• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಲಕ್ಷೇಪಕ್ಕೆ ನಿಕ್ಷೇಪ - ಹೊತ್ತು ಕಳೆಯಲು ಹತ್ತು ವಿಧ!

By Staff
|
Srivathsa Joshi *ಶ್ರೀವತ್ಸ ಜೋಶಿ
‘ಬೈಠೇ ಬೈಠೇ ಕ್ಯಾ ಕರೇ ಹೋ ಜಾಯೆ ಕುಛ್‌ ಕಾಮ್‌... ಶುರು ಕರೋ ಅಂತ್ಯಾಕ್ಷರೀ ಲೇಕೆ ಪ್ರಭೂಕಾ ನಾಮ್‌...’

ಶಾಲಾಪ್ರವಾಸದ ಬಸ್‌ನಲ್ಲಿ , ಹೊರಸಂಚಾರ/ಚಾರಣ/ಶಿಬಿರಗಳಲ್ಲಿನ ‘ಶೂನ್ಯ’ ವೇಳೆಯಲ್ಲಿ , ಅಥವಾ ಧೋ ಎಂದು ಸುರಿಯುವ ಮಳೆಗಾಲದ ದಿನಗಳಲ್ಲಿ (ಅಮೆರಿಕದಲ್ಲಾದರೆ ಹಿಮಪಾತದ ದಿನಗಳೂ), ವಾರಾಂತ್ಯದ ಹರಟೆ ಕಟ್ಟೆಗಳಲ್ಲಿ - ಹೀಗೆ ಹತ್ತಾರು ಜನ ಸಮಾನಮನಸ್ಕರು (ಸಮಾನವಯಸ್ಕರೇ ಆಗಬೇಕೆಂದೆನಿಲ್ಲ !) ಸೇರಿದೆಡೆಯಲ್ಲಿ ಕಾಲಹರಣ ಮಾಡಬೇಕೆಂದಾಗ ಮೊದಲು ನೆನಪಾಗುವುದು ಅಂತ್ಯಾಕ್ಷರಿ.

ಅಕ್ಷರಗಳ, ಅಕ್ಷರಕ್ಕೆ ಸರಿಯಾದ ಹಾಡುಗಳ ತಾಲೀಮು ಮನದಲ್ಲೇ ನಡೆಯುತ್ತದೆ. ಹಳೇ ಹೊಸ ಚಿತ್ರಗೀತೆಗಳೆಲ್ಲ ನೆನಪಿನಾಳದಿಂದ ಹೊರಬರುತ್ತವೆ. ಒಂದೆರಡು ಗಂಟೆಗಳ ಕಾಲ ಪದ್ಯಬಂಡಿ ಮುನ್ನಡೆಯುತ್ತದೆ- ಲ, ದ, ಗ ಮುಂತಾದ ಅಕ್ಷರಗಳಿಗೆ ಇನ್ನು ಹಾಡುಗಳು ನೆನಪಾಗೊಲ್ಲ ಅನ್ನುವ ಹಂತದವರೆಗೆ.

ಅಂತ್ಯಾಕ್ಷರಿ ಬೋರೆನಿಸತೊಡಗಿ ತಣ್ಣಗಾದಾಗ ಗುಂಪಿನಲ್ಲಿನ ಸ್ಮಾರ್ಟ್‌ ಟ್ಯಾಲೆಂಟಿಗರು ವಿವಿಧ ವಿನೋದಾವಳಿ ಪ್ರದರ್ಶಿಸಲು ಮುಂದಾಗುತ್ತಾರೆ. ಏಕಪಂಕ್ತಿ (one-liners), ಪೀಜೆ ಶೂರರು, ವಿಕಟಕವಿಗಳು, ಸ್ಟಾಂಡ್‌-ಅಫ್‌ ಕಾಮೆಡಿ ಪ್ರತಿಭೆಯುಳ್ಳವರಾರಾದರೂ ಗುಂಪಿನಲ್ಲಿದ್ದರಂತೂ ಭಲೇ ಮಜಾ. ಅವರ ಬಾಯಲ್ಲಿ ಚಿತ್ರಗೀತೆಗಳು ಅಣಕು ಹಾಡುಗಳಾಗುತ್ತವೆ. ಹಿಗ್ಗಾಮುಗ್ಗಾ ತಿರುಚಿ ಹೊಸರೂಪ ಪಡೆಯುತ್ತವೆ.

