• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಕ್ರತುಂಡೋಕ್ತಿಗಳ ವಿನೋದ ಹಾವಳಿ !

By Staff
|
Srivathsa Joshi *ಶ್ರೀವತ್ಸ ಜೋಶಿ

Vichitranna75‘ವಕ್ರತುಂಡೋಕ್ತಿ’ - ಇದು ವಿಜಯಕರ್ನಾಟಕ ದಿನಪತ್ರಿಕೆಯ ಸಂಪಾದಕೀಯ ಪುಟದಲ್ಲಿ ಬಲಕೆಳಮೂಲೆಯಲ್ಲಿ ಕಚಗುಳಿಯಿಡುತ್ತ ನಗುವ ಒಂದು ಪುಟ್ಟ ಅಂಕಣದ ಹೆಸರು. ಪ್ರಜಾವಾಣಿಯಲ್ಲಿ ಟಿ.ಎಸ್‌ ರಾಮಚಂದ್ರರಾವ್‌ ಸಂಪಾದಕರಾಗಿದ್ದಾಗಿನ ‘ಛೂ ಬಾಣ’ ಕಾಲಂಅನ್ನು ಹೆಚ್ಚುಕಡಿಮೆ ಹೋಲುವ ವಕ್ರತುಂಡೋಕ್ತಿ, ವಿ.ಕ ಪ್ರಧಾನಸಂಪಾದಕರ ‘ವಿಕಟ’ನೆ ಎಂಬುದು ವಿಶೇಷ! ಆ ಅಂಕಣದ ಹೆಸರಿಂದ ಪ್ರೇರಿತವಾಗಿ ಕೆಲವು ವಕ್ರತುಂಡೋಕ್ತಿಗಳನ್ನು ಪೋಣಿಸಿ ಒಂದು ವಿಚಿತ್ರಾನ್ನ ಸ್ಪೆಷಲ್‌ ತಯಾರಿಸಬೇಕೆಂಬ ಇಚ್ಛೆಯ ಸಾಕಾರರೂಪವೇ ಇವತ್ತಿನ ಸಂಚಿಕೆ.

ಇಲ್ಲಿನ ತುಂಡೋಕ್ತಿಗಳಲ್ಲಿ ಕೆಲವು ಕೃತಿಚೌರ್ಯವೋ ಶ್ರುತಿಚೌರ್ಯವೋ ಆಗಿರಲೂಬಹುದು. ಕೆಲವು ವಜ್ರದಂತೆ ಕಠೋರವಾದದ್ದೂ, ಕಣ್ಣುಕೋರೈಸುವ ಹೊಳಪುಳ್ಳದ್ದೂ ಆಗಿರಬಹುದು. ಬೇಕಿದ್ದರೆ ವಜ್ರಾದಪಿ ಕಠೋರಾ ‘ನೀ’ ಮೃದೂ ‘ನೀ’ ಕುಸುಮಾದಪಿ... ಎಂದುಕೊಳ್ಳಿ. ಡುಪ್ಲಿಕೇಟ್‌ ಡೈಮಂಡ್ಸ್‌ ಅಂತೆನಿಸಲಿಕ್ಕೂ ಸಾಕು. ಆದರೆ ಕಾಲ್ಗೇಟ್‌ ಸ್ಮೈಲ್‌ ಎಂದು ಹೇಳಿ ಮಲ್ಟಿ ನ್ಯಾಷನಲ್‌ ಕಂಪೆನಿಯ ಹೆಸರನ್ನು ಎತ್ತುವ ಬದಲು ‘ವೀಕೋ ವಜ್ರದಂತಿ ಮುಸ್ಕುರಾಹಟ್‌’ ಎಂದು ಶುದ್ಧ ಭಾರತೀಯ ಇಸ್ಮೈಲನ್ನು ನಿಮ್ಮ ಮೊಗದ ಮೇಲೆ ತರಬಹುದೇನೊ ಎಂಬ ಅಭಿಲಾಷೆ. ‘ವಜ್ರದಂತಿ’ಯೇ ಏಕೆಂದರೆ ಇದು ವಿಚಿತ್ರಾನ್ನದ ವಜ್ರಮಹೋತ್ಸವ ಸಂಚಿಕೆ (ನಂಬರ್‌ 75)!

