• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಣ್ಣರಳಿಸಿ ಕಿವಿನಿಮಿರಿಸುವ ಮುಖಪುಟದ ತಲೆಬರಹ !

By Staff
|
Srivathsa Joshi *ಶ್ರೀವತ್ಸ ಜೋಶಿ

koLi koogu - Early Morning Edition!‘ರೀ ಒಂಚೂರು ನ್ಯೂಸ್‌ಪೇಪರ್‌ ಈಕಡೆ ಕೊಡ್ತೀರಾ... ಫ್ರಂಟ್‌ಪೇಜ್‌ ಹೆಡ್‌ಲೈನ್ಸ್‌ ನೋಡಿ ಕೊಡ್ತೇನೆ!’

ಎಂದು ನಿಮ್ಮಿಂದ ವಾರ್ತಾಪತ್ರಿಕೆಯನ್ನು ಹಲ್ಕಿರಿದು ಇಸ್ಕೊಳ್ಳುವವರು - ಪಬ್ಲಿಕ್‌ ಪ್ಲೇಸಲ್ಲಾದರೆ ಯಾರೋ ಅಪರಿಚಿತರು, ಮನೆಯಲ್ಲೇ ಆದರೆ ನಿಮ್ಮ ಮನೆಮಂದಿಯ ಪೈಕಿಯೇ - ಇದ್ದೇಇರುತ್ತಾರೆ. ಸ್ವಲ್ಪ ಸಭ್ಯವರ್ಗದವರಾದರೆ ಕನಿಷ್ಠ ನಿಮ್ಮ ಓದುವಿಕೆ ಮುಗಿದು ನೀವದನ್ನು ಮಡಚಿಟ್ಟುಕೊಂಡ ಮರುಕ್ಷಣದವರೆಗೆ ಕಾದಿರುತ್ತಾರೆ, ಇನ್ನೂ ತರಾತುರಿಯವರಾದರೆ ಅವರದೇ ಪೇಪರೇನೊ ಎನ್ನುವಂತೆ ನಿಮ್ಮ ಕೈಯಿಂದ ಎಳೆದೇ ಬಿಡುವಷ್ಟು ಧಾರ್ಷ್ಟ್ಯ ತೋರಿಸುತ್ತಾರೆ. ಹೆಡ್‌ಲೈನ್ಸ್‌ ನೆಪದಲ್ಲಿ ನಿಮ್ಮ ಹೆಡ್ಡನ್ನೇ ತಿನ್ನುತ್ತಾರೆ!

ಪತ್ರಿಕೆಗಳ ಹೆಡ್‌ಲೈನ್‌ (ತಲೆಬರಹ)ಗಳಿಗೆ ಇರುವ ಚುಂಬಕಶಕ್ತಿ ಅದು! ಇಡೀ ಸುದ್ದಿಯನ್ನು ತಲೆಯಿಂದ ಬುಡದವರೆಗೆ ಓದಲು ಯಾರಿಗೆ ಪುರುಸೊತ್ತಿದೆ ಈಗ ? ಧಾವಂತದ ಜೀವನದಲ್ಲಿ ಹೆಡ್‌ಲೈನ್ಸಲ್ಲೇ ಜಗವನರಿವ ಬಯಕೆ. ಹೆಡ್‌ಲೈನ್‌ಗಳಿಂದಲೇ ವಾರ್ತಾಪಿಪಾಸುಗಳ ಹಸಿವನ್ನು ಬಹುಮಟ್ಟಿಗೆ ಶಮನಗೊಳಿಸಬಹುದು ಎಂಬುದು ಪತ್ರಿಕೆಗಳಿಗೂ ಗೊತ್ತು. ಆ ನಿಟ್ಟಿನಲ್ಲಿ ತಲೆಬರಹಗಳ ಚುಂಬಕಶಕ್ತಿಯನ್ನು ಇನ್ನೂ ಇನ್ನೂ ಹೆಚ್ಚಿಸಿ ಓದುಗರ ಮನಸೆಳೆವ ನಿರಂತರ ಯತ್ನ ಪತ್ರಿಕೆಗಳಲ್ಲಿ ನಾಮುಂದು ತಾಮುಂದು ಎಂದು ನಡೆಯುತ್ತದೆ. ಈಗಿನ ಕಾಲದ ಉಪಕರಣಗಳೆಲ್ಲ ಹೆಚ್ಚುಹೆಚ್ಚು ‘ಯೂಸರ್‌-ಫ್ರೆಂಡ್ಲಿ’ ಎನಿಸಿಕೊಳ್ಳಲೆತ್ನಿಸುವಂತೆ ಪತ್ರಿಕೆಗಳ ತಲೆಬರಹಗಳೂ ‘ರೀಡರ್‌-ಫ್ರೆಂಡ್ಲಿ’ ಯಾಗಬಯಸುತ್ತವೆ.

