• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟಾಂಪಾದಲ್ಲಿ ರಾಗಿಯ ತಂಪೂ ಬಾಳ್ಕಮೆಣ್ಸಿನ ಕಂಪೂ...

By Staff
|
Srivathsa Joshi *ಶ್ರೀವತ್ಸ ಜೋಶಿ
ಒರ್ಲಾಂಡೊದಲ್ಲಿ ವಿಶ್ವಕನ್ನಡ ಸಮ್ಮೇಳನವೇನೊ ರವಿವಾರ ಸೆ.5ಕ್ಕೆ ಮುಗಿಯಿತು, ಆದರೆ ಫ್ರಾನ್ಸಿಸ್‌ನ (ಚಂಡಮಾರುತ) ಆಟಾಟೋಪದಿಂದಾಗಿ ಅಲ್ಲಿನ ವಿಮಾನನಿಲ್ದಾಣವಿನ್ನೂ ಸ್ಥಗಿತವಾಗಿಯೇ ಇತ್ತು. ನಾನು ವಾಷಿಂಗ್ಟನ್‌ಗೆ ವಾಪಾಸ್‌ ಪ್ರಯಾಣಿಸಲು ವಿಮಾನಯಾನ ಸಂಸ್ಥೆಗೆ ಫೋನಾಯಿಸಿದಾಗ, ಒರ್ಲಾಂಡೊದಿಂದ ಮಂಗಳವಾರ ಮಧ್ಯಾಹ್ನದ ನಂತರವಷ್ಟೆ ವಿಮಾನಗಳು ಹೊರಡಲಾರಂಭಿಸಬಹುದು, ಬೇಕಿದ್ದರೆ ಹತ್ತಿರದ ನಗರವಾದ ಟಾಂಪಾದಿಂದ ಹೊರಡುವ ವಿಮಾನದಲ್ಲಿ ಮಂಗಳವಾರ ಬೆಳಗ್ಗೆಯೇ ಸೀಟ್‌ಇದೆ ಎಂದು ತಿಳಿದು ಬಂತು. ಸರಿ, ಟಾಂಪಾದಿಂದ ವಿಮಾನಹತ್ತಿಯಾದರೂ ಬೇಗ ಆ ಚಂಡಮಾರುತಪೀಡಿತ ಫ್ಲಾರಿಡಾದಿಂದ ಪಾರಾಗುವುದಕ್ಕಾಗಿ ಸೋಮವಾರವೇ ಒರ್ಲಾಂಡೊದಿಂದ ಟಾಂಪಾಕ್ಕೆ ಬಂದು ಸೇರುವುದು ಎಂದು ನಿರ್ಧರಿಸಿದೆ. ಸಮ್ಮೇಳನ ಪ್ರತ್ಯಕ್ಷವರದಿಗಳನ್ನು ಅಂತರ್ಜಾಲದಲ್ಲಿ ಪ್ರಸಾರಿಸಿದ ಅದುವೆಕನ್ನಡ ಶಾಮ್‌ ಕೂಡ ನನ್ನೊಂದಿಗಿದ್ದರು.