ಅಂದಹಾಗೆ 75ನ್ನು ಬರೆಯುವಾಗ ಅಂಕಿಗಳ ನಡುವೆ ಒಂದು ಸಣ್ಣ ಕಪ್ಪುಚುಕ್ಕಿ ಪ್ರಮಾಣವಶಾತ್‌ ಮೂಡಿದರೂ ಅದು ‘ಸಾಢೇ ಸಾತ್‌’ (ಏಳೂವರೆ) ಆಗುವ ಭಾರೀ ಅಪಾಯವಿರುವುದರಿಂದ ಕಪ್ಪುಮಸಿ ಬಳಿಯದಂತೆ ಅತಿ ಜಾಗರೂಕತೆಯಿಂದ ಮುಂದುವರಿಯೋಣ :

* * *

 • ನಾಡಗೀತೆಯ ವಿಷಯದಲ್ಲಿ ಕರ್ನಾಟಕ ಸರಕಾರವು ಕೂಡಿ ಕಳೆದು ತೇಪೆ ಹಚ್ಚಿ ತೆಗೆದು ಮಾಡಿದ ಮತ್ತು ಸರಕಾರದ ಆ ತುಘಲಕ್‌-ದರ್ಬಾರ್‌ನಿಂದ ಜನಸಾಮಾನ್ಯರಲ್ಲಿ ಉಂಟಾದ ಗೊಂದಲ ಗಲಭೆಗಳ ಒಟ್ಟು ಅಧ್ವಾನವನ್ನು ಬಣ್ಣಿಸಲು ಹೊಸ ಪದ - ‘ಮಧ್ವಾನ’ !
 • ಭಾರತ ‘ಪ್ರಕಾಶಮಾನವಾಗಿದೆ’ - ಭಾಜಪ ನೇತೃತ್ವದ ಭಾರತ ಸರಕಾರದ ಹೊಸ ಜಾಹೀರಾತು. ಇಷ್ಟು ಜಗಜಗಿಸುವ ಪ್ರಕಾಶಕ್ಕೆ ಕಾರಣವೇನಿರಬಹುದು? ಭಾರತದಲ್ಲೂ ಹೆಚ್ಚು ಹೆಚ್ಚು ಮಂದಿ ಇಂಟರ್ನೆಟ್‌ Surf ಮಾಡುತ್ತಿರುವುದು? ಸರ್ಫ್‌-ಲಲಿತಾಪವಾರ್‌ಜೀ ಹೇಳಬಹುದು - ಗರೀಬಿ? ಢೂಂಢ್‌ತೆ ರೆಹೆ ಜಾವೋಗೆ...!’
  • ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಕ.ರಾ.ರ.ಸಾ.ಸಂ ‘ಐರಾವತ’ ಹವಾನಿಯಂತ್ರಿತ ಬಸ್ಸಿನಲ್ಲಿ ‘ಅಂದದೂರು ಬೆಂಗಳೂರು... ಆನಂದದ ತವರೂರು ಹಾಯ್‌...’ ಅಥವಾ ‘ನಮ್ಮೂರು ಮೈಸೂರು ನಿಮ್ಮೂರು ಯಾವೂರು... ಎಲ್ಲಿಂದ ಬಂದೆ ಹೇಳು ಜಾಣೆ...’ ಇವೇ ಮುಂತಾದ ಕರ್ಣಾನಂದಕರ ಕನ್ನಡ ಹಾಡುಗಳನ್ನು ಹಾಕುವ ಬದಲು ಕರ್ಕಶ ಹಿಂದಿ ಗೀತೆಗಳನ್ನು ಹಾಕುತ್ತಾರೆ, ವಿಡಿಯಾದಲ್ಲಿ ‘ಕುಛ್‌ ಕುಛ್‌ ಹೋತಾ ಹೈ’ ಹಿಂದಿ ಸಿನೆಮಾ ಹಾಕುತ್ತಾರೆ, ಚಾಲಕ-ನಿರ್ವಾಹಕರ ಬಳಿ ಕೇಳಿದರೂ ಹಾರಿಕೆಯ ಉತ್ತರ ಕೊಡುತ್ತಾರೆ ಎಂದು ಇತ್ತೀಚೆಗಷ್ಟೆ ೕ ಐರಾವತ ಬಸ್ಸಲ್ಲಿ ಪ್ರಯಾಣಿಸಿ ನೊಂದು ಬೆಂದ ಅಚ್ಚ-ಕನ್ನಡಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ; ಉಚ್ಚ ಅಧಿಕಾರಿಗಳಿಗೆ ಈಮೈಲೂ ಕಳಿಸಿದ್ದಾರೆ. ಅವರು ಈಬಗ್ಗೆ ಖಂಡಿತ ಕ್ರಮ ಕೈಗೊಳ್ಳುತ್ತಾರೆ ಎಂದು ಹಾರೈಸೋಣ.
   An "Ai"(eye) opener on the "raa" (raw) treatment meted out on Kannada inside Karnataka :(