ಯಾಕೆ ಈ ವಿಷಯ ಪ್ರಸ್ತಾಪಕ್ಕೆ ಬಂತೆಂದರೆ, ಟೈಮ್ಸ್‌ ಆಫ್‌ ಇಂಡಿಯಾ ಅಥವಾ ಇಂಡಿಯಾ ಟುಡೇ ಯಂತಹ ಆಂಗ್ಲಪತ್ರಿಕೆಗಳು ಹೆಡ್‌ಲೈನ್‌ಗಳಲ್ಲಿ ಆಂಗ್ಲೇತರ ಅಥವಾ ಭಾರತೀಯ ಭಾಷೆಗಳ ಪದಗಳನ್ನುಪಯೋಗಿಸುವುದು ಎಷ್ಟು ಸೂಕ್ತ , ಸಮಂಜಸ ಎಂದು ಇಂಟರ್‌ನೆಟ್‌ ನ್ಯೂಸ್‌ಗ್ರೂಪ್‌ನಲ್ಲೊಬ್ಬ ಮಹನೀಯರ ಪ್ರಶ್ನೆ ಇತ್ತು. ಉದಾಹರಣೆಯಾಗಿ ಅವರು ತೋರಿಸಿದ್ದು ಟೈಮ್ಸ್‌ ಆಫ್‌ ಇಂಡಿಯಾ ಬೆಂಗಳೂರು ಆವೃತ್ತಿಯ ಸಂಚಿಕೆಯಾಂದರಲ್ಲಿ ತಲೆಬರಹದಲ್ಲಿ ಉಪಯೋಗವಾಗಿದ್ದ ‘ಆಮ್‌ ಆದ್‌ಮಿ’, ‘ಗಡ್‌ಬಡ್‌’ ಮುಂತಾದ ಹಿಂದಿ ಶಬ್ದಗಳು. ಪರೋಕ್ಷವಾಗಿ ಹಿಂದಿ ಹೇರಿಕೆಯ ವಿರುದ್ಧ ತಾಕೀತು ಎಂಬಂತೆ ಆ ಪ್ರಶ್ನೆಯನ್ನವರು ಎತ್ತಿದ್ದರೊ ಅಥವಾ ಕೇವಲ ಕುತೂಹಲದ ದೃಷ್ಟಿಯಿಂದ ಕೇಳಿದ್ದರೊ ಗೊತ್ತಿಲ್ಲ.

ಆದರೆ ‘ಪತ್ರಿಕೆಗಳಲ್ಲಿ ತಲೆಬರಹಗಳ ವೈಶಿಷ್ಟ್ಯ, ವೈವಿಧ್ಯ...’ ಒಂದು ವಿಚಿತ್ರಾನ್ನೆಬಲ್‌ ವಿಷಯ ಅಂತ ನನಗನಿಸಿದ್ದರಿಂದ ಇವತ್ತು ಆ ಬಗ್ಗೆ ಬರೆಯುತ್ತೇನೆ.

