ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಂಬೆಹಣ್ಣು ಸುಖ ದುಃಖ ತೋಡಿಕೊಂಡಾಗ...

By ಶ್ರೀವತ್ಸ ಜೋಶಿ
|
Google Oneindia Kannada News

'ಸತತ ನೂರಾಐದು ವಾರಗಳವರೆಗೂ ಕಾದಿದ್ದೇನೆ ನೋಡಿ. ಅಲ್ಲಾ , ಎಂಥೆಂಥದೊ ಪಾಪ್‌ಕಾರ್ನು, ಚ್ಯೂಯಿಂಗಮ್ಮು, ಮಂಡಕ್ಕಿ, ಹಲಸಿನಹಣ್ಣು... ಇತ್ಯಾದಿಗಳ ಕುರಿತೆಲ್ಲ ವಿಚಿತ್ರಾನ್ನ ಲೇಖನ ಬಂದಿರುವಾಗ, ಚಿತ್ರಾನ್ನದ ಮೂಲಭೂತ ಅಗತ್ಯವಾದ ನನ್ನ ಬಗ್ಗೆ ಇಷ್ಟರವರೆಗೂ ವಿಚಿತ್ರಾನ್ನ ಬಂದಿಲ್ಲಾ ಅಂದ್ರೆ ಅದು ಘೋರ ಅನ್ಯಾಯವಲ್ಲವೇ? ನನ್ನ ದಾಯಾದಿ ಕಿತ್ತಳೆಯಣ್ಣನಿಗೆ ಸಮೇತ ಮಣೆ ಹಾಕಿರುವ ಈ-ಅಡಿಗೆಭಟ್ಟ ನನ್ನನ್ನು ಕ್ಯಾರೇ ಎನ್ನೋದಿಲ್ಲ ಅಂದ್ರೆ!? ಲೆಮನ್‌ರೈಸ್‌ ಅಂತಲೇ ಜಗದ್ವಿಖ್ಯಾತವಾದ ಚಿತ್ರಾನ್ನ - ಅದರಂತೆ ಇದು ಎಂದು ನಿಮಗೆಲ್ಲ ರುಚಿಹತ್ತಿಸಿದ ವಿಚಿತ್ರಾನ್ನ ; ಅಂಥಾದ್ದರಲ್ಲಿ ಇನ್ನೂ ಲೆಮನ್‌ ಬಗ್ಗೆ ಪ್ರಸ್ತಾಪವೇ ಇಲ್ಲಾ.... ಶಾಂತಂ ಪಾಪಂ ಶಾಂತಂ ಪಾಪಂ...’

'ಗೊತ್ತುಬಿಡಿ, ಹಿತ್ತಲಗಿಡ ಮದ್ದಲ್ಲ ಅಂತಾರಲ್ಲ , ಚಿತ್ರಾನ್ನಕ್ಕೆ ಬಳಸುವಾಗ ಮಾತ್ರ ನನ್ನ ನೆನಪಾಗೋದಾ, ಇರಲಿ ನಾನೇನು ಸುಮ್ನಿರುವ ಜಾತಿ ಅಂದ್ಕೊಂಡ್ರಾ? ಹೇಳಿಕೇಳಿ ತೀಕ್ಷ್ಣರುಚಿಯ ಡೈನಮೈಟ್‌ ಅಲ್ವೇ ನಾನು! ಈ ವಿಚಿತ್ರಾನ್ನ ಭಟ್ಟ ನನ್ನ ಬಗ್ಗೆ ಬರೀದಿದ್ರೆ ಅಷ್ಟೇ ಹೋಯ್ತು, ನಾನೇ ಕೊರೀತೇನೆ ನೋಡಿ.’'ಯಾವಾಗ್ಲೂ ನನ್ನನ್ನು ತಾನೆ ನೀವು ಹಿಂಡೋದು? ಫಾರ್‌ ಎ ಚೇಂಜ್‌, ಇವತ್ತು ನಾನೇ ನಿಮ್ಮ ತಲೆಯೆಲ್ಲ ಹಿಂಡಿದ್ರೆ ಹೇಗೆ? ಇದು ಸಿಟ್ರಸ್‌ನ ಸಿಟ್ಟಿನರಸ ಅಂದ್ಕೊಂಡ್ರೂ ಸರಿಯೆ. ರೆಡೀನಾ?

