ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೂಯಿಂಗ್‌ಗಮ್ಮ ಗಮ್ಮಾಡಿಸ್ತಾವ ಹಲ್ಲಿಗೀ...?

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

‘ಉಚಿತ!’

ಬಳಕೆದಾರ-ಮಾರುಕಟ್ಟೆ (consumer market) ಜಾಹೀರಾತು ಜಗತ್ತಿನ ಅತಿ ಪ್ರಭಾವಶಾಲಿ ಅಯಸ್ಕಾಂತವೇ ‘ಉಚಿತ’ ಎಂಬ ಪದ. ಒಂದು ಕೊಂಡರೆ ಇನ್ನೊಂದು ಉಚಿತ - ರವಾಇಡ್ಲಿ ಮಿಕ್ಸ್‌ ಕೊಂಡರೆ ಗುಲಾಬ್‌ಜಾಮೂನ್‌ ಮಿಕ್ಸ್‌ ಉಚಿತ; ಬಿನಾಕಾ(ಸಿಬಾಕಾ) ಟೂತ್‌ಪೇಸ್ಟ್‌ ಕೊಂಡರೆ ಒಳಗೊಂದು ಪ್ಲಾಸ್ಟಿಕ್‌ ಪ್ರಾಣಿ ಉಚಿತ; ಟಿವಿ ಖರೀದಿಸಿದರೆ ವಾಕ್‌ಮನ್‌ ಉಚಿತ; ದೀಪಾವಳಿ ವಿಶೇಷಾಂಕ ಕೊಂಡರೆ ಪಟಾಕಿ ಗಿಫ್ಟ್‌ಹಾಂಪರ್‌ ಉಚಿತ; ರೀಡರ್ಸ್‌ ಡೈಜೆಸ್ಟ್‌ ಚಂದಾದಾರರಾದರೆ ಡೈರಿ ಉಚಿತ... ಹೀಗೆ ಬಾ ನೊಣವೆ ಬಾ ನೊಣವೆ ಬಾ ನನ್ನ ಬಲೆಗೆ ಎಂದು ಗ್ರಾಹಕರನ್ನು ಸೆಳೆಯುವ ಮಾಯಾಮಂತ್ರವೇ ‘ಉಚಿತ’ ಎಂಬ ಮಾರ್ಕೆಟಿಂಗ್‌ ಟೆಕ್ನಿಕ್‌. ಮತ್ತೆ ಕೆಲವು ಜೋಕು-ಕಾರ್ಟೂನ್‌ಗಳಲ್ಲಿ ಮಾತ್ರ ಔಚಿತ್ಯಪೂರ್ಣವಾಗುವಂಥವೂ ಇವೆ - ಕೇಶವರ್ಧಿನಿ ತೈಲ ಕೊಂಡರೆ ಬಾಚಣಿಗೆ ಉಚಿತ; ಬಲ್ಬ್‌ ಕೊಂಡರೆ ಮೊಂಬತ್ತಿ ಉಚಿತ; ಆರ್ಟ್‌ಮೂವಿ ಟಿಕೆಟ್‌ನೊಂದಿಗೆ ಅಮೃತಾಂಜನ್‌ ಡಬ್ಬಿ ಉಚಿತ... ಇತ್ಯಾದಿ.