Ten ways to Timepass!ಕೆಲವರಿಗೆ ವಿಶೇಷ ಸಾಮರ್ಥ್ಯವೊಂದಿರುತ್ತದೆ. ಯಾವುದೇ ಪದವನ್ನು ಒಮ್ಮೆ ಕೇಳಿಸಿಕೊಂಡರೆ ಅದನ್ನವರು ಸರಿಯಾಗಿ ಹಿಂದು ಮುಂದಾಗಿ ಹೇಳಬಲ್ಲರು. ‘ಇವನು ಬಸವ’ ಎಂಬ ವಾಕ್ಯವನ್ನು, ಒಂದೊಂದೇ ಪದಗಳನ್ನು ಉಲ್ಟಾ ಮಾಡಿ ‘ನುವಇ ವಸಬ’ ಎಂದು ಥಟ್ಟನೆ ಉಚ್ಚರಿಸಬಲ್ಲರು! ನನ್ನ ಸ್ವಂತ ಅಕ್ಕ ಈ ಟ್ಯಾಲೆಂಟ್‌ ಉಳ್ಳವರು. ಆಕೆ ಕನ್ನಡ ಚಿತ್ರ ಗೀತೆಗಳ ಸಾಲುಗಳನ್ನೇ ಪ್ರತಿಪದ ತಿರುಚಿದ ರೂಪದಲ್ಲಿ ಹೇಳಬಲ್ಲರು! ‘ಹರವಿ ರುನೂ ರುನೂ ಹರತ... ಹರವಿ ಮಪ್ರೇ ದವ್ಯಕಾ ಹಿಕ ಹರಬ...’ ಎಂದು ಎಡಕಲ್ಲು ಗುಡ್ಡದಮೇಲೆ ಚಿತ್ರದ ಒರಿಜಿನಲ್‌ ಹಾಡಿನಂತೇ ಸರಾಗವಾಗಿ ಹಾಡುತ್ತಾರವರು! ‘ಡನ್ನಕ ನಡಿನಾ ರವೀ ಯಣಿಮರ... ಡುಂಗ ಯಮಿಭೂ ರವೀ ಯರಿನಾ... ಯತೆರಿಚ ನುನಾ ವೆಡುಹಾ...’(ನಾಗರಹಾವು ಸಿನಿಮಾ ಹಾಡು) ನನ್ನಕ್ಕನ ಚಾತುರ್ಯದ ಇನ್ನೊಂದು ಸ್ಯಾಂಪಲ್‌.

ಕನ್ನಡ ಚಿತ್ರಗೀತೆಗಳನ್ನು ಇಂಗ್ಲಿಷಲ್ಲಿ ಹಾಡುವ ಪ್ರತಿಭೆಯುಳ್ಳವರೂ ಕೆಲವರಿರುತ್ತಾರೆ. ‘ಫ್ಲವರ್‌ ವನ್‌... ನಿಯರ್‌ ಕೇಮ್‌... ಟಚ್‌ಡ್‌ ಮೈ ಹಾರ್ಟ... ವ್ಹಾಟ್‌ ವ್ಹಾಟ್‌ ಐ ಆಸ್ಕ್‌ಡ್‌... ಇಟ್‌ ಸೆಡ್ಡ್‌... ಹನಿ ಲೈಕ್‌ ಸ್ವೀಟ್‌ ವರ್ಡ್ಸ....’ ಎಂದು ಶುಭಮಂಗಳ ಚಿತ್ರದ ಹಾಡನ್ನು ನೆನಪಿಸುತ್ತಾರೆ. ‘ಕಲರ್‌... ಮೈ ಫೇವರಿಟ್‌ ಕಲರ್‌... ಮೈ ಲೈಫ್ಸ್‌ ಕಲರ್‌... ಇಫ್‌ ಯು ಲಾಫ್‌ ಇಟ್ಸ್‌ ಗ್ರೀನ್‌... ಎ ಬ್ರೀಜ್‌ ಆಫ್‌ ಹೆಪ್ಪಿನೆಸ್‌... ಎ ಕಲರ್‌ ಆಫ್‌ ಹಂಡ್ರೆಡ್‌ ಫೌಂಟೈನ್ಸ್‌... ಕಲರ್‌... ಕಲರ್‌....’ ಎಂದಾಗ ಬಂಧನ ಚಿತ್ರದ ಓಕುಳಿ ಬಣ್ಣಗಳೆಲ್ಲ ನೆನಪಾಗುತ್ತವೆ ಮಾತ್ರವಲ್ಲ , ಹೊಟ್ಟೆ ಹುಣ್ಣಾಗು ವಷ್ಟು ನಗುವೂ ಬರುತ್ತದೆ!

