• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಚಿತ್ರಾನ್ನ-67 ರ ಸಂಚಿಕೆಯ ತುಂಬಾ ಢಂ ಢಂ ಸದ್ದುಗಳದೇ ಒಗ್ಗರಣೆ. ಒಂದೆಡೆ ಅಶ್ರು ತರ್ಪಣ, ಇನ್ನೊಂದೆಡೆ ಸ್ವಾಗತದ ಸಂಭ್ರಮ. ಏನಿದು ಕುಶಾಲತೋಪು ಕುಶಲೋಪರಿ?

By Staff
|
Srivathsa Joshi *ಶ್ರೀವತ್ಸ ಜೋಶಿ

Origin of 21 Gun Salute‘ಅಗಲಿದ ನಾಯಕನಿಗೆ ಶೋಕತಪ್ತ ಜನಸಾಗರ ಅಂತಿಮ ನಮನ ಸಲ್ಲಿಸಿ ಅಶ್ರುಧಾರೆಗರೆಯುತ್ತಿದ್ದಂತೆಯೇ ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಕಲ ಸರಕಾರಿ ಮರ್ಯಾದೆಗಳೊಂದಿಗೆ ನಡೆಯಿತು... ಚಿತಾಗ್ನಿಗೆ ಮುನ್ನ ಮೃತರ ಗೌರವಾರ್ಥ 3 ನಿಮಿಷ ಮೌನ ಆಚರಿಸಿ, ಆಕಾಶಕ್ಕೆ 3 ಸುತ್ತು ಗುಂಡು ಹಾರಿಸಿ, ಬ್ಯಾಂಡ್‌ ಬಾರಿಸುವ ಮೂಲಕ ಸರಕಾರಿ ಗೌರವ ಸೂಚಿಸಲಾಯಿತು...’

ದೇಶದ/ರಾಜ್ಯದ ಅಗ್ರಗಣ್ಯ ನೇತಾರರು ಕೊನೆಯುಸಿರೆಳೆದು ಅವರ ಅಂತಿಮಸಂಸ್ಕಾರದ ದಿನದ ಸಂಜೆ ಟಿವಿ/ರೇಡಿಯೋ ವಾರ್ತೆಗಳಲ್ಲಿ, ಮರುದಿನದ ಪತ್ರಿಕೆಗಳಲ್ಲಿ ಬಂದೇಬರುವ ವಾಕ್ಯಗಳಿವು. ಕಳೆದ ಮಂಗಳವಾರವಷ್ಟೇ ಕರ್ನಾಟಕದ ಹಿರಿಯ ರಾಜಕಾರಣಿ ರಾಮಕೃಷ್ಣ ಹೆಗಡೆಯವರ ಪಾರ್ಥಿವ ಶರೀರವು ಪಂಚಭೂತಗಳಲ್ಲಿ ಒಂದಾದದ್ದನ್ನು ಸಹ ಇದೇ ಮೇಲಿನ ವಾಕ್ಯಗಳಿಂದ ಮಾಧ್ಯಮಗಳೆಲ್ಲ ವರದಿ ಮಾಡಿವೆ.

ಸರಕಾರಿ ಗೌರವದಲ್ಲಿ ‘ಆಕಾಶಕ್ಕೆ 3 ಸುತ್ತು ಗುಂಡು ಹಾರಿಸುವುದು’ ಅಥವಾ ‘21 ಕುಶಾಲು ತೋಪುಗಳನ್ನು ಹಾರಿಸುವುದು’ - ಇದರ ಹಿನ್ನೆಲೆ ಏನು ಎಂಬುದು ಈ ವಾರದ ವಿಷಯ.

