ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಜುಟ್ಟು’ ಹಿಡಿದು ಜೋತಾಡುತ್ತಾ ಜೋಕಾಲಿಯಾಡುತ್ತಾ...

By Super
|
Google Oneindia Kannada News

ಗಿನಕಾಯಿ ಜುಟ್ಟು ಲೇಖನ ಓದಿದಾಗ ನನ್ನ ನೆನಪು 30 ವರ್ಷ ಹಿಂದಕ್ಕೆ ಓಡಿತು. ನಾನು ಹರಿಹರದಲ್ಲಿ ಇದ್ದಾಗ (1975) ನಮ್ಮ ಮನೆಯ ಪಕ್ಕ ಮಾಲತೇಶ ನಾಡಿಗ್‌ ಎಂಬ ಹೆಸರಿನ ವ್ಯಕ್ತಿ ಇದ್ದರು. ಅವರು ಕಟ್ಟಾ ಬ್ರಾಹ್ಮಣರು ಮತ್ತು ತುಂಬಾ ಸಂಪ್ರದಾಯಸ್ಥರು. ಮನೆಯಲ್ಲಿ ನಿತ್ಯ ಪೂಜಾವಿಧಿ ಪೂರೈಸಿ ಆನಂತರ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದ ನಂತರವೇ ಬಾಯಲ್ಲಿ ಒಂದು ತೊಟ್ಟು ನೀರು ಹಾಕಿಕೊಳ್ಳುತ್ತಿದ್ದರು. ಆನಂತರ ಕೆಲಸಕ್ಕೆ ಹೋಗುತ್ತಿದ್ದರು.

ನಾಡಿಗರು ಜುಟ್ಟು ಬಿಟ್ಟಿದ್ದರು. ಆದರೆ ತಾವು ಜುಟ್ಟು ಬಿಟ್ಟಿರುವುದನ್ನು ಅವರು ಒಪ್ಪಿಕೊಳ್ಳುತ್ತಿರಲಿಲ್ಲ. ಏಕೆಂದರೆ ಜುಟ್ಟನ್ನೂ ಸಂಸ್ಕೃತದಲ್ಲೇ ಹೇಳಬೇಕು ಎನ್ನುವುದು ಅವರ ವಾದ. ಹಾಗಾಗಿ ಅವರಿಗೆ ಜುಟ್ಟು ಇರಲಿಲ್ಲ, ಅವರ ನೆತ್ತಿಯಮೇಲೆ ಶಿಖರಪ್ರಾಯವಾಗಿ ಕಂಗೊಳಿಸುತ್ತಿದುದು ಶಿಖೆ ಮಾತ್ರ.

ನಾಡಿಗರು ಮೈಸೂರು ಕಿರ್ಲೋಸ್ಕರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲರೂ ಕ್ರಾಪು ಬಿಟ್ಟುಕೊಂಡಿರುವಾಗ ಇವರೊಬ್ಬರೇ ಶಿಖೆ ಬಿಟ್ಟುಕೊಂಡು ಫ್ಯಾಕ್ಟರಿಗೆ ಬರುತ್ತಿದ್ದದ್ದು ಢಾಳವಾಗಿ ಎದ್ದು ಕಾಣುತ್ತಿತ್ತು. ಬರುಬರುತ್ತಾ ಫ್ಯಾಕ್ಟರಿಯಲ್ಲಿ ನಾಡಿಗರ ಜುಟ್ಟು ಅನೇಕರ ಲೇವಡಿಗೆ, ಬಹುತೇಕರ ಅನುಕಂಪದ ಮಾತುಕತೆಗಳಿಗೆ ಆಹಾರವಾಯಿತು.

ಒಂದು ದಿನ ನಾಡಿಗರಿಗೆ ಎನನ್ನಿಸಿತೋ ಏನೋ, ನೀಟಾಗಿ ಕ್ರಾಪು ಬಿಡಿಸಿಕೊಂಡು ಆಫೀಸಿಗೆ ಬಂದರು. ಸಹೋದ್ಯೋಗಿಗಳಿಗೆ ಆಶ್ಚರ್ಯವಾಯಿತು. ಆಫೀಸಿನ ಶಿಷ್ಟಾಚಾರಕ್ಕೆ ಅನುಗುಣವಾಗಿ ನಾಡಿಗರು ಕ್ರಾಪು ಬಿಟ್ಟಿದ್ದರೂ, ನೆತ್ತಿಯ ತುದಿಯಲ್ಲಿ ಸಣ್ಣದಾಗಿ ಜುಟ್ಟು ಇಟ್ಟುಕೊಂಡಿದ್ದರು. ಅವರ ಪ್ರಕಾರ, ಕ್ರಾಪು ನೋಡುವವರಿಗೆ, ಶಿಖೆ ತಮಗೆ.

