ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಧಿಶೋಧನೆ-ಮನರಂಜನೆ : ರಸಪ್ರಶ್ನೆ ಹೊಸನಮೂನೆ

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

‘ಅದು ನಮ್ಮ ಊರು ಇದು ನಿಮ್ಮ ಊರು ತಮ್‌ತಮ್ಮ ಊರು ಧೀರ
ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ...’

- ಬೇಂದ್ರೆಯವರ ಈ ಹಾಡು ಇವತ್ತಿನ ರಸಪ್ರಶ್ನೆಗೆ ಪ್ರೇರಣೆ. ಹುಟ್ಟಿದೂರಿಂದ ನೂರಾರು, ಸಹಸ್ರಾರು ಮೈಲುಗಳಷ್ಟು ದೂರ (ಸಪ್ತಸಾಗರಗಳಾಚೆ ಎಂದಂತೆ) ವಾಸವಾಗಿದ್ದರೂ ಊರಿನ ಹೆಸರು ಕಿವಿಗೆ ಬಿದ್ದರೆ, ಪತ್ರಿಕೆಗಳಲ್ಲಿ ಓದಿದರೆ, ಟೀವಿಯಲ್ಲಿ ನೋಡಿದರೆ ಅದೇನು ಪುಳಕ! ನಮ್‌ನಮ್ಮ ಊರಿನ ಬಗ್ಗೆ ನಮಗೆಲ್ಲರಿಗೆ ಹೆಮ್ಮೆ. ಮಲ್ಲಿಗೆ ಕವಿ ಹೇಳಿದಂತೆ ಅದು ನವಿಲೂರೇ ಇರಲಿ ಹೊನ್ನೂರೇ ಇರಲಿ - ನಮ್ಮೂರು ನಮಗೆ ಚಂದ, ನಿಮ್ಮೂರು ನಿಮಗೆ ಚಂದ!

ಊರ ಬಗೆಗಿನ ಅಭಿಮಾನದ ಹಿನ್ನೆಲೆಯಲ್ಲಿ ಈ ಸಲ ರಸಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗಿದೆ. ತುಸು ಮನರಂಜನೆಯೂ ಇರಲೆಂದು ‘ನಿಧಿಶೋಧನೆ’ಯ (treasure-hunt) ರೂಪವನ್ನು ಪ್ರಶ್ನಾವಳಿಗೆ ಕೊಡಲಾಗಿದೆ. ಇಡೀ ಕರ್ನಾಟಕ ರಾಜ್ಯವ್ಯಾಪ್ತಿಯ ಸಣ್ಣದೊಡ್ಡ ಹಳ್ಳಿ-ಪೇಟೆ-ಪಟ್ಟಣ-ನಗರಗಳನ್ನು ಆಯ್ದುಕೊಂಡ ಪಟ್ಟಿಯಿದೆ. ನಿಧಿಶೋಧದ ನೆಪದಲ್ಲಿ ನೀವು ಆ ಸ್ಥಳಗಳಿಗೆಲ್ಲ ‘ವರ್ಚ್ಯೂವಲ್‌’ ಭೇಟಿನೀಡಿ (ಟಿ.ಎ, ಡಿ.ಎ ಕೊಡೋಣವಂತೆ, ಚಿಂತಿಸಬೇಡಿ!) ಯಾವುದು ಆ ಸ್ಥಳ/ಊರು ಎಂದು ಗುರುತುಹಾಕಿಕೊಳ್ಳಬೇಕು. ಎಲ್ಲ ಹದಿನೈದು ಊರುಗಳನ್ನು ಸರಿಯಾಗಿ ಪರಿಚಯ ಮಾಡಿಕೊಂಡ ಮೇಲೆ ನಿಧಿ ಎಲ್ಲಿದೆ ಎಂದು ಹದಿನಾರನೆಯ ಉತ್ತರವಾಗಿ ನೀವೇ ಘೋಷಿಸಿ.

ಈ ಸಲದ ಕ್ವಿಜ್‌ ‘ಮೆದುಳಿಗೆ ಮೇವಿ’ಗಿಂತಲೂ ಹೃದಯಕ್ಕೆ ಹತ್ತಿರವಾಗುವ ರೀತಿಯದ್ದು. ಆ ದೃಷ್ಟಿಯಿಂದಲೇ ಇದರಲ್ಲಿ ಎಲ್ಲರೂ ಭಾಗವಹಿಸಿ.

