ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಅರ್ಥೈಸಿದಂತೆ ‘ವಿಶ್ವ ಮಾನವ ಸಂದೇಶ’

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

Universal man ಒಬ್ಬ ಕವಿ, ಸಾಹಿತಿ ತನ್ನ ಮೇರುಕೃತಿಗಳ ಮೂಲಕ ಜನಮನದಲ್ಲಿ ಅಚ್ಚಳಿಯದ ಛಾಪನ್ನು ಬಿಟ್ಟುಹೋಗಬಹುದು, ಆದರೆ ಕುವೆಂಪು ಎಂದೊಡನೆ ನನಗೆ ಥಟ್ಟನೆ ಹೊಳೆಯುವುದು ಅವರ ಎಲ್ಲ ಮೇರುಕೃತಿಗಳಿಗಿಂತಲೂ ಮಿಗಿಲಾದ ‘ವಿಶ್ವ ಮಾನವ ಸಂದೇಶ’. ಕುವೆಂಪು ಅವರ ಜನ್ಮಶತಾಬ್ದಿಯ ಸಂದರ್ಭದಲ್ಲಿ ಅವರಿಗೆ ನಾವು ಸಲ್ಲಿಸಬಹುದಾದ ಅತಿಸೂಕ್ತ ಗೌರವವೆಂದರೆ ಅವರು ಸಾರಿದ ಸಂದೇಶವನ್ನು ಅಕ್ಷರಶಃ ಪಾಲಿಸುವ ಪ್ರಯತ್ನವನ್ನು ಮಾಡುವುದು; ಅವರ ಬರವಣಿಗೆಗಳನ್ನು ಮತ್ತೆ ಮತ್ತೆ ಓದಿ ಹೊಸ ಅರ್ಥವನ್ನು ಕಂಡುಕೊಂಡಂತೆಯೇ ಅವರ ಉದಾತ್ತ ಚಿಂತನೆಗಳನ್ನೂ ತತ್ವಸಿದ್ಧಾಂತಗಳನ್ನೂ ಅರಗಿಸಿಕೊಂಡು ಅವನ್ನೇ ದಾರಿದೀಪವಾಗಿಟ್ಟುಕೊಳ್ಳುವುದು.

‘ವಿಶ್ವಮಾನವ’ ಅರ್ಥಗ್ರಹಣದ ಮೊದಲು, ನಮ್ಮ ‘ಅಭಿಮಾನ’ದ ಪರಿಧಿ ನಾವು ದೊಡ್ದವರಾದಂತೆಲ್ಲ ಹೇಗೆ ವಿಸ್ತಾರವಾಗುತ್ತ ಹೋಗುತ್ತದೆ ಎಂಬುದನ್ನು ಸೋದಾಹರಣವಾಗಿ ಅವಲೋಕಿಸೋಣ. ವಿಷಯಾಂತರ ಎಂದು ಅನಿಸಿದರೂ, ಅಭಿಮಾನದ ಹರವಿನ ಬೇಲಿಗಳು ಹೇಗಿರುತ್ತವೆ, ಅದರ ಸಾರ್ವತ್ರಿಕತೆ ಹೇಗೆ ವಿಶ್ವಮಾನವ ತತ್ವದ ಮೂಲಹೇತುವಾಗುತ್ತದೆ ಎಂದು ಪ್ರತಿಪಾದಿಸುವುದರಲ್ಲಿ ನನ್ನದೊಂದು ಪ್ರಯತ್ನ ಇದು.

ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆಯುವ ಒಬ್ಬ ಸಾಮಾನ್ಯ ಬಾಲಕ, ಮನೆಗೆ ಹತ್ತಿರದಲ್ಲೇ ಇರುವ ಶಾಲೆಯಲ್ಲಿ ಒಂದರಿಂದ ನಾಲ್ಕನೆಯ ತರಗತಿಗಳವರೆಗೆ ಪ್ರಾಥಮಿಕ ಶಿಕ್ಷಣ ಪಡೆಯುತ್ತಾನೆ. ಅದಾದ ನಂತರ ಐದನೇ ತರಗತಿಗೆ ಊರ ಕೇಂದ್ರದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಬೇಕು. ಇತರ ಮೂರ್ನಾಲ್ಕು ಕಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳೂ ಈ ಹಿರಿಯ ಶಾಲೆಗೆ ಸೇರಿರುತ್ತಾರೆ. ತರಗತಿಯಲ್ಲಿ, ಆಟದ ಮೈದಾನದಲ್ಲಿ - ಎಲ್ಲರೂ ಒಂದೇ, ಆದರೂ ಬಹಳ ಸೂಕ್ಷ್ಮವಾಗಿ ಗಮನಿಸಿದರೆ ಆಯಾ ಪ್ರಾಥಮಿಕ ಶಾಲೆಯಿಂದ ಬಂದ ವಿದ್ಯಾರ್ಥಿಗಳ ಒಂದು ‘ಪ್ರತ್ಯೇಕ ಅಸ್ತಿತ್ವ’ ಇದ್ದೇ ಇರುತ್ತದೆ. ಬಾಲಕ, ತನ್ನ ಶಾಲೆಯಿಂದ ಸೇರಿದ ಓರಗೆಯವರನ್ನು ‘ತನ್ನವರು’ ಎಂದು ಗುರುತಿಸುತ್ತಾನೆ. ಅದೇ ಏಳನೇ ತರಗತಿ ಮುಗಿಸಿ ತಾಲೂಕು ಕೇಂದ್ರದಲ್ಲಿನ ಪ್ರೌಢಶಾಲೆಗೆ ಸೇರಿದಾಗ ಅಲ್ಲಿ ಬೇರೆಬೇರೆ ಹಿರಿಯ ಪ್ರಾಥಮಿಕ ಶಾಲೆಗಳಿಂದ ವಿದ್ಯಾರ್ಥಿಗಳು ಬಂದಿರುತ್ತಾರೆ. ಆಗ ಅಭಿಮಾನ, ತನ್ನವರು ಎಂಬ ಆತ್ಮೀಯತೆ, ಪ್ರತ್ಯೇಕತೆಯ ಅಸ್ತಿತ್ವ ಹಿರಿಯ ಪ್ರಾಥಮಿಕ ಶಾಲೆಯ ಪರಿಧಿಗೆ ಏರುತ್ತದೆ. ಪ್ರೌಢಶಾಲೆಯ ನಂತರ ಕಾಲೇಜು ಸೇರಿದಾಗ, ‘ನಾವೆಲ್ಲ ಇಂಥ ಪ್ರೌಢಶಾಲೆಯಿಂದ ಬಂದವರು...’ ಎಂಬ ಆತ್ಮೀಯತೆ, ಅಭಿಮಾನ ಬೆಳೆಯುತ್ತದೆ. ಕಾಲೇಜು ಮುಗಿಸಿ ಉದ್ಯೋಗ/ಮನೆವಾಳ್ತೆ/ವ್ಯವಹಾರ ಇತ್ಯಾದಿ ಒಬ್ಬೊಬ್ಬರೂ ಒಂದೊಂದು ದಿಕ್ಕಿನಲ್ಲಿ ಪಯಣ ಬೆಳೆಸಿದಾಗ, ‘ನಾವು ಈ ಕಾಲೇಜಲ್ಲಿ ಓದಿದವರು...’ ಎಂಬ ಅಭಿಮಾನ ಉಳಿದುಕೊಂಡಿರುತ್ತದೆ.