ಚಿತ್ರಗೀತೆಗಳ ಭಂಡಾರ ಮುಗಿದ ಮೇಲೆ ಒಗಟುಗಳು, ಜಾಣ್ಮೆಲೆಕ್ಕಗಳು ಶುರುವಾಗುತ್ತವೆ. ಇನ್ನೊಂದು ‘ಟಂಗ್‌ ಟ್ವಿಸ್ಟರ್‌’ ಅಂತ ನೀವು ಕೇಳಿರಬಹುದು. She sells sea shells on seashore - ಫಾಸ್ಟ್‌ ಆಗಿ ಹೇಳುವಾಗ ನಾಲಿಗೆ ತಡಬಡಿಸುವಂತೆ ಮಾಡುವಂಥವು - ಕನ್ನಡದಲ್ಲೂ ಇವೆ. ಕಪ್ಪುಕಾಗೆ ಕೆಂಪು ಕುಂಕುಮ, ಜಂಬಗಿ ತೂಕಪ್ಪ ತುಂಬಿದ ತುಪ್ಪದ ತಂಬಿಗಿ ತಂದಾನ, ಸಂಪಂಗಪ್ಪನ ಮಗ ಮರಿಸಂಪಂಗಪ್ಪ ; ಮರಿಸಂಪಂಗಪ್ಪನ ಅಪ್ಪ ಸಂಪಂಗಪ್ಪ, ಇವನ್ನೆಲ್ಲ ರಿಪೀಟಾಗಿ ಹೇಳಿ. ನಿಮ್ಮ ಟಂಗು ಅಷ್ಟು ಸಲೀಸಾಗಿ ಟ್ವಿಸ್ಟಿಸುತ್ತದೋ ಇಲ್ಲವೋ ನೋಡಿ!

ಟಂಗ್‌ ಟ್ವಿಸ್ಟರ್‌ಗಳಂತೆಯೇ ಚತುರೋಕ್ತಿಗಳೂ ಕೂಡ. ‘ಎರಡೆತ್ತೆಮ್ಮೆಯ ಮರಿ ಎರಡೆರಡಾಡಿನ ಮರಿ ಎರಡು’ ಎಂದರೆ ಗೊತ್ತೇ? ಒಟ್ಟು ಎಷ್ಟು ಪ್ರಾಣಿಗಳಿವೆ ಆ ವಾಕ್ಯದಲ್ಲಿ ? 2 ಎತ್ತು, 1 ಎಮ್ಮೆ, ಆ ಎಮ್ಮೆಯ ಮರಿಗಳು 2, 2 ಆಡುಗಳು ಮತ್ತು ಅವುಗಳ ತಲಾ 2 ಮರಿಗಳು = ಒಟ್ಟು 11 ಪ್ರಾಣಿಗಳು ಕಾಣಿಸುತ್ತವೆಯೇ?

ಇನ್ನೊಂದು ಚತುರೋಕ್ತಿಯನ್ನು ಗಮನಿಸಿ,

ವಾನರಂಗೆ ಬಾಲ ನಾಲ್ಕು

ಹಸ್ತಿಗೆಂಟು ದಂತ

ನಾರಿಗೆ ಮೊಲೆ ಇಲ್ಲ

ಕುದುರೆಗೆ ಕೋಡು!

