ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಳ್ಳು ಮೈಯಾಳಗಿನ ಮಾಧುರ್ಯ : ಹಲಸಿನ ಹಣ್ಣು

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

Mouth watering Jackfruit ‘ತನ್ನ ನಾಡಿನ ಹೊಳೆಕೆರೆಬೆಟ್ಟ... ತನ್ನ ನಾಡಿನ ಪಶ್ಚಿಮಘಟ್ಟ...’ ಗಳನ್ನು ನೆನೆನೆನೆದು ಉಬ್ಬಬೇಕು - ಎಸ್ಪೆಷಲಿ ದೂರದೇಶಕೆ ಹೋದ ಸಮಯದಿ ತನ್ನ ನಾಡಿನ ಬಗ್ಗೆ - ಎಂದಿದ್ದಾರೆ, ಪಶ್ಚಿಮಘಟ್ಟಗಳ ಪರಿಸರದಲ್ಲೇ ಹುಟ್ಟಿ ಬೆಳೆದ ರಸಋಷಿ ಕವಿ ಕುವೆಂಪು. ಪಶ್ಚಿಮಘಟ್ಟಗಳ ತಪ್ಪಲಲ್ಲಿ ಹುಟ್ಟಿಬೆಳೆದು ಈಗ ಮಾತ್ರ ದೂರದೇಶದಲ್ಲಿರುವ ನನಗೆ ಬೇರೆಬೇರೆ ಸಂದರ್ಭಗಳಲ್ಲಿ , ಸನ್ನಿವೇಶಗಳಲ್ಲಿ ಪಶ್ಚಿಮಘಟ್ಟಗಳ ನಮ್ಮೂರ ಪರಿಸರವಂತೂ ಖಂಡಿತವಾಗಿ ನೆನಪಾದದ್ದಿದೆ. ಅಂತಹ ಒಂದು ರೋಮಾಂಚನ ಮೊನ್ನೆ ಒಂದುದಿನ ಅಂತರ್ಜಾಲ ಮಥನದಲ್ಲಿ ನಿರತನಾಗಿದ್ದಾಗ ‘ಹಲಸಿನಹಣ್ಣು ಮೂಲತಃ ಭಾರತದ ಪಶ್ಚಿಮಘಟ್ಟಗಳ ಪ್ರದೇಶದಲ್ಲಿ ಹುಟ್ಟಿ ಇತರ ಉಷ್ಣವಲಯದ ದೇಶಗಳಿಗೆ ಹರಡಿಕೊಂಡಿತು...’ ಎಂಬ ಮಾಹಿತಿ ಕಣ್ಣಿಗೆ ಬಿದ್ದಾಗ ಆದದ್ದು ! ಅಂದರೆ, ಹಲಸಿನ ತವರೂರು ನಮ್ಮ ಕರ್ನಾಟಕದ ಕರಾವಳಿ-ಮಲೆನಾಡ ಪ್ರದೇಶ ಎಂಬ ವಿಷಯವನ್ನು ನಾನು ತಿಳಿದುಕೊಂಡದ್ದು !!