‘ಉಚಿತ’ದೊಂದಿಗೆ ಆ ಉತ್ಪನ್ನ ಜಾಸ್ತಿ ಮಾರಾಟವಾಗುವುದು ಖಚಿತ. ಆದರೆ ಬೇರೊಂದು ಉತ್ಪನ್ನದ ಪ್ರಮೋಷನ್‌ಗಾಗಿ ಉಚಿತವಾಗಿ ಮಾರಲ್ಪಟ್ಟ ವಸ್ತುವೊಂದು ಕೊನೆಗೆ ತಾನೇ ಅತಿ ಜನಪ್ರಿಯವಾಗಿ ಜಗದ್ವಿಖ್ಯಾತವಾದ ನಿದರ್ಶನವೊಂದಿದೆ, ಅದೇ ನಮಗೆಲ್ಲ ಚಿರಪರಿಚಿತವಾದ ಚ್ಯೂಯಿಂಗಮ್‌! ನಿಮಗೆ ಗೊತ್ತೇ ಚ್ಯೂಯಿಂಗಮ್‌ನ ಜಾಗತಿಕ ಮಾರುಕಟ್ಟೆಯಲ್ಲಿ ಇಂದು ನಂ.1 ಸ್ಥಾನದಲ್ಲಿರುವ ‘ರಿಗ್ಲೆ’ (Wrigley) ಚ್ಯೂಯಿಂಗಮ್‌ ಆರಂಭದಲ್ಲಿ ಬರೀ ಒಂದು ‘ಅದು ಕೊಂಡರೆ ಇದು ಉಚಿತ’ವೆಂದು ಮಾರಲ್ಪಡುತ್ತಿದ್ದ ಉತ್ಪನ್ನವೆಂಬ ಸಂಗತಿ?

ರಿಗ್ಲೆ ಚ್ಯೂಯಿಂಗಮ್‌ನ ಯಶೋಗಾಥೆಯೇ ಈ ವಾರದ ಸಾಮಗ್ರಿ. ವಾchewಸುವಂಥವರಾಗಿ.

1891ರಲ್ಲಿ ವಿಲಿಯಂ ರಿಗ್ಲೆ ಜೂನಿಯರ್‌ ಎಂಬ 29ರ ವಯಸ್ಸಿನ ಕನಸುಗಣ್ಣಿನ ಸುದೃಢ ಯುವಕ ಫಿಲಡೆಲ್ಫಿಯಾದಿಂದ ಚಿಕಾಗೊ ನಗರಕ್ಕೆ ವಲಸೆ ಬಂದ. ಅವನ ಜೇಬಿನಲ್ಲಿದ್ದುದು ಬರೀ 32 ಡಾಲರ್‌; ಆದರೆ ಅದಮ್ಯ ಉತ್ಸಾಹ ಮತ್ತು ಅಪರಿಮಿತ ಚೈತನ್ಯದ ಬುಗ್ಗೆಯೇ ಆಗಿದ್ದನವ. ಒಬ್ಬ ಸೇಲ್ಸ್‌ಮನ್‌ ಆಗಿ ಅವನಿಗೆ ಅಲ್ಪಸ್ವಲ್ಪ ಅನುಭವ ಹೇಗೂ ಇತ್ತು. ಯಾಕೆಂದರೆ ವಿಲಿಯಂನ ಅಪ್ಪ ಫಿಲಡೆಲ್ಫಿಯಾದಲ್ಲಿ ಒಂದು ಸೋಪ್‌ ಫ್ಯಾಕ್ಟರಿ ಇಟ್ಟುಕೊಂಡಿದ್ದ ಮತ್ತು ಸಾಬೂನು ವ್ಯಾಪಾರದಲ್ಲಿ ಮಗನನ್ನೂ ಪಳಗಿಸಿದ್ದ.