  • ಕನ್ನಡ ಸಾಹಿತ್ಯದ ಬಹಳಷ್ಟು ಕೃತಿಗಳನ್ನು ಓದಿದವರನ್ನು ಸರ್ವಜ್ಞ’ ಎನ್ನಬಹುದಾದರೆ ಎಸ್‌.ಎಲ್‌.ಭೈರಪ್ಪನವರ ಒಂದೇ ಒಂದು ಕಾದಂಬರಿಯನ್ನು ಮಾತ್ರ ಓದಿದವರನ್ನು (ಅಂಥ ಒಬ್ಬ ವ್ಯಕ್ತಿ ನನಗೆ ಗೊತ್ತು !) ಏನೆಂದು ಕರೆಯಬಹುದು? ಉತ್ತರ : ‘ಪರ್ವ’ಜ್ಞ!
   • ಅದು ಬೇಕು ಇದು ಬೇಕು ಎಂದು ಪತಿ ಪರಶಿವನನ್ನು ಕಾಡುತ್ತಲೇ ಬೇಡುತ್ತಲೇ ಇದ್ದರೂ ಪರಮೇಶ್ವರನು ಪಾರ್ವತಿಯ ಬಯಕೆಗಳಾವುದನ್ನೂ ಈಡೇರಿಸದೇ ಸುಮ್ಮನಿರುತ್ತಾನೆ. ಪಾರ್ವತಿಯ ಕೊರೆತ ಹೆಚ್ಚಾದಂತೆಲ್ಲ ಶಿವ ಕಿವುಡನಂತೇ ನಟಿಸುತ್ತಾನೆ. ಆವಾಗ ಕೈಲಾಸದಲ್ಲಿ ಮೊಳಗುವ ಹಾಡು ಕೊರೆದರೂ ಕೇಳದೆ... ಶಂಕರನೆ ಏಕೆ ನನ್ನಲ್ಲಿ... ಈ ಮೌನ....’ (ಇಲ್ಲಿ ಕೈಲಾಸ ಕೇವಲ ಒಂದು ಉದಾಹರಣೆ; ಇದು ಮನೆ ಮನೆಯ ಕತೆ ಎಂದು ಬೇರೆ ಹೇಳಬೇಕೆ?)
   • ಫ್ರೆಂಚ್‌ ಭಾಷೆಯಲ್ಲಿ La ಪ್ರತ್ಯಯವಿರುವ ಪದಗಳು ಬಹಳ. ಇಂಗ್ಲಿಷ್‌ನಲ್ಲಿ The ಕ್ಕಿರುವ ಅರ್ಥವೇ ಫ್ರೆಂಚ್‌ನಲ್ಲಿ La ಪ್ರಿಫಿಕ್ಸ್‌ಗೆ ಇರುವುದು. La coste, a La carte ಇತ್ಯಾದಿ. ಒಂದುವೇಳೆ Loo (ಇಂಗ್ಲಿಷ್‌ನ ಟಾಯ್ಲೆಟ್‌) ಗೆ La ಪ್ರಿಫಿಕ್ಸ್‌ ಸೇರಿಸಿದರೆ? ಬಿಹಾರವೇನಾದರೂ ನಿಮಗೆ ನೆನಪಾಯ್ತೋ ಹೇಗೆ?
   • ಇತ್ತೀಚೆಗೆ ಅಮೆರಿಕದಲ್ಲಿ Gay marriage ಗೆ ವಿವಿಧ ರಾಜ್ಯಸರಕಾರಗಳ ಒಪ್ಪಿಗೆ ಭಾರೀ ಸುದ್ದಿಯಾಗಿದೆ. ಆ ಮದುವೆಗಳಲ್ಲಿ ಪುರೋಹಿತರು (ಐ ಮೀನ್‌ ಪ್ರೀಸ್ಟ್ಸು ಅಥವಾ ರಿಜಿಸ್ಟ್ರಾರು) ಜೋಡಿಗಳ ಬಾಯಿಂದ ನಾತಿ ಚರಾಮಿ... ಇತ್ಯಾದಿ ಪ್ರಮಾಣಗಳಿಗಿಂತ ಸಂಭವಾಮಿ you gay you gay... ಎಂದು ಹೇಳಿಸಬಹುದು!
   • ‘ವಿಶ್ವ ಮಾನವ ಸಂದೇಶವನ್ನು ಓದಿ ಅರ್ಥೈಸಬೇಕು...’ - ಇದು ಕುವೆಂಪು ಬಗೆಗಿನ ಲೇಖನದಲ್ಲಿ ಬರಬಹುದಾದ ಒಂದು ವಾಕ್ಯ. ಆದರೆ,
    ‘ವಿಶ್ವ ಮಾವನ ಸಂದೇಶವನ್ನು ಓದಿ ಅರ್ಥೈಸಬೇಕು...’’ - ಇದು ಎಂ.ಎಸ್‌ ನರಸಿಂಹ ಮೂರ್ತಿಯವರ ವಿಶ್ವ-ವಿಶಾಲೂ ಸರಣಿಯ ಹಾಸ್ಯಲೇಖನಗಳಲ್ಲಿ ಬರಬಹುದಾದ ವಾಕ್ಯ! (ವಿಶ್ವನ ಪಕ್ದಲ್ಲೇ ವಿಶಾಲೂ ಲಟ್ಟಣಿಗೆ ಹಿಡಿದು ನಿಂತಿದ್ದು, ತನ್ನ ತಂದೆ ಅಳಿಯಮಹಾರಾಜನಿಗೆ ಏನು ಸಂದೇಶ ಕಳಿಸಿರಬಹುದು ಎಂದು ಕಣ್ಣರಳಿಸುತ್ತಿರುವ ವ್ಯಂಗ್ಯಚಿತ್ರ ಊಹಿಸಿಕೊಳ್ಳಿ)