ಸ್ಪರ್ಧೆಯ ಬಹುಮಾನ ಮತ್ತು ಪ್ರಾಯೋಜಕರು:

ವಿಚಿತ್ರಾನ್ನದಲ್ಲಿ ಈ ಹಿಂದಿನ ಸ್ಪರ್ಧೆಗಳು, ಅವುಗಳಿಗೆ ದೊರೆತ ಪ್ರತಿಕ್ರಿಯೆಯನ್ನು ಕಂಡು ಹರ್ಷಪಟ್ಟು ಇನ್ನೊಂದು ಹೊಸ ಸ್ಪರ್ಧೆಯನ್ನು ಏರ್ಪಡಿಸಬೇಕೆಂದು ಸಲಹಿಸಿ ಬಹುಮಾನವನ್ನು ಪ್ರಾಯೋಜಿಸಿದವರು ಮಾರುತೀಶ್‌ ಬಳ್ಳಾರಿ. ಇವರ ಪರಿಚಯದ ಎರಡು ಮಾತನ್ನು ಇಲ್ಲಿ ಹೇಳಬೇಕು. ಐಬಿಎಂ ಕಂಪೆನಿಯಲ್ಲಿ ಸಾಫ್ಟ್‌ವೇರ್‌ ಇಂಜನಿಯರಾಗಿರುವ ಈ ಸಹೃದಯಿ ಅಪ್ಪಟ ಕನ್ನಡಿಗ ಕಳೆದ ನಾಲ್ಕೈದು ವರ್ಷಗಳವರೆಗೂ ನ್ಯೂಯಾರ್ಕ್‌ನ ಐಬಿಎಂ ಆಫೀಸಲ್ಲಿ ಕೆಲಸ ಮಾಡುತ್ತಿದ್ದವರು, ಮೊನ್ನೆ ಫೆಬ್ರವರಿಯಲ್ಲಿ ಬೆಂಗಳೂರಿನ ಐಬಿಎಂ ಆಫೀಸಿಗೆ ಸ್ವ-ಇಚ್ಛೆಯ ವರ್ಗಾವಣೆ ತೆಗೆದುಕೊಂಡು ಭಾರತಕ್ಕೆ ಮರಳಿದ್ದಾರೆ. ಅಮೆರಿಕದಲ್ಲಿರುತ್ತ ಮಾರುತೀಶ್‌ ದಟ್ಸ್‌ಕನ್ನಡದ ಖಾಯಂ ಓದುಗರಾಗಿದ್ದರು. ಒಂದೆರಡು ವಿಚಾರಪ್ರಚೋದಕ ಪ್ರಬಂಧಗಳನ್ನೂ ಅವರು ಬರೆದಿದ್ದಾರೆ. (http://www.thatskannada.com/nri/article/290903maruteesh.html) ಅಮೆರಿಕದಲ್ಲಿನ ವಾಸ್ತವ್ಯದ ಎಕೌಂಟ್‌ ಕ್ಲೋಸಿಂಗ್‌ ಮಾಡುವ ವೇಳೆ, ವಿಚಿತ್ರಾನ್ನದಲ್ಲಿ ಮುಂಬರುವ ಸ್ಪರ್ಧೆಯಾಂದಕ್ಕೆ ಬಹುಮಾನವಿರಲಿ ಎಂದು 21 ಡಾಲರ್‌ ನಗದನ್ನು, ಕೈಬರಹದ ಆತ್ಮೀಯ ಪತ್ರವೊಂದರ ಜತೆಗಿಟ್ಟು ಪೋಸ್ಟ್‌ ಮಾಡಿಯೇ ವಿಮಾನ ಹತ್ತಿದ್ದು ಅವರು.

ಮಾರುತೀಶರಿಗೆ ನಮ್ಮೆಲ್ಲರ ಪರವಾಗಿ ಇನ್ನೊಮ್ಮೆ ವಿಶೇಷ ಧನ್ಯವಾದಗಳು. ಅವರ ಕನ್ನಡಪ್ರೀತಿ ಹೀಗೆಯೇ ಬೆಚ್ಚಗಿರಲಿ.