ಚಿಕಾಗೊಕ್ಕೆ ಬಂದ ವಿಲಿಯಂ ಆರಂಭದಲ್ಲಿ ತನ್ನಪ್ಪನ ಕಂಪೆನಿಯ ‘ರಿಗ್ಲೆ’ ಬ್ರಾಂಡ್‌ನ ಸೋಪ್‌ ಮಾರಾಟಕ್ಕೆ ತೊಡಗಿದ. ಚಾಣಾಕ್ಷನಾದ ಆತ ಅಂಗಡಿ ಮಾಲೀಕರಿಗೂ, ಗ್ರಾಹಕರಿಗೂ ಆಕರ್ಷಕವಾಗುವಂತೆ ರಿಗ್ಲೆ ಸೋಪ್‌ ಕೊಂಡರೆ ಒಂದು ಡಬ್ಬಿ ಬೇಕಿಂಗ್‌ ಪೌಡರ್‌ ಉಚಿತ ಎಂದು ಘೋಷಿಸಿದ. ಜನ ಇದನ್ನು ಇಷ್ಟಪಟ್ಟರು; ಎಷ್ಟೆಂದರೆ ಉಚಿತವಾಗಿ ಬರುತ್ತಿದ್ದ ಬೇಕಿಂಗ್‌ಪೌಡರನ್ನೇ ಜನ ಮೆಚ್ಚಿ ಅದಕ್ಕಾಗಿ ಸೋಪ್‌ ಖರೀದಿಸುತ್ತಿದ್ದರು! ಇದನ್ನು ಗಮನಿಸಿದ ವಿಲಿಯಂ 1892ರಲ್ಲಿ ತನ್ನದೇ ಒಂದು ಬೇಕಿಂಗ್‌ ಪೌಡರ್‌ ಉದ್ದಿಮೆಯನ್ನೇ ತೆರೆದ. ಅಪ್ಪನ ಸೋಪ್‌ ಸೆಲ್ಲಿಂಗ್‌ಗೆ ಗುಡ್‌ಬೈ ಹೇಳಿ ತನ್ನ ಬೇಕಿಂಗ್‌ಪೌಡರ್‌ ಮಾರಾಟ ಆರಂಭಿಸಿದ. ಬೇಕಿಂಗ್‌ಪೌಡರನ್ನು ಕ್ರಯಕೊಟ್ಟು ಕೊಳ್ಳುವಂತೆ ಜನರನ್ನು ಆಕರ್ಷಿಸಬೇಕಲ್ಲ , ಅದಕ್ಕೆ ಬೇಕಿಂಗ್‌ಪೌಡರ್‌ ಜತೆ ಚ್ಯೂಯಿಂಗಮ್‌ ಪ್ಯಾಕೆಟ್‌ ‘ಉಚಿತ!’ ಎಂದು ಜಾಹೀರಾತಿಸಿದ.

ಕಿಂದರಿಜೋಗಿಯ ಹಿಂದೆ ಇಲಿಗಳ ಜಾತ್ರೆಯಂತೆ ಮತ್ತೆ ಜನ ಮುಗಿಬಿದ್ದರು; ಯಾವುದಕ್ಕೆ? ಬೇಕಿಂಗ್‌ಪೌಡರ್‌ಗಲ್ಲ , ಉಚಿತವಾಗಿ ಸಿಗುತ್ತಿದ್ದ ಚ್ಯೂಯಿಂಗಮ್‌ಗೆ! ಆಗ ವಿಲಿಯಂ ತನ್ನ ಬೇಕಿಂಗ್‌ಪೌಡರ್‌ ಬಿಸಿನೆಸ್‌ನ ಬಾಗಿಲುಮುಚ್ಚಿ ‘ರಿಗ್ಲೆ ಚ್ಯೂಯಿಂಗಮ್‌’ ಫ್ಯಾಕ್ಟರಿ ಆರಂಭಿಸಿದ. ಮೊದಲು ‘ಲೊಟ್ಟಾ’ ಮತ್ತು ‘ವೇಸರ್‌’ ಹೆಸರಿನ ಚ್ಯೂಯಿಂಗಮ್‌ ಉತ್ಪಾದಿಸಿ ಮಾರಲಾರಂಭಿಸಿದ. ಇಸವಿ 1893ರಲ್ಲಿ ರಿಗ್ಲೆಯ ವಿಶ್ವವಿಖ್ಯಾತ ‘ಜ್ಯೂಸಿಫ್ರುಟ್‌’ ಮತ್ತು ‘ಸ್ಪಿಯರ್‌ಮಿಂಟ್‌’ ಚ್ಯೂಯಿಂಗಮ್‌ ಜನ್ಮತಾಳಿದವು. ಆವಾಗಿನ್ನೂ ಅಮೆರಿಕದಲ್ಲಿ ಬೇರೆ ಬ್ರಾಂಡ್‌ನ (ಚಿಕ್ಲೆಟ್‌, ಡೆಂಟೈನ್‌ ಇತ್ಯಾದಿ) ಚ್ಯೂಯಿಂಗಮ್‌ ಕೂಡ ಭರ್ಜರಿ ವ್ಯಾಪಾರ ನಡೆಸುತ್ತಿದ್ದವಾದ್ದರಿಂದ ಮಾರುಕಟ್ಟೆಯಲ್ಲಿ ಪೈಪೋಟಿಯಿತ್ತು. ಆದರೂ ವಿಲಿಯಂ ರಿಗ್ಲೆ ಜ್ಯೂನಿಯರ್‌ನ ಅಸಾಧಾರಣ ಮಾರ್ಕೆಟಿಂಗ್‌, ಅಡ್ವರ್ಟೈಸ್‌ಮೆಂಟ್‌ ತಂತ್ರಗಳಿಂದ ರಿಗ್ಲೆ ಬ್ರಾಂಡ್‌ ದಾಪುಗಾಲಿಡುತ್ತ ಮುನ್ನಡೆಯಿತು; ವಿಶ್ವಾದ್ಯಂತ ಪ್ರಸಿದ್ಧವಾಯ್ತು !