ಆಕಾಶಕ್ಕೆ ಗುಂಡು ಹಾರಿಸುವುದು ಶೋಕಾಚರಣೆಯ ಸಂದರ್ಭಗಳಲ್ಲಿ ಮಾತ್ರವಲ್ಲ. ವಿದೇಶಗಳ ಅತ್ಯುನ್ನತ ಸ್ಥಾನಗಳಲ್ಲಿರುವವರು (ರಾಷ್ಟ್ರಾಧ್ಯಕ್ಷರು, ಪ್ರಧಾನಮಂತ್ರಿಗಳು ಅಥವಾ ರಾಜಮನೆತನದವರು) ಸರಕಾರಿ ಕಾರ್ಯಾರ್ಥ ನಮ್ಮ ದೇಶಕ್ಕೆ ಆಗಮಿಸುವಾಗ ಅವರ ಗೌರವಾರ್ಥ ರಾಷ್ಟ್ರಪತಿ ಭವನದ ವಠಾರದಲ್ಲಿ ನಡೆಯುವ ಔಪಚಾರಿಕ ಸ್ವಾಗತ ಕಾರ್ಯಕ್ರಮದಲ್ಲೂ 21 ಕುಶಾಲುತೋಪುಗಳನ್ನು ಹಾರಿಸಲಾಗುತ್ತದೆ. ಅದೇ ರೀತಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯ ದಿನಾಚರಣೆಗಳಂದು ರಾಜಧಾನಿಯಲ್ಲಿ ರಾಷ್ಟ್ರಧ್ವಜಾರೋಹಣದ ನಂತರವೂ ಕುಶಾಲುತೋಪುಗಳು ಸಿಡಿಯಲ್ಪಡುತ್ತವೆ. ಇನ್ನೂ ಆಸಕ್ತಿಕರ ಸಂಗತಿಯೆಂದರೆ ಈ ಸಂಪ್ರದಾಯ ಬರೀ ಭಾರತ ಸರಕಾರವೊಂದರದ್ದೇ ಅಲ್ಲ, ಇದೊಂದು ಅಂತಾರಾಷ್ಟ್ರೀಯ ಸಂಪ್ರದಾಯ; ಮಿಲಿಟರಿಯಿಂದ ಬಂದ ಶಿಷ್ಟಾಚಾರ!

‘ಶಸ್ತ್ರಾಸ್ತ್ರಗಳನ್ನು ನಾಶಗೈದು ಶರಣಾಗತಿ’ ಎನ್ನುವುದು ಮಿಲಿಟರಿಯಲ್ಲಿನ ಹಳೆಯ ಸಂಪ್ರದಾಯಗಳಲ್ಲೊಂದು. Gun salute ಮಾಡುವವನು, ಆ ಕೋವಿ (ತುಪಾಕಿ, ಫಿರಂಗಿ)ಯಲ್ಲಿನ ಗುಂಡುಗಳನ್ನೆಲ್ಲ ಆಕಾಶದತ್ತ ಸಿಡಿಸಿ, ತನ್ನ ಬಳಿ ಇರುವ ಆಯುಧ ಇನ್ನು ನಿಷ್ಪ್ರಯೋಜಕ ಎಂದು ಸಾರುವ ಮೂಲಕ ಗೌರವ, ಶರಣಾಗತಿ ಸೂಚಿಸುವ ಸಂಕೇತವದು. ಕೈಯಲ್ಲಿರುವ ಖಡ್ಗವನ್ನು (ಅಥವಾ ಈಟಿ, ಭಲ್ಲೆಗಳನ್ನು) ನೆಲಕ್ಕೆ ಊರುವುದು, ಗುರಾಣಿಯನ್ನು ಅಧೋಮುಖ ಮಾಡಿಬಿಡುವುದು - ಇವು ಕೂಡ ‘ತಮ್ಮೆದುರು ನನ್ನ ಶಸ್ತ್ರಪ್ರಯೋಗ ಇಲ್ಲ ; ತಾವೇ ದೊಡ್ಡವರು... ಅದಕ್ಕೆ ಸಾಕ್ಷಿಯಾಗಿ ಈ ಶಸ್ತ್ರಾಸ್ತ್ರಗಳನ್ನು ಬಿಟ್ಟು ಕೈಚೆಲ್ಲಿದ್ದೇನೆ...’ ಎಂಬ ದೀನಭಾವದ ಪ್ರದರ್ಶನ.

