇಬೇಕು. ಲೇಖನದಲ್ಲಿ ಪಾರಾಗ್ರಾಫಿಂದ ಪಾರಾಗ್ರಾಫಿಗೆ, ವಾಕ್ಯದಿಂದ ವಾಕ್ಯಕ್ಕೆ, ಕೊನೆಗೆ ಪದದಿಂದ ಪದಕ್ಕೆ ಸಹ ಅನೂಚಾನವಾದ ಟ್ರಾನ್ಸಿಷನ್‌ ಇರಬೇಕು. ಅತ್ಯುತ್ತಮವಾದ ಟ್ರಾನ್ಸಿಷನ್‌ ಹೇಗಿರಬೇಕೆಂದರೆ ಅದು ಇದ್ದೂ ಇಲ್ಲದಂತಿರಬೇಕು! ಬಿಡಿಸಿಹೇಳಬೇಕೆಂದರೆ, ಲೇಖನದಲ್ಲಿ ಹೆಚ್ಚುವರಿ ‘ಕೊಂಡಿ’ ಶಬ್ದಗಳ ಬಳಕೆಯಿಲ್ಲದೆಯೇ ಒಂದು ವಾಕ್ಯ/ವಿಚಾರ ಮುಗಿದಾಗ ಓದುಗನ ಚಿತ್ತವೇ ಮುಂದಿನ ವಾಕ್ಯ/ವಿಚಾರಕ್ಕೆ ಟ್ರಾನ್ಸಿಷನ್‌ ಹೊಂದುವಂತೆ ಮಾಡುವ ತಾಕತ್ತಿರಬೇಕು!

ಪಳಗಿದ, ಪರಿಪಕ್ವ ಲೇಖಕ(ಕಿ) ಬರೆದ ಲೇಖನಕ್ಕೆ ಆ ತಾಕತ್ತಿರುತ್ತದೆ. ಆದರೆ ನಾವೆಲ್ಲ ‘ಪಳಗಿದ’ವರಲ್ಲವಲ್ಲ!? ಹಾಗಾಗಿ ನಾವು ಟ್ರಾನ್ಸಿಷನ್‌ ಕೊಂಡಿಗಳನ್ನು ಅವಲಂಬಿಸಬೇಕಾಗಿ ಬರುತ್ತದೆ. ಇಲ್ಲಾಂದರೆ ನಮ್ಮ ಬರಹವು ವಿಚಾರಗಳ ಒಂದು ದ್ವೀಪಸಮೂಹವಾಗುತ್ತದೆಯೇ ವಿನಹ ಆ ಎಲ್ಲ ದ್ವೀಪಗಳನ್ನು ಒಂದೇ ಟ್ರಿಪ್‌ನಲ್ಲಿ ಭೇಟಿಮಾಡುವುದು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ನಾವು ಲೇಖನದ ಸಾಮಗ್ರಿಯನ್ನೆಲ್ಲ ಮನಸ್ಸಲ್ಲೇ ಒಟ್ಟುಮಾಡುತ್ತಿರುವಾಗಲೇ ಆ ಸಾಮಗ್ರಿಯನ್ನು ಯಾವ ಕ್ರಮದಲ್ಲಿ ಜೋಡಿಸಬೇಕು ಮತ್ತು ಆ ಜೋಡಣೆಗೆ ಬೇಕಾಗುವ ಟ್ರಾನ್ಸಿಷನ್‌ ಕೊಂಡಿಗಳನ್ನೂ ಮೊದಲೇ ಮನಸ್ಸಲ್ಲಿ ಸೇರಿಸಿಟ್ಟುಕೊಳ್ಳಬೇಕಾಗುತ್ತದೆ.