ಸ್ಪರ್ಧೆಯ ಬಗ್ಗೆ ಹೆಚ್ಚುವರಿ ವಿವರಗಳು :

  • ಎಲ್ಲ 15 ಊರುಗಳ ಹೆಸರುಗಳೂ ನಾಲ್ಕಕ್ಷರದವು (ವಿಚಿತ್ರಾನ್ನ ಆರಂಭದಿಂದಲೂ ನಾಲ್ಕಕ್ಷರದ ಪದಗಳಿಗೆ ಪ್ರಾಶಸ್ತ್ಯ ಕೊಡುತ್ತ ಬಂದಿರುವುದು ನಿಮಗೆ ಗೊತ್ತಿದೆ).
  • 15 ಊರುಗಳ ಹೆಸರು ಮತ್ತು 16ನೇ ಉತ್ತರವಾಗಿ ಒಂದು ಪದಸಮೂಹ - ಇವಿಷ್ಟು ನೀವು ಕಳಿಸಬೇಕಾದ ವಿಷಯ.
  • ನಿಮ್ಮ ಉತ್ತರಗಳನ್ನು ಬರಹ/ನುಡಿ ಉಪಯೋಗಿಸಿ ಕನ್ನಡದಲ್ಲಿ ಕಳಿಸಿದರೆ ಸಂತೋಷ; However, ಈ ಬಾರಿಯೂ ಉತ್ತರಗಳನ್ನು ಕಳಿಸಲು ವೆಬ್‌ಪುಟದ ಸೌಕರ್ಯವೂ ಇದೆ.
  • ಎಲ್ಲ ಉತ್ತರಗಳನ್ನೂ ಸರಿಯಾಗಿ ಕಳಿಸಿದವರ ಪಟ್ಟಿಯಿಂದ ಒಬ್ಬ ಅದೃಷ್ಟಶಾಲಿಯನ್ನು ಚೀಟಿಯೆತ್ತಿ ನಿರ್ಧರಿಸಲಾಗುವುದು. 15 ಊರುಗಳ ಹೆಸರುಗಳದು ಮಾತ್ರ ಮೌಲ್ಯಮಾಪನ. 16ನೇ ಉತ್ತರ ನಿಮ್ಮ ಸ್ವಾಭಿಮಾನದ್ದಾದ್ದರಿಂದ ಅದರ ಅಮೂಲ್ಯಬೆಲೆಯನ್ನು, ಗೌರವವನ್ನು ತುಲನಾತ್ಮಕ ದೃಷ್ಟಿಗೊಳಪಡಿಸುವುದಿಲ್ಲ.
  • ಉತ್ತರಗಳೊಂದಿಗೆ ನಿಮ್ಮ ಹೆಸರು, ಊರು (ದೇಶ) ಅವಶ್ಯವಾಗಿ ತಿಳಿಸಲು ಮರೆಯಬೇಡಿ. ಸ್ಪರ್ಧೆಯಲ್ಲಿ ಗೆದ್ದರೆ ಬಹುಮಾನವನ್ನು ತಲುಪಿಸಲು ನಿಮ್ಮ ವಿಳಾಸವನ್ನು ಆಮೇಲೆ ಕೇಳಿ ಪಡೆಯಲಾಗುತ್ತದೆ. ಅಮೆರಿಕೇತರ ಪ್ರದೇಶದವರು ವಿಜೇತರಾದರೆ 21 ಡಾಲರ್‌ಗಳ ತತ್ಸಮಾನ ಮೊತ್ತ ಭಾರತೀಯ ಕರೆನ್ಸಿಯಲ್ಲಿ ಚೆಕ್‌ ರೂಪದಲ್ಲಿ ಬಹುಮಾನ.
  • ನಿಮ್ಮ ಉತ್ತರಗಳು ಮೇ 31, 2004ರ ಒಳಗೆ [email protected] ವಿಳಾಸಕ್ಕೆ ತಲುಪಬೇಕು.
ಬನ್ನಿ, ಈಗ ಕರ್ನಾಟಕವಿಡೀ ಸುತ್ತಾಡಿ ಬರೋಣ...