ಇಲ್ಲಿ ವಾಷಿಂಗ್‌ಟನ್‌ಡಿಸಿಯಲ್ಲಿ ವುಡ್‌ಲ್ಯಾಂಡ್ಸ್‌ (ಕುಂದಾಪುರ ಮೂಲದ ಆನಂದ ಪೂಜಾರ್‌ ಅನ್ನುವ ಕನ್ನಡಿಗರೊಬ್ಬರ, ಅಪಾರ ಜನಮನ್ನಣೆ ಗಳಿಸಿರುವ ಉದ್ಯಮ) ಹೊಟೇಲ್‌ನ ಒಂದು ಪ್ರಮುಖ ಆಕರ್ಷಣೆ ಎಂದರೆ ಹಲಸಿನಹಣ್ಣಿನ ಪಾಯಸ. ಏಲಕ್ಕಿ, ಬೆಲ್ಲ, ತೆಂಗಿನಕಾಯಿಹಾಲು, ಗೋಡಂಬಿ, ದ್ರಾಕ್ಷಿ ಇತ್ಯಾದಿಯಿಂದ ಸಿಂಗರಿಸಲ್ಪಟ್ಟ ಪಾಯಸವನ್ನು ಸವಿದವರೇ ಬಲ್ಲರು ಅದರ ಅಮೋಘ ರುಚಿ. ಕಳೆದ ವರ್ಷ ನಾವು ಇಲ್ಲಿನ ಕನ್ನಡಸಂಘದ ಸಮಿತಿಯಲ್ಲಿದ್ದಾಗ ಗಣೇಶಚೌತಿ, ದೀಪಾವಳಿ ಇತ್ಯಾದಿ ಹಬ್ಬದ ಕಾರ್ಯಕ್ರಮಗಳಿಗೆ ಆಹಾರ ಸರಬರಾಜೆಲ್ಲ ವುಡ್‌ಲ್ಯಾಂಡ್ಸ್‌ನಿಂದಲೇ. ಹಬ್ಬದೂಟದ ಸ್ಪೆಷಾಲಿಟಿಗಳಲ್ಲಿ ಏಕ್‌ದಂ ಸೂಪರ್‌ಹಿಟ್‌ ಆದದ್ದೆಂದರೆ ಹಲಸಿನಹಣ್ಣಿನ ಪಾಯಸ! ‘ಡೆಸರ್ಟ್‌’ ಎಂದು ಪಾಯಸವನ್ನು ಎರಡೆರಡು ಸಲ ಹಾಕಿಸಿಕೊಂಡು ಚಪ್ಪರಿಸಿದ್ದರು, ಇದುವರೆಗೆ ಹಲಸಿನಹಣ್ಣಿನ ಪಾಯಸವನ್ನೂ ಮಾಡಲಿಕ್ಕಾಗುತ್ತದೆ ಎಂದೇ ಗೊತ್ತಿರದ ಕೆಲವು ಅಮೆರಿಕನ್ನಡಿಗರು.

Jackfruit treeಅಮೆರಿಕದಲ್ಲಿ ಎಲ್ಲಿಂದ ನಿಮಗೆ ಹಲಸಿನಹಣ್ಣಿನ ಸಪ್ಲೈ ಎಂದು ಆನಂದ್‌ ಅವರನ್ನೇ ನಾನು ಒಮ್ಮೆ ಕೇಳಿದ್ದೆ. ಇಲ್ಲಿನ ಏಷ್ಯನ್‌ ಗ್ರೋಸರಿ ಅಂಗಡಿಗಳಲ್ಲಿ ಸಿಗುವ ‘ಟಿನ್‌’ಗಳಲ್ಲಿನ ಹಲಸಿನ ತೊಳೆಗಳೇ ಗತಿ. ಬೇರೆ ಫ್ರೆಷ್‌ ಆಗಿ ಸಿಗುವುದಿಲ್ಲ ; ನಮ್ಮೂರಿನಂತೆ ಹಲಸಿನಹಣ್ಣೇ ಸಿಗುವಂತಿದ್ದರೆ ಇನ್ನೂ ಚೆನ್ನಾಗಿ ಮಾಡಬಹುದಿತ್ತು... ಎಂದು ಅವರು ಅಭಿಪ್ರಾಯಪಟ್ಟಿದ್ದರು. ನ್ಯೂಜೆರ್ಸಿಯಲ್ಲಿ ಮಾರ್ಕೆಟಲ್ಲಿ ಹಲಸಿನಹಣ್ಣು ಅಪರೂಪಕ್ಕೊಮ್ಮೆ ಸಿಗುತ್ತದೆ ಎಂದು ಅಲ್ಲಿರುವ ಮಿತ್ರ ದಿನೇಶ್‌ ನೆಟ್ಟರ್‌ ಒಮ್ಮೆ ನನಗೆ ಹೇಳಿದ್ದರು. ಅದು ‘ಮಿನಿ ಇಂಡಿಯಾ’ ಎಂದು ಕರೆಯಲ್ಪಡುವ ನ್ಯೂಜೆರ್ಸಿಯ ಸಂಗತಿಯಾಯ್ತು ; ಉಳಿದಂತೆ ಅಮೆರಿಕನ್ನಡಿಗರಿಗೆ ಗ್ರೋಸರಿಗಳಲ್ಲಿ ‘ಕ್ಯಾನ್‌ಡ್‌ ಫುಡ್‌’ ಸೆಕ್ಷನ್‌ನಲ್ಲಷ್ಟೆ ‘ಜಾಕ್‌ಫ್ರುಟ್‌’ ಸಿಗೋದು.