ಟಾಂಪಾಗೆ ಹೋಗಲು ನಾವು ನಿರ್ಧರಿಸಿದ್ದಕ್ಕೆ ಇನ್ನೊಂದು ಕಾರಣವೆಂದರೆ ಅಲ್ಲಿ ನಮ್ಮ ಪರಿಚಯಸ್ಥರು ಇದ್ದಾರೆ. ಟಾಂಪಾದ ಬಹುಜನಪ್ರಿಯ ಎನ್‌.ಎಸ್‌ ಫುಡ್ಸ್‌ ದೋಸೆ ಕ್ಯಾಂಪ್‌ ಇಂಡಿಯನ್‌ ಸ್ಟೋರ್‌ನ ನಾಗಲಕ್ಷ್ಮಿ (ನಾಗು) ಮತ್ತು ವಿಜಯಶಂಕರ್‌ ಅವರು ಶಾಮ್‌ಗೆ ಹತ್ತಿರದ ಸಂಬಂಧ. ಟಾಂಪಾದಲ್ಲಿ ಅವರ ಮನೆಯಲ್ಲಿ ಸೋಮವಾರ ಮೊಕ್ಕಾಂ ಹೂಡಿ ಮಂಗಳವಾರ ಬೆಳಿಗ್ಗೆ ಹೊರಡುವುದು ನಮ್ಮ ಪ್ಲಾನ್‌. ಒರ್ಲಾಂಡೊದಿಂದ ಟಾಂಪಾ ಸುಮಾರು ಒಂದೂವರೆಗಂಟೆ ಕಾರ್‌ಪ್ರಯಾಣದಷ್ಟು ದೂರ. ಅಂತಾರಾಜ್ಯ ಹೆದ್ದಾರಿ 4ರಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಸುಮಾರು 80 ಮೈಲುಗಳಷ್ಟು ಬಂದರಾಯಿತು. ಸಮ್ಮೇಳನದಲ್ಲೇ ನನಗೆ, ದಾವಣಗೆರೆಯಲ್ಲಿ ಇಂಜನಿಯರಿಂಗ್‌ ಕಾಲೇಜ್‌ಮೇಟ್‌ ಆಗಿದ್ದ ಪಮ್ಮಿ (ಪದ್ಮನಾಭ) ಭೇಟಿಯಾಗಿದ್ದು ಆತ ಟಾಂಪಾನಿವಾಸಿಯಾಗಿರುವುದೂ ಒರ್ಲಾಂಡೊದಿಂದ ವಾಪಸಾಗುವಾಗ ತನ್ನ ಜತೆ ನಮ್ಮನ್ನೂ ಟಾಂಪಾಕ್ಕೆ ಕರೆದೊಯ್ಯಬಲ್ಲೆ ಎಂದು ಹೇಳಿದ್ದೂ ನಮಗೆ ಬಹಳ ಅನುಕೂಲವೇ ಆಯಿತು.

ಒರ್ಲಾಂಡೊದಷ್ಟಲ್ಲವಾದರೂ ಟಾಂಪಾದಲ್ಲೂ ಫ್ರಾನ್ಸಿಸ್‌ನ ಕಿರುಕುಳ ಸ್ವಲ್ಪಮಟ್ಟಿಗೆ ಇತ್ತು. ಗಾಳಿಮಳೆಯಿಂದ ಕೆಲವೆಡೆ ಪವರ್‌ಕಟ್‌ ಆಗಿತ್ತು. ನಾಗು-ಶಂಕರ್‌ ಮನೆಗೆ ನಾವು ಬೆಳಿಗ್ಗೆ ಒರ್ಲಾಂಡೊದಿಂದಲೇ ಫೋನ್‌ ಮಾಡಿದಾಗ ‘ಮನೆಯಲ್ಲಿ ಕರೆಂಟಿಲ್ಲ , ನಾವೂ ಸ್ಟೋರ್‌ಗೆ ಬಂದಿರುತ್ತೇವೆ, ಅಲ್ಲಿಗೇ ಬನ್ನಿ ಅಡಿಗೆ ಮಾಡಿ ಎಲ್ಲರೂ ಊಟ ಮಾಡೋಣ...’ ಎಂದಿದ್ದರು. ಒರ್ಲಾಂಡೊದಿಂದ ಕಾರಲ್ಲಿ ನಮ್ಮನ್ನು ಕರೆತಂದ ಪಮ್ಮಿ-ವೀಣಾ ದಂಪತಿ ನಮ್ಮನ್ನು ಎನ್‌.ಎಸ್‌.ಫುಡ್ಸ್‌ ಬಳಿ ಇಳಿಸಿ ಮುಂದುವರೆದರೆ ನಾಗು ಮತ್ತವರ ಪತಿ ಶಂಕರ್‌ ಆಗಷ್ಟೆ ಮನೆಯಿಂದ ಹೊರಟು ಸ್ಟೋರ್‌ ತಲುಪಿದ್ದರು. ಅವತ್ತು ಲೇಬರ್‌ಡೇ ಪ್ರಯುಕ್ತ ರಜಾದಿನವಾದ್ದರಿಂದ ಸ್ಟೋರ್‌ನ ಹೊಟೆಲ್‌ ವಿಭಾಗಕ್ಕೆ ರಜೆ; ದಿನಸಿಪದಾರ್ಥಗಳ ಸೆಕ್ಷನ್‌ ಮಾತ್ರ ‘ಮುಂದಾಗಿ ಫೋನ್‌ ಮಾಡಿ ಬರುವ ಗಿರಾಕಿ’ಗಳಿಗೋಸ್ಕರ ತೆರೆದಿತ್ತು.