* * *

AarbhaTa - Sensational Weeklyಪತ್ರಿಕೆಗಳಲ್ಲಿ ಸೆನ್ಸೇಷನಲ್‌ ಅನಿಸಿಕೊಳ್ಳುವ ವಾರ್ತೆಗಾಗಲೀ, ರಾಜಕೀಯ ಪ್ರಾಮುಖ್ಯದ ಸುದ್ದಿಗಾಗಲೀ, ಹಾಗೆಯೇ ಕ್ರೀಡಾಪುಟದಲ್ಲಿ ಸೆಹ್‌ವಾಗ್‌-ದ್ರಾವಿಡ್‌ ರನ್‌ಮಳೆಯ ವರದಿಗಾಗಲೀ ಅಷ್ಟೇ ರೋಚಕ ತಲೆಬರಹ ಇದ್ದರೇನೇ ಅದು ಇನ್ನೂ ರಂಜಿಸುವುದು, ಓದುಗನ ಮನತಣಿಸುವುದು. ಪತ್ರಿಕೆಯ ವರದಿಗಾರ ಎಷ್ಟು ಚಂದದ ಶೈಲಿಯಲ್ಲಿ ಸುದ್ದಿ ಸಂಗ್ರಹಿದರಷ್ಟೇ ಸಾಲದು, ಉಪಸಂಪಾದಕ ಆ ಸುದ್ದಿ/ವರದಿಯನ್ನು ತಿದ್ದಿತೀಡಿ ಅವನೆಲ್ಲ ಸೃಜನಶೀಲತೆ, ಚಾಕಚಕ್ಯತೆ, ಭಾಷಾಪ್ರಾವೀಣ್ಯ ಮತ್ತು ಓದುಗನ ಮನಸೆಳೆಯಬೇಕೆಂಬ ಬಯಕೆಗಳನ್ನು ಒರೆಯಾಗಿಟ್ಟು ಆ ಸುದ್ದಿಗೊಂದು ಕಳಶಪ್ರಾಯವಾದ ಶೀರ್ಷಿಕೆಯನ್ನು ಕೊಡುತ್ತಾನೆ. ಅದೇ ನಾವು-ನೀವು ಕ್ವಿಕ್ಕಾಗಿ ಓದಲು ಮುಗಿಬೀಳುವ ಹೆಡ್‌ಲೈನ್‌. ಧಾವಂತದವರಿಗಾದರೆ ಸುದ್ದಿಯ ಸಮಗ್ರರೂಪವೆಂದರೂ ಸರಿಯೇ, ವ್ಯವಧಾನವಿದ್ದವರಿಗಾದರೆ ವಿವರವಾಗಿ ಓದಲಿಕ್ಕಿರುವುದಕ್ಕೆ ಆದರದ ಆಹ್ವಾನಮಂತ್ರ ಎಂದರೂ ಸರಿಯೇ. ಒಟ್ಟಿನಲ್ಲಿ ತಲೆಬರಹದ ಪಾತ್ರ ಅತಿ ಮಹತ್ವದ್ದು. ಹೀಗಿರಲು, ಪತ್ರಿಕೆಯ ತಲೆಬರಹಗಳಲ್ಲಿ ಎಷ್ಟು ಹೊಸತನ, ಸೃಜನಶೀಲತೆ, ಲವಲವಿಕೆ ಇದ್ದರೂ ಅದು ಕಡಿಮೆಯೇ.