ಆವಾಗಲೇ ನಾನು ಹಲಸಿನಹಣ್ಣಿನ ಬಗ್ಗೆ ನೆಟ್‌-ಶೋಧ ನಡೆಸಿದ್ದು. ಯಾಕೆ ಥೈಲ್ಯಾಂಡ್‌-ಇಂಡೋನೇಷ್ಯಾ ಮುಂತಾದೆಡೆಗಳಿಂದ ಟಿನ್‌ಗಳಲ್ಲಿ ಸಂಸ್ಕರಿಸಲ್ಪಟ್ಟ ಹಲಸಿನತೊಳೆಗಳಷ್ಟೇ ಅಮೆರಿಕೆಗೆ ಆಮದಾಗುತ್ತವೆ, ಇಲ್ಲಿನ ದಕ್ಷಿಣರಾಜ್ಯ (ಭೂಮಧ್ಯರೇಖೆಗೆ ಹತ್ತಿರದ ಪ್ರದೇಶ)ಗಳಲ್ಲಿ ಹಲಸಿನಮರ ಹುಲುಸಾಗಿ ಬೆಳೆಯಬಹುದಲ್ಲಾ ಎಂಬ ವಿಚಾರ ನನ್ನದು. ಹಾಗೆ ನೋಡಿದರೆ ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿ ಹಲಸಿನ ಬೆಳೆಯ ಬಗ್ಗೆ ಸಂಶೋಧನೆಗಳು, ಕೆಲವು ಪ್ರಯತ್ನಗಳು (http://www.fairchildgarden.org/research/jackfruit.html) ನಡೆದಿವೆಯಂತೆ. ಆದರೂ ಅದೇಕೋ ಹಲಸಿನಹಣ್ಣು ಇಲ್ಲಿ ಅಮೆರಿಕದಲ್ಲಿ ಕ್ಲಿಕ್ಕಾಗಿಲ್ಲ.

ಪ್ರಾಯಶಃ ಹಲಸಿನಹಣ್ಣನ್ನು ಮಾರುಕಟ್ಟೆಯಿಂದ ಕೊಂಡುತಂದರೂ ಅದರಲ್ಲಿ ಬಹಳ ಪ್ರೋಸೆಸಿಂಗ್‌ ಬೇಕಾಗುವುದರಿಂದ, ಮೊದಲೇ ತುಟ್ಟಿ ಲೇಬರ್‌ನ ಅಮೆರಿಕದಲ್ಲಿ ಅದಕ್ಕೆ ಮನ್ನಣೆ ಸಿಕ್ಕಿಲ್ಲವಿರಬಹುದು. ಇಂಜನಿಯರಿಂಗ್‌ ಕಲಿಕೆಯಾರಂಭದವರೆಗೂ ನಮ್ಮೂರ ಪರಿಸರದಲ್ಲೇ, ಪ್ರತಿಬೇಸಿಗೆಯಲ್ಲೂ ಹಲಸಿನ ಕಾಯಿ-ಹಣ್ಣುಗಳ ಯಥೇಷ್ಟ ಲಭ್ಯತೆ, ವಿಧವಿಧ ನಮೂನೆಗಳಲ್ಲಿ ಹಲಸಿನ ಉಪಯೋಗಗಳನ್ನು ಕಂಡು ಬೆಳೆದ ನನ್ನಂಥವರಿಗೆ ಅಮೆರಿಕದಲ್ಲಿ ಟಿನ್‌ನಲ್ಲಿ ಮಾತ್ರ ಹಲಸಿನಹಣ್ಣು ಸಿಗೋದು ಎಂಬ ಕಲ್ಪನೆಯೇ ಅರಗಿಸಿಕೊಳ್ಳಲು ಕಷ್ಟ. ಏನು ಮಾಡೋಣ ಇವರ ದುರದೃಷ್ಟ . ಹಲಸಿನ ಕಾಯಿ/ಹಣ್ಣುಗಳಿಂದ ಮಾಡಬಹುದಾದ ಎಷ್ಟೆಲ್ಲ ನಮೂನೆಯ ತಿಂಡಿತಿನಸಿಂದ ವಂಚಿತರಾಗಿದ್ದಾರೆ ಇಲ್ಲಿಯ ಜನ ಎಂದುಕೊಳ್ಳುತ್ತೇನೆ ನಾನು.