Srivathsa Joshi with A Ra Mitra at Tampa Indian Food Jointನಾವೆಲ್ಲ ಅಲ್ಲಿ ಸೇರಿದ ಸ್ವಲ್ಪ ಹೊತ್ತಿಗೇ ನಾಗು ಅವರ ಬಾಲ್ಯಸ್ನೇಹಿತೆ ರಾಜೇಶ್ವರಿ-ಕೇಶವಮೂರ್ತಿ ದಂಪತಿ ಕೂಡ (ಸಮ್ಮೇಳನ ಮುಗಿಸಿ ಟಾಂಪಾದಿಂದ ನ್ಯೂಜೆರ್ಸಿಗೆ ಸಂಜೆಯ ವಿಮಾನದಲ್ಲಿ ಪ್ರಯಾಣಿಸಬೇಕಾದವರು) ಸ್ನೇಹದ ಸ್ಮರಣೆಯಿಂದ ಅಲ್ಲಿಗೆ ಬಂದರು. ಹದಿನಾಲ್ಕು ವರ್ಷಗಳ ನಂತರ ಅವರೀಗ ಪರಸ್ಪರ ಭೇಟಿಯಾಗುತ್ತಿರುವುದಂತೆ! ಅವರು ಬಂದ ಸ್ವಲ್ಪ ಹೊತ್ತಿನಲ್ಲೇ, ಒರ್ಲಾಂಡೊ ಸಮ್ಮೇಳನದಲ್ಲಿ ಭಾಗವಹಿಸಿದ್ದ, ಭಾರತದಿಂದ ಆಗಮಿಸಿರುವ ಹಾಸ್ಯಬ್ರಹ್ಮ ಪ್ರೊ।ಅ.ರಾ.ಮಿತ್ರ ಅವರನ್ನೂ ಕರಕೊಂಡು ಇನ್ನೊಬ್ಬ ಟಾಂಪಾ ನಿವಾಸಿ, ಸಮ್ಮೇಳನದಲ್ಲಿ ನಮಗೆ ಪರಿಚಯವಾದ ಡಾ।ವಾಸುದೇವ್‌-ಪೊನ್ನಮ ದಂಪತಿಯೂ ಬಂದರು! (ಸಮ್ಮೇಳನ ಸ್ಮರಣಸಂಚಿಕೆಯ ಸಂಪಾದಕಮಂಡಳಿ ಪ್ರಮುಖರು ಡಾ।ವಾಸುದೇವ್‌. ಸಂಚಿಕೆಗೆ ಅಂದವಾದ ಮುಖಪುಟ ರಚಿಸಿಕೊಟ್ಟ ಜನಾರ್ದನಸ್ವಾಮಿ ನನ್ನ ಕಾಲೇಜ್‌ಮೇಟ್‌ ಮತ್ತು ಖಾಸಾಸ್ನೇಹಿತ ಎನ್ನುವ ಸಂಗತಿ ತಿಳಿದ ವಾಸುದೇವ್‌ಗೆ ನಮ್ಮೇಲೆ ಇನ್ನೂ ಹೆಚ್ಚಿನ ಅಭಿಮಾನ).