   • ‘ಸ್ಪೀಡಿಂಗ್‌ ಟಿಕೆಟ್‌’ ಪ್ರದಾನಕ್ಕಾಗಿ ಅಮೆರಿಕೆಯ ರಸ್ತೆಗಳ ಮೇಲೆ ಠಳಾಯಿಸುವ ಟ್ರಾಫಿಕ್‌ಪೋಲಿಸರು ತಪ್ಪಿತಸ್ಥ ಕಾರನ್ನು (ಅದರ ಚಾಲಕನನ್ನು) ಸಿಗ್ನಲಿಸಿ, ರಸ್ತೆಯ ಪಕ್ಕದಲ್ಲೇ right shoulder ಮೇಲೆ ನಿಲ್ಲಿಸುವಂತೆ ಹೇಳಿ ಅಲ್ಲಿ ತುಸುಹೊತ್ತಿನ ವಿಚಾರಣೆಯ ನಂತರ ಟಿಕೇಟ್‌ ಇಶ್ಯೂ ಮಾಡುವ ಪದ್ಧತಿ. ಹೈವೇಯ ಮೇಲೆ ಅತಿ ಸ್ಪೀಡಾಗಿ ಕಾರು ಚಲಾಯಿಸುವಾಗ (ಎಸ್ಪೆಷಲಿ ಒಂದಿಷ್ಟು ತೀರ್ಥ-ಸಮಾರಾಧನೆಯ ನಂತರ) ಥ್ರಿಲ್ಲೆನಿಸಿದರೂ ಮನದಲ್ಲಿ ಮೂಡುವ ಹಾಡು - ‘ಯಾರು ತಿಳಿಯರು ನಿನ್ನ ಬಲಭುಜದ ಪರಾಕ್ರಮ... ಹೈವೇಯೋಳ್‌ ಫ್ಲಾಷಿಸುವ ಆ ನಿನ್ನ ಲೈಟುಗಳ ಮರ್ಮ.... ಎಲ್ಲದಕು ಕಾರಣನು ನನ್ನೊಳಗೆ ಸೇರಿರುವ ಪರಮಾತ್ಮ....’
    • ಕಂದಾಯ ಇಲಾಖೆ ನೌಕರರು, ಸಿವಿಲ್‌ ಇಂಜನಿಯರ್‌ಗಳು, ಭೂಮಾಪನ ಸಿಬ್ಬಂದಿ - ಇವರೆಲ್ಲ ಸ್ವಲ್ಪ ಜಾಸ್ತಿಯೇ ಲಂಚ ತೆಗೆದುಕೊಳ್ಳುವುದು ಎಂದು ನಿಮಗನ್ನಿಸಿದ್ದಿದೆಯೇ? ಅದಕ್ಕೆ ಕಾರಣವಿದೆ. ‘Survey ಜನಾಃ ಸುಖಿನೊ ಭವಂತು’ ಎಂದಿರುವುದು ಮತ್ತೆ ಸುಮ್ಮನೆಯಾ? ಇದೇ ಧ್ಯೇಯವಾಕ್ಯವನ್ನು ಅಲ್‌-ಕಾಯಿದಾ ಮೊದಲಾದ ಭಯೋತ್ಪಾದಕ ಸಂಘಟನೆಗಳು ಸರ್ವೇ ಜನಾಃ ಸುಖಿ No ಭವಂತು...’ ಎಂದು ತಿರುಚಿದ್ದಾರಂತೆ :-(
    • ವಿಚಿತ್ರಾನ್ನದ ಒಂದು ಸಂಚಿಕೆಯನ್ನು ಪ್ರಾಯೋಗಿಕವಾಗಿ ತಮಿಳಿಗೆ ಭಾಷಾಂತರಿಸಿದರೆ (ದಟ್ಸ್‌ಕನ್ನಡ.ಕಾಮ್‌ನ ಸೋದರವಾಹಿನಿ ದಟ್ಸ್‌ತಮಿಳ್‌.ಕಾಮ್‌ನಲ್ಲಿ) ಮೊಟ್ಟಮೊದಲು ಅದನ್ನು ಯಾರು ಓದಬಹುದು? ಉತ್ತರ: ವೀರಪ್‌pun!
     • ಕೊನೆಯದಾಗಿ, ಸತ್ಯನಾರಾಯಣ ಪೂಜೆಯ ದಿನ ‘ವಿಚಿತ್ರಾನ್ನ’ವನ್ನು ಭುಂಜಿಸಬಹುದೇ? ಅವಶ್ಯವಾಗಿ! ಆದರೆ ಪೂಜೆಯಲ್ಲಿ ಮಂಗಳಾರತಿಯ ವೇಳೆ, ‘punನಗ ಶಯನ... ಪಾವನ ಚರಣ ನಂಬಿದೆ ನಿನ್ನ... ಕಾಪಾಡು ಶ್ರೀ ಸತ್ಯನಾರಾಯಣ...’ ಎಂದು ಹಾಡಿದರಾಯಿತು, ಅಷ್ಟೇ!
     • * * *

