• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾರ್ತೆಗಳು.... ಓದುತ್ತಿರುವವರು....

By Staff
|
Srivathsa Joshi *ಶ್ರೀವತ್ಸ ಜೋಶಿ

Radio Newsreaders in Kannada‘ಸೊಗಸಿನ ಸುದ್ದಿಯ ತರುವೆನು ನಿಮಗೆ... ವ್ಯಸನದ ವಾರ್ತೆಯ ಕೊಡುವೆನು ತಮಗೆ... ಎಲ್ಲ ಸುದ್ದಿಗಳೊಂದೇ ನಮಗೆ...’ ಎನ್ನುವ ಅಂಚೆಯಣ್ಣನಂತೆಯೇ ವಾರ್ತಾವಾಚಕರು ಕೂಡ. ಹಬ್ಬಹರಿದಿನವಿರಲಿ ಕಾರ್ಮೋಡ ಕವಿದ ಕರಾಳ ದಿನವಿರಲಿ ಬದುಕಿನ ಜಂಜಾಟಗಳಿಗೆ ತೆರೆದುಕೊಂಡ ಇನ್ನೊಂದು ಸಾಮಾನ್ಯ ದಿನವಿರಲಿ - ನಿಗದಿತ ಸಮಯಕ್ಕೆ ಸರಿಯಾಗಿ ಪ್ರತ್ಯಕ್ಷ(?)ವಾಗಿ ಆ ಕ್ಷಣದ ಸುದ್ದಿಯನ್ನೊಪ್ಪಿಸುವ ವಾರ್ತಾವಾಚಕರ ಬಗ್ಗೆಯೂ ನಿಜವಾಗಿ ನಮಗೆಲ್ಲ ಅಭಿಮಾನವಿರಬೇಕು! ಅದಕ್ಕಾಗಿಯೇ ಇವತ್ತಿನ ವಿಚಿತ್ರಾನ್ನಕ್ಕೆ ನಾನು ಆರಿಸಿಕೊಂಡಿರುವ ವಿಷಯ - ‘ವಾರ್ತಾವಾಚಕರು’.

ರೇಡಿಯಾದಲ್ಲಿ ವಾರ್ತೆ ಕೇಳುವುದು ಅಥವಾ ಟಿವಿಯಲ್ಲಿ ವಾರ್ತಾ ಕಾರ್ಯಕ್ರಮ ನೋಡುವುದು ನಮ್ಮ ದೈನಂದಿನ ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿಹೋಗಿದೆ. ಈಗೇನೋ ಇಂಟರ್ನೆಟ್‌, ಉಪಗ್ರಹ ಚಾನೆಲ್‌ಗಳು, ಕೆಲವಂತೂ 24 ಗಂಟೆಯೂ ವಾರ್ತಾಪ್ರಸಾರಕ್ಕೇ ಮೀಸಲಾದುವು ಹೀಗೆ ಅಕ್ಷರಶಃ ನಾವೆಲ್ಲ ‘ಸದಾ ಸುದ್ದಿಯಲ್ಲೇ ಇರುವವರು’ ಎನ್ನುವುದು ಹೌದಾದರೂ ಸುಮಾರು ಎಂಬತ್ತರ ದಶಕದ ಕೊನೆಯವರೆಗೂ ನಮಗೆಲ್ಲ ರೇಡಿಯಾ ವಾರ್ತೆಗಳೇ ವರ್ತಮಾನದ ಜಗತ್ತಿಗೊಂದು ಕಿಟಿಕಿಯಾಗಿದ್ದದ್ದಲ್ಲವೇ? ಹಾಗಾಗಿಯೇ ರೇಡಿಯೋ ವಾರ್ತಾವಾಚಕರೆಂದರೆ ನಮಗೆ ಪರೋಕ್ಷವಾಗಿ ಚಿರಪರಿಚಿತರು; ಅನುದಿನವೂ ‘ಭೇಟಿ’ಯಾಗುವ ಆತ್ಮೀಯ ಸ್ನೇಹಿತರು!