1. ನೀವು ಹುಡುಕುತ್ತಿರುವ ನಿಧಿ ಇಲ್ಲಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮಾತು ಬಿಡದ ‘ಮಂಜುನಾಥ’ನ ಸನ್ನಿಧಿಯಂತೂ ಇಲ್ಲಿದೆ. (ತಿಮ್ಮಪ್ಪ ಕಾಸು ಬಿಡ; ಮಂಜುನಾಥ ಮಾತು ಬಿಡ... ಎಂದು ಪ್ರತೀತಿ) ಶೋಧಕಾರ್ಯದಲ್ಲಿ ಮಂಜುನಾಥನ ಅನುಗ್ರಹ-ಆಶೀರ್ವಾದ ನಿಮ್ಮ ಜೊತೆಗಿರಲಿ.
2. ಮದಿಸಿದ ಆನೆಯ ಮದವಡಗಿಸಿದವನ ಕಾವಲುಗಾರನ ಮನೆಯಾಕೆ; ತನ್ನ ಸಾಹಸಕಾರ್ಯಕ್ಕೆ ಆಕೆ ಬಳಸಿದ್ದು ಒನಕೆ. ತ.ರಾ.ಸು ಅವರಿಗೆ ಕಾದಂಬರಿ ಬರೆಯಲು ಪ್ರೇರಣೆಯಿತ್ತ ಈ ಊರಿನಲ್ಲಿ ನಿಧಿ ಹುಡುಕುವಿರೇಕೆ? ಮುಂದುವರೆಸಿ.
3. ಗುಲಗಂಜಿಯಷ್ಟು ದೊಡ್ಡದಿರಬಹುದೇ ನಿಧಿ? ದಾಳಿಕೋರರು ಹಿಂಜಿ ಹಿಪ್ಪೆ ಮಾಡಿಯಾರೆಂದು ಅಂಜಿ, ಗಂಜಿಯನ್ನೂ ತಿನ್ನದೆ ಅಡಗಿ ಕುಳಿತಿರಬಹುದೇ? ಉತ್ತರಕನ್ನಡ ಜಿಲ್ಲೆಯ ಈ ಊರಿನ ಯಕ್ಷಗಾನ ಮೇಳದವರ ವೇಷಭೂಷಣಗಳ ಪೆಟ್ಟಿಗೆಯಲ್ಲಿ ಅಡಗಿರಬಹುದೇ?
4. ದಾಳಿಕೋರರೆಂದಾಗ ಅದೇ ಒಂದು ಕ್ಲೂ ಇರಬಹುದೇ? ದಖ್ಖನ್‌ ಸುಲ್ತಾನರು ವಿಜಯನಗರ ಸಾಮ್ರಾಜ್ಯದ ಮೇಲೆ ದಾಳಿನಡೆಸಿ ಘೋರಕದನ ನಡೆದ ಊರಲ್ಲಿ ಸಿಗಬಹುದೇ ನಿಧಿ? ಸ್ವಲ್ಪ ತಾಳಿ; ಕೋಟೆ-ಕೊತ್ತಲಗಳ ಮೂಲೆಮೂಲೆಗಳಲ್ಲೂ ಹುಡುಕಿ.
5. ಹೊಸ ಜಾಗಗಳಲ್ಲಿದ್ದರೆ ಹುಡುಕುವುದು ಕಷ್ಟ . ನೀವು ಹುಡುಕುತ್ತಿರುವ ನಿಧಿ ಬಹುಶಃ ‘ಹೊಸದಲ್ಲದ’ ಈ ಸ್ಥಳದಲ್ಲಿದೆ. ಬೇಕಿದ್ದರೆ ಪಕ್ಕದೂರಿನಲ್ಲಿರುವ ಚೆನ್ನಕೇಶವನನ್ನು ನಂಬಿ ಶೋಧಕಾರ್ಯದಲ್ಲಿ ಮುಂದುವರೆಯಿರಿ.