      Vichitranna75ನಿಮ್ಮ ಬಳಿ ಯಾವುದಾದರೂ ಇಂತಹ ಬೆಲೆಯಿಲ್ಲದ ಅಂದರೆ priceless ವಜ್ರ(ಕ್ರ) ತುಂಡು ಇದೆಯೇ? ಇದ್ದರೆ ಇತ್ತ ಕಡೆಗೆ ಅದನ್ನು ಕಳಿಸಬಲ್ಲಿರಾ? ಹಾಗೆಯೇ ಅನಿಸಿಕೆ, ಸಲಹೆ, ಸೂಚನೆ, ವಿಮರ್ಶೆ, ವ್ಯಾಖ್ಯಾನ - ಎಲ್ಲದಕ್ಕೂ ಸುಸ್ವಾಗತವಿದೆ. ಬರೆಯಿರಿ, srivathsajoshi@yahoo.com ವಿಳಾಸಕ್ಕೆ.

      ಮುಂದಿನ ಭಾನುವಾರ ಮಾರ್ಚ್‌ 21ರಂದು ಚಾಂದ್ರಮಾನ ಯುಗಾದಿ. ‘ತಾರಣ’ ಸಂವತ್ಸರದಾರಂಭ. ಪ್ರತಿವರ್ಷ ಮಾರ್ಚ್‌ 21ರಂದು ಶಾಲಿವಾಹನ ಶಕವರ್ಷದಾರಂಭ ಕೂಡ. ಈಸಲ ಒಂದೇದಿನ ಇವೆರಡೂ ಬಂದಿರುವುದು ಕೊ-ಇನ್ಸಿಡೆನ್ಸು!

      ಸಮಸ್ತ ಲೋಕಕ್ಕೇ, ಯುಗಾದಿಯ ಶುಭಾಶಯಗಳೊಂದಿಗೆ ಇವತ್ತಿನ ಸಂಚಿಕೆಯನ್ನು ಮುಗಿಸೋಣ.

      ಬರುತಲಿಹುದು ನವಯುಗಾದಿ ಸಂವತ್ಸರ ತಾರಣ
      ತರುಲತೆಗಳು ಚಿಗುರಿನಿಂತ ಚೈತ್ರವನದ ತೋರಣ
      ಇರಲಿ ಬೇವಿಗಿಂತ ಅಧಿಕ ಬೆಲ್ಲವಿರುವ ಹೂರಣ
      ಹರಸುವುದು ಒಳಿತನೆಂದು ಸುಖಶಾಂತಿಗೆ ಕಾರಣ


      ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X