Halasina Hannuಹಲಸಿನಹಣ್ಣಿನ ಬಗ್ಗೆ ಹರಟೆಯಿಂದಲೇ ವಿಚಿತ್ರಾನ್ನದ ಒಂದು ಸಂಚಿಕೆಯನ್ನು ತಯಾರಿಸಬಹುದು. ಮಲೆನಾಡು ಅಥವಾ ಕರಾವಳಿಯಲ್ಲಿ ಹುಟ್ಟಿಬೆಳೆದವರಿಗೆ, ಹಾಗೆಯೇ ಆ ಪ್ರದೇಶಗಳಲ್ಲಿ ಅಜ್ಜಿಮನೆ, ದೊಡ್ಡಮ್ಮನ ಮನೆ, ಚಿಕ್ಕಪ್ಪನ ಮನೆ ಇತ್ಯಾದಿಯೆಂದು ಬೇಸಿಗೆರಜೆ ದಿನಗಳನ್ನು ಕಳೆವವರಿಗೆ ಈ ವ್ಯಾಖ್ಯಾನವು ಮಣ್ಣಿನವಾಸನೆ ಮತ್ತು ಹಲಸಿನಹಣ್ಣಿನ ಸುವಾಸನೆ ತಂದರೆ ಆಶ್ಚರ್ಯವಿಲ್ಲ.