Nimbehannu, The Lemon!

* * *

'ಬಹುಷಃ ರಂಭೆ, ಗೊಂಬೆ ಮುಂತಾದ ಸ್ಫುರದ್ರೂಪಿ ಉಪಮೆಗಳಿಗೆ ಪ್ರಾಸಬದ್ಧವಾಗಿರೋದ್ರಿಂದಲೋ ಏನೊ ನಿಂಬೆ (ಅಥವಾ ಲಿಂಬೆ) ಹಣ್ಣಿಗೂ ಹೆಣ್ಣಿಗೂ ಕನ್ನಡದಲ್ಲಿ , ಪರ್ಟಿಕ್ಯುಲರ್ಲಿ ಚಿತ್ರರಂಗದಲ್ಲಿ , ವಿಶೇಷ ಹೋಲಿಕೆ. ಮೋಸ್ಟ್ಲಿ ನನ್ನ ಚಿನ್ನದ ಮೈಬಣ್ಣ ಹೆಣ್ಣಿನ ಅಂದವನ್ನು ಬಣ್ಣಿಸಲು ಯೋಗ್ಯವಾಗಿರುವುದರಿಂದಿರಬಹುದು ಅನ್ಸುತ್ತೆ. ನಿಮಗೆಲ್ಲ ಗೊತ್ತೇ ಇದೆಯಲ್ಲಾ, ಪ್ರೇಮಲೋಕದ ಹಾಡಿನಲ್ಲಿ ಜ್ಯೂಹಿಚಾವ್ಲಾಳಷ್ಟೇ 'ಮಿಂಚಿಂಗು’ ನನಗೂ ಸಿಕ್ಕಿದ್ದು? ನಿಂಬೆಹಣ್ಣಿನಂಥ ಹುಡುಗಿ ಬಂತು ನೋಡು ಎಂದು ರಸಿಕರೆಲ್ಲರಿಗೆ ಮತ್ತೇರಿಸಿದ ರವಿಚಂದ್ರನ್‌- ಹಂಸಲೇಖ- ರಮೇಶ್‌(ಗಾಯಕ) ಎಲ್ಲರಿಗೂ ನಾನು ಸದಾ ಆಭಾರಿ.

'ಅದಕ್ಕಿಂತಲೂ ಹೆಚ್ಚು ಪುಳಕ ನನಗಾಗುವುದು ಲಿರಿಲ್‌ (ಹಿಂದುಸ್ಥಾನ್‌ ಲಿವರ್‌ ಉತ್ಕೃಷ್ಟ ಉತ್ಪಾದನೆ) ಸೋಪ್‌ನ ಜಾಹೀರಾತಿನಿಂದ. ಲಿರಿಲ್‌ ನನ್ನ ಸುವಾಸನೆಯಿಂದಾಗಿ ಕ್ಲಿಕ್‌ ಆಯಿತೇ ಅಥವಾ 'ನಿಂಬೂ ಕೀ ತಾಜ್‌ಗೀ...’ ಎನ್ನುತ್ತ ಮೈಛಳಿ ಬಿಟ್ಟು 'ರೂಪದರ್ಶಿ’ಸಿದ ಕರೆನ್‌ ಲುನೆಲ್‌, ಆಮೇಲೆ ಅನುಷಾ ದಲಾಲ್‌, ತಾರಾ ಶರ್ಮಾ, ಪ್ರೀತಿ ರಿkುಂಟಾ - ಇವರೆಲ್ಲರ ಬ್ಯೂಟಿ ಎಂಡೋರ್ಸ್‌ಮೆಂಟ್‌ನಿಂದ ಪ್ರಖ್ಯಾತವಾಯ್ತೇ ಅನ್ನೋದು ಬೇರೆ ಮಾತು. ಆದರೆ ಲಿರಿಲ್‌ - ಜಲಪಾತದ ಬಳಿ ಬಿಕಿನಿ ತೊಟ್ಟ ಬಿಂದಾಸ್‌ ಕನ್ನಿಕೆ - ನಿಂಬೆಹಣ್ಣಿನ ತಾಜಾತನ... ಭಾರತೀಯ ಜಾಹೀರಾತುಜಗತ್ತಿನ ಎಪಿಟೋಮ್‌ ಅಂದರೆ ಅತಿಶಯೋಕ್ತಿಯಲ್ಲ , ನೀವೂ ಒಪ್ಪುತ್ತೀರಾ.