ನಮ್ಮ ಕರ್ನಾಟಕದ ಕನ್ನಡ ಪತ್ರಿಕೆಗಳೂ ಟಿಎಸ್ಸಾರ್‌, ವೈ.ಎನ್‌.ಕೆ, ಖಾದ್ರಿಶಾಮಣ್ಣ, ಕೆ.ಶಾಮರಾವ್‌, ಲಂಕೇಶ್‌ ಮತ್ತು ಇನ್ನೂ ಅನೇಕ ಮಂದಿ ಸಂಪಾದಕ ಪ್ರತಿಭೆಗಳ ಪರಿಶ್ರಮದಿಂದ ಜನಮನದಲ್ಲಿ ಅಚ್ಚಳಿಯದ ಸುದ್ದಿ, ತಲೆಬರಹ, ಸ್ಥಿರಶೀರ್ಷಿಕೆಗಳಿಂದ ಅಲಂಕೃತವಾಗುತ್ತಲೇ ಬಂದಿವೆ. ಮಡಿವಂತಿಕೆ ಮಾಡದೆ ಕನ್ನಡೇತರ ಪದಗಳನ್ನು ಉಪಯೋಗಿಸಿದ ತಲೆಬರಹಗಳು ಬೇಕಾದಷ್ಟು ಸಲ ಕಾಣಿಸಿಕೊಂಡು ಮುದನೀಡಿವೆ. ನನಗೀಗಲೂ ನೆನಪಿದೆ, ‘ತೆಲುಗುಜಾತಿ ಆತ್ಮಗೌರವಂ’ ಘೋಷಣೆಯಾಂದಿಗೆ ರಾಜಕೀಯಕ್ಕಿಳಿದ ಎನ್‌.ಟಿ.ರಾಮವಾವ್‌ 1985ರಲ್ಲಿ (ನಾದೇಂಡ್ಲ ಭಾಸ್ಕರ್‌ ರಾವ್‌ ಮಾಡಿದ ಕುಟಿಲದಿಂದಾಗಿ ಅಧಿಕಾರ ಕಳಕೊಂಡಿದ್ದ ಮೇಲೆ) ಎರಡನೆ ಬಾರಿ ಪ್ರಚಂಡ ವಿಜಯ ಸಾಧಿಸಿದ ಸುದ್ದಿ ನಮ್ಮ ಕರಾವಳಿಯ ಸುಂದರ ಕನ್ನಡ ದೈನಿಕ ಉದಯವಾಣಿಯಲ್ಲಿ ತೆಲುಗು ಅಕ್ಷರಗಳಲ್ಲೇ ‘ಚೈತನ್ಯರಥಂ ದಿಗ್ವಿಜಯಮು; ಎನ್‌.ಟಿ.ಆರ್‌ ಪುನರ್‌ಪ್ರತಿಷ್ಠಾಪನಮು’ ಎಂದು ಮುಖಪುಟದಲ್ಲಿ ದಪ್ಪಕ್ಷರಗಳಲ್ಲಿ ಪ್ರಕಟವಾಗಿತ್ತು !

Same news: Different headlines in various Kannada Dailiesತಲೆಬರಹದಲ್ಲಿ ಸಾಹಿತ್ಯಿಕ ಸೃಜನಶೀಲತೆಯ ಜತೆಜತೆಯಲ್ಲೇ ಶ್ರೀಸಾಮಾನ್ಯನ ಹೃದಯಕ್ಕೆ ಲಗ್ಗೆಯಿಡುವ ಉದ್ದೇಶವೂ ಇರುವುದರಿಂದ ಆಡುಮಾತಿನಲ್ಲಿ ಚಾಲ್ತಿಯಿರುವ ಪದಗಳು, ಅವು ಅನ್ಯಭಾಷೆಯದಾಗಿದ್ದರೂ, ನುಸುಳುತ್ತವೆ. ರವಿ ಬೆಳಗೆರೆ ಸಾರಥ್ಯದ ಹಾಯ್‌ ಬೆಂಗಳೂರು ಪತ್ರಿಕೆಯಲ್ಲಿ ‘ಖಾಸ್‌ಬಾತ್‌’, ‘ಲವ್‌ಲವಿಕೆ’, ‘ಬಾಟಮ್‌ ಐಟಂ’ ಅಂತೆಲ್ಲ ಸ್ಥಿರಶೀರ್ಷಿಕೆಗಳಿಲ್ಲವೆ? ಅವು ಜನಪ್ರಿಯವಾಗಿಲ್ಲವೆ? ಹೋಗಲಿ, ಈ ನಮ್ಮ ಅಂತರ್ಜಾಲ ಪತ್ರಿಕೆ ಅದುವೆಕನ್ನಡ...ದಲ್ಲೂ ‘ಚೌ ಚೌ ಭಾತ್‌’ ಎಂಬ ಹೆಸರಿನ ವಿಭಾಗವಿಲ್ಲವೆ?