ಎಷ್ಟೋ ಮನೆಗಳಲ್ಲಿ ಈಗಲೂ ಬೆಳಿಗ್ಗೆ ಆರು ಗಂಟೆಗೆ ರೇಡಿಯಾ ಆನ್‌ ಮಾಡಿದ್ದು ವಂದನ, ಚಿಂತನ, ರೈತರಿಗೆ ಸಲಹೆ, ಸಂಸ್ಕೃತ ವಾರ್ತೆ, ಕಾರ್ಯಕ್ರಮ ವಿವರ, ಪ್ರದೇಶ ಸಮಾಚಾರ, ಚಿತ್ರಗೀತೆ, ಡೆಲ್ಲಿ ನ್ಯೂಸ್‌... ಹೀಗೆ ತನ್ನಪಾಡಿಗೆ ತಾನು ಅರಚುತ್ತಲೇ ಇರುತ್ತದೆ; ಒಂದಾದಮೇಲೊಂದರಂತೆ ಬೆಳಗಿನ ಕೆಲಸಕಾರ್ಯಗಳ ತರಾತುರಿಯಲ್ಲಿನ ಮನೆಮಂದಿಗೆ ‘ಗಡಿಯಾರ ನೋಡಿ ವೇಳೆ ತಿಳಿವ’ ಎಕ್ಸ್ಟ್ರಾಕೆಲಸವನ್ನುಳಿಸಿ ಸಮಯಪ್ರಜ್ಞೆಯ ಬೆಂಗಾವಲಾಗಿರುತ್ತದೆ. ಸಣ್ಣನ್ಯೂಸ್‌ (ಧಾರವಾಡ ಕೇಂದ್ರದಿಂದ ಬರುವ ಪ್ರದೇಶ ಸಮಾಚಾರ) ಆದ ಮೇಲೆ ಸ್ನಾನಕ್ಕೆ ಹೊರಡೋದು, ದೊಡ್ಡನ್ಯೂಸ್‌ (ದೆಹಲಿಯಿಂದ ಮೂಡುವ ಕನ್ನಡ ವಾರ್ತೆ) ಆದ ಮೇಲೆ ತಿಂಡಿ ತಿಂದು ಆಫೀಸಿಗೆ ಹೊರಡೋದು... ಹೀಗೆ ರೇಡಿಯಾ ಕಾರ್ಯಕ್ರಮಗಳೇ ಟೈಮ್‌ಟೇಬಲ್‌ ಆಗಿರುತ್ತವೆ ತುಂಬಾ ಮಂದಿಗೆ. ವಾರ್ತಾವಾಚಕರು ಸುದ್ದಿ ಹೊತ್ತುತರುವವರಷ್ಟೇ ಅಲ್ಲ , ಸಮಯಸೂಚಕರಾಗಿ ಮುನ್ನಡೆಸುವ ಸ್ನೇಹಿತರಂತೆ ಭಾಸವಾಗುವುದು ಅದೇ ಕಾರಣಕ್ಕೆ.

ವಾರ್ತಾವಾಚಕರ ಹೆಸರು ನೆನಪಲ್ಲಿ ಹಸಿರು...