ಅಂದರೆ, ನಾವು ಪ್ರಸ್ತುತ ಯಾವ ಪರಿಧಿಯಲ್ಲಿರುತ್ತೇವೊ ಅದಕ್ಕಿಂತ ಒಂದು ಮಟ್ಟ ಕೆಳಗಿನ ಪರಿಧಿಯೆಲ್ಲ ನಮಗೆ ‘ಅಸ್ಮದೀಯಂ’ ಎನಿಸಿಕೊಳ್ಳುತ್ತದೆ. ನನಗಂತೂ ಇದು ಅನೂಚಾನವಾಗಿ ಅನುಭವವೇದ್ಯವಾಗುತ್ತ ಬಂದಿದೆ. ನನ್ನೂರು ಕಾರ್ಕಳ ಬಿಟ್ಟು ದಾವಣಗೆರೆಯಲ್ಲಿ ಇಂಜನಿಯರಿಂಗ್‌ ಕಲಿಯುತ್ತಿದ್ದಾಗ, ಅಲ್ಲಿ ಹಾಸ್ಟೆಲಲ್ಲಿ ದಕ್ಷಿಣಕನ್ನಡ ಜಿಲ್ಲೆಯಿಂದ ಯಾರಾದರೂ ಬಂದವರಿದ್ದರೆ ಅವರೆಲ್ಲ ‘ನಮ್ಮವರು’. ಇಂಜನಿಯರಿಂಗ್‌ ಮುಗಿಸಿ ಕರ್ನಾಟಕದಿಂದ ಹೊರಗೆ ದೆಹಲಿ, ಹೈದರಾಬಾದ್‌ಗಳಲ್ಲಿ ಉದ್ಯೋಗದಲ್ಲಿದ್ದಾಗ ಯಾರೇ ಕನ್ನಡಿಗರು ಸಿಕ್ಕಿದರೂ ಅವರು ‘ನಮ್ಮವರು’. ಭಾರತದಿಂದ ದೂರದೇಶ ಅಮೆರಿಕೆಗೆ ಬಂದು ನೆಲೆಸಿದಾಗ, ಇಲ್ಲಿ ಕಾಣುವ ಭಾರತೀಯರೆಲ್ಲ ‘ನಮ್ಮವರು’. ನನ್ನ ಅಭಿಮಾನದ ಭೌಗೋಳಿಕ ಪರಿಧಿಯನ್ನು ಕಾಲಕ್ರಮೇಣ ನಾನೇ ವಿಸ್ತರಿಸಬೇಕಾಗಿ ಬಂದ ಸನ್ನಿವೇಶ ಅದು.

ಭೌಗೋಳಿಕ ಪರಿಧಿಗಳಂತೆಯೇ, ಕುಲ-ಗೋತ್ರ-ಜಾತಿ-ಮತ-ಪಂಗಡಗಳ ವಿಷಯವೂ ಇದೇ ವಿಕಸನ ತತ್ವವನ್ನು ಆಧರಿಸಿದೆ. ಎಷ್ಟು ವಿಸ್ತಾರದ, ವೈಶಾಲ್ಯದ ವರ್ತುಲವನ್ನು ನಾವು ನಮ್ಮದೆಂದು ಗುರುತಿಸಿಕೊಳ್ಳುತ್ತೇವೋ ಅದು ನಮ್ಮ ಜಾತಿ, ಮತವೆನಿಸುತ್ತದೆ. ಆ ವರ್ತುಲದಲ್ಲಿ ನಮ್ಮ ನಂಬಿಕೆಗಳು, ಮೌಲ್ಯಗಳು ನಿರ್ಧರಿತವಾಗುತ್ತವೆ. ಆದರೆ ಅಷ್ಟಕ್ಕೇ ಸೀಮಿತಗೊಳಿಸದೆ ‘ನನ್ನದು, ನನ್ನವರು’ ಎಂಬ ಪರಿಧಿಯನ್ನು ಇಡಿಯ ವಿಶ್ವಕ್ಕೇ ವಿಸ್ತರಿಸಿದಾಗ ಸಹಜವಾಗಿಯೇ ‘ನಾನು ಗುರುತಿಸುವ ಒಂದೇ ಜಾತಿಯೆಂದರೆ ಮನುಷ್ಯಜಾತಿ’ ಎಂಬ ಭಾವನೆ ಆವಿರ್ಭವಿಸುತ್ತದೆ. ಆದರೆ ನನಗೊಬ್ಬನಿಗೇ ಈ ಭಾವ ಉದ್ಭವಿಸಿ ಪ್ರಯೋಜನವೇನು ಬಂತು? ವಿಶ್ವದ ಪ್ರತಿಯಾಬ್ಬನೂ ಇದೇ ಭಾವವನ್ನು ಹೊಂದಿದರೆ, ಅದನ್ನೇ ಅಲ್ಲವೆ ನಮ್ಮ ಪ್ರಾಜ್ಞರು ‘ವಸುಧೈವ ಕುಟುಂಬಕಂ..’ ಎಂದದ್ದು?

