• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಲವು ಪ್ರಥಮಗಳ ‘ವಿಚಿತ್ರಾನ್ನ’ ದಲ್ಲಿ ಇನ್ನೊಂದು ಪ್ರಯೋಗ. ಎಂದಿನಂತೆ ಸುಸಜ್ಜಿತ ಪಾಕಶಾಲೆ ಇದ್ದೇ ಇದೆ. ‘ವಿಚಿತ್ರಾನ್ನ’ಕ್ಕಾಗಿ ಹಸಿದ ಓದುಗರು ನೀವಿದ್ದೀರಿ ; ಆದರೆ ಅಡುಗೆ ಮಾತ್ರ ಸಿದ್ಧವಿಲ್ಲ ! ರುಚಿಗಟ್ಟು ಹಾಗೂ ಸ್ವಾರಸ್ಯಕರ ದಿನಸಿಗಳು ಸಿದ್ಧವಾಗಿವೆ. ಅಡುಗೆಯನ್ನು ನೀವೇ ಮಾಡಿಕೊಳ್ಳಿ ! ಅಕ್ಷರಪಾಕ ಕೋವಿದರಿಗೆ ಶುಭವಾಗಲಿ.

By Staff
|
Srivathsa Joshi *ಶ್ರೀವತ್ಸ ಜೋಶಿ

‘ವಾರ ವಾರವೂ ವಿಚಿತ್ರಾನ್ನಕ್ಕೆ ಅದೆಲ್ಲಿಂದ ವಿಷಯ, ಮಾಹಿತಿ ಕಲೆಹಾಕುತ್ತೀರಿ?’ ಎಂಬುದು ನಿಮ್ಮಲ್ಲಿ ಹೆಚ್ಚಿನವರು ಕೇಳುವ ಸಾಮಾನ್ಯ ಪ್ರಶ್ನೆ. ಅದಕ್ಕೆ ಉತ್ತರವೇನೊ ತೀರಾ ಸುಲಭದಲ್ಲಿ ಇಲ್ಲವೆನ್ನುವುದು ಹೌದಾದರೂ ಸ್ವಲ್ಪ ಆಲೋಚನೆ ಮಾಡಿದರೆ, ವಿಚಿತ್ರಾನ್ನ ತಯಾರಿಸಲು ಬೇಕಷ್ಟು ವಿಷಯಗಳು ನಮ್ಮ ಆಸುಪಾಸಿನಲ್ಲೇ ಇವೆ. ಉದಾಹರಣೆಗೆ ನಿಮ್ಮ ಕೈಬೆರಳುಗಳನ್ನೇ ತೆಗೆದುಕೊಳ್ಳಿ. ಸದ್ಯಕ್ಕೆ ಮೌಸ್‌ನ ಮೇಲೆ ಪವಡಿಸಿರುವ ಅವೂ ವಿಚಿತ್ರಾನ್ನಕ್ಕೆ ವಿಷಯವಾಗಬಲ್ಲವು ಎಂದರೆ ನಂಬುತ್ತೀರಾ?