‘ಬನ್ನಿ ಬನ್ನಿ, ಎಲ್ಲರಿಗೂ ಸ್ವಾಗತ. ಇವತ್ತು ನಮ್ಮ ದೋಸೆಕ್ಯಾಂಪ್‌ನಲ್ಲಿ ದೋಸೆ ಮಾಡಿಲ್ಲ , ಆದರೆ ಒಳ್ಳೇ ಬಿಸಿಬಿಸಿ ಅನ್ನ, ಸಾಂಬಾರ್‌ ಮಾಡಿ ಬಡಿಸುತ್ತೇನೆ...’ ಎಂದು ನಗುಮೊಗದ ಸ್ವಾಗತ ‘ಅನ್ನಪೂರ್ಣೆ’ ನಾಗು ಅವರದಾದರೆ ವಿಶ್ವಕನ್ನಡ ಸಮ್ಮೇಳನದಲ್ಲಿ , ಚಂಡಮಾರುತ ಫ್ರಾನ್ಸಿಸ್‌ನ ಅಬ್ಬರಕ್ಕೆ ಸರಿಸಾಟಿಯಾಗಿ ನಗೆಯಲೆಗಳನ್ನೆಬ್ಬಿಸಿ ಸಭಿಕರೆಲ್ಲರ ಜನಮನ ಗೆದ್ದಿದ್ದ ಅ ರಾ ಮಿತ್ರ ಅವರೊಂದಿಗೆ ಕುಳಿತು ಹರಟೆಯಾಡುತ್ತ ಅವರ ಹಾಸ್ಯಲಹರಿಗೆ ಮೈ-ಮನವೊಡ್ಡುತ್ತ ಆರಾಮಾಗಿ ಕುಳಿತು ಊಟ ಮಾಡುವ ಅವಕಾಶ ನಮ್ಮೆಲ್ಲರದು! ಅ ರಾ ಮಿತ್ರ ಅವರೊಂದಿಗೆ ಅವರ ಪಟ್ಟಶಿಷ್ಯ ಪ್ರೊ। ಕೃಷ್ಣೇಗೌಡ (ಸಮ್ಮೇಳನದಲ್ಲಿ ನಗೆಬಾಂಬ್‌ ಸ್ಫೋಟಿಸಿದ ಇನ್ನೊಬ್ಬ ಮಹಾನ್‌ ಪ್ರತಿಭೆ) ಕೂಡ ಇರುತ್ತಿದ್ದರೆ ಇನ್ನೂ ಮಜಾ ಬರೋದು. ಅಂತೂ ವಿಶ್ವಕನ್ನಡ ಸಮ್ಮೇಳನದ ಮಾರನೇ ದಿನವೇ ನಮ್ಮದೊಂದು ಅನೌಪಚಾರಿಕ ಮರಿ-ಸಮ್ಮೇಳನ!

ಮೋಡಕವಿದ ವಾತಾವರಣ, ಜಿಟಿಜಿಟಿ ಮಳೆಯೂ ಬರುತ್ತಿತ್ತು. ಬೆಳಿಗ್ಗೆಯಿಂದ ಏನೂ ತಿಂಡಿಯಿಲ್ಲದೆ, ದಾರಿಗುಂಟ ರೆಸ್ಟ್‌ಏರಿಯಾಗಳೂ ಮುಚ್ಚಿದ್ದರಿಂದ ಅಲ್ಲಿ ಸೇರಿದ್ದ ನಮ್ಮೆಲ್ಲರಿಗೂ ಅದಾಗಲೇ ಮಧ್ಯಪ್ರದೇಶದಲ್ಲಿ ಕೋಲಾಹಲ ಶುರುವಾಗಿತ್ತು. ಮಧ್ಯಾಹ್ನ ಗಂಟೆ ಒಂದೂವರೆ-ಎರಡಾಗುತ್ತ ಬಂದಿದ್ದರಿಂದ ಏಕ್‌ದಂ ಹೊಟ್ಟೆಹಸೀತಿತ್ತು. ಅನ್ನ-ಹುಳಿ ಆಗುವವರೆಗೂ ಬಾಯಾಡಿಸುವುದಕ್ಕಾಗಿ ಹಪ್ಪಳ-ಸಂಡಿಗೆ ಕರಿದುಕೊಟ್ಟರು ನಾಗು. ಅಲ್ಲೇ ಇದ್ದ ಟಿವಿಯಲ್ಲಿ ಉದಯ ಚಾನೆಲ್‌ನಲ್ಲಿ ಅಣ್ಣಾವ್ರ ‘ಬಬ್ರುವಾಹನ’ ಸಿನೆಮಾ ಬೇರೆ ಬರುತ್ತ ಇತ್ತು. ಕರುಂಕುರುಂ ಸಂಡಿಗೆ ಮೆಲ್ಲುತ್ತಾ ಹರಟುತ್ತ ಸಮ್ಮೇಳನ ರಸಗಳಿಗೆಗಳ ಸ್ಮರಿಸುತ್ತ ಇದ್ದಂತೆ ಅನ್ನ-ಸಾಂಬಾರ್‌ ರೆಡಿಯಾಯ್ತು.