ನಮ್ಮ ಹಳ್ಳಿಯಲ್ಲಾದರೆ ನಮ್ಮ ಅಡಿಕೆತೋಟದಲ್ಲೇ ಸುಮಾರು 30-40 ಹಲಸಿನಮರಗಳಿದ್ದಾವೆ. ಒಂದಕ್ಕಿಂತ ಒಂದು ವಿಭಿನ್ನವಾದ ರುಚಿ-ಬಣ್ಣ-ಪರಿಮಳ-ಆಕಾರ-ಗಾತ್ರಗಳ ತೊಳೆಗಳು ಈ ಎಲ್ಲ ಮರಗಳ ಫಸಲಿಂದ ನಮಗೆ ಸಿಗುತ್ತವೆ. (ಬೇಸಿಗೆಯ ರಜೆಯಲ್ಲಿ ಹಲಸಿನ ಕಾಯಿ/ಹಣ್ಣುಗಳ ವಿಲೇವಾರಿಯಲ್ಲೇ ಮನೆಯವರಿಗೆಲ್ಲ ಬೇಕಾದಷ್ಟು ಕೆಲಸವೂ ಇರುತ್ತದೆಯೆನ್ನಿ). ಹಳ್ಳಿಯ ಒಂದೊಂದು ಮನೆಯ ತೋಟದಲ್ಲೂ ವಿಶಿಷ್ಟ ಪ್ರಸಿದ್ಧಿಯ ಹಲಸಿನಮರ ಒಂದಾದರೂ ಇರುತ್ತದೆ. ಕಾಯಿತೊಳೆಗಳ ಚಿಪ್ಸ್‌ ಮಾಡಲಿಕ್ಕೆ ತುಂಬ ಒಳ್ಳೆಯದೆಂದು ಒಂದು ಪ್ರಸಿದ್ಧಿಯದಾದರೆ ಇನ್ನೊಂದಕ್ಕೆ ‘ಮುಳ್ಕಾ’ (ಹಲಸಿನ ಹಣ್ಣುತೊಳೆಗಳನ್ನು ಅಕ್ಕಿಜತೆ ರುಬ್ಬಿ ಹಿಟ್ಟನ್ನು ಎಣ್ಣೆಯಲ್ಲಿ ಕರಿದ ತಿಂಡಿ) ಮಾಡಲು ಒಳ್ಳೆಯದು ಎಂಬ ಅಗ್ಗಳಿಕೆ. ಮತ್ತೊಂದರ ಕಾಯಿವಡೆ (‘ಮುಳ್ಕಾ’ದಂತೆಯೇ, ಆದರೆ ಕಾಯಿತೊಳೆಗಳನ್ನು ಅಕ್ಕಿಜತೆ ರುಬ್ಬಿ ಹಿಟ್ಟಿಂದ ಮಾಡಿದ ವಡೆ) ಗರಿಗರಿಯಾಗಿ ರುಚಿರುಚಿಯಾಗಿರುತ್ತದಾದರೆ ಮಗದೊಂದರ ತೊಳೆಗಳ ಪಾಯಸ ಮಾಡುವಾಗ ಬೆಲ್ಲ/ಸಕ್ಕರೆಯ ಅವಶ್ಯಕತೆಯೇ ಇಲ್ಲದಷ್ಟು ಸಿಹಿಯಾಗಿರುತ್ತವೆ ಎಂದು ಪ್ರಸಿದ್ಧಿ. ಇಂತಹ ‘ಸ್ಪೆಷಾಲಿಟಿ’ ಮರಗಳ ಫಲಗಳನ್ನು ನೆರೆಕೆರೆಯವರೊಂದಿಗೆ ವಿನಿಮಯ ಮಾಡಿಕೊಳ್ಳುವುದೂ ಹಳ್ಳಿಯ ಸಾಮರಸ್ಯ ಬದುಕಿಗೊಂದು ನಿದರ್ಶನ.

ನಗರಪ್ರದೇಶಗಳಲ್ಲಿ ಹಲಸಿನ ಅವಸ್ಥೆಯನ್ನು ನಾನು ಕಂಡಿದ್ದೇನೆ. ದಾವಣಗೆರೆಯ ಅಶೋಕ ರಸ್ತೆ, ಜಯದೇವ ವೃತ್ತ, ಮಂಡಿಪೇಟೆಗಳಲ್ಲಿನ ಹಲಸಿನಹಣ್ಣಿನ ಗಾಡಿಗಳು, ಬಿಡಿಸಿಟ್ಟ ತೊಳೆಗಳ ಮೇಲೆ ಧೂಳು-ನೊಣ ಮುತ್ತಿರುವ ನೋಟ ಈಗಲೂ ಕಣ್ಮುಂದೆ ಬರುತ್ತಿದೆ. ಯಾವಾಗಲೋ ಕೊಯ್ದು , ಬಾಡಿ ಹಣ್ಣಾದ ಆ ಹಲಸಿನ ರುಚಿಯೆಲ್ಲಿ , ಹಳ್ಳಿಯಲ್ಲಿ ‘ನಮಗೆ ಬೇಕಾದ ವೆರೈಟಿ’ಯದನ್ನು ಕೊಯ್ದು ತಂದು ತಿನ್ನುವಾಗಿನ ರುಚಿಯೆಲ್ಲಿ ! ನಮಗೆ ಎಲ್ಲಿಯವರೆಗೆ ಆಯ್ಕೆಗೆ ಆವಕಾಶವಿರುತ್ತದೆಂದರೆ ಮರದ ಕಾಂಡಕ್ಕೆ ತಾಗಿಕೊಂಡಂತೆ ಬಿಟ್ಟ ಹಣ್ಣು ಅಷ್ಟು ರುಚಿಯಾಗಿರುವುದಿಲ್ಲ , ಗೆಲ್ಲಿನ ಭಾಗದಲ್ಲಿ ಮೂಡಿದ ಹಣ್ಣು ಭಾಳ ರುಚಿ... ಅನ್ನುವ ಪ್ರಿಫರೆನ್ಸ್‌ ಕೂಡ ನಡೆಯುತ್ತದೆ!