ಆಯ್ತು, ವಿಷಯವನ್ನೇನೋ ಆರಿಸಿಕೊಂಡೆವು. ಇನ್ನು ಆ ವಿಷಯದ ಮೇಲೆ ಲಘುಪ್ರಬಂಧವನ್ನು ಹೇಗಪ್ಪಾ ಬರೆಯುವುದು ಎಂಬುದು ಮುಂದಿನ ಪ್ರಶ್ನೆ. ಅದೂ ಸುಲಭವೇ! ‘ಬೆರಳು’ ಅನ್ನುವ ಪದದ ಹಿಂದೆಯೇ ನಿಮಗೆ ಏನೇನೆಲ್ಲ ಹೊಳೆಯುತ್ತದೆ ಎಂಬುದನ್ನು ಪಟ್ಟಿ ಮಾಡುತ್ತ ಹೋಗಿ (ಮನದಲ್ಲೇ, ಅಥವಾ ಪೇಪರ್‌ ಮೇಲೆ ಬರೆದಿಟ್ಟುಕೊಳ್ಳಿ, ಅಥವಾ ಕಂಪ್ಯೂಟರ್‌ನಲ್ಲಿ ನೋಟ್‌ಪ್ಯಾಡ್‌ನಲ್ಲಿ ದಾಖಲಿಸಿಕೊಳ್ಳಿ. ಕನಿಷ್ಠ ಹತ್ತು-ಹನ್ನೆರಡು ಗುಂಡುಬಿಂದು (bullet point)ಗಳು ಜಮೆಯಾದರೆ ಸಾಕು. ಬೇಕಿದ್ದರೆ ನಿಮ್ಮ ಲಿಸ್ಟನ್ನು ಒಂದು ನಿರ್ದಿಷ್ಟ ಕ್ರಮದಲ್ಲಿ ಜೋಡಿಸಿಕೊಳ್ಳಿ. ಈಗ ಈ ಗುಂಡುಬಿಂದುಗಳನ್ನೆಲ್ಲ ಚೆನ್ನಾಗಿ ಹ(ಹು)ರಿದು ನವಿರಾದ ಹಾಸ್ಯದ ಒಂದು ಒಗ್ಗರಣೆ ಕೊಟ್ಟು ಬಿಡಿ. ಅದೋ, ಘಮಘಮ ವಿಚಿತ್ರಾನ್ನ ತಯಾರ್‌!

ಸರಿ, ಈ ಸಲ ಹಾಗಿದ್ದರೆ ‘ಬೆರಳು’ ವಿಷಯದ ಮೇಲೆ ವಿಚಿತ್ರಾನ್ನ ತಯಾರಿಸಲು ಕಚ್ಚಾ ಸಾಮಗ್ರಿಯನ್ನೆಲ್ಲ ಒಟ್ಟುಮಾಡಲು ನಿಮಗೆ ನೆರವಾಗುತ್ತೇನೆ. ಇದನ್ನು ಬಳಸಿ ನೀವೇ ವಿಚಿತ್ರಾನ್ನ ಕಲಸಿ ತಿಂದರಾಯಿತು. ಒಂದು ನಮೂನೆಯಲ್ಲಿ ಎಂ.ಟಿ.ಆರ್‌ ರೆಡಿಮಿಕ್ಸ್‌ ಇದ್ದ ಹಾಗೆ. ಅಥವಾ ಪೂಜಾರಿಗೆ/ಪುರೋಹಿತರಿಗೆ ಪರಿಚಾರಕನಾಗಿರುವವನು ಪೂಜಾಸಾಮಗ್ರಿ-ಪರಿಕರಗಳನ್ನೆಲ್ಲ ವ್ಯವಸ್ಥಿತವಾಗಿ ಅಣಿಮಾಡಿಕೊಟ್ಟಂತೆ. ಪಂಚತಾರಾ ಹೊಟೇಲಲ್ಲಿ ವೈಟರ್ರು, ಡಿಕಾಕ್ಷನ್‌-ಸಕ್ಕರೆ (ಸ್ಯಾಕ್ರೀನ್‌?)-ಹಾಲು ಇವನ್ನೆಲ್ಲ ಪ್ರತ್ಯೇಕವಾಗಿ ಸರಬರಾಜಿಸಿ ನೀವೇ ಕಾಫಿ ಮಿಕ್ಸಿಸಬೆಕಾಗಿ ಬರುವಂತೆ - ಎಂದರೂ ಸರಿಯೇ. ವಿಚಿತ್ರಾನ್ನದ ನವೀನ ಪ್ರಯೋಗಗಳಲ್ಲಿ ಇದೂ ಒಂದು. ನೋಡಿ ತಿಳಿ, ಮಾಡಿ ಕಲಿ - Do it yourself!

