ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲೇಂಡ್‌, ಗ್ರೇಟ್‌ಬ್ರಿಟನ್‌, ಯುಕೆ - ಯಾವುದು ಓಕೆ?

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

Around Great Britain in zero euros!! ’ಸೂರ್ಯನು ಮುಳುಗದ ಸಾಮ್ರಾಜ್ಯವೆಂದು ಇಂಗ್ಲಿಷ್‌ ರಾಜ್ಯಕೆ ಹೆಸರಿತ್ತು...’ - ಹಿಂದೊಂದು ಕಾಲದಲ್ಲಿ ಪ್ರಪಂಚದ ಅನೇಕ ಭಾಗಗಳನ್ನು ಸ್ವಾಧೀನದಲ್ಲಿ ಇಟ್ಟುಕೊಂಡು ಸಾರ್ವಭೌಮರಾಗಿದ್ದ ಬ್ರಿಟಿಷರ ಬಗ್ಗೆ ಒಂದು ಸಾಲು ಅದು. ಭಾರತವೂ ಸೇರಿದಂತೆ ಅನೇಕ ದೇಶಗಳನ್ನು ಆಳತೊಡಗಿದ ಆ ’ಇಂಗ್ಲೇಂಡ್‌ ದೊರೆಗಳು’ ಇಂಗ್ಲಿಷ್‌ ಭಾಷೆಯಾಡುತ್ತಿದ್ದರಾದ್ದರಿಂದ ಅವರನ್ನು ಇಂಗ್ಲಿಷರು ಅಥವಾ ಆಂಗ್ಲರು ಎನ್ನುವುದು ರೂಢಿಯಾಯ್ತು. ಮತ್ತೆ ಅವರನ್ನು ’ಬ್ರಿಟಿಷರು’ ಎಂದೂ ಹೇಳುತ್ತೇವಲ್ಲ? ಬ್ರಿಟನ್‌ನವರಾದ್ದರಿಂದ ಬ್ರಿಟಿಷರು ಇರಬಹುದು. ಅಲ್ಲಿಗೆ, ಬ್ರಿಟನ್‌ ಅಂದರೂ ಒಂದೇ, ಇಂಗ್ಲೇಂಡ್‌ ಅಂದರೂ ಒಂದೇ ಅನ್ನುವ ಸುಲಭತೀರ್ಮಾನಕ್ಕೆ ಬರುತ್ತೇವೆ. ಆದರೆ ಈಗ ಇಂಗ್ಲೇಂಡ್‌ ಅಥವಾ ಬ್ರಿಟನ್‌ ಅನ್ನುವುದಕ್ಕಿಂತ ಯುನೈಟೆಡ್‌ ಕಿಂಗ್‌ಡಮ್‌ (ಅಥವಾ ಸಂಕ್ಷಿಪ್ತವಾಗಿ ಯು.ಕೆ) ಅಂತಲೇ ಹೆಚ್ಚು ಚಾಲ್ತಿಯಿರುವುದರಿಂದ ಇಂಗ್ಲೇಂಡ್‌, ಬ್ರಿಟನ್‌, ಯುಕೆ - ಇವೆಲ್ಲ ಒಂದೇ ಅನ್ನುವಷ್ಟು ಭೂಗೋಳಜ್ಞಾನ ನಮ್ಮಲ್ಲಿ ಹೆಚ್ಚಿನವರಿಗೆ. ನನಗಂತೂ ಹೌದು!