6. ಜಮಖಾನೆ ಹಾಸಿ ನಿಮ್ಮನ್ನು ಕೂರಲು ಹೇಳಿದರೆಂದುಕೊಳ್ಳೋಣ. ಅಲ್ಲಿ ಖಾನೆಯನ್ನೇ ಖಾಲಿಮಾಡಿದ್ದಾರೆಂದ ಮೇಲೆ ನಿಧಿ ಎಲ್ಲಿಂದ? ಖಾನೆಯಿದ್ದಲ್ಲಿ ಖಂಡಿಗಟ್ಟಲೆ ಒಣರೊಟ್ಟಿ+ಚಟ್ನಿಪುಡಿ ಸುರಿದು ನಿಮ್ಮ ಹಸಿವನ್ನಾದರೂ ನೀಗಿಸಬಹುದು ಈ ಊರಿನ ಜನ. ಪಟವರ್ಧನ ಸಾಮ್ರಾಜ್ಯ ಕಾಲದಲ್ಲಿ ರಾಜಧಾನಿ ನಗರವಾಗಿದ್ದ ಊರನ್ನು ಸುತ್ತಾಡಿ ಬಂದು ಮುಂದುವರೆಯಿರಿ.
7. ನಿಧಿ ಸಿಕ್ಕಿಲ್ಲ , ನೆರವಾಗೆಂದು ಶಿವನಲ್ಲಿ ಬೇಡುತ್ತೀರೋ, ವಿಷ್ಣುವಿನ ಮೊರೆ ಹೋಗುತ್ತೀರೋ? ಭೌಗೋಳಿಕವಾಗಿ ಕರ್ನಾಟಕದ ಅತಿಮಧ್ಯಭಾಗದಲ್ಲಿ ಇರುವ ಈ ಊರಲ್ಲಿ ನಿಮಗೆ ವಿಷ್ಣು-ಶಿವ ಇಬ್ಬರೂ ಸಿಗುತ್ತಾರೆ; ನಿಧಿ ಸಿಗುತ್ತದೋ ಇಲ್ಲವೋ ನಾಕಾಣೆ!
8. ಬೆಂಗಳೂರಿನ ಬಾರ್‌-ಪಬ್‌ಗಳಲ್ಲಿ ಬೀರ್‌ ಹೀರುವ ಬೀರಬಲ್ಲರು, ತೀರ್ಥ ಸೇವಿಸುವ ತೀರ್ಥಂಕರರು ಮಲೆನಾಡಿನ ಈ ಹಳ್ಳಿಗೆ ಹೋಗಿ ಅಲ್ಲೂ ನಮಗೆ ತೀರ್ಥ ಬೇಕೇಬೇಕು ಎಂದು ಪಟ್ಟುಹಿಡಿದರೆ? ನೀವು ಮಾತ್ರ ದೇವರಿಗೆ ಅಭಿಷೇಕ ಮಾಡಿದ ನೀರನ್ನು ‘ಜಠರೆ ಧಾರಯಾಮ್ಯಹಮ್‌...’ ಎಂದು ಸ್ವೀಕರಿಸಿ ಮುಂದುವರೆಸಿ. ನಿಧಿ ಇಲ್ಲಿಲ್ಲ, ನಿಮ್ಮ ಪತ್ತೆದಾರಿ ಕೆಲಸ ಮುಂದುವರೆಯಲಿ.
9. ಉತ್ತರಕರ್ನಾಟಕದಲ್ಲೆಲ್ಲೋ ಚೌಕುಳಿಗಳ ಸೀರೆಯಲ್ಲಿ ಸುತ್ತಿಟ್ಟಿದ್ದಾರಂತೆ ನಿಧಿಯನ್ನು... ಅಂತ ಒಂದು ಗಾಳಿಸುದ್ದಿ. ಸೀರೆ ಎಂದೊಡನೆ ಅದರ ಮೂಲವನ್ನೇ ಹುಡುಕುವುದು ಒಳ್ಳೆಯದೆನಿಸಿ ನಿಮ್ಮನ್ನು ಈ ಊರಿಗೆ ಕರೆತಂದಿದ್ದು. ನಿಧಿ ಇಲ್ಲಿಯೂ ಕಾಣುತ್ತಿಲ ್ಲ!? ಬರುವಾಗ ಕಲ್ಲುಬಂಡೆ ಇತ್ಯಾದಿಯನ್ನೇರಿ ಬಂದಿದ್ದರೆ ಇಳಿದು ಮುನ್ನಡೆಯಿರಿ.
10. ಚೂರುಪಾರು ಉಷ್ಣವಿದ್ಯುತ್ತನ್ನಾದರೂ ಕರ್ನಾಟಕಕ್ಕೆ ಒದಗಿಸಿಕೊಡುವ, ಧಗದಗ ಉರಿವ ಊರಿಗೂ ಬಂದುನೋಡಿ ರಾಯರೇ! ಆರಾಮಾಗಿ ರೈಲುಬಂಡಿಯಲ್ಲಿ ಬನ್ನಿ, ಪರವಾ ಇಲ್ಲ. ಆದರೆ ನಿಧಿ ಸಿಗುತ್ತೋ ಇಲ್ಲವೋ ಗೊತ್ತಿಲ ್ಲ!