‘ಬೆರಳು’ ಬಗೆಗಿನ ಈ ಕೆಳಗಿನ (ಎರಡು ಡಜನ್‌ಗೂ ಹೆಚ್ಚು) ಕಚ್ಚಾ ಸಾಮಗ್ರಿಯನ್ನೇ ಭಕ್ಷಿಸಿ ಬೆರಳೂ ಕಚ್ಚದಿರಿ, ಜೋಕೆ!

 • ಮೊನ್ನೆ ಹೊಸವರ್ಷದಾರಂಭದಿಂದ ಅಮೆರಿಕೆಗೆ ಬರುವ ಪ್ರತಿಯಾಬ್ಬ ಯಾತ್ರಿಕನಿಗೂ (ಕೆಲವು ರಾಷ್ಟ್ರಗಳ ಪ್ರಜೆಗಳನ್ನು ಹೊರತುಪಡಿಸಿ) ವಿಮಾನ ನಿಲ್ದಾಣದಲ್ಲಿ ಇಳಿಯುತ್ತಲೇ ಬೆರಳಚ್ಚನ್ನು (ಫಿಂಗರ್‌ ಪ್ರಿಂಟ್ಸ್‌) ಒಪ್ಪಿಸಿದ ಮೇಲೆಯೇ ಕಸ್ಟಮ್ಸ್‌ ಕ್ಲಿಯರೆನ್ಸ್‌.
 • ಕನ್ನಡದಲ್ಲಿ , ಫಿಂಗರ್‌ಪ್ರಿಂಟ್ಸ್‌ನ ಮೆಷಿನ್‌ಗೆ ಬೆರಳಚ್ಚು ಯಂತ್ರ ಎನ್ನಬೇಕೋ ಅಥವಾ ಟೈಪರೈಟರ್‌ಗೆ ಹಾಗೆನ್ನಬೇಕೋ?
 • ಕೈಬೆರಳುಗಳ ತುದಿಯಲ್ಲಿ ಶಂಖ ಮತ್ತು ಚಕ್ರಗಳ ರಚನೆ. ಹತ್ತೂ ಬೆರಳುಗಳಿಗೆ ಚಕ್ರ ರಚನೆಯಿದ್ದರೆ ಚಕ್ರವರ್ತಿಯಾಗುವ ಯೋಗ.
 • ಕನ್ನಡದಲ್ಲಾದರೆ ಕೈಗಳದ್ದೂ ಕಾಲ್ಗಳದ್ದೂ ‘ಬೆರಳು’ಗಳೇ! ಇಂಗ್ಲಿಷ್‌ನಲ್ಲಾದರೆ ಅನುಕ್ರಮವಾಗಿ Fingers and Toes.
 • ಕೈಬೆರಳುಗಳಿಗೆ ಸಂಸ್ಕೃತ ಹೆಸರುಗಳು - ಅಂಗುಷ್ಠ, ತರ್ಜನಿ, ಮಧ್ಯಮಾ, ಅನಾಮಿಕಾ ಮತ್ತು ಕನಿಷ್ಠಿಕಾ.
 • ‘ಪುರಾ ಕವೀನಾಂ ಗಣನಾ ಪ್ರಸಂಗೇ ಕನಿಷ್ಠಿಕಾಧಿಷ್ಠಿತ ಕಾಲಿದಾಸಃ । ಅದ್ಯಾಪಿ ತತ್ತುಲ್ಯ ಕವೇರಭಾವಾತ್‌ ಅನಾಮಿಕಾ ಸಾರ್ಥವತೀ ಬಭೂವ ।। ’ - ಒಮ್ಮೆ ಮಹಾನ್‌ ಕವಿಗಳ ಗಣನೆಯನ್ನು ಪ್ರಾರಂಭಿಸಿದರಂತೆ. ಕಿರುಬೆರಳಿಂದ ಗಣನೆ ಆರಂಭ. ಒಂದು ಕಾಳಿದಾಸ. ಎರಡನೆಯವನು? ಕಾಳಿದಾಸನ ಹತ್ತಿರಕ್ಕೆ ಬರುವಂಥವರೂ ಯಾರೂ ಇಲ್ಲ. ಹಾಗಾಗಿಯೇ ನಂತರದ ಬೆರಳಿಗೆ ‘ಅನಾಮಿಕಾ’ ಹೆಸರು ಸಾರ್ಥಕ.