ಆದರೂ ಎಷ್ಟೇ ತಯಾರಿ ಮಾಡಿಕೊಂಡಿದ್ದರೂ ಯೋಚನಾಸರಣಿಗೆ ಅಕ್ಷರರೂಪ ಬಂದು ಅದೊಂದು ಲೇಖನವಾದಾಗ ನಾವೇ ಒಮ್ಮೆ ಓದಿನೋಡಿದರೆ ಅಲ್ಲೊಂದು ಇಲ್ಲೊಂದು ‘ಸ್ಪೀಡ್‌ ಬಂಪ್‌’ ಸಿಕ್ಕೇ ಸಿಗುತ್ತದೆ. ಪ್ರಕಟವಾದ ಮೇಲೆ ಏನೂ ಮಾಡುವಂತಿಲ್ಲ. ಆದರೆ ಮುಂದಿನ ಸಲವಾದರೂ ಈರೀತಿಯ ವೇಗತಡೆಗಳು ಸಿಗಬಾರದೆಂದಿದ್ದರೆ ಲೇಖನವನ್ನು ಸಿದ್ಧಪಡಿಸುವಾಗಲೇ ಕೆಲವು ಕಿವಿಮಾತುಗಳನ್ನು ಅಳವಡಿಸಿಕೊಂಡರೆ ಅನುಕೂಲವಾಗುತ್ತದೆ. ಆಗ ಲೇಖನಕ್ಕೆ ಸ್ವಾಭಾವಿಕವಾದ ಓಘ ಬರುತ್ತದೆ.

ಪಟ್ಟಿಯ ರೀತಿ ಪ್ರಸ್ತುತಿ : ನಿಮ್ಮ ಲೇಖನವು, ಪಟ್ಟಿಮಾಡಬಹುದಾದ ವಿಚಾರಗಳ ಬಗ್ಗೆ ಇದ್ದರೆ - ಉದಾಹರಣೆಗೆ ಭೌತಶಾಸ್ತ್ರದ ಐದು ಅತಿಪ್ರಮುಖ ಸಂಶೋಧನೆಗಳ ಬಗ್ಗೆ ಅಂತಿರಲಿ - ಆಗ ಸರಿಸುಮಾರಾಗಿ ಲೇಖನದ ಆರಂಭದಲ್ಲೇ ಅದನ್ನು ಸೂಚ್ಯವಾಗಿ ಓದುಗನ ಮನಸ್ಸಲ್ಲಿ ನೆಟ್ಟರೆ, ಆಮೇಲೆ ‘ಸಾಪೇಕ್ಷ ಸಿದ್ಧಾಂತ’ದ ಟಾಪಿಕ್‌ನಿಂದ ‘ವಿಕಿರಣ’ ಟಾಪಿಕ್‌ಗೆ ಅನಾಯಾಸವಾಗಿ ಜಿಗಿಯಬಹುದು. ಅಲ್ಲಿ ಓದುಗನ ಮನಸ್ಸಿಗೆ ಕಿರಿಕಿರಿ ಆಗುವುದಿಲ್ಲ. ಪಟ್ಟಿಯ ಅಂಶಗಳನ್ನೆಲ್ಲ ನಂಬರ್‌ ಹಾಕಿದ ಪಾರಾಗ್ರಾಫ್‌ಗಳಲ್ಲಿ ಜೋಡಿಸಿದರೂ ಆಗುತ್ತದೆ, ಅಥವಾ ಪಾರ್ಶ್ವಶೀರ್ಷಿಕೆ (side-heading) ಗಳೊಂದಿಗೆ ಬರೆದರೂ ಆಗುತ್ತದೆ. ಲೇಖನದ ಹರಿವಿಗೇನೂ ಧಕ್ಕೆ ಬರುವುದಿಲ್ಲ.