ಉಚಿತವಾಗಿ ಬಿಕರಿಯಾಗುತ್ತಿದ್ದುದನ್ನು ವಿಶ್ವದ ನಂ.1 ಸ್ಥಾನಕ್ಕೊಯ್ಯಬೇಕಿದ್ದರೆ ವಿಲಿಯಂ ರಿಗ್ಲೆಗೆ ಇದ್ದ ಛಲ, ಸಾಧಿಸಬೇಕೆಂಬ ಹಂಬಲ, ಸಾಧಿಸುತ್ತೇನೆಂಬ ಆತ್ಮವಿಶ್ವಾಸ - ಇವನ್ನು ಮೆಚ್ಚಲೇಬೇಕು. ಅವನ ಸಹೋದ್ಯೋಗಿಗಳಿಗೆಲ್ಲ ಆತ ಚೈತನ್ಯದ ಚಿಲುಮೆಯೇ ಆಗಿದ್ದನಂತೆ. ಮಾರುಕಟ್ಟೆಯಲ್ಲೂ ಅಷ್ಟೆ , ಗ್ರಾಹಕರ ಮನೋಭಾವವನ್ನರಿತು ಅದಕ್ಕೆ ತಕ್ಕಂತೆ ಉತ್ಪನ್ನದ ಪೂರೈಕೆ, ಯೋಗ್ಯ ಬೆಲೆ ಮತ್ತು ಎಲ್ಲಕ್ಕೂ ಹೆಚ್ಚಾಗಿ ಚ್ಯೂಯಿಂಗಮ್‌ನಂಥ ಸಣ್ಣ ವಸ್ತುವಿನ ಉತ್ಪಾದನೆಯಲ್ಲೂ ಗುಣಮಟ್ಟಕ್ಕೆ ನೀಡುತ್ತಿದ್ದ ಮಹತ್ವ - ಇವೆಲ್ಲ ಯಾವೊಬ್ಬ ಬಿಸಿನೆಸ್‌ಮನ್‌ ಕೂಡ ವಿಲಿಯಂ ರಿಗ್ಲೆಯಿಂದ ಕಲಿಯಬೇಕಾದ ಪಾಠಗಳು ಎನ್ನಲಡ್ಡಿಯಿಲ್ಲ. 1915ರಲ್ಲಿ ಹೊಸದೊಂದು ಫ್ಲೇವರ್‌ ಆರಂಭಿಸಿದಾಗ ರಿಗ್ಲೆ ಸುಮಾರು 1.5 ಮಿಲಿಯದಷ್ಟು ಅಮೆರಿಕನ್ನರಿಗೆ ಉಚಿತ ಸ್ಯಾಂಪಲ್‌ ಕಳಿಸಿದ್ದನಂತೆ! ಉದ್ಯಮಿಯಾಗಿ ಬೆಳೆದ ರಿಗ್ಲೆ , ಚಿಕಾಗೊದ ವಿಖ್ಯಾತ ಬೇಸ್‌ಬಾಲ್‌ ಟೀಮ್‌ ‘ಚಿಕಾಗೊ ಕಬ್ಸ್‌’ನ ಪ್ರಾಯೋಜಕತ್ವ ವಹಿಸಿ ಅವರಿಗೊಂದು ಬೇಸ್‌ಬಾಲ್‌ ಪಾರ್ಕ್‌ ನಿರ್ಮಿಸಿಕೊಟ್ಟ. ಚಿಕಾಗೊ ನಗರದ ನಕ್ಷೆಯಲ್ಲಿ ರಿಗ್ಲೆ ಬಿಲ್ಡಿಂಗ್‌ ಮತ್ತು ಹತ್ತಿರದಲ್ಲೆ ಇರುವ ರಿಗ್ಲೆ ಫೀಲ್ಡ್‌ (ಬೇಸ್‌ಬಾಲ್‌ ಪಾರ್ಕ್‌) ಇಂದಿಗೂ ಪ್ರಮುಖ ಲ್ಯಾಂಡ್‌ಮಾರ್ಕ್‌ಗಳು.