ಆದರೆ ಕಾಲಕ್ರಮೇಣ ಈ ಸಂಪ್ರದಾಯವು ಶರಣಾಗತಿಯನ್ನು ಸೂಚಿಸುವುದಕ್ಕಿಂತಲೂ ಗೌರವವನ್ನು ಪ್ರಕಟಿಸುವುದಕ್ಕೆ ಉಪಯೋಗವಾಗತೊಡಗಿತು.

ಸುಮಾರು 14ನೇ ಶತಮಾನದಲ್ಲೇ, ಫಿರಂಗಿಗಳನ್ನು ಸಿಡಿಸಿ ಸೆಲ್ಯೂಟ್‌ ಮಾಡುವ ಪದ್ಧತಿ ಐರೋಪ್ಯ ದೇಶಗಳ ಸೇನೆಗಳಲ್ಲಿ ಆರಂಭವಾಯಿತು. ಸಿಡಿದು ಖಾಲಿಯಾದ ಫಿರಂಗಿಯು, ಕದನವನ್ನು ಮುಂದುವರೆಸುವ ಯಾವ ಇಚ್ಛೆಯೂ ಇಲ್ಲವೆಂಬುದರ ತೋರ್ಪಡಿಕೆಯಾಗತೊಡಗಿತು. ಆ ಕಾಲದಲ್ಲಿ ಯುದ್ಧನೌಕೆಗಳು 7 ಸುತ್ತು ಗುಂಡುಹಾರಿಸುವ ಕ್ರಮ ಜಾರಿಯಲ್ಲಿತ್ತು. 7 ಸಂಖ್ಯೆಯು ಪೌರಾಣಿಕ, ಖಗೋಳ (ಆವಾಗಿನ್ನೂ 7 ಗ್ರಹಗಳು ಮಾತ್ರ ಇವೆಯೆಂದು ಗೊತ್ತಿದ್ದದ್ದು), ಅಥವಾ ಬೈಬಲ್‌ ಹಿನ್ನೆಲೆಯಿಂದ ಬಂದದ್ದೆಂದು ಪ್ರತೀತಿ. ತೀರದಲ್ಲಿರುವ ಬೆಟಾಲಿಯನ್‌ಗಳಿಗೆ ಮದ್ದುಗುಂಡುಗಳ ಸರಬರಾಜು ಸಾಗರದಲ್ಲಿರುವ ನೌಕೆಗಳಿಗಿಗಿಂತ ಸುಲಭ ಮತ್ತು ವಿಫುಲವಾದ್ದರಿಂದ ಯುದ್ಧನೌಕೆಯ ಪ್ರತಿಯಾಂದು ಗನ್‌ಸೆಲ್ಯೂಟ್‌ಗೆ ಉತ್ತರವಾಗಿ ಮೂರು ಗುಂಡುಗಳನ್ನು ಹಾರಿಸುವ ಕ್ರಮ ಆರಂಭವಾಯಿತು. ಹೀಗೆ 21 ಕುಶಾಲುತೋಪುಗಳನ್ನು ಉಡಾಯಿಸುವ ರಿವಾಜು ಶುರುವಾಯಿತು.