ಎಷ್ಟೋ ಸಂದರ್ಭಗಳಲ್ಲಿ ಸುದ್ದಿಗೆ ಔಚಿತ್ಯಪೂರ್ಣ ದೃಷ್ಟಿಯಿಂದ ಅನ್ಯಭಾಷೆಯ ಪದಗಳ ಶೀರ್ಷಿಕೆ ಉಪಯೋಗವಾಗಬಹುದು. ಒಂದು ಉದಾಹರಣೆ - ಭಾರತ್‌ಮೆಟ್ರಿಮೊನಿಡಾಟ್‌ಕಾಮ್‌ನವರು ಕನ್ನಡ ವಧುವರರ ವಿಭಾಗವನ್ನು ಆರಂಭಿಸಿದಾಗಿನ ಸುದ್ದಿಯನ್ನು ಪ್ರಜಾವಾಣಿಯು ಬಾಕ್ಸ್‌ಐಟಂ ಆಗಿ ಪ್ರಕಟಿಸಿ ‘ಶುಭಸ್ಯ ಶೀಘ್ರಂ...’ ಎಂದು ತಲೆಬರಹ ಕೊಟ್ಟಿತ್ತು. ಶೀರ್ಷಿಕೆಯಲ್ಲಿ ಶ್ಲೇಷೆ (ಪನ್‌) ಸೇರಿದರಂತೂ ಅನ್ಯಭಾಷೆ ಅನೂಚಾನವಾಗಿ ಬಂದೇ ಬರುತ್ತದೆ. ವೆಸ್ಟ್‌ ಇಂಡೀಸ್‌ನ ಇನ್ನಿಂಗ್ಸ್‌ನಲ್ಲಿ ‘ಲಾರಾ... ಕ್ಯಾ ಮಾರಾ!’ ಮರೆತುಹೋಗುವುದುಂಟೇ? ಹಾಗೆಯೇ catchy ಹೆಡ್‌ಲೈನ್‌ಗಿನ್ನೊಂದು ಉದಾಹರಣೆ - 2002 ಡಿಸೆಂಬರ್‌ನಲ್ಲಿ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನಾಯಕತ್ವದಲ್ಲಿ ಬಿಜೆಪಿಯ ಅಭೂತಪೂರ್ವ ವಿಜಯದ ಸುದ್ದಿಗೆ ಕರ್ನಾಟಕದಲ್ಲಿ ಕನ್ನಡ ದೈನಿಕ ವಿಜಯಕರ್ನಾಟಕವು ಕೊಟ್ಟಿದ್ದ ತಲೆಬರಹ : ‘ನರೇಂದ್ರ ಮೋಡಿ’!

* * *

Coverpage of talebaraha - authored by Vishweshwar Bhatವಿಜಯಕರ್ನಾಟಕ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿರುವ ವಿಶ್ವೇಶ್ವರ ಭಟ್‌ (‘ನೂರೆಂಟು ಮಾತು’ ಅಂಕಣದ ಮೂಲಕ ದಟ್ಸ್‌ಕನ್ನಡ ಓದುಗರಿಗೂ ಪರಿಚಿತರು) ‘ತಲೆ ಬರಹ’ ಎನ್ನುವ ಪುಸ್ತಕವೊಂದನ್ನು ಬರೆದಿದ್ದಾರೆ. ವಿಜಯಕರ್ನಾಟಕವನ್ನು ವಿಜಯದತ್ತ ಒಯ್ಯಲು ಸಾರಥ್ಯ ವಹಿಸುವುದಕ್ಕೂ ಮೊದಲು ವಿಶ್ವೇಶ್ವರ ಭಟ್‌ ಕನ್ನಡಪ್ರಭದಲ್ಲಿ ಕೆಲವರ್ಷ ದುಡಿದಿದ್ದಾರೆ; ಪತ್ರಿಕೋದ್ಯಮದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಉಪಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪತ್ರಿಕೋದ್ಯಮದ ಒಳ-ಹೊರಗಿನ ಬಗ್ಗೆ ಅವರಿಗಿರುವ ಅನುಭವದೆರಕವೇ ‘ತಲೆ ಬರಹ’ ಎಂಬ ವಿಶಿಷ್ಟ ಕೃತಿ. ಭಾರತೀಯ ಭಾಷೆಗಳಲ್ಲಿ ಪತ್ರಿಕಾ ತಲೆಬರಹದ ಬಗ್ಗೆ ಪ್ರಕಟವಾಗಿರುವ ಮೊದಲ ಪುಸ್ತಕವೆಂಬ ಅಗ್ಗಳಿಕೆ ಇದರದು. ಕನ್ನಡ ಪತ್ರಿಕೆಗಳಲ್ಲಿ ತಲೆಬರಹ ಕೊಡುವ ಹೊಣೆಹೊತ್ತವರಿಗೊಂದು ಮಾರ್ಗದರ್ಶನದ ಕೈದೀವಿಗೆಯೂ ಹೌದು.