ದೆಹಲಿಯಿಂದ ಕನ್ನಡ ವಾರ್ತೆ ಓದುವ/ಓದುತ್ತಿದ್ದ ರಂಗರಾವ್‌, ಉಪೇಂದ್ರರಾವ್‌, ರಾಮಕೃಷ್ಣ, ಡಿ.ಎಸ್‌.ನಾಗಭೂಷಣ, ಶುಭಾ ದಾಸ್‌, ವತ್ಸಲಾ ಐಯಂಗಾರ್‌, ಅರುಣಾ ರಮೇಶ್‌, ಮುರಳೀಧರ ಮುಧೋಳ್‌..., ಬೆಂಗಳೂರಿಂದ ಪ್ರದೇಶಸಮಾಚಾರದ ಕೆ.ಎಸ್‌.ಪುರುಶೋತ್ತಮ್‌, ನಾಗಮಣಿ ಎಸ್‌.ರಾವ್‌, ಆರ್‌.ಕೆ.ದಿವಾಕರ, ಕೃಷ್ಣಕಾಂತ್‌, ಎಸ್‌.ಪರಶಿವಮೂರ್ತಿ, ಬಸಪ್ಪ ಮಾದರ್‌, ಧಾರವಾಡದಿಂದ ಪ್ರದೇಶ ಸಮಾಚಾರದ ನಾಗೇಶ್‌ ಶಾನುಭಾಗ್‌, ಚಾಮರಾಜ್‌, ಗುರುರಾಜ್‌ ಜಮಖಂಡಿ... ಹೀಗೆ ಎಷ್ಟೋ ಮಂದಿ ಕನ್ನಡ ವಾರ್ತಾವಾಚಕರ ಹೆಸರು, ಧ್ವನಿ ನನ್ನ ನೆನಪಲ್ಲಿ ಹಸುರಾಗಿದೆ. ಜತೆಯಲ್ಲೇ ಹಿಂದಿವಾರ್ತೆಯ ಕೃಷ್ಣಕುಮಾರ್‌ ಭಾರ್ಗವ್‌, ಶೀಲಾ ಮಿತ್ತಲ್‌, ಅಶೋಕ್‌ ಬಾಜಪಾಯ್‌, ದೇವಕೀನಂದನ ಪಾಂಡೆ (ಇವರಿಬ್ಬರೂ ಈಗ ನಿಧನರಾಗಿದ್ದಾರೆ), ಇಂಗ್ಲಿಷ್‌ನ ಬೊರೊನ್‌ ಹವಾಲ್ದಾರ್‌, ವಿಜಯ್‌ ಡೇನಿಯಲ್ಸ್‌, ಲೊತಿಕಾ ರತ್ನಂ, ರಿನಿ ಸೈಮನ್‌, ಸ್ಫೂರ್ತಿ ಸಿನ್ಹಾ, ಸಂಸ್ಕೃತದ ‘ಇಯಂ ಆಕಾಶವಾಣಿ ಸಂಪ್ರತಿ ವಾರ್ತಾಃ ಶ್ರೂಯಂತಾಮ್‌... ಪ್ರವಾಚಕಃ ಬಲದೇವಾನಂದ ಸಾಗರಃ...’, ಮಂಗಲಾ ಕರ್ಭೇಕರ್‌... - ಹೀಗೆ ಒಂದೊಂದು ಹೆಸರು ನೆನಪಿಸಿಕೊಂಡರೂ ಅವರೋದುವ ವಾರ್ತೆ ಕಿವಿಯಲ್ಲಿ ಅನುರಣಿಸುತ್ತದೆ. ನಿಮಗೂ ಹಾಗೆಯೇ ಇರಬಹುದೆಂದುಕೊಂಡಿದ್ದೇನೆ.

