• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಷಾಕ್‌ ಕೊಡುವ ಚಳಿಭೂತ ‘ಸ್ಟಾಟಿಕ್‌’

By Staff
|
Srivathsa Joshi *ಶ್ರೀವತ್ಸ ಜೋಶಿ

ಪ್ರಾಥಮಿಕ ಶಾಲೆಯಲ್ಲಿದ್ದಾಗ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ಸ್ಥಿರ ವಿದ್ಯುತ್‌’ ಬಗೆಗಿನ ಪಾಠದ ಕೊನೆಯಲ್ಲಿ ‘ಇದನ್ನು ಮಾಡಿ ನೋಡಿ...’ ಎಂದು ಪೂರಕ-ಚಟುವಟಿಕೆಯಲ್ಲಿ ಓದಿ, ಆ ಪ್ರಯೋಗ ಮಾಡಿ ಆನಂದಿಸಿದ್ದೆವು. ಕಾಗದದ ಸಣ್ಣಸಣ್ಣ ಚೂರುಗಳನ್ನು ಮೇಜಿನ ಮೇಲೆ ಹರಡಿಟ್ಟು, ತಲೆಗೂದಲನ್ನು ಪ್ಲಾಸ್ಟಿಕ್‌ ಬಾಚಣಿಗೆಯಿಂದ ರಭಸವಾಗಿ ಬಾಚಿ, ಕೂಡಲೆ ಬಾಚಣಿಗೆಯನ್ನು ಕಾಗದದ ಚೂರುಗಳ ಮೇಲೆ ಹಿಡಿದರೆ ಅವು ಮೇಜಿನ ಮೇಲಿಂದ ಜಿಗಿದು ಬಾಚಣಿಗೆಗೆ ಅಂಟಿಕೊಳ್ಳುತ್ತವೆ! ಏನು ಮಜಾ!!

ಆದರೆ ಈಗ ಇಲ್ಲಿ ಉತ್ತರ ಅಮೆರಿಕದ ಚಳಿಯಲ್ಲಿ , ಮುಟ್ಟಿದ್ದೆಲ್ಲ ಷಾಕ್‌ ಹೊಡೆದಾಗ ಮಜಾ ಬಿಡಿ, ಅದೊಂದು ದೊಡ್ಡ ಕಿರಿಕಿರಿ (nuisance) ಅನಿಸುತ್ತದೆ. ಕುರ್ಚಿ-ಮೇಜುಗಳ ಅಂಚಿಗೆ ಮೈತಗುಲಿದರೆ ಷಾಕ್‌! ಬಾಗಿಲನ್ನು ತೆರೆಯಲೆಂದು ಅದರ knob ಮುಟ್ಟಿದರೆ ಷಾಕ್‌! ಕಾರಿನ ಬಾಗಿಲು ತೆಗೆಯಲು ಬೀಗದಕೈ ತೂರಿಸುವಾಗ ಷಾಕ್‌! ಇರಲಿ, ಇವೆಲ್ಲ ಲೋಹದಿಂದ ಮಾಡಿದವು, ಏನೋ ಸಂವಹನ ಕ್ರಿಯೆಯಿಂದ ಇರಬಹುದು ಎಂದುಕೊಂಡರೆ ಶೇಕ್‌-ಹ್ಯಾಂಡ್‌ ಕೊಡಲು ಬಂದ ಸ್ನೇಹಿತನ ಕೈಕುಲುಕಿದರೂ ಷಾಕ್‌! ಒಳ್ಳೇ ಪ್ರಾಣಸಂಕಟವಾಯಿತಲ್ಲ...!!

