• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ...

By ಶ್ರೀವತ್ಸ ಜೋಶಿ
|

ಅಥೆನ್ಸ್‌ ಒಲಿಂಪಿಕ್ಸ್‌ನ ಉದ್ಘಾಟನಾ ಪಥಸಂಚಲನವನ್ನು ಮೊನ್ನೆ ಟಿವಿಯಲ್ಲಿ ನಾವೆಲ್ಲರೂ ವೀಕ್ಷಿಸಿದೆವು. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದುಕೊಂಡು ನಾವು ಆ ಕಾರ್ಯಕ್ರಮವನ್ನು ನೋಡಿದ್ದಿರಬಹುದು, ಅಥವಾ ನಮ್ಮ ಜನ್ಮಭೂಮಿ ಭಾರತದಲ್ಲೇ ಇದ್ದುಕೊಂಡು ನೋಡಿರಬಹುದು; ಅದು ಮುಖ್ಯವಲ್ಲ. ಪಥಸಂಚಲನದಲ್ಲಿ ಭಾರತೀಯ ತಂಡ ನಮ್ಮ ಹೆಮ್ಮೆಯ ತ್ರಿವರ್ಣಧ್ವಜದೊಂದಿಗೆ ಫೋಕಸ್‌ಗೆ ಬಂದಾಗ ಆ ಒಂದು ಮೈಕ್ರೊಸೆಕೆಂಡ್‌ನಲ್ಲಿ ಪ್ರತಿಯಾಬ್ಬ ಭಾರತೀಯ ವೀಕ್ಷಕನಿಗೂ ಒಂದು ಅದ್ಭುತ ರೋಮಾಂಚನ ಆದದ್ದುಂಟು, ಅಂಥ ವಿಶೇಷ ಕ್ಷಣಗಳಲ್ಲದು ಆಗುವುದೂ ಉಂಟು.

ಇನ್ನೊಂದು ಉದಾಹರಣೆ. ‘ರೋಜಾ’ ಸಿನೆಮಾದಲ್ಲಿ, ಆತಂಕವಾದಿಗಳು ರಾಷ್ಟ್ರಧ್ವಜಕ್ಕೆ ಬೆಂಕಿಹೊತ್ತಿಸಿ ಅದನ್ನು ಅವಮಾನಮಾನಿಸುತ್ತಿರುವುದನ್ನು ಕಣ್ಣಾರೆ ನೋಡಲಾಗದೆ, ಕೈಕಾಲುಗಳನ್ನು ಕಟ್ಟಿದ್ದರೂ, ಹೊತ್ತಿ ಉರಿಯುತ್ತಿರುವ ಧ್ವಜದ ಮೇಲೆಯೇ ಹೊರಳಾಡಿ ತನ್ನ ಮೈಯಿಂದ ಬೆಂಕಿಯನ್ನು ನಂದಿಸುವ ಅರವಿಂದಸ್ವಾಮಿಯ ನಟನೆಯ ದೃಶ್ಯವನ್ನು ನೋಡುವಾಗಲೂ ವೀಕ್ಷಕನಲ್ಲಿ ಅದೇ ಭಾವುಕತೆಯ ಉತ್ಕಟ ಪ್ರವಾಹ.

ರಾಷ್ಟ್ರೀಯತೆ, ತನ್ನತನದ ಅಭಿಮಾನವೆಂಬುದೇನಿದೆಯೋ ಅದರ ಪರಮೋಚ್ಚ ದ್ಯೋತಕ ‘ರಾಷ್ಟ್ರಧ್ವಜ’ಕ್ಕಿರುವ ಮ್ಯಾಜಿಕಲ್‌ ಪವರ್‌ ಅದು! ರಾಷ್ಟ್ರಧ್ವಜ ಎಂದರೆ ಅದೇನೋ ಅಗೋಚರ ಅನಿರ್ವಚನೀಯ ಅನುಭವ. ನೋಡಿದಾಗಲೂ, ಅದರ ಬಗ್ಗೆ ನೆನೆಸಿಕೊಂಡಾಗಲೂ. 1953ರಲ್ಲಿ ಅದು ಮೌಂಟ್‌ ಎವರೆಸ್ಟ್‌ ಮೇಲೆ ವಿರಾಜಿಸಿತು ಎಂದು ಓದಿದಾಗಲೂ, 1984ರಲ್ಲಿ ವಿಂಗ್‌ ಕಮಾಂಡರ್‌ ರಾಕೇಶ್‌ ಶರ್ಮಾ ಜತೆ ಬಾಹ್ಯಾಕಾಶಕ್ಕೂ ನೆಗೆಯಿತು ಎಂದು ತಿಳಿದಾಗಲೂ!