 • ಹರಿಕಥಾ ಕಾಲಕ್ಷೇಪದಲ್ಲಿ ಹರಿದಾಸರಿಂದ, ಪುರಾತನ ಕಾಲದಲ್ಲಿದ್ದ ‘ವರ್ಣಾಶ್ರಮ’ ಪದ್ಧತಿಯ ವಿವರಣೆ - ಕೈಬೆರಳುಗಳ ಸುಲಭಸೂತ್ರದೊಂದಿಗೆ. ದಾರಿಯನ್ನು ತೋರುವವ ಬ್ರಾಹ್ಮಣ - ತೋರ್ಬೆರಳು. ಮಹಾನ್‌ ಶಕ್ತಿವಂತ ಕ್ಷತ್ರಿಯ - ಮಧ್ಯದ ಬೆರಳು. ಧನಕನಕವುಳ್ಳ ವ್ಯಾಪಾರಿ ವೈಶ್ಯ - ಉಂಗುರದ ಬೆರಳು. ‘ಸ್ಕಾವೆಂಜರ್‌’ ಕೆಲಸದ ಶೂದ್ರ - ಮೂಗು/ಕಿವಿಗಳನ್ನು ಸ್ವಚ್ಛಗೊಳಿಸುವ ಕಿರುಬೆರಳು!
 • ‘ಹೆಬ್ಬೆಟ್ಟು’ ಅನ್ನುವುದು ಕರ್ಮಧಾರಯ ಸಮಾಸಪದ ಎನ್ನುವುದನ್ನೂ ಅರಿಯದ ನತದೃಷ್ಟ ನಿರಕ್ಷರಿ ಹೆಬ್ಬೆಟ್ಟಿಗರು.
 • ದೇಶಾದ್ಯಂತ, ಮತದಾನದ ಸಮಯದಲ್ಲಿ ಮತ ಚಲಾಯಿಸಿದ ಗುರುತಾಗಿ, ನೇರಳೆ ಶಾಯಿಯನ್ನು (ಮೈಸೂರಲ್ಲಿ ತಯಾರಾದದ್ದು) ಹಚ್ಚಿಸಿಕೊಳ್ಳುವ ಎಡಗೈ ತೋರ್ಬೆರಳು.
 • ಚುನಾವಣೆಯಲ್ಲಿ ಗೆದ್ದುಬಂದ ಅಭ್ಯರ್ಥಿ ವಿಜಯದ ಸಂಕೇತವಾಗಿ ತೋರಿಸುವ ಎರಡು ಬೆರಳುಗಳು.
 • ಯಾರ ಮೇಲಾದರೂ ‘ಬೆರಳು ತೋರಿಸುವಾಗ’ (pointing fingers) ಮೂರು ಬೆರಳುಗಳು ತನ್ನಡೆಗೇ ತಿರುಗಿರುತ್ತವೆ!
 • ಕೋಲ್ಗೇಟ್‌ ಕಂಪೆನಿ ಆ್ಯಂಗ್ಯುಲರ್‌ ಟೂಥ್‌ಬ್ರಷ್‌ಗಳನ್ನು ಮಾರುಕಟ್ಟೆಗೆ ತಂದಾಗಿನ ಕನ್ನಡ ಜಾಹೀರಾತು - ‘ನಿಮ್ಮ ಕೈಬೆರಳೇ ಬ್ರಷ್‌ ಆಗಿರುತ್ತಿದ್ದರೆ...?!’