ವಾರ್ತಾವಾಚಕರ (ಮುಖ್ಯವಾಗಿ ಇದು ರೇಡಿಯಾ ನ್ಯೂಸ್‌ರೀಡರ್ಸ್‌ ಬಗೆಗಿನ ವಿಚಾರ) ಧ್ವನಿಯನ್ನೇನೊ ದಿನಾ ಕೇಳುತ್ತಿರುತ್ತೇವೆ, ನೋಡಲು ಅವರು ಹೇಗಿರುತ್ತಾರೆ ಎಂಬ ಕುತೂಹಲ. 1991ರಲ್ಲಿ ನಾನು ಒಂದುವರ್ಷ ದೆಹಲಿಯಲ್ಲಿದ್ದಾಗ ಒಮ್ಮೆ ಅಲ್ಲಿನ ಕನ್ನಡಸಂಘದ ವಾಚನಾಲಯದಲ್ಲಿ , ಕನ್ನಡವಾರ್ತೆಯ ಶುಭಾ ಸಿಂಧೂರ್‌ ದಾಸ್‌ ಭೇಟಿಯಾಗಿದ್ದರು. ನನಗಾಗ ಬಹಳ ಸಂತೋಷವಾಗಿತ್ತು. ಹಾಗೆಯೇ ನಮ್ಮ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕರಾಗಿದ್ದು ಬೆಂಗಳೂರಿಗೆ ಪ್ರದೇಶಸಮಾಚಾರ ವಿಭಾಗಕ್ಕೆ ವರ್ಗಪಡೆದ ಕೃಷ್ಣಕಾಂತ್‌ ಆಮೇಲೆ ದೂರದರ್ಶನದಲ್ಲೂ ‘ಏನ್ಸಮಾಚಾರ’ ಆರಂಭಿಸಿದಾಗ ಅವರ ಮುಖದರ್ಶನ ಮುದನೀಡಿತ್ತು. ಇನ್ನೊಬ್ಬ ಹಿರಿಯ ಕನ್ನಡ ವಾರ್ತಾವಾಚಕ ಎಚ್‌.ಕೆ.ರಾಮಕೃಷ್ಣ (ಆಮೇಲೆ ರೇಡಿಯಾ ಮಾಸ್ಕೊದಲ್ಲಿ ಕನ್ನಡಕಾರ್ಯಕ್ರಮ ನಿರ್ವಹಿಸುತ್ತಿದ್ದರು) ಬರೆದ ಲೇಖನವೊಂದು ಅವರ ಭಾವಚಿತ್ರದೊಂದಿಗೆ ಒರ್ಲಾಂಡೊ ವಿಶ್ವಕನ್ನಡ ಸಮ್ಮೇಳನದ ಸ್ಮರಣಸಂಚಿಕೆ ‘ವಿಕಾಸ’ದಲ್ಲಿ ಪ್ರಕಟವಾಗಿದೆ. ವಿಪರ್ಯಾಸವೆಂದರೆ ಲೇಖನ ಬರೆದು ಫ್ಲೊರಿಡಾದಲ್ಲಿರುವ ಸಹೋದರ ಎಚ್‌.ಕೆ.ನಂಜುಂಡ ಸ್ವಾಮಿಯವರಿಗೆ ತಲುಪಿಸಿಯಾದ ಮೇಲೆ, ಸಂಚಿಕೆ ಪ್ರಕಟವಾಗುವ ಮೊದಲು ರಾಮಕೃಷ್ಣ ಹೃದಯಾಘಾತದಿಂದ ವಿಧಿವಶರಾದರು. ರಾಮಕೃಷ್ಣ ಅವರ ಇನ್ನೊಬ್ಬ ಹಿರಿಯ ಸಹೋದರ ಎಚ್‌.ಕೆ.ರಂಗನಾಥ್‌ ಕನ್ನಡದ ಮೊಟ್ಟಮೊದಲ ವಾರ್ತಾವಾಚಕರಂತೆ! ಅವರ ಫೊಟೊ ನೋಡಿದ್ದೇನೆ, ಅವರು ವಾರ್ತೆ ಓದುತ್ತಿದ್ದಾಗ ನಾನಿನ್ನೂ ಹುಟ್ಟಿರಲಿಲ್ಲ...

ವಾರ್ತಾವಾಚಕರೇ ವಾರ್ತೆಯಾದಾಗ...!

ವಾರ್ತೆಗಳನ್ನೋದುವವರು ಪ್ರಪಂಚದ ಮೂಲೆಮೂಲೆಯ ವರ್ತಮಾನಗಳನ್ನು ನಮಗೆ ತಲುಪಿಸುತ್ತಾರೆ; ಅದೇ ಅವರ ವೃತ್ತಿ. ಆದರೆ ವಾರ್ತಾವಾಚಕರೇ ಸುದ್ದಿಯ ಸಾಮಗ್ರಿಯಾದರೆ? ಅಂಥ ಸಂಗತಿಗಳೂ ನಡೆದದ್ದಿದೆ.