Nimbu Sharabat majane bere'ಓಕೆ ಓಕೆ, ವಿಚಿತ್ರಾನ್ನಭಟ್ಟರು ಬರೆದರೆ ಸಭ್ಯತೆಯ ಚೌಕಟ್ಟಿನೊಳಗೇ ಇರುವ ಲೇಖನ ಇಂದು ನಾನು, ಯಕ್ಕಶ್ಚಿತ್‌ ನಿಂಬೆಹಣ್ಣೊಂದು ಬ(ಕೊ)ರೆಯುತ್ತಿರುವುದರಿಂದ ಎಲ್ಲೆ ಮೀರಬಹುದೇನೊ ಎಂಬ ಆತಂಕ ನಿಮ್ಮದೆಂದು ಬಲ್ಲೆ. ಡೋಂಟ್‌ ವರಿ ಮಾಡ್ಬೇಡಿ, ನಾನು 'ಗಜ’ಗಾಂಭೀರ್ಯದ ಗಜನಿಂಬೆಹಣ್ಣು. ನಥಿಂಗ್‌ ಎಂಬರಾಸಿಂಗ್‌. (ಯಾವ ಸಿಂಗ್‌? ಮನಮೋಹನ ಸಿಂಗ್‌? ಧರಂ ಸಿಂಗ್‌?)

'ಬಿ ಕೆ ಸುಮಿತ್ರಮ್ಮ ಹಾಡಿದ 'ನಿಂಬಿಯಾ ಬನದ ಮ್ಯಾಗಳ ಚಂದ್ರಮ ಚೆಂಡಾಡಿದ...’ ಜನಪದ ಗೀತೆಯನ್ನು ನೀವು ಗುನುಗುನಿಸುತ್ತಿರಿ. ಅಷ್ಟು ಹೊತ್ತಿಗೆ ನಾನು ನನ್ನ ನಿಂಬಾಯಣದ ಇನ್ನೂ ಕೆಲ ಪುಟಗಳನ್ನು ತೆರೆಯುತ್ತೇನೆ.