ನಾಲ್ಕು ವರ್ಷಗಳ ಹಿಂದೆ ಏಪ್ರಿಲ್‌ನಲ್ಲಿ ಭಾರತದಿಂದ ಚಿಕಾಗೋಕ್ಕೆ ನಾವು ಬಂದಿಳಿದಾಗ ಅಲ್ಲಿ ಇನ್ನೂ ಸ್ವಲ್ಪ ಪ್ರಮಾಣದಲ್ಲಿ ಚಳಿಗಾಲವಿತ್ತು. ವಿಮಾನನಿಲ್ದಾಣದಿಂದ ನಮ್ಮ ಕಂಪೆನಿಯ ಗೆಸ್ಟ್‌ಹೌಸ್‌ಗೆ ಟಾಕ್ಸಿ ಹಿಡಿದು ಬಂದೆವು, ನಾನೂ ಮತ್ತು ನನ್ನ ಇನ್ನೊಬ್ಬ ಸಹೋದ್ಯೋಗಿ. ಇಳಿದು ಟ್ಯಾಕ್ಸಿಯ ಡೋರ್‌ ಕ್ಲೋಸ್‌ ಮಾಡುತ್ತೇನೆಂದು ಮುಟ್ಟಿದರೆ ಕೈಗೆ ವಿದ್ಯುತ್‌ ಹರಿದ ಅನುಭವ! ಅಮೆರಿಕನ್‌ ಕಾರುಗಳ ಪವರ್‌ ಸ್ಟೀರಿಂಗ್‌, ಪವರ್‌ ವಿಂಡೋಸ್‌ ಅಂದರೆ... ಕಾರಿನ ಬಾಗಿಲುಗಳಲ್ಲೂ ಅಲ್ವಸ್ವಲ್ಪ ಪವರ್‌ ಹರಿಯುತ್ತದೆಯಿರಬಹುದು ಎಂದುಕೊಂಡದ್ದೂ ಹೌದು ಎಂದು ಹೇಳಲು ಈಗ ನಾಚಿಕೆಯಾಗುತ್ತದೆ :-) ಗೆಸ್ಟ್‌ಹೌಸ್‌ನಲ್ಲಿ ಮುಂಬಾಗಿಲು ‘ಸೆಲ್ಫ್‌ ಓಪನಿಂಗ್‌’ ಶೈಲಿಯದು; ತೆರೆದುಕೊಂಡು ನಮ್ಮನ್ನು ಸ್ವಾಗತಿಸಿತು. ವೆರಾಂಡಾದಲ್ಲಿ ಕಾರ್ಪೆಟ್‌ ಹಾಸಿನ ಮೇಲೆ ನಡೆದುಬಂದು ನಮಗೆ ನಿಗದಿಪಡಿಸಿದ್ದ ರೂಮ್‌ನ ಬಾಗಿಲು ತೆಗೆಯಲು ಹ್ಯಾಂಡಲನ್ನು ಮುಟ್ಟಿದರೆ ಆಗ ಮತ್ತೆ ಷಾಕ್‌! ನನಗೆ ಮಾತ್ರ ಹೀಗಾಗುತ್ತಿದೆಯೆಂದುಕೊಂಡರೆ ಮಾರನೆ ದಿನವೇ ನನ್ನ ರೂಮ್‌ಮೇಟ್‌ ಅವನಿಗೂ ಇದೇ ಅನುಭವವಾಯ್ತು ಎಂದ. ಅಂತೂ ಅಮೆರಿಕಕ್ಕೆ ಪಾದಾರ್ಪಣ ಮಾಡಿದಾಗ ಸಿಕ್ಕಿದ ಅಕ್ಷರಶಃ ‘ಮೈ ಜುಂ’ ಎನ್ನಿಸುವ ಸುಸ್ವಾಗತ ನನಗೀಗಲೂ ನೆನಪಿದೆ!

ಯಾಕೆ ಹೀಗೆ ಷಾಕ್‌ ಹೊಡೆಸಿಕೊಳ್ಳುತ್ತೇವೆ ಎಂದು ಅವರಿವರಿಂದ ಕೇಳಿ ತಿಳಿದಾಗ ಗೊತ್ತಾಯಿತು, ಭೌತಶಾಸ್ತ್ರದ ಒಂದು ಪ್ರಮುಖ ಪ್ರಕ್ರಿಯೆಯಾದ static electricity (ಸ್ಥಿರ ವಿದ್ಯುತ್‌) ಇದಕ್ಕೆಲ್ಲ ಕಾರಣವೆಂದು. ಸ್ಥಿರವಿದ್ಯುತ್‌ ಏಕೆ ಉಂಟಾಗುತ್ತದೆ, ಚಳಿಗಾಲದಲ್ಲಿ ಮಾತ್ರ ಏಕೆ ತನ್ನ ಪ್ರಭಾವವನ್ನು ಹೆಚ್ಚಾಗಿ ತೋರಿಸುತ್ತದೆ, ಷಾಕ್‌ ಹೊಡೆಸಿಕೊಳ್ಳುವುದನ್ನು ತಪ್ಪಿಸಲು ಅಸಾಧ್ಯವಾದರೂ ಹೇಗೆ ಕಡಿಮೆ ಮಾಡಬಹುದು, ಇತ್ಯಾದಿ ವಿಷಯಗಳು ವಿಚಿತ್ರಾನ್ನದಲ್ಲಿ ಈ ವಾರದ ಸಾಮಗ್ರಿ.