11. ಬಹದ್ದೂರ್‌ ಗಂಡು ಚಿತ್ರದಲ್ಲಿ ಡಾ।ರಾಜ್‌ ತಾನು ಎಲ್ಲಿಯ ಬೆಂಕಿಚೆಂಡು ಎಂದು ಗುಡುಗಿದ್ದು? ಅಲ್ಲೇನಾದರೂ ಪಟ್ರೋಲ್‌ಬಂಕ್‌ಗಳದ್ದೇ ಪಟ್ಟಣವಾದರೆ ಬೆಂಕಿಚೆಂಡಿನ ಜತೆ ತುಂಬಾ ಹುಶಾರಾಗಿರಬೇಕು! ಪತ್ತೇದಾರರಾದ ನೀವು ಹೇಗೂ ಜಾಗರೂಕರಾಗಿಯೇ ಇರುತ್ತೀರಿ ಬಿಡಿ.
12. ನಂಜನಗೂಡಿನ ರಸಬಾಳೆ, ಕೊಡಗಿನ ಕಿತ್ತೀಳೆ ಇತ್ಯಾದಿ ಬಗೆಬಗೆಯ ಹಣ್ಣುಗಳ ಮಾರುವವನು ತನ್ನ ಬುಟ್ಟಿಯಲ್ಲಿ ದಾಳಿಂಬೆಯನ್ನು ಎಲ್ಲಿಂದ ಕೊಯ್ದು ತಂದದ್ದು ? ದಾಳಿಂಬೆಯಾಳಗಿನ ಫಳಫಳ ಮಣಿಗಳಂತೆ ಅಲ್ಲೆಲ್ಲೋ ಜೇನಬೆಟ್ಟದಲ್ಲಿ ನಿಧಿಯಡಗಿದೆಯೆಂದು ನನ್ನ ಗುಮಾನಿ.
13. ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ... ಯಾವ ದೇಶಮಂ? ಆದಿಕವಿ ಪಂಪನಿಗೆ ಮತ್ತೆ ತನ್ನ ಹುಟ್ಟೂರಲ್ಲಿ, ಕದಂಬರ ರಾಜಧಾನಿಯಲ್ಲಿ , ಮಧುಕೇಶ್ವರನನುಗ್ರಹದಲ್ಲಿ , ಮರಿದುಂಬಿಯಾಗಿ ಮೇಣ್‌ ಕೋಗಿಲೆಯಾಗಿ ಈ ನಂದನದಲ್ಲಿ ಪುಟ್ಟುವ ಆಸೆ. ಅಲ್ಲಿಗೂ ಹೋಗಿ ಹುಡುಕಿಬರುವುದೇ ವಾಸಿ.
14. ಗೊತ್ತಾಯ್ತು , ನಿಧಿ ಇನ್ನೂ ಸಿಕ್ಕಿಲ್ಲವೆಂದು ಈಗೀಗ ನಿಮಗೆ ಚಿಂತೆ ಶುರುವಾಯಿತು! ಚಿನ್ನದಗಣಿಗಳ ಜಿಲ್ಲೆಯ ಈ ಊರಲ್ಲಿ ಮಣಿಯಾಗಿ ಕುಳಿತಿರಬಹುದೇ ನೀವು ಹುಡುಕುತ್ತಿರುವ ನಿಧಿ?
15. ಮಣಿ ಸಿಕ್ಕಿತೇ? ಬ್ಯಾಂಕ್‌ ಲಾಕರ್‌ನಲ್ಲಿರಬಹುದು! ಸಿಂಡಿಕೇಟ್‌ ಬ್ಯಾಂಕ್‌ ತವರೂರಾದ, ಸೆಕ್ಯುರಿಟಿ ಮುದ್ರಣಾಲಯಕ್ಕೆ ಹೆಸರಾದ, ಕೆಜಿ-ಟು-ಪಿಜಿ ವಿದ್ಯಾಸಂಸ್ಥೆಗಳಿರುವ ಈ ಊರಲ್ಲಿ ಮನಿ, ಮಣಿ ಎಲ್ಲ ಇದೆ. ನೋಡಿ.