 • Getit Yellowpages ನ ಲಾಂಛನ (ಲೊಗೊ) - ಡೈರೆಕ್ಟರಿಯಲ್ಲಿ ಎಂಟ್ರಿ ಹುಡುಕುತ್ತಿರುವ ಎರಡು ಕೈಬೆರಳುಗಳು!
 • ಗೋವರ್ಧನಗಿರಿಯನ್ನು ಕೃಷ್ಣ ಎತ್ತಿದ್ದು? ಕಿರುಬೆರಳಿನಲ್ಲಿ !
 • ಡಿಕಿ ಬರ್ಡ್‌ ಇರಲಿ, ಸ್ಟೀವ್‌ ಬಕ್ನರ್‌ ಇರಲಿ, ನಮ್ಮವರೇ ಆದ ವೆಂಕಟರಾಘವನ್‌ ಇರಲಿ - ಕ್ರಿಕೆಟಲ್ಲಿ ಅಂಪೈರ್‌ ಆದವನು ತೋರ್ಬೆರಳನ್ನು ಎತ್ತಿದನೆಂದರೆ ರಾ‘ವಾಲ್‌’ ದ್ರಾವಿಡ್‌ ಸಹಿತ ಕ್ರೀಸ್‌ ಬಿಟ್ಟು ಪೆವಿಲಿಯನ್‌ಗೆ ಮರಳಬೇಕು!
 • ಕಿಲಾಡಿ ಹುಡುಗ ಆರು ವರ್ಷದ ಕಿಟ್ಟಿ, ‘ನಿನ್ನ ಎರಡೂ ಕೈಗಳವು ಸೇರಿ ಒಟ್ಟು ಎಷ್ಟು ಬೆರಳುಗಳು?’ ಎಂಬ ಪ್ರಶ್ನೆಗೆ ಟೀಚರ್‌ ಕಣ್ಣೆದುರೇ ಬೆರಳುಗಳನ್ನು ಒಂದೊಂದಾಗಿ ಎಣಿಸಿದರೆ ಬೈಯ್ದಾರು ಎಂದು ಚಡ್ಡಿಯ ಎರಡು ಕಿಸೆಗಳಲ್ಲಿ ಕೈಗಳನ್ನಿಟ್ಟು ಅಲ್ಲಿಂದಲೇ ಎಣಿಸಿ ‘ಒಟ್ಟು 11 ಬೆರಳು!’ ಎಂದದ್ದು!
 • ಮಸಾಲೆದೋಸೆ/ಉತ್ತಪ್ಪ ಇತ್ಯಾದಿಯನ್ನು ಫೋರ್ಕ್‌-ಸ್ಪೂನ್‌ಗಳೊಂದಿಗೆ ಸರ್ಕಸ್‌ ಮಾಡಿ ತಿನ್ನುವುದು, ಪೊಗದಸ್ತಾಗಿ ಕೈಬೆರಳುಗಳಿಂದ ತಿನ್ನುವುದಕ್ಕೆ ಯಾವಾಗಾದರೂ ಸಾಟಿಯಾದೀತೇ?
 • ಹೈ-ಫೈ ರೆಸ್ಟೋರೆಂಟ್‌ಗಳಲ್ಲಿ ಊಟ-ತಿಂಡಿ ಆದಮೇಲೆ ‘ಬೆರಳು ಬೋಗುಣಿ’ (finger bowl) ತುಂಬ ಬಿಸಿನೀರು, ಅದರಲ್ಲಿ ಲಿಂಬೆಹಣ್ಣಿನ ಹೋಳು ಬೇರೆ.
 • ಇಂಗ್ಲಿಷ್‌ ಬೆಂಡೆಕಾಯಿಯನ್ನು ಕನ್ನಡೀಕರಿಸಿದರೆ ‘ಮಹಿಳೆಯ ಬೆರಳು’?, ಮೆಕ್‌ಡೊನಾಲ್ಡ್‌ನ French Fries (Finger Chips)ಗೆ ಕನ್ನಡ ಪದ?