ಈ ಬಗ್ಗೆ ಅಂತಾರಾಷ್ಟ್ರೀಯ ಒಡಂಬಡಿಕೆಗಳೂ ಆದುವು. 21 Gun Salute ಎಂಬುದು ಸಾರ್ವತ್ರಿಕವಾಗಿ ಗೌರವಸೂಚಿ ಶಿಷ್ಟಾಚಾರವಾಯಿತು. ಮೂರ್ನಾಲ್ಕು ಶತಮಾನಗಳ ನಂತರ ಅಮೆರಿಕೆಯ ಸ್ವಾತಂತ್ರ್ಯ ಹೋರಾಟ, ವಸಾಹತುಶಾಹಿಗಳ ವಿರುದ್ಧದ ದಂಗೆಗಳು ಆರಂಭವಾಗಿ ಈ ಸಂಪ್ರದಾಯ ಅಮೆರಿಕದ ನೆಲಕ್ಕೂ ಪಸರಿಸಿತು. ಅಮೆರಿಕ ದೇಶವು ಕ್ರಿ.ಶ 1776ರಲ್ಲಿ ಸ್ವಾತಂತ್ರ್ಯವನ್ನು ಪಡೆಯಿತು. ಕಾಕತಾಳೀಯವಾಗಿ 1776 ಸಂಖ್ಯೆಯ ಎಲ್ಲ ಅಂಕಿಗಳನ್ನು ಸೇರಿಸಿದಾಗ 21 ಮೊತ್ತವಾಗುವುದು ಹೌದಾದರೂ 21 Gun Salute ನ ಮೂಲಕಾರಣ ಅದೆನ್ನುವುದು ಹುರುಳಿಲ್ಲದ ವಾದ. (ಎಲ್ಲದಕ್ಕೂ ಅಮೆರಿಕವೇ ಗ್ರೇಟ್‌ ಎನ್ನುವ ಅಲ್ಪಮತಿಗಳ ತರ್ಕ ಅಷ್ಟೇ).

ಅಮೆರಿಕದಲ್ಲಿ ‘ಸರಕಾರಿ ಮರ್ಯಾದೆ’ಯಾಗಿ ರಾಷ್ಟ್ರಧ್ವಜಕ್ಕೆ, ಮತ್ತು ವಿದೇಶೀ ರಾಜಮಾನ್ಯ ಅತಿಥಿ, ಪ್ರಸಕ್ತ ರಾಷ್ಟ್ರಾಧ್ಯಕ್ಷ, ಉಪಾಧ್ಯಕ್ಷ ಮತ್ತು ಅಧ್ಯಕ್ಷನಾಗಿ ಚುನಾಯಿತ ವ್ಯಕ್ತಿ - ಇಷ್ಟು ಜನಕ್ಕೆ ಗೌರವ ಸೂಚಿಸಲು 21 ಕುಶಾಲುತೋಪು ಸೆಲ್ಯೂಟ್‌ ಬಳಕೆಯಾಗುತ್ತದೆ. ಅಧಿಕಾರದಲ್ಲಿರುವ ಅಧ್ಯಕ್ಷ ಅಥವಾ ಉಪಾಧ್ಯಕ್ಷ, ಹಾಗೆಯೇ ಚುನಾಯಿತ-ಅಧ್ಯಕ್ಷ ನಿಧನರಾದಾಗ ಅವರ ಅಂತ್ಯಕ್ರಿಯೆ ನಡೆವ ದಿನ ಮಧ್ಯಾಹ್ನ 12 ಗಂಟೆಗೆ (ಗಮನಿಸಿ - ಅಂತ್ಯಕ್ರಿಯೆ ನಡೆವ ವೇಳೆ ಬೇರೆ ಇರಬಹುದು) 21 ಕುಶಾಲುತೋಪುಗಳನ್ನು ಹಾರಿಸಲಾಗುತ್ತದೆ. ಅಂತೆಯೇ, ಪ್ರತಿವರ್ಷವೂ ಜಾರ್ಜ್‌ ವಾಷಿಂಗ್‌ಟನ್‌ ಜನ್ಮದಿನ (ಫೆಬ್ರವರಿ 22), ಪ್ರೆಸಿಡೆಂಟ್ಸ್‌ ಡೇ (ಫೆ 22ರ ನಿಕಟಪೂರ್ವ ಸೋಮವಾರ), ಮತ್ತು ಸ್ವಾತಂತ್ರ್ಯ ದಿನ (ಜುಲೈ 4)ದಂದೂ ಕೂಡ. ಮೆಮೋರಿಯಲ್‌ ಡೇ (ಮೇ ತಿಂಗಳ ಕೊನೆಯ ಸೋಮವಾರ) ದಿನದ ಮಧ್ಯಾಹ್ನ ಮಾತ್ರ ‘21 ನಿಮಿಷಗಳ ಗನ್‌ ಸೆಲ್ಯೂಟ್‌’ (ನಿಮಿಷಕ್ಕೊಮ್ಮೆಯಂತೆ 21 ನಿಮಿಷ) ನಡೆಯುತ್ತದೆ.