ಇಂಗ್ಲೇಂಡ್‌ ಅಂದರೇ ಬ್ರಿಟನ್‌, ಬ್ರಿಟನ್‌ ಅಂದರೇ ಯುಕೆ ಅಂತ ನಾನು ತಿಳಿಯೋದಕ್ಕೆ ಇನ್ನೊಂದು ಕಾರಣವಿದೆ. ನಮ್ಮಣ್ಣ ಇಂಗ್ಲೇಂಡ್‌ನ ಲೀಡ್ಸ್‌ ಎಂಬಲ್ಲಿ ವಾಸವಾಗಿದ್ದಾರೆ, ಸುಮಾರು ಹತ್ತಿಪ್ಪತ್ತು ವರ್ಷಗಳಿಂದಲೂ. ನಮ್ಮೂರಿಗೆ ನಮ್ಮ ಮನೆಗೆ ಫ‚ೋನ್‌ ಮಾಡುವಾಗೆಲ್ಲ ನಮ್ಮಣ್ಣ ’ನಾನು, ಇಂಗ್ಲೇಂಡಿಂದ ಹರಿ ಮಾತಾಡ್ತಿರೋದು...’ ಅಂತಲೇ ಮಾತು ಆರಂಭಿಸುತ್ತಾರೆ. ಇಂಗ್ಲೇಂಡ್‌ನಲ್ಲಿದ್ದು ಅಲ್ಲಿಂದಲೇ ಮಾತಾಡ್ತಿರುವಾಗ ಹಾಗೆ ಹೇಳೋದೇ ಸರಿ ತಾನೆ? (ಚಂದ್ರಲೋಕದಿಂದ ಮಾತಾಡ್ತಿರೋದು ಅಂತ ಹೇಳೊಕ್ಕಾಗೊಲ್ಲವಲ್ಲ!) ಆದರೆ ನಮ್ಮಣ್ಣನಿಗೆ ನಾವು ಊರಿಂದ ಪತ್ರ ಬರೆಯುವಾಗ ವಿಳಾಸದಲ್ಲಿ ಇಂಗ್ಲೇಂಡ್‌ ಅಂತ ಬರೆಯೋದಿಲ್ಲ, ಬದಲಾಗಿ ಯುನೈಟೆಡ್‌ ಕಿಂಗ್‌ಡಮ್‌ ಅಂತ ಬರೀತೇವೆ! ಈಮೈಲ್‌ ವಿಳಾಸದಲ್ಲೋ ಕಂಪೆನಿಯ ಹೆಸರಿನ ಮೊದಲು ಜಿ.ಬಿ (ಗ್ರೇಟ್‌ ಬ್ರಿಟನ್‌) ಎಂಬ ಪ್ರಿಫಿ‚ಕ್ಸ್‌ ಇದೆ. ಮತ್ತೆ ಅಲ್ಲಿಂದ ಬರುವ ಪತ್ರಗಳಿಗಿರುವ ಅಂಚೆಚೀಟಿ ನೋಡಿದ್ರೆ ಅದರಲ್ಲಿ ಇಂಗ್ಲೇಂಡ್‌ ಅಂತನೂ ಇರೋದಿಲ್ಲ, ಬ್ರಿಟನ್‌ ಅಂತಲೂ ಇರೋದಿಲ್ಲ, ಯುನೈಟೆಡ್‌ ಕಿಂಗ್‌ಡಮ್‌ ಅಂತಲೂ ಇರುವುದಿಲ್ಲ! ( ಮೊಟ್ಟಮೊದಲಿಗೆ ಅಂಚೆಚೀಟಿಯ ಉಪಯೋಗವನ್ನಾರಂಭಿಸಿದ ಗೌರವಕ್ಕಾಗಿ ಗ್ರೇಟ್‌ ಬ್ರಿಟನ್‌ ದೇಶಕ್ಕೆ, ಅಂಚೆಚೀಟಿಯ ಮೇಲೆ ದೇಶದ ಹೆಸರನ್ನು ಮುದ್ರಿಸದೇ ಇರುವುದಕ್ಕೆ ವಿಶೇಷ ವಿನಾಯಿತಿ ಇದೆ. ಬ್ರಿಟಿಷ್‌ ರಾಜಮನೆತನದ ಮುದ್ರೆಯಷ್ಟೇ ಆ ದೇಶದ ಅಂಚೆಚೀಟಿಗಳ ಮೇಲೆ ಇರುತ್ತದೆ).

ಅಂತೂ ಟೋಟಲ್‌ ಕನ್ಫ್ಯೂಷನ್‌. ಅದಕ್ಕೇ ’ಇಂಗ್ಲೇಂಡ್‌ = ಬ್ರಿಟನ್‌ = ಯುಕೆ’ ಎನ್ನುವ ಸುಲಭಸೂತ್ರ ನನ್ನದು.