Raagimudde - Stample Food of SouthKarnataka peopleಅಪರೂಪಕ್ಕೆ ಇಷ್ಟೆಲ್ಲ ಆತ್ಮೀಯರು, ಅತಿಥಿಗಳು ತಮ್ಮಲ್ಲಿಗೆ ಬಂದು ಜೊತೆಯಾಗಿ ಊಟ ಮಾಡುವ ವಿಚಾರವೇ ನಾಗು-ಶಂಕರ್‌ ದಂಪತಿಗೆ ಧನ್ಯತಾಭಾವದ ಸಂತಸ ತಂದಿತ್ತು. ಹಪ್ಪಳ-ಸಂಡಿಗೆಗಳ ‘ಟ್ರೇ’ಗಳೆರಡೂ ಖಾಲಿಯಾಗುತ್ತ ಬಂದಿದ್ದವು. ಅನ್ನ-ಹುಳಿ-ಮೊಸರು ಮಾತ್ರ ಯಾಕೆ, ಮೊನ್ನೆಮೊನ್ನೆ ಇಂಡಿಯಾದಿಂದ ಫ್ರೆಷ್‌ ಆಗಿ ತರಿಸಿದ ರಾಗಿಹಿಟ್ಟಿದೆ, ಮುದ್ದೆ ಮಾಡಲೇ, ಇಷ್ಟವಿದೆಯೇ ಯಾರಿಗಾದ್ರೂ ಅಂತ ನಾಗು ಕೇಳೊದೇ ತಡ - ಪ್ರೊ।ಮಿತ್ರ ಸೇರಿದಂತೆ ಒಕ್ಕೊರಲಿಂದ ಎಲ್ಲರ ಅಂಗೀಕಾರ ರಾಗಿಮುದ್ದೆಗೆ! ಸರಿ, ರಾಗಿಮುದ್ದೆಯೂ ತಯಾರಾಯಿತು. ‘ಹಪ್ಪಳ-ಸಂಡಿಗೆ ಕರಿಯಲು ಹೇಗೂ ಎಣ್ಣೆ ಬಿಸಿಮಾಡಿದ್ದೇ ಇದೆ, ಒಂದಿಷ್ಟು ಬಾಳ್ಕ ಮೆಣಸಿನಕಾಯಿ ಕೂಡ ಕರಿದುಬಿಡು...’ ಎಂದರು ಶಂಕರ್‌ - ಅತಿಥಿಸತ್ಕಾರದ ಉಸ್ತುವಾರಿಹೊತ್ತ ಯಜಮಾನ.

ಗರಿಗರಿ ಮೆಣ್ಸು ಕರಿದು ತಟ್ಟೆಯಲ್ಲಿ ರೆಡಿಯಾಗಿ ಬಂತು. ರಾಗಿಮುದ್ದೆ ತಿನ್ನುತ್ತೇನೆ ಎಂದು ಮೊದಲು ಹೇಳಿದ್ದ ಅ ರಾ ಮಿತ್ರ ತನ್ನ ಪ್ರಿಫರೆನ್ಸನ್ನು ಮುದ್ದೆಯಿಂದ ಬಾಳ್ಕಮೆಣ್ಸಿಗೆ ಶಿಫ್ಟಿಸಿದರು! ಬಾಳ್ಕಮೆಣ್ಸು ಇದ್ದರೆ ಬೇರೆ ಏನೂ ಬೇಡವಂತೆ ಮಿತ್ರರಿಗೆ. ಎಸಿಡಿಟಿ ಗಿಸಿಡಿಟಿಗಳನ್ನೆಲ್ಲ ಬದಿಗಿರಿಸಿ ಮರೆತು ಅದರ ಸವಿ ಸವಿಯುತ್ತಾರವರು. ಆಮೇಲೆ ಸ್ವಲ್ಪ ರಾಗಿಮುದ್ದೆ-ಸಾಂಬಾರ್‌ ಕೂಡ ತಗೊಂಡರಾದರೂ ಮಿತ್ರ ಅವತ್ತು ಪರಮಾನಂದದಿಂದ ಉಂಡದ್ದು ಬಾಳ್ಕಮೆಣ್ಸು ಕಲೆಸಿದ ಅನ್ನ.