* * *

16. ನಮ್ಮ ಹೆಮ್ಮೆಯ ಕರ್ನಾಟಕ ರಾಜ್ಯವೇ ನಮ್ಮ ನಿಧಿ. ಜೇನಿನ ಸಿಹಿಯ ಕನ್ನಡ ನುಡಿಯೇ ನಮ್ಮ ನಿಧಿ. ಕರ್ನಾಟಕ-ಕನ್ನಡದ ನಿಮ್ಮ ಅಭಿಮಾನ ಪ್ರತಿಫಲಿತವಾಗುವ ಕನ್ನಡಿಯಾಗಿ ಇಲ್ಲಿ ಬರೆಯಿರಿ ಒಂದು ಸಿಹಿನುಡಿ. ಅದು ನಿಮ್ಮೂರ ಬಗ್ಗೆಯಿರಬಹುದು, ನಿಮ್ಮ ತಾಲೂಕು-ಜಿಲ್ಲೆಯ ಹೆಗ್ಗಳಿಕೆಯ ಬಗ್ಗೆಯಿರಬಹುದು. ಸ್ಲೋಗನ್‌ ಇರಬಹುದು, ಹನಿಗವನ ಇರಬಹುದು. ನಿಮ್ಮೂರನ್ನು ನೀವು ಎಷ್ಟು ಮಿಸ್‌ ಮಾಡುತ್ತೀರಿ ಎಂಬ ಆತ್ಮನಿವೇದನೆಯಿರಬಹುದು. ಮನಸೋದಿಚ್ಛೆ ಬರೆಯಿರಿ.

ವಿ.ಸೂ: ಸುಲಭ-ಶೀಘ್ರ ವಿಧಾನದಲ್ಲಿ ಉತ್ತರಗಳನ್ನು ಕಳಿಸಲು ವೆಬ್‌ ಪುಟವನ್ನು ನೀವು ಉಪಯೋಗಿಸಬಹುದು. http://www.geocities.com/srivathsajoshi/thquiz.html. ಆದರೆ ನಿಮ್ಮ ಕಂಪ್ಯೂಟರ್‌ನಲ್ಲಿನ ಬ್ರೌಸರ್‌, ಈಮೈಲ್‌ ಸೆಟ್ಟಿಂಗ್‌ಗಳನ್ನವಲಂಬಿಸಿ ಇದನ್ನು ನೀವು ಬಳಸುವುದರಲ್ಲಿ ಯಶಸ್ವಿಯಾಗಬಹುದು ಎಂಬುದು ನೆನಪಿರಲಿ. ನಿಮ್ಮ ಉತ್ತರಗಳು ತಲುಪಿದ ಬಗ್ಗೆ ‘ರಸೀದಿ ಈಮೈಲ್‌’ ನಿಮಗೆ ಬರಬೇಕು. ಒಂದೆರಡು ದಿನಗಳವರೆಗೂ ಈ-ರಸೀದಿ ಸಿಗದಿದ್ದರೆ ಪರ್ಯಾಯವಾಗಿ ಬೇರೆ ಈಮೈಲ್‌ನಲ್ಲಿ ಉತ್ತರಗಳನ್ನು ಕಳಿಸುವುದು ಒಳ್ಳೆಯದು!

ನಿಧಿಶೋಧನೆ-ಮನರಂಜನೆ - ಈ ಸಂಚಿಕೆ ನಿಮಗೆ ಇಷ್ಟವಾಗುತ್ತದೆಂದುಕೊಂಡಿದ್ದೇನೆ. ನಿಮ್ಮ ಪತ್ರಗಳಿಗೆ ಎಂದಿನಂತೆ, [email protected] ವಿಳಾಸದಲ್ಲಿ ಆತ್ಮೀಯ ಸ್ವಾಗತವಿದೆ!


ಮುಖಪುಟ

/ ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X