ಆದರೆ ವಸ್ತುಸ್ಥಿತಿ ಹಾಗಿಲ್ಲ. ಇಂಗ್ಲೇಂಡ್‌ ಒಂದು ದೇಶ. (ಕ್ರಿಕೆಟ್‌ ವಿಷಯದಲ್ಲಿ ನಮಗೆ ಬಹುಪರಿಚಿತ ದೇಶವೆಂದರೆ ಇಂಗ್ಲೇಂಡ್‌). ಇಂಗ್ಲೇಂಡ್‌ನ ಜತೆಗೆ ವೇಲ್ಸ್‌ ಮತ್ತು ಸ್ಕಾಟ್‌ಲೇಂಡ್‌ ಎಂಬ ದೇಶಗಳನ್ನೂ ಸೇರಿಸಿದರೆ ಅದು ’ಗ್ರೇಟ್‌ ಬ್ರಿಟನ್‌’ ಎಂಬ ದೇಶವಾಗುತ್ತದೆ. ಅದಕ್ಕೆ ಐರ್‌ಲ್ಯಾಂಡಿನ ಉತ್ತರಭಾಗದ ಪ್ರದೇಶ (ನಾರ್ದರ್ನ್‌ ಐರ್‌ಲೇಂಡ್‌)ವನ್ನೂ ಸೇರಿಸಿದರೆ ಆಗ ಅದು ’ಯುನೈಟೆಡ್‌ ಕಿಂಗ್‌ಡಮ್‌’ ಆಗುತ್ತದೆ! ಸ್ವಾರಸ್ಯವೆಂದರೆ ಇವೆಲ್ಲ ವಿವಿಧ ವ್ಯಾಖ್ಯೆಗಳಲ್ಲಿ ಪ್ರತ್ಯೇಕ ದೇಶಗಳೇ. ಯುನೈಟೆಡ್‌ ಕಿಂಗ್‌ಡಮ್‌ ಒಂದು ದೇಶ. ಅದರ ಭಾಗವಾದ ಗ್ರೇಟ್‌ ಬ್ರಿಟನ್‌ ಒಂದು ದೇಶ. ಅದರ ಭಾಗಗಳಾದ ಇಂಗ್ಲೇಂಡ್‌, ವೇಲ್ಸ್‌, ಸ್ಕಾಟ್‌ಲೇಂಡ್‌ಗಳೂ ದೇಶಗಳೇ! ದೊಡ್ಡ ಬೋಗುಣಿಯಾಳಗೊಂದು ತಪ್ಪಲೆ ಮತ್ತು ಇನ್ನೊಂದು ಪಾತ್ರೆಯ ಸಣ್ಣದೊಂದು ಮುಚ್ಚಳ, ತಪ್ಪಲೆಯಾಳಗೊಂದು ಮೂರು ಕಂಪಾರ್ಟ್‌ಮೆಂಟ್‌ಗಳ ಟಿಫಿ‚ನ್‌ ಕೆರಿಯರ್‌. ಎಲ್ಲವಕ್ಕೂ ತಾನೊಂದು ’ಪಾತ್ರೆ’ ಅನ್ನುವ ಹಮ್ಮು-ಬಿಮ್ಮು. ಅದೇ ಯುನೈಟೆಡ್‌ ಕಿಂಗ್‌ಡಮ್ಮು!