ನಾಲ್ಕೂ ಸಾಲುಗಳು ಅಸಂಬದ್ಧವಾಗಿವೆಯಲ್ಲವೇ? ಈಗ ಅದರಲ್ಲಿ ಕೇವಲ ಎರಡು ಪದಗಳನ್ನು ಸ್ಥಾನಪಲ್ಲಟ ಮಾಡಿದರೆ, ಅದೇ ಚತುರೋಕ್ತಿಯ ನಾಲ್ಕೂ ಸಾಲುಗಳು ನೂರು ಪ್ರತಿಶತ ಅರ್ಥಪೂರ್ಣವಾಗುತ್ತವೆ! ಹೇಗಿದೆ ಚಮತ್ಕಾರ?

ವಾನರಂಗೆ ಬಾಲ

ನಾಲ್ಕು ಹಸ್ತಿಗೆಂಟು ದಂತ

ನಾರಿಗೆ ಮೊಲೆ

ಇಲ್ಲ ಕುದುರೆಗೆ ಕೋಡು!

Ten ways to Timepass!ಹಾಗೆಯೇ, ‘ಹರಿಯು ಹರಿಯಾಳಗಿರಲು ಹರಿಗೆ ಹರಿ ಬಂದು ಕಚ್ಚಲು ಹರಿಯು ಹರಿಹರೀ ಎಂದಿತು...’ ಎಂದರೇನು? ಹರಿ ಎಂಬ ಪದಕ್ಕೆ ಹಾವು, ಕಪ್ಪೆ, ಗುಡಾಣ ಇತ್ಯಾದಿ ಬೇರೆಬೇರೆ ಅರ್ಥಗಳನ್ನುಪಯೋಗಿಸಿ ಆ ಚತುರೋಕ್ತಿ ರೂಪಿತವಾಗಿದೆ. ಇನ್ನೊಂದು ‘ಹರನ ಹಾರನ ಆಹಾರನ...’ ಅಂತ ಶುರುವಾಗುತ್ತದೆ.

ಗಣಿತದಲ್ಲಿ ಚುರುಕಾಗಿರುವವರಿಗೆ ‘ಹರಹರ ಭಂ ಭಂ’ ಅಂತ ಒಂದು ಆಟವಿದೆ. ಗುಂಪಿನಲ್ಲಿರುವವರೆಲ್ಲ ಸರದಿಯಾಗಿ 1,2,3,4... ಸಂಖ್ಯೆಗಳನ್ನು ಹೇಳಬೇಕು. ಆದರೆ 3 ರಿಂದ ಭಾಗವಾಗುವ ಸಂಖ್ಯೆಗೆ ಬದಲಾಗಿ ‘ಹರಹರ’ ಎಂದು ಹೇಳಬೇಕು, 5 ರಿಂದ ಭಾಗವಾಗುವ ಸಂಖ್ಯೆಗೆ ಬದಲಾಗಿ ‘ಭಂ ಭಂ’ ಎಂದು ಹೇಳಬೇಕು. 3ರಿಂದಲೂ 5ರಿಂದಲೂ ಭಾಗವಾಗುವಂಥವು (15, 30... ಇತ್ಯಾದಿ) ಬಂದಾಗ ‘ಹರಹರ ಭಂ ಭಂ’ ಎನ್ನಬೇಕು! ನಿಯಮ ಪಾಲಿಸದವರು ಆಟದಿಂದ ಔಟ್‌.

ಗಣಿತದ್ದೇ ಇನ್ನೊಂದು ಸರಳ ಆಟ (ಇಬ್ಬರು ಅಡುವಂಥದ್ದು) - ‘ಯಾರು ನೂರನ್ನು ಮೊದಲು ತಲುಪುವುದು?’ ಅಂತ. ಆಟ ಆರಂಭಿಸುವವ 1ರಿಂದ 10ರ ಒಳಗೆ ಯಾವುದಾದರೂ ಒಂದು ಸಂಖ್ಯೆ ಹೇಳುತ್ತಾನೆ. ಆತ ಹೇಳಿದ ಸಂಖ್ಯೆಗೆ ಪರಮಾವಧಿ ಹತ್ತು ಸೇರಿಸಿ ಎದುರಾಳಿ ಒಂದು ಸಂಖ್ಯೆ ಹೇಳಬೇಕು. ಅದರಿಂದ ಹತ್ತರೊಳಗಿನ ಸಂಖ್ಯೆ ಮೊದಲಿನವ ಹೇಳಬೇಕು. ಹೀಗೆ ಮೊದಲು ಯಾರು ನೂರನ್ನು ತಲುಪುತ್ತಾರೊ ಅವರು ಗೆದ್ದಂತೆ. ಆ ಆಟದ್ದೊಂದು ಟ್ರಿಕ್‌ ಗೊತ್ತಿದ್ದರೆ, ಮೊದಲಿಗೆ ಸಂಖ್ಯೆ ಹೇಳುವ ಪಾಳಿ ನಮ್ಮದಿದ್ದರೂ, ಎದುರಾಳಿಯದಿದ್ದರೂ ನಾವೇ ಗೆಲ್ಲುವುದು ಸಾಧ್ಯವಾಗುತ್ತದೆ!