Halasina Hannina Beejaಹಲಸಿಂದ ಮಾಡಿದ ತಿಂಡಿಗಳಲ್ಲಿ ಮುಳ್ಕಾ ಮತ್ತು ಕಾಯಿವಡೆ - ಮಳೆಗಾಲದ ವಿಶೇಷಗಳು. ಮಳೆಗಾಲದ ಸೀಸನ್‌ನಲ್ಲಿ ಬರುವ ವಟಸಾವಿತ್ರಿವ್ರತದ ದಿನ ಆಲದ ಮರದ ಪೂಜೆಯ ನೈವೇದ್ಯಕ್ಕೂ ಇದನ್ನೇ ಮಾಡುತ್ತಾರೆ ನಮ್ಮೂರ ಸಂಪ್ರದಾಯಸ್ಥ ಮಹಿಳೆಯರು. ಆ ಸೀಸನ್‌ನಲ್ಲಿ ಶ್ರಾದ್ಧಾದಿ ಕರ್ಮಗಳ ಅಡಿಗೆಯಲ್ಲೂ ಹಲಸಿನ ಐಟಂ ಏನಾದರೂ ಇದ್ದೇ ಇರುತ್ತದೆ. ‘ಗುಜ್ಜೆ’ (ಎಳೆ ಹಲಸಿನಕಾಯಿ) ಪಲ್ಯವಿರಬಹುದು, ಹಣ್ಣಿನ ಪಾಯಸ ಇರಬಹುದು, ಅಥವಾ ಮುಳ್ಕಾ-ಕಾಯಿವಡೆ ಕಾಂಬಿನೇಶನ್‌ ಇರಬಹುದು. ಹಿಂದೆಲ್ಲ ಬಡತನದ, ಕಷ್ಟದ ದಿನಗಳಲ್ಲಿ ಪ್ರಕೃತಿದತ್ತ ಹಲಸೇ ತರಕಾರಿ, ಹಣ್ಣಾಗಿ ಉಪಯೋಗಿಸಬೇಕಾಗಿ ಬರುತ್ತಿದ್ದುದು ಆಗಿನ ಕಾಲದವರ ಕಷ್ಟಸಹಿಷ್ಣುತೆಯ ಕುರುಹುಗಳಲ್ಲೊಂದು. ಹಲಸಿನ ಹಣ್ಣನ್ನೇ ತಿಂದು ಹಸಿವೆ ನೀಗಿಸಿಕೊಳ್ಳುವ ಬಡಬಗ್ಗರೂ ಇರುವುದರಿಂದಲೇ ಬಂದದ್ದಿರಬಹುದು ‘ಹಸಿದು ಹಲಸು; ಉಂಡು ಮಾವು..’ ಎಂಬ ನಾಣ್ನುಡಿ. ಮಾವಿನಹಣ್ಣು ‘ಹಣ್ಣುಗಳ ರಾಜ’ನಾದರೂ ಏನಿದ್ದರೂ ಬರೀ ಶೋಕಿಗೆ; ಹೊಟ್ಟೆಭರ್ತಿಗಲ್ಲ . ಆ ದೃಷ್ಟಿಯಿಂದ ಮಾವು ರಾಜನಾದರೆ ಹಲಸು ‘ಚಕ್ರವರ್ತಿ’. ಇದು ನನ್ನ ಅಭಿಪ್ರಾಯ.