ರಿಗ್ಲೆಯ ಕಥೆ ಅದಾದರೆ, ಅಸಲಿಗೆ ಚ್ಯೂಯಿಂಗಮ್‌ ತಯಾರಿಸುವುದು ಹೇಗೆ ? ಅದರಲ್ಲಿರುವುದು ಏನು ಎಂಬುದರ ಬಗ್ಗೆ ಸ್ವಲ್ಪ ವಿವರಗಳನ್ನು ನೋಡೋಣವೇ? ಚ್ಯೂಯಿಂಗಮ್‌ನಲ್ಲಿರುವ ನಾಲ್ಕು ಪ್ರಧಾನ ವಸ್ತುಗಳೆಂದರೆ ರೊಸಿನ್‌ ಎಂಬ ಅಂಟುಪದಾರ್ಥ, ಷರ್ಕರ ಪಿಷ್ಟ (ಸಕ್ಕರೆ), ಗ್ಲಿಸರಿನ್‌ ಅಥವಾ ಇತರ ಖಾದ್ಯತೈಲದಂಶ ಮತ್ತು ಸುಗಂಧದಂಶ. ರೆಸಿನ್‌ ಅಂಟು ಮಧ್ಯಅಮೆರಿಕದಲ್ಲಿ ಹೇರಳವಾಗಿ ಬೆಳೆವ ಪೈನ್‌ ಮರಗಳ ತೊಗಟೆಯಿಂದ ರಬ್ಬರ್‌ನಂತೆ ತೆಗೆಯುವ ಉತ್ಪನ್ನ. ಇತ್ತೀಚೆಗೆ ನೈಸರ್ಗಿಕ ಅಂಟುಗಳ ಬದಲಾಗಿ ಸಿಂಥೆಟಿಕ್‌ ಅಂಟುಗಳ ಬಳಕೆ ಶುರುವಾಗಿದೆ. ಜೋಳದ ಗಂಜಿಯಂಥ ಪದಾರ್ಥವೂ ಚ್ಯೂಯಿಂಗಮ್‌ ತಯಾರಿಗೆ ಬೇಕು. ಸುಗಂಧವಸ್ತುವಾಗಿ ಮಿಂಟ್‌ (ಪುದಿನಾ) ಪ್ರಮುಖ ಕಚ್ಚಾಪದಾರ್ಥ. ರಿಗ್ಲೆ ಕಂಪೆನಿಗೆ ಸೇರಿದ ಪುದಿನಾ ಹೊಲಗಳಿವೆ ಇಂಡಿಯಾನಾ, ಮಿಷಿಗನ್‌ ಮತ್ತು ವಿಸ್ಕಾನ್ಸಿನ್‌ ಸಂಸ್ಥಾನಗಳಲ್ಲಿ. ಪುದಿನಾ ಎಲೆಗಳಿಂದ ತೆಗೆದ ತೈಲವನ್ನು ರಿಫೈನರಿ ಮತ್ತು ಡಿಸ್ಟಿಲರಿಗಳಲ್ಲಿ ಶೋಧಿಸಿ ಸಂಗ್ರಹಿಸಲಾಗುತ್ತದೆ. ಇತರ ಕಚ್ಚಾಪದಾರ್ಥಗಳನ್ನೂ ಸೇರಿಸಿ ಚಪಾತಿಹಿಟ್ಟಿನಂತೆ ದಪ್ಪಮುದ್ದೆಗಳನ್ನು ಮಾಡಿ ಯಂತ್ರಗಳ ಮೂಲಕ ತೆಳುಹಾಳೆಗಳಾಗಿ ಬಂದು ನಿರ್ದಿಷ್ಟ ಆಕಾರದಲ್ಲಿ ಕಟಿಂಗ್‌ ಆದಮೇಲೆ ಸಕ್ಕರೆಯಂಶ ಸಿಂಪಡಿಸಿ ಪ್ಯಾಕೇಜ್‌ ಮಾಡಲಾಗುತ್ತದೆ.