ಹೋಲಿಕೆಯ ಕೊಂಡಿಗಳು : ಸಾಮಾನ್ಯ ಅಂಶಗಳುಳ್ಳ ಸಂಗತಿಗಳನ್ನೆಲ್ಲ ಸೇರಿಸಿ ನೀವು ಲೇಖನ ಬರೆಯುವುದಾದರೆ ಕೊಂಡಿ ಪದಗಳ ಬಳಕೆ ಇಲ್ಲದೆಯೂ ನಿಭಾಯಿಸಬಹುದು, ಅಥವಾ ಬೇಕೆಂದರೂ, ‘ಅದೇ ರೀತಿ’, ‘ಹಾಗೆಯೇ’ ಮೊದಲಾದ ಸಿಮಿಲಾರಿಟಿ ಟ್ರಾನ್ಸಿಷನ್‌ ಕೊಂಡಿಗಳ ಬಳಕೆಯಿಂದ ನಿಮ್ಮ ಲೇಖನಕ್ಕೆ ಓದಿಸಿಕೊಳ್ಳುವ ಕಸುವು ಬರುತ್ತದೆ. ಹಣ್ಣುಗಳ ಬಗ್ಗೆ ನಿಮ್ಮ ಪ್ರಬಂಧ ಎಂದಿಟ್ಟುಕೊಳ್ಳಿ. ಕಿತ್ತಳೆಯ ಬಗ್ಗೆ ಒಂದಿಷ್ಟು ಬ(ಕೊ)ರೆದಿರಿ; ಮುಂದಿನ ಪಾರಾಗ್ರಾಫನ್ನು ‘ಕಿತ್ತಳೆ ಹಣ್ಣಿನಂತೆಯೇ ಅದೇ ಪ್ರವರ್ಗಕ್ಕೆ ಸೇರಿದ ...’ ಎಂದು ಆರಂಭಿಸಿದರೆ ಮೂಸಂಬಿಯ ಬಗೆಗಿನ ಆ ಪಾರಾಗ್ರಾಫ್‌ ತನ್ನಿಂತಾನೆ ಓದಲ್ಪಡುತ್ತದೆ; ಅದು ನತದೃಷ್ಟವಾಗುವ, ಡಿಸ್‌ಕನೆಕ್ಟ್‌ ಆಗುವ ಸಾಧ್ಯತೆ ತಪ್ಪುತ್ತದೆ.

ವೈರುದ್ಧ್ಯದ ಕೊಂಡಿಗಳು : ಹೋಲಿಕೆಯುಳ್ಳ ವಿಚಾರಗಳನ್ನು ಕೊಂಡಿಗಳ ಮೂಲಕ ಜೋಡಿಸಿದಂತೆಯೇ ಪರಸ್ಪರ ವಿರುದ್ಧವಾದ ಸಂಗತಿಗಳನ್ನೂ ಒಂದರ ಪಕ್ಕ ಇನ್ನೊಂದು ಜೋಡಿಸಬಹುದು! ಅದಕ್ಕೆ ಸರಿಯಾಗಿ, ‘ಆದರೆ’, ‘ಇನ್ನೊಂದು ಕಡೆಯಿಂದ’, ‘ಅದಕ್ಕೆ ತದ್ವಿರುದ್ಧವಾಗಿ...’ ಮುಂತಾದ (ಇಂಗ್ಲಿಷ್‌ನಲ್ಲಾದರೆ But, On the other hand, However ಇತ್ಯಾದಿ) ಪದಪುಂಜಗಳಿಂದ ಪ್ಯಾರಾಗ್ರಾಫನ್ನು ಆರಂಭಿಸಬೇಕು. ಆ ತಂತ್ರವನ್ನು ಬಳಸಿಕೊಂಡರೆ ಹಿಮಕರಡಿಗಳ ವಿಷಯದ ಪಾರಾಗ್ರಾಫ್‌ನ ನಂತರ ಪೆಂಗ್ವಿನ್‌ಗಳ ಬಗೆಗಿನ ಪಾರಾಗ್ರಾಫ್‌ಗೆ ನಿರಾಯಾಸ ವರ್ಗಾವಣೆ. ಓದುಗನ ಮನಸ್ಸಿಗೇನೂ ಇಲ್ಲ ಬವಣೆ.