2002ರಲ್ಲಿ ಅಮೆರಿಕ ಪ್ರವಾಸದಲ್ಲಿ ವಾಷಿಂಗ್‌ಟನ್‌ಗೆ ಬಂದಿದ್ದಾಗ ಭಟ್‌ ಅವರನ್ನು ನಾನು ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ ನನಗವರು ‘ತಲೆ ಬರಹ’ ಪುಸ್ತಕದ ಪ್ರತಿಯನ್ನು ಸ್ನೇಹಪೂರ್ವಕವಾಗಿ ಕೊಟ್ಟಿದ್ದಾರೆ. ಅದನ್ನು ನಾನು ಓದಿ ಆನಂದಿಸಿದ್ದೇನೆ. ಪತ್ರಿಕಾರಂಗದ ಬಗ್ಗೆ ವಿಶೇಷ ಒಲವು-ಆಸಕ್ತಿಗಳಿರುವ ನನಗೆ ಈ ಪುಸ್ತಕ ಬಹಳ ಇಷ್ಟವಾಗಿದೆ. ತಲೆಬರಹದ ಮಹತ್ವದ ಬಗ್ಗೆ ಆ ಪುಸ್ತಕದಿಂದ ಒಂದೆರಡು ಸ್ಯಾಂಪಲ್‌ ನೋಡಿ:

‘ಉತ್ತಮ ಶೀರ್ಷಿಕೆಯೆನಿಸಬೇಕಿದ್ದರೆ ಅದಕ್ಕೆ ಓದುಗರನ್ನು ಮೋಡಿ ಮಾಡುವ, ಸಮ್ಮೋಹನ ಮಾಡುವ ಅಥವಾ ಮನಸ್ಸನ್ನು ಹೈಜಾಕ್‌ ಮಾಡಿಬಿಡುವ ತಾಕತ್ತಿರಬೇಕು. ಸ್ಥಿರಶೀರ್ಷಿಕೆಯ ಹೆಸರು (ಅಥವಾ ಸುದ್ದಿಯ ತಲೆಬರಹವೂ ಅಷ್ಟೆ) ಓದುಗನಿಗೆ ನೀಡಿದ ಆತ್ಮೀಯ ಆಹ್ವಾನದಂತಿರಬೇಕು. ಸುದ್ದಿಯನ್ನು ಒಳಗೆ ಅಡಗಿಸಿಕೊಂಡ ಸಿಹಿಯಂತಿರಬೇಕು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಶೀರ್ಷಿಕೆ, ರವಾಲಾಡುಗೆ ಮೇಲಿನಿಂದ ಅಂಟಿಕೊಂಡ ದ್ರಾಕ್ಷಿಯಂತೆ ಕಂಗೊಳಿಸಬೇಕು!’ ಹಾಗೆಯೇ Headlines should tell the story, but more important they should sell the story.

ಕೆಲವು ಆಕರ್ಷಕ, ಚಿರಕಾಲ ನೆನಪುಳಿಯುವ ತಲೆಬರಹಗಳ ನಿದರ್ಶನಗಳೂ ಈ ಪುಸ್ತಕದಲ್ಲಿ ಹೇರಳವಾಗಿ ದೊರಕುತ್ತವೆ:

  • ಡಾ। ಶಿವರಾಮ ಕಾರಂತ ನಿಧನರಾದಾಗ ಆ ವಾರ್ತೆಗೆ, ಅವರ ಕಾದಂಬರಿಯ ಹೆಸರನ್ನೇ ಬಳಸಿ ಬರೆದ ತಲೆಬರಹ - ‘ಕಡಲ ತೀರದ ಭಾರ್ಗವ ಮರಳಿ ಮಣ್ಣಿಗೆ’.
  • ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಭಾರತದ ವಿ.ವಿ.ಎಸ್‌ ಲಕ್ಷ್ಮಣ್‌ ದ್ವಿಶತಕ ಬಾರಿಸಿದಾಗ - ‘ವೆರಿ ವೆರಿ ಸ್ಪೆಷಲ್‌ ಲಕ್ಷ್ಮಣ’. ಹಾಗೆಯೇ ಶ್ರೀಲಂಕಾದ ರೋಶನ್‌ ಮಹಾನಾಮಾ ಮತ್ತು ಸನತ್‌ ಜಯಸೂರ್ಯ ಇಬ್ಬರೂ ಸೇರಿ ರನ್‌ಗಳ ಬೃಹತ್‌ ಮೊತ್ತ ಪೇರಿಸಿದಾಗ - ‘ಜಯಕ್ಕೊಬ್ಬನೆ ಸೂರ್ಯ; ಭಾರತಕ್ಕೆ ಮಹಾ ನಾಮ!’
  • ಗಣೇಶಚತುರ್ಥಿಯ ಮುನ್ನಾದಿನ ಬೆಂಗಳೂರಲ್ಲಿ ಬಿರುಸಿನ ಜಡಿಮಳೆ ಸುರಿದಾಗ - ‘ಗೌರಿಯ ಹಬ್ಬಕ್ಕೆ ಗಂಗೆಯ ಮುನಿಸು’
  • ಕನ್ನಡ ಚಿತ್ರತಾರೆ ಅಂಜಲಿ ತಾನು ಬಟ್ಟೆಬಿಚ್ಚಿ ಅಭಿನಯಿಸಲು ಹಿಂದುಮುಂದು ನೋಡುವುದಿಲ್ಲ ಎಂದ ಸಂದರ್ಶನ ಲೇಖನಕ್ಕೆ ತಲೆಬರಹ - ‘ಬಟ್ಟೆ ಬಿಚ್ಚಲು ನಾನೇಕೆ ಅಂಜಲಿ’.

* * *

‘ತಲೆಬರಹ ಕೇವಲ ಶಬ್ದಪುಂಜವಲ್ಲ. ಓದುಗರನ್ನು ಕ್ರಿಯೆಗೆ, ಒಂದು ಅನುಭವಕ್ಕೆ ಈಡು ಮಾಡುವ ಶಬ್ದವರ್ಧಕಗಳು. ತಲೆಬರಹವನ್ನು ಓದುತ್ತಿದ್ದಂತೆ ಓದುಗನಲ್ಲಿ ಕ್ರಿಯೆ ಸಂಚಾರವಾಗಬೇಕು. ರಕ್ತಸಂಚಾರ ತೀವ್ರವಾಗಬೇಕು. ಶೀರ್ಷಿಕೆ ನೋಡಿದಾಕ್ಷಣ ವೀಳ್ಯ ಜಗಿಯುತ್ತಿರುವವ ಒಂದು ಕ್ಷಣ ಜಗಿಯುವುದನ್ನು ಬಿಟ್ಟು ಬಾಯ್ತೆರೆದು ಬಿಡಬೇಕು! ಅದು ಒಳ್ಳೆಯ ಶೀರ್ಷಿಕೆ ಲಕ್ಷಣ. ಉತ್ತಮ ತಲೆಬರಹ ಓದುಗನಿಗೆ ಮೈಲ್ಡ್‌ಶಾಕ್‌ ಕೊಡುತ್ತದೆ. ಓದುಗನ ಮುಖಕ್ಕೊಮ್ಮೆ ತಣ್ಣೀರು ಸಿಂಪಡಿಸಿದ ಅನುಭವವನ್ನುಂಟುಮಾಡುತ್ತದೆ....’

ನಿಮಗೆ ಹೀಗೆ ಅನುಭವವಾಗಿದೆಯೆ? ‘ತಲೆಬರಹ’ದ ಬಗ್ಗೆ ನಿಮ್ಮ ತಲೆಯಲ್ಲೇನಾದರೂ ಹೊಳೆದರೆ, ಅದನ್ನು ಇತರರಿಗೂ ತಿಳಿಸುವ ಇಚ್ಛೆಯಾದರೆ ಬರಹಕ್ಕಿಳಿಸಿ; srivathsajoshi@yahoo.com ವಿಳಾಸಕ್ಕೆ ಕಳಿಸಿಕೊಡಿ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more