 • ‘ಬೆರಳು ತೋರಿಸಿದರೆ ಹಸ್ತ ನುಂಗುತ್ತಾನೆ...’, ‘ಐದೂ ಬೆರಳು ಒಂದೇ ಸಮ ಇರೋಲ್ಲ...’ - ಕನ್ನಡ ಗಾದೆಗಳು.
 • ‘ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ...’ ಪುರಂದರದಾಸ ರಚಿತ ಪದ್ಯದಲ್ಲಿ ಬರುವ ಸಾಲು - ‘ಬಗೆಬಗೆ ಹೊನ್ನಮುದ್ರಿಕೆಯಿಟ್ಟ ಬೆರಳು...’
 • ಮೊನ್ನೆ ತಾನೆ ನಮ್ಮನ್ನಗಲಿದ ದಿ। ಕೆ. ಎಸ್‌. ನ. ಅವರ ಕವಿತೆಯಲ್ಲಿ - ‘ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ ಬಂಗಾರವಿಲ್ಲದ ಬೆರಳು...’
 • ಯಾವುದೇ ಸಂಗೀತ ವಾದ್ಯವಾದರೂ, ಬೆರಳುಗಳಿಲ್ಲದೆ ಸ್ವರಮಾಧುರ್ಯವೆಲ್ಲಿಂದ? ಅಕಸ್ಮಾತ್‌ ಒಂದು ಬೆರಳು ಕತ್ತರಿಸಿದರೂ ಆ ಕಲಾವಿದ ‘ಆ ಆಆ..’ ಎಂದು ಹಾಡುಗಾರಿಕೆ ಆರಂಭಿಸಬೇಕಾದೀತು!
 • ಶ್ಯಾಡೋ ‘ಪ್ಲೇ’ಯಲ್ಲಿ ಕೈಬೆರಳುಗಳೇ ಅಲ್ಲವೇ ‘ಪಾತ್ರ’ ವಹಿಸುವುದು?
 • ಬೋರ್‌ ಹೊಡೆಯತೊಡಗಿ ಬೆರಳುಗಳ ಲಟಿಕೆ ಮುರಿಯಲಾರಂಭಿಸಿದಿರಾ? ಮುಗಿಯಿತು ಬಿಡಿ!
* * *

ಕೊನೆಯಲ್ಲಿ ಪ್ರಶ್ನೆ ಕೇಳುವುದನ್ನೂ ಮರೆಯುವುದು ಬೇಡ! ಇಲ್ಲಿದೆ ನೋಡಿ ಈ ವಾರದ ಪ್ರಶ್ನೆ:

ಮೊನ್ನೆ ಡಿಸೆಂಬರ್‌ 29ರಿಂದ ಕುವೆಂಪು ಶತಮಾನೋತ್ಸವ ವರ್ಷ ಆರಂಭವಾಗಿದೆ. ಕನ್ನಡಕ್ಕೆ ಜ್ಞಾನಪೀಠಿಕೆ ಬರೆದ (ಅಂದರೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ಗಳಿಸಿಕೊಟ್ಟ) ಕುವೆಂಪು ಅವರನ್ನೂ, ಇವತ್ತಿನ ವಿಚಿತ್ರಾನ್ನದ ಥೀಮ್‌ ಜತೆಗೇ ಸ್ಮರಿಸಿದರೆ ನಿಮಗೇನಾದರೂ ನೆನಪಾಗುತ್ತದೆಯೇ? ಹಿಂಟ್‌ ಬೇಕಿದ್ದರೆ ತಗೊಳ್ಳಿ - ‘ಏಕಲವ್ಯ’. ಈಗಲಾದರೂ ಉತ್ತರ ಹೊಳೆದರೆ ತತ್‌ಕ್ಷಣವೇ (srivathsajoshi@yahoo.com) ವಿಳಾಸಕ್ಕೆ ಬರೆಯುತ್ತೀರಾ?

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more