Around Great Britain in zero euros!!ಈ ’ಗೊಂದಲದ ದೇಶಸಮೂಹ’ಕ್ಕೆ ಅಫಿ‚ೕಷಿಯಲ್‌ ಹೆಸರು The United Kingdom of Great Britain and Northern Ireland ಎಂದು. ಅಂದರೆ ನಾವು UK ಅಂತ ಎರಡಕ್ಷರದ ಶಾರ್ಟ್‌ ಫ‚ಾರ್ಮ್‌ ಉಪಯೋಗಿಸುತ್ತೇವಲ್ಲ, ಅದರ ಪೂರ್ಣರೂಪ ಅದು! ಅಷ್ಟು ಪೂರ್ಣರೂಪ ಬರೋದಕ್ಕೂ ಶತಶತಮಾನಗಳ ಇತಿಹಾಸವಿದೆ. ಕ್ರಿ.ಶ 1604ರಲ್ಲೇ ’ಗ್ರೇಟ್‌ ಬ್ರಿಟನ್‌’ ಎನ್ನುವ ಬಳಕೆ ಶುರುವಾಯ್ತು. 1707ರಲ್ಲಿ ಸ್ಕಾಟ್‌ಲೇಂಡ್‌ ಮತ್ತು ಇಂಗ್ಲೇಂಡ್‌ಗಳು ಒಂದಾದಾಗ ಆ ಒಟ್ಟು ಪ್ರದೇಶಕ್ಕೆ ಗ್ರೇಟ್‌ ಬ್ರಿಟನ್‌ ಎಂಬ ಅಧಿಕೃತ ನಾಮಕರಣವಾಯ್ತು. ಈಮೊದಲು 1536ರಲ್ಲೇ ವೇಲ್ಸ್‌ ಮತ್ತು ಇಂಗ್ಲೇಂಡ್‌ ಜತೆಯಾಗಿದ್ದುವು. ಹೀಗೆ ಇಂಗ್ಲೇಂಡ್‌-ವೇಲ್ಸ್‌-ಸ್ಕಾಟ್‌ಲೇಂಡ್‌ ಸಂಕೀರ್ಣವೇ ಗ್ರೇಟ್‌ ಬ್ರಿಟನ್‌ ಆಯ್ತು. (ಫ‚ಾ್ರನ್ಸ್‌ನಲ್ಲಿ ಸಣ್ಣದೊಂದು ಪ್ರದೇಶ ಬ್ರಿಟಾನಿಯಾ ಮೈನರ್‌ ಅಂತ ಇದೆ, ಅದರೊಟ್ಟಿಗೆ ಕನ್ಫ್ಯೂಸ್‌ ಆಗಬಾರದೆಂದು ಬ್ರಿಟಾನಿಯಾ ಮೇಜರ್‌ ಎಂದು ಹೆಸರಿಟ್ಟು ಅದು ಇಂಗ್ಲಿಷಲ್ಲಿ ಗ್ರೇಟ್‌ ಬ್ರಿಟನ್‌ ಆಯ್ತೇ ಹೊರತು ಅಂಥ ಗ್ರೇಟ್‌ನೆಸ್‌ ತೋರಿಸಿಕೊಳ್ಳಲಿಕ್ಕೇನೂ ಅಲ್ಲ ಎಂದೂ ಕೆಲವು ಕಡೆ ಉಲ್ಲೇಖವಿದೆ). 1801ರಲ್ಲಿ ಪಕ್ಕದ ದ್ವೀಪರಾಷ್ಟ್ರವಾದ ಐರ್‌ಲ್ಯಾಂಡ್‌ ಕೂಡ ಸೇರಿತು. ಆವಾಗ ಆ ಒಟ್ಟು ಸಮೂಹವನ್ನು The United Kingdom of Great Britain and Ireland ಎನ್ನಲಾಯಿತು. 1922ರಲ್ಲಿ ಐರ್‌ಲ್ಯಾಂಡ್‌ ಇಬ್ಭಾಗವಾಗಿ ದಕ್ಷಿಣದ ಭಾಗ ಸ್ವತಂತ್ರ ರಾಷ್ಟ್ರವಾಯಿತು; ಉತ್ತರದ ಶಿರೋಭಾಗ ಮಾತ್ರ ಯುಕೆಯಾಂದಿಗೆ ತನ್ನನ್ನು ಗುರುತಿಸಿಕೊಂಡಿತು. ಹಾಗಾಗಿ ಈಗ UK ಎಂದರೆ The United Kingdom of Great Britain and Northern Ireland.