ಗಣಿತ, ಜಾಣ್ಮೆಲೆಕ್ಕಗಳು ಎಲ್ಲರನ್ನೂ ಮುದಗೊಳಿಸುತ್ತವೆ ಎನ್ನಲಿಕ್ಕಾಗುವುದಿಲ್ಲ. ಲೆಕ್ಕ ಬಿಡಿಸೋದು ಅಂದರೆ ನನಗೆ ಅಷ್ಟಕ್ಕಷ್ಟೆ ಅನ್ನುವವರು ತುಂಬ ಮಂದಿ. ಆದರೆ ಜೋಕ್‌ಫಾಲ್ಸ್‌ ಸ್ಟಾರ್ಟ್‌ ಆದರೆ ಉಂಟಲ್ಲ, ಎಲ್ಲರೂ ಪ್ರತಿಭಾನ್ವಿತರೇ. ಹೆಬ್ಬೆಟ್ಟನ್ನು ತೋರಿಸಿ ‘ಈತ ಅಬ್ದುಲ್ಲಾ’ ಆದರೆ ಈತ ಯಾರು? (ಅದೇ ಹೆಬ್ಬೆಟ್ಟನ್ನು ಅಲುಗಾಡಿಸುತ್ತ) ಎಂದು ಕೇಳಿ ‘ಷೇಕ್‌ ಅಬ್ದುಲ್ಲಾ!’ ಎಂಬ ಉತ್ತರವನ್ನು ನಿರೀಕ್ಷಿಸುವ ಜೋಕಿಂದ ಹಿಡಿದು ಎಲ್ಲ ನಮೂನೆಯ ಜೋಕುಗಳ ಪ್ರವಾಹ (ಜನಸಂದಣಿಯ ರಸಿಕತೆಗೆ ತಕ್ಕಂತೆ) ಹರಿಯಲಾರಂಭಿಸುತ್ತದೆ. ಸ್ವಪ್ರತಿಭೆಯ ಸರಂಜಾಮೆಲ್ಲ ಮುಗಿದ ಮೇಲೆ, ಎಲ್ಲೋ ಕೇಳಿ ಗೊತ್ತಿರುವ ಅಥವಾ ಅಲ್ಪ ಸ್ವಲ್ಪ ಕಸ್ಟಮೈಸ್‌ ಮಾಡಿದ ಜೋಕುಗಳ ಜೋಕ್‌ಫಾಲ್ಸ್‌ ಶುರುವಾಗುತ್ತದೆ.