ನಿಜವಾಗಿ ನಾವೆಲ್ಲ ಅದೃಷ್ಟಶಾಲಿಗಳು. ಇವತ್ತಿನ ಆಧುನಿಕ ಯುಗದಲ್ಲಿ, ಮಾನವ ಭೂಮಂಡಲವನ್ನು ದಾಟಿ ‘ತಿಂಗಳಿನಿಂದ ಮಂಗಳನತ್ತ’ ಪಯಣ ಬೆಳೆಸುವ ಹುನ್ನಾರದ ದಿನಗಳಲ್ಲಿ, ಸಂಪರ್ಕ ಸಾಧನೆಯಲ್ಲಿ ಹೊಸಕ್ರಾಂತಿ ನಿರ್ಮಿಸಿದ ಅಂತರ್ಜಾಲದ ಕಬಂಧಬಾಹುಗಳಲ್ಲಿ ಬಾಳ್ವೆ ನಡೆಸುತ್ತಿರುವ ನಮಗೆ ‘ಮನಸ್ಸು ಮಾಡಿದರೆ’ ವಿಶ್ವಮಾನವನಾಗುವುದಕ್ಕೆ ಯಾವ ನಿರ್ಬಂಧಗಳೂ ಇಲ್ಲ. ಮೇಲೆ ವಿವರಿಸಿದ ವಿಕಸನತತ್ವದ ಆಧಾರದಲ್ಲಿ, ಮಾನವನ ಅನ್ವೇಷಣೆ-ಆಕಾಂಕ್ಷೆಗಳು ಭೂಮಿಯನ್ನು ಬಿಟ್ಟು ಖಗೋಳದತ್ತ ವಿಸ್ತರಿಸಿವೆಯೆಂದರೆ, ಭೂಮಿಯಲ್ಲಿರುವವರೆಲ್ಲ ನನ್ನವರು ಎಂದಂತೆಯೇ. ಆದರೆ ಇದು ಬಾಹ್ಯ ಸೌಕರ್ಯ-ಸೌಲಭ್ಯಗಳ ಮಾತಾಯಿತು. ಅಂತರಂಗದಲ್ಲಿ ಇನ್ನೂ ಸಂಕುಚಿತರಾಗುತ್ತ ಹೋಗಿ ಸೇತುವೆಗಳ ಬದಲು ಗೋಡೆಗಳನ್ನೇ ನಿರ್ಮಿಸುತ್ತ ಹೋದರೆ ಅದೆಲ್ಲಿಂದ ಮೊಳೆಯಬೇಕು ಮನುಜಮತ-ವಿಶ್ವಪಥ-ವಿಶ್ವಮಾನವತೆಯ ಬೀಜಾಂಕುರ? ಅದಕ್ಕೇ ಕುವೆಂಪು ಅವರ ವಿಚಾರಧಾರೆಯತ್ತ ಹೊರಳಿದರೆ ಸಿಗುತ್ತದೆ ‘ವಿಶ್ವಮಾನವ’ತನಕ್ಕೆ ಅಗತ್ಯವಾದ ಆಶಾಕಿರಣ.

ಪ್ರಾಂತೀಯ ಮಟ್ಟದಲ್ಲಿನ ಅಭಿಮಾನ ಕುವೆಂಪು ಅವರಿಗೆ ಇರಲಿಲ್ಲವೇ? ಖಂಡಿತ ಇತ್ತು. ಆದರೆ ಆ ಪ್ರಾಂತೀಯತೆಯಲ್ಲೇ ಸಾರ್ವತ್ರಿಕತೆ ಅವರ ಅಭಿಮಾನದ ಅಗ್ಗಳಿಕೆ. ಕರ್ನಾಟಕದ ಹಿರಿಮೆಯ ‘ಜೈ ಭಾರತ ಜನನಿಯ ತನುಜಾತೆ... ಜಯಹೇ ಕರ್ನಾಟಕ ಮಾತೆ...’ ಕವಿತೆಯಲ್ಲೂ ಅವರು ಕರ್ನಾಟಕವನ್ನು ವರ್ಣಿಸಿದ್ದು ‘ಸರ್ವಜನಾಂಗದ ಶಾಂತಿಯ ತೋಟ..’ ಎಂದು! ಕನ್ನಡ ಭಾಷೆಯ ಬಗ್ಗೆ ಕಳಕಳಿಯಿಂದ, ‘ಕನ್ನಡಕ್ಕಾಗಿ ಕೊರಳೆತ್ತು, ನಿನ್ನ ದನಿ ಪಾಂಚಜನ್ಯವಾಗುತ್ತದೆ; ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಅದು ಗೋವರ್ಧನ ಗಿರಿಧಾರಿಯಾಗುತ್ತದೆ!’ ಎಂದರು ಕುವೆಂಪು. ಆದರೂ ‘ಸರ್ವೋದಯವಾಗಲಿ ಸರ್ವರಲಿ’ ಎಂದೇ ಮುಕ್ತಾಯವಾಗುತ್ತದೆ ಅವರ ಕನ್ನಡ ಡಿಂಡಿಮ ಪದ್ಯ!