ಚ್ಯೂಯಿಂಗಮ್‌ ಜಗಿಯುವುದರಿಂದ ಏನು ಲಾಭ ? ರಿಗ್ಲೆಯ ಪ್ರಕಾರ ಖಂಡಿತವಾಗಿಯೂ ಲಾಭಗಳಿವೆ. ಕಾನ್ಸಂಟ್ರೇಷನ್‌ಗೆ ಇದು ಪರೋಕ್ಷ ಸಹಕಾರಿ ಎಂದು ತುಂಬ ಮಂದಿ ಒಪ್ಪುತ್ತಾರೆ. ಬೇಸ್‌ಬಾಲ್‌, ಕ್ರಿಕೆಟ್‌ ಆಟಗಾರರಂತೂ ಹೌದು. ರಿಗ್ಲೆ ಕಂಪೆನಿಯ ಅಂಕಿಅಂಶಗಳ ಪ್ರಕಾರ ಅಮೆರಿಕದ ಹೆವಿ ಟ್ರಕ್‌ ಡ್ರೈವರ್ಸ್‌ ಕೂಡ ಚ್ಯೂಯಿಂಗಮ್‌ ಜಗಿಯುತ್ತ ಡ್ರೈವ್‌ ಮಾಡುತ್ತಿದ್ದರೆ ಎಚ್ಚರ ತಪ್ಪೊಲ್ಲ ಅಂತ ಭಾವಿಸುತ್ತಾರಂತೆ. 1939ರಷ್ಟು ಹಿಂದೆಯೇ ನಡೆದ ವೈಜ್ಞಾನಿಕ ಅಧ್ಯಯನಗಳ ಪ್ರಕಾರ ಚ್ಯೂಯಿಂಗಮ್‌ನಂಥದನ್ನು ಜಗಿಯುತ್ತ ಇರುವುದು ಒಂದು ನಮೂನೆಯಲ್ಲಿ ಆತಂಕ (ಟೆನ್ಷನ್‌) ನಿವಾರಣೆಗೆ ಸಹಕಾರಿಯಾಗುತ್ತದಂತೆ. ಪ್ರಪಂಚ ಯುದ್ಧಾನಂತರ ಅಮೆರಿಕನ್‌ ಆರ್ಮಿಯಲ್ಲಿ ಸೈನಿಕರಿಗೆ ರೇಷನ್‌ಸಪ್ಲೈಯಲ್ಲಿ ಕಂಪಲ್ಸರಿಯಾಗಿ ಚ್ಯೂಯಿಂಗಮ್‌ ಪ್ಯಾಕೆಟ್ಸ್‌ ಇರುತ್ತವೆ. ಇನ್ನು ಮಿಂಟ್‌ ಅಥವಾ ಸಿನಮನ್‌ ಫ್ಲೇವರ್‌ನ ಚ್ಯೂಯಿಂಗಮ್‌ ಉಸಿರಿನ ದುರ್ವಾಸನೆ ಮತ್ತು ದಂತಕ್ಷಯವನ್ನೂ ತಡೆಗಟ್ಟುತ್ತದೆ. ತಿಂಡಿಪೋತರಾಗಿದ್ದು ಬೊಜ್ಜು ಇಳಿಸಲು ಶತಪ್ರಯತ್ನ ನಡೆಸುವವರಿಗೆ ಆವಾಗಾವಾಗ ಸ್ನ್ಯಾಕ್ಸ್‌ ನೆನಪಾದರೆ ಅದರ ಬದಲು ಚ್ಯೂಯಿಂಗಮ್‌ ಜಗಿಯುವುದರಿಂದ ಬಾಯಿಗೆ ವ್ಯಾಯಾಮವೂ ಆಯ್ತು , ಚ್ಯೂಯಿಂಗಮ್‌ನಲ್ಲಿರುವ ಒಟ್ಟು ಕ್ಯಾಲೊರಿಗಳು ನಗಣ್ಯವಾದ್ದರಿಂದ ಅತಿಆಹಾರಸೇವನೆಯಾಗದಂತೆ ಪಥ್ಯವೂ ಆಯ್ತು !