ಕಳೆದ ವರ್ಷ ಆಗಸ್ಟ್‌ 14ರಂದು ದೆಹಲಿಯಲ್ಲಿ ಒಂದು ವಿಚಿತ್ರ ನಮೂನೆಯ ಪ್ರತಿಭಟನೆ/ಸತ್ಯಾಗ್ರಹ ನಡೆದಿತ್ತು. ‘ಶೋಲೆ’ ಚಿತ್ರದಲ್ಲಿ ವೀರು ಧರ್ಮೇಂದ್ರ ನೀರಿನಟ್ಯಾಂಕ್‌ ಮೇಲಿಂದ ಕೆಳಗೆ ಹಾರುತ್ತೇನೆಂದು ಬೆದರಿಕೆ ಹಾಕಿದ್ದಂತೆ ದೆಹಲಿಯ ರೇಡಿಯಾ ಟವರೊಂದರ ಮೇಲೆ ಹತ್ತಿ ಅಲ್ಲಿಂದ ಹಾರಿ ಪ್ರಾಣಬಿಡುತ್ತೇನೆ ಎಂಬ ಬೆದರಿಕೆ ಹಾಕಿದ್ದ ಆಕಾಶವಾಣಿಯ ವಾರ್ತಾವಾಚಕನೊಬ್ಬ! ಅಸ್ಸಾಮಿ ಭಾಷೆಯ ವಾರ್ತೆ ಓದುವ ಭಾಸ್ಕರ್‌ ವೊಹ್ರಾ ಎಂಬ ಹೆಸರಿನ ಈ ಆಸಾಮಿ, ತನಗೆ ಸಿಗುತ್ತಿದ್ದ ಅತಿಕಡಿಮೆ ವೇತನ-ಭತ್ಯೆಗಳ ಬಗ್ಗೆ, ಕೆಂಪುಪಟ್ಟಿ ಆಡಳಿತಶಾಹಿಯ ಬಗ್ಗೆ ರೋಸಿಹೋಗಿ ಆ ಕಠಿಣನಿರ್ಧಾರ ಕೈಗೊಂಡಿದ್ದ! ಕೊನೆಗೂ ಸ್ನೇಹಿತರು ಹಿತೈಷಿಗಳು ಮತ್ತು ಉನ್ನತ ಅಧಿಕಾರಿಗಳು ಮನವೊಲಿಸಿದ ಮೇಲೆ ನಿಧಾನಕ್ಕೆ ಟವರ್‌ನಿಂದಿಳಿದು ಬಂದು ನೆರೆದಿದ್ದ ಜನರು ನಿಟ್ಟುಸಿರು ಬಿಡುವಂತೆ ಮಾಡಿದ. ಅಂತೂ ವಾರ್ತಾವಾಚಕನಾದ ಅವನೇ ವಾರ್ತೆಗೆ ಬಹುದೊಡ್ಡ ಗ್ರಾಸವಾದ. (ನೋಡಿ - ‘ದಿ ಹಿಂದು’ ಸಚಿತ್ರ ವರದಿ).

ವಾರ್ತಾವಾಚಕಿಯಾಬ್ಬಳ ಬಗ್ಗೆ ಜಗತ್ತಿನ ಮಾಧ್ಯಮಗಳಲ್ಲೆಲ್ಲ ಸುದ್ದಿಯಾದದ್ದು ಬಿಬಿಸಿಯ ಪ್ರಾದೇಶಿಕ ವಾರ್ತಾವಾಚಕಿ ಶರುಣ್‌ ಸಾಗರ್‌ ಎರಡು ವರ್ಷಗಳ ಹಿಂದೆ ಒಂದು ದಿನ ಬಿಬಿಸಿಯ ವಾರ್ತೆಗಳನ್ನು ಠಾಕುಠೀಕಾಗಿ ರೇಷ್ಮೆಸೀರೆಯುಟ್ಟುಕೊಂಡು ಪ್ರಸ್ತುತಪಡಿಸಿದಾಗ! ಯಾವಾಗಲೂ ಪಾಶ್ಚಾತ್ಯ ಶೈಲಿಯ ಉಡುಗೆಯಲ್ಲೇ ಕಂಡುಬರುತ್ತಿದ್ದ ಈ ಭಾರತೀಯ ಮೂಲದ ವಾಚಕಿ ಒಂದು ದಿನ ನೀಟಾಗಿ ಸೀರೆಯುಟ್ಟು ಪ್ರತ್ಯಕ್ಷವಾದಾಗ ವೀಕ್ಷಕರಿಗೆಲ್ಲ ಅಚ್ಚರಿ-ಸಂತೋಷ-ರೋಮಾಂಚನ ಎಲ್ಲ ಒಟ್ಟಿಗೇ ಆಗಿತ್ತು! ಬಿಬಿಸಿಯಲ್ಲಿ ಸೀರೆ ಕಾಣಿಸಿಕೊಂಡದ್ದು ಮಾಧ್ಯಮಗಳಿಗೆ ಬಿಸಿಬಿಸಿ ಸುದ್ದಿಯಾಯ್ತು. 1997ರಲ್ಲಿ ಎಸ್‌.ಎಸ್‌ ಗಿಲ್‌ ಪ್ರಸಾರಭಾರತಿಯ ಸೂತ್ರಧಾರನಾದ ಕೂಡಲೆ ನಮ್ಮ ದೂರದರ್ಶನದಲ್ಲಿ ಸೀರೆಯುಟ್ಟೇ ವಾರ್ತೆಓದುವ ಹಿರಿಯ ವಾರ್ತಾ ವಾಚಕಿಯರೆಲ್ಲ (ಕಾವೇರಿ ಮುಖರ್ಜಿ, ಸಲ್ಮಾ ಸುಲ್ತಾನ್‌, ಗೀತಾಂಜಲಿ ಐಯರ್‌, ಮಿನು, ಉಷಾ ಅಲ್ಬುಕರ್ಕ್‌, ಮಂಜರಿ ಜೋಶಿ - ಈ ಆರು ಮಂದಿ) ಉಚ್ಚಾಟನೆಗೊಂಡದ್ದು ಇನ್ನೊಂದು ಸುದ್ದಿಯಾಗಿತ್ತು!