ಹರಿಹರ ಪಕ್ಕದ ರಾಣೆಬೆನ್ನೂರು ಸಮೀಪದ ದೇವರಗುಡ್ಡದಲ್ಲಿ ಮಾಲತೇಶ ನೆಲೆ ನಿಂತಿದ್ದಾನೆ. ಹಾಗಾಗಿ ಅವನಿಗೆ ನಡೆದುಕೊಳ್ಳುವ ಈ ಪ್ರದೇಶದ ಕುಟುಂಬಗಳಲ್ಲಿ ಮಾಲತೇಶ ಎನ್ನುವುದು ತುಂಬಾ ಕಾಮನ್‌ ಹೆಸರು. ಹರಿಹರದಲ್ಲಿ ಅನೇಕ ಮಂದಿ ಮಾಲತೇಶರು ಇದ್ದಾರೆ. ಆದ್ದರಿಂದ ಒಬ್ಬೊಬ್ಬರಿಗೆ ಒಂದೊಂದು ಅಡ್ಡ ಹೆಸರು ಅಂಟಿಕೊಂಡಿರುತ್ತದೆ. ನಮ್ಮ ಪಕ್ಕದ ಮನೆ ಮಾಲತೇಶರ ಗುರುತು ಹೇಳಬೇಕಾದರೆ ಅವರ ಹೆಸರಿನ ಹಿಂದೆ ' ಕ್ರಾಪೊಳಗೆಜುಟ್ಟು ಮಾಲತೇಶಾ' ಹಚ್ಚಬೇಕಾಗುತ್ತಿತ್ತು. ಇಲ್ಲದಿದ್ದರೆ ಮಂದಿಗೆ ಗೊತ್ತಾಗುತ್ತಿರಲಿಲ್ಲ.

- ರವೀಂದ್ರ ಸಾಠೆ, ಧಾರವಾಡ
ಹಲೋ,
ಜುಟ್ಟು ಎಂದರೆ ದಡ್ಡ, ಪೆದ್ದ, ಬಲಹೀನ, ಧೈರ್ಯವಿಲ್ಲದವನು ಎನ್ನುವ ಅರ್ಥದಲ್ಲಿ ಬಳಸುತ್ತಾರೆ. ಸಾಮಾನ್ಯವಾಗಿ ಬೆಂಗಳೂರಿನ ಯುವಕರು ಈ ಪದ ಬಳಸುತ್ತಾರೆ. ಈ ಪದ (slang) ಹೇಗೆ ಬಳಕೆಗೆ ಬಂತು ಎಂದು ಗೊತ್ತಿಲ್ಲ. ಗೊತ್ತಿದ್ದವರು ತಿಳಿಸಿ.

- ಪ್ರವೀಣ್‌, ಮಾವಳ್ಳಿ
ತೆಂಗಿನ ಮರ, ತೆಂಗಿನ ಕಾಯಿ, ಎಳನೀರು, ತೆಂಗಿನ ಗರಿ ಹೀಗೆ ಬಹು ಉಪಯೋಗಿಯಾಗಿರುವ ಆಧುನಿಕ ಕಲ್ಪವೃಕ್ಷ ತೆಂಗು ಜನಜೀವನದೊಂದಿಗೆ ಬೆರೆತು ಹೋಗಿದೆ. ನಾವೆಲ್ಲರೂ ಗಂಭೀರವಾಗಿ ಈವರೆಗೆ ಯೋಚಿಸದ ತೆಂಗಿನ ಜುಟ್ಟಿನ ಬಗೆಗೆ ವಿಚಿತ್ರಾನ್ನದಲ್ಲಿ ಶ್ರೀವತ್ಸ ಜೋಷಿ ಬರೆದಿದ್ದಾರೆ. ಎಲ್ಲವನ್ನು ಓದಿದ ಮೇಲೆ, ಹೌದಲ್ಲ ಎಷ್ಟೊಂದು ಹೊಸ ವಿಚಾರಗಳಿವೆ ಅನ್ನಿಸಿತು.