ಉಚಿತ-ಉಚ್ಚಿಷ್ಟ : Sharing someones ABC (already been chewed) gum is a sign of true love... ಎನ್ನುತ್ತಾನೆ ಮಾರ್ಕ್‌ ಟ್ವೈನ್‌. ಅಮೆರಿಕದೇಶದಲ್ಲಂತೂ ಚ್ಯೂಯಿಂಗಮ್‌ ಜಗಿಯುವ ಚಟ(?) ವಿಪರೀತ. ಪ್ರಪಂಚದ ಮಿಕ್ಕೆಲ್ಲ ದೇಶಗಳ ಒಟ್ಟು ಮೊತ್ತಕ್ಕಿಂತ ಆರು ಪಟ್ಟು ಹೆಚ್ಚು ಚ್ಯೂಯಿಂಗಮ್‌ ಅಮೆರಿಕವೊಂದರಲ್ಲೇ ಖರ್ಚಾಗುತ್ತದೆ! ನ್ಯೂಯಾರ್ಕ್‌ ಸೆಂಟ್ರಲ್‌ ರೈಲ್ವೇಸ್‌ನವರು ಸಬ್‌ವೇ ಸ್ಟೇಷನ್‌ಗಳಲ್ಲಿ ಉಚ್ಚಿಷ್ಟ ಚ್ಯೂಯಿಂಗಮ್‌ ತೆಗೆದುಹಾಕಲೆಂದೇ ಸಿಬ್ಬಂದಿಯನ್ನು ನೇಮಿಸಿದ್ದುಂಟು. ಅತ್ತ ನೈರ್ಮಲ್ಯ-ನಿಯತ್ತುಗಳ ಪರಾಕಾಷ್ಠೆಯ ಸಿಂಗಾಪುರ್‌ನಲ್ಲಿ 1992ರಿಂದೀಚೆಗೆ ಚ್ಯೂಯಿಂಗಮ್‌ ಆಮದು, ತಯಾರಿ, ಮಾರಾಟ, ಬಳಕೆ ಎಲ್ಲವೂ ಶಿಕ್ಷಾರ್ಹ ಅಪರಾಧವೆಂಬ ಕಾನೂನಿದೆ. ಈ ವರ್ಷ ಅದನ್ನೀಗ ಸ್ವಲ್ಪ ಸಡಿಲಿಸಿ, ರಿಜಿಸ್ಟರ್‌ ಮಾಡಿಕೊಂಡವರು ಐಡೆಂಟಿಫಿಕೇಶನ್‌ ಕಾರ್ಡ್‌ ತೋರಿಸಿದರೆ ಮಾತ್ರ ಚ್ಯೂಯಿಂಗಮ್‌ ಕೊಳ್ಳಬಹುದು, ಆದರೂ ಸಾರ್ವಜನಿಕ ಸ್ಥಳದಲ್ಲಿ ಜಗಿಯುವಂತಿಲ್ಲ ಎಂದಾಗಿದೆ.