ಇಂಗ್ಲೇಂಡ್‌ನ ರಾಜಧಾನಿ ಲಂಡನ್‌. ಇಡೀ ಯುಕೆಯಲ್ಲಿ ಅದು ಅತಿ ದೊಡ್ಡ ನಗರ. ಅಧಿಕಾರಕೇಂದ್ರ, ವಾಣಿಜ್ಯಕೇಂದ್ರ ಎಲ್ಲವೂ ಅದೇ ಆಗಿರುವುದೂ ಯುಕೆ ಎಂದರೆ ಇಂಗ್ಲೇಂಡ್‌ ಎನ್ನುವ ಭಾವನೆ ಬರಲು ಒಂದು ಕಾರಣ. (ರಾಜಧಾನಿಗಳು ಒಂದು ಮೂಲೆಯಲ್ಲಿದ್ದರೆ ಅದೇ ಆಗೋದು. ಕರ್ನಾಟಕವೆಂದರೆ ಬೆಂಗಳೂರು ಮಾತ್ರ ಎನ್ನುವ ಕೆಲ ಸರಕಾರಿ ಧೋರಣೆಗಳು ಎಷ್ಟು ಸಲ ಉತ್ತರಕರ್ನಾಟಕದವರಿಗೆ ಹೊಟ್ಟೆಯಲ್ಲಿ ಮೆಣಸಿನಕಾಯಿ ರುಬ್ಬಿದ್ಹಂಗೆ ಮಾಡಿಲ್ಲ?). ಆ ಕಾರಣಕ್ಕೇ ಸ್ಕಾಟ್‌ಲೇಂಡ್‌ನವರಿಗೆ, ಐರ್‌ಲ್ಯಾಂಡ್‌ನವರಿಗೆಲ್ಲ ಇಂಗ್ಲೇಂಡ್‌ನವರೆಂದರೆ ಅಷ್ಟಕ್ಕಷ್ಟೆ. ಫ‚ುಟ್‌ಬಾಲ್‌ ಮೊದಲಾದ ಕ್ರೀಡಾಸ್ಪರ್ಧೆಗಳಲ್ಲಂತೂ ಪರಸ್ಪರ ಬದ್ಧವೈರಿಗಳು.

ಸ್ಕಾಟ್‌ಲೇಂಡಿನ ರಾಜಧಾನಿ ಎಡಿನ್‌ಬರ್ಗ್‌. ವೇಲ್ಸ್‌ನದು ಕಾರ್ಡಿಫ‚್‌ ಎಂಬ ಪಟ್ಟಣ. ನಾರ್ತ್‌ ಐರ್‌ಲ್ಯಾಂಡ್‌ನದು ಬೆಲ್‌ಫ‚ಾಸ್ಟ್‌. ಇವೆಲ್ಲ ದೇಶಗಳಲ್ಲೂ ಸ್ಥಳೀಯ ಸರಕಾರಗಳು ಬೇರೆಬೇರೆ ರೂಪಗಳಲ್ಲಿ, ಅಧಿಕಾರಪ್ರಮಾಣಗಳಲ್ಲಿ ಇವೆ. ಆದರೆ ಒಟ್ಟು ಯುನೈಟೆಡ್‌ ಕಿಂಗ್‌ಡಮ್‌ಗೇ ಒಂದು ಪಾರ್ಲಿಮೆಂಟ್‌ ಇದೆ. ಸದ್ಯಕ್ಕೆ ಟೋನಿ ಬ್ಲೇರ್‌ ಈ ಎಲ್ಲ ದೇಶಸಮೂಹದ ಪ್ರಧಾನಿ. ಮತ್ತೆ ರಾಣಿ ಎಲಿಜಬೆತ್‌ ಆಳ್ವಿಕೆ ಯಾವ ಪ್ರದೇಶದ್ದು? ಇಡೀ ಯುನೈಟೆಡ್‌ ಕಿಂಗ್‌ಡಮ್‌ ಮಾತ್ರವಲ್ಲದೆ ಇನ್ನೂ ನೂರಾರು ಸಣ್ಣಪುಟ್ಟ ದ್ವೀಪಗಳ ಒಟ್ಟು ಸಮೂಹಕ್ಕೆ ಆಕೆ ರಾಣಿ! ಅಲ್ಲಿನ ಒಟ್ಟಾರೆ ಆಡಳಿತವೃಕ್ಷವನ್ನು ಸರಿಯಾಗಿ ಅರ್ಥೈಸಬೇಕಿದ್ದರೆ ನೀವು ಈ ಚಿತ್ರವನ್ನು ನೋಡಬಹುದು.