Aug 15 is over, why talk about Freedom?ಸರಿ ಸರಿ, ತೀರಾ ಭಾವುಕ ವಿಚಾರಗಳು ಹಾಗಿರಲಿ. ರಾಷ್ಟ್ರಧ್ವಜ, ಸ್ವಾತಂತ್ರ್ಯೋತ್ಸವ ಇತ್ಯಾದಿಯ ಬಗ್ಗೆ ಸ್ವಲ್ಪ trivially, ಸ್ವಲ್ಪ seriously ಹರಟಿದರೆ ಹೇಗೆ ಈ ವಾರ ? ಹೇಗೂ ಮೊನ್ನೆಯಷ್ಟೆ ಭಾರತ ಸ್ವಾತಂತ್ರ್ಯದಿನೋತ್ಸವವನ್ನು ಆಚರಿದ್ದು ರಾಷ್ಟ್ರಧ್ವಜ-ದೇಶಭಕ್ತಿ-ಅಭಿಮಾನಗಳೆಲ್ಲ ಇನ್ನೂ ತಾಜಾ ಆಗಿಯೇ ಇವೆಯಷ್ಟೆ.

ಸ್ವಾತಂತ್ರ್ಯಗಳಿಕೆ ಮತ್ತು ದಿನಾಚರಣೆಯ ವಿಷಯದಲ್ಲಿ ಅಮೆರಿಕ ಮತ್ತು ಭಾರತಕ್ಕೆ ಕೆಲ ಆಸಕ್ತಿಕರ ಹೋಲಿಕೆಗಳಿವೆ. ಎರಡೂ ದೇಶಗಳು ಸ್ವತಂತ್ರವಾದದ್ದು ಬ್ರಿಟಿಷರ ದಾಸ್ಯಶೃಂಖಲೆಗಳಿಂದ. ಅಮೆರಿಕ ಸ್ವಾತಂತ್ರ್ಯ ಗಳಿಸಿದ್ದು 1776ರಲ್ಲಿ ; ಈ ಸಂಖ್ಯೆಯ ಅಂಕಿಗಳ ಮೊತ್ತ 21. ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು 1947ರಲ್ಲಿ. ಈ ಸಂಖ್ಯೆಯ ಅಂಕಿಗಳ ಮೊತ್ತವೂ 21. ಸ್ವಾತಂತ್ರ್ಯದ ದಿನಾಂಕ ಬೇರೆಬೇರೆ ಆದರೂ ಪ್ರತಿವರ್ಷವೂ (ಹೌದು, ಅಧಿಕವರ್ಷದಲ್ಲಿ ಸಹ) ಜುಲೈ 4 (ಅಮೆರಿಕ) ಮತ್ತು ಆಗಸ್ಟ್‌ 15 (ಭಾರತ) ಇವು ಒಂದೇ ‘ವಾರದ ದಿನ’ ಬರುತ್ತವೆ. ಈ ವರ್ಷ ಭಾನುವಾರ.