ನಮಗೆಲ್ಲ ಗೊತ್ತಿರುವಂತೆ ಭೌತಿಕ ಜಗತ್ತಿನಲ್ಲಿ ಪ್ರತಿಯಾಂದು ವಸ್ತುವೂ ಸೂಕ್ಷ್ಮಾತಿಸೂಕ್ಷ್ಮ ಅಣುಗಳಿಂದಲೇ ಆಗಿರುವುದು. ಪ್ರತಿಯಾಂದು ಅಣುವಿನಲ್ಲೂ ನಿರ್ದಿಷ್ಟ ಸಂಖ್ಯೆಯ ಪ್ರೋಟಾನ್‌ಗಳು, ಎಲೆಕ್ಟ್ರಾನ್‌ಗಳು ಮತ್ತು ನ್ಯೂಟ್ರಾನ್‌ಗಳು ಇರುತ್ತವೆ. ಪ್ರೋಟಾನ್‌ಗಳು ಧನಾತ್ಮಕ ಶಕ್ತಿಯನ್ನೂ ಎಲೆಕ್ಟ್ರಾನ್‌ಗಳು ಋಣಾತ್ಮಕ ಶಕ್ತಿಯನ್ನೂ ಹೊಂದಿದ್ದರೆ ನ್ಯೂಟ್ರಾನ್‌ಗಳು ತಟಸ್ಥ ಧೋರಣೆಯುಳ್ಳವಾಗಿರುತ್ತವೆ. ಪ್ರೋಟಾನ್‌ಗಳೂ, ಎಲೆಕ್ಟ್ರಾನ್‌ಗಳೂ ಸಮಪ್ರಮಾಣದಲ್ಲಿ ಇರಬೇಕಾದ್ದು ಅಣುವಿನ ಆದರ್ಶ ಸ್ಥಿತಿ. ಆದರೆ ಕೆಲವೊಮ್ಮೆ ಅಣುಗಳು ಕೆಲವೇ ಕೆಲವು ಪ್ರೋಟಾನ್‌ಗಳನ್ನು ಕಳಕೊಂಡರೂ ಎಲೆಕ್ಟ್ರಾನ್‌ಗಳು ಸಂಖ್ಯೆಯಲ್ಲಿ ಜಾಸ್ತಿಯಾಗುವುದರಿಂದ ಋಣಾತ್ಮಕ ಶಕ್ತಿ ಆ ವಸ್ತುವಿನಲ್ಲಿ ಸಂಚಯವಾಗುತ್ತದೆ. ಪರಸ್ಪರ ವಿರುದ್ಧ ಶಕ್ತಿಗಳ ಆಕರ್ಷಣೆಯೂ ಪ್ರಕೃತಿನಿಯಮವಾದ್ದರಿಂದ ಋಣವಿದ್ಯುತ್‌ ಸಂಚಯಗೊಂಡ ವಸ್ತು, ಧನವಿದ್ಯುತ್ತುಳ್ಳ ವಸ್ತುವಿನ ಸಂಪರ್ಕಕ್ಕೆ ಬಂದಾಗ ಅಲ್ಲಿ ವಿದ್ಯುತ್‌ ಪ್ರವಾಹ ಉಂಟಾಗುತ್ತದೆ.