'ಹ್ಞಾಂ, ಇದೊಂದು ನೆನಪಾಯ್ತು ನೋಡಿ. ಬೇಕಾಗುವ ಸಾಮಾನುಗಳು: ನಿಂಬೆಹಣ್ಣು ನಾಲ್ಕು. - ಇದು ಯಾವುದಾದರೂ ರೆಸಿಪಿಯಲ್ಲಿನ ವಾಕ್ಯ ಎಂದು ನೀವಂದುಕೊಂಡರೆ ಟೋಟಲಿ ರಾಂಗ್‌. ಹೊಸ ಕಾರ್‌ ಖರೀದಿಸಿದಾಗ ಅದರ ಪೂಜೆಗೆ ಬೇಕಾಗುವ ಸಾಮಾನುಗಳ ಪಟ್ಟಿಯಲ್ಲಿ 'ನಾಲ್ಕು ನಿಂಬೆಹಣ್ಣು’ ಇದ್ದೇ ಇರಬೇಕಲ್ಲವೆ? ಪೂಜೆ ಆದ ಮೇಲೆ ನಾಲ್ಕೂ ಟಯರ್‌ಗಳ ಕೆಳಗೆ ಒಂದೊಂದು ನಿಂಬೆಹಣ್ಣು ಇಟ್ಟು, ಪೂಜೆಗೊಂಡ ಬೀಗದಕೈಯಿಂದ ಕಾರನ್ನು ಸ್ಟಾರ್ಟ್‌ ಮಾಡಿ, ನಿರ್ದಾಕ್ಷಿಣ್ಯವಾಗಿ ನನ್ನ ನಾಲ್ಕು ಸೋದರರನ್ನು ಟೈರ್‌ ಕೆಳಗೆ ಕ್ರಶ್ಷಿಸಿ ಬಲಿಗೊಟ್ಟು 'ಕಾರುಬಾರು’ ಶುರು ಮಾಡೋದಲ್ವೇ ನೀವುಗಳೆಲ್ಲ ? ಭಾರತದಲ್ಲಷ್ಟೆ ಅಲ್ಲ , ಇಲ್ಲಿ ಅಮೆರಿಕದದಲ್ಲೂ ಅದೇ ಪಾಡು. ಇಲ್ಲಿನ ಹಿಂದುದೇವಸ್ಥಾನಗಳಲ್ಲೂ ಹೊಸ ಕಾರ್‌ ಪೂಜೆಗೆ ಏರ್ಪಾಡು ಇರುತ್ತದೆ. ಕೆಲ ಗಣ್ಯರಂತೂ ಮನೆಯಲ್ಲೇ 'ಕಾರ್‌ ವಾರ್ಮಿಂಗ್‌ ಸಮಾರಂಭ’ ಇಟ್ಕೊಳ್ಳೋದೂ ಇದೆ! ಅಂತೂ ಹೊಸ ಕಾರು - ನಾಲ್ಕು ನಿಂಬೆಹಣ್ಣು ಇದು ಅವಿನಾಭಾವ ಸಂಬಂಧ. ಭಾರತದಲ್ಲೂ, ಭಾರತೀಯರಿರುವ ಯಾವುದೇ ದೇಶದಲ್ಲೂ! ಹೋಗಪ್ಪಾ ಯಾರೊ ಗೊಡ್ಡುಸಂಪ್ರದಾಯದವ್ರು ಮಾತ್ರ ಇಂಥವನ್ನು ಆಚರಿಸೋದು ಅಂದ್ಕೊಂಡ್ರಾ? ಜೆನಿಫರ್‌ ಪೊಲನ್‌ ಎನ್ನುವ ಅಮೆರಿಕನ್‌ ಮಹಿಳೆ ತನ್ನ ಕಾರ್‌ಪೂಜೆಯ ಅನುಭವವನ್ನು ಸಚಿತ್ರ ಲೇಖನದಲ್ಲಿ ಬರೆದಿಟ್ಟಿದ್ದಾಳೆ, ಓದಿ.