ಪೂಜೆಗೆ ಪಾತ್ರವಾಗಿರುವ ತೆಂಗಿನ ಕಾಯಿಗೆ ಜುಟ್ಟೇ ಅಲಂಕಾರ ಭೂಷಣ. ಹೀಗಾಗಿ ಜುಟ್ಟಿನಿಂದ ತೆಂಗಿನ ಕಾಯಿಗೆ ಮರ್ಯಾದೆ ದಕ್ಕಿದೆ ಅನ್ನಬಹುದು. ಹೀಗೆಂದು ಜುಟ್ಟು ಜಂಭದಿಂದ ವರ್ತಿಸುವಂತಿಲ್ಲ. ಕಾಯಿಲ್ಲದ ಜುಟ್ಟು ಪಾತ್ರೆ ತಿಕ್ಕಲು ಲಾಯಕ್ಕು! ಹಾಗಾಗಿ ಬೀಜವೃಕ್ಷ ನ್ಯಾಯದಂತೆ- ಜುಟ್ಟಿನಿಂದ ಕಾಯಿಗೆ ಮಹತ್ವವೋ, ಕಾಯಿಯಿಂದ ಜುಟ್ಟಿಗೆ ಗರಿಮೆಯಾ ಎಂದು ಹೇಳಬಹುದು.

ಇನ್ನೊಂದು ವಿಷಯ ಗಮನಿಸಬೇಕು. ನುಸಿಪೀಡೆ ಪರಿಣಾಮ ತೆಂಗು ನಂಬಿದ ರೈತನಿಗೆ ಈಗ ಸಿಗುತ್ತಿರುವುದು ತೆಂಗಿನ ಜುಟ್ಟು ಮಾತ್ರವೇ! ಜುಟ್ಟಿನ ತೆಂಗಿನ ಕಾಯಿ ಹಿಂದುಗಳಿಗೆ ಪ್ರಿಯವಾದರೆ, ಜುಟ್ಟಿಲ್ಲದ ತೆಂಗಿನ ಕಾಯಿ ಮುಸಲ್ಮಾನರಿಗೆ ಪ್ರಿಯ. ಹೆಂಗಳೆಯರ ಜುಟ್ಟು ಬ್ಯೂಟಿ ಪಾರ್ಲರ್‌ನಲ್ಲಿ ಮಾಯವಾಗುತ್ತಿದೆ. ಆದರೂ ಜುಟ್ಟಿನ ತೆಂಗಿನ ಕಾಯಿಗಳಿಗೆ ಅಮೇರಿಕಾದಲ್ಲಿ ಹೆಚ್ಚು ಬೆಲೆ ಎಂದು ವಿಚಿತ್ರಾನ್ನ ತಿಳಿಸಿದೆ. ಹೀಗಾಗಿ ಜುಟ್ಟಿನ ಪ್ರಾಮುಖ್ಯತೆ ಮಾಸಿಲ್ಲ ಎಂದು ಭಾವಿಸೋಣವೇ?

- ಮಹೇಶ್ಚಂದ್ರ, ಬೆಂಗಳೂರು
ತೆಂಗಿನ ಜುಟ್ಟಿನ ಕಥೆ ಓದುತ್ತಿದ್ದಂತೆ ನನಗೆ ಥಟ್ಟೆಂದು ನೆನಪಾದದ್ದು ಹಳ್ಳಿಯ ದಿನಗಳು. ಆಗಿನ್ನೂ ವಿಮ್ಮು, ಸಬೀನಾ ಬಂದಿರಲಿಲ್ಲ . ಅಗಸರ ಹೆಂಗಸು ಕತ್ತೆಯ ಮೇಲೆ ಹೊತ್ತು ತರುವ ಸಿದ್ದೇಮಣ್ಣು ಕೊಂಡುಕೊಳ್ಳುತ್ತಿದ್ದ ಅಮ್ಮ , ಸಿದ್ದೇಮಣ್ಣನ್ನು ಹಳೆಯ ಬಾನಿಯಲ್ಲಿ ತುಂಬಿಟ್ಟುಕೊಂಡಿರುತ್ತಿದ್ದಳು. ಈ ಸಿದ್ದೇಮಣ್ಣಿನಲ್ಲಿ ಮೈತೊಳೆದುಕೊಳ್ಳುತ್ತಿದ್ದ ಸಿಲವರು ಪಾತ್ರೆಪಗಡಗಳು ಫಳಫಳ ಅಂತ ಹೊಳೆಯುತ್ತಿದ್ದವು. ಪಾತ್ರೆ ತಿಕ್ಕಲಿಕ್ಕೆ ಅಮ್ಮ ಬಳಸುತ್ತಿದ್ದುದು ತೆಂಗಿನ ಜುಟ್ಟನ್ನೇ! ಪಾತ್ರೆಗಳ ಮಸಿಯನ್ನೆಲ್ಲ ಮೆತ್ತಿಕೊಂಡು ಚರಂಡಿ ಸೇರುವ ಹೊತ್ತಿಗೆ ತೆಂಗಿನ ಜುಟ್ಟು ಸವೆದೂ ಸವೆದು ಚಕ್ಕಳ ಉಳಿಸಿಕೊಂಡಿರುತ್ತಿತ್ತು . ಅಂಗಳದಲ್ಲಿನ ಕಲ್ಲಿನ ಮೇಲೆ ಪಾತ್ರೆಗಳನ್ನು ಹರವಿಕೊಂಡು ಕುಳಿತ ಅಮ್ಮ ಲಯಬದ್ಧವಾಗಿ ಪಾತ್ರೆ ತಿಕ್ಕುವ ಸದ್ದು ನನ್ನ ಕಿವಿಗಳಲ್ಲಿನ್ನೂ ಉಳಿದಿದೆ.