ನಾವು ಕಾರ್ಪೆಟ್‌ ಹಾಸಿನ ಮೇಲೆ ನಡೆದುಕೊಂಡು ಬಂದು ರೂಮ್‌ನ ಬಾಗಿಲಿನ ಹಿಡಿಯನ್ನು ಮುಟ್ಟಿದಾಗ ಆಗುವುದೂ ಎಕ್ಸಾಕ್ಟ್ಲಿ ಅದೇ! ಕಾರ್ಪೆಟ್‌ ಮೇಲ್ಮೈ ಮತ್ತು ನಮ್ಮ ಪಾದಗಳ ನಡುವಿನ ಘರ್ಷಣೆಯಲ್ಲಿ ನಮ್ಮ ಶರೀರದ ಪ್ರೋಟಾನ್‌ (ಧನಾತ್ಮಕ ವಿದ್ಯುದಂಶಗಳು) ಒಂದಿಷ್ಟು ನಷ್ಟವಾಗಿ ನಮ್ಮ ಶರೀರದಲ್ಲಿ ಎಲೆಕ್ಟ್ರಾನ್‌ಗಳ ಸಂಖ್ಯೆ ಹೆಚ್ಚುತ್ತದೆ. ನಮ್ಮ ಮೈ ‘ನೆಗೆಟಿವ್‌ ಚಾರ್ಜ್‌’ ಆಗಿರುತ್ತದೆ. ಬಾಗಿಲಿನ ಹಿಡಿ ಅಥವಾ ತಿರುಗುಬುರುಡೆ ಲೋಹದಿಂದ ಮಾಡಿದ್ದು ಅದು ಧನವಿದ್ಯುದಂಶಪೂರಿತವಾಗಿರುವುದರಿಂದ ಅದರ ಸಂಪರ್ಕಕ್ಕೆ ಬಂದಾಗ ನಮ್ಮ ಮೈಯಿಂದ ಅದರತ್ತ ಎಲೆಕ್ಟ್ರಾನ್‌ಗಳ ಪ್ರವಾಹ ಕ್ಷಿಪ್ರವಾಗಿ ನಡೆದು ನಮಗೆ ಅದ್ಭುತ ಷಾಕ್‌ ಹೊಡೆಯುತ್ತದೆ. ಡ್ರೈಯರ್‌ನಲ್ಲಿ ಒಣಗಿಸಿದ ಬಟ್ಟೆಗಳನ್ನು ತೆಗೆದುನೋಡಿ - ಶರ್ಟ್‌, ಬನೀನ್‌, ಕರವಸ್ತ್ರ, ಪ್ಯಾಂಟ್‌ ಎಲ್ಲವಕ್ಕೂ ಪರಸ್ಪರ ಜಟಾಪಟಿ. ಒಂದೊಂದನ್ನೂ ಪ್ರತ್ಯೇಕಿಸಹೊರಟರೆ ಚಿಟಿಲ್‌ ಚಿಟಿಲ್‌ ಶಬ್ದವೇ ಬರುವಷ್ಟು ಸ್ಟಾಟಿಕ್‌ ಎಲೆಕ್ಟ್ರಿಸಿಟಿಯ ಪ್ರವಾಹ, ಪ್ರಭಾವ!

ಇಷ್ಟು ಅರ್ಥವಾಯಿತು; ಆದರೆ ಚಳಿಗಾಲದ್ದು ಏನು ಇದರಲ್ಲಿ ಪಾತ್ರ ಎಂದು ಕೇಳಿದಿರಾ?

ಚಳಿಗಾಲದ ಹವಾಮಾನದಲ್ಲಿ, ಗಾಳಿ ಶುಷ್ಕವಾಗಿರುತ್ತದೆ. Humidity (ತೇವಾಂಶ) ತೀರಾ ಕಡಿಮೆಯಿರುತ್ತದೆ. (ಚಳಿಗೆ ನಮ್ಮ ಕೈ-ಕಾಲುಗಳ ಚರ್ಮ ಬಿರುಕುಬಿಡುವುದಕ್ಕೂ, ತುಟಿಗಳು ಒಣಗಿ ಬಿರಿಯುವುದಕ್ಕೂ ಅದೇ ಕಾರಣ). ತೇವಾಂಶವಿಲ್ಲದ ಗಾಳಿಗೆ ವಿದ್ಯುತ್‌ ಪ್ರವಹನ ಸಾಮರ್ಥ್ಯವಿಲ್ಲ. ಹಾಗಾಗಿ ಸಂಚಯಗೊಂಡ ಎಲೆಕ್ಟ್ರಾನ್‌ಗಳು ವಸ್ತುಗಳ ಮೇಲ್ಮೈಯಲ್ಲೇ ಉಳಿದುಕೊಳ್ಳುತ್ತವೆ. ಲೋಹದ ವಸ್ತುಗಳಲ್ಲಿನ ಧನವಿದ್ಯುತ್‌ ಕೂಡ ವಾತಾವರಣಕ್ಕೆ ಪ್ರವಹಿಸದೆ ಹಾಗೇ ಉಳಿದುಕೊಂಡಿರುತ್ತದೆ. ಇವರೆಡೂ ಪರಸ್ಪರ ಸಂಪರ್ಕವಾದಾಗ ಮಾತ್ರ ಅಲ್ಲಿ ವಿದ್ಯುತ್‌ ಹರಿಯುತ್ತದೆ.