Kuvempuಕನ್ನಡ-ಕರ್ನಾಟಕದಿಂದ ವಿಸ್ತರಿಸಿದ ಅಭಿಮಾನದಲ್ಲಿ ‘ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೆ...’ ಎಂಬ ಮತ್ತೊಂದು ಕವಿತೆಯಲ್ಲಿ ಕುವೆಂಪು, ‘ಆದರೊಲಿಯೆನು ಅನ್ಯರ ಚಿನ್ನವೊಲಿದಿಹ ಧನ್ಯರ...’ ಎಂದರು. ಭಾರತಮಾತೆ ಕುಂದುಕೊರತೆಗಳಿಂದ ಕಳಂಕಿತಳಾಗಿದ್ದಾಳೆಂಬ ಮಾತ್ರಕ್ಕೆ ಅಧೀರನಾಗದೆ, ‘ನಿನ್ನ ಅಂಕದ ಮಂಗಳಾಂಗಣದಲ್ಲಿ ನಲಿಯುತ ಬೆಳೆವೆನು...’ ಎಂದು ಹೆಮ್ಮೆಪಟ್ಟರು. ಸಪ್ತಸಮುದ್ರಗಳನ್ನು ದಾಟಿ ದೂರದೇಶದಲ್ಲಿ ಐಷಾರಾಮಿ ಜೀವನ ನಡೆಸುವ ಮಹತ್ವಾಕಾಂಕ್ಷಿಗಳಿಗೂ ಅವರ ಕಿವಿಮಾತು - ‘ದೇಶ ನನ್ನದು ನನ್ನದು ನಾಡು... ಎನ್ನದ ಮಾನವನೆದೆ ಸುಡುಗಾಡು... ದೂರದೇಶಕೆ ಹೋದ ಸಮಯದಿ ತನ್ನ ನಾಡನು ನೆನೆದುಬ್ಬದ... ಮಾನವನಿದ್ದರೆ ಲೋಕದಲಿ... ತಾವಿಲ್ಲವನಿಗೆ ನಾಕದಲಿ... ವೀರ ಲೋಕದಲಿ...’

ಇಷ್ಟೆಲ್ಲ ಭಾಷಾಭಿಮಾನ, ದೇಶಾಭಿಮಾನಗಳನ್ನು ತೋರಿಕೊಂಡರೂ ಅಭಿಮಾನದ ಪರಿಧಿಯನ್ನು ವಿಶ್ವವ್ಯಾಪ್ತಿಗೇರಿಸುವುದನ್ನೇ, ಅದಕ್ಕೆ ಸಾರ್ವತ್ರಿಕತೆಯನ್ನು ನೀಡುವುದನ್ನೇ ಕುವೆಂಪು ಬಯಸುತ್ತಿದ್ದರು. ಈ ಮಾತಿಗೆ ಇನ್ನೊಂದು ಉದಾಹರಣೆ ಅವರ ಕವಿತೆಯಾಂದರಲ್ಲಿನ ಈ ಸಾಲುಗಳು:

ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು
ಮೇಲೆ ತೆರೆನೊರೆ ಎದ್ದು ಭೋರ್ಗರೆಯುತಿರೆ ರೇಗಿ
ಅದರಂತರಾಳದಲಿ ಗುಪ್ತ ಗಾಮಿನಿಯಾಗಿ
ಹೃದಯಗಳು ನಲಿಯುತಿರೆ ಪ್ರೇಮತೀರ್ಥದಿ ಮಿಂದು