ಸ್ವಾತಂತ್ರ್ಯದಿನ ಈಸಲ ಭಾನುವಾರ ಬಂದಿದೆ ಎಂಬುದೇ ದೊಡ್ಡ ಪ್ರಬಂಧ ಬರೆಯಬಹುದಾದಷ್ಟು ವಿಚಾರ! ಭಾರತದಲ್ಲಿ ಸ್ವಾತಂತ್ರ್ಯದಿನಾಚರಣೆ ಭಾನುವಾರದಂದು ಬಂದ ವರ್ಷ (ಉದಾ: 2004) ‘ಅಯ್ಯೋ ಒಂದು ದಿನ ರಜೆ ಕಡಿತವಾಯ್ತಲ್ಲಾ....’ ಎಂಬ ಅಸಮಾಧಾನ ಹಲವರಿಗಾದರೆ ಸ್ವಾತಂತ್ರ್ಯೋತ್ಸವದ ಆಚರಣೆಯಲ್ಲಿ , ಪ್ರಭಾತಫೇರಿಯಲ್ಲಿ, ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ನಿರ್ವಾಹವಿಲ್ಲದವರಿಗಂತೂ ಡಬಲ್‌ ನಷ್ಟ. ಒಂದೇಒಂದು ದಿನ ಆದಿತ್ಯವಾರ ಕೂಡ ಬೆಳಗ್ಗೆ ಒಂಬತ್ತು-ಹತ್ತರವರೆಗೂ ಕಂಬಳಿಹೊದ್ದು ಗೊರಕಿಸುತ್ತ ಆರಾಮಾಗಿ ಬಿದ್ದುಕೊಂಡಿರಲಾಗಲಿಲ್ಲವಲ್ಲ ಎಂಬ ಕೊರಗು ಅವರದು. ಈಗೀಗ ಮೊಬೈಲ್‌ಫೋನ್‌ ಕ್ರಾಂತಿಆಗಿರುವ ನಂತರ ಕಡಿಮೆಯಾಗಿರಬಹುದು, ಇಲ್ಲಾಂದರೆ ಮೊದಲೆಲ್ಲ ಸ್ವಾತಂತ್ರ್ಯದಿನದಂದು ಎಸ್‌ಟಿಡಿ ಕರೆಗಳಿಗೆ ಅರ್ಧ ಚಾರ್ಜ್‌ ಎಂಬ ‘ಸಣ್ಣ’ ಸಡಗರ ಕೆಲ ಫೋನಾಸಕ್ತರಿಗೆ. ಆಗಸ್ಟ್‌ 15 ಭಾನುವಾರದಂದು ಬಂದರೆ ಹಾಗೂ ನಷ್ಟ ಅಂದುಕೊಳ್ಳುತ್ತಾರೆ ಆ ಪರಿಯ ಕೃಪಣರು.

Sarve Jana SukhinO Bhavantu!ಅಮೆರಿಕದಲ್ಲಿ ಸ್ವಾತಂತ್ರ್ಯದಿನ ಭಾನುವಾರ ಬಂದರೆ? ದೀರ್ಘವಾರಾಂತ್ಯದ (long weekend) ಅತಿ ಕ್ರೇಜ್‌ ಇರುವ ಈ ದೇಶದಲ್ಲಿ ಸರಕಾರವೇ ‘ಜುಲೈ 4 ಭಾನುವಾರದಂದು ಬಂದಿರುವುದರಿಂದ ಜುಲೈ 5ರಂದು ಸೋಮವಾರ ಕೂಡ ರಜೆ’ ಎಂದು ಘೋಷಿಸುತ್ತದೆ! ಈವರ್ಷ ಹಾಗೆಯೇ ಆಯ್ತು , ಜುಲೈ 5ರಂದು ಪಬ್ಲಿಕ್‌ ಹಾಲಿಡೇ. ಈ ದೇಶದಲ್ಲಿ ಮೆಮೊರಿಯಲ್‌ ಡೇ, ಲೇಬರ್‌ ಡೇ, ಪ್ರೆಸಿಡೆಂಟ್ಸ್‌ ಡೇ ಇತ್ಯಾದಿಯನ್ನೆಲ್ಲ ಅನುಕೂಲವಾಗಿ ದಿನಾಂಕಗಳ ಲಗಾಮಿಲ್ಲದೆ ಸೋಮವಾರಗಳಂದೇ ಆಚರಿಸಿ ತನ್ಮೂಲಕ ದೀರ್ಘವಾರಾಂತ್ಯಗಳನ್ನು ಹೊಂದಿರುವುದೇನೊ ಸರಿ, ಆದರೆ ದಿನಾಂಕದಿಂದಲೇ ನಿರ್ಧರಿತವಾಗುವ ಸ್ವಾತಂತ್ರ್ಯದಿನದಂಥ ಹಬ್ಬ ಭಾನುವಾರ ಬಂದರೆ ಮಾರನೆ ದಿನ ರಜೆ ಸಾರುವುದು ಸ್ವಲ್ಪ ಅತಿಯಾಯಿತೇನೊ ಎಂದು ನನಗನಿಸುವುದಿದೆ.