ಕಾಲಾನುಕ್ರಮಣದ ಪ್ರಸ್ತುತಿ: ಇಂಗ್ಲಿಷಲ್ಲಿ chronological order ಎನ್ನುವ ರೀತ್ಯಾ ನಿಮ್ಮ ನಿರೂಪಣೆ ಇದ್ದರೆ ಲೇಖನಕ್ಕೆ ತನ್ನಿಂತಾನೇ ಹರಿವು ಬಂದಿರುತ್ತದೆ. ‘ಅದಾದ ಬಳಿಕ’, ‘ಮರುವರ್ಷ’, ‘ಮುಂದೆ ತಾರುಣ್ಯದಲ್ಲಿ...’, ‘ಹೀಗಿರಲು ಒಂದು ದಿನ...’ ಮೊದಲಾದ ಟ್ರಾನ್ಸಿಷನ್‌ ಲಿಂಕ್‌ಗಳು ಈ ರೀತಿಯ ನಿರೂಪಣೆಗೆ ಸಹಾಯಕವಾಗುತ್ತವೆ. ಅದರರ್ಥ ಪಕ್ಕಾ ಕಾಲಾನುಕ್ರಮದಲ್ಲೇ ನಿರೂಪಿಸಬೇಕೆಂದೇನೂ ಅಲ್ಲ. ಸಿನೆಮಾಗಳಲ್ಲಿದ್ದಂತೆ ‘ಫ್ಲಾಷ್‌ ಬ್ಯಾಕ್‌’ ನಮೂನೆಯಲ್ಲಿ ಪಾರಾಗ್ರಾಫ್‌ ಆರಂಭಿಸಬಹುದು. ಸಣ್ಣಕತೆ, ಮಿನಿಕಾದಂಬರಿಗೆ ಅದು ಸರಿಹೋಗಬಹುದು. ಆದರೆ ಪ್ರಬಂಧವಾಗಲೀ ಲೇಖನವಾಗಲೀ ಕಾಲಗಣನೆಯ ಆರೋಹಣಕ್ರಮದಲ್ಲಿದ್ದರೇನೇ ಚೆನ್ನ.

ತಾರ್ಕಿಕ ಜೋಡಣೆ : ಕೆಲವೊಮ್ಮೆ ಒಂದು ವಿಚಾರದಿಂದ ಮುಂದಿನ ವಿಚಾರಕ್ಕೆ ದಾಟುವಾಗ ಯಾವುದೇ ಟ್ರಾನ್ಸಿಷನ್‌ ಲಿಂಕ್‌ ಬಳಸಲಾರದೇ ಇರಬೇಕಾದ ಸಂದರ್ಭ ಬಂದೀತು. ಪರವಾ ಇಲ್ಲ, ಪಾರಾಗ್ರಾಫ್‌ನ ಮೊದಲ ವಾಕ್ಯ ಓದುಗನಿಗೆ ಒಂದು ‘ಮೈಲ್ಡ್‌ ಷಾಕ್‌’ ಕೊಡಬಹುದಾದರೂ ತಾರ್ಕಿಕವಾಗಿ ಆ ಪಾರಾಗ್ರಾಫ್‌ ಸಹ ಹಿಂದಿನದಕ್ಕೆ ಹೊಂದಿಕೊಳ್ಳುವಂತೆಯೇ ಇದ್ದರೆ ಸರಿ ಹೋಗುತ್ತದೆ. ಅಂತಹ ಸನ್ನಿವೇಶಗಳಲ್ಲಿ ಒಂದು ಉಪಮೆ, ಕೊಟೇಷನ್‌, ಅಥವಾ ಇನ್ನಿತರ ಅರ್ಥಾಲಂಕಾರ, ಶಬ್ದಾಲಂಕಾರಗಳನ್ನು ಸೇತುವೆಗಳಾಗಿ ಉಪಯೋಗಿಸಬಹುದು. ಉಪಮೆಗಳು, ಅಲಂಕಾರಗಳು ನಿಮ್ಮ ಲೇಖನದ ವಿಷಯಕ್ಕೆ ಸಂಬಂಧವುಳ್ಳವೇ ಆಗಿರುವಂತೆ ನೋಡಿಕೊಳ್ಳಬೇಕಾದ್ದು ಮುಖ್ಯ.