ನಾಲ್ಕೂ ದೇಶಗಳಲ್ಲೂ ಒಂದೇ ಕರೆನ್ಸಿ (ಬ್ರಿಟಿಷ್‌ ಪೌಂಡ್‌ ಸ್ಟರ್ಲಿಂಗ್‌; ಅದರ ಅಂತಾರಾಷ್ಟ್ರೀಯ ಸಂಕೇತ GBP) ಆದರೆ ಪ್ರತಿಯಾಂದೂ ದೇಶದ ರಾಷ್ಟ್ರೀಯ ಬ್ಯಾಂಕ್‌ ಆಯಾ ದೇಶಕ್ಕಾಗುವಷ್ಟು ಕರೆನ್ಸಿಯನ್ನು ಮುದ್ರಿಸುತ್ತದೆ. ಇನ್‌ ಥಿಯರಿ, ಸ್ಕಾಟ್‌ಲೇಂಡಿನ ಹತ್ತು ಪೌಂಡ್‌ನ ನೋಟು ಇಂಗ್ಲೇಂಡ್‌ನಲ್ಲೂ ಹತ್ತು ಪೌಂಡ್‌ ಮುಖಬೆಲೆ ಹೊಂದಿರುತ್ತದೆ, ಆದರೆ ಪ್ರಾಕ್ಟಿಕಲಿ ಪೊಳ್ಳುಪ್ರತಿಷ್ಠೆಯ ಕಾರಣದಿಂದ ಪರಸ್ಪರ ಕರೆನ್ಸಿಗಳನ್ನು ಸ್ವೀಕರಿಸದಿರುವಷ್ಟು ’ಬಿಕ್ಕಳಿಕೆ’ಗಳೂ ಇವೆಯೆನ್ನುವುದು ಎಲ್ಲರಿಗೂ ಗೊತ್ತು! ಯುರೋಪ್‌ನ ಇತರ ದೇಶಗಳೆಲ್ಲ ’ಯೂರೊ’ ಕರೆನ್ಸಿಯನ್ನು ಅಳವಡಿಸಿದಾಗ ಈ ಯುಕೆ ಮಾತ್ರ ಅದಕ್ಕೆ ಓಕೆ ಎನ್ನದೆ ತನ್ನ ಪೌಂಡನ್ನೇ ಮುಂದುವರೆಸಿದೆ. ಅದಕ್ಕೂ ’ಪ್ರತಿಷ್ಠೆ’ಯ ಪ್ರಶ್ನೆಯೇ ಕಾರಣವಂತೆ.

ಇಂಗ್ಲಿಷ್‌ ಭಾಷೆ, ಉಚ್ಚಾರದ ವಿಷಯದಲ್ಲೂ ಅಷ್ಟೇ. ಪರಸ್ಪರ ಗೇಲಿ, ಅಪಹಾಸ್ಯ, ಅಗೌರವ ಇತ್ಯಾದಿ ವ್ಯಾಪಕವಾಗಿಯೇ ಇವೆ. ವೇಲ್ಸ್‌, ಸ್ಕಾಟ್‌ಲೇಂಡ್‌, ನಾರ್ತ್‌ ಐರ್‌ಲ್ಯಾಂಡ್‌ನವರನ್ನು ಇಂಗ್ಲಿಷರು ಎಂದು ಕರೆದರೆ ಮನಸ್ಸಲ್ಲೇ ಕುದಿಯುತ್ತಾರೆ! ಅವರನ್ನು ವೆಲ್ಷ್‌, ಸ್ಕಾಟ್ಸ್‌ ಮತ್ತು ಐರಿಷ್‌ ಎಂದು ಗುರುತಿಸುವುದನ್ನೇ ಅಪೇಕ್ಷಿಸುತ್ತಾರೆ. ನಾರ್ತ್‌ ಐರ್‌ಲ್ಯಾಂಡಿನವರನ್ನಂತೂ ಬ್ರಿಟಿಷರು ಎಂದರೂ ಅಸಮಾಧಾನಿಸಿಕೊಳ್ಳುತ್ತಾರೆ (ಯಾಕೆಂದರೆ ಅದು ಗ್ರೇಟ್‌ ಬ್ರಿಟನ್‌ಗೆ ಸೇರಿದ್ದಲ್ಲವಲ್ಲ!) ಮಾತ್ರವಲ್ಲ, ಬ್ರಿಟನ್‌ಅನ್ನು ’ದ ಮೈನ್‌ಲ್ಯಾಂಡ್‌’ ಅಂತ ಕರೆಯೋದನ್ನೂ ಐರಿಷರು ಜೀರ್ಣಿಸಿಕೊಳ್ಳಲಾರರು!