ಚಕ್ರವರ್ತಿ ಎಂದಾಗ ನೆನಪಾಯ್ತು. ಬಹಳ ಹಳೇಕಾಲದ ಮಾತು (ನಮ್ಮ ತಂದೆಯವರು ಕೆಲವೊಮ್ಮೆ ನೆನಪಿಸಿಕೊಳ್ಳುತ್ತಿದ್ದುದುಂಟು). ಸ್ವಾತಂತ್ರ್ಯಾಪೂರ್ವದ ಬ್ರಿಟಿಷ್‌ ಆಳ್ವಿಕೆಯ ಕಾಲದಲ್ಲಿ ಫೋರೆಸ್ಟರ್‌, ರೇಂಜರ್‌ ಇತ್ಯಾದಿ ಹುದ್ದೆಗಳಲ್ಲಿದ್ದ ಆಂಗ್ಲ ಅಧಿಕಾರಿಗಳು ಕೆಲವೊಮ್ಮೆ ‘ವಿಸಿಟ್‌’ಗೆ ಬಂದವರು ಹಳ್ಳಿಯ ಯಾವುದಾದರೂ ಮನೆಯಲ್ಲಿ ಊಟ ‘ಕತ್ತರಿಸಿ’ ಸಂತೃಪ್ತರಾಗಿ ಹೋಗುತ್ತಿದ್ದರು. ಒಮ್ಮೆ ಯಾರದೋ ಮನೆಯಲ್ಲಿ ತಿಥಿಯೂಟ. ಹಲಸಿನಹಣ್ಣಿನ ಮುಳ್ಕಾ ಮಾಡಿದ್ದರಂತೆ. ಅವತ್ತೇ ಊಟಕ್ಕೆ ಬ್ರಿಟಿಷ್‌ ಅಧಿಕಾರಿಯಾಬ್ಬ ಕೂಡ ವಕ್ಕರಿಸಿದ್ದನಂತೆ. ಚೆನ್ನಾಗಿ ಮುಳ್ಕಾ-ಕಾಯಿವಡೆ ತಿಂದುತೇಗಿದ ಆಫೀಸರ ಮತ್ತೆ ಯಾವಾಗಲೋ ಆ ಮನೆಯವರು ಕಾರ್ಯನಿಮಿತ್ತ ಅವನ ಆಫೀಸಿಗೆ ಹೋಗಿದ್ದಾಗ, ‘ಅವತ್ತು ನಿಮ್ಮನೆಯಲ್ಲಿ ತಿಥಿ ಮಾಡಿದ್ದರಲ್ಲ ಚೆನ್ನಾಗಿತ್ತು. ಇನ್ನೊಂದು ದಿನ ನನ್ನ ವಿಸಿಟ್‌ ಇದ್ದಾಗ ಊಟಕ್ಕೆ ನಿಮ್ಮಲ್ಲಿಗೇ ಬರುತ್ತೇನೆ. ತಿಥಿ ಮಾಡಿದರೆ ನನಗಿಷ್ಟವಾಗುತ್ತದೆ...’ ಎಂದು ಹೇಳಿದ್ದನಂತೆ!