Baalka MeNsu : Mouthwatering aromatic spicy stuff...ಕರಾವಳಿಯಲ್ಲಿ ಹುಟ್ಟಿಬೆಳೆದ ನಾನು ರಾಗಿಮುದ್ದೆ ಬಗ್ಗೆ ಅಷ್ಟೊಂದು ಹೇಳಲಾರೆ. (ಕರಾವಳಿ: ಕುಚ್ಚಲಕ್ಕಿ ಅನ್ನ. ಬಯಲುಸೀಮೆ ಉತ್ತರಕರ್ನಾಟಕ: ಜೋಳದರೊಟ್ಟಿ. ಮಲೆನಾಡು ಹಳೇಮೈಸೂರು ಪ್ರಾಂತ್ಯ: ರಾಗಿಮುದ್ದೆ. ಶ್ರಮಜೀವಿಗಳ ಆಹಾರವಿಷಯದಲ್ಲಿ ಕರ್ನಾಟಕದ ಪ್ರಾದೇಶಿಕ ವಿಂಗಡಣೆ ಅದು). ಆದರೆ ಬಾಳ್ಕಮೆಣ್ಸು ನನಗೂ ಸೂಪರ್‌-ಫೇವರಿಟ್‌. ಬಿಸಿಬಿಸಿ ಅನ್ನಕ್ಕೆ ಬಾಳ್ಕಮೆಣ್ಸು ಹುಡಿಮಾಡಿ ಕಲೆಸಿ ಒಂದೆರಡು ಚಮಚ ತುಪ್ಪ ಅಥವಾ ಎಣ್ಣೆ ಸುರಿದು ಚಿಟಿಕೆ ಉಪ್ಪು ಸೇರಿಸಿ ಕಲೆಸಿದರೆ... ಆಹಾ... ಅಂಥಾ ರುಚಿಯು ಸಗ್ಗದಲೂ ಸಿಗದು! ಇದನ್ನೋದುತ್ತ ನಿಮ್ಮ ಬಾಯಲ್ಲೂ ಈಗಾಗಲೇ ನೀರೂರಿದೆ ಅನ್ನೋದು ನನಗೆ ಗೊತ್ತು. ಇನ್ನೂ ಟೆಂಪ್ಟಿಸಲು ಜತೆಯಲ್ಲಿ ಚಿತ್ರಗಳು ಬೇರೆ ಇವೆ :-)

ನಿಜ ಹೇಳಬೇಕೆಂದರೆ ಮೂರು ದಿನಗಳ ಒರ್ಲಾಂಡೊ ಸಮ್ಮೇಳನದ ಊಟೋಪಚಾರಗಳ ಸಂಭ್ರಮ ಸಡಗರಗಳ ತೂಕ ಒಂದಾದರೆ ಅಷ್ಟೇ ತೂಕ ಟಾಂಪಾದಲ್ಲಿ ಅವತ್ತು ನಾವೆಲ್ಲ ಆರಾಮಾಗಿ ಹರಟುತ್ತ ಉಂಡ ಸುಗ್ರಾಸ ಭೋಜನ. ಅಮೆರಿಕದಲ್ಲಿ , ಅದೂ ಅ ರಾ ಮಿತ್ರರ ಜತೆಯಲ್ಲಿ ಕುಳಿತು ರಾಗಿಮುದ್ದೆ ಬಾಳ್ಕಮೆಣ್ಸು ಅನ್ನ-ಸಾಂಬಾರ್‌ ಹಪ್ಪಳ-ಸಂಡಿಗೆ ಮೆಲ್ಲುವುದಕ್ಕೂ ಸುಯೋಗವೆಂಬುದು ಇರಬೇಕು!

ಅಂಥಾ ಅವಕಾಶವೊದಗಿಸಿದ ನಾಗು, ಶಂಕರ್‌ - ಅನ್ನದಾತಾ ಮುದ್ದೆದಾತಾ ಬಾಳ್ಕಮೆಣ್ಸುದಾತಾ ಸುಖೀ ಭವ ।।

- srivathsajoshi@yahoo.com

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more