ಜೋಕುಗಳೆಂದ ಮೇಲೆ ಸರ್ದಾರ್ಜಿ ಜೋಕುಗಳು - ಅಲ್ಲಿ ಸಂತಾ ಸಿಂಗ್‌, ಬಂಟಾ ಸಿಂಗ್‌ ಬರಲೇಬೇಕು. ಹಾಗೆಯೇ ಆಂಧ್ರಪ್ರದೇಶದಲ್ಲಾದರೆ ಅಂಜಯ್ಯ ಜೋಕ್ಸ್‌ ಜನಪ್ರಿಯ. ಅಂಜಯ್ಯ ಆಂಧ್ರದ ಒಬ್ಬ ಮಾಜಿ ಮುಖ್ಯಮಂತ್ರಿ. ಭೊಳೇ ಸ್ವಭಾವದವರಿರಬಹುದು, ಹಾಗಾಗಿ ಅವರ ಮೇಲೆ ಜೋಕ್ಸ್‌. ಅಂಜಯ್ಯ ಕಾರಲ್ಲಿ ಹಿಂದಿನ ಸೀಟ್‌ನಲ್ಲಿ ಕುಳಿತರೆಂದರೆ ತೂಕಡಿಸಲಾರಂಭಿಸುತ್ತಿದ್ದರಂತೆ. ಒಮ್ಮೆ ಹೀಗೇ ಹೈದರಾಬಾದ್‌ನ ಯಾವುದೋ ಒಂದು ತೆಲುಗು ಚಿತ್ರಮಂದಿರವನ್ನು ದಾಟಿ ಅವರ ಕಾರ್‌ ಹೋಗುತ್ತಿದ್ದಾಗ ಥಟ್ಟನೆ ಎಚ್ಚೆತ್ತ ಅಂಜಯ್ಯ ತನ್ನ ಡ್ರೈವರ್‌ ಬಳಿ, ಯಾವ ಸಿನೆಮಾ ಅಲ್ಲೀಗ ನಡೀತಾ ಇದೆ ಅಂತ ಕೇಳಿದ್ರಂತೆ. ಅಸಲಿಗೆ ಆ ಚಿತ್ರಮಂದಿರ ತಾತ್ಕಾಲಿಕವಾಗಿ ಮುಚ್ಚಿದ್ದು ರಿಪೇರಿ ಕೆಲ್ಸಗಳು ನಡೀತಿದ್ದವು. ‘ಧಣಿಗಳೇ ಅಲ್ಲೀಗ Renovation ನಡೀತಾ ಇದೆ...’ ಅಂತ ಡ್ರೈವರ್‌ ರಿಪ್ಲೈಸಿದ್ದಕ್ಕೆ, ‘ಓಹ್‌ ಯಾವಾಗ್ಲೂ ತೆಲುಗು ಫಿಲಂಸ್‌ ತೋರಿಸುವ ಆ ಟಾಕೀಸ್‌ನಲ್ಲೀಗ ಇಂಗ್ಲಿಷ್‌ ಚಿತ್ರ ಪ್ರದರ್ಶಿಸಲಿಕ್ಕೆ ಆರಂಭಿಸಿದರೇನು?’ ಎಂದು ನಿದ್ದೆ ಹೋದರಂತೆ ಅಂಜಯ್ಯ!

ನಮ್ಮ ಕರಾವಳಿಯಲ್ಲಿ ರಾಂಪನ ಜೋಕ್ಲು ತುಂಬ ಪಾಪ್ಯುಲರ್‌. ರಾಮಪ್ಪ ಶೆಟ್ಟಿ ಅಲಿಯಾಸ್‌ ‘ರಾಂಪ’ ಆಧುನಿಕ ತುಳುನಾಡಿನ ಒಬ್ಬ ಕಾಲ್ಪನಿಕ ವ್ಯಕ್ತಿ. ಆತನ ಮೇಲಿನ ಜೋಕ್‌ಗಳು ‘ರಾಂಪನ ಜೋಕ್ಲು’ ಎಂದೇ ಪ್ರಸಿದ್ಧ. ತುಳು ಭಾಷೆಯಲ್ಲಿ ಜೋಕ್ಲು ಅಂದರೆ ಮಕ್ಕಳು ಎಂದೂ ಆಗುತ್ತದೆ. ಒಂದು ಸ್ಯಾಂಪಲ್‌ ನೋಡಿ: ರಾಂಪನ ಬದ್ಧ ವೈರಿಯ ಹೆಸರು ದೂಜ. ಒಮ್ಮೆ ಮಂಗಳೂರಿನಲ್ಲಿ ‘ಏಕ್‌ ದೂಜೆ ಕೆ ಲಿಯೆ’ ಸಿನೆಮಾದ ಪೋಸ್ಟರ್‌ಗಳನ್ನು ನೋಡಿ ಕೆರಳಿದ ರಾಂಪ, ಅದ್ಯಾಕೆ ದೂಜನಿಗಾದರೆ ಸಿನೆಮಾ ಪೋಸ್ಟರ್‌ಗಳು? ತನ್ನ ಬಗ್ಗೆಯೂ ಪೋಸ್ಟರ್‌ ಇರಬೇಕು ಎಂದು ಒರ್ಜಿನಲ್‌ ಪೋಸ್ಟರ್ಸೆಲ್ಲ ಕಿತ್ತುಹಾಕಿ ‘ದೋ ರಾಂಪಾ ಕೇ ಲಿಯೆ’ ಎಂದು ಪೋಸ್ಟರ್ಸ್‌ ಅಂಟಿಸಿದ್ದನಂತೆ!