ಅಂತೂ ಲೇಖನದ ಹರಿವು ಚೆನ್ನಾಗಿರುವಂತೆ ಎಚ್ಚರ ಅತ್ಯಗತ್ಯ. ಓದುಗನ ಮನಸ್ಸನ್ನು ಹೈಜಾಕ್‌ ಮಾಡಬಲ್ಲಂಥ ಪರಿಣಾಮಕಾರಿ ಪಾರಾಗ್ರಾಫ್‌ ಆರಂಭದಲ್ಲಿ ಇದ್ದರೆ ಅರ್ಧದಷ್ಟು ಜಯ ಸಾಧಿಸಿದಂತೆಯೇ. ಮತ್ತೆ ಅಲ್ಲಲ್ಲಿ ಚದುರಿದಂತೆ ಹಾಸ್ಯರಸ, ಕೊಂಚ ಗಾಂಭೀರ್ಯ, ಸ್ವಲ್ಪ ಗತ್ತು ಗಮ್ಮತ್ತಿನ ವಿಚಾರಗಳು ಸೇರಿದ ಲೇಖನ ಸಮಂಜಸವಾದ ಕೊಂಡಿಗಳ ಬಳಕೆಯಿಂದ ಚೆನ್ನಾಗಿಯೇ ಮೂಡಿಬರುತ್ತದೆ. ಬರೆದು ಮುಗಿಸಿದ ನಂತರ ನಾಲ್ಕೈದು ಸಲವಾದರೂ ಓದಿನೋಡಿಯೇ, ಹರಿವು ಸುಸೂತ್ರವಾಗಿದೆ ಎಂದು ನಿಮ್ಮ ಮನಸಿಗೆ ಅನಿಸಿದ ಮೇಲೆಯೇ ಸಂಪಾದಕರಿಗೆ ಕಳಿಸಿದಿರೆಂದರೆ ಅವರ ಯಾವ ಲಿಟ್ಮಸ್‌ ಟೆಸ್ಟ್‌ನಲ್ಲೂ ಅದು ಫೇಲಾಗುವ ಸಂಭವವೇ ಇಲ್ಲ! ಈ ಮಾತು ಪತ್ರಿಕೆಗಳಿಗೆ ಬರೆಯುವ ಲಘುಹರಟೆ ಲೇಖನಗಳಿಗಷ್ಟೇ ಅನ್ವಯವಲ್ಲ ; ಪಿಎಚ್‌.ಡಿ ಪದವಿ ಗಳಿಸಲು ಬರೆಯುವ ಸಂಶೋಧನಾ ಪ್ರಬಂಧಕ್ಕೂ ಲಗಾವಾಗುತ್ತದೆ!

ಹಾಗಾದರೆ, ಒಳ್ಳೆಯ ಹರಿವಿನ ಲೇಖನ ಬರೆಯುವ ಹುಮ್ಮಸ್ಸು ಮತ್ತು ಅದರಲ್ಲಿ ಅಭೂತಪೂರ್ವ ಯಶಸ್ಸು ನಿಮ್ಮದಾಗಲಿ.

* * *

ಕೊನೆಯಲ್ಲೊಂದು ಸ್ವಗತ. ತಮಿಳು ಚಲನಚಿತ್ರ ‘ಸಿಂಧುಭೈರವಿ’ಯಲ್ಲಿ ಒಂದು ಮಧುರವಾದ ಹಾಡಿದೆ- ‘ಪೂಮಾಲೆ ವಾಂಗಿ ವಂದಾನ್‌... ಪೂಕ್ಕಳಿಲ್ಲೈಯೆ...’ ಎಂದು. ಇಂಗ್ಲಿಷ್‌ನಲ್ಲಿ He brought a garland… Alas! With no flowers…! ಅಂತ ಅದಕ್ಕೆ sub-titles ಬಂದಿತ್ತು. ‘ಓದಿಸಿಕೊಂಡು ಹೋಗುವ ಲೇಖನವನ್ನು ಬರೆಯೋದು ಹೇಗೆ’ ಎಂಬ ವಿಷಯದ ನನ್ನ ಈ ಲೇಖನವೇ ಓದಿಸಿಕೊಂಡು ಹೋಗೋದರಲ್ಲಿ ನಪಾಸಾಗಿಲ್ಲವೆಂದು ನಂಬಿದ್ದೇನೆ. ಏನಂತೀರಾ? - srivathsajoshi@yahoo.com

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more