‘ಸ್ಟಾಟಿಕ್‌’ನ ಷಾಕ್‌ ಕಡಿಮೆಗೊಳಿಸಲು ನಾವೇನು ಮಾಡಬಹುದು?

ಆಂಟಿಸ್ಟಾಟಿಕ್‌ ಲೋಷನ್‌ ಮೈ-ಕೈಗೆ ಹಚ್ಚಿಕೊಳ್ಳಲು ದೊರಕುತ್ತದೆ ಮಾರುಕಟ್ಟೆಯಲ್ಲಿ. ಇದನ್ನು ಹಚ್ಚಿಕೊಂಡರೆ ನಮ್ಮ ಮೈಮೇಲಿನ ತೇವಾಂಶ ಹೆಚ್ಚುವುದರಿಂದ ಸ್ಟಾಟಿಕ್‌ ಎಫೆಕ್ಟ್‌ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಮನೆಯಲ್ಲಿ humidifierನ ಉಪಯೋಗ ಒಳ್ಳೆಯದು. ರಬ್ಬರ್‌ ಸೋಲ್‌ನ ಶೂಸ್‌ನ ಬದಲು ಚರ್ಮದ ಸೋಲ್‌ನ ಬೇರೆ ಪಾದರಕ್ಷೆಗಳನ್ನು ಧರಿಸುವುದು, ಫ್ಲೀಸ್‌ ಇರುವ ಉಣ್ಣೆ, ನೈಲಾನ್‌ ಬಟ್ಟೆಗಳಿಗಿಂತ ಪ್ಲೈನ್‌ ಲೆದರ್‌ ಜಾಕೆಟ್‌ ಧರಿಸುವುದು - ಇವೆಲ್ಲ ಸ್ವಲ್ಪ ಅನುಕೂಲಕರವಾಗಬಹುದು. ಡೋರ್‌ಹ್ಯಾಂಡಲನ್ನು ನೇರವಾಗಿ ಮುಟ್ಟುವ ಬದಲು ಬೀಗದಕೈ ಅಥವಾ ನಾಣ್ಯ ಇತ್ಯಾದಿಯನ್ನು ಅದಕ್ಕೆ ಮುಟ್ಟಿಸಿ ಡಿಸ್‌ಚಾರ್ಜ್‌ಗೊಳಿಸಿ ಆಮೇಲೆ ಹಿಡಿದರೆ ಷಾಕ್‌ ಹೊಡೆಯುವುದು ಕಡಿಮೆ. ಬೆರಳುಗಳ ಮಣಿಕಟ್ಟುಗಳಿಂದ ಡೋರ್‌ಹ್ಯಾಂಡಲನ್ನು ಮೆತ್ತಗೆ ‘ಟ್ಯಾಪ್‌’ ಮಾಡಿ ಆಮೇಲೆ ಅದನ್ನು ಹಿಡಿದುಕೊಂಡರೆ ಷಾಕ್‌ ಹೊಡೆಯದು. ಕೊನೆಯದೊಂದು ಉಪಾಯವೆಂದರೆ ‘ನನಗೆ ಷಾಕ್‌ ಹೊಡೆಯುತ್ತದೆ...’ ಎಂದು ತೀರಾ ನಿರೀಕ್ಷಣೆಯ ಮಾನಸಿಕ ಹೆದರಿಕೆಯನ್ನು ದಿವ್ಯ ನಿರ್ಲಕ್ಷ್ಯದ ಮೂಲಕ ಸದೆಬಡಿಯುವುದು. ಯಾವುದೇ ಸಂಗತಿಯನ್ನು ನಾವು ‘ಡೋಂಟ್‌ ಕ್ಯಾರ್‌’ ಮಾಡಿದರೆ ನಮಗದು ಕಿರಿಕಿರಿ ಕೊಡುವುದು ಕಡಿಮೆ ಅಲ್ಲವೇ?