ಆಯ್ಕೆಪರೀಕ್ಷೆಯಲ್ಲಿ ಅನುತ್ತೀರ್ಣನಾದ ಅಭ್ಯರ್ಥಿ...

ಇದೊಂದು ಸಂಗತಿ ಸ್ವಾರಸ್ಯಕರವಾಗಿದೆ - ಹಿಂದಿ ಚಲನಚಿತ್ರರಂಗದ ಅಸಾಮಾನ್ಯ ಮೇರುಪ್ರತಿಭೆ ‘ಬಿಗ್‌ ಬಿ’ ಅಮಿತಾಭ್‌ ಬಚ್ಚನ್‌ ಚಿತ್ರರಂಗಕ್ಕೆ ಸೇರುವ ಮೊದಲು ಆಕಾಶವಾಣಿಯಲ್ಲಿ ಇಂಗ್ಲಿಷ್‌, ಹಿಂದಿ ವಾರ್ತಾವಾಚಕ ಹುದ್ದೆಗೆ ಅರ್ಜಿ ಹಾಕಿ ಧ್ವನಿಪರೀಕ್ಷೆಯಲ್ಲಿ ಫೇಲಾದವರು! ಒಂದೊಮ್ಮೆ ಅಮಿತಾಭ್‌ ಅವತ್ತಿನ ಅರ್ಹತಾಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿದ್ದರೆ....?! ಊಹಿಸುವುದೂ ಅಸಾಧ್ಯ! ಅವರ ಹಣೆಬರಹ ಹಾಗಿತ್ತು, ಅದಕ್ಕಿಂತಲೂ ವಿಶ್ವಾದ್ಯಂತ ಕೋಟ್ಯಂತರ ‘ಅಮಿತಾಭ್‌ ಅಭಿಮಾನಿ’ಗಳ ಹಣೆಬರಹ ಚೆನ್ನಾಗಿತ್ತು ಅಂದರೆ ಸರಿಹೋದೀತು! ಸಿನೆಮಾಕ್ಷೇತ್ರದ ಅನಭಿಷಿಕ್ತ ದೊರೆಯಾದದ್ದು ಬಿಡಿ, ‘ಕೌನ್‌ ಬನೇಗಾ ಕರೋರ್‌ಪತಿ’ಯಂತಹ ಟಿವಿ ಸರಣಿಗಳಲ್ಲೂ ಮಿಂಚಿದಾಗ, ಆಸ್ಕರ್‌ ಪ್ರಶಸ್ತಿಯ ಕದತಟ್ಟಿದ್ದ ‘ಲಗಾನ್‌’ ಚಿತ್ರದಲ್ಲಿನ ಕಂಚಿನಕಂಠದ ನಿರೂಪಣೆಯಿಂದ ವೀಕ್ಷಕರೆಲ್ಲ ಪುಳಕಿತರಾದಾಗ ಸ್ವತಃ ಅಮಿತಾಭ್‌ಗೇ ಆಶ್ಚರ್ಯವಾಗಿರಬಹುದು; ಆಕಾಶವಾಣಿ ಕಛೇರಿಯಿಂದ ರಿಜೆಕ್ಷನ್‌ಲೆಟರ್‌ನೊಂದಿಗೆ ಹ್ಯಾಪ್‌ಮೋರೆ ಹಾಕಿಕೊಂಡು ಹೊರನಡೆದ ಕ್ಷಣಗಳು ನೆನಪಿಗೆ ಬಂದಿರಬಹುದು!