ಅಂತ್ಯಕ್ರಿಯೆ ನಡೆಯುವಾಗ ಆಕಾಶಕ್ಕೆ ಮೂರು ಸಲ ಗುಂಡು ಹಾರಿಸುವುದರ ಬಗ್ಗೆ ಇನ್ನೊಂದು ಮಾತು. ಅಗಲಿದ ಆತ್ಮಕ್ಕೆ ಅಂತಿಮ ನಮನದೊಂದಿಗೆಯೇ, ದೇಹವನ್ನು ತ್ಯಜಿಸಿ ಹೊರಟಿರುವ ಆತ್ಮವನ್ನು ಕಬಳಿಸದಂತೆ ಪಿಶಾಚಿಗಳು-ಕ್ಷುದ್ರಶಕ್ತಿಗಳನ್ನೆಲ್ಲ ದೂರವಿರಿಸಲು ಈ ರೀತಿ ಆಕಾಶದಲ್ಲಿ ಗುಂಡು ಹಾರಿಸುವುದೆಂಬ ನಂಬಿಕೆಯೂ, ತಥಾಕಥಿತ ಮುಂದುವರೆದ ರಾಷ್ಟ್ರವಾದ ಅಮೆರಿಕದ ಮಿಲಿಟರಿ ವಲಯಗಳಲ್ಲೂ ಸೇರಿದಂತೆ ಪ್ರಪಂಚದಾದ್ಯಂತ ವಿವಿಧ ವರ್ಗಗಳ ಜನಾಂಗದಲ್ಲೂ ಇದೆ!

* * *

ಬಂದೂಕು, ಫಿರಂಗಿ, ಗುಂಡು, ಶರಣಾಗತಿ, ಸಾವು, ಸಂಪ್ರದಾಯ - ಇತ್ಯಾದಿ ಸೀರಿಯಸ್‌ ವಿಚಾರಗಳನ್ನು ವಿಚಿತ್ರಾನ್ನದಲ್ಲಿ ಓದಿ ಭಯಭೀತರಾದಿರಾ? ಹಾಗೇನಿಲ್ಲ ಬಿಡಿ. 21 ಕುಶಾಲುತೋಪುಗಳು ಗೌರವ ಭಯಭಕ್ತಿ ಸೂಚಿಸಲು ಇದ್ದಂತೆಯೇ, 21 ನಮಸ್ಕಾರಗಳನ್ನು ಮಾಡಿದರೆ ನಮ್ಮ ಭಯಭಕ್ತಿಯನ್ನು ಸ್ವೀಕರಿಸಲು ಇದ್ದಾನಲ್ಲ ನಮ್ಮೆಲ್ಲರ ಫೇವರಿಟ್‌ ಲಾರ್ಡ್‌ ಗಣೇಶ! ‘ಶರಣು ಶರಣಯ್ಯ ಶರಣು ಬೆನಕ... ಒಪ್ಪುವ ವಿಘ್ನೕಶ್ವರಾ ನಿನಗೆ ಇಪ್ಪತ್ತೊಂದು ನಮಸ್ಕಾರಗಳು....!’

- srivathsajoshi@yahoo.com

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more