ಹಲಸಿನಕಾಯಿ ಹಪ್ಪಳ, ಹಣ್ಣಿನ ಮಾಂಬಳ (ಮಾವಿನರಸದಿಂದ ಮಾಡುವಂತೆಯೇ ಹಲಸಿನತೊಳೆಗಳ ರಸದಿಂದ ಮಾಡಿದ್ದು), ಹಣ್ಣಿಂದ ಮಾಡಿದ ಸಿಹಿಕಡಬು, ಕಾಯಿತೊಳೆಗಳಿಂದ ಮಾಡಿದ ಉಪ್ಪೇರಿ, ಎಣ್ಣೆಯಲ್ಲಿ ಕರಿದ ಚಿಪ್ಸ್‌... ಒಂದೇ ಎರಡೇ ಹಲಸಿನ ಅವತಾರಗಳು. ಅಷ್ಟು ಸಾಲದೆಂಬಂತೆ ಹಲಸಿನಕಾಯಿ ತೊಳೆಗಳನ್ನು ಉಪ್ಪಿನಲ್ಲಿ ಹಾಕಿಟ್ಟು ಮಳೆಗಾಲ ಮುಗಿದ ನಂತರವೂ ಉಪಯೋಗಿಸುವ ಒಂದು ‘ನ್ಯಾಚುರಲ್‌ ಪ್ರಿಸರ್ವಿಂಗ್‌ ಸಿಸ್ಟಮ್‌’ ಕೂಡ ನಮ್ಮಕಡೆ ಇದೆ. ಆ ತೊಳೆಗಳಿಂದ ರೊಟ್ಟಿ, ಕೋಡುಬಳೆ, ಹಪ್ಪಳ, ಸಂಡಿಗೆ ಇತ್ಯಾದಿ ವಿವಿಧ ಖಾದ್ಯಗಳ ತಯಾರಿಯೂ ಸಾಧ್ಯವಿದೆ. ಹಲಸಿನ ಬೀಜಗಳದ್ದೂ ವಿವಿಧ ಪ್ರಕಾರದಲ್ಲಿ ಉಪಯೋಗವಿದೆ. ‘ಸಾಂತಾಣಿ’ (ಹಲಸಿನಬೀಜಕ್ಕೆ ತುಳುಶಬ್ದ) ಗೊತ್ತಿರದ/ತಿನ್ನದ ತುಳುನಾಡಿನವರಿದ್ದರೆ ಹುಡುಕಿಕೊಡಿ. ಹಲಸಿನಬೀಜದ ಉಂಡೆ, ಹೋಳಿಗೆ, ಉಪ್ಪೇರಿ... ಲಿಸ್ಟ್‌ ಬೆಳೆಯುತ್ತ ಹೋಗುತ್ತದೆ. ನಿಜ ಹೇಳಬೇಕೆಂದರೆ ಭಕ್ಷ್ಯಭೋಜ್ಯಗಳ ತಯಾರಿಗೆ ಉಪಯೋಗವಾಗುವ ಮಟ್ಟಿಗೆ ಹಲಸನ್ನು ‘ಕಲ್ಪವೃಕ್ಷ’ಕ್ಕೆ ಹೋಲಿಸಬಹುದು.

ಆದ್ದರಿಂದಲೇ ಹಲಸನ್ನು ಈ ಬೇಸಿಗೆಕಾಲದಲ್ಲಿ ನಾನು ಎಷ್ಟು ‘ಮಿಸ್‌’ ಮಾಡುತ್ತಿದ್ದೇನೆಂದರೆ, ಮತ್ತೆ ಕುವೆಂಪು ಬರೆದ ಹಾಡನ್ನೇ ಬದಲಾಯಿಸಿ ಗುನುಗುನಿಸಿದರೆ...

ತನ್ನ ನಾಡಿನ ಹಲಸಿನ ಹಣ್ಣು...
ತಿನ್ನುವಾಸೆಯಿಂದರಳಿವೆ ಕಣ್ಣು...
ತನ್ನ ನಾಡಿನ ಹಲಸಿನ ಹಪ್ಳ...
ಕರಿದ ಚಿಪ್ಸಿನ ಕುರುಕುರು ಸಪ್ಳ...
ತನ್ನ ನಾಡಿನ ಹಲಸಿನ ಪಾಯ್ಸ...
ತಿನ್ನಲು ಬೇಕಿದೆ ಕಾಯ್‌ವಡೆ ಮುಳ್ಕಾ...

ದೂರದೇಶಕೆ ಹೋದ ಸಮಯದಿ... ಹಲಸಿನ್‌ಹಣ್ಣನು ನೆನೆನೆನೆದುಬ್ಬದ... ಮಾನವನಿದ್ದರೆ ಲೋಕದಲಿ... ತಾವಿಲ್ಲವನಿಗೆ ನಾಕದಲಿ.. ವೀರಲೋಕದಲಿ!

* * *

ಹಲಸಿನ ಬಗ್ಗೆ ಹುಲುಸಾದ ನೆನಪುಗಳು ನಿಮ್ಮ ಮನದಂಗಳದಲ್ಲೂ ಇದ್ದೇ ಇರುತ್ತವೆ. ಬರೆದು ತಿಳಿಸಿ, [email protected] ವಿಳಾಸಕ್ಕೆ. ಹಂಚಿಕೊಳ್ಳೋಣ ಸ್ನೇಹಿತರೊಂದಿಗೆ.


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X