ಜೋಕ್‌ ಕಣಜ ಬರಿದಾದಾಗ ಗುಂಪಿನಲ್ಲೇ ಒಬ್ಬ ಸೀರಿಯಸ್ಸಾಗಿ ‘ಬಸ್‌ಸ್ಟಾಂಡ್‌ ಜೋಕ್‌ ನಿಮಗೆ ಗೊತ್ತುಂಟಾ? ನಿಮಗೆ ಗೊತ್ತುಂಟಾ?’ ಎಂದು ಎಲ್ಲರನ್ನೂ ಕೇಳುತ್ತಾನೆ. ಇದ್ಯಾವುದಪ್ಪಾ ಏನೋ ಭಾರಿ ಮೋಜಿನದಿರಬಹುದು ಎಂದು ಎಲ್ಲರೂ ‘ಗೊತ್ತಿಲ್ಲ, ಹೇಳು’ ಎಂದಾಗ ಈ ಆಸಾಮಿ ಕೂಲ್‌ಆಗಿ ‘ನನಗೂ ಗೊತ್ತಿಲ್ಲ!’ ಎಂದರೆ, ಅದೇ ದೊಡ್ಡ ಜೋಕು!

*

ನನಗ್ಗೊತ್ತು, ಇಂಥ ಕಾಲಕ್ಷೇಪದ ಅನೇಕಾನೇಕ ಸಂದರ್ಭಗಳಲ್ಲಿ ನೀವು ಭಾಗವಹಿಸಿರುತ್ತೀರಿ. ಕಾಲಹರಣದ ರಣಕಹಳೆ ಊದಲು ನಿಮ್ಮ ಬಳಿಯೂ ಶಸ್ತ್ರಾಸ್ತ್ರಗಳ ದೊಡ್ಡ ಬತ್ತಳಿಕೆಯೇ ಇದೆ. ನಿಮ್ಮ ಆರ್ಡಿನರಿ ಮತ್ತು ಎಕ್ಟ್ರಾರ್ಡಿನರಿ ಟ್ಯಾಲೆಂಟಿನ ಗಂಟುಮೂಟೆ ಬಿಚ್ಚಿದರೆ ಫಳಫಳ ಹೊಳೆಯುವ ರತ್ನಗಳಿವೆ ಅಲ್ಲಿ. ನಿಮ್ಮಲ್ಲಿ ಪ್ರತಿಯಾಬ್ಬರೂ ನಿಮ್ಮ ಮೋಸ್ಟ್‌ ಫೇವರಿಟ್‌ ಅನ್ನಿಸುವ ಒಂದನ್ನಾದರೂ ಬರೆದು ತಿಳಿಸಿದರೆ ಮತ್ತು ಅಂಥ ಪತ್ರಗಳನ್ನೆಲ್ಲ ಕ್ರೋಢೀಕರಿಸಿದರೆ ಅದು ಅ.ರಾ.ಮಿತ್ರ, ಕೃಷ್ಣೇಗೌಡರ ಹಾಸ್ಯೋತ್ಸವಕ್ಕೆ ಸರಿಸಾಟಿಯಾಗಿ ನಿಲ್ಲುವ ಭಂಡಾರವಾಗೋದು ಡೌಟೇ ಇಲ್ಲ. ಅಂಥಾ ಒಂದು ಕಾಲಕ್ಷೇಪದ ನಿಕ್ಷೇಪವನ್ನು ಕಟ್ಟೋಣವೇ?

ಆದಷ್ಟು ಮಟ್ಟಿಗೆ ಕನ್ನಡದ ಸಂದರ್ಭ, ಸಂಬಂಧವುಳ್ಳ ಒಂದು ಐಟಂ ಬರೆದು ಪತ್ರಿಸುತ್ತೀರಲ್ಲಾ , ಈ ವಿಳಾಸಕ್ಕೆ - srivathsajoshi@yahoo.com

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more