ಅಮಿತಾಭ್‌ ವಾರ್ತಾವಾಚಕರಾಗದೆ ಬೇರೆ ವಿಧದಲ್ಲಿ ದಂತಕಥೆಯಾದವರಾದರೆ ‘ಸುರಭಿ’ ಖ್ಯಾತಿಯ ರೇಣುಕಾ ಶಹಾನೆ, ಹಾಗೆಯೇ ಕಲಾತ್ಮಕ ಚಿತ್ರಗಳ ಪ್ರತಿಭಾವಂತ ನಟಿ ಅಕಾಲನಿಧನಕ್ಕೊಳಗಾದ ಸ್ಮಿತಾ ಪಾಟೀಲ್‌ ಇವರಿಬ್ಬರೂ ಮೊದಲು ಮರಾಠಿ ವಾರ್ತಾವಾಚಕಿಯರಾಗಿದ್ದು ಆಮೇಲೆ ಅವರ ಪ್ರತಿಭೆ ಬೆಳಕಿಗೆ ಬಂದು ಯಶಸ್ಸಿನ ಮೆಟ್ಟಲೇರಿದವರು! ದೂರದರ್ಶನದ ಇಂಗ್ಲಿಷ್‌ ವಾರ್ತೆಯ ತೇಜೇಶ್ವರ್‌ ಸಿಂಗ್‌ ಟಿವಿಸೀರಿಯಲ್‌ಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ಆದರೂ ವಾರ್ತಾವಾಚನವೇ ತನಗೆ ತೃಪ್ತಿತರುವ ಕೆಲಸ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರವರು. ಜೂನ್‌ 25, 1975 ರಂದು ಸಂಜೆಯ ವಾರ್ತೆಯಲ್ಲಿ ತುರ್ತುಪರಿಸ್ಥಿತಿ ಘೋಷಣೆಯ ಸುದ್ದಿಯನ್ನು ತಾನೇ ಬಿತ್ತರಿಸಿದ್ದನ್ನು ಜ್ಞಾಪಿಸಿಕೊಂಡು ಅವರಿಗೆ ಈಗಲೂ ರೋಮಾಂಚನವಾಗುತ್ತದಂತೆ!

ಅಮೆರಿಕದಲ್ಲಿ ವಾರ್ತಾಲಾಪ...