ಸರ್ವೋದಯ, ಸಮಾನತೆ - ಇವನ್ನೆಲ್ಲ ಪ್ರತಿಯಾಂದು ಕೃತಿಯಲ್ಲೂ ಪ್ರತಿಬಿಂಬಿಸುವ ಯತ್ನವನ್ನು ಮಾಡಿದ್ದಾರೆ ಕುವೆಂಪು. ಸಾಮಾಜಿಕ ಬದ್ಧತೆ ಮತ್ತು ಕಾಳಜಿ ಅವರ ಸಾಹಿತ್ಯದ ಸಾರ ಎಂದರೆ ಅತಿಯಾಗಲಾರದು. ಬರೆದ ಕವಿತೆಗಳಲ್ಲಿ, ನಾಟಕಗಳಲ್ಲಿ, ಕಾದಂಬರಿಗಳಲ್ಲಿ, ಕೊನೆಗೆ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲೂ ಕುವೆಂಪು ಅವರ ಖಂಡತುಂಡ ಪ್ರತಿಪಾದನೆ ಸಮ ಸಮಾಜದ ನಿರ್ಮಾಣ. ಶ್ರೀಸಾಮಾನ್ಯ ಎಂಬ ಪದವನ್ನು ಬಳಕೆಗೆ ತಂದವರೇ ಕುವೆಂಪು. ತನ್ಮೂಲಕ ಸಾಮಾನ್ಯ ಪ್ರಜೆಯಾಬ್ಬನಿಗೂ ಗೌರವಾದರ ದೊರಕಬೇಕು ಎಂದು ಬಯಸಿದರವರು. ಹೊಸ ಸಾಹಿತ್ಯಕ್ರಾಂತಿಯನ್ನಷ್ಟೇ ಅಲ್ಲದೆ, ಜನರ ಬೌದ್ಧಿಕ ಮಟ್ಟದ ಔನ್ನತ್ಯವನ್ನೂ ಹೆಚ್ಚಿಸಿದ ಶ್ರೇಯಸ್ಸು ಕುವೆಂಪು ಅವರ ಕೃತಿಗಳಿಗೆ ಸಲ್ಲುತ್ತದೆ. ಹಳೆಯ ಮೌಢ್ಯ, ಮೌಲ್ಯಗಳನ್ನು ಪರಾಮರ್ಶಿಸುವ ಹೊಸ ವೈಜ್ಞಾನಿಕ ದೃಷ್ಟಿ ಮತ್ತು ವೈಚಾರಿಕ ಬುದ್ಧಿಯ ಅಗತ್ಯತೆಯನ್ನು ಕುವೆಂಪು ದಶಕಗಳ ಹಿಂದೆಯೇ ಒತ್ತಿಹೇಳಿದ್ದರು. ಹಳ್ಳಿಹಳ್ಳಿಗಳಲ್ಲಿ ‘ವಿಚಾರವೇದಿಕೆ’ಗಳು ಸಂಘಟಿತವಾಗಿ ಕಾರ್ಯೋನ್ಮುಖವಾಗಬೇಕೆಂದು ಅವರು ಆಶಿಸಿದ್ದರು. ಮೂಢನಂಬಿಕೆ-ಅಂಧಶೃದ್ಧೆಗಳ ವಿರುದ್ಧ ಸಮರವನ್ನೇ ಸಾರಿದ್ದರು.

ಕುವೆಂಪು ಬರೀ ಒಬ್ಬ ಮಹಾನ್‌ ಕವಿಯಷ್ಟೇ ಆಗಿರದೆ ಒಂದು ‘ಶಕ್ತಿ’ಯಾಗಿದ್ದರು ಎನ್ನುವುದನ್ನು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿಯವರೇ ಹೇಳುತ್ತಾರೆ - ‘ನಮ್ಮಣ್ಣ ಒಬ್ಬೊಬ್ಬರಿಗೆ ಒಂದೊಂದು ಮೂರ್ತಸ್ವರೂಪದಲ್ಲಿ ಕಂಡಿರಬಹುದು. ಕವಿಯಾಗಿ, ಕಾದಂಬರಿಕಾರನಾಗಿ, ಗುರುವಾಗಿ, ದಾರ್ಶನಿಕನಾಗಿ, ವಿಚಾರವಾದಿಯಾಗಿ... ಹೀಗೆ. ಆದರೆ ವೈಯಕ್ತಿಕವಾಗಿ ನನಗೆ ಇದಾವುದೂ ಅಲ್ಲದೇ, ನೆಲ-ಜಲ-ವಾಯು-ಆಕಾಶ-ಜ್ಯೋತಿಗಳೆಲ್ಲದಕ್ಕೂ ನಮ್ಮ ತಂದೆ-ತಾಯಿಯರೇ ಮೂಲವೇನೋ ಎನ್ನಿಸುವಷ್ಟು ಅವರೊಬ್ಬ ದಿವ್ಯಶಕ್ತಿಯಾಗಿ ಗೋಚರಿಸುತ್ತಿದ್ದರು’.

ಈ ದಿವ್ಯಶಕ್ತಿಯಿಂದಾಗಿಯೇ ಕುವೆಂಪು ಅವರಿಂದ ರಚಿತವಾಯಿತು ‘ಓ ನನ್ನ ಚೇತನ... ಆಗು ನೀ ಅನಿಕೇತನ...’ ಎಂಬ ಕವನ; ಸಮಾನತೆಯ ಪ್ರಜ್ಞೆಯ ಸಮರ್ಥ ಪ್ರತಿಫಲನ. ಆಸ್ತಿ-ಮನೆ-ಮಠ ಇತ್ಯಾದಿ ಐಹಿಕ ವ್ಯಾಮೋಹಗಳ, ಸುಖ-ಸುಪ್ಪತ್ತಿಗೆಯ ಬಲೆಯನ್ನು ಕತ್ತರಿಸಿ, ಕುಲ-ಮತ-ಭಾಷೆ-ದೇಶಗಳ ಮಾನವನಿರ್ಮಿತ ಗಡಿಗಳನ್ನು ದಾಟಿ ಅನಂತದೆಡೆಗೆ ಕೈಚಾಚುವಂತೆ ಸಂಕಲ್ಪಿಸಿದ ಮಹಾನ್‌ ಚೇತನ...

ಆ ದಿವ್ಯಚೇತನಕ್ಕಿದೋ ನನ್ನ ನಮನ.

* * * *

ಫಿಲಡೆಲ್ಫಿಯಾದಲ್ಲಿ ಇತ್ತೀಚೆಗೆ ನಡೆದ ವಸಂತ ಸಾಹಿತ್ಯೋತ್ಸವ ಸಂದರ್ಭದಲ್ಲಿ ಬಿಡುಗಡೆಯಾದ ‘ಕುವೆಂಪು ಸಾಹಿತ್ಯ ಸಮೀಕ್ಷೆ’ ಗ್ರಂಥಕ್ಕಾಗಿ ನಾನು ಬರೆದ ಪುಟ್ಟ ಪ್ರಬಂಧವಿದು. ಇತರ ಇಪ್ಪತ್ತಕ್ಕೂ ಹೆಚ್ಚು ಜನ ಅಮೆರಿಕನ್ನಡಿಗರ ಪ್ರಬುದ್ಧ ಲೇಖನ-ಪ್ರಬಂಧಗಳಿರುವ ಈ ಮಹಾಗ್ರಂಥದ ಪ್ರಧಾನ ಸಂಪಾದಕರು ನಾಗ ಐತಾಳ. ಗ್ರಂಥ ಬಿಡುಗಡೆಯಾದ ನಂತರ ನನ್ನ ಲೇಖನವನ್ನು ವಿಚಿತ್ರಾನ್ನ ಸ್ನೇಹಿತರಿಗೆಲ್ಲ ಓದಲು ಒದಗಿಸಲಿದ್ದೇನೆ ಎಂದು ಐತಾಳರಲ್ಲಿ ಮೊದಲೇ ಹೇಳಿದ್ದೇನೆ. ಅದರಂತೆ ಈ ವಾರದ ವಿಚಿತ್ರಾನ್ನವಾಗಿ ಈ ಪ್ರಬಂಧವನ್ನು ಪ್ರಸ್ತುತಪಡಿಸಿದ್ದೇನೆ.

ನಿಮ್ಮ ಅನಿಸಿಕೆಗಳು - ಈ ಅಂಕಣದ ಮಟ್ಟಿಗೆ ಇದು ಸ್ವಲ್ಪ ‘ಹೆವಿ’ಯಾಯಿತೆಂದಾಗಲೀ, ಗಂಭೀರವಾಗಿದ್ದರೂ ‘ಸವಿ’ಯುವಂತಿದೆಯೆಂದಾಗಲೀ - ಎಲ್ಲ ನಮೂನೆಯ ಪ್ರತಿಕ್ರಿಯೆಗಳಿಗೆ ಆತ್ಮೀಯ ಸ್ವಾಗತ. [email protected] ವಿಳಾಸಕ್ಕೆ ಬರೆಯುತ್ತೀರಲ್ಲವೆ?


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X