ಇದು ಸಿದ್ದೇಮಣ್ಣಿನ ಕಾಲವಲ್ಲ ಬಿಡಿ. ಈಗೇನಿದ್ದರೂ ವಿಮ್ಮು , ಸಬೀನಾಗಳು ಆಧುನಿಕ ಅಡುಗೆ ಮನೆಯಲ್ಲಿ ಮಿಂಚುತ್ತಿವೆ. ಸಿದ್ದೇಮಣ್ಣು ಇಲ್ಲದ ಮೇಲೆ ತೆಂಗಿನ ಜುಟ್ಟಿಗೆಲ್ಲಿ ಸ್ಥಾನ? ಜುಟ್ಟಿನ ಸ್ಥಾನವನ್ನು ಪ್ಲಾಸ್ಟಿಕ್‌ ಆಕ್ರಮಿಸಿಕೊಂಡಿದೆ. ಅಯ್ಯೋ ಜುಟ್ಟೇ?

- ರಾಮಣ್ಣ , ಮೈಸೂರು.
ತೆಂಗಿನಕಾಯಿ ಎಂದರೆ ವಿಳೇದೆಲೆಯಲ್ಲಿಟ್ಟು ಕೊಡುವ ಒಂದು ಶುಭಸೂಚಕ. ತೆಂಗಿನಕಾಯಿ ಅಂದರೆ- ತೆಂಗಿನಕಾಯಿ ಚಟ್ನಿ , ಕಾಯಿ ಹೋಳಿಗೆ, ಕಾಯಿ ಹಾಲು, ಕೊಬ್ಬರಿ ಮಿಠಾಯಿಯನ್ನಷ್ಟೇ ಬಲ್ಲ ನಾನು ತೆಂಗಿನ ಜುಟ್ಟಿನ ಬಗೆಗೆ ಯಾವತ್ತೂ ಯೋಚಿಸಿರಲೇ ಇಲ್ಲ . ಯೋಚಿಸುವ ತಕರಾರೇ ಬೇಡವೆಂದು ಜುಟ್ಟು ಕತ್ತರಿಸಿಕೊಂಡಿರುವ ಯುವ ಜನಾಂಗದ ಪ್ರತಿನಿಧಿಯಾದ ನಾನು ತೆಂಗಿನ ಜುಟ್ಟಿನ ಬಗ್ಗೆ ಯೋಚಿಸುವುದಾದರೂ ಹೇಗೆ, ಅಲ್ಲವೇ? ಆದರೆ ವಿಚಿತ್ರಾನ್ನ ಓದಿದ್ದೇ ಓದಿದ್ದು , ಜುಟ್ಟು ಅಂಟಿಕೊಂಡಿತು!

ತೆಂಗಿನ ಜುಟ್ಟಿನ ಬಗ್ಗೆ ಯೋಚಿಸುತ್ತಾ ಯೋಚಿಸುತ್ತಾ , ಈಗ ಉಳಿದ ಜುಟ್ಟುಗಳ ಬಗ್ಗೆಯೂ ಕುತೂಹಲ ಮೂಡುತ್ತಿದೆ ಕಣ್ರೀ....

English summary
Coconut juttu article by Srivathsa Joshi evokes interesting responses
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X