In US, unroadworthy cars are called Lemons!'ಕಾರು, ಹೊಸ ಕಾರು, ಕಾರು ಪೂಜೆ, ಕಾರುಬಾರು ಎಂದಾಗ ಇನ್ನೊಂದನ್ನೂ ಉಲ್ಲೇಖಿಸಬೇಕು. ಕಾರ್‌ ಕಾರ್‌ ಕಾರ್‌ ಕಾರ್‌ ಎಲ್ನೋಡಿದ್ರೂ ಕಾರ್‌... ಇರುವ ಅಮೆರಿಕದಲ್ಲಿ ಹಳೇಕಾರಿಗೆ ಏನಂತಾರೆ ಗೊತ್ತೇ? In the US, unroadworthy cars are called lemons! A vehicle that continues to have a defect that substantially impairs its use, value, or safety. Generally, if the car has been repaired 4 or more times for the same defect within the warranty period and the defect has not been fixed, the car qualifies as a Lemon. ಎಲ್ಲ ಸಂಸ್ಥಾನಗಳಲ್ಲಿ ಪ್ರತ್ಯೇಕ ಲೆಮನ್‌ ಕಾಯಿದೆಗಳು ಇವೆ. ಸೆಕೆಂಡ್‌ ಹ್ಯಾಂಡ್‌ (ಯೂಸ್ಡ್‌) ಕಾರ್ಸ್‌ ಮಾರುಕಟ್ಟೆಯಲ್ಲಿ 'ಲೆಮನ್‌ ಚೆಕ್‌’ (ತನ್ಮೂಲಕ ಸದ್ರಿ ಕಾರು ಒಂದು ಲೆಮನ್‌ ಹೌದೋ ಅಲ್ಲವೋ ಎಂಬ ಪರಾಮರ್ಶೆ) ಒಂದು ಪ್ರಮುಖ ಪ್ರಕ್ರಿಯೆ. ಈ ಲೆಮನ್‌ ಕಾನ್ಸೆಪ್ಟು ಎಷ್ಟು ಚಾಲ್ತಿಯಲ್ಲಿದೆಯೆಂದರೆ 2001ರಲ್ಲಿ ಅರ್ಥಶಾಸ್ತ್ರದಲ್ಲಿ ನೊಬೆಲ್‌ ಪ್ರಶಸ್ತಿ ಗಳಿಸಿದ ಜಾರ್ಜ್‌ ಎ ಎಕರ್ಲಾಫ್‌ನ ಪ್ರಬಂಧದ ಶೀರ್ಷಿಕೆ The Market for Lemons. ಹೊಸ ಡಿಕ್ಷನರಿಗಳಲ್ಲಿ ಲೆಮನ್‌ ಶಬ್ದಕ್ಕೆ one (as an automobile) that is unsatisfactory or defective ಎಂಬ ಅರ್ಥ ಕೂಡ ಇದೆ ಅನ್ನೋ ವಿಚಾರ ಗೊತ್ತಿತ್ತೇ ನಿಮಗೆ?

'ಅಂತೂ ಲಿಂಬೆಹಣ್ಣು ಅಂದ್ರೆ ಸಾಮಾನ್ಯದ್ದಲ್ಲ ಅನ್ನೋದು ಗೊತ್ತಾಯ್ತಲ್ಲ ? ನಾನು ಇನ್ನೂ ಇನ್ನೂ ಕೊರೀತಿದ್ರೆ ಅದು ಲಿಂಬೂ ಪುರಾಣ ಇದ್ದದ್ದು ಲಂಬೂ ಪುರಾಣ ಆಗೋ ಅಪಾಯವಿದೆ. ಮುಗಿಸುವ ಮುನ್ನ ಒಂದು ಸಿಂಪಲ್‌ ಜಾಣ್ಮೆಲೆಕ್ಕನೂ ತೂರಿಸಿ ಬಿಡ್ತೀನಿ ನಿಮ್‌ ತಲೆಯಾಳಗೆ. ಅಂದ್ಹಾಗೆ ಜಾಣ್ಮೆಲೆಕ್ಕ ರಸಪ್ರಶ್ನೆಗಳನ್ನೆಲ್ಲ ಕೇಳಿ ದೊಡ್ಡ ಪೋಸ್‌ ಕೊಡೋದು ವಿಚಿತ್ರಾನ್ನದಾತನಿಗೇ ಮೀಸಲಾದ ಗಂಟೇನೂ ಅಲ್ಲವಲ್ಲ. ನನ್ನ ಸ್ವಯಂಪಾಕದ ಲೇಖನದ ಮುಕ್ತಾಯಕ್ಕೆ ನನ್ನದೂ ಜಾಣ್ಮೆಲೆಕ್ಕ ಇರಲಿ. ಬೈ ದ ವೇ, ಇನ್ನೊಂದು ಇಂಟೆರೆಸ್ಟಿಂಗ್‌ ಸಂಗತಿ ಏನಪ್ಪಾ ಅಂತಂದ್ರೆ ಈ ಲೆಕ್ಕದಿಂದ ಸ್ವತಃ ವಿಚಿತ್ರಾನ್ನ ಕುಕ್ಕೂ ಕಕ್ಕಾಬಿಕ್ಕಿ! ಈ ಆಸಾಮಿಗೂ ಗೊತ್ತಿಲ್ಲ ಇದರ ಉತ್ತರ!