ಅಂತೂ ಯುಕೆಗೆ ಪ್ರವಾಸಿಗರಾಗಿ ಹೋಗುವವರು ಎವೆರಿಥಿಂಗ್‌ ಓಕೆ ಎಂದು ಟೇಕನ್‌ ಫ‚ಾರ್‌ ಗ್ರಾಂಟೆಡ್‌... ಮಾಡದೆ ಸ್ಥಳೀಯರ ಭಾವನೆ-ಅಭಿಮಾನಗಳನ್ನು ಗೌರವಿಸಿ ಸಂಭಾಷಿಸುವುದು ಕ್ಷೇಮಕರ ಎನ್ನಬಹುದು. ಇಂಗ್ಲೇಂಡ್‌ ಅಂದರೆ ಬ್ರಿಟನ್‌ ಅಲ್ಲ, ಬ್ರಿಟನ್‌ ಎಂದರೆ ಯುಕೆ ಅಲ್ಲ ಎಂಬುದನ್ನಂತೂ ಸ್ಪಷ್ಟವಾಗಿ ಮನವರಿಕೆಮಾಡಿಕೊಂಡಿರಲೇಬೇಕು!

* * * * *

ಇಂಗ್ಲೇಂಡ್‌, ಬ್ರಿಟನ್‌, ಯುಕೆ ಕುರಿತಂತೆ ನನ್ನಲ್ಲಿದ್ದ ಅಸಮರ್ಮಕ ಮಾಹಿತಿಯನ್ನು ಸರಿಪಡಿಸುವುದಕ್ಕಾಗಿ ಅಂತರ್ಜಾಲ ಮಥಿಸಿ ಇದಿಷ್ಟು ಬೆಣ್ಣೆಯನ್ನು ನಾನು ತೆಗೆದಿರುವುದು. ಇಂಗ್ಲೇಂಡ್‌ನಲ್ಲಿರುವ ನನ್ನಣ್ಣ, ವೇಲ್ಸ್‌ನಲ್ಲಿರುವ ಇ-ಮಿತ್ರ ಡಾ।ಭರತ್‌ ಶಾಸ್ತ್ರಿ, ಸ್ಕಾಟ್‌ಲೇಂಡಿನಲ್ಲಿರುವ ಕಿರಣ್‌, ಐರ್‌ಲ್ಯಾಂಡ್‌ನಲ್ಲಿರುವ ಪ್ರಕಾಶ್‌ದೇವೇಂದ್ರ (ಇವರೆಲ್ಲರೂ ವಿಚಿತ್ರಾನ್ನ ಓದುಗರು) ಇನ್ನೂ ಹೆಚ್ಚಿನ ನಿಖರ ಮಾಹಿತಿ, ಸ್ವಾರಸ್ಯಗಳನ್ನು ಬರೆದು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆಂದು ನಿರೀಕ್ಷಿಸಲಾಗಿದೆ:-)

ಈವಾರ ಒಂದು ಪ್ರಶ್ನೆಯನ್ನೂ ಸೇರಿಸೋಣ. ಯುಕೆ ಎಂದರೆ ಇಂಗ್ಲೇಂಡ್‌ ಎಂದು ಜಾಗತಿಕವಾಗಿ ಜನಸಾಮಾನ್ಯರೆಲ್ಲ ಅಂದುಕೊಳ್ಳುವುದಕ್ಕೆ ಇನ್ನೂ ಒಂದೆರಡು ಕಾರಣಗಳನ್ನು ನೀವೂ ಸೂಚಿಸುತ್ತೀರಾ? ಸುಳಿವು - 1) ಅಂತಾರಾಷ್ಟ್ರೀಯ ಸಮಯಪಾಲನೆ 2) ಸುದ್ದಿ ಪ್ರಸಾರ 3) ವಿಮಾನಯಾನ... ಇತ್ಯಾದಿ.

ನಿಮ್ಮ ಉತ್ತರಗಳನ್ನು, ಅಭಿಪ್ರಾಯಗಳನ್ನು ಬರೆದು ಕಳಿಸಲು ವಿಳಾಸ - [email protected]


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X