‘ಅಮೆರಿಕದಲ್ಲಿ ಅಮೆರಿಕದ ಸ್ವಾತಂತ್ರ್ಯ ದಿನಾಚರಣೆ’ ಮತ್ತು ಹಾಗೆಯೇ ಈಗೀಗ ತುಂಬ ಮಂದಿ ಭಾರತೀಯರೂ ಅಮೆರಿಕವಾಸಿಗಳಾಗಿರುವುದರಿಂದ ‘ಅಮೆರಿಕದಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆ’ ಹೇಗಿರುತ್ತವೆ ಎಂಬ ಕುತೂಹಲವಿರಬಹುದು ನಿಮ್ಮಲ್ಲಿ ಹಲವರಿಗೆ. ಆ ಬಗ್ಗೆ ಸ್ವಲ್ಪ ವಿವರಗಳನ್ನು ನೋಡೋಣ.

ಸುಡುಮದ್ದಿನ ಪ್ರದರ್ಶನ (fireworks display) ಅಮೆರಿಕ ಸ್ವಾತಂತ್ರ್ಯದಿನಾಚರಣೆಯ ಒಂದು ವಿಶೇಷ. ದೊಡ್ಡದೊಡ್ಡ ನಗರಗಳಿಂದ ಹಿಡಿದು ಸಣ್ಣಪುಟ್ಟ ಊರುಗಳಲ್ಲೂ ಜುಲೈ 4ರ ರಾತ್ರೆ ಬಾನಿನಲ್ಲಿ ರಂಗುರಂಗಿನ ಮತಾಪು ಉರಿಯುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಯಾರಿಸಿದ, ಆಸ್ಫೋಟಿಸುವ ಸುಡುಮದ್ದು ದೇಶದೆಲ್ಲೆಡೆ ಸ್ವಾತಂತ್ರ್ಯದಿನದ ರಂಗೇರಿಸುತ್ತದೆ. ರಾಜಧಾನಿಯಲ್ಲಿ ವಾಷಿಂಗ್ಟನ್‌ ಮಾನ್ಯುಮೆಂಟ್‌ನ ಹಿನ್ನೆಲೆಯಲ್ಲಿ ನಡೆವ ಅಮೋಘ ಫೈರ್‌ವರ್ಕ್ಸ್‌ ಡಿಸ್ಪ್ಲೆ ತುಂಬಾ ಪ್ರಸಿದ್ಧ (ಇಲ್ಲಿಗೆ ಬಂದ ಮೊದಲ ವರ್ಷದಲ್ಲಿ ಅದನ್ನು ನೋಡಲು ನಾವೆಲ್ಲ ಹೋಗಿದ್ದುಂಟು; ಈಗ ಮಾತ್ರ ಟಿವಿಯಲ್ಲಿ ನೋಡಿ ತೃಪ್ತರಾಗುತ್ತೇವೆ). ಚಿಕಾಗೋ ನಗರದಲ್ಲಾದರೆ ಒಂದು ಸ್ಪೆಷಾಲಿಟಿಯೆಂದರೆ ಅಲ್ಲಿ ಇಂಡಿಪೆಂಡೆನ್ಸ್‌ ಡೇ ಪ್ರಯುಕ್ತ ಫೈರ್‌ವರ್ಕ್ಸ್‌ ಪ್ರದರ್ಶನ (ಮಿಷಿಗನ್‌ ಸರೋವರದ ಮೇಲೆ ನೇವಿಪಿಯರ್‌ ಪಾರ್ಕ್‌ನಿಂದ) ಜುಲೈ 3ರ ರಾತ್ರಿಯೇ ನಡೆಯುತ್ತದೆ.

ಇನ್ನು ಭಾರತದ ಸ್ವಾತಂತ್ರ್ಯದಿನೋತ್ಸವವೂ ಇಲ್ಲಿ ಅಮೆರಿಕದಲ್ಲಿ ಸಾಕಷ್ಟು ವೈಭವದಿಂದಲೇ ನಡೆಯುತ್ತದೆಯೆನ್ನಬಹುದು. ವಾಷಿಂಗ್ಟನ್‌ ಪರಿಸರದ ಭಾರತೀಯ ಸಂಘಟನೆಗಳೆಲ್ಲ ಒಟ್ಟುಸೇರಿ ರಾಯಭಾರಿಯವರನ್ನೂ ಆಮಂತ್ರಿಸಿ ಧ್ವಜಾರೋಹಣ, ಬೊಲೊ ಭಾರತ್‌ ಮಾತಾ ಕಿ ಜೈ... ಘೋಷದೊಂದಿಗೆ ಮೆರವಣಿಗೆ, ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿಯನ್ನೆಲ್ಲ ಹಮ್ಮಿಕೊಂಡಿರುತ್ತವೆ. ಬಹುಜನರನ್ನಾಕರ್ಷಿಸಲು ‘ಏರ್‌ ಇಂಡಿಯಾ’ ಪ್ರಾಯೋಜಕತ್ವದಲ್ಲಿ ಇಂಡಿಯಾ ರೌಂಡ್‌ಟ್ರಿಪ್‌ ಟಿಕೆಟ್‌ನಂಥ ಬಹುಮಾನದ ರ್ಯಾಫೆಲ್‌ (ಲಕ್ಕಿಡಿಪ್‌) ಇತ್ಯಾದಿಯೂ ಇರುವುದುಂಟು. ನ್ಯೂಯಾರ್ಕ್‌ನಲ್ಲಿ ಗಗನಚುಂಬಿ ‘ಎಂಪೈರ್‌ ಸ್ಟೇಟ್‌ ಬಿಲ್ಡಿಂಗ್‌’ಗೆ ಆಗಸ್ಟ್‌ 14ರಿಂದ 15ರ ರಾತ್ರೆಯವರೆಗೆ ಕೇಸರಿ-ಬಿಳಿ-ಹಸಿರು ಬಣ್ಣಗಳ ಲೈಟಿಂಗ್‌ ಮಾಡಿರುತ್ತಾರೆ. ಮತ್ತೆ ‘ತಿರಂಗಾ’ ಗ್ರಾಫಿಕಲ್‌ ಎಟಾಚ್‌ಮೆಂಟ್‌ಗಳ ಈಮೈಲ್‌ ಶುಭಾಶಯ ವಿನಿಮಯವಂತೂ ಒಂದೆರಡು ದಿನ ಇದ್ದೇ ಇರುತ್ತದಲ್ಲ !