'ಲೆಕ್ಕ ಹೀಗಿದೆ (ಬೆಳವಲ ಬಯಲಿನ ಸಿಹಿಲಿಂಬೆ ನಿಮಗೆ ನೆನಪಾಗಲಿ ಅಂತ ಬಯಲುಸೀಮೆಯ ಕನ್ನಡಭಾಷೆ ಬಳ್ಸೀನಿ. ತಾಳಿಕೋಟೆಯ ಚಂದ್ರಗೌಡಕುಲಕರ್ಣಿ ಸರ್‌ ಈ ಲೆಕ್ಕ ನಿರೂಪಿಸಿ ನನಗೆ ಸಹಾಯ ಮಾಡ್ಯಾರ; ಅವರಿಗೆ ಶರಣುಶರಣಾರ್ಥಿ):

'ಇಬ್ರು ಅಣ್ಣ ತಮ್ಮ ಇದಾರ. ಇಬ್ರ ಹತ್ರೂ ತಲಾ ಮೂವತ್ತ ಲಿಂಬಿಹಣ್ಣ. ಅಣ್ಣ ರೂಪಾಯ್ಕ ಎರಡು ಮಾರಾಟಕ್ಕ ಹಚ್ಚಿದ. ತಮ್ಮ ರೂಪಾಯ್ಕ ಮೂರು ಹಚ್ಚಿದ. ಇಬ್ರು ಒಂದ ಕಡೆ ಕೂತು ಮಾರತಿದ್ದರು. ಅಣ್ಣಂಗೇನೋ ತುರ್ತು ಕೆಲಸ ಬಂತು. ತಮ್ಮಗ ಹೇಳಿ ಹೋದ. ತಮ್ಮ ಎರಡೂ ಸೇರಿಸಿ ಎರಡ ರೂಪಾಯ್ಕ ಐದರಂಗ ಮಾರಿದ. ಒಟ್ಟು ಇಪ್ಪತ್ನಾಲ್ಕು ರೂಪಾಯ್‌ ಬಂದ್ವು. ಅಣ್ಣಗ ಹದಿನೈದು ಕೊಟ್ಟ. ತಮ್ಮಗ ಒಂಬತ್ತ ಉಳಿದವು. ಖರೆ ಅಂದ್ರ ತಮ್ಮಗ ಹತ್ತು ರೂ. ಬರಬೇಕಿತ್ತು. ಇನ್ನೊಂದು ರೂಪಾಯ್‌ ಎಲ್ಲಿ ಹೋಯ್ತು? ರೂಪಾಯ್ಕ ಎರಡರಂಗ/ಮೂರಂಗ ಮಾರಿದ್ರೂ ಒಂದ. ಎರಡು ರೂಪಾಯ್ಕ ಐದ ಮಾರಿದರೂ ಒಂದ. ಹಿಂಗಿದ್ದೂ ಒಂದ ರೂ. ಕಡಿಮಿ ಯಾಕ ಬಂತು? ಹುಡಿಕಿ ಕೊಡ್ತೀರೇನು?

'ಸೋ, ಸ್ಮಾರ್ಟ್‌ ಆದ ನೀವೇ ಈ ಜಾಣ್ಮೆಲೆಕ್ಕ ಬಿಡಿಸಿ ಉತ್ತರಿಸಿ ನೋಡೋಣ. ನಿಮ್ಮ ಪತ್ರಗಳನ್ನು ನೋಡಿಯಾದ್ರೂ ಈ ಮನುಷ್ಯ ಉತ್ತರ ತಿಳ್ದ್‌ಕೊಳ್ಲಿ. ಅದಕ್ಕ, [email protected] ವಿಳಾಸಕ್ಕೆ ಪತ್ರ ಬರೀರಿ.

ಮತ್ತೆ ಯಾವಾಗಾರ ಸಿಗೋಣು,

ಇತಿ ನಿಮ್ಮ ಆಳ್‌,

ಲೆಮನಪ್ಪ ಲಿಂಬೂ ನಿಂಬಾಳ್‌. ಸಿಟ್ರಾಪುರ.

English summary
First Person account of a Lemon! A humorous essay by Srivathsa Joshi, ThatsKannada-Vichitranna columnist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X