ಇದಿಷ್ಟು ಚ್ಯೂಯಿಂಗಮ್‌ ಆಖ್ಯಾನ. ಕೊನೆಯಲ್ಲಿ (ಹೌದು ಕೊನೆಯಲ್ಲೇ ಏಕೆ ? ಆಖಿರ್‌ ಕ್ಯೋಂ ?) ಒಂದು ಹಿಂದಿ ಚಿತ್ರಗೀತೆಯ ರೆಫರೆನ್ಸು. ಚಿತ್ರದ ಹೆಸರು - ‘ಆಖಿರ್‌ ಕ್ಯೋಂ’. ಹಾಡಿರುವವರು - ಲತಾಮಂಗೇಶ್ಕರ್‌, ಅಮಿತ್‌ಕುಮಾರ್‌. ಸನ್ನಿವೇಶ (ಇದು ನನ್ನ ಕಲ್ಪನೆ ಅಷ್ಟೆ) - ಚಿಕಾಗೋದಿಂದ ಬರುವಾಗ ಒಬ್ಬ ಎನ್ನಾರೈ (ಐಶ್ವರ್ಯಾ ರೈ ಇದ್ದ ಹಾಗೆ ಎನ್ನಾ ರೈ?) ಭಾರತದಲ್ಲಿರುವ ತನ್ನ ಸ್ನೇಹಿತೆಗೆ ಒಂದು ದೊಡ್ಡ ಬಾಕ್ಸ್‌ (ಒಂದು ಸೂಟ್‌ಕೇಸ್‌ ತುಂಬ ಅನ್ನುವಷ್ಟು) ರಿಗ್ಲೆ ಚೂಯಿಂಗಮ್‌ ತಂದುಕೊಡುತ್ತಾನೆ. ಸ್ನೇಹಿತನ ಪ್ರೀತಿಯ ಕಾಣಿಕೆಯನ್ನು ಸ್ವೀಕರಿಸಿದ ಆಕೆ ಆಮೇಲೆ ಗುನುಗುನಿಸುವ ಹಾಡು - ‘‘ದುಶ್ಮನ್‌ ನಾ ಕರೆ ದೋಸ್ತ್‌ನೆ ವೊ ಕಾಮ್‌ ಕಿಯಾ ಹೈ... ಉಮ್ರ್‌ ಭರ್‌ಕಾ ‘ಗಮ್‌’ ಹಮೆ ಇನಾಮ್‌ ದಿಯಾ ಹೈ...’’ :-)

ಮತ್ತೆ ಈಸಲ ಒಂದು ಪ್ರಶ್ನೆ ಕೂಡ ಇದೆ. ಆದರಿದು ಔಟ್‌-ಆಫ್‌-ಸಿಲೆಬಸ್‌. ಅಂದರೆ ಇವತ್ತಿನ ಲೇಖನದ ವಿಷಯಕ್ಕೆ ಸಂಬಂಧಪಟ್ಟದ್ದಲ್ಲ. ಆದರೂ ನೀವು ಉತ್ತರಿಸಬಲ್ಲಿರಿ. ಕಳೆದ ವಾರವಷ್ಟೇ ನೀವು ‘ತಲೆಬರಹ’ದ ತಲೆಬುಡಗಳ ಬಗ್ಗೆ ಓದಿದ್ದೀರಿ. ಪ್ರಶ್ನೆ ಇವತ್ತಿನ ಲೇಖನದ ತಲೆಬರಹದ ಬಗ್ಗೆ. ಈ ತಲೆಬರಹ ಯಾವುದರಿಂದ ಸ್ಫೂರ್ತಿ ಪಡೆದದ್ದು (ಅನಾಮತ್ತಾಗಿ ಕದ್ದಿದ್ದು ಎನ್ನುವ ಆರೋಪ ಬೇಡಾ)? ಕನ್ನಡದ ವರಕವಿ ಅಂತ ನಿಮಗೆ ಉತ್ತರಕ್ಕೆ ಸುಳಿವು ಕೊಡಬಲ್ಲೆ . ಆ ಮಹಾನ್‌ಕವಿಯ ಕಾವ್ಯನಾಮವೇನು ಎಂಬುದನ್ನೂ ಉತ್ತರಿಸಿ. ವಿಳಾಸ- [email protected]


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X