ಅದೆಲ್ಲ ತೋರಿಕೆಯ ಸಡಗರ ಸಂಭ್ರಮವಾಯ್ತು. ನಿಜ ಪರಿಸ್ಥಿತಿ? ಸ್ವಾತಂತ್ರ್ಯದಿನಾಚರಣೆಯ ಲವಲವಿಕೆ - ಎರಡೂ ದೇಶಗಳಲ್ಲೂ ಅಷ್ಟಕ್ಕಷ್ಟೆ . ಹೆಚ್ಚುಕಡಿಮೆ ‘ಕಾಟಾಚಾರ’ಕ್ಕೆ ಮುನ್ನಾದಿನ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿಗಳ ರೇಡಿಯಾ-ಟಿವಿ ಭಾಷಣ, ಮಾರನೆ ದಿನ ಪತ್ರಿಕೆಗಳಲ್ಲಿ ಅದರ ಪೂರ್ಣಪಾಠ, 15ರಂದು ಬೆಳಿಗ್ಗೆ ಕೆಂಪುಕೋಟೆಯ ಮೇಲೆ ಪ್ರಧಾನಿಯಿಂದ ಧ್ವಜಾರೋಹಣ ಭಾಷಣ. ರಾಜಧಾನಿಯಲ್ಲಿ, ಆಯಕಟ್ಟಿನ ಸೂಕ್ಷ್ಮ ಪ್ರದೇಶಗಳಲ್ಲಿ, ಗಡಿರೇಖೆಯಲ್ಲಿ ಕಟ್ಟುನಿಟ್ಟಿನ ಸರ್ಪಗಾವಲು-ಬಿಗಿಭದ್ರತೆ. ಎಲ್ಲಿಯ ಸ್ವಾತಂತ್ರ್ಯ? ಕಾಟಾಚಾರವೆಂದದ್ದು ಅದಕ್ಕೇ - ಆಚರಣೆಯೂ ಇದೆ, ‘ಕ್ರಿಮಿ’ಕೀಟಗಳ ಕಾಟವೂ ಇದೆ! ಅಮೆರಿಕದ ಹಣೆಬರಹವೂ ಅಷ್ಟೇ. ರಾಷ್ಟ್ರೀಯ ಭದ್ರತೆಯ ಮಟ್ಟಕ್ಕೆ ಈಗ ಕಲರ್‌ಕೋಡ್‌. ಬಾಂಬ್‌ ಭೀತಿಯ ಕರಿನೆರಳು. ಎಲ್ಲೋಅವಿತುಕೊಂಡು ಆಟಆಡಿಸುತ್ತಿರುವ ಒಸಾಮನಿಂದಾಗಿ ಇಲ್ಲಿ ಅಮೆರಿಕದಲ್ಲಿ ಸೆಕ್ಯುರಿಟಿ ಕೋಡ್‌ ಸದಾ yellow. ಕೆಲವೊಮ್ಮೆ ಆರೆಂಜ್‌; ಇಂಟೆಲಿಜೆನ್ಸ್‌ ಬ್ಯೂರೊಗಳ ಮೂಗಿಗೆ ಹೆಚ್ಚುವಾಸನೆ ಬಡಿದರೆ ಕೋಡ್‌ ರೆಡ್‌!

ಇಷ್ಟಾದರೂ ರೆಡ್‌-ವ್ಹೈಟ್‌-ಬ್ಲೂ (ಅಮೆರಿಕ ರಾಷ್ಟ್ರಧ್ಜಜಕ್ಕೆ ಅನ್ವರ್ಥನಾಮ) ಅಮೆರಿಕನ್ನರ ಹೃದಯದೊಳಗೆ ಉಂಟುಮಾಡುವ ದೇಶಭಕ್ತಿಗೇನೂ ಕೊರತೆಯಿಲ್ಲ. ಅಂತೆಯೇ ನಮ್ಮ ದೇಶದ ‘ವಿಜಯಿವಿಶ್ವ ತಿರಂಗಾ ಪ್ಯಾರಾ...’ ಭಾರತೀಯರಾದ ನಮಗೆ. ಭಯೋತ್ಪಾದಕರು ಭೀತಿಯನ್ನು ಉತ್ಪಾದಿಸುತ್ತಿದ್ದಷ್ಟೂ ರಾಷ್ಟ್ರಧ್ವಜವು ದೇಶದ ಬಗ್ಗೆ ಇನ್ನೂ ಹೆಚ್ಚು ಪ್ರೀತಿಯನ್ನು ಚಿಮ್ಮುತ್ತಲೇ ಇರುತ್ತದೆ. ಅದಕ್ಕೇ ಹೇಳಿದ್ದು, ಅಭಿಮಾನ-ಆದರಗಳನ್ನು ಮೂಡಿಸುವಲ್ಲಿ ರಾಷ್ಟ್ರಧ್ವಜಕ್ಕೊಂದು ಅಮೋಘ ‘ಶಕ್ತಿ’ ಇರುತ್ತದೆ. ಪ್ರತಿ ದೇಶದಲ್ಲೂ ಒಬ್ಬ ಬೆಟ್ಸಿ ರೋಸ್‌ (ಅಮೆರಿಕ ಧ್ವಜವನ್ನು ಮೊಟ್ಟಮೊದಲು ವಿನ್ಯಾಸಗೊಳಿಸಿದ ಮಹಿಳೆ) ಆಗಲಿ, ಒಬ್ಬ ಪಿಂಗಳಿ ವೆಂಕಯ್ಯ (ಭಾರತದ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದ ಸ್ವಾತಂತ್ರ್ಯಯೋಧ) ಇದ್ದೇ ಇರುತ್ತಾರೆ - ದೇಶದ ಗತ್ತು, ಗಾಂಭೀರ್ಯ, ಗೌರವ, ಘನತೆಗಳನ್ನು ಬಾನಿನೆತ್ತರಕ್ಕೇರಿಸುವ ಕೀರ್ತಿಪತಾಕೆಯನ್ನು ತಮ್ಮ ದೇಶಕ್ಕೆ ನೀಡಿರುವ ಮಹಾತ್ಮರು. ರಾಷ್ಟ್ರಧ್ವಜದೊಂದಿಗೇ ಅಂಥ ದೇಶಭಕ್ತ ಹುತಾತ್ಮರಿಗೊಂದು ಸೆಲ್ಯೂಟ್‌!

ಲೇಖನ ಮುಗಿಸುವ ಮುನ್ನ ಇದನ್ನೊಂದು ಓದಿಬಿಡಿ. ದೇಶದ ಗಣ್ಯರು (ಉನ್ನತ ಹುದ್ದೆಗಳಲ್ಲಿರುವ ಹಾಲಿ-ಮಾಜಿಗಳು) ನಿಧನರಾದಾಗ ಶೋಕಾರ್ಥ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸುವ ಪರಿಪಾಠವಿದೆಯಷ್ಟೆ ? ಅಮೆರಿಕದಲ್ಲೂ ಇದೆ ಆ ಕ್ರಮ. ಆ ವಿಷಯದಲ್ಲಿ ಇಲ್ಲಿ ಮೊನ್ನೆಯಷ್ಟೆ ಒಂದು ಸಂದಿಗ್ಧ/ಮುಜುಗರ ಸಂಗತಿ ನಡೆಯಿತು, ಏನು ಗೊತ್ತೇ? ಮಾಜಿ ಅಧ್ಯಕ್ಷ ರೊನಾಲ್ಡ್‌ ರೇಗನ್‌ ಶನಿವಾರ ಜೂನ್‌ 5ರಂದು ಕೊನೆಯುಸಿರೆಳೆದರು. ಅಗಲಿದ ನಾಯಕನಿಗೆ ಸಲ್ಲಿಸುವ ಗೌರವ ಸ್ವಲ್ಪ ಜಾಸ್ತಿಯೇ ಇರಲಿ, ಅದೂ ಅಲ್ಲದೆ ಆತ ರಿಪಬ್ಲಿಕನ್‌ ಪಕ್ಷದ ಕಟ್ಟಾಳು, ಈ ವರ್ಷ ಚುನಾವಣೆಯ ವರ್ಷವೂ ಆಗಿರುವುದರಿಂದ ರಿಪಬ್ಲಿಕನ್‌ ಅಲೆ ಹೆಚ್ಚಾಗಲಿ ಎಂದು ಅಮೆರಿಕ ಅಧ್ಯಕ್ಷ ಜಾರ್ಜ್‌ ಬುಷ್‌ (ರಿಪಬ್ಲಿಕನ್‌ ಪಕ್ಷದಿಂದ ಮರುಆಯ್ಕೆ ಬಯಸಿರುವ ಅಭ್ಯರ್ಥಿ) ಒಂದು ತಿಂಗಳ ಕಾಲ ಶೋಕಾಚರಣೆ ಘೋಷಿಸಿಬಿಟ್ಟರು! ಜೂನ್‌ 5ರಿಂದ ಒಂದು ತಿಂಗಳ ಕಾಲ ರಾಷ್ಟ್ರಧ್ವಜ ಅರ್ಧಮಟ್ಟದಲ್ಲಿ ಹಾರಾಡಬೇಕೆಂದು ಆದೇಶವಿತ್ತರು; ಅದರಂತೆ ಅದು ಹಾರಾಡತೊಡಗಿತು. ಆದರೆ ಒಂದುತಿಂಗಳು ಮುಗಿವ ಮುನ್ನವೇ ಜುಲೈ 4ರಂದು ಸ್ವಾತಂತ್ರ್ಯದಿನ ಬಂತು! ರಾಷ್ಟ್ರಧ್ವಜ ಪೂರ್ಣಮಟ್ಟಕ್ಕೇರಿತು. ಸಮಾಧಿಯಾಳಗಿಂದಲೇ ರೇಗನ್‌ ಆತ್ಮ ‘ಬುಷ್‌... ಶ್‌... ಶ್‌...’ ಎಂದು ನಿಟ್ಟುಸಿರಿಟ್ಟಿತೊ ಏನೊ ಎಂಬುದು ಮಾತ್ರ ತಿಳಿದುಬಂದಿಲ್ಲ !

ಕೊನೆಯಲ್ಲಿ ಈ ವಾರದ ಪ್ರಶ್ನೆ (ಸ್ವಾತಂತ್ರ್ಯೋತ್ಸವ ಆಚರಿಸಿದ ವಾರವಿದು. ರಸಪ್ರಶ್ನೆ ಕೇಳುವ ಸ್ವಾತಂತ್ರ್ಯ ನನಗಿದೆ; ಉತ್ತರಿಸುವ/ಬಿಡುವ ಸ್ವಾತಂತ್ರ್ಯ ನಿಮಗೂ ಇದೆ): ಇವತ್ತಿನ ಲೇಖನದ ಶೀರ್ಷಿಕೆಯಲ್ಲಿ ಉಪಯೋಗಿಸಿದ ‘ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ... ತೋರುತಿಹುದು ಹೊಡೆದು ಹೊಡೆದು ಬಾನಿನಗಲ ಪಟಪಟ... ಕೇಸರಿ ಬಿಳಿ ಹಸಿರು ಮೂರು ಬಣ್ಣ ನಡುವೆ ಚಕ್ರವು... ಸತ್ಯಶಾಂತಿತ್ಯಾಗ ಮೂರ್ತಿ ಗಾಂಧಿ ಹಿಡಿದ ಚರಕವು...’ ಗೀತೆಯನ್ನು ಬರೆದ ಕವಿ ಯಾರು? ಸುಳಿವು: ಕವಿಯ ಹೆಸರಿನ ಒಂದು ಅಕ್ಷರವನ್ನು ಉಚ್ಚರಿಸುವುದು, ಕನ್ನಡ/ಇಂಗ್ಲಿಷ್‌/ಕಂಗ್ಲಿಷ್‌ನಲ್ಲಿ ಬರೆಯುವುದೂ ನಿಮಗೆ ಕಷ್ಟವಾಗಬಹುದು. ಉತ್ತರ ಗೊತ್ತಾದರೆ ಬರೆದು ತಿಳಿಸಿ. ವಿಳಾಸ- srivathsajoshi@yahoo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Celebrating Freedom: What India and US has in common? India and US have successfully nurtured Democracy and democratic principles in socioeconomic spears. How about taking a close look at the similarities, contrasts between two bigwigs
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more