ಆದರೂ ಏನೇ ಹೇಳಿ, ಮೊದಲೇ ಅಸಾಧ್ಯ ಚಳಿ, ಹೊರಗೆ ಹೋಗೋಣವೆಂದರೆ ಹಿಮಪಾತ. ಬನೀನ್‌, ಶರ್ಟ್‌, ಸ್ವೆಟರ್‌ ಮತ್ತದರ ಮೇಲೆ ಜಾಕೆಟ್‌ - ಹೀಗೆ ನಾಲ್ಕು ಕವಚಗಳು, ತಲೆ-ಕಿವಿಗಳನ್ನು ಮುಚ್ಚಿಕೊಳ್ಳುವಂತೆ ಟೋಪಿ, ಕೈಗಳಿಗೆ ಗೌಸ್‌ ತೊಟ್ಟು ಗಗನಯಾತ್ರಿಯಂತೆ ‘ವೇಷಭೂಷಣ’ದಿಂದಲಂಕೃತವಾಗಿ ಕೊನೆಗೂ ಹೊರಟು, ಐಸ್‌ ಹೊದ್ದಿರುವ ಪೇವ್‌ಮೆಂಟ್‌ ಮೇಲೆ ಜಾರುತ್ತ ಬೀಳುತ್ತ ಸಾವರಿಸಿ ನಡೆದು ಪಾರ್ಕಿಂಗ್‌ ಲಾಟ್‌ನಲ್ಲಿ ಕಾರನ್ನು ತಲುಪಿ, ಹಿಮನಿರ್ಮೂಲನಪಡೆಯವರಿಂದ ಲವಣಲೇಪನಗೊಂಡ ರಸ್ತೆಯ ಮೇಲೆ ಡ್ರೈವಿಸಿ ಆಫೀಸಿನ ಪಾರ್ಕಿಂಗಲ್ಲಿ ಕಾರಿನಿಂದಿಳಿದು, ‘ಸುಖವಾಗಿ ತಲುಪಿದೆಯಾ ಬಡಜೀವವೇ...’ ಎಂದುಕೊಂಡು ಬಿಲ್ಡಿಂಗ್‌ನ ಮುಖ್ಯದ್ವಾರದ ಮೆಟಲ್‌ ಹ್ಯಾಂಡಲನ್ನು ಮುಟ್ಟಿದಾಗ.... ಚಳಿಭೂತ ಸ್ಟಾಟಿಕ್‌ ಷಾಕ್‌ನ ಭವ್ಯ ಸ್ವಾಗತ ಎಂಥ ದಿವ್ಯನಿರ್ಲಕ್ಷ್ಯದ ‘ಯೋಗಿ’ಗಳಿಗೂ ಪವರ್‌ಫುಲ್‌ ಕಿರಿಕಿರಿ ಕೊಡುವುದಂತೂ ದಿಟ!

ನಾಳೆ ಶಿವರಾತ್ರಿ. ಶಿವ ಶಿವಾ ಎಂದು ಈ ಚಳಿಭೂತವೂ ಹೊರಟುಹೋದರೆ ಮುಂದಿನ ವರ್ಷ ಚಳಿಗಾಲದವರೆಗೆ ನಿರುಮ್ಮಳವಾಗಿರಬಹುದು.... ಅಂದುಕೊಳ್ಳುತ್ತೇನೆ. ನೀವೇನಂತೀರಾ? srivathsajoshi@yahoo.com ವಿಳಾಸಕ್ಕೆ ಬರೆಯಿರಿ. ನಿಮ್ಮ ಪತ್ರಗಳಿಗೆ ಷಾಕ್‌ಪ್ರೂಫ್‌ ಸ್ವಾಗತವಿದೆ!

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more