ಅಮೆರಿಕೆಗೆ ಬಂದ ಮೇಲೆ ಇಲ್ಲಿಯೂ ರೇಡಿಯಾನ್ಯೂಸ್‌ ಕೇಳುವ ನನ್ನ ಪರಿಪಾಠವನ್ನು ಮುಂದುವರೆಸಿದ್ದೇನೆ. ಕಾರ್‌ನಲ್ಲಿ ಆಫೀಸಿಗೆ ಹೋಗುತ್ತ , ಬರುತ್ತ ನ್ಯಾಷನಲ್‌ ಪಬ್ಲಿಕ್‌ ರೇಡಿಯಾ ಸ್ಟೇಷನನ್ನೇ ನಾನು ಟ್ಯೂನ್‌ ಮಾಡೋದು. NPRನ ಮಾರ್ನಿಂಗ್‌ ಎಡಿಷನ್‌ ವಾರ್ತಾಕಾರ್ಯಕ್ರಮವನ್ನು ಕಳೆದ 25 ವರ್ಷಗಳಿಂದಲೂ ನಡೆಸುತ್ತಿದ್ದ ‘ಕಂಚಿನ ಕಂಠದ’ ಬಾಬ್‌ ಎಡ್ವರ್ಡ್ಸ್‌ ಮೊನ್ನೆ ಏಪ್ರಿಲ್‌ನಲ್ಲಿ NPRಗೆ ವಿದಾಯ ಹೇಳಿದಾಗ, ನಾನು ಬರೀ ಮೂರ್ನಾಲ್ಕು ವರ್ಷಗಳಿಂದೀಚೆ ಮಾತ್ರ ಬಾಬ್‌ ಎಡ್‌ವರ್ಡ್ಸ್‌ ಧ್ವನಿಗೆ ಮಾರುಹೋದವನಾದರೂ, ಏನೋ ಕಳೆದುಕೊಂಡಂತೆ ಅನ್ನಿಸಿದ್ದು ನಿಜ. ಬಾಬ್‌ ಎಡ್‌ವರ್ಡ್ಸ್‌ ಈಗ XM Satellite Radio ದಲ್ಲಿ ವಾರ್ತೆಗಳ ಕಾರ್ಯಕ್ರಮ ನಡೆಸುತ್ತಿದ್ದಾನಂತೆ. ಮತ್ತೆ ಅವನ ‘ಬೂಮಿಂಗ್‌ ವಾಯ್ಸ್‌’ ದಿನಾ ಕಿವಿಗೆ ಬೀಳಬೇಕಾದರೆ ನಾನೀಗ XM Radio ಕೊಳ್ಳಬೇಕು ಮತ್ತು ಅದಕ್ಕೆ ತಿಂಗಳೂ ಚಂದಾ ಕಟ್ಟಬೇಕು!

ಅಥವಾ, ಪುಕ್ಕಟೆ ಸಿಗುವ ಬೇರಾವ ವಾರ್ತಾವಾಚಕನ/ವಾಚಕಿಯ ಧ್ವನಿಯ ಅಭಿಮಾನಿಯಾಗಲೇ ಎಂದು ಯೋಚಿಸುತ್ತಿದ್ದೇನೆ...

* * *

ಈಗ ಕೊನೆಯಲ್ಲಿ ಈ ವಾರದ ಪ್ರಶ್ನೆ. ನಿಮ್ಮ ‘ರೇಡಿಯಾ ಸಮಯಪ್ರಜ್ಞೆ’ ಎಷ್ಟು ಕರಾರುವಾಕ್ಕಾಗಿದೆ ನೋಡೋಣ. ಆಕಾಶವಾಣಿಯ ದೆಹಲಿ ಕೇಂದ್ರದಿಂದ ಪ್ರಸಾರವಾಗಿ ಕರ್ನಾಟಕದ ಎಲ್ಲ ಬಾನುಲಿ ಕೇಂದ್ರಗಳೂ ಸಹಪ್ರಸಾರ ಮಾಡುವ ಹತ್ತು ನಿಮಿಷಗಳವಧಿಯ ಕನ್ನಡ ವಾರ್ತೆ ದಿನಕ್ಕೆ ಎಷ್ಟು ಸಲ ಮತ್ತು ಯಾವ್ಯಾವ ಸಮಯಕ್ಕೆ ಪ್ರಸಾರವಾಗುತ್ತದೆ? ಪ್ರಶ್ನೆಗೆ ನಿಮ್ಮ ಉತ್ತರ, ಸಂಚಿಕೆಯ ಬಗ್ಗೆ ಅಭಿಪ್ರಾಯ, ಸಲಹೆ, ಸೂಚನೆ ಕಳಿಸಲು ವಿಳಾಸ - srivathsajoshi@yahoo.com

ಹೆಚ್ಚುವರಿ ಓದಿಗೆ : ವಾರ್ತಾವಾಚನದ ಗಾಂಭೀರ್ಯದ ಬಗ್ಗೆ ಲಘುಹರಟೆಯ ವಿಚಿತ್ರಾನ್ನ ಹಳೇ